ಯುದ್ಧ ಮಾಡದೆ ಹುತಾತ್ಮನಾದ ರೈತ ‘ಎ ಹಿಡನ್ ಲೈಫ್’

ಮಮತಾರಾವ್

ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ಪ್ರಾಣವನ್ನೇ ಪಣಕ್ಕೆ ಹಚ್ಚಿ ಸಾಹಸವನ್ನು ಮಾಡಿ ಅಜರಾಮರರಾದ ವೀರರ ಕುರಿತು, ನಾಝಿಗಳ ಮೃತ್ಯು ಕೂಪಗಳ ಕುರಿತು ಅಸಂಖ್ಯ ಕಾದಂಬರಿಗಳನ್ನು ಓದಿರುವೆ; ಚಲನ ಚಿತ್ರಗಳನ್ನು ಕಂಡಿದ್ದೇನೆ. ಆದರೆ ಯುದ್ಧದಲ್ಲಿ ಪಾಲ್ಗೊಳ್ಳಲಾರೆದೆನೆ ಹುತಾತ್ಮನೆನಿಸಿಕೊಂಡ ಅತ್ಯಂತ ಸಾಮಾನ್ಯ ರೈತನಾದ ಫ್ರಾನ್ಝ್ ಜಾಗರ್‌ ಸ್ಟಾಟರ್‌ನ ಜೀವನಾಧಾರಿತ ಚಲನ ಚಿತ್ರವನ್ನು ನೋಡಿದ ಅನುಭವ ಮಾತ್ರ ನನ್ನನ್ನು ಮೂಕವಿಸ್ಮಿತಳನ್ನಾಗಿಸಿದೆ.

ಪ್ರಸ್ತುತ ಜಗತ್ತಿನಲ್ಲಿ ನಮ್ಮಆತ್ಮ ಸಾಕ್ಷಿಯ ಕತ್ತು ಅಮುಕಿ ಬದುಕಬೇಕಾಗುವ ಕಾಲ. ಕರೋನಾದ ಪಾಶಕ್ಕೆ ಸಿಲುಕಿ ನೈತಿಕವಾಗಿ ಕುಸಿಯುತ್ತಿರುವ ನಮ್ಮನ್ನು ಬಡಿದೆಬ್ಬಿಸಲೆಂದೇ ಬಿಡುಗಡೆ ಹೊಂದಿರುವ ಚಲನಚಿತ್ರ ‘ಎ ಹಿಡನ್ ಲೈಫ್’(೨೦೧೯ರ ಡಿಸೆಂಬರ್). ಮೇ ೨೦೧೯ರಲ್ಲಿ ಕಾನ್ಸ್ ಚಿತ್ರೋತ್ಸವದಲ್ಲಿ ಪ್ರೀಮಿಯರ್‌ ಕಂಡ ಈ ಚಲನಚಿತ್ರವು ವಾಟಿಕನ್‌ನಲ್ಲಿ ಪ್ರದರ್ಶಿಸಲ್ಪಡುವ ವಿಶೇಷ ಅನುಮತಿ ಪಡೆಯಿತು. ಚಿತ್ರಕಥೆ ಹಾಗೂ ನಿರ್ದೇಶನ-ಟೆರೆನ್ಸ್ ಮಲಿಕ್‌ ಅವರದ್ದು.

ಕಾರಾವಾಸದಲ್ಲಿದ್ದ ಸಮಯದಲ್ಲಿ ಫ್ರಾನ್ಝ್ ಪತ್ನಿಗೆ ಬರೆದ ಪತ್ರಗಳು ಹಾಗೂ ಲೇಖನಗಳ ಸಂಗ್ರಹ ‘ಲೆಟರ್ಸ್ಎಂಡ್‌ ರೈಟಿಂಗ್ಸ್ ಫ್ರಮ್ ಪ್ರಿಸನ್’ (ಸಂ.ಎರ್ನಾ ಪುಟ್ಝ್)೨೦೦೯ರಲ್ಲಿ ಪ್ರಕಟಗೊಂಡಿದ್ದು, ಪ್ರಸ್ತುತ ಚಿತ್ರದಲ್ಲಿ ಅವುಗಳನ್ನು ಬಳಸಲಾಗಿದೆ. ತನಗೆ ಸರಿಕಾಣದ ಕೃತ್ಯವನ್ನು ಮಾಡಿ ತನ್ನಾತ್ಮದ ಕತ್ತು ಹಿಸುಕುವುದಕ್ಕಿಂತ ಮರಣದಂಡನೆಯನ್ನು ಸ್ವೀಕರಿಸಿದ ಫ್ರಾನ್ಝ್ ಪತ್ರಗಳು ದೊರಕದೆ ಇದ್ದಿದ್ದರೆ ಬಹುಷಃ ಆತನೂ ಇತಿಹಾಸದ ಗರ್ಭದಡಿಯಲ್ಲಿ ಕಳೆದು ಹೋಗುತ್ತಿದ್ದನೋ ಏನೋ. ಪ್ರಮುಖ ಪಾತ್ರ ವಹಿಸಿದ ಆಗಸ್ಟ್ ಡೇಹ್ಲ್ ಎರಡನೆಯ ಮಹಾಯುದ್ಧವನ್ನಾಧಾರಿತ ಚಲನ ಚಿತ್ರಗಳಲ್ಲಿ ವೈವಿಧ್ಯಪೂರ್ಣ ಪಾತ್ರವಹಿಸಿ ಗಮನ ಸೆಳೆದವ. ಅವನ ಮತ್ತು ಪತ್ನಿ ಫಾನಿಯಾಗಿ ವೆಲೆರೀ ಪಾಚ್‌ನರ್‌ನ ಅತ್ಯಂತ ಮನೋಜ್ಞವಾದ ಅಭಿನಯವು ಸದಾ ಕಾಡುವಂಥದ್ದು. ಅವರ ಬದುಕಿನ ದಾರುಣತೆಯ ಚಿತ್ರಣವನ್ನು ಸಹ್ಯಗೊಳಿಸುವುದು ಆಸ್ಟ್ರೀಯಾದ ಅತ್ಯಂತ ರಮ್ಯ ಪ್ರಕೃತಿಯ ದೃಶ್ಯ ಸಂಯೋಜನೆ.

ಆಸ್ಟ್ರೀಯಾದ ಆಲ್ಫ್ಸ್ ಪರ್ವತಗಳ ತೆಕ್ಕೆಯಲ್ಲಿರುವ ಪುಟ್ಟಊರು ಸೆಂಟ್‌ರೆಡೆಗುನ್ಡ್. ಅತ್ಯಂತ ರಮಣೀಯ ಅಷ್ಟೇ ಪ್ರಶಾಂತವಾದ ಗ್ರಾಮದಲ್ಲಿ ಜನಿಸಿದ(೧೯೦೭) ಫ್ರಾನ್ಝ್ ಜಾಗರ್‌ ಸ್ಟಾಟರ್‌ಸಾಮಾನ್ಯ ರೈತ. ಅವನ ಕುಟುಂಬವೆಂದರೆ ತಾಯಿ ರೊಸಲಿನ್, ಪತ್ನಿ ಫಾನಿ (ಫ್ರಾನ್ಸಿಜ್ಸಿಸ್ಕಾ) ಹಾಗೂ ಪುಟ್ಟ-ಪುಟ್ಟ ಮೂವರು ಹೆಣ್ಮಕ್ಕಳು. ಎಲ್ಲರೂ ಕೂಡಿ ದಿನವಿಡಿ ಹೊಲದಲ್ಲಿ ಕಷ್ಟಪಟ್ಟು ದುಡಿಯುವುದರೊಂದಿಗೆ, ಕೋಳಿ, ಕುರಿ-ಆಕಳು ಸಾಕಣೆ. ಹೀಗೆ ಎಲ್ಲವನ್ನೂ ನಕ್ಕು ನಲಿಯುತ್ತಾ ಮಾಡುತ್ತಲ್ಲಿದ್ದ ಅವರದ್ದು ನೆಮ್ಮದಿಯ ಗ್ರಾಮೀಣ ಬದುಕು. ದೇವರಲ್ಲಿ ಅಪಾರ ಶೃದ್ಧೆಯಿದ್ದ ಫ್ರಾನ್ಝ್ ಬಿಡುವಿನ ವೇಳೆಯಲ್ಲಿ ಊರಿನ ಚರ್ಚನಲ್ಲಿಯೂ ಸೇವೆ ಸಲ್ಲಿಸುತ್ತಿದ್ದ.

ಎರಡನೆಯ ಮಹಾಯುದ್ಧದ ಪ್ರಾರಂಭದಲ್ಲಿಯೇ ಆಸ್ಟ್ರೀಯಾವು ಜರ್ಮನಿಯ ವಶವಾಗಿತ್ತು. ೧೯೩೮ರಲ್ಲಿ ಜರ್ಮನಿಯೊಂದಿಗೆ ಆಸ್ಟ್ರೀಯಾದ ಏಕೀಕರಣಕ್ಕಾಗಿ ಮತ ಹಾಕದವನು ಅವನೂರಿನಲ್ಲಿ ಅವನೊಬ್ಬನೇ. ಮುಂದೆ ಫ್ರಾನ್ಸ್ ಮೇಲೆ ದಾಳಿ ನಡೆಸುವ  ಸಂದರ್ಭದಲ್ಲಿ (ಜೂನ್ ೧೯೪೦) ಜರ್ಮನಿಯು ಸುದೃಢ ಪುರುಷರಿಗಾಗಿ ಯುದ್ಧ ತರಬೇತಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಸುಮಾರು ಏಳು ತಿಂಗಳುಗಳ ಕಾಲದ ತರಬೇತಿಯ ಸಮಯದಲ್ಲಿ ಜರ್ಮನಿಯ ಸೈನಿಕರಲ್ಲಿದ್ದ ಅಮಾನವೀಯ ಗುಣಗಳನ್ನು ಗಮನಿಸಿದ ಫ್ರಾನ್ಝ್ ಅಸ್ವಸ್ಥನಾಗುತ್ತಾನೆ. ಅಲ್ಲಿ ತೋರಿಸಲಾಗುತ್ತಿದ್ದ ಹಿಟ್ಲರ್‌ನ ರೊಚ್ಚಿಗೆಬ್ಬಿಸುವ ಭಾಷಣಗಳ ಹಾಗೂ ಜರ್ಮನಿಯ ವಿಜಯದ ಚಿತ್ರ ಪ್ರಸಾರವನ್ನು ನೋಡಿ ಎಲ್ಲರಂತೆ ಚಪ್ಪಾಳೆ ತಟ್ಟಿ ಸಂಭ್ರಮಿಸಲು ಅಸಾಧ್ಯವಾಗುತ್ತದೆ.

ವಿನಾಕಾರಣ ದ್ವೇಷದ ಕಿಚ್ಚನ್ನು ಹಚ್ಚಿ ಅಮಾಯಕರ ನರಮೇಧ ನಡೆಸುವಂತಹ ಯುದ್ಧದ ಅಗತ್ಯವಿದೆಯೇ?ಎನ್ನುವ ಆಲೋಚನೆ ಅವನನ್ನು ಬಲವಾಗಿ ಕಾಡಲಾರಂಭಿಸುತ್ತದೆ. ಹಿಟ್ಲರ್‌ನ ಯುದ್ಧನೀತಿಯ ಪರಿಣಾಮವೇನು ಎನ್ನುವುದನ್ನು ಊಹಿಸಿದ ಫ್ರಾನ್ಝ್ ಇಂತಹ ಯುದ್ಧವು ಅನಗತ್ಯ; ಅದನ್ನು ಸಮರ್ಥಿಸುವುದು ತಪ್ಪೆಂದು ನಿಶ್ಚಯಿಸುತ್ತಾನೆ. ಫ್ರಾನ್ಝ್ ಶರಣಾಗತಿಯಿಂದ ಯುದ್ಧವಿರಾಮವಾಗಿ ರೈತನಾದ ಕಾರಣ ಫ್ರಾನ್ಝ್ ಮನೆಗೆ ಹಿಂತಿರುಗಲು ಅನುಮತಿ ದೊರೆಯುತ್ತದೆ.

ಫ್ರಾನ್ಝ್, ತನ್ನತಾಯಿ, ಪತ್ನಿ ಹಾಗೂ ಅವನ ಅನುಪಸ್ಥಿತಿಯಲ್ಲಿ ಸೇರಿಕೊಂಡನಾದಿನಿಯೊಂದಿಗೆ ಬೇಸಾಯದಲ್ಲಿ ಪುನಃ ಮೊದಲಿನಂತೆ ವ್ಯಸ್ತನಾಗುತ್ತಾನೆ. ಮಕ್ಕಳೊಂದಿಗೆ ನಕ್ಕು ನಲಿಯುತ್ತಾಮೈಮರೆಯುತ್ತಾನೆ. ಆದರೆ ದುರದೃಷ್ಟಾವತ್‌ ಯುದ್ಧ ಪುನರಾರಂಭಗೊಂಡ ಕಾರಣ ಇತರ ಪುರುಷರೊಂದಿಗೆ ಫ್ರಾನ್ಝ್ ಗೆ (ಫೆಬ್ರವರಿ ೧೯೪೩) ಕರೆ ಬರುತ್ತದೆ. ಈಗಾಗಲೇ ಚರ್ಚಗಳನ್ನು ನಿಷ್ಕ್ರೀಯೆಗೊಳಿಸುವ ಹಾಗೂ ನಿಷ್ಕಾರಣವಾಗಿ ನರಹತ್ಯೆಯನ್ನು ಮಾಡುತ್ತಿರುವ ನಾಝಿ ಸತ್ತೆಯ ನೈತಿಕತೆಯ ಕುರಿತು ಫ್ರಾನ್ಝ್ ನ್ನುಕಾಡುವ ಪ್ರಶ್ನೆಗಳಿಗೆ ಉತ್ತರ ನೀಡಲು ಚರ್ಚನ ಪಾದ್ರಿ ಕೂಡ ಅಸಮರ್ಥನೆನಿಸಿಕೊಳ್ಳುತ್ತಾನೆ.

ನಾಝಿ ಸತ್ತೆಯನ್ನು ಬೆಂಬಲಿಸುವ ಹಾಗೂ ಸಮರ್ಥಿಸುವ ಮೂಲಕ ತಾನೂ ಅವರ ದುಷ್ಕೃತ್ಯಗಳ ಪಾಲುದಾರನಾಗುವುದು ಅವನಿಗಿಷ್ಟವಾಗುವುದಿಲ್ಲ. ಆದರೂ ಸೈನ್ಯಕ್ಕೆ ಸೇರಿ ಆಸ್ಪತ್ರೆಯಲ್ಲಿ ಗಾಯಾಳುಗಳ ಸೇವೆ ಸಲ್ಲಿಸುವ ಇರಾದೆಯಿಂದ ಹೋದರೆ, ಅಲ್ಲಿ ಹಿಟ್ಲರ್ ಹಾಗೂ ನಾಝಿ ಸತ್ತೆಗೆ ನಿಷ್ಠತೆಯನ್ನು ತೋರುವ ಕರಾರಿಗೆ ಹಸ್ತಾಕ್ಷರ ಹಾಕಬೇಕಾಗುತ್ತದೆ. ಫ್ರಾನ್ಝ್ ನಿರಾಕರಿಸಿ ತನ್ನೂರಿಗೆ ಹಿಂತಿರುಗುತ್ತಾನೆ.  ಅವನ ಊರಿನ ಮೇಯರ್, ನೆರೆಹೊರೆಯವರ ಎಲ್ಲಕ್ಕಿಂತ ಮಿಗಿಲಾಗಿ ಹಲ್ಲುಕಿತ್ತಂತಾದ ಸಾಲ್ಝ್ ಬರ್ಗ್ಚರ್ಚನ ಬಿಷಪ್‌ನ ಒತ್ತಾಯಕ್ಕೂ ಮಣಿಯುವುದಿಲ್ಲ.

ಊರಿನಲ್ಲಿ ಪ್ರತಿಯೊಬ್ಬರೂ ಹೆಮ್ಮೆಯಿಂದ ‘ಹೇಲ್ ಹಿಟ್ಲರ್’ಎಂದು ವಂದಿಸುತ್ತಿದ್ದರೆ ಆತ ಪ್ರತಿವಂದಿಸುತ್ತಿರಲಿಲ್ಲ. ಅವನಿಂದಾಗಿ ತಮ್ಮೂರಿಗೆ ಯಾವ ಕೇಡು ಕಾದಿದೆಯೋ ಎನ್ನುವ ಆತಂಕದಿಂದ ಊರವರು ಅವನ ಪರಿವಾರವನ್ನು ಬಹಿಷ್ಕರಿಸಿ ಬಹಿರಂಗವಾಗಿ ಹಿರಿ-ಕಿರಿಯರೆನ್ನದೆ ನಿಂದಿಸುತ್ತಾರೆ. ತನ್ನ ನಿರ್ಧಾರವು ಮರಣದಂಡನೆಯಲ್ಲಿ ಅವಸಾನಗೊಳ್ಳುವುದೆನ್ನುವುದನ್ನು ಅರಿತ ಫ್ರಾನ್ಝ್ ಪತ್ನಿಯ ಪ್ರೀತಿ ಹಾಗೂ ಬೆಂಬಲದಿಂದ ತನ್ನ ಅಂತಃಸಾಕ್ಷಿಗೆ ನಿಷ್ಠನಾಗಿದ್ದು ದೇವರ ಪ್ರಾರ್ಥನೆಯಲ್ಲಿ ನೆಮ್ಮದಿ ಕಾಣುತ್ತಾನೆ.

ಫ್ರಾನ್ಝ್ ನ್ನು ಬಂಧಿಸಿ ಕೆಲವುದಿನ ಏನ್ಸ್ನ ನಂತರ ಬರ್ಲಿನ್‌ನ ಕಾರವಾಸದಲ್ಲಿರಿಸಲಾಯಿತು. ಸತತವಾಗಿ ಚಿತ್ರಹಿಂಸೆಯನ್ನು ನೀಡುತ್ತಾ ಆತನನ್ನು ಮಣಿಸುವ ಪ್ರಯತ್ನವೆಲ್ಲವೂ ವಿಫಲವಾಯಿತು. ಬೆದರಿಕೆ, ಆಶೆ, ಅಮಿಷೆಗಳಿಗೆ ಅವನು ಬಗ್ಗಲಿಲ್ಲ. ತನಗೆ ಪತ್ನಿ ಮತ್ತು ಮಕ್ಕಳಿವೆಯೆಂದು ಅವರಮೇಲಿನ ಮಮಕಾರದಿಂದ ತನ್ನ ಅಂತಃಸಾಕ್ಷಿಗೆ ದ್ರೋಹ ಬಗೆಯುವುದೆಂದರೆ ದೇವರಿಗೇ ದ್ರೋಹ ಬಗೆದಂತೆ. ಆದುದರಿಂದ ಪ್ರಾಣ ಹೋದರೂ ತನ್ನ ಅಂತರಾತ್ಮಕ್ಕೆ ಒಪ್ಪಿಗೆಯಾಗದ ವಿಷಯಕ್ಕೆ ಸಮ್ಮತಿಯನ್ನು ನೀಡಲಾರೆ ಎನ್ನುವ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾನೆ.

ಕಾರಗೃಹದಲ್ಲಿರುವಾಗ ತನ್ನಊರಿನ ಪರಿಸರವನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತಾ ತನ್ನ ಪತ್ನಿಗೆ ಕಾಗದ ಬರೆಯುತ್ತಿರುತ್ತಾನೆ. ಪತ್ನಿಯೂ ತನ್ನ ಸಂಕಷ್ಟಗಳನ್ನು ಬಚ್ಚಿಟ್ಟು ಅವನಿಗೆ ಸ್ಥೈರ್ಯ ತುಂಬುವ ಮರು ಉತ್ತರಗಳನ್ನು ಬರೆಯುತ್ತಿರುತ್ತಾಳೆ. ದೇವರಲ್ಲಿ ಅವರ ಮೌನ ಪ್ರಾರ್ಥನೆ ನಿರಂತರವಾಗಿ ನಡೆಯುತ್ತಿರುತ್ತದೆ. ಜೂನ್ ೧೯೪೩ರಲ್ಲಿ ಮಿಲಿಟರಿ ವಿಚಾರಣೆ ನಡೆಸಿ ಆತ ರಾಜದ್ರೋಹಿ ಎಂದು ತೀರ್ಪು ನೀಡಿದಾಗಲೂ ಫ್ರಾನ್ಝ್ ವಿಚಲಿತನಾಗುವುದಿಲ್ಲ. ಅತ್ಯಂತ ಶಾಂತ ಚಿತ್ತನಾಗಿ ‘ದೇವರು ತೋರಿದ ದಾರಿಯಲ್ಲಿ ನಡೆಯುತ್ತಿರುವ ನಾನು ನನ್ನೊಂದಿಗೆ ನನ್ನ ಪರಿವಾರವನ್ನು ಕೂಡ ದೇವರ ಸುಪರ್ತಿಗೆ ಒಪ್ಪಿಸಿರುವೆನು. ಅವನು ಖಂಡಿತವಾಗಿಯೂ ನನ್ನ ಪರಿವಾರವನ್ನುರಕ್ಷಿಸುವನೆನ್ನುವ ಭರವಸೆ ನನಗಿದೆ.’ ಉದ್ಗರಿಸುತ್ತಾನೆ. ಬರ್ಲಿನ್‌ನಲ್ಲಿ ಆತನನೊಂದಿಗೆ ಕೊನೆಯ ಭೇಟಿಗೆ ಬಂದ ಪತ್ನಿ ಫಾನಿ, ತಾವು ಜನರ ನಿಂದೆಯನ್ನು ಸಹಿಸುತ್ತಲೇ ಅತ್ಯಂತ ಕಷ್ಟ ಜೀವನವನ್ನು ಸವೆಸುತ್ತಿರುವ ಕುರಿತು ಅವನಿಗೆ ಇನಿತು ಸುಳಿವನ್ನೂ ನೀಡುವುದಿಲ್ಲ. ಆತನ ನಿರ್ಧಾರವೇನಿದ್ದರೂ ತಾನು ಜೊತೆಯಲ್ಲಿರುವ ಆಶ್ವಾಸನೆಯನ್ನು ನೀಡುತ್ತಾಳೆ.

ಇಂತು ೩೬ರ ಹರೆಯದ ಆಸ್ಟ್ರೀಯಾದ ಸಾಮಾನ್ಯರೈತ ಫ್ರಾನ್ಝ್ ಜಾಗರ್‌ಸ್ಟಾಟರ್‌ ತನ್ನ ಆತ್ಮಸಾಕ್ಷಿಗೆ ಒತ್ತು ನೀಡಿ ಎರಡನೆಯ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ಜಗತ್ತನ್ನೇ ನಡುಗಿಸಿದ ಅಡೊಲ್ಫ್ ಹಿಟ್ಲರ್‌ಗಾಗಿ ತಲೆಬಾಗಿಸದೆ, ಕೈಯೆತ್ತಿ ಸಲಾಮು ಮಾಡಲು ನಿರಾಕರಿಸಿದ ಕಾರಣ ೯, ಆಗಸ್ಟ್ ೧೯೪೩ರಂದು ರಾಜದ್ರೋಹಿಯೆಂದು ಪರಿಗಣಿಸಲ್ಪಟ್ಟು ಶಿರಚ್ಛೇದಕ್ಕೊಳಗಾದ.

ನಾಝಿಗಳ ಕೃತ್ಯದ ಪರಿಣಾಮವನ್ನು ಊಹಿಸಿ ತನ್ನದೇ ರೀತಿಯಲ್ಲಿ ಪ್ರತಿಭಟಿಸಿದ ಫ್ರಾನ್ಝ್ ನ್ನು೬೪ ವರ್ಷಗಳ ನಂತರ ೨೦೦೭ರಲ್ಲಿ ಹುತಾತ್ಮನೆಂದು ಘೋಷಿಸಿ ಕಾಥೋಲಿಕ್‌ ಚರ್ಚ್(ಪೋಪ್ ಬೆನೆಡಿಕ್ಟ್ ೧೬)ಅವನಿಗೆ ಸಂತ ಪದವಿಯನ್ನು ದಯಪಾಲಿಸಿತು. ಶಿರಚ್ಛೇದಗೊಳ್ಳುವ ಮೊದಲು೯,ಆಗಸ್ಟ್ ೧೯೪೩ರಂದು ಅವನು ಬರೆದ ಕೊನೆಯ ವಾಕ್ಯ- ‘ಕಾರಾವಾಸವಾಗಲಿ, ಕೈಗಳನ್ನು ಬಂಧಿಸಿದ ಕೋಳವಾಗಲಿ, ಮರಣದಂಡನೆಯೇ ಆಗಲಿ, ಮನುಷ್ಯನ ಶೃದ್ಧೆ ಹಾಗೂ ವಿಚಾರ ಸ್ವಾತಂತ್ರ್ಯವನ್ನು ಕಸಿಯಲಾರದು.’

ಕೇವಲ ಹಿಟ್ಲರ್‌ಗೆ ನಿಷ್ಠೆಯನ್ನುತೋರಿಸಿ ಆತಜೀವಂತ ಉಳಿಯಬಹುದಿತ್ತು. ಆದರೆ ಅವನಂತೆ ತಮಗೆ ಮಾತ್ರವಲ್ಲ ಮಾನವ ಜನಾಂಗಕ್ಕೇತಪ್ಪು ಎಂದೆನಿಸಿದ್ದಕ್ಕೆ ತಲೆಬಾಗದೆ ತಮ್ಮ ಅಂತರಾತ್ಮದ ಪಾವಿತ್ರ್ಯತೆಯನ್ನು ಕಾಯ್ದಿರಿಸುವ ಜನರು ನಮ್ಮಲ್ಲಿ ಎಷ್ಟುಮಂದಿ? ಫ್ರಾನ್ಝ್ ಬದುಕಿನಲ್ಲಿ ಆತ ಏನು ಮಾಡಿದ ಎನ್ನುವುದಕ್ಕಿಂತ ಆತ ಏನು ಮಾಡದೆ ಜೀವತೆತ್ತ ಎನ್ನುವುದು ಮುಖ್ಯವಾಗುತ್ತದೆ. ಆತನ ಪತ್ನಿ ೧೦೦ ವರ್ಷಕಾಲ ಬಾಳಿ ೨೦೧೩ರಲ್ಲಿ ಮರಣ ಹೊಂದಿದಳು.

ಹಿಟ್ಲರ್‌ನ್ನು ನಂಬಿದ ಜನ ಮಾಡಿದ ಹೇಯಕೃತ್ಯ ಇಂದಿಗೂ ಶಾಪವಾಗಿ ಕಾಡುತ್ತಿದೆ; ಬಹುಷಃ ಅಂದು ಜನ ಫ್ರಾನ್ಝ್ ಜಾಗರ್‌ಸ್ಟಾಟರ್‌ನ್ನು ನಂಬುತ್ತಿದ್ದರೆ ಇತಿಹಾಸ ಬೇರೆಯೇ ಆಗುತ್ತಿತ್ತು ಅಲ್ಲವೇ?

‍ಲೇಖಕರು Avadhi

May 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

 1. ಡಾ.ಮಿರ್ಜಾ ಬಷೀರ್.ತುಮಕೂರು

  ಅದ್ಭುತವಾಗಿದೆ ಮೇಡಂ.
  ಹಿಟ್ಲರನಲ್ಲಿ ಎಷ್ಟು ಮಟ್ಟದ ಕೇಡಿತ್ತೋ ಅಷ್ಟೇ ಮಟ್ಟದ ಅಥವಾ ಅದಕ್ಕಿಲ್ಲ ಹೆಚ್ಚಿನ ಮಟ್ಟದ ಒಳ್ಳೆಯತನ ಅಥವಾ ದೈವತ್ವ ಗುಣ ಆ ಅನಾಮಿಕ ರೈತನಲ್ಲಿದೆ.
  ಒಳ್ಳೆಯ ಓದಿಗೆ ಕಾರಣರಾದಿರಿ ಮೇಡಂ.ವಂದನೆಗಳು.

  ಪ್ರತಿಕ್ರಿಯೆ
 2. Shyamala Madhav

  ವಿಚಾರ ಪ್ರಚೋದಕವೂ, ಮನಸ್ಪರ್ಶಿಯೂ ಆದ
  ವಿಶ್ಲೇಷಣೆಗೆ ಆಭಾರಿ, ಪ್ರಿಯ ಮಮತಾ..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: