ಯಾ ಯಾಯಾ ಕೋಕೋ ಜಂಬೋ…

ಶಿವ ಹಿತ್ತಲಮನಿ

ಸ್ಯಾನ್ ಜೋಸೆಯ ಆ ಪಾರ್ಕಿನ ತಂಪನೆ ಮರದ ಕೆಳಗೆ ಹೀಗೆ ನಾನು ಗುನುಗುತ್ತಿರುವಂತೆ, ಅಕ್ಕಪಕ್ಕದ ಕೆಲವು ತಲೆಗಳು ನನ್ನ ಕಡೆ ತಿರುಗುವುದು ಗೋಚರವಾಯಿತು. ಕೆಲವೊಬ್ಬ ಮಧ್ಯವಯಸ್ಕರು ಮುಗುಳುನಗು ತೋರಿದರೆ, ಇನ್ನು ಕೆಲವರು ಪ್ರಶ್ನಾರ್ಥಕವಾಗಿ ನೋಡುವುದು ಅನುಭವಕ್ಕೆ ಬಂತು. 

ಕಂಕುಳಿದ್ದ ಮಗ ನಿದ್ದೆಗೆ ಜಾರಿದ್ದ… 

ಭಾರತೀಯ ಟಿವಿ ಇತಿಹಾಸದಲ್ಲಿ ೯೦ ರ ದಶಕ ಒಂದು ಸಮುದ್ರಮಂಥನ ಯುಗ. 

೧೯೯೨ ರ ಕೊಲ್ಲಿ ಯುದ್ಧದಲ್ಲಿ ಅಮೇರಿಕದ ಪೆಟ್ರಿಯಾಟಿಕ್ ಕ್ಷಿಪಣಿಗಳು ಇರಾಕಿನ ಮೇಲೆ ಎರಗುವುದನ್ನು ಸಿ.ಎನ್.ಎನ್ ನೇರವಾಗಿ ಮನೆಯಂಗಳದಲ್ಲೇ ನಡೆಯುವಂತೆ ಬಿತ್ತರಿಸಿದ್ದು, ಭಾರತೀಯ ಟಿ.ವಿ ಮಾಧ್ಯಮದಲ್ಲಿ ಕಂಪನ ಮೂಡಲಾರಂಭಿಸಿತು. ಮನೆಯ ಮೇಲೆ ಹತ್ತಿ ಆಂಟೆನಾ ಕಟ್ಟಿ-ಅದನ್ನು ತಿರುಗಿಸುತ್ತಿದ್ದ ಜಾಗಕ್ಕೆ ಕೇಬಲ್ ಎಳೆಯುವ ಹುಡುಗರು ಬಂದಿದ್ದರು. ಇದ್ದಕ್ಕಿದಂತೆ ನೋಡುಗರ ಮುಂದೆ ಚಾನೆಲ್ ಆಯ್ಕೆಗಳು ಉಧ್ಭವವಾಗಿದ್ದವು. ದೂರದರ್ಶನದ ಕಾರ್ಯಕ್ರಮಗಳು ಡೈಯಟ್ನಂತಿದ್ದರೆ, ಈ ಕೇಬಲ್ ಚಾನೆಲ್ಗಳು ತರವಾರಿ ಖ್ಯಾದ್ಯಗಳ ಬಫೆ ಊಟದಂತಿತ್ತು. 

ಈ ಕೇಬಲ್ ಚಾನೆಲ್ಗಳ ಮೇಳದಲ್ಲಿ ನಮ್ಮಂತಹ ಕಾಲೇಜು ಹೋಗುವ ವಯಸ್ಸಿನವರನ್ನು ನಿಜಕ್ಕೂ ಹಿಡಿದಿಟ್ಟಿದ್ದು ಎಂ.ಟಿ.ವಿ ಮತ್ತು  ಚಾನೆಲ್.ವಿ. 

ಈ ಎರಡು ಸಂಗೀತ ಚಾನೆಲ್ಗಳು ತಮ್ಮ ವಿಭಿನ್ನ ಕಾರ್ಯಕ್ರಮಗಳಿಂದ, ವಿಶಿಷ್ಟ ಪ್ರಸ್ತುತ್ತಿಯಿಂದ ಮತ್ತು ವಿ.ಜೆ ಗಳಿಂದ ಪೂರ್ತಿ ಮೋಡಿ ಮಾಡಿದ್ದವು. ವಿಡಿಯೋ ಜಾಕಿ (ವಿ.ಜೆ) ಪದ ಗೊತ್ತಾಗಿದ್ದೇ ಅವಾಗ. ಅವರ ಆ ಹಾವಭಾವ, ಮ್ಯಾನಿರಸಂ ಮತ್ತು ಸ್ಟೈಲ್ ಮೊದಲು ನೋಡೇ ಇರಲಿಲ್ಲ. 

ನಿಖಿಲ್ ಚಿನ್ನಪ್ಪ ‘ಎಂ.ಟಿ.ವಿ ಸೆಲೆಕ್ಟ್’ ಎಂಬ ಕಾರ್ಯಕ್ರಮದಲ್ಲಿ, ತನ್ನ ಸುಲಲಿತ ಇಂಗ್ಲೀಷ್ನಲ್ಲಿ ಹಾಡುಗಳ ಬಗ್ಗೆ ವ್ಯಾಖ್ಯಾನ ಮಾಡಿ, ಆ ಹಾಡುಗಳನ್ನು ತೋರಿಸುತ್ತಿದ್ದಂತೆ ಅವು ನಿಶ್ಚಿತವಾಗಿ ಸೂಪರ್ ಹಿಟ್ ಅನಿಸುತ್ತಿದ್ದವು. ಇನ್ನು ಶೇಯನಾಸ್ ನಡೆಸಿಕೊಡುತ್ತಿದ್ದ ‘ಎಂ.ಟಿ.ವಿ ಮೋಸ್ಟ್ ವಾಂಟೆಡ್’ ತನ್ನದೇ ಆದ ಅಭಿಮಾನಿ ಬಳಗ ಹೊಂದಿತ್ತು. ನಡುವೆ ನೇರ ಕರೆ ಮಾಡಿ ಹಾಡುಗಳನ್ನು ಕೋರುವುದು ಬೇರೆ ನಡೆಯುತ್ತಿತ್ತು. ಶೇಯನಾಸ್ ಹೇಳಿದ್ದಕ್ಕೆ ಅವು ಇಷ್ಟವಾದವೋ ಅಥವಾ ಹಾಡುಗಳೇ ಚೆನ್ನಾಗಿದ್ದವೋ ತಿಳಿಯಂತಹ ವಯಸ್ಸದು. 

ಯೂಟ್ಯೂಬ್ ಬರುವ ಸುಮಾರು ಒಂದು ದಶಕದ ಮುಂಚೆ ಈ ವಿ.ಜೆ.ಗಳೇ ನಮ್ಮಗಳ ಈ ಹಾಡು-ಸಂಗೀತದ ಯೂಟ್ಯೂಬ್ ಆಗಿದ್ದವರು. 

ಈ ಕಾಲಘಟ್ಟದಲ್ಲಿ ಅನೇಕ ಅದ್ಭುತ ಹಾಡುಗಳು – ಬ್ಯಾಂಡ್ಗಳು ಹೊರಬಂದವು. ಬ್ಯಾಕ್ ಸ್ಟ್ರೀಟ್ ಬಾಯ್ಸ್, ಬ್ರಿಟ್ನಿ ಸ್ಪಿಯರ್ಸ್, ಸ್ಪೈಸ್ ಗರ್ಲ್ಸ್, ಮೈಕಲ್ ಜಾಕ್ಸನ್, ಬ್ರಿಯಾನ್ ಆಡಮ್ಸ್ ಸಂಗೀತದ ಮೂಲಕ ಹತ್ತಿರವಾದ ಸಮಯವದು. 

ಇಂತಹ ಯಾವುದೋ ಒಂದು ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಕೇಳಿಬಂದ ಹಾಡೇ ‘ಯಾ ಯಾ ಕೋಕೋ ಜಂಬೊ’. 

ಈ ಹಾಡಿನಲ್ಲಿ ನಿಜಕ್ಕೂ ಅಂತಹ ವಿಶೇಷವೇನಿರಲಿಲ್ಲ. ಸಮುದ್ರ ತೀರದಲ್ಲಿ ಚಿತ್ರೀಕರಿಸಿರುವ ಈ ಹಾಡು ಆದರೂ ಗುನುಗುವಂತಿತ್ತು. 

ಜಗದೋದ್ಧಾರನ ಆಡಿಸಿದಳು ಯಶೋದೇ.. 

ಒಂದೂವರೆ ವರ್ಷದ ನಮ್ಮ ಮಗನನ್ನು ಅವರ ಅಮ್ಮ ಮಲಗಿಸುವಾಗ ಹಾಡುಗಳನ್ನು ಹೇಳಿ ಮಲಗಿಸುವುದು ರೂಡಿ. ಜಗದೋದ್ಧಾರನಿಂದ ಶುರುವಾದ ಕಛೇರಿ ನಂತರ ‘ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು’ ಕಡೆಗೆ ತಿರುಗಿ ಕೆಲವೊಮ್ಮೆ ‘ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ’ ವರೆಗೆ ನಡೆಯುತಿತ್ತು. ನನ್ನ ಪತ್ನಿಯ ಗಾನಸುಧೆಯಿಂದ ಹೊಮ್ಮುತ್ತಿದ್ದ ಈ ಹಾಡುಗಳನ್ನು ಕೇಳಿ ಕೇಳಿ ನನಗೂ ಬಹುತೇಕ ಹಾಡುಗಳು ಕಂಠಪಾಠವಾಗಿಬಿಟ್ಟವು. 

ಹೀಗಿರುವಾಗ ಒಮ್ಮೆ ಅದ್ಯಾವುದೋ ಕಾರಣಾಂತರಗಳಿಂದ ಮಗುವನ್ನು ಮಲಗಿಸುವ ಜವಾಬ್ದಾರಿ ಮೂರು ದಿನದವರೆಗೆ ನನ್ನ ಹೆಗಲಿಗೆ ಬಿತ್ತು. ಜವಾಬ್ದಾರಿಯ ಜೊತೆ ಮಗುವನ್ನೂ ಹೆಗಲಿಗೆ ಹಾಕಿಕೊಂಡು ಮಲಗಿಸಲು ಅಣಿಯಾದೆ. ಅವರ ಅಮ್ಮ ಹೇಳಿದ ಹಾಡುಗಳ ತುಣುಕುಗಳನ್ನು ಹೇಳಿದರೆ ಮಗು ಮಲಗುತ್ತದೆ ಎಂಬ ವಿಶ್ವಾಸದಿಂದ ಹೋದವನಿಗೆ ಕೆಲವೇ ನಿಮಿಷಗಳಲ್ಲಿ ಅರ್ಥವಾಯಿತು ಇದು ಬೇರೆಯದೇ ಆದ ತಂತ್ರಜ್ಞಾನ! ಬಾಯಿಂದ ಬರುತ್ತಿದ್ದ ಸಾಲುಗಳು ಮತ್ತು  ಹೇಳುತಿದ್ದ ಮುಖ ತಾಳೆಯಾಗದ ಕಾರಣ, ಮಗು ಇದು ಯಾಕೋ ಆಡಿಯೋ – ವಿಡಿಯೋ ಹೊಂದಾಣಿಕೆಯಾಗುತ್ತಿಲ್ಲವೆಂಬುವಂತೆ ನೋಡುತಿತ್ತು. ಅತ್ತಿತ್ತ ನೋಡದಿರು ಎಂದು ನಾನು ಹಾಡಿದರೆ, ಮಗ ತನಗೂ ಇದಕ್ಕೂ ಸಂಬಂಧವೇ ಇಲ್ಲವೆಂಬುವಂತೆ ಎಲ್ಲಾ ಕಡೆ ನೋಡುವುದು ಮತ್ತು ಹೊರಳಾಡುವುದು ಮಾಡುತ್ತಿದ್ದ. 

ಓದಿಕೊಂಡ ಹೋದ ೨-೩ ಅಧ್ಯಾಯಗಳಲ್ಲೇ ಪ್ರಶ್ನೆ ಬರುವುದೆಂದು ಪರೀಕ್ಷೆಗೆ ಹೋಗಿ, ಸಿಲೆಬಸ್ ಹೊರಗೆ ಪ್ರಶ್ನೆಗಳನ್ನು ನೋಡಿ ಕಂಗಾಲಾದ ವಿದ್ಯಾರ್ಥಿಯಂತಾಗಿತ್ತು ಪರಿಸ್ಥಿತಿ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಮಗನನ್ನು ಹೆಗಲಿಗೆ ಹಾಕಿಕೊಂಡು ಮುಂದೆ ನಡೆದೆ. ಗೊತ್ತಿದ್ದ ಎಲ್ಲಾ ಹಾಡುಗಳನ್ನು ಸ್ವಲ್ಪವೂ ರಾಗ-ತಾಳಗಳ ಲವಲೇಶವೂ ಇಲ್ಲದೇ ಗುನುಗಿ ಆಗಿತ್ತು. ಈಗೇನಿದ್ದರೂ ಸಿಲೆಬಸ್ ಆಚೆ ಹಾಡುಗಳನ್ನು ಪ್ರಯತ್ನಿಸುವ ಅಂದುಕೊಂಡು ನರ್ಸರಿ ಹಾಡು ‘ಬಾ ಬಾ ಬ್ಲಾಕ್ ಶೀಪ್’ ಹೇಳಿದೆ. ಮಗ ಸ್ವಲ್ಪ ಗಮನಕೊಟ್ಟಂತೆ ಅನಿಸಿತು. ಮತ್ತೊಂದೆರೆಡು ನರ್ಸರಿ ಹಾಡುಗಳು ಫಲಪ್ರದವಾದವರೂ ನಿದ್ದೆ ಹತ್ತಿರವೂ ಸುಳಿಯುವ ಲಕ್ಷಣಗಳಿರಲಿಲ್ಲ. 

ಯಾಕೇ ನೆನಪಾಯ್ತು, ಹೇಗೆ ನೆನಪಾಯ್ತು ಗೊತ್ತಿಲ್ಲಾ… ಆಗ ನೆನಪಾಗಿದ್ದೆ ಎಂ.ಟಿ.ವಿ ಯಲ್ಲಿ ಕಾಲೇಜು ದಿನಗಳಲ್ಲಿ ಕೇಳುತ್ತಿದ್ದ ‘ಯಾ ಯಾ ಕೋಕೋ ಜಂಬೋ’!

ಯಾ ಯಾ ಗುನುಗಲು ಶುರುಮಾಡುತ್ತಿದ್ದಂತೆ ಮಗನಿಗೆ ಇಷ್ಟವಾದಂತಿತ್ತು. ಗೊತ್ತಿದ್ದ ೩-೪ ಸಾಲು ಮತ್ತೆ ಮತ್ತೆ ಹೇಳುತ್ತಿದ್ದ ಹಾಗೆ ಮಗ ನಿದ್ದೆಗೆ ಜಾರಿದ್ದ. 

ಈ ಅನಿರೀಕ್ಷಿತ ವಿಜಯದ ನಂತರವೂ ಉಳಿದ ೨ ದಿನ ಹೇಗೆ ಮಲಗಿಸುವುದು ಎನ್ನುವ ಎಂಬ ಪ್ರಶ್ನೆ ಇನ್ನೂ ಇತ್ತು. 

ಮತ್ತೆ ವಿಕ್ರಮನಂತೆ ಮಗನನ್ನು ಹೆಗಲಿಗೆ ಹಾಕಿಕೊಂಡು ಎರಡನೆಯ ದಿನದ ನಿದ್ದೆ ಕಾರ್ಯಕ್ರಮ ಶುರುವಾಯಿತು. ಆದರೆ ಸ್ವಲ್ಪ ಸಮಯದಲ್ಲೇ ಗೊತ್ತಾಗಿದ್ದು ‘ಯಾ ಯಾ ಕೋಕೋ ಜಂಬೊ’ ಆ ದಿನವೂ ಸಹ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. 

ಇನ್ನು ಉಳಿದಿದ್ದು ಕೊನೆಯ ದಿನದ ಆಟ. ಮಲಗಿಸಲು ಹೋಗುವಷ್ಟರಲ್ಲೇ ಮಗು ತಾನಾಗಿಯೇ ‘ಯಾ ಯಾ ಕೋಕೋ’ ಅನ್ನುವುದಕ್ಕೆ ಶುರುಮಾಡಿಬಿಟ್ಟಿತ್ತು!

ಇದಾದ ನಂತರ ಕ್ರಿಕೆಟ್ನಲ್ಲಿ ಬೇರೆ ಬೇರೆ ಟೆಸ್ಟ್ ತಂಡ ಮತ್ತು ಟಿ-೨೦ ತಂಡಗಳಿರುವಂತೆ ನಮ್ಮದು ನಿದ್ದೆ ತಂಡಗಳು ಆದವು. ನಾವು ಸಮಯ-ಸಂದರ್ಭಗಳಿಗೆ ಅನುಗುಣವಾಗಿ ಮಗು ಆರಾಮವಾಗಿ ಮಲಗಿಸುವುದಿದ್ದರೆ  ನನ್ನ ಪತ್ನಿ, ತ್ವರತಿಗತಿಯ ಸ್ಲೀಪ್ ರೇಟ್ ಬೇಕಿದ್ದರೆ ನಾನು ಅಂತಾಯಿತು. 

ಆದರೆ ಏನು ನಾವು ನಿರೀಕ್ಷಿಸಿರಲಿಲ್ಲವೆಂದರೆ ಮಗ ಮಲಗುವ ಸಮಯದ ನಂತರವೂ ‘ಯಾ ಯಾ ಕೋಕೋ ಜಂಬೊ’ ನೆನಪಿಟ್ಟುಕೊಳ್ಳುವುದೆಂದು. 

ಅದ್ಯಾವುದೋ ಕಡೆ ಕಾರಿನಲ್ಲಿ ಹೋಗುತ್ತಿದ್ದಾಗ ಮಗ ಕಿರಿಕಿರಿ ಮಾಡುತ್ತಿದ್ದ. ಅವನಿಗೆ ಎಷ್ಟು ಸಮಾಧಾನ ಮಾಡಿದರೂ ಸುಮ್ಮನಾಗುತ್ತಿರಲಿಲ್ಲ. ಏನು ಮಾಡುವುದು ಎನ್ನುವಷ್ಟರಲ್ಲಿ ಮಗನೇ ‘ಯಾ ಯಾ ಕೋಕೋ’ ಎಂದ. ಐಫೋನೋ-ಐಪಾಡೋ ಯಾವುದೋ ಒಂದರಿಂದ ಆ ಹಾಡು ಬಂದಾಗ ಮತ್ತೆ ಆರಾಮವಾಗಿದ್ದ . 

ಆ ಸ್ಯಾನ್ ಜೊಸೆ ಪಾರ್ಕಿನಲ್ಲಿ ಹೋಗಿದ್ದಾಗ ನನ್ನ ಟಿ-೨೦ ಗೆ ಬುಲಾವ್ ಬಂತು…  ಅವಾಗಲೇ  ಆ ಪಾರ್ಕಿನ ಮರದ ಕೆಳಗೆ ‘ಯಾ ಯಾ ಕೋಕೋ ಜಂಬೊ’ ಹೇಳಿ ಮಗನನ್ನು ಮಲಗಿಸಿದ್ದು. ಆವಾಗಲೇ ಪಾರ್ಕಿನಲ್ಲಿದ್ದ ಅಕ್ಕಪಕ್ಕದ ಜನ ತಮ್ಮ ಒಪ್ಪಿಗೆ ಮುದ್ರೆ ಒತ್ತಿದ್ದು . ಕೆಲವರಿಗೆ ಈ ಹಾಡು ಗೊತ್ತಿರುವಂತೆ ಕಂಡಿತು, ಇನ್ನು ಕೆಲವರು ಬಹುಷ ಪ್ರಯತ್ನಕ್ಕೆ ಮಾರ್ಕ್ಸ್ ಕೊಟ್ಟಹಾಗಿತ್ತು !

ಎತ್ತಣ ಎಂ.ಟಿ.ವಿ, ಎತ್ತಣ ಹಾಡು… ಏನೆಲ್ಲಾ ಕತೆ… ಎಲ್ಲಾ ನಿದ್ದೆಗಾಗಿ !

‍ಲೇಖಕರು Admin

September 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

 1. ಪ್ರವೀಣ್

  ಸೊಗಸಾಗಿ ಮೂಡಿಬಂದಿದೆ. ಮಕ್ಕಳ ಆಟ ತಂದೆ ತಾಯಿಯರಿಗೆ ಪಿಕಲಾಟ.

  ಪ್ರತಿಕ್ರಿಯೆ
 2. ಶಿವ ಹಿತ್ತಲಮನಿ

  ಪ್ರವೀಣ್,

  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು !

  ಇದು ಒಂಥರಾ ಬೆಕ್ಕು-ಇಲಿ ಆಟ 🙂

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: