ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಯಾನ’ ಭೈರಪ್ಪನವರ ಹಿಂದಿನ ಕೃತಿಗಳ ಜೊತೆಗೆ ಸಾವಯವ ಸಂಬಂಧವನ್ನೂ ಇಟ್ಟುಕೊಂಡಿಲ್ಲ – ಎನ್ ಎಸ್ ಶ್ರೀಧರ ಮೂರ್ತಿ

ಯಾನದ ಪಾತ್ರಗಳ ಅಭಿಯಾನ

-ಎನ್ ಎಸ್ ಶ್ರೀಧರ ಮೂರ್ತಿ

ಎಸ್.ಎಲ್.ಭೈರಪ್ಪನವರ ಹೊಸ ಕಾದಂಬರಿ ಯಾನ ವಸ್ತುವಿನ ದೃಷ್ಟಿಯಿಂದ ವೈಜ್ಞಾನಿಕ ಕಾದಂಬರಿ. ಅದರಲ್ಲಿನ ವಿವರಗಳೂ ಕೂಡ ಅಥೆಂಟಿಕ್ ಎನ್ನಿಸಬಲ್ಲ ವೈಜ್ಞಾನಿಕ ಮಾಹಿತಿಯಿಂದ ಕೂಡಿದೆ. ಆದರೆ ರಾಚನಿಕ ಬಂಧ ಮಾನವೀಯ ಮೌಲ್ಯಗಳ ವಿವೇಚನೆಯಲ್ಲಿಯೇ ಬೆಳೆಯುತ್ತದೆ. ಇಲ್ಲಿನ ಹುಡುಕಾಟ ತಾತ್ವಿಕ ನೆಲೆಗಟ್ಟಿನ ದೃಷ್ಟಿಯದು. ಭೈರಪ್ಪನವರ ಹಿಂದಿನ ಕಾದಂಬರಿಗಳಾದ ಪರ್ವ ಸಾಕ್ಷಿಗಳನ್ನು ನೆನಪಿಸುವಂತೆ ಇಲ್ಲಿ ಕಾಮಕುರಿತ ವಿಪುಲ ಚರ್ಚೆಗಳಿವೆ. ಅವು ಕೆಲಮಟ್ಟಿಗೆ ಸ್ತ್ರೀ ಕೇಂದ್ರಿತವೂ ಆಗಿದೆ. ಸೂರ್ಯನ ಗುರುತ್ವದ ಆಚೆಗೆ ಹೋಗಿ ಹತ್ತಿರದ ಪ್ರಾಕ್ಸಿಮಾ ಸೆಂಟಾರಿಸ್ ನಕ್ಷತ್ರ ವಲಯಕ್ಕೆ ಹೋಗಿ ಅಲ್ಲಿ ಯಾವುದಾದರೂ ಗ್ರಹವಿದೆಯೇ ಎಂದು ಅನ್ವೇಷಿಸುವ ಯೋಜನೆಯಲ್ಲಿ ಹೊರಟ ಗಂಡು-ಹೆಣ್ಣುಗಳ ಜೋಡಿಯ ಕಥೆ ಇಲ್ಲಿದೆ. ಈ ಸಂಶೋಧನೆ ಗುರಿಯನ್ನು ತಲುಪಲು ಒಂದು ಸಾವಿರ ತಲೆಮಾರುಗಳು ಬೇಕು ಎನ್ನುವುದು ಯೋಜನೆಯ ವಿಶಾಲತೆಯನ್ನು ಹೇಳಿದರೂ ಕಥೆ ಅಷ್ಟು ದೀರ್ಘವಾಗಿಲ್ಲ. ಇಲ್ಲಿರುವುದು ಎರಡನೇ ಪೀಳಿಗೆ ವಿವಾಹಕ್ಕೆ ಸಿದ್ದರಾದಾಗ ತಾವು ಅಕ್ಕ-ತಮ್ಮಂದಿರೇ ಎಂಬ ಪ್ರಶ್ನೆ ಹುಟ್ಟಿದ್ದರಿಂದ ಮೊದಲ ಜೋಡಿಯ ಭಾವನಾತ್ಮಕ ಸಂಘರ್ಷಗಳ ಪುಟಗಳು ಅನಾವರಣಗೊಳ್ಳುತ್ತವೆ. ಅಷ್ಟಕ್ಕೇ ಕಥೆಯ ವ್ಯಾಪ್ತಿ ಸೀಮಿತ.
ಹೀಗಾಗಿ ಇದು ಭೂಮಿಯಿಂದ ಹೊರಗೆ ನಡೆಯುವ ಕಥೆ ಎಂಬ ರಾಚನಿಕ ನೆಲೆ ಇದ್ದರೂ ಅಂತರಿಕವಾಗಿ ಇದು ಭೂಮಿಯ ಅದರಲ್ಲಿಯೂ ಭಾರತೀಯ ಮೌಲ್ಯ ವಿವೇಚನೆಗೆ ಒತ್ತು ನೀಡಿದ್ದು. ಈ ಮಟ್ಟಿಗೆ ಕೃತಿಗೆ ಬಹುಮುಖಿ ನೆಲೆಗಳು ಇಲ್ಲವಾದರೂ ಸೀಮಿತ ಚೌಕಟ್ಟಿನಲ್ಲಿ ಖಚಿತತೆ ಇದೆ. ಹೀಗಾಗಿ ಕೃತಿ ಚಿಂತನಾತ್ಮಕ ಆವರಣವನ್ನು ತನ್ನದಾಗಿಸಿ ಕೊಳ್ಳ ಬಲ್ಲದಾಗಿದೆ. ಕೃತಿಯಲ್ಲಿನ ವೈಜ್ಞಾನಿಕ ವಿವರಗಳು ಪ್ರಾಥಮಿಕ ಹಂತದ್ದಾಗಿರುವುದರ ಜೊತೆಗೆ ಸಂಶೋಧಾನಾತ್ಮಕ ಪ್ರಯತ್ನವಿರಲಿ, ರೋಚಕತೆ ಕೂಡ ಇಲ್ಲದಿರುವುದರಿಂದ ಇದನ್ನು ವೈಜ್ಞಾನಿಕ ಕಾದಂಬರಿ ಎನ್ನುವುದು ಕಷ್ಟ. ಇನ್ನಷ್ಟು ವಿಸ್ತರಿಸಿ ನೋಡಿದರೆ ಇಲ್ಲಿನ ಗಗನ ಯಾತ್ರೆಯನ್ನು ರೂಪಕವಾಗಿ ನೋಡುವುದರಿಂದಲೇ ಹೆಚ್ಚಿನ ಅರ್ಥಗ್ರಹಿಕೆಗಳು ಸಾಧ್ಯವಾಗ ಬಹುದಾಗಿದ್ದು ದಾಂಪತ್ಯದ ಸ್ಥಾಯಿಭಾವದಲ್ಲಿಯೇ ಇಲ್ಲಿನ ವಿವರಗಳನ್ನು ಗ್ರಹಿಸ ಬಹುದಾಗಿದೆ.
ಯಾನ ಕಾದಂಬರಿ ಪ್ರಧಾನ ಪಾತ್ರ ಉತ್ತರಾ, ವಾಯು ಪಡೆಯಲ್ಲಿ ಪೈಲೆಟ್ ಆಗಿದ್ದವಳು. ಸಾಹಸದ ಬದುಕಿಗೆ ಸದಾ ಸಿದ್ದಳಾಗಿದ್ದವಳು. ಅವಳನ್ನು ವೃತ್ತಿ ಜೀವನದಲ್ಲಿ ವಿಚಿತ್ರ ಸವಾಲೊಂದು ಕಾಡುತ್ತದೆ ತಂತ್ರ ಕೌಶಲ್ಯವನ್ನು ಪರಿಶೀಲಿಸಲು ಅಂತರಿಕ್ಷೆಕ್ಕೆ ಹಾರಿ ಬಿಡುವ ನೌಕೆಯಲ್ಲಿ ಮೈಥುನವನ್ನು ಮಾಡಲು ಹೇಳಲಾಗುತ್ತದೆ ಇದಕ್ಕೆ ಅವಳ ಪಾರಂಪರಿಕ ಸಂಸ್ಕಾರಗಳು ಅಡ್ಡಿಯಾದರೂ ಕಲಿಯುವಿಕೆಯ ಹಂಬಲ ಇದನ್ನೂ ಸಹಿಸಿ ಕೊಳ್ಳುವಂತೆ ಮಾಡುತ್ತದೆ. ಹೀಗೆ ಅವಳಿಗೆ ಜೊತೆಯಾಗುವ ಯಾದವ್ನನ್ನು ಅವಳು ದೇವಸ್ಥಾನದಲ್ಲಿ ವಿವಾಹವಾಗುತ್ತಾಳೆ. ಆದರೆ ಮುಂದಿನ ಹಾದಿ ಬದಲಾಗುತ್ತದೆ. ಪ್ರಾಕ್ಸಿಮಾ ಸೆಂಟಾರಿಸ್ ನಕ್ಷತ್ರ ವಲಯಕ್ಕೆ ಹೊರಟ ಯಾನದಲ್ಲಿ ಅವಳಿಗೆ ಜೊತೆಯಾಗುವವನು ಯಾದವ್ ಅಲ್ಲ ಬದಲಾಗಿ ಸುದರ್ಶನ್. ಈಗ ಅವಳಲ್ಲಿ ಭಾವನಾತ್ಮಕ ಕಲಹವೇ ನಡೆದು ಹೋಗುತ್ತದೆ. ದೀರ್ಘ ಯಾನದಲ್ಲಿ ಜೊತೆಯಾದರೂ ಯಾದವನನ್ನು ಮರೆತು ಸುದರ್ಶನ್ ಜೊತೆ ದೇಹವನ್ನು ಹಂಚಿ ಕೊಳ್ಳಲು ಅವಳಿಗೆ ಇಷ್ಟವಾಗುವುದಿಲ್ಲ. ನನಗೆ ಅಡ್ಡ ಬರುತ್ತಿರುವುದು ನಾನಾಗಲೇ ಕನ್ಯತ್ವವನ್ನು ಕಳೆದುಕೊಂಡಿದ್ದೇನೆಂಬ ನೈತಿಕ, ಧಾರ್ಮಿಕ ಪಾಪಪ್ರಜ್ಞೆಯಲ್ಲ. ನಾನು ಅಜ್ಜಿಯ ಕಾಲದವಳಲ್ಲ. ಆದರೆ ಯಾದವನನ್ನು ದೂರ ಮಾಡದೆ ಸುದರ್ಶನನ್ನು ಹತ್ತಿರವಾಗಲು ಮನಸ್ಸಿಗೆ ಸಾಧ್ಯವಾಗುತ್ತಿಲ್ಲ(ಪುಟ 138). ಹೀಗಾಗಿ ಬಲವಂತವಾಗಿ ಆಕ್ರಮಿಸಲು ಪ್ರಯತ್ನಿಸಿದ ಸುದರ್ಶನನ್ನು ದೂರ ತಳ್ಳುತ್ತಾಳೆ. ಆದರೆ ಯಾದವನ ಹುಸಿತನ ಮುಂದೆ ಅವಳ ಗಮನಕ್ಕೆ ಬಂದು ನಂತರ ನೈಸರ್ಗಿಕ ಭಾವಗಳು ಕೆರಳಿ ತಾಯಿಯಾಗಲು ಬಯಸುತ್ತಾಳೆ.

ಆದರೆ ಸುದರ್ಶನ್ ಈಗ ದೂರವಾಗಿದ್ದಾನೆ. ಕೃತಕವಾಗಿ ವೀರ್ಯಾಣು ಪಡೆದು ಗರ್ಭ ಧರಿಸಿದವಳ ಬಾಣಂತನ ಮಾಡುತ್ತಾನೆ. ಮಕ್ಕಳನ್ನು ಬೆಳೆಸಲು ನೆರವಾಗುತ್ತಾನೆ. ಆದರೆ ಕಾಮದಿಂದ ದೂರವಾಗುತ್ತಾನೆ. ಮುಂದೆ ಹೀಗೆ ಬೆಳೆದ ಇಬ್ಬರು ಮಕ್ಕಳು ವಿವಾಹವಾಗ ಬೇಕಾದಾಗ ಮದುವೆಗೆ ಮೊದಲು ಲೈಂಗಿಕ ಸಂಪರ್ಕ ಕೂಡದು ಎನ್ನುವ ವಿಧಿಯನ್ನು ಅವಳು ವಿಧಿಸುತ್ತಾಳೆ. ಇದು ಸ್ಥೂಲವಾಗಿ ಪಾತ್ರದ ಬೆಳವಣಿಗೆ. ಇಲ್ಲಿ ನೈತಿಕ ಪ್ರಶ್ನೆ ಇರುವುದು ಮಕ್ಕಳ ವಿವಾಹದ ಕುರಿತ ನಿರ್ಧಾರದಲ್ಲಿ ಖಚಿತವಾಗಿದೆ. ಆದರೆ ಅದರಾಚೆಗಿನ ಸಂಗತಿಗಳೂ ಇರುವುದು ವಿವರಗಳ ಮೂಲಕ ಬಿಂಬಿತವಾಗುತ್ತದೆ. ಇಲ್ಲಿರುವುದು ಮೈಮನಸುಗಳ ತಾಕಲಾಟದ ಪ್ರಶ್ನೆ. ಹೆಣ್ಣು ಗಂಡಿಗೆ ತನ್ನನ್ನು ಎಷ್ಟರ ಮಟ್ಟಿಗೆ ಕೊಟ್ಟು ಕೊಳ್ಳ ಬಹುದು ಎನ್ನುವ ಪ್ರಶ್ನೆ. ಕಾಮಕ್ಕೂ ಮತ್ತು ಸೃಷ್ಟಿಗೂ ಇರುವ ಸಮೀಕರಣ ಕೃತಿಯ ಬೇರೆ ಬೇರೆ ನೆಲೆಗಳಲ್ಲಿ ಚರ್ಚಿತವಾಗಿದೆ. ಆದರೆ ಅಲ್ಲಿನ ಸಂಭ್ರಮದ ಕುರಿತ ವಿವರಗಳು ಬಂದರೂ ಅದು ಮುಖ್ಯವಾಗದೆ ನೈತಿಕ ತಳಹದಿ ಆಳವಾಗಿ ಗುರುತಿಸಲ್ಪಟ್ಟಿದೆ. ತಾಯಿಗೆ ಹೆಣ್ಣು ಮಗಳಂತೆ ಗಂಡು ಮಗು ಅಯ್ಯೋ ಅನ್ನಲ್ಲ(ಪುಟ 203) ಎಂದು ಕೊಳ್ಳುವ ಅವಳಿಗೆ ಒಂದು ಕಾಲದಲ್ಲಿ ಸ್ವತಂತ್ರದ್ದು ಎನ್ನಿಸಿದ ಪ್ರಶ್ನೆ ಪರಕೀಯತೆಯ ಗಡಿಗೆ ತಲುಪಿದಾಗ ಅಸ್ಥಿತ್ವದ ಪ್ರಶ್ನೆಯಾಗುತ್ತದೆ ಅಲ್ಲಿನ ನಿರಾಕರಣವನ್ನೂ ಸಹಜವೆಂದು ಒಪ್ಪಿಕೊಳ್ಳುವ ಮನಸ್ಥಿತಿಯ ಅವಳ ವ್ಯಕ್ತಿತ್ವಕ್ಕೆ ಗಗನ ಯಾತ್ರೆ ರೂಪಕವಾಗುತ್ತದೆ. ಆದರೆ ಮಕ್ಕಳನ್ನು ಬೆಳೆಸುವಾಗ ಸುದರ್ಶನ್ ಕುರಿತು ಅವಳಿಗೆ ಉಂಟಾದ ಭಾವನೆಗಳೇನು ಕಾಮರಹಿತ ಸಹಚರ್ಯೆ ಅವಳಲ್ಲಿ ಆತ್ಮೀಯತೆಯನ್ನು ಹುಟ್ಟಿಸಲಿಲ್ಲವೆ? ಇಂತಹ ಪ್ರಶ್ನೆಗಳಿಗೆ ಕಾದಂಬರಿಯಲ್ಲಿ ಉತ್ತರವಿಲ್ಲ.
ಹೀಗಾಗಿ ದೊರಕಬಹುದಾದ ಸ್ತ್ರೀವಾದಿ ನೆಲೆಗಳು ತಪ್ಪಿ ಹೋಗಿವೆ. ಹೀಗಿದ್ದರೂ ಪಾತ್ರದ ಗಟ್ಟಿತನವನ್ನು ಅಲ್ಲಗಳೆಯುವಂತಿಲ್ಲ. ಪೈಲೆಟ್ ಎನ್ನಿಸಿಕೊಂಡ ಉತ್ತರೆಯ ಧೀಮಂತ ವ್ಯಕ್ತಿತ್ವದ ಬದಲು ಚಿತ್ರ ತಾರೆಯಾಗ ಬಲ್ಲ ಆಕೆಯ ಸೌಂದರ್ಯ, ಅಪ್ಪಟ ಗೃಹಿಣಿಯಂತೆ ಅಡುಗೆ ಮಾಡಬಲ್ಲ ಸಮರ್ಪಣಾ ಭಾವ, ಕೃಷಿ ಕೆಲಸಗಳಲ್ಲಿ ತೊಡಗುವ ತನ್ಮಯತೆ ಹೀಗೆ ಸಾಂಪ್ರದಾಯಿಕ ಹೆಣ್ಣಿನ ಮಾದರಿಗಳಲ್ಲಿ ಅವಳನ್ನು ಸೇರಿಸುವ ವಿವರಗಳಿಗೆ ಇಲ್ಲಿ ಪ್ರಾಮುಖ್ಯತೆ ದೊರಕಿದೆ. ಅವಳನ್ನು ಇಂತಹ ದೀರ್ಘ ಯಾನಕ್ಕೆ ಆಯ್ಕೆ ಮಾಡುವಾಗ ಧೈರ್ಯ, ಶಕ್ತಿ, ಸಾಹಸಗಳಂತೆ ಅವಳ ಶರೀರ ಪ್ರಕೃತಿ, ಗರ್ಭಶಕ್ತಿಯನ್ನು ಗಣನೆಗೆ ತೆಗೆದು ಕೊಳ್ಳಲಾಗುತ್ತದೆ(ಪುಟ 71) ಎಂಬ ಮಾಹಿತಿಯೇ ಪಾತ್ರದ ಸುಸುಂಬದ್ದ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ. ಹೆಣ್ಣನ್ನು ಲೈಂಗಿಕ ವಿವರಗಳ ಆಚೆಗೆ ನೋಡಲು ಸಾಧ್ಯವಿಲ್ಲವೆ? ಎನ್ನುವುದು ಇಲ್ಲಿ ಬರುವ ಬಹುಮುಖ್ಯ ಪ್ರಶ್ನೆ. ಉತ್ತರಾ ಕುರಿತ ಪತ್ರಿಕೆಗಳಲ್ಲಿ ಬರುವ ವರದಿಗಳ ವಿವರ ಏಕಮುಖವಾಗಿದ್ದು ತಾತ್ವಿಕ ಕುಸಿಯುವಂತೆ ಮಾಡುತ್ತದೆ. ಮಕ್ಕಳನ್ನು ಹುಟ್ಟಿಸುವುದು ಅವುಗಳನ್ನು ಬೆಳೆಸುವುದು ಇಷ್ಟೇ ಹೆಣ್ಣಿನ ಕರ್ತವ್ಯವೇ. ಅದು ಭೂಮಿಯ ಮೇಲಾದರೂ ಆಕಾಶದಲ್ಲಿಯಾದರೂ ಬದಲಾಗದ ಸನ್ನಿವೇಶವೆ? ಎನ್ನುವ ಜಿಜ್ಞಾಸೆ ಇಲ್ಲಿ ಹುಟ್ಟಿ ಕೊಳ್ಳುತ್ತದೆ. ಗಗನ ಯಾನದಲ್ಲಿ ಬಾಯಿಬಿಟ್ಟು ಪರಸ್ಪರ ನಿಷ್ಕಷರ್ೆ ಮಾಡದ ಕೃಷಿ, ಆಹಾರವನ್ನು ಪಾಕ ಮಾಡುವ ಅಡುಗೆಗಲೇ ನನ್ನ ಜೀವನವಾಗಿತ್ತು. ಅವನ ಹೇಳಿಕೊಡಲು ಉತ್ಸುಕನಾಗಿದ್ದ ವಿಜ್ಞಾನ ತಂತ್ರಜ್ಞಾನ ಯಂತ್ರಗಾರದ ಮೇಲ್ವಿಚಾರಣೆಗಳು ನನ್ನ ಮನೋಬುದ್ಧಿಗಳ ಶಕ್ತಿಗಳ ಹೊರಗಿನದೆಂದು ನಾನೇ ಅರ್ಥ ಮಾಡಿಕೊಂಡಿದ್ದೆ(ಪುಟ 196) ಎಂಬ ವಿವರಗಳು ಕಾದಂಬರಿಯಲ್ಲಿವೆ. ಹೀಗೆ ಕನಿಷ್ಟ ಬೌದ್ಧಿಕ ಸಂವಾದಕ್ಕೂ ಅರ್ಹಳಲ್ಲದ ಉತ್ತರೆಯನ್ನು ಗಗನ ಯಾತ್ರೆಗೆ ಆಯ್ಕೆ ಮಾಡಿದ್ದೇ ಈ ಹಿನ್ನೆಲೆಯಲ್ಲಿ ಪ್ರಶ್ನಾರ್ಹವೆನ್ನಿಸುತ್ತದೆ. ಆದರೆ ಇದೇ ಕಾದಂಬರಿಯಲ್ಲಿಯೇ ಬೇರೆ ನೆಲೆಯಲ್ಲಿ ಉತ್ತರೆಗೆ ಖಚಿತವಾದ ನಿಲುವುಗಳಿರುವ ಪ್ರಸ್ತಾಪವಿದೆ. ಕರ್ತವ್ಯ, ಭ್ರಷ್ಟತೆ ಅನ್ನುವ ಮಾತುಗಳ ಅರ್ಥವನ್ನೇ ನಾನು ಯೋಚಿಸುತ್ತಿದ್ದೇನೆ, ಅದನ್ನು ನಿನಗಾಗಲೀ, ಭೂಕೇಂದ್ರಕ್ಕಾಗಲಿ ವಿವರಿಸುವುದು ನನ್ನ ಕರ್ತವ್ಯವಲ್ಲ (ಪುಟ 124) ಎಂದು ಹೇಳಬಲ್ಲ ಗಟ್ಟಿತನ ಅವಳಿಗಿದೆ. ಅವಳ ಈ ವೈಚಾರಿಕೆ ನೆಲೆಗೆ ಒತ್ತು ಸಿಕ್ಕ ಬೇಕಿತ್ತು. ಆಗ ಕಾದಂಬರಿಗೆ ನಿಜವಾದ ಗಟ್ಟಿತನ ಪ್ರಾಪ್ತವಾಗ ಬಹುದಾಗಿತ್ತು.
ಈ ಕಾದಂಬರಿಯ ಇನ್ನೊಂದು ಪ್ರಧಾನ ಪಾತ್ರ ಡಾ.ಸುದರ್ಶನ್ನದು. ಇದು ಸ್ವಭಾವದ ನೆಲೆಯಲ್ಲಿಯೇ ಉತ್ತರಳಷ್ಟು ಗಟ್ಟಿ ಪಾತ್ರವಲ್ಲ. ಅವನ ವೈಜ್ಞಾನಿಕ ಪರಿಣತಿ ಬಗ್ಗೆ ಕಾದಂಬರಿಯ ಮೇಲ್ಪದರದಲ್ಲಿ ಮೆಚ್ಚಿಗೆಯ ಮಾತುಗಳಿದ್ದರೂ ಅಂತರಿಕ ವಿನ್ಯಾಸದಲ್ಲಿ ಅವುಗಳಿಗೆ ಮಹತ್ವವಿಲ್ಲ. ಗಗನ ಯಾನಕ್ಕೆ ಮೊದಲೇ ಅವನಿಗೆ ಇಬ್ಬರು ಹೆಣ್ಣುಗಳ ಜೊತೆಗೆ ದೈಹಿಕ ಸಂಬಂಧವಿದೆ. ಅವರಿಬ್ಬರೂ ವಿದೇಶಿಯರು. ಅವರಲ್ಲಿ ಲೀಸಾ ಪೆಸ್ಟ್ಡಾಕ್ ಸಂಶೋಧನೆಯ ಕಾದಲ್ಲಿ ಬಾಡಿಗೆ ಕಡಿಮೆ ಮಾಡಿಕೊಳ್ಳುವ ದೃಷ್ಟಿಯಿಂದ ಒಂದೇ ಕೋಣೆಯನ್ನು ಪಡೆದು ನಂತರ ಶಾರೀರಿಕವಾಗಿ ಹತ್ತಿರವಾದವಳು. ಒಂದು ರಾತ್ರಿ ಊಟವಾದ ಮೇಲೆ ಸೋಫಾದ ಮೇಲೆ ಕುಳಿತು ಮಾತನಾಡುತ್ತಾ ಆ ವಿಷಯವಾಗಿ ಯಾರೂ ಮಾತನಾಡದೆಒಪ್ಪಿಗೆಯನ್ನೂ ಕೇಳದೆ ಒಂದಾಗ ತೊಡಗಿ ಸೋಫಾ ಅನುಕೂಲಕರವಾಗಿಲ್ಲ. ಹಾಸಿಗೆಗೆ ಹೋಗೋಣ ಎಂದು ಅವಳೇ ಹೇಳಿ.. ನನಗೆ ಮೊದಲ ಅನುಭವ. ಸರಿಯಾಗಿ ಗೊತ್ತಿಲ್ಲ, ಅವಳು ಅನುಭವಿ, ಮಾರ್ಗದರ್ಶನ ಮಾಡಿದಳು(ಪುಟ 96) ಹೀಗೆ ಶಾರೀರಿಕ ಭಾಷೆಗೆ ಅವನು ತೆರೆದು ಕೊಂಡವನು. ಅಂಟಾರ್ಟಿಕಾ ಪ್ರವಾಸದಲ್ಲಿ ತನ್ನ ಕೋಣೆಯ ಸಂಖ್ಯೆಯನ್ನು ಹೇಳಿ ಕರೆಸಿ ಕೊಂಡ ಲೀಸಾ ಕಾಂಡೋಮ್ ತಂದಿದ್ದೀಯಾ ಎಂದು ನೇರವಾಗಿ ಕೇಳಬಲ್ಲ ಹೆಣ್ಣು. ಈ ಎರಡೂ ಸಂಬಂಧಗಳ ವಿವರದಲ್ಲಿ ಭಾವನೆಗಳಿಗೆ ಮಹತ್ವವೇ ಇಲ್ಲ. ಕಾಮವೇ ಸಂಪೂರ್ಣ ವಿಜೃಂಭಿಸಿದೆ. ಅದು ಸುದರ್ಶನನ ಸ್ವಭಾವವೋ ಅಥವಾ ಸನ್ನಿವೇಶದ ಅನಿವಾರ್ಯತೆಯೋ ಎನ್ನುವುದಕ್ಕೆ ಕಾದಂಬರಿಯಲ್ಲಿ ಉತ್ತರವಿಲ್ಲ.
ಇಂತಹ ಹಿನ್ನೆಲೆಯ ಇವನ ಗುಟ್ಟುಗಳನ್ನು ವಿವಾಹಕ್ಕೆ ಎಂದು ಅವನ ಅಕ್ಕ ನಿರ್ಧರಿಸಿದ ಹೆಣ್ಣು ಜಾಹ್ನವಿ ಕುಡಿತದ ನೆಪದಲ್ಲಿ ಸಂಪೂರ್ಣ ಪತ್ತೆ ಹಚ್ಚಿ ನಿರಾಕರಿಸುತ್ತಾಳೆ. ಈ ಎಲ್ಲಾ ವಿವರಗಳಲ್ಲಿಯೂ ಸುದರ್ಶನ್ ವಿಚಾರವಿರುವ ಕನಿಷ್ಟ ಭಾವನಾತ್ಮಕತೆಯಾದರೂ ಇರುವ ವ್ಯಕ್ತಿಯಾಗಿ ಕಾಣುವುದಿಲ್ಲ. ಇದಕ್ಕೆ ಸರಿಯಾಗಿ ಅವನಿಗೆ ಉತ್ತರೆಯ ಜೊತೆಗೆ ದೀರ್ಘ ಯಾನದ ಏಕಾಂತ ದೊರಕುತ್ತದೆ. ಸಂಬಂಧ ರೂಪುಗೊಳ್ಳುವ ಮೊದಲೇ ಸಂಪರ್ಕಕ್ಕೆ ಕಾತರಿಸುತ್ತಾನೆ. ಅವಳು ಸ್ಪಷ್ಟವಾಗಿ ನಾವು ಸಹಕಾರ್ಯಕರ್ತರು. ವಿವಾಹವಾದ ದಂಪತಿಗಳಲ್ಲ ಎಂದು ಹೇಳಿದ್ದರೂ ಆಕ್ರಮಿಸಲು ಹೋಗುತ್ತಾನೆ. ಅವಳು ಕರಾಟೆ ಪೆಟ್ಟನ್ನು ಕೊಟ್ಟು ತನ್ನ ರಕ್ಷಣೆ ಮಾಡಿಕೊಂಡಾಗ ನಾಚಿಕೆಯ ಭಾವ ಆವರಿಸುತ್ತದೆ. ಮಹತ್ವದ ಸಂಗತಿ ಎಂದರೆ ಇಷ್ಟಾದ ನಂತರವೂ ಅವನು ಶಾರೀರಿಕ ಭಾವದಿಂದ ಅವಳನ್ನು ಭಿನ್ನವಾಗಿ ನೋಡುವುದೇ ಇಲ್ಲ. ಮುಂದೆ ಅವಳನ್ನು ತಬ್ಬಿ ಅವಳ ತೋಳುಗಳನ್ನು ಮುರಿದು ಮಂಡಿಯ ಹಿಂಬದಿಗೆ ನನ್ನ ಹಿಮ್ಮಡಿಯಿಂದ ಪೆಟ್ಟು ಹಾಕಿ ಅವಳನ್ನು ನೆಲದ ಮೇಲೆ ಕೆಡವಿ ಅವಳು ಕೊಸರದಂತೆ ಅಂಗಾತ ಮಾಡಿ ಮೆಟ್ಟಿ ನಾನು ಅವಳ ಮೇಲೆ ಬಂದು ಭಾರತೀಯ ಶೈಲಿಯ ಕುಸ್ತಿಯಲ್ಲಿ ಎದುರಾಳಿಯನ್ನು ಚಿತ್ತು ಮಾಡಿ ವಿಜೃಂಭಿಸುವಂತೆ ಅವಳ ಬೆನ್ನು ಪೂರ್ತಿಯಾಗಿ ನೆಲಕ್ಕೆ ಒತ್ತುವಂತೆ ಭಾರ ಬಿಟ್ಟು ಅವಳ ಸೊಂಟದ ಲಾಡಿಗೆ ಕೈ ಹಾಕಿ ಎಳೆದೆ(ಪುಟ 130) ಬಹುಮಟ್ಟಿಗೆ ಅತ್ಯಾಚಾರ ಎಂದೇ ಕರೆಯ ಬಹುದಾದ ಪ್ರಯತ್ನವನ್ನು ಮಾಡುತ್ತಾನೆ. ಆಗ ಅವಳು ಸೋತು ಶರಣಾಗಿ ಒರಟಾಟ ಬೇಡ ಎಂದು ವಿನಂತಿಸಿ ಬೆತ್ತಲಾಗುತ್ತಾಳೆ. ಅವಳ ಬೆತ್ತಲೆಯ ದೇಹ ಅವನ್ನು ಉದ್ರೇಕಿಸುವುದಿಲ್ಲ ಬದಲಾಗಿ ಅಧ್ಯಾತ್ಮದ ಹಾದಿಯ ಕಡೆಗೆ ನಡೆಸುತ್ತದೆ.
ಅಲ್ಲಿಂದ ಮುಂದೆ ಅವನು ಅವಳನ್ನು ದೈಹಿಕವಾಗಿ ಬಯಸುವುದೇ ಇಲ್ಲ. ಉತ್ತರೆಯೇ ಬಾಯ್ಬಿಟ್ಟು ತನ್ನ ಮಗುವಿನ ತಾಯಿಯಾಗುಎಂದು ಕೇಳಿಕೊಂಡಾಗ ನನ್ನ ಮಗುವಿನ ತಾಯಿಯಲ್ಲದೆಯೂ ನಿನ್ನನ್ನು ಪ್ರೀತಿಸ ಬಲ್ಲೆ(ಪುಟ 196) ಎನ್ನುತ್ತಾನೆ. ಅವಳು ಕಾಮವನ್ನು ಬಯಸಿದಾಗ ಪರಮ ಭಕ್ತನ ಹಾಗೆ ಅವಳ ಕಾಲುಗಳನ್ನು ಬಳಸಿ ಹಣೆಗೆ ಒತ್ತಿ ಕೊಳ್ಳುತ್ತಾನೆ. ಕುತೂಹಲದ ಸಂಗತಿ ಎಂದರೆ 1945ರಲ್ಲಿ ತೆರೆ ಕಂಡ ಹೇಮರೆಡ್ಡಿ ಮಲ್ಲಮ್ಮ ಚಿತ್ರದಲ್ಲಿ ಬೆತ್ತಲೆ ಹೆಣ್ಣು ಅಧ್ಯಾತ್ಮ ಸಾಧನೆಗೆ ಪ್ರೇರಣೆ ನೀಡಿದ ಪ್ರಸ್ತಾಪವಿದೆ. ತಂತ್ರಮಾರ್ಗದಲ್ಲಿ ಇಂತಹ ವಿವರಗಳು ಸಾಕಷ್ಟಿವೆ. ಆದರೆ ಸುದರ್ಶನ್ ಆಯ್ಕೆಯ ಕುರಿತ ಅಂತಹ ಔನತ್ಯದ ಚಿಂತನೆಗಳು ಮೂಡುವುದಿಲ್ಲ. ಅವು ಸ್ಪಷ್ಟವಾಗಿಯೇ ಪಲಾಯನಾವಾದ ಎನ್ನಿಸಿ ಕೊಳ್ಳಬಲ್ಲ ಸೀಮಿತ ನೆಲೆಯಲ್ಲಿಯಿವೆ. ಬಹಳ ಮುಖ್ಯವಾಗಿ ಈ ಕುರಿತು ಕಾದಂಬರಿಯಲ್ಲಿ ದೀರ್ಘವಾಗಿಯೇ ಬಂದಿರುವ ವಿಜ್ಞಾನದ ಮತ್ತು ಅಧ್ಯಾತ್ಮದ ವಿವರಣೆಗಳು ಅಂತರ್ಪಠ್ಯಕ್ಕೆ ಸೇರದೆ ಉಳಿದು ಬಿಡುತ್ತವೆ. ಇದನ್ನು ಕನಿಷ್ಟ ಭಾವನಾತ್ಮಕ ಸಂಘರ್ಷವಾಗಿಸಿದ್ದರೂ ಸುದರ್ಶನ್ ಪಾತ್ರಕ್ಕೆ ಇನ್ನಷ್ಟು ಆಯಾಮಗಳು ದೊರಕಬಹುದಿತ್ತು. ಲೇಖಕರ ಸಂಪೂರ್ಣ ಬೆಂಬಲ ಪಡೆದೂ ಸುದರ್ಶನ್ ಪಾತ್ರ ಉತ್ತರೆಯೆದುರು ಕುಸಿಯುತ್ತದೆ ಎನ್ನುವುದು ಸೃಜನಾತ್ಮಕ ವಿಸ್ಮಯವೇ ಸರಿ!
ಈ ಕಾದಂಬರಿಯಲ್ಲಿರುವ ಇನ್ನೆರಡು ಪಾತ್ರಗಳೆಂದರೆ ಆಕಾಶ್ ಮತ್ತು ಮೇಧಿನಿ. ಆಕಾಶದಲ್ಲಿಯೇ ಹುಟ್ಟಿ ಬೆಳೆದ ಈ ಮಕ್ಕಳಿಗೆ ವಿವಾಹ ನಿಶ್ಚಯವಾಗಿದೆ. ಮದುವೆಯಾಗುವ ತನಕ ಶರೀರ ಸಂಬಂಧ ಕೂಡದು ಎನ್ನುವ ಕಟ್ಟು ನಿಟ್ಟಿನ ಎಚ್ಚರಿಕೆಯೂ ದೊರಕಿದೆ. ಅಂತಹ ಹೊತ್ತಿನಲ್ಲಿ ತಾವಿಬ್ಬರು ಅಣ್ಣ-ತಂಗಿಯರೇ ಎಂಬ ಅನುಮಾನ ಅವರನ್ನು ಕಾಡುತ್ತದೆ ಅದನ್ನು ನಿವಾರಿಸಿ ಕೊಳ್ಳಲು ಅಪ್ಪ-ಅಮ್ಮ ಎನ್ನಿಸಿಕೊಂಡವರ ಜೀವನದ ಪುಟಗಳನ್ನು ಓದುತ್ತಾರೆ. ಈ ಮೂಲಕ ಕಾದಂಬರಿ ಚಾಲನೆ ಪಡೆಯುತ್ತದೆ. ತಂತ್ರಗಾರಿಕೆಗಿಂತ ಭಿನ್ನವಾಗಿ ಈ ಪಾತ್ರಗಳಿಗೆ ಅಸ್ತಿತ್ವವಿಲ್ಲ. ಕಾದಂಬರಿಯಲ್ಲಿ ಅಂಚಿನಲ್ಲಿರುವ ಉಳಿದೆರಡು ಪಾತ್ರಗಳು ಎಂದರೆ ಯಾದವ್ ಮತ್ತು ಅವನ ಹೆಂಡತಿ ರಜನಿಯದು. ಯಾದವ್ ಉತ್ತರೆಯ ಜೊತೆಗೆ ಆಕಾಶಯಾನದ ಪ್ರಯೋಗಕ್ಕೆ ಆಯ್ಕೆಯಾಗಿ ಅವಳ ದೇಹವನ್ನು ಅನುಭವಿಸಿದವನು. ನಂತರ ಗಗನ ಯಾನದಿಂದ ಹಿಂದೆ ಸರಿದವನು. ಅವನೇ ಮುಂದಾಗಿದ್ದರೂ ಆಯ್ಕೆಯಾಗುತ್ತಿರಲಿಲ್ಲ ಎನ್ನುವ ವಿವರಗಳೂ ಕಾದಂಬರಿಯಲ್ಲಿ ಬರುತ್ತವೆ. ಆದಿತ್ಯ ಮಂದಿರದಲ್ಲಿ ಉತ್ತರೆಯನ್ನು ಯಾದವ್ ವಿವಾಹವಾಗಿರುತ್ತಾನೆ. ಅದಿಲ್ಲದೆ ದೇಹ ಸಂಪರ್ಕಕ್ಕೆ ಅವಳು ಒಪ್ಪುವುದಿಲ್ಲ ಎನ್ನುವ ಕಾರಣದಿಂದ. ಆದರೆ ಅವಳ ಹುಚ್ಚಿಗೆ ನಾನು ಸರಿಸಾಟಿಯಾಗಿರಲಿಲ್ಲ ಎಂಬ ಕಾರಣವನ್ನು ಆರೋಪಿಸಿಕೊಂಡು ರಜನಿಯ ಜೊತೆ ಸಂಸಾರಕ್ಕೆ ಸಿದ್ದವಾಗುತ್ತಾನೆ. ಹುಟ್ಟುವ ಮಗಳಿಗೆ ಉತ್ತರೆ ಎಂಬ ಹೆಸರನ್ನೇ ಇಟ್ಟು ನೆನೆಪುಗಳನ್ನು ಕಾಪಾಡಿಕೊಳ್ಳಲು ಬಯಸುತ್ತಾನೆ.
ಅವನ ವ್ಯಕ್ತಿತ್ವದಲ್ಲಿಯೇ ಇಂತಹ ದ್ವಂದ್ವಗಳು ಸಾಕಷ್ಟಿವೆ. ವಿವಾಹವಾದ ಒಂಭತ್ತು ವರ್ಷಗಳ ನಂತರ ಆಕಾಶ ನೌಕೆಯಲ್ಲಿ ನಡೆಸಿದ ಪ್ರಯೋಗಗಳ ವಿವರಗಳು ಪತ್ರಿಕೆಯೊಂದರಲ್ಲಿ ಅಚ್ಚಾಗಿ ವಿವಾದದ ಬಿರುಗಾಳಿಯೇ ಏಳುತ್ತದೆ. ರಜನಿ ಸಿಡಿದೆಳುವುದು ಎಂಜಲು ದೇಹದವನನ್ನು ಮದುವೆಯಾದೆ ಎಂದು ಮಾತ್ರವಲ್ಲ ದಾಂಪತ್ಯದಲ್ಲಿನ ನಂಬಿಕೆಯ ಬುನಾದಿಯೇ ಕುಸಿದು ಬಿದ್ದಿದೆ ಎನ್ನುವ ಅರ್ಥದಲ್ಲಿ. ಆದರೆ ಕಾದಂಬರಿಯಲ್ಲಿ ಅದಕ್ಕೆ ಮಹತ್ವ ಸಿಕ್ಕುವುದಿಲ್ಲ. ರಜನಿಯ ಆಕೋಶವನ್ನು ಅರ್ಥ ಮಾಡಿಕೊಳ್ಳುವ ಬದಲು ಯಾದವ್ಮದುವೆಗೆ ಮೊದಲು ನೀನು ಯಾವನ ಅಥವಾ ಎಷ್ಟು ಜನರ ಜೊತೆ ಬಿದ್ದಿದ್ದೆಯೋ ಎಂದು ಕೀಳಾಗಿ ಮಾತನಾಡುತ್ತಾನೆ. ಇದರಿಂದ ಕುಸಿದು ಬೀಳುವ ರಜನಿಯ ಕುರಿತು ಕಾದಂಬರಿಕಾರರು ಸಹಾನುಭೂತಿಯನ್ನು ತಳೆಯುವುದಿಲ್ಲ. ಬದಲಾಗಿ ವೈದ್ಯರಿಂದ ನಿಮ್ಮ ಹೆಂಡತಿಗೆ ಸ್ವಲ್ಪಮಟ್ಟಿಗೆ ಡಿಪ್ರೆಷನ್ ಆಗಿರೋದು ನಿಜ, ಆದರೆ ಅದನ್ನೇ ಉತ್ಪ್ರೇಕ್ಷಿಸಿಕೊಂಡು ತಾನು ಪ್ರಪಂಚದಲ್ಲಿ ಇನ್ನಾರು ಒಳಗಾಗದಿರುವ ಅನ್ಯಾಯಕ್ಕೆ ಬಿದ್ದ ಬಲಿಪಶು ಎಂಬ ಭಾವನೆಯಲ್ಲಿಯೇ ಹಿತ ಕಾಣುವ ಮನೋಭಾವದಲ್ಲಿದ್ದಾರೆ(ಪುಟ 166) ಎನ್ನುವ ನೆಲೆಗೆ ಬಂದು ಬಿಡುತ್ತಾರೆ. ಯಾದವ್ ಕೂಡ ಹೆಂಡತಿಗೆ ಬೆಂಬಲವಾಗಿ ನಿಲ್ಲುವ ಬದಲು ಉತ್ತರೆಗೆ ಅನ್ಯಪುರುಷನಿಂದ ಗರ್ಭ ಧರಿಸು ಎನ್ನುವ ಉಪದೇಶ ಮಾಡುವಲ್ಲಿ ಹೆಚ್ಚು ಆಸಕ್ತಿವಹಿಸುತ್ತಾನೆ. ಮಗಳನ್ನು ಹೊಸಶಾಲೆಗೆ ಸೇರಿಸಿ ಅಲ್ಲಿ ಕಾಮಿನಿ ಎಂದು ಹೆಸರು ಬದಲಾಯಿಸಿದರೂ ಅವಳು ಉತ್ತರೆಯಾಗುವಲ್ಲಿಯೇ ಆಸಕ್ತಿ ತೋರಿಸಿದಳು ಎನ್ನುವುದನ್ನು ಹೆಮ್ಮೆಯ ಸಂಗತಿ ಎಂದು ಕೊಳ್ಳುತ್ತಾನೆ. ಕೊನೆಗೆ ರಜನಿ ತನಗೊಂದು ಗಂಡು ಮಗು ಬೇಕು ಎಂದು ಬೇಡಿ ಕೊಳ್ಳುವ ಹೀನಸ್ಥಿತಿಗೆ ಬರುತ್ತಾಳೆ. ಹೆಣ್ಣು ಮಕ್ಕಳು ಯಾವತ್ತೂ ತಾಯಿಗೆ ವಿರುದ್ಧವೇ. ಅವಳು ಯಾವತ್ತೂ ನಿಮ್ಮ ಮಗಳು. ನನಗೊಬ್ಬ ಮಗ ಬೇಕು(177) ಎನ್ನುವ ತರ್ಕವನ್ನೂ ಹುಡುಕಿಕೊಳ್ಳುತ್ತಾಳೆ.
ಅಲ್ಲಿಯೂ ಯಾದವ್ ನಿಧಾನವಾಗಿ ಯೋಚಿಸೋಣ ಎಂಬ ಪುರುಷ ಅಹಂಕಾರವನ್ನೇ ಪ್ರದಶರ್ಿಸುತ್ತಾನೆಯೇ ಹೊರತು ಅವಳನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳುವ ಪ್ರಯತ್ನವನ್ನೇ ಪಡುವುದಿಲ್ಲ. ಇಲ್ಲಿ ಗಮನಿಸಲೇ ಬೇಕಾದ ಹಲವು ಅಂಶಗಳಿವೆ. ಯಾದವ್ ತನ್ನ ಅನುಕೂಲಕ್ಕಾಗಿ ಉತ್ತರೆಯಲ್ಲಿ ಹಲವು ಆಸೆಗಳನ್ನು ಹುಟ್ಟಿಸಿದ್ದಾನೆ. ಅವಳ ಹೆತ್ತವರನ್ನೂ ಭೇಟಿ ಮಾಡಿ ಭರವಸೆಯನ್ನು ತುಂಬಿದ್ದಾನೆ. ಆದರೆ ಅವಳ ತನ್ನ ಕೈಗಟಕುತ್ತಿಲ್ಲ ಎನ್ನಿಸಿದ ಕೂಡಲೇ ಹೊಸ ಸಾಧ್ಯತೆಗಳ ಕಡೆಗೆ ಹೊರಳುತ್ತಾನೆ. ರಜನಿಯ ಜೊತೆ ಸಂಸಾರವನ್ನೂ ಆರಂಭಿಸುತ್ತಾನೆ. ಅವಳಿಗೆ ಉತ್ತರೆಯ ಕುರಿತು ಯಾವ ಸಂಗತಿಯನ್ನೂ ಹೇಳಿರುವುದಿಲ್ಲ. ಪತ್ರಿಕೆಯ ಮೂಲಕ ಈ ಸಂಗತಿ ಬಯಲಾದಾಗ ಆಘಾತಕ್ಕೆ ಒಳಗಾಗುವವಳು ರಜನಿ. ಏಕೆಂದರೆ ಅವಳೇ ಸಮಾಜವನ್ನು ಎದುರಿಸ ಬೇಕಾದವಳು. ಆದರೆ ಕಾದಂಬರಿಕಾರರ ಸಹಾನುಭೂತಿ ಅವಳ ಕಡೆ ಇಲ್ಲ ಬದಲಾಗಿ ಯಾದವನ ಕಡೆ ಇದೆ. ಹೀಗಾಗಿ ಕಾದಂಬರಿಯ ತಾಕರ್ಿಕ ಬೆಳವಣಿಗೆಯೇ ವಿಲೋಮವಾಗಿದೆ. ತಾತ್ವಿಕವಾಗಿಯೂ ಹಲವು ಪ್ರಶ್ನೆಗಳು ಹಾಗೆ ಉಳಿದಿವೆ.
‘ಯಾನದ ವ್ಯಾಪ್ತಿ ದೊಡ್ಡದಾದರೂ ಅಲ್ಲಿನ ಪಾತ್ರಗಳ ಸ್ವರೂಪ ಅಷ್ಟು ವಿಶಾಲವಾಗಿಲ್ಲ. ಇರುವ ಕೆಲವೇ ಪಾತ್ರಗಳಲ್ಲಿಯೂ ಭಾವನಾತ್ಮಕ ಬೆಸುಗೆ ಕಾಣುವುದಿಲ್ಲ. ತಾತ್ವಿಕ ನೆಲೆಗಳೂ ಪೂರ್ವ ನಿರ್ಧರಿತವಾಗಿವೆ. ಇದಕ್ಕೆ ಹೋಲಿಸಿದರೆ ಭೈರಪ್ಪನವರದೇ ಸಾಕ್ಷಿಕಾದಂಬರಿಯಲ್ಲಿ ಕಾಮದ ಪ್ರಶ್ನೆ ಮಂಜಪ್ಪ ಮತ್ತು ನಾಗಪ್ಪನ ಪಾತ್ರಗಳ ಮೂಲಕ ಬಹುಮುಖಿ ಸಾಧ್ಯತೆಗಳಿಂದ ದಾಖಲಾಗಿದೆ. ಸಾವಿತ್ರಿ ಪಾತ್ರದ ಮೂಲಕ ಕಾಮದ ತಾತ್ವಿಕ ನೆಲೆಗಳೂ ಬಿಂಬಿತವಾಗಿವೆ. ಪರ್ವದಲ್ಲಿ ಶಲ್ಯನ ಮೊಮ್ಮಗಳ ಋತುಚಕ್ರ ವೈಫಲ್ಯದಿಂದ ಆರಂಭವಾಗಿ ಸೈನಿಕರ ಬಲಾತ್ಕಾರದಿಂದ ಗರ್ಭಿಣಿಯರಾಗುವ ಅಸಹಾಯಕ ಹೆಣ್ಣುಗಳವರೆಗೆ ವಿವಿಧ ಮಾದರಿಯ ಕಾಮದ ಪ್ರಶ್ನೆಗಳು ಚರ್ಚಿತವಾಗಿವೆ. ಅಂಚು ಕಾದಂಬರಿ ಪರ್ವದ ಆಧುನಿಕ ಸಾಧ್ಯತೆಯಂತೆ ಕಾಣಬಲ್ಲ ವ್ಯಾಪ್ತಿಯನ್ನು ಹೊಂದಿದೆ. ಕಾಮ ನಿಜವಾದ ಅಸ್ತಿತ್ವ ಮಾನವ ಸ್ವಭಾವದಲ್ಲಿ ಇದೆಯೋ ಅಥವಾ ಸಂತಾನಪೇಕ್ಷೆಯಲ್ಲಿದೆಯೋ ಎಂಬ ತಾತ್ವಿಕತೆ ಅಲ್ಲಿ ಡಾ.ಅಮೃತಾ ಮತ್ತು ಸೋಮಶೇಖರನ ಪಾತ್ರಗಳ ಮೂಲಕ ಆಳವಾಗಿ ಚರ್ಚಿತವಾಗಿದೆ. ಅದೇ ತಾತ್ವಿಕ ಚರ್ಚೆಯೇ ಯಾನದಲ್ಲಿಯೂ ಮುಂದುವರಿದಿದೆ. ಆದರೆ ಅದಕ್ಕೆ ಅಗತ್ಯವಾದ ಪಾತ್ರಗಳ ಆವರಣ ಈ ಕೃತಿಗಿಲ್ಲ. ಪಾತ್ರಗಳ ಮೂಲಕ ತಾತ್ವಿಕ ನೆಲೆಗಳು ಬೆಳೆಯುವ ಬದಲಾಗಿ ತಾತ್ವಿಕತೆಗಾಗಿ ಪಾತ್ರಗಳು ಬಂದಿವೆ. ವೈಜ್ಞಾನಿಕ ತಳಹದಿಯಲ್ಲಿ ಪರಂಪರೆಯನ್ನಿಟ್ಟು ಚರ್ಚಿಸುವ ಪ್ರಯತ್ನ ಕುತೂಹಲಕರವಾಗಿದ್ದರೂ ಅದಕ್ಕೆ ಅಗತ್ಯವಾದ ಸೃಜನಶೀಲ ಬಂಧ ರೂಪುಗೊಂಡಿಲ್ಲ. ಆ ಅರ್ಥದಲ್ಲಿ ಈ ಕೃತಿ ಭೈರಪ್ಪನವರ ಹಿಂದಿನ ಮಹತ್ವದ ಕೃತಿಗಳ ಜೊತೆಗೆ ಸಾವಯವ ಸಂಬಂಧವನ್ನು ಕೂಡ ಇಟ್ಟುಕೊಂಡಿಲ್ಲ ಎನ್ನುವುದು ಮಹತ್ವದ ಸಂಗತಿ.
 

‍ಲೇಖಕರು G

2 August, 2014

6 Comments

  1. kumee

    ಭೈರಪ್ಪ ಅವರ ಹೊಸ ಕಾದಂಬರಿ ಕುರಿತು ವಿವರವಾಗಿ ಬರೆದಿರುವ ಮಿತ್ರ ಶ್ರೀಧರಮೂರ್ತಿಯವರಿಗೆ ಅಭಿನಂದನೆಗಳು,

  2. Shivaram H

    ಭೈರಪ್ಪನವರ ಕಾದಂಬರಿ ಬಗ್ಗೆ ಬರೆದು ನಮ್ಮ ಕುತೂಹಲ ತಣಿಸಿದ್ದೀರಿ ಧನ್ಯವಾದಗಳು

  3. ಅಜಯ

    ಓದಲೇಬೇಕೆಂಬ ಹಂಬಲ ಹೆಚ್ಚಿಸಿದೆ. ಧನ್ಯವಾದಗಳು.

  4. Shivaram H

    ಯಾನ ಕಾದಂಬರಿ ಬಗ್ಗೆ ಇದ್ದ ಕುತೂಹಲ ತಣಿಸಿದ್ದೀರಿ ಧನ್ಯವಾದಗಳು

  5. sunanda kadame

    ತು೦ಬ ಚೆನ್ನಾಗಿ ವಿಶ್ಲೇಷಿಸಿದ್ದೀರಿ, ಈ ಶತಮಾನದಲ್ಲೂ ಸಾ೦ಪ್ರದಾಯಿಕ ಹೆಣ್ಣಿನ ಮಾದರಿಯೊ೦ದ್ದನ್ನು ಭೈರಪ್ಪನವರು ಅದೂ ಒ೦ದು ಕಾದ೦ಬರಿ ಮೂಲಕ ಭೋದಿಸುವ ಅಗತ್ಯವಿರಲಿಲ್ಲ ಅನಿಸುತ್ತದೆ .

  6. ಹನುಮಂತ ಅನಂತ ಪಾಟೀಲ, ರಿಪ್ಪನ್ ಪೇಟೆ

    ಭೈರಪ್ಪನವರ ‘ಯಾನ’ ಕಾದಂಬರಿ ಕುರಿತ ವಾದ ವಿವಾದಗಳೇನೆ ಇರಲಿ,ಅವರು ಓದುಗರ ಕುತೂಹಲ ಹೆಚ್ಚಿಸುವಂತಹವರು. ಈ ಸಂಧರ್ಭದಲ್ಲಿ ನಾವು ತೇಜಸ್ವಿಯವರ ಅನಿಸಿಕೆಯನ್ನು ಒಮ್ಮೆ ನೆನಪಿಸಿಕೊಳ್ಳ ಬೇಕು.ಭೈರಪ್ಪನವರ ‘ಆವರಣ’ ಕಾದಂಬರಿ ಬಿಡುಗಡೆಯಾದಾಗ ಅವರ ಕೃತಿಗಳ ಜನಪ್ರಿಯತೆಯನ್ನು ಕುರಿತು ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದನ್ನು ಆಗ ಪತ್ರಿಕೆಗಳಲ್ಲಿ ಓದಿದಂತೆ ನೆನಪು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading