ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಯಾರಿಗೆ ಬಂತು, ಎಲ್ಲಿಗೆ ಬಂತು ೪೭ರ ಸ್ವಾತಂತ್ರ್ಯ?’ – ಹನಮಂತ ಹಾಲಿಗೇರಿ

ನನ್ನೂರಿನ ಕೇರಿಗೆ ಬಾಬಾ ದಕ್ಕೇ ಇಲ್ಲ

ಹನಮಂತ ಹಾಲಿಗೇರಿ

ಬಾಬಾ ಪಕ್ಕದ ಮಹಾರಾಷ್ಟ್ರದವರೇ ಆಗಿದ್ದರೂ ಬಾಗಲಕೋಟ, ಬೀಜಾಪುರ, ಗದಗ, ಧಾರವಾಡ ಈ ಉತ್ತರ ಕರ್ನಾಟಕದ ನನ್ನ ನೆಲವನ್ನು ಹಾರಿಕೊಂಡು ದಕ್ಷಿಣದ ಕಡೆ ಹೋದರೇನೋ ಎನಿಸುತ್ತೆ. ಅಥವಾ ನನ್ನ ಈ ನೆಲ ಬಾಬಾ ಅವರ ಚಿಂತನೆಯ ಬೀಜಗಳಿಗೆ ಜೀವ ಕೊಡಲಾರದಷ್ಟು ಬರಗೆಟ್ಟಿತ್ತೋ?
ಮೊನ್ನೆ ನಾನು ನಮ್ಮೂರಲ್ಲಿ ಹೊಲಗೇರಿ ರಾಜಕುಮಾರ್‍ ನಾಟಕವಾಡಿಸುವ ದಿನ ನನ್ನೂರಿನ ಕೇರಿಗೆ ಹೋಗಿದ್ದೆ. ಈಗಲೂ ಅಲ್ಲಿ ಎಲ್ಲವೂ ಹಾಗೇಯೇ, ಬಾಬಾ ಬಂದಿದ್ದು ಗೊತ್ತೆ ಆಗಿಲ್ಲ ಈ ಜನಕ್ಕೆ. ಗೊತ್ತಾಗಲೂ ಇನ್ನು ಎಷ್ಟು ಶತಮಾನಗಳು ಬೇಕೋ?·
ನನ್ನೂರಿನ ಕೇರಿಯಲ್ಲಿ ಮೀಸಲಾತಿಯನ್ನು ಬಳಸಿಕೊಂಡು ಒಬ್ಬೆ ಒಬ್ಬ/ಳು ನೌಕರಸ್ತನಾಗಿಲ್ಲ. ಸೂಳೆಗಾರಿಕೆ ಇನ್ನೂ ಜೀವಂತವಿದೆ. ರೈತರ ಮನೆಯಲ್ಲಿ ದನ ಸತ್ತರೆ ಹೊರಲು ಇವರೇ ಆಗಬೇಕು. ಜನ ಸತ್ತರೆ ಇವರ ಖನಿ ನುಡಿಯಬೇಕು. ಎದುರು ಬಂದಾಗ ಡೊಗ್ಗಿ ಸಲಾಮು ಹೊಡೆಯಬೇಕು. ಸಣ್ಣ ಹುಡುಗರಿಗೆ “ಸಣ್ಣ ದನಿ”ಎಂದು ಗೌರವ ಸೂಚಕ ಪದ ಬಳಸಲೇಬೇಕು. ದಾಹವಾದರೆ ಬೊಗಸೆಯೊಡ್ಡಬೇಕು. ಹಸಿವಾದರೆ ಪ್ಲೇಟು ಜೊತೆಗಿರಬೇಕು. ಕೂಲಿಗೀಲಿ ಇವರದೇ ಮಾಮೂಲು, ಎಮ್ಮೆ ಬೋಳಿಸಲು ಇವರ ಕತ್ತಿಯೇ ಆಗಬೇಕು. ಇತ್ಯಾದಿ ಇತ್ಯಾದಿ.. ಎಲ್ಲವೂ ಮೊದಲಿನಂಗೆ….

ಒಂದಿಷ್ಟು ಅರ್ಧಂಬರ್ಧ ಅಕ್ಷರ ಎದೆಗಿಳಿಸಿಕೊಂಡ ಹುಡುಗರು ಕಾಣಸಿಗುತ್ತಾರಾದರೂ ಅವರೋ ಯಾಕಾದರೂ ಈ ಅಕ್ಷರ ಕಲಿತೇವೆಯೋ ಎನ್ನುವಂತೆ ಮುಖ ತಪ್ಪಿಸಿಕೊಂಡು ಓಡಿ ಹೋಗುತ್ತಾರೆ. ಏನೇನೂ ಮಾಡಲಾಗದ ಕೊರಗು…
ಪಾಪ ಬದಲಾವಣೆ ಎಂದರೆ ಮೇಲ್ಚಲನೆ ಎಂದೆ ಈ ನನ್ನ ಜನ ಅಂದುಕೊಂಡಂತಿದೆ.ಯಾವ್ಯಾದ್ಯಾವದೋ ಮಠದ ಭಕ್ತರಾಗಿರುವ ಕೆಲವರು ವಿಭೂತಿ, ರುದ್ರಾಕ್ಷಿಗಳಲ್ಲಿ ಕಳೆದುಹೋಗಿದ್ದಾರೆ. ದನದ ಮಾಂಸ ಬಿಟ್ಟಿದ್ದಾರೆ. ಆದರೂ ಅವರನ್ನು ಮುಟ್ಟಿಸಿಕೊಳ್ಳಲು ಯಾರೂ ತಯಾರಿಲ್ಲ. ರಾಜಕೀಯ ಕಾರಣಗಳಿಗೆ ಅಕಸ್ಮಾತ್‍ ಮುಟ್ಟಿಸಿಕೊಂಡರೆ ಮನೆಗೆ ಹೋಗಿ ಸ್ನಾನ ಮಾಡಿ ಶುಚಿಯಾಗುವುದು ಕಡ್ಡಾಯ.. ಹೇಳಲು ಬಹಳಷ್ಟಿದೆ.
ಅಂದಹಾಗೆ ನನ್ನೂರಲ್ಲಿ ಹೊಲಗೇರಿ ರಾಜಕುಮಾರ್‍ ನಾಟಕ ಭರ್ಜರಿ ಯಶಸ್ವಿಯಾಯಿತು. ಆದರೆ ಕೇರಿ ಜನ ಒಬ್ಬರೂ ಬಂದಿರಲಿಲ್ಲ. ಬೀಜ ಮತ್ತೆ ಮೊಳಕೆ ಒಡೆಯಲೇ ಇಲ್ಲ.
ನನ್ನ ನೆಲದ ಸಾಹಿತಿ, ಬರಹಗಾರ,ಕವಿವರ್ಯರಿಗೆ ಇದೆಲ್ಲವೂ ವಸ್ತು ಅಲ್ಲವೇ ಅಲ್ಲ. ಹನುಮಾನ್‍ ಚಾಲಿಸು ಬರೆದವರೆ ಅಲ್ಲಿ ಶ್ರೇಷ್ಟ ಸಾಹಿತಿಗಳು!
 

‍ಲೇಖಕರು G

15 April, 2014

2 Comments

  1. Aravind

    You are right, Hanumanth. I appreciate this write-up. We all, from Keri as well as Ooru, need to wake up.

  2. ಹನುಮಂತ ಹಾಲಿಗೇರಿ

    ಥ‍್ಯಾಂಕ್ಸ್ ಅರವಿಂದ ಸರ್‍…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading