ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾ ದೇವಿ ಸರ್ವಭೂತೇಷು….

ಸಾಮಂತ್ರಿ ಜ್ಯೋತಿ

ಇನ್ನೂ ಎಷ್ಟೊಂದ್ ಸಾಮಾನು ತಗೋಳೋದಿದ್ರುನು, ಯಾವ್ದೋ ಒಂದನ್ನ ತಗೊಂಡು ಉಸಿರು ಬಿಗಿ ಹಿಡ್ಕೊಂಡು ಓಡಿ ಬಂದು ಮನೆ ಸೇರಿ, ತುಂಬ ನಿರಾಳತೆಯನ್ನ ಅನುಭವಿಸೊ ಹೆಣ್ಮಕ್ಳು ಅಷ್ಟೆ ಚನಾಗಿ ಚೊಕ್ಕವಾಗಿ ಮನೆಯನ್ನ ನಡೆಸಿಕೊಂಡು ಹೋಗ್ತಿರ್ತಾರೆ. ಅರೆ, ಈ ಅವಸ್ತೆನ ನಾನೂ ಫೀಲ್ ಮಾಡಿದಿನಿ ಅಂತ ನಿಮಿಗನಿಸಿದರೆ, ಅದು ನಿಜ.. ಇದೊಂದು ‘ಅಂತರ್ಮುಖ’ ವ್ಯಕ್ತಿತ್ವದ ಲಕ್ಷಣ ಅಥವಾ ಅತಿಯಾಗಿ ಅನಸಿದರೆ ಅದು ‘ಸೋಶಿಯಲ್ ಆಂಕ್ಸೈಟಿ’ ಎಂಬ ಸ್ಥಿತಿಯ ಲಕ಼ಣ.

ಮನೆಯಿಂದ ಹೊರಹೋಗೋಕೆ ಸಾಕಷ್ಟು ಮುಜುಗರ. ಏನಾರು ಮಾಡಿ ಹೋಗ್ಬರಣ ಅಂತ ನಿಮ್ಮನ್ನ ನಾವು ರೆಡಿ ಮಾಡ್ಕೊಳೊ ಅಷ್ಟರಲ್ಲಿ ಅರ್ಧ ಶಕ್ತಿ ವ್ಯಯ ಆಗಿರುತ್ತೆ; ಸರಿ ಹೊರಡೋಣ ಅನ್ಕೊಂಡ್ ಗೇಟ್ ತಗಿತಿದ್ದಂಗೆ ಯಾರಾದ್ರು ಕಾಣ್ತಾರೆ, ತಕ್ಷಣ ಅವರಿಗೆ ಕಣ್ಮರೆಯಾಗಿ ನಿಂತ್ಕೊಂಡು, ಅವರು ಹೋದ ನಂತರ ಹೊರಡ್ತೀರ.

ಇನ್ನು ದಾರಿಗುಂಟ ಅದೊಂತರ ಅನುಭವ. ಎಲ್ಲರು ನಮ್ಮನ್ನೆ ಗಮನಿಸ್ತಿದಾರೇನೊ, ಬಟ್ಟೆ ಏನಾದ್ರು ಮುದುಡಿದ್ಯಾ, ಕಲೆ ಏನಾದ್ರು ಆಗೇತಾ ಅಥ್ವಾ ಮುಖಕ್ಕೇನಾದ್ರು ಹತ್ತೇತಾ ಅನ್ನೊ ವಿಚಿತ್ರ ಫೀಲಿಂಗ್ಸ್. ಕೊನೆಗೂ ಬಾಳ ಜನ ಇರೊ ಸ್ಥಳ ಮುಟ್ಟಿ ಅನ್ಕೊಂಡದ್ದಾಯ್ತು ಅನ್ನೊವಷ್ಟ್ರಲ್ಲಿ ಒಂಥರ ಅಪರಿಚಿತ ಭಾವ. ಇಲ್ಲಿಂದ ಎಷ್ಟ್ ಬೇಗ ಹೋದ್ರ ಅಷ್ಟ್ ಒಳ್ಳೇದು ಅನ್ಸಿ ಹೊಂಟ್ಬಿಡ್ತೀರ.

ಇದ್ರಿಂದ ಹೊರಗ್ಬರಕ್ ಅದೆಷ್ಟ್ ಪ್ರಯತ್ನ ಪಟ್ಟು, ಗೆದ್ರು, ಪ್ರತಿಸಲ ಅದು ಹೊಸ ಪ್ರಯತ್ನ ಹಾಗೂ ಅಷ್ಟೆ ಪರಿಶ್ರಮ ಬೇಡೊ ಕೆಲ್ಸ ಆಗ್ಬಿಡುತ್ತೆ. ಯಾಕಿಷ್ಟು ಭಯ? ಧಾವಂತ? ಮುಜುಗರ? ಬಹುಶಃ, ಸಣ್ಣವರಿದ್ದಾಗ, “ಗುಂಪಿನಲ್ಲಿದ್ದ ನಿಮ್ಮನ್ನ ಅಸಹಜವಾಗಿ ಮುತ್ತಿಕ್ಕಿದ್ದ ಆ ಅಪರಿಚಿತ, ಗೆಳತಿಯ ಮನೆಗೆ ಆಡಲು ಹೋದಾಗ, ಮೇಲೆ ಕೂರಿಸಿಕೊಂಡು ಎದೆಮೇಲೆ ಕೈಯಿಟ್ಟಿದ್ದ ಆ ಅಂಕಲ್, ಚಾಕೋಲೇಟು ಕೊಡಿಸಿ ಬೆನ್ನಿನ ಕೆಳಗೆ ಹೊಡೆದು ಕಳಿಸಿದ್ದ ಆ ಹುಡುಗ, ಒಬ್ಬರೆ ಆಟಾಡುತ್ತಿದ್ದಾಗ ಅನಾಯಾಸವಾಗಿ ತೊಡೆಮೇಲೆಲ್ಲ ಕೈಯ್ಯಾಡಿಸಿದ್ದ ನಿಮ್ಮ ಸಂಬಂಧಿಕ ಅಥವಾ ಮೊದಲಿಗಿಂತ ಈಗ  ತುಂಬ ಚಂದ ಕಾಣ್ತೀಯ ಅಂತ ಮೈನೆರೆತ ಮೇಲೆ ಅಪ್ರಾಕೃತವಾಗಿ ಹೇಳಿಕೆ ನೀಡಿದ್ದ ಆತ” ನೀವು ಹೋದ ಜಾಗದಲ್ಲಿ ಮತ್ತೆ ಮತ್ತೆ ನಿಮಗೆ ಕಾಣಿಸಬಹುದು. ಬಾಲ್ಯದ ಘಟನೆಗಳು ಮನಸಿನ ಮೇಲೆ ಮಾಡಿದ ಗಾಯಗಳು ಸರಿಯಾಗಿ ಉಪಚಾರವಿಲ್ಲದೆ ಇನ್ನು ನಿಮ್ಮನ್ನ ಕಾಡುತ್ತಿರಬಹುದು. ಹಾಗಾಗೆ ನೀವು ಈಗಲು ಸಂತೆಯ ಮಧ್ಯದಲ್ಲಿ ಅಂತವರಿರಬಹುದೆಂದು ಅಲ್ಲಿಗೆ ಹೋಗಲು ಹಿಂಜರಿಯುತ್ತಿರಬಹುದು. ಸಣ್ಣವರಿದ್ದಾಗಿ, ಇಂತವರಿಂದಾಗಿ ಮುದುಡಿದ್ದ ಮನಸು, ಇನ್ನೂ ಅರಳಲು ಸಿಗಬೇಕಿದ್ದ ಸಹಕಾರಗಳಿಲ್ಲದೆ ಮುದುಡಿಯೇ ಕೂತಿರಬಹುದು.

ಕುಟುಂಬ ಅಥವಾ ಸಮಾಜವೂ ಸಹ ಇದನ್ನು ಗಮನಿಸದೆ, ಅವಳನ್ನು ಹಾಗೆ ಬ್ರಾಂಡ್ ಮಾಡಲಾಗುತ್ತದೆ. ಜನಬಳಕೆಯಿಲ್ಲದವಳು-ಪುಕ್ಕಲಿ-ಕೌಟುಂಬಿಕಸಾತ್ಮ್ಯಯಿಲ್ಲದವಳು ಅಥವಾ ಇದ್ದರೂ ಯಾರಿಗೂ ತಿಳಿಯದಂತೆ ಇರುವವಳು ಇತ್ಯಾದಿಯಾಗಿ ಹೆಸರಿಟ್ಟು ನಕ್ಕುಬಿಡುತ್ತದೆ. ಕಾರ್ಯಕಾರಣ ಸಿದ್ಧಾಂತವನ್ನು ಗಂಡ ಹೆಂಡಿತಿಯನ್ನ ಯಾಕೆ ಬೈದ-ಹೊಡೆದ ಅನ್ನುವುದಕ್ಕೆ ಬಳಸುವ ಜನ, ಮನೆಯ ಎಲ್ಲರಂತೆ ಈ ‘ಹುಡುಗಿ’ ಯಾಕಿಲ್ಲ? ಅಥವಾ ಇಂಥ ಅನಿರೀಕ್ಷಿತ ಸೊ ಕಾಲ್ಡ್ ಅನಾರೋಗ್ಯಕರ ಬೆಳವಣಿಗೆ ಯಾಕಾಯ್ತು ಅನ್ನವ ವಿಷಯದಲ್ಲಿ ಬಳಸುವುದಿಲ್ಲ.

ಒಂದು ಅಧ್ಯಯನದ ಪ್ರಕಾರ, ಮನುಷ್ಯನ ಅತೀವ ಕಲಿಕೆ ಆಗೋದು ಬಾಲ್ಯದಲ್ಲೆ. ಸುಮಾರು 15 – 18 ವರ್ಷದವರೆಗೆ ಕಲಿಯುವದನ್ನೆ ಬದುಕು ಪೂರ ಮತ್ತೆ ಮತ್ತೆ ಉಪಯೋಗಿಸುತ್ತಾನೆ ಎಂಬುದು ನಾವು ಗಮನಿಸಿದರೆ, ಹೌದೆನಬಹುದಾದ ಸಂಗತಿ. ಹೊಸಕಲಿಕೆಗಳು ವೃತ್ತಿಶಿಕ್ಷಣ ಅಥವ ಮುಂದುವರಿದ ಪ್ರವೃತ್ತಿ ಹವ್ಯಾಸಗಳನ್ನು ಹೊರತುಪಡಿಸಿ, ಬದುಕಿನ ಬಹುಮುಖ್ಯ ಕಲಿಕೆಗಳು ತಾತ್ವಿಕ ನೆಲೆಗಟ್ಟಿನಲ್ಲಿ ನೋಡುವುದಾದರೆ ಬಾಲ್ಯದಲ್ಲೆ ಅತಿಹೆಚ್ಚು. ಹಾಗಾಗಿ, ಆ ಜೀವಿತಾವಧಿಯಲ್ಲಿ ಆಗುವ ಅನುಭವಗಳು ಮನುಷ್ಯನನ್ನ ರೂಪಿಸುತ್ತವೆ. ಅದರಿಂದಾಗಿಯೇ ಮಕ್ಕಳು ಬೆಳೆಯುವ ವಾತಾವರಣದ ಬಗ್ಗೆ ಹೆಚ್ಚಿನ ಕಾಳಜಿಯ ಅಗತ್ಯದ ಬಗ್ಗೆ ಈಗಿನ ಜವಾಬ್ದಾರಿಯುತ ಪೋಷಕರು ಯೋಚಿಸುತ್ತಾರೆ.

ನಮ್ಮ ಸುತ್ತ ಇರೊ ಜನ ಬಾಳ ಒಳ್ಳೆವ್ರು ಅಂತ ನಾವು ಆರಾಮಾಗಿ ಹೇಳ್ಬಹುದಾದ್ರೂ, ವಿಚಿತ್ರ ಸಂಗತಿಯೆಂದರೆ, ‘ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ’ದ ವರದಿಯ ಪ್ರಕಾರ ಮಕ್ಕಳ ಅಪಹರಣ ಹಾಗೂ ಪೋಕ್ಸೋ ಪ್ರಕರಣಗಳು 2014 ರಿಂದ ಗಣನೀಯ ಪ್ರಮಾಣದ ಏರಿಕೆಯನ್ನ ಕಂಡಿವೆ, ಇಂತಹ ಪ್ರಕರಣಗಳಲ್ಲಿ 99% ಪ್ರಮಾಣದ ಬಲಿಪಶುಗಳು 12-18 ವರ್ಷದ ಹೆಣ್ಣುಮಕ್ಕಳು.

ಇಷ್ಟೇ ಮುಖ್ಯವಾದ ಇನ್ನೊಂದು ವಿಷಯ, ಶೇ. 94.6 ಪ್ರಕರಣಗಳಲ್ಲಿ, ಅಪರಾಧಿಗಳಿಗೆ ಆ ಮಕ್ಕಳು ಪರಿಚಯದವರಿರುತ್ತಾರೆ. 53.7 ಪ್ರತಿಶತ ಅಪರಾಧಿಗಳು ಮಕ್ಕಳ ನಿಕಟ ಕುಟುಂಬ ಸದಸ್ಯರು, ಸಂಬಂಧಿಕರು ಅಥವ ಸ್ನೇಹಿತರಾಗಿರುತ್ತಾರೆ.

2022 ವರದಿಯ ಪ್ರಕಾರ ಪ್ರತಿ ಗಂಟೆಗೊಮ್ಮೆ, ಭಾರತದಲ್ಲಿ 7 ಮಕ್ಕಳು ತಮ್ಮ ವಿರುದ್ಧ ಲೈಂಗಿಕ ಅಪರಾಧಗಳನ್ನ ಹಾಗೂ 4 ಮಕ್ಕಳು ಲೈಂಗಿಕ ಅತ್ಯಾಚಾರವನ್ನ ವರದಿ ಮಾಡುತ್ತಿದ್ದಾರೆ. ವರದಿ ಮಾಡದವರ ಸಂಖ್ಯೆುಯನ್ನ ನಾವು ಊಹಿಸಿಕೊಳ್ಳಬಹುದು.2023 ರ ಹೊತ್ತಿಗೆ ಭಾರತ ತನ್ನ ತ್ವರಿತ ನ್ಯಾಯಾಲಯಗಳಲ್ಲಿ ಒಟ್ಟು 243237 ಮಕ್ಕಳ ಲೈಂಗಿಕ ದೌರ್ಜನ್ಯ (ಸಿ.ಎಸ್.ಎ.) ಪ್ರಕರಣಗಳನ್ನ ಬಾಕಿ ಉಳಿಸಿಕೊಂಡಿವೆ.

ಇಂಥದೆ ಸರಕಾರಿ ದಾಖಲೆಗಳು, ಅವುಗಳು ನಡೆಸುವ ನ್ಯಾಯ ಅನ್ಯಾಯಗಳಾಚೆಯ ಅಧ್ಯಯನಗಳೇ ಹೇಳುವ ಹಾಗೆ, ಇಂತಹ ದೌರ್ಜನ್ಯ ಪ್ರಕರಣಗಳು ಬಾಲ್ಯವನ್ನ ಕೆಟ್ಟದಾಗಿ ಮೊಟಕುಗೊಳಿಸುತ್ತವೆ ಹಾಗೂ ದೀರ್ಘಾವಧಿಯ ಹಾನಿಗೆ ಕಾರಣವಾಗುತ್ತವೆ. ತಂದೆ ಅಥವಾ ತಾಯಿಯನ್ನ ಕಳೆದುಕೊಂಡ ಮಕ್ಕಳು, ವಿಶೇಷವಾಗಿ ತಂದೆಯನ್ನು ಕಳೆದುಕೊಂಡ ಮಕ್ಕಳಲ್ಲಿ ಈ ರೀತಿಯ ದೌರ್ಜನ್ಯಗಳು ಸಾಮಾನ್ಯ; ಆದಕ್ಕೆ ಕಾರಣಗಳು ಸಾಮಜಿಕ ನೆಲೆಗಟ್ಟುಗಳಾಗಿದ್ದು ಅವುಗಳ ವಿವರಣೆಯ ಅಗತ್ಯವಿಲ್ಲ ಎನಿಸುತ್ತದೆ. ಮುಂಚೆ ಹೇಳಿದ ‘ಸೋಷಿಯಲ್ ಆಂಕ್ಸೈಟಿ’ ಇಂತಹ ಆಘಾತಗಳ ಒಂದು ರೀತಿಯ ಪ್ರತಿಫಲನ.

ದೌರ್ಜನ್ಯಕ್ಕೊಳಗಾದ ಮಕ್ಕಳು ತೋರ್ಪಡಿಸಬಹುದಾದ ಸಾಮನ್ಯ ಲಕ್ಷಣಗಳು:·         

ಸ್ನೇಹಿತರು ಅಥವಾ ದಿನನಿತ್ಯದ ಚಟುವಟಿಕೆಗಳಲ್ಲಿ ಅನಾಸಕ್ತಿ ತೋರುವುದು, ಮಕ್ಕಳ ವರ್ತನೆಯಲ್ಲಿ ಬದಲಾವಣೆಗಳು (ಉದಾ: ಕೋಪ, ಹತಾಷೆ, ಆಕ್ರಮಣಶೀಲತೆ, ಶೈಕ್ಷಣಿಕ ಕಾರ್ಯಕ್ಷಮತೆಯಲ್ಲಿ ಬದಲಾವಣೆ), ಖಿನ್ನತೆ, ಆತಂಕ, ಅಸಹಜ ಭಯ. ಆತ್ಮವಿಶ್ವಾಸದಿಂದಿಲ್ಲದಿರುವುದು. ನಿದ್ರೆಯ ಸಮಸ್ಯೆ ಅಥವಾ ಕೆಟ್ಟ ಕನಸುಗಳುಈ ಲಕ್ಷಣಗಳು ತುಂಬ ತೀರ ಆಳದ ಸಮಸ್ಯೆಗಳನ್ನ ಪ್ರತಿಬಿಂಬಿಸುವುದಿಲ್ಲ; ಬದಲಾಗಿ, ಮಕ್ಕಳೆಡೆಗೆ ಗಮನಹರಿಸಲೇಬೇಕಾದ ಸಂದರ್ಭಗಳ ಬಗ್ಗೆ ಜಾಗೃತಿ ಮೂಡಿಸುತ್ತವೆ. ಇಂತಹವುಗಳನ್ನ ಗಮನಿಸದೆ ಅಥವಾ ಅವುಗಳಿಂದ ಹೊರಬರದೆ, ಆ ಆಘಾತಗಳ ನಡುವಲ್ಲೆ ಬೆಳೆದು ದೊಡ್ಡವರಾದ ಮಕ್ಕಳು, ಮುಂದೆ ಅಂತಹ ಕೆಟ್ಟ ಅನುಭವಗಳ ಫಲಾನುಭವಿಗಳಾಗುತ್ತಾರೆ ಹಾಗೂ ಜೀವನ ಪೂರ್ತಿ ಆ ಭಾರಗಳನ್ನ ಹೊತ್ತೆ ನಡೆಯುತ್ತಾರೆ.

ಹಾಗಾಗಿ, ಮಕ್ಕಳನ್ನು ಪ್ರೀತಿಸುವ, ಮುದ್ದಿಸುವ, ಬೇಕು ಬೇಡಗಳನ್ನ ನಿರ್ವಹಿಸುವಷ್ಟೆ ಪ್ರಮುಖವಾದ ಜವಾಬ್ದಾರಿ, ಅವರ ಸುತ್ತಲಿನ ವಾತಾವರಣ ಪೋಷಕರ ಗೈರಿನಲ್ಲಿ ಹೇಗಿರುತ್ತದೆ ಎಂಬುದನ್ನು ಗಮನಿಸುವುದು ಹಾಗೂ ಅದು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುವುದು. ಹಾಗಂತ ಪ್ರತಿಕ್ಷಣ ಅವರನ್ನ ಮನೆಯಲ್ಲಿ ಕೂಡಿಹಾಕಬೇಕು ಅಥವಾ ಪೋಷಕರ ಕಣ್ಗಾವಲಿನಲ್ಲೆ ಇಡಬೇಕು ಎಂಬುದಲ್ಲ. ಆರೋಗ್ಯಕರ ವಾತಾವರಣ ಎಂಬುದದಲ್ಲಿ ಮಕ್ಕಳ ‘ಸ್ವತಂತ್ರ್ಯ’ ಅತ್ಯಂತ ಪ್ರಮುಖವಾದುದು.

ಮಕ್ಕಳೊಂದಿಗೆ ಸ್ನೇಹದಿಂದ ಮಾತನಾಡುವುದು, ಶಾಲೆಯಲ್ಲಿ ಇಡೀ ದಿನ ಏನೇನಾಯ್ತು, ಹೋಗಿ ಬರುವಾಗ ಶಾಲಾ ಬಸ್ಸು ಅಥವಾ ಆಟೋದಲ್ಲಿ ನಡೆವ ಸಂಗತಿಗಳೇನು, ಅಸಹಜವಾಗಿ ಏನಾದರು ಜರುಗುತ್ತಿದ್ದರೆ ಅವುಗಳ ಬಗ್ಗೆ ಸೂಕ್ಷ್ಮವಾದ ತಿಳುವಳಿಕೆ ನೀಡುವುದು, ಗುಡ್ ಟಚ್ ಬ್ಯಾಡ್ ಟಚ್ ಗಳ ಕಲಿಗೆ, ಸ್ವರಕ್ಷಣೆಯ ಕಲಿಕೆಗಳು ಪ್ರಾಕೃತವಾಗಿ ಆಗಬೇಕು. ಎಲ್ಲರ ಮೇಲೂ ಅಪನಂಬಿಕೆ ಎಷ್ಟು ಪ್ರಸ್ತುತವಲ್ಲವೋ ಅದೇ ರೀತಿ ಎಲ್ಲರನ್ನು ಕುರುಡಾಗಿ ನಂಬುವುದೂ, ನಂಬಿ ಇನ್ನೇನೋ ತಪ್ಪಾದಾಗ ಕೊರಗುವುದೂ ಅಷ್ಟೆ ಅಪ್ರಸ್ತುತ. ಸಾಧ್ಯವಾದರೆ ಆಗಾಗ, ಅಥವಾ ನಿಮ್ಮ ಮಕ್ಕಳಲ್ಲಿ ಅಸಹಜ ಲಕ್ಷಣಗಳು ಕಂಡುಬಂದಾಗ ಮಕ್ಕಳ ಮನೋವೈದ್ಯರ ಸಲಹೆಗಳನ್ನ ಪಡೆಯುವುದು, ನೆಗಡಿ-ಜ್ವರ ಬಂದಾಗ ಮಕ್ಕಳ ವೈದ್ಯರ ಸಹಾಯ ಪಡೆಯುವಷ್ಟೆ ಸಾಮಾನ್ಯವಾಗಬೇಕು.

ಈ ರೀತಿಯ ಮುನ್ನೆಚ್ಚರಿಕೆ ಕ್ರಮಗಳು ಮುಂದೊಂದು ದಿನ ನಿಮ್ಮ ಹಾಗೆ ನಿಮ್ಮ ಮಕ್ಕಳು ಮಾರ್ಕೆಟ್ಟಿಗೆ ಹೋಗಲು ತಾಸುಗಟ್ಟಲೆ ಯೋಚಿಸುವುದನ್ನು, ಅದಕ್ಕಾಗಿ ಆಂಕ್ಸೈಟಿ ಅನುಭವುಸುವುದನ್ನು ತಪ್ಪಿಸುತ್ತವೆ. ನೀವು ನಿಮ್ಮೊಳಗೆ ಹುದುಗಿ ಕೂತಿರುವ ಆ ಬೋಲ್ಡ್ ನಿಮ್ಮನ್ನ ರಮಿಸಿ-ಸಂತೈಸಿ ಆಚೆ ತರುವ ಸಮಯವೂ ಬರುತ್ತದೆ. ಸಾಧ್ಯವಿರುವ ಅಷ್ಟೂ ಸೌಲಭ್ಯಗಳನ್ನ ಮಾರ್ಗಗಳನ್ನು ಬಳಸಿಕೊಂಡು ಇಂತಹ ಆಘಾತಗಳಿಂದ ಯಾವಾಗ ಬೇಕಾದರೂ ಯಾರೂ ಬೇಕಾದರೂ ಹೊರಬರಬಹುದು.

ಹಾಗಾದಾಗ ಇನ್ನಷ್ಟು ಉತ್ಕೃಷ್ಟ ಗುಣಮಟ್ಟದ ಬದುಕು ನಿಮ್ಮದಾಗುತ್ತದೆ. ಆತಂಕ-ಭಯಗಳಿಲ್ಲದ ಬದುಕು ಸ್ವಚ್ಛಂದವಾಗಿ ಹಾರುವ ಹಕ್ಕಿಯಿದ್ದಂತೆ. “ಯಾದೇವಿ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತ” ಎಂಬ ಉಕ್ತಿಯನ್ನು ಗೌರವಿಸೊ ನಾಡಿನಲ್ಲಿ ಆ ದೇವಿ ನಿರ್ಭಯದಿಂದ ನಿರಾತಂಕದಿಂದ ಬದುಕುವ ಕ್ಷಣಗಳು ದೊರೆತರೆ ಸಾಕು; ಪದೆ ಪದೆ ನಮಿಸುವ ಅವಶ್ಯಕತೆ ಇಲ್ಲ. ‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ’ ಎಂದು ಪೋಜೆ ಗೀಜೆ ಮಾಡೋ ಯಾವ ಅನಿವಾರ್ಯತೆಯೂ ಇಲ್ಲ. ನಿರಾಳವಾಗಿ ತನ್ನ ಬದುಕನ್ನ ತನ್ನದೆ ರೀತಿಯಾಗಿ ಬದುಕಲು ಅವಕಾಶ ಕೊಡೋಕೆ ನೀವು ಯಾರೂ ಅಲ್ಲವಾದ್ದರಿಂದ, ಅದು ಅವಳ ಹಕ್ಕು; ಅದರಲ್ಲಿ ಯಾವ ರೀತಿಯ ಹಸ್ತಕ್ಷೇಪ ಮಾಡದೆ ಇದ್ದರಾಯಿತು.

‍ಲೇಖಕರು Admin

26 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading