ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾವ ಅಕ್ಷರದಿಂದ ಬರೆದು ಹೇಳಲಿ ನಾನು..

ಬಂಡಾಯದ ಬಿಸಿ ಉಸಿರು ಚೆನ್ನಣ್ಣನನ್ನು ನೆನೆದು…

ಆರ್ ಜಿ ಹಳ್ಳಿ ನಾಗರಾಜ್ 

“ಯಾವ ಅಕ್ಷರದಿಂದ ಬರೆದು ಹೇಳಲಿ ನಾನು
ನಮ್ಮ ಜನರಿಗಾದ ಎದೆಯ ಬ್ಯಾನಿ…”

ನಮ್ಮನ್ನಗಲಿದ ಬಂಡಾಯದ ಹಿರಿಯ ಅಣ್ಣ ಕವಿ ಡಾ. ಚೆನ್ನಣ್ಣ ವಾಲೀಕಾರ ಅವರ “ಪ್ಯಾಂಥರ್ಸ್ ಪದ್ಯಗಳು” ಕವಿತೆಯ ಸಾಲುಗಳಿವು.

* ಜನಪರ ಕಾಳಜಿಯ ಚೆನ್ನಣ್ಣ ದಲಿತ – ಬಂಡಾಯ ಸಾಹಿತ್ಯದ ಗಟ್ಟಿದನಿ. ಬಡತಲ್ಲೇ ಬೆಳೆದು, ತನ್ನ ಜನಾಂಗಕ್ಕಾದ ನೋವು, ಅನ್ಯಾಯಗಳನ್ನು ಕಾವ್ಯ, ನಾಟಕದ ಮೂಲಕ ಅಭಿವ್ಯಕ್ತಿಪಡಿಸಿದ ವಿಶಿಷ್ಟ ಕವಿ. ಅವರ ವ್ಯಕ್ತಿತ್ವವೂ ವಿಶಿಷ್ಟವಾದದ್ದು. ಮಾತು ನೋಟ ಊಟ ನಗು ಅಕ್ಷರ ವಿನ್ಯಾಸವೂ ಬಹು ವಿಶಿಷ್ಟ.

* 1979ರಲ್ಲಿ ಹುಟ್ಟಿದ “ಬಂಡಾಯ ಸಾಹಿತ್ಯ ಸಂಘಟನೆ”ಗೆ ಬುನಾದಿ ಹಾಕಿದ ಪ್ರಮುಖರಲ್ಲಿ ಒಬ್ಬರು. ಕನ್ನಡ ಸಾಹಿತ್ಯ ‌ಪರಿಷತ್ತು ” ದಲಿತ ಸಾಹಿತ್ಯ”ದ ಬಗ್ಗೆ ಗೋಷ್ಠಿ ಏರ್ಪಡಿಸಲು ನಿರಾಕರಿಸಿದಾಗ ರಾಯಚೂರಿನಿಂದ ಚೆನ್ನಣ್ಣ, ಬೋಳುಬಂಡೆಪ್ಪ, ಜಂಬಣ್ಣ ಅವರುಗಳು ಪ್ರತಿಭಟಿಸಿ “ಪ್ರಜಾವಾಣಿ”ಯಲ್ಲಿ ಬರೆದ ವಾಚರವಾಣಿ ಪತ್ರ ಸಾಹಿತ್ಯ ಲೋಕದಲ್ಲಿ ಭಾರಿ ಅಲ್ಲೋಲ ಕಲ್ಲೋಲ ಉಂಟು ಮಾಡಿ ಕನ್ನಡ ಸಾಹಿತ್ಯದಲ್ಲಿ ಸಂಚಲನ ಉಂಟುಮಾಡಿತು. ನವ್ಯ ಸಾಹಿತ್ಯದ ಪ್ರವರ್ತಕ ಕವಿ ಗೋಪಾಲಕೃಷ್ಣ ಅಡಿಗರು ಧರ್ಮಸ್ಥಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ದಿನವೇ ಪರ್ಯಾಯ ಬಂಡಾಯ ಸಮ್ಮೇಳನ ಬೆಂಗಳೂರಿನಲ್ಲಿ ಮೊಳಗಿತು. ಎಲ್ಲ ಪ್ರಗತಿಪರ ಬಂಡಾಯ ದನಿಗಳು ಒಗ್ಗೂಡಿ ಒಂದಾಗಿ ಹೊಸ ಮಾರ್ಗ ಸೃಷ್ಟಿಸಿದ್ದು ಇತಿಹಾಸ.

* ೧೯೮೪ರಲ್ಲಿ ನಾನು ಕಾನೂನು ವಿದ್ಯಾರ್ಥಿ. ಸಾಹಿತ್ಯಾಸಕ್ತ ಮಿತ್ರರು ಒಗ್ಗೂಡಿ “#ಅನ್ವೇಷಣೆ ಸಾಹಿತ್ಯ ಪತ್ರಿಕೆ ಆರಂಭ‌ಮಾಡಲು ಯೋಜನೆ ರೂಪಿಸಿದ್ದಾಗ ರಾಯಚೂರಿನ ಗಲ್ಲಿಯೊಂದರ ಮನೆಯಲ್ಲಿ ನಾನು ಮೊದಲು ಭೇಟಿಯಾಗಿ ಪತ್ರಿಕೆ ಬಗ್ಗೆ ಕನಸು ಹಂಚಿಕೊಂಡಿದ್ದು ಚೆನ್ನಣ್ಣ ಜೊತೆಗೆ! ಅವರು ಕವಗಳಾದ ಶಾಂತರಸ, ಜಂಬಣ್ಣಅಮರಚಿಂತ, ಬೋಳು ಬಂಡೆಪ್ಪ ಅವರ ಮನೆಗಳಿಗೂ ಕರೆದೊಯ್ದು ನನ್ನ ಪರಿಚಯಿಸಿದ್ದರು. ಅವರ ಕಾಲೇಜಿಗೂ ‌ನನ್ನ ಕರೆದೊಯ್ದಿದ್ದರು. ಆಗ ಅದೇ ಊರಲ್ಲಿದ್ದ ಲೇಖಕಿ ಲಲಿತಾನಾಯಕ್ ಅವರನ್ನೂ ಭೇಟಿ ಮಾಡಲು ಕಳುಹಿಸಿದ್ದರು. ಚೆನ್ನಣ್ಣ, ಲಲಿತಾ ನಾಯಕರು ತಮ್ಮ ಕವಿತೆ ಚಂದಾ ನೀಡಿ ಹಾರೈಸಿ ಕಳುಹಿಸಿದ್ದರು.

* ಚೆನ್ನಣ್ಣ ವಾಲೀಕಾರರ ಮಹತ್ವಾಕಾಂಕ್ಷೆಯ ಕೃತಿ #ವ್ಯೋಮಾವ್ಯೋಮ”. ಇದು ಮಹಾಭಂದಸ್ಸಿನ ಸಂಕೀರ್ಣ ಗಪದ್ಯದ ಹಾಡುಗಬ್ಬ.
ಹಲವು ವರ್ಷಗಳ ತಪಸ್ಸಿನ ಬರವಣಿಗೆ ಇದು. ರಾಯಚೂರು, ಗುಲಬರ್ಗಾ, ಬೆಂಗಳೂರಿನಲ್ಲಿ ಈ ಕೃತಿ ರಚನೆ ಆಗಿದೆ. ಅಣ್ಣ ಚೆನ್ನಣ್ಣ ನಿವೃತ್ತಿಯ ನಂತರ ಈ ಕೃತಿ ಬರೆಯಲು ಬೆಂಗಳೂರಿನಲ್ಲಿ ಆಶ್ರಯಿಸಿದ್ದು ಶ್ರೀ ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ
ಮಠ ಹಾಗೂ ಲಕ್ಷ್ಮೀ ಪ್ರಿಂಟರ್ಸ್ ವಾಸ್ತವ್ಯವನ್ನು.

# ೧೦೩೪ ಪುಟಗಳ ೧/೪ ಡೆಮ್ಮಿ ಆಕಾರದ ಈ ಕೃತಿಯನ್ನು ೬ಜನ‌ ಡಿಟಿಪಿಗೆ ಒಳಪಡಿಸಿದ್ದಾರೆ.
ಒಂದನೇ ಪುಟದಿಂದ ೧೦೩೪ ಪುಟಗಳವರೆಗೆ ಹಬ್ಬಿದ ಮಹಾಕಾವ್ಯದ ವಸ್ತು ವೈವಿಧ್ಯಮಯ ಹಾಗೂ ವಿಭಿನ್ನ. ಒಂದರಿಂದ ಕೊನೆಯ ಪುಟದವರೆಗೂ ಕಾಮ, ಫುಲ್ ಸ್ಟಾಪ್, ಪ್ಯಾರಾ ಇಲ್ಲದೆ ಓತಪ್ರೋತವಾಗಿ ಹರಿದಾಡುವ ಕಾವ್ಯದ ಯಾವುದೇ ಪುಟ, ಯಾವುದೇ ಸಾಲಿನಿಂದಲೂ ಓದಬಹುದಾದ ಸರಳ ಕನ್ನಡದ “ಗಪದ್ಯ” ಮಹಾಕಾವ್ಯ ಇದು.
ಆದಿ ಅಂತ್ಯವಿಲ್ಲದ ಕಾವ್ಯವೂ ಹೌದು. ಆಧುನಿಕತೆಯ ಸಾಮಾಜಿಕ ಸಮಸ್ಯೆ, ರಾಜಕಾರಣ, ಸಾಂಸ್ಕೃತಿಕ ವಿಚಾರ, ಮಹಾಭಾರತ, ರಾಮಾಯಣ, ಪುರಾಣ, ಇತಿಹಾಸ, ವಚನ ಸಾಹಿತ್ಯ, ದಾಸ ಸಾಹಿತ್ಯ. ಬುದ್ದ, ಬಸವ, ಗಾಂಧಿ, ಅಂಬೇಡ್ಕರ್, ಮಾರ್ಕ್ಸ್…. ಏನು ಬೇಕು ‌ನಿಮಗೆ? ಚೆನ್ನಣ್ಣನ ಆಲೋಚನಾ ಕ್ರಮವೇ ವೈವಿಧ್ಯಮಯ ಅನ್ನುವುದಕ್ಕೆ ಈ ‌ಕೃತಿಯೇ ಸಾಕ್ಷಿ. ಆದರೆ ಈ ಕೃತಿ ಎಲ್ಲೂ ಚರ್ಚೆಯಾಗದೇ ಇದ್ದದ್ದು ಕನ್ನಡ ಸಾಹಿತ್ಯದ ದೌರ್ಬಾಗ್ಯ.

* ೧೯೮೫ರಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ಕೋಲಾರದಲ್ಲಿ ನಡೆದಾಗ ನನ್ನ ಕ್ಯಾಮೆರಾದಲ್ಲಿ ಚೆನ್ನಣ್ಣ, ಬರಗೂರರ ಛಾಯಾಚಿತ್ರ ಸೆರೆ ಹಿಡಿದಿದ್ದೆ. ಅದನ್ನು ಇಲ್ಲಿ ಪ್ರಕಟಿಸಿರುವೆ.

*ಅಣ್ಣ ಚೆನ್ನಣ್ಣ, ಅವ್ವ, ಅಕ್ಕ, ತಂಗಿ, ತಮ್ಮ ಎಂದು‌ ಪ್ರೀತಿಯಿಂದ ಎಲ್ಲರನ್ನೂ ಸಂಬೋಧಿಸುತ್ತಿದ್ದುದು ಸಾಮಾನ್ಯವಾಗಿತ್ತು. ಚೆನ್ನಣ್ಣ ಭೋಜನ ಪ್ರಿಯ. ಶತಮಾನದ ಹಸಿವಿನ ಸೇಡನ್ನು ತಟ್ಟೆತುಂಬಾ ಹಾಕಿಸಿಕೊಂಡು ತೀರಿಸುತ್ತಿದ್ದರು!. ಭರ್ಜರಿ ಊಟದ ಚೆನ್ನಣ್ಣ ಯಾರಿಗಾದರೂ, “ತಂಗೀ ನಿನ್ನ ಮನೆಗೆ ಊಟ ಬರ್ತೀನಿ” ಅಂದರೆ ಭಯವಾಗುತ್ತಿತ್ತು! ಮಾಡಿದ ಅಷ್ಟು ಅಡುಗೆ ಒಬ್ಬರೇ ಉಂಡರೆ ಗತಿ ಏನು? ಎಂಬ ಚಿಂತೆಯೂ ಇರುತ್ತಿತ್ತು!! (ಬಂಡಾಯದ ನಾವೆಲ್ಲ ಪ್ರೀತಿಯಿಂದ ಅಣ್ಣನನ್ನು ರೇಗಿಸುತ್ತಿದ್ದೆವು… ಅವರು ನಕ್ಕು ತಮ್ಮಾ, ತಂಗಿಗೆ ಹೇಳು: “ಚೆನ್ನಣ್ಣ ಬರ್ತಾನೆ!” ಅಂತ ಭಯ ಹುಟ್ಟಿಸುತ್ತಿದ್ದರು)

* ಅಪಾರ ಮನುಷ್ಯ ಪ್ರೀತಿಯ‌ ಚೆನ್ನಣ್ಣ ವಾಲೀಕಾರರ ಸಾಹಿತ್ಯ ಹೋರಾಟದ ಬಗ್ಗೆ ನಮ್ಮ ಬಂಡಾಯ ಸಾಹಿತ್ಯ ಸಂಘಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ.
ಈ ಮೂಲಕ ಹಿರಿಯ ಅಣ್ಣ ಚೆನ್ನಣ್ಣನಿಗೆ ನನ್ನ ಶ್ರದ್ಧಾಂಜಲಿ.
-ಆರ್ ಜಿ‌ ಹಳ್ಳಿ‌ ನಾಗರಾಜ.

‍ಲೇಖಕರು avadhi

27 November, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading