ಸಂಕೀರ್ಣ ಪ್ರೇಮ ಸಂಬಂಧಗಳ ‘ಪ್ಯಾಸೇಜಸ್‘ ಸಿನಿಮಾ

ಮ ಶ್ರೀ ಮುರಳಿ ಕೃಷ್ಣ
—–
ಪ್ರೇಮ ಎಂಬ ನವಿರು ಭಾವನೆಗೆ ಸಂಬಂಧಿಸಿದಂತೆ ತತ್ವಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು, ಮನೋವಿಜ್ಞಾನಿಗಳು, ಲೇಖಕರು ಹಾಗೂ ಇತರರು(ಸಾಮಾನ್ಯರು ಸೇರಿದಂತೆ) ವಿವಿಧ ದೃಷ್ಟಿಕೋನಗಳ, ವೈವಿಧ್ಯ ವಿಚಾರಗಳನ್ನು ಮಂಡಿಸಿದ್ದಾರೆ. ಸೂತ್ರಗಳು ಮತ್ತು ಚೌಕಟ್ಟುಗಳ ಆಚೆ ಪ್ರವಹಿಸುವ ಪ್ರೇಮ ಲೋಕದ ವಿದ್ಯಮಾನಗಳು ಉದ್ದೀಪನಗೊಳಿಸುವ ಭಾವಗಳು ಒಂದೇ, ಎರಡೇ… ಉದಾತ್ತ ಭಾವನೆಯೊಡನೆ ಸ್ಪಂದಿಸಲ್ಪಡುವ ಪ್ರೇಮ ನಿಕೃಷ್ಟ ಗ್ರಹಿಕೆಯ ವಸ್ತು ಕೂಡ ಆಗಬಲ್ಲದು.
ಜರ್ಮನಿಯ ಮೂಲದ ಮನಶಾಸ್ತ್ರಜ್ಞ, ಮನೋವಿಶ್ಲೇಷಕ, ತತ್ವಜ್ಞಾನಿ, ಸಮಾಜಶಾಸ್ತ್ರಜ್ಞ, ಫ್ರಾಂಕ್ಫರ್ಟ್ ಶಾಲೆಯ ಸಮಾಜವಾದಿ ಸಿದ್ಧಾಂತಿ ಎರಿಕ್ ಫ್ರಾಮ್ ತಮ್ಮ ಮಹತ್ವದ ಕೃತಿ ʼ ಪ್ರೇಮಿಸುವ ಕಲೆ ʼ( ʼ ದಿ ಆರ್ಟ್ ಆಫ್ ಲವಿಂಗ್ ʼ -1956) ಯಲ್ಲಿ ಪ್ರೇಮದ ಬಗೆಗೆ ಉಲ್ಲೇಖಾರ್ಹ ವ್ಯಾಖ್ಯಾನಗಳನ್ನು ಮಾಡಿದ್ದಾರೆ.
“Love is not primarily a relationship to a specific person; it is an attitude, an orientation of character which determines the relatedness of a person to the world as a whole, not toward one “object” of love. If a person loves only one other person and is indifferent to the rest of his fellow men, his love is not love but a symbiotic attachment, or an enlarged egotism. Yet, most people believe that love is constituted by the object, not by the faculty.” ಎಂಬ ಈ ಕೃತಿಯ ಒಂದು ಪ್ರತಿಪಾದನೆ ಗಮನಾರ್ಹವಾಗಿದೆ.
ಇತ್ತೀಚೆಗೆ ಅಮೆರಿಕಾದ ನಿರ್ದೇಶಕ ಐರಾ ಸಾಕ್ಸ್ (Ira Sachs) ನಿರ್ದೇಶಿಸಿದ ಫ್ರೆಂಚ್-ಆಂಗ್ಲ ಭಾಷೆಯ ʼ ಪ್ಯಾಸೇಜಸ್ ʼ (2023) ಎಂಬ ಸಿನಿಮಾವನ್ನು ವೀಕ್ಷಿಸಿದಾಗ ಮೇಲೆ ಪ್ರಸ್ತಾಪಿಸಿರುವ ಪ್ರೇಮಕ್ಕೆ ಸಂಬಂಧಿಸಿದ ವಿಚಾರಗಳು ಮನಃಪಟಲದಲ್ಲಿ ಮೂಡಿದವು. ತೊಂಬತ್ತೆರಡು ನಿಮಿಷಗಳ ಈ ಸಿನಿಮಾ ವ್ಯಕ್ತಿಯೊಬ್ಬನ ಜಟಿಲ ಎನ್ನಬಹುದಾದ ಪ್ರೇಮ ಸಂಬಂಧಗಳ ಸುತ್ತ ಯಾನಿಸುವುದರಿಂದ ಈ ಸಿನಿಮಾಗೆ ʼ ಪ್ಯಾಸೇಜಸ್ ʼ ಎಂಬ ಶೀರ್ಷಿಕೆಯನ್ನು ನೀಡಿರಬಹುದು ಎಂದೆನಿಸಿತು.

ತೊಮಸ್( ನಟ ಫ್ರ್ಯಾಂಝ್ ರುಗೋವ್ಸ್ಕಿ) ಎಂಬ ಸಿನಿಮಾ ನಿರ್ದೇಶಕ ಬೈಸೆಕ್ಷುಯಲ್(ದ್ವಿಲಿಂಗಿ) ಆಗಿರುತ್ತಾನೆ. ಆತನ ಪತಿ ಬ್ರಿಟಿಷ್ ವಲಸಿಗ ಮಾರ್ಟಿನ್(ಖ್ಯಾತ ರಂಗಭೂಮಿ ನಟ ಬೆನ್ ವಿಷಾ). ಒಮ್ಮೆ ಒಂದು ಪಾರ್ಟಿಯಲ್ಲಿ ತೊಮಸ್ ಫ್ರೆಂಚ್ ಶಿಕ್ಷಕಿ ಅಗಾದೆ( ನಟಿ ಅಡೆಲ್ ಎಕ್ಸಾರ್ಕೊಪೌಲಾಸ್)ಯ ಜೊತೆ ನೃತ್ಯವನ್ನು ಮಾಡುತ್ತಾನೆ. ನಂತರ ನೇರವಾಗಿ ಹಾಸಿಗೆಯಲ್ಲಿ ಸಹಭಾಗಿಗಳಾಗುತ್ತಾರೆ. ಇಬ್ಬರ ನಡುವೆ ಅನುರಾಗ ಬೆಳೆಯುತ್ತದೆ. ತನ್ನ ಈ ಸಂಬಂಧವನ್ನು ತೊಮಸ್ ತನ್ನ ಪತಿಯೊಡನೆ ಹಂಚಿಕೊಳ್ಳಲು ಉತ್ಸುಕನಾಗಿರುತ್ತಾನೆ. ಮಾರ್ಟಿನ್ಗೆ ತಮ್ಮ ಸಂಬಂಧ ಡೋಲಾಯಮಾನವಾಗುತ್ತಿದೆ ಎಂದೆನಿಸುತ್ತದೆ. ತರುವಾಯ ಮಾರ್ಟಿನ್ಗೆ ಅಹಮ್ಮದ್ ಎಂಬ ಕಾದಂಬರಿಕಾರನೊಡನೆ ಸಂಬಂಧ ಏರ್ಪಡುತ್ತದೆ. ತೊಮಸ್ನಿಂದ ಅಗಾದೆ ಗರ್ಭವತಿಯಾಗುತ್ತಾಳೆ. ತೊಮಸ್ಗೆ ಮಾರ್ಟಿನ್ ಮೇಲೆ ಪ್ರೇಮ ಇದ್ದೇ ಇರುತ್ತದೆ. ಹಾಗೆಯೇ ಅಗಾದೆ ಬಗೆಗೆ ಕೂಡ. ಒಮ್ಮೆ ಮಾರ್ಟಿನ್ ಜೊತೆ ಮಾತನಾಡುವಾಗ ತಾವು ಮೂವರು ಒಟ್ಟಿಗೆ ಜೀವನವನ್ನು ನಡೆಸೋಣ ಎಂದು ತನ್ನ ಇಂಗಿತವನ್ನು ತಿಳಿಸುತ್ತಾನೆ. ಆದರೆ ಅದು ಮೂರ್ತವಾಗುವುದಿಲ್ಲ ಏಕೆಂದರೆ ಮಾರ್ಟಿನ್ ಇದಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾನೆ. ಅಂತಿಮವಾಗಿ ಈ ಮೂವರ ಪ್ರೇಮ ಸಂಬಂಧ ಹೇಗೆ ಮುಂದುವರೆಯುತ್ತದೆ ಎಂಬುದನ್ನು ಸಿನಿಮಾದ ಕ್ಲೈಮಾಕ್ಸ್ ತಿಳಿಸುತ್ತದೆ.
ಸಿನಿಮಾದ ಪ್ರಥಮ ದೃಶ್ಯದಲ್ಲಿ ತೊಮಸ್ ಒಬ್ಬ ನಟ ಮೆಟ್ಟಲುಗಳನ್ನು ಇಳಿಯುವಾಗ ಸಹಜವಾಗಿ ನಟಿಸುತ್ತಿಲ್ಲ ಎಂದು ಆತನ ಮೇಲೆ ಮುನಿಸನ್ನು ತೋರಿಸುತ್ತಾನೆ. ಆದರೆ ವಿಪರ್ಯಾಸವೆಂದರೆ ಆತ ತನ್ನ ಪ್ರೇಮ ಸಂಬಂಧಗಳ ಮೆಟ್ಟಲುಗಳನ್ನು ಬಳಸುವಾಗ ತಡಬಡಾಯಿಸುತ್ತಾನೆ! ಪ್ಯಾರಿಸ್ನಲ್ಲಿ ಜರಗುವ ಕಥನದಲ್ಲಿ ತೊಮಸ್ ಸಂಚರಿಸುವಾಗ ಸೈಕಲನ್ನೇ ಬಳಸುತ್ತಿರುತ್ತಾನೆ. ಬೇರೆ ವಾಹನಗಳಿಗಿಂತ ಸುಲಭವಾಗಿ ಸೈಕಲ್ ಎಲ್ಲಂದರಲ್ಲಿ ನುಗ್ಗಿಸಬಹುದು, ಸಹಜವಾಗಿ ಪಯಣಿಸಬಹುದು. ಇದು ಆತನ ಪ್ರೇಮ ಸಂಬಂಧಗಳಿಗೂ ಅನ್ವಯಿಸಬಹುದು! ತೊಮಸ್ನ ಕ್ಯಾರೆಕ್ಟರ್ ಆರ್ಕ್ ಸಂಕೀರ್ಣವಾದದ್ದು. ಆತ ತನ್ನ ಪ್ರೇಮ ಮತ್ತು ಹುಡುಕಾಟಗಳಲ್ಲಿ ತನ್ನೊಡನೆ ಅನುರಾಗದ ಸಂಬಂಧವನ್ನು ಹೊಂದಿರುವವರನ್ನು ಘಾಸಿಗೊಳಿಸುತ್ತಾನೆ ; ಒಂದರ್ಥದಲ್ಲಿ ತೀರ ಸ್ವಾರ್ಥಿಯಾಗಿ ನಡೆದುಕೊಳ್ಳುತ್ತಾನೆ! ಇಂತಹ ಸಂಕೀರ್ಣ ಪಾತ್ರವನ್ನು ರುಗೋವ್ಸ್ಕಿ ನಿಭಾಯಿಸಿರುವ ರೀತಿ ಗಮನಾರ್ಹವಾಗಿದೆ. ಹಾಗೆಯೇ ಬೆನ್ ಮತ್ತು ಅಡೆಲ್ ತಮ್ಮ ಪಾತ್ರಗಳಿಗೆ ಸರಿಹೊಂದುವಂತೆ ನಟಿಸಿದ್ದಾರೆ.

ಈ ಸಿನಿಮಾದಲ್ಲಿ ಪ್ರೇಮ, ನಿಷ್ಠೆ, ಸೆಕ್ಸ್, ದಾಂಪತ್ಯ ದ್ರೋಹ, ದ್ವಿಲಿಂಗತ್ವ, ಸಂಬಂಧಗಳ ತಿರುವು ಇತ್ಯಾದಿಗಳಿವೆ. ಸಲಿಂಗ ಕಾಮದ ಲಾಂಗ್ ಟೇಕ್ಗಳಿವೆ. ಒಂದು ಸ್ಥಿರವಾದ ಕೌಟುಂಬಿಕ ಬದುಕನ್ನು ನಿರೀಕ್ಷಿಸುವ ಅಗಾದೆ ಅಬಾರ್ಷನ್ಗೆ ಮೊರೆಹೋಗುತ್ತಾಳೆ. ಇದು ಈ ಸಿನಿಮಾದ ಪ್ರೇಮ ಸಂಬಂಧಗಳ ಮೊಟಕುಗೊಳಿಸುವಿಕೆಯನ್ನು ಸಂಕೇತಿಸುವಂತಿದೆ! ತೊಮಸ್ ಮತ್ತು ಅಗಾದೆಯ ನಡುವಿನ ಅನುರಾಗದ ಸಂಬಂದಕ್ಕೆ ಒಂದಿಷ್ಟು ಸಾವಯವ ಲೇಪನವನ್ನು ನೀಡಬಹುದಿತ್ತು. ನಿರ್ದೇಶಕರು ಪ್ರೇಮ ಸಂಬಂಧಗಳ ಬಗೆಗೆ ಜಡ್ಜ್ಮೆಂಟಲ್ ಆಗಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಕೇಂದ್ರ ಸರ್ಕಾರ ಸಲಿಂಗ ಸಂಬಂಧ ಮತ್ತು ವಿವಾಹದ ಬಗೆಗೆ ಯಾವ ತೆರನಾದ ನಿಲುವನ್ನು ತೆಗೆದುಕೊಂಡಿದೆ ಎಂಬ ವಿಷಯವೂ ವೀಕ್ಷಕರ ಮನಸ್ಸಿನಲ್ಲಿ ಹಾದುಹೋಗಬಹುದು!
ಅಮೆರಿಕಾದ ಮೋಷನ್ ಪಿಕ್ಚರ್ ಅಸೊಸಿಯೇಸನ್ ಫಿಲ್ಮ್ ರೇಟಿಂಗ್ ಸಂಸ್ಥೆ ಈ ಸಿನಿಮಾಗೆ NC-17 ರೇಟಿಂಗನ್ನು ನೀಡಿದೆ. ಅಂದರೆ ಹದಿನೇಳು ವರ್ಷಕ್ಕಿಂತ ಕಿರಿಯರು ಈ ಚಲನಚಿತ್ರವನ್ನು ವೀಕ್ಷಿಸುವಂತಿಲ್ಲ.
ಮಡಿವಂತ ವೀಕ್ಷಕರಿಗೆ ಈ ಸಿನಿಮಾವನ್ನು ಅರಗಿಸಿಕೊಳ್ಳುವುದು ತುಸು ಕಷ್ಟವಾದೀತು! ಆದರೆ ಇದರಲ್ಲಿರುವ ಪ್ರೇಮ ಸಂಬಂಧಗಳು ನಮ್ಮಲ್ಲಿ ಅನಾದಿ ಕಾಲದಿಂದಲೂ ಇವೆ ಎಂಬುದು ವಾಸ್ತವ ಸಂಗತಿ!






0 Comments