`ನಾಕುತಂತಿ’ ಮೀಟಿದ ಯಶವಂತ.. ಹಳಿ’ಬಿಟ್ಟ’ಬಂಡಿ
ಮಹಿಪಾಲ ರೆಡ್ಡಿ ಮುನ್ನೂರ್
‘ಏನ ಹಾಡಿದ್ಯೋ.. ಮುಂಜಾನಿ ಹುಚ್ಚು ಹಿಡಿಸಿದಿ ನನಗ..’ ಅಂದಿದ್ರಂತೆ ವರಕವಿ ಬೇಂದ್ರೆ
`ಸವಾಲೊಂದು.. ನಿನ್ನ ಮ್ಯಾಲ ಸಾಹಿರಕಾ..’
ಉತ್ತರ ಕರ್ನಾಟಕದ ಯಶಸ್ವಿ ಗಾಯಕ ಯಶವಂತ ಹಳಿಬಂಡಿ ಇನ್ನಿಲ್ಲ ಅನ್ನೋ ಸುದ್ದಿ ಬ್ರೇಕಿಂಗ್ ಆದ ಕ್ಷಣದಲ್ಲೇ ನೆನಪಾಯಿತು ಈ ಸಾಲು.
ಹೌದು.. ಇಂದು ಬೆಳ್ ಬೆಳಿಗ್ಗೆ ನಮ್ಮಿಂದ ಅಗಲಿದ ಖ್ಯಾತ ಸುಗಮ ಸಂಗೀತಲೋಕದ ಆಪ್ತ ಹಾಡುಗಾರ ಯಶವಂತ ಹಳಿಬಂಡಿ ಅವರ ಪಕ್ಕಾ ಟಿಪಿಕಲ್ ಧ್ವನಿ ನೆನಪಾದದ್ದು.. ಅಪ್ಪಟ ದೇಸೀ ಸ್ಟೈಲ್ನಲ್ಲಿ ಹಾಡು ನೆನಪಾದದ್ದು.. ಬಹುಶಃ ಹಳಿಬಂಡಿಯ ಗಾನಲೋಕಕ್ಕೆ ನನ್ನನ್ನೇ ನಾನು ಮನಸೋತ ಕಾರಣ.
ಕಳೆದ ತಿಂಗಳು ಎರಡನೆ ವಾರದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಕಸ್ಮಿಕವಾಗಿ ಅವರನ್ನು ಭೇಟಿ ಮಾಡಬೇಕಾಯಿತು. ಇದಕ್ಕಿಂತ ಮೊದಲು ನಾಲ್ಕಾರು ಭೇಟಿಯಾಗಿದ್ದನ್ನು ಸ್ಮರಿಸಿಕೊಂಡೆವು. ಉಭಯಕುಶಲೋಪರಿ ಸಾಂಪ್ರತ ಮಾತುಗಳ ನಂತರ ಕಲಾಕ್ಷೇತ್ರದ ಆ ಕಡೆ ಇರುವ ಚಹಾ ಕುಡಿದದ್ದು.. ಅದ್ಯಾಕೋ ನೆನಪಾಯಿತು.

“ಪಾತರಗಿತ್ತಿ.. ಪಕ್ಕ..
ನೋಡಿದ್ದೇನ.. ಅಕ್ಕ…”
ಎಂಬೋ ಹಾಡನ್ನು ಆರಂಭ ಮಾಡುತ್ತಿದ್ದರೆ.. ಇಡೀ ಸಭಾಂಗಣ ಕರತಾಡನಕ್ಕೆ ಮುಂದಾಗುತ್ತಿತ್ತು. ವರಕವಿ ದ.ರಾ.ಬೇಂದ್ರೆ ಅವರು ಬರೆದ ಈ ಪಾತರಗಿತ್ತಿ ಹಾಡು.. ಮಧುರ ಕಂಠದಲ್ಲಿ ಮೂಡಿಬಂದ ಈ ಹಾಡು ನಾಡಿನಾದ್ಯಂತ ಜನಪ್ರಿಯತೆ ಪಡೆದಿದೆ.
ಪಕ್ಕಾ ಹಳ್ಳಿ ರೈತನ ಮನೆ ಮಗ ಅನ್ನುವಂತೆ ಕಾಣುವ ಯಶವಂತ ಹಳಿಬಂಡಿ ಎನ್ನುವ ಅಪ್ಪಟ ದೇಸಿ ಹಾಡುಗಾರ, ಪಾತರಗಿತ್ತಿ ಹಾಡನ್ನು ತನ್ನ ಮಧುರ ಕಂಠದಿಂದ ಹಾಡುತ್ತಿದ್ದರೆ, ಇಡೀ ಸಭಾಂಗಣ ಒಂದಿಷ್ಟು ಹೊತ್ತು ಸಂತಸದಲ್ಲಿ ತೇಲುತ್ತಿತ್ತು.
ಉತ್ತರ ಕನರ್ಾಟಕದ ದೇಸೀ ಪ್ರತಿಭೆ ಯಶವಂತ ಹಳಿಬಂಡಿ ಅವರು ಹಾಡಿರುವ ಬೇಂದ್ರೆಯವರ ಈ ಪಾತರಗಿತ್ತಿ ಎಂಬೋ ಹಾಡಂತೂ ಜನಮನವೆಲ್ಲಾ ಸಂತಸ ಉಕ್ಕಿ ಹರಿಸುವಂತದ್ದು ಎನ್ನಬಹುದು. ಹಳಿಬಂಡಿ ಅವರ ಮಧುರ ಕಂಠದಿಂದ ಹೊರಹೊಮ್ಮುವ ಇನ್ನೊಂದು ಹಾಡು,
`ಹೋಗು ಮನಸೆ ಹೋಗು.. ನಲ್ಲೆ ಇರುವಲ್ಲಿ ಹೋಗು..’ , `ಯಾರಿಗೂ ಹೇಳೋಣು ಬ್ಯಾಡ..’ `ಕುಂಬಾರಕ್ಕಿ ಈಕೀ ಕುಂಬಾರಕೀ..’ ಮತ್ತು `ಕುಣಿಯೋಣು ಬಾರಾ ಕುಣಿಯೋಣು ಬಾ..’ ಹಾಡುಗಳಂತೂ ಕೇಳುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತಿದ್ದವು. ಯಶವಂತ ಹಳಿಬಂಡಿ ಹಾಡಿನ ಮೋಡಿ ಇರೋದೇ ಅವರ ಟಿಪಿಕಲ್ ಸ್ಟೈಲ್ನಲ್ಲಿ.
`ಎಲ್ಲೋ ಜೋಗಪ್ಪ ನಿನ್ನರಮನೆ..’ ಮತ್ತು
`ನಾ ಸಂತಿಗಿ ಹೋಗಿನ್ನಿ ಆಕೆ ತಂದಿದ್ದಳೂ ಬೆಣ್ಣಿ..’
ಗೀತೆಗಳೂ ಸಹ ಶ್ರೋತೃಗಳನ್ನು ಹಿಡಿದಿಡುತ್ತಿತ್ತು. ಅದೇ ವರಕವಿ ಬೇಂದ್ರೆ ಅವರ ಇನ್ನೊಂದು ಜನಪ್ರಿಯ ಹಾಡು ಮತ್ತು ಜ್ಞಾನಪೀಠ ಪ್ರಶಸ್ತಿ ಪಡೆದ `ನಾಕುತಂತಿ’ ಸಂಕಲನದ `ಆವು ಈವಿನ..
ನಾವು ನೀವಿಗೆ..
ಆನು ತಾನಾದ ತನನ..’
ಎನ್ನುವ ಹಾಡು ಕೇಳಿದ ಸಂಗೀತಾಸಕ್ತರು ನಿಜಕ್ಕೂ ಆನಂದ ಸಾಗರದಲ್ಲಿ ತೇಲುತ್ತಿದ್ದರು. ಹೀಗೆ ಕನ್ನಡದ ಒಲವಿನ ಕವಿ ಬೇಂದ್ರೆ ಅವರ ಹಾಡುಗಳನ್ನು ಹಾಡುತ್ತ ಹಾಡುತ್ತ.. ಸುಮಾರು ನಾಲ್ಕು ದಶಕಗಳಿಗೆ ಹೆಚ್ಚು ಕಾಲ ಸುಗಮ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.
ಕನ್ನಡ ನಾಡಿನ ತುಂಬಾ ಓಡಾಡಿ ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಸಹಸ್ರಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದರು. ತಮ್ಮದೇ ಒಂದು ತಂಡವನ್ನು ಕಟ್ಟಿಕೊಂಡು ಕನರ್ಾಟಕ ರಾಜ್ಯಾದ್ಯಂತ ಸುತ್ತಾಡಿದ್ದಾರೆ. ಸುಪ್ರಸಿದ್ಧ ಕವಿಗಳ ಕವಿತೆಗಳನ್ನು ಹಾಡಿ ಜನ ಮನ ಸೆಳೆದಿದ್ದಾರೆ. ಕವಿತಾಮೃತವನ್ನು ಸಂಗೀತ ಪ್ರಿಯರಿಗೆ ಉಣಬಡಿಸಿದ್ದಾರೆ.
ಯಶವಂತ ಹಳಿಬಂಡಿ ಅವರ ನೂರಾರು ಧ್ವನಿಸುರುಳಿಗಳು ನಾಡಿನ ಮನೆ ಮಾತಾಗಿವೆ. ನೂರಾರು ಸುಗಮ ಸಂಗೀತ ಕಮ್ಮಟಗಳಲ್ಲಿ ಅನೇಕ ವಿದ್ಯಾಥರ್ಿಗಳಿಗೆ ಕನ್ನಡ ಗೀತೆಗಳನ್ನು ಕಲಿಸಿ ಅವರಿಂದಲೇ ಹಾಡಿಸಿದ ಕೀತರ್ಿಯೂ ಹಳಿಬಂಡಿಗೆ ಸಲ್ಲುತ್ತದೆ. ಮೈಸೂರು ಸೀಮೆಯೊಳಗೆ ಸುಗಮ ಸಂಗೀತವನ್ನು ಧಾರವಾಡ ಶೈಲಿಯಲ್ಲಿ ಅಥವಾ ಉತ್ತರ ಕನರ್ಾಟಕ ಶೈಲಿಯಲ್ಲಿ ಹಾಡಿದ ಗಾಯಕರೆಂದರೆ ಯಶವಂತ ಹಳಿಬಂಡಿ ಮಾತ್ರ. ಹೀಗೆಂದು ಹೇಳಿದರೆ ಅದು ಅತಿಶಯೋಕ್ತಿ ಮಾತೇನಲ್ಲ.
ಯುವ ಗಾಯಕರನ್ನು ಕಂಡರೆ ಪ್ರೀತಿಯಿಂದ ಮಾತನಾಡಿಸದೇ ಇರುವ ಅನೇಕ ಹಿರಿಯ ಸಂಗೀತಗಾರರ ನಡುವೆ ಹಳಿಬಂಡಿ ಅವರದು ಡಿಫರೆಂಟ್ ಕ್ಯಾರೆಕ್ಟರ್. ಮಕ್ಕಳು, ಯುವಕರು, ಹಿರಿಯರು ಹೀಗೆ ಯಾವುದೇ ಭೇದ ಭಾವವಿಲ್ಲದೇ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದರು. ಅದು ಅವರ ಸರಳ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.
ಭಾವಗೀತೆಗಳ ಜೊತೆ ಜೊತೆಗೆ ಭಕ್ತಿಗೀತೆ, ಜಾನಪದ ಗೀತೆ, ಶರಣರ ವಚನ, ತತ್ವಪದಗಳು ಹೀಗೆ ಹಲವು ಪ್ರಕಾರಗಳಲ್ಲಿ ಯಶವಂತ ಹಳಿಬಂಡಿ ಅವರು ತಮ್ಮ ದೇಸೀ ಗಾನದ ಮೂಲಕ ಪ್ರಸಿದ್ಧರಾಗಿದ್ದಾರೆ.
ಕನರ್ಾಟಕ ಸರಕಾರ ಆಯೋಜಿಸುವ ಹಂಪಿ ಉತ್ಸವ, ಚಾಲುಕ್ಯ ಉತ್ಸವ, ಹೊಯ್ಸಳ ಉತ್ಸವ, ಕರಾವಳಿ ಉತ್ಸವದಂಥ ಅನೇಕ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಸಂಗೀತ ನಿದರ್ೇಶಕರಾಗಿ ಹಾಗು ಗಾಯಕರಾಗಿ ಮನಗೆದ್ದಿದ್ದಾರೆ.
ಧಾರವಾಡ ಆಕಾಶವಾಣಿ ಮಕ್ಕಳ ಕಾರ್ಯಕ್ರಮ `ಗಿಳಿವಿಂಡು’ವಿನಲ್ಲಿ ಹಾಡಿ ಸೈ ಎನಿಸಿಕೊಂಡ ಹಳಿಬಂಡಿ. 64 ವಯಸ್ಸಿನ ಹಳಿಬಂಡಿ ಅವರಿಗೆ ಅನೇಕ ಸಂಘ ಸಂಸ್ಥೆಗಳು ಪುರಸ್ಕಾರ ನೀಡಿವೆ. ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ಕನರ್ಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಆರ್ಯಭಟ ಪ್ರಶಸ್ತಿ ಪಡೆದಿದ್ದರು.
ಜಾನಪದ ಹಾಡುಗಾರಿಕೆಯ ಮನೆತನದಲ್ಲಿ ಉತ್ತರ ಕನರ್ಾಟಕದ ಬಾಗಲಕೋಟೆ ಜಿಲ್ಲೆಯ ತೆರಗಾಂ ನಲ್ಲಿ ಜನಿಸಿದ ಹಳಿಬಂಡಿ, ಜಾನಪದ, ಸುಗಮ ಸಂಗೀತ, ಚಲನಚಿತ್ರ ಗೀತೆ ಹೀಗೆ ಹಲವು ಪ್ರಕಾರಗಳಲ್ಲಿ ಹಾಡಿದ ಯಶಸ್ವಿ ಹಾಡುಗಾರ. ಬೆಳೆದದ್ದು ಧಾರವಾಡದಲ್ಲಿ.
1971 ರಿಂದ ಧಾರವಾಡದ ಆಕಾಶವಾಣಿ ಅನುಮೋದಿತ ಗಾಯಕರಾಗಿ ನೇಮಕಗೊಂಡ ನಂತರ ಸಂಗೀತ ಕ್ಷೇತ್ರದ ದಿಗ್ಗಜರಾದ ಕೇಶವ ಗುರುವ್, ವಸಂತ ಕನಕಾಪುರ ಅವರಲ್ಲಿ ಕಲಿತಿದ್ದಾರೆ.
ಅದೊಂದು ದಿನ.. ಧಾರವಾಡ ಆಕಾಶವಾಣಿಯಲ್ಲಿ ದ.ರಾ.ಬೇಂದ್ರೆ ಅವರು ಬರೆದ ಕವನ.. `ಮೂಡಲ ಮನೆಯ ಮುತ್ತಿನ ನೀರಿನ ಎರಕವಾ ಹೋಯ್ದಾ..’ ಅಂತ ಎದೆ ತುಂಬಿ ಹಾಡಿದಾಗ..
ಅದೇ ಹೊತ್ತಿಗೆ ತಾವರಗೇರಿ ಆಸ್ಪತ್ರೆಯಲ್ಲಿದ್ದ ಬೇಂದ್ರೆ ಅವರು ರೇಡಿಯೋ ಮೂಲಕ ಹಾಡು ಕೇಳಿದರಂತೆ. ಆವತ್ತೆ ತನ್ನ ಮನೆಗೆ ಕರೆಸಿಕೊಂಡು.. ಬೇಂದ್ರೆ ಹಳಿಬಂಡಿ ಬೆನ್ನ ಮೇಲೆ ಕೈಯಾಡಿಸಿ ಹೇಳಿದರಂತೆ.. “ಏನ ಹಾಡಿದ್ಯೋ.. ಮುಂಜಾನಿ ಹುಚ್ಚು ಹಿಡಿಸಿದ ನನಗ..” ಎಂದಾಗಲಂತೂ ಯುವಕ ಹಳಿಬಂಡಿಗೆ ಮಾತೇ ಬರಲಿಲ್ಲವಂತೆ.
ಬೇಂದ್ರೆ ಅಂದರೇನೇ ಹಂಗೆ..
ಮುಂದೆ ಬೇಂದ್ರೆ ಕಾವ್ಯವಾಣಿ ಎಂಬ ವಿಶೇಷ ಸಂಗೀತ ರೂಪಕ ರಚನೆ. ನಾಡಿನಾದ್ಯಂತ ನಡೆಸಿಕೊಟ್ಟ ಕಾರ್ಯಕ್ರಮ ಕೊನೆಯವರೆಗೂ ಬೇಂದ್ರೆ ಅವರಲ್ಲಿಗೆ ಹೋಗಿ ಹಾಡಿ ಸಂತೋಷಪಡಿಸಿದ ಏಕೈಕ ಗಾಯಕ.
ಅಂತಹ ಗಾಯಕ ಇಂದು ಬೆಳಿಗ್ಗೆ ಇನ್ನಿಲ್ಲ ಎನ್ನುವ ಸುದ್ದಿ ಬ್ರೇಕಿಂಗ್ ನ್ಯೂಸ್ ಆಗಿ ಎಲ್ಲಾ ಚಾನೆಲ್ಗಳಲ್ಲಿ ನೋಡುವಾದ ಅದ್ಯಾಕೋ.. ಇಂದಿನ ಬೆಳಗು ಮಂಕುಗೊಳಿಸಿತು. ಜೊತೆಗೆ ಇನ್ನೊಂದು ಬ್ರೇಕಿಂಗ್ ನ್ಯೂಸ್.. ಟಾಲಿವುಡ್ ನಾಯಕ, ತೆಲುಗು ಚಿತ್ರರಂಗದ ಅನಭಿಷಕ್ತ ದೊರೆ ಪಟ್ಟಾಭಿಷೇಕಂ ಸಿನಿಮಾದ ಆ ನಟ ಅಕ್ಕಿನೇನಿ ನಾಗೇಶ್ವರರಾವ ಅವರೂ ಇನ್ನಿಲ್ಲ ಎಂಬ ಸುದ್ದಿ.. ನಿಜಕ್ಕೂ ಮನಸಿಗೆ ಬೇಸರಗೊಳಿಸಿತು.
ಅಂದ ಹಾಗೆ, ಶಿಶುನಾಳ ಶರೀಫ ಅವರು ಬರೆದ ತತ್ವಪದ `ಸವಾಲೊಂದು ನಿನ್ನ ಮ್ಯಾಲ ಸಾಹಿರಕಾ..’ ಈ ಹಾಡು ಯಶವಂತ ಹಳಿಬಂಡಿ ಅವರು ಹಾಡಿದ್ದು.. ಶರೀಫರ ಸಮಾಧಿಯ ಸನ್ನಿಧಿಯಲ್ಲಿ..
ಅದೇ ಯಶವಂತ ಹಳಿಬಂಡಿ ಹಾಡಿದ ಮತ್ತೊಂದು ಹಾಡು.. `ಹೋಗು ಮನಸೇ ಹೋಗು..’ ನೆನಪಾಯಿತು.
—






Very befitting ‘nudinamana’ to a very valuable singer!