ದೀಪ್ತಿ ಭದ್ರಾವತಿ
ಜಿಕೆಆರ್ ಸರ್,
ಇಂತಹದ್ದೊಂದು ಬರಹವನ್ನು ನಿಮ್ಮ ಕುರಿತಾಗಿ ಬರೆಯುತ್ತೇನೆಂಬ ಸಣ್ಣ ಕಲ್ಪನೆಯೂ ಇರಲಿಲ್ಲ. ಧುತ್ತೆಂದು ದು:ಖದ ಕಡಲು ಮೊಗುಚಿ ಶೂನ್ಯ ಅಲೆಯೊಂದು ಆವರಿಸಿ ನಿಂತಿದೆ. ಬೆಳಿಗ್ಗೆ ಆನಂದ ಋಗ್ವೇದಿ ವಿಷಯ ತಿಳಿಸಿದಾಗ ಇರಲಿಕ್ಕಿಲ್ಲ ಅಂತಲೇ ಅನ್ನಿಸಿತು. ಆದರೆ ವಾಸ್ತವ ಬದಲಾಗಲಿಲ್ಲ. ಈಗ ಈ ಲೇಖನ ಬರೆವ ಹೊತ್ತಿಗೆ ನೀವು ನಿಲ್ದಾಣ ಬಿಟ್ಟು ಅದಾಗಲೇ ತಾಸುಗಳು ಕಳೆದಿವೆ. ರೇಡಿಯೋದ ಪ್ರದೇಶ ಸಮಾಚಾರದಲ್ಲಿ ನಿಮ್ಮ ಕುರಿತಾಗಿ ಸುದ್ದಿ ಪ್ರಸಾರವಾಗುತ್ತಿದೆ. ಅದನ್ನು ಕೇಳುತ್ತಲೇ ಇದನ್ನು ಬರೆಯುತ್ತಿದ್ದೇನೆ.
ನೀವು ಈಗ್ಗೆ ಐದು ವರ್ಷದ ಹಿಂದೆ ಭದ್ರಾವತಿ ಆಕಾಶವಾಣಿಗೆ ವರ್ಗವಾಗಿ ಬಂದ ಸುದ್ದಿ ತಿಳಿದಿತ್ತು. ಅದಾಗಲೇ ತಮ್ಮ ಹೆಸರು, ನಿಮ್ಮ ಗಂಭೀರ ಸ್ವಭಾವ ನನಗೆ ಚಿರಪರಿಚಿತವೂ ಆಗಿತ್ತು. ಹೀಗಾಗಿ ತಮ್ಮ ಕುರಿತಾಗಿ ಅಪಾರ ಭಯವೂ, ಗೌರವವೂ ನನ್ನೊಳಗಿತ್ತು. ಅದೇ ಕಾರಣಕ್ಕೆ ತಾವು ಬಂದು ಸುಮಾರು ವರ್ಷಗಳಾಗುತ್ತ ಬಂದರೂ ನಾನು ಆಕಾಶವಾಣಿಯ ಕಡೆಗೆ ಬಂದಿರಲೇ ಇಲ್ಲ. ನೀವು ಇದ್ದಿರಿ ಎನ್ನುವ ಕಾರಣಕ್ಕೆ ಅಲ್ಲಿಗೆ ಕವನವನ್ನು ಕತೆಯನ್ನು ಕಳಿಸುವುದು ನಿಲ್ಲಿಸಿದ್ದೆ. ಆದರೆ ಅದೊಂದು ದಿನ ಯಾರಿಂದಲೋ ನನ್ನ ಸಂಖ್ಯೆ ಪಡೆದ ನೀವು ಕವಿಗೆ ಓದಲಿಕ್ಕೆ ಬರಬೇಕು ಎಂದಿರಿ. ಆ ನಂತರ ನಾನು ತೀರ ಹೆದರುತ್ತಲೇ ಆಕಾಶವಾಣಿಗೆ ಬಂದಿದ್ದೆ. ನನ್ನ ಕಂಡ ಕೂಡಲೇ ಅಬ್ಬಾ ಈ ಊರಿನಲ್ಲಿ ದೀಪ್ತಿ ಎನ್ನುವ ಕವಿಯನ್ನು ಹುಡುಕುವಷ್ಟರಲ್ಲಿ ಒಂದು ವರ್ಷವಾಯಿತು ಎಂದಿರಿ. ಆ ದಿನ ನಾನು ಎಷ್ಟು ಹೆದರಿದ್ದೆನಂದರೆ ನೀವು ಎದುರು ಕೂತ ಕಾರಣಕ್ಕೆ ರೆಕಾರ್ಡಿಂಗ್ ಮಾಡುವುದು ಸಾಧ್ಯವಾಗದೇ ತೀರ ಬೆವೆತು ಇನ್ನೊಮ್ಮೆ ಬರುತ್ತೇನೆ ಎಂದು ಹೇಳಿ. ಆ ನಂತರ ನೀವು ಇಲ್ಲದ ಸಮಯದಲ್ಲಿ ಅಲ್ಲಿದ್ದ ಶಂಕರನಾರಯಣ ಸರ್ ಇದ್ದಾಗ ರೆಕಾರ್ಡಿಂಗ್ ಮುಗಿಸಿ ಬಂದಿದ್ದೆ.
ಆ ನಂತರ ಮತ್ತೆ ಮತ್ತೆ ಒದಗಿ ಬಂದ ಭೇಟಿಯ ಅವಕಾಶ ನಿಮ್ಮ ಕುರಿತಾಗಿ ನನಗಿದ್ದ ಅಷ್ಟೂ ಭಯವನ್ನು ಹೊಡೆದೋಡಿಸಿತು. ಗಂಟೆಗಟ್ಟಲೆ ನಿಮ್ಮೊಂದಿಗೆ ಸಾಹಿತ್ಯ ಚರ್ಚಿಸುವ ಮಟ್ಟಿಗೆ ನನಗೆ ಧರ‍್ಯ ಬಂದಿತ್ತು. ನಿಮ್ಮೆದುರು ನಾನು ಕೂತಾಗಲೆಲ್ಲ ನನಗೆ ನನ್ನ ಹಿರಿಯಣ್ಣನ ಜೊತೆ ಕೂತಿದ್ದೇನೆ ಅಂತಲೇ ಅನ್ನಿಸುತ್ತಿತ್ತು. ಅದೇ ಸಲಿಗೆಯಲ್ಲಿ “ಸರ್ ನಿಮ್ಮ ಧ್ವನಿ ನನಗಿಷ್ಟ” ಎಂದಿದ್ದೆ. ಅದಾದ ನಂತರ ಕೆಲವು ದಿನಗಳ ಮಟ್ಟಿಗೆ ನಿಮ್ಮ ಗಂಟಲು ಸಮಸ್ಯೆಯಿಂದಾಗಿ ಧ್ವನಿ ತಗ್ಗಿತ್ತು. ತುಂಬ ಒದ್ದಾಡಿ ಹೋಗಿದ್ದಿರಿ. ಆಗ ನಾನು ನಿಮ್ಮನ್ನು ನಗಿಸುವ ಸಲುವಾಗಿ “ನಿಮ್ಮ ಧ್ವನಿ ದೃಷ್ಟಿ ತಾಕಿರಬೇಕು” ಎಂದಿದ್ದ. ನೀವು ಜೋರು ನಕ್ಕಿದ್ದಿರಿ. ಹೀಗೆ ತಮಾಷೆಯಾಗಿ ನಡೆಯುತ್ತಿದ್ದ ನಮ್ಮ ಮಾತುಗಳ ನಡುವೆ ತಾವು ಗಂಭೀರವಾಗಿ ಮಾತನಾಡುತ್ತಿದ್ದದ್ದು ನನ್ನ ತಾಳ್ಮೆಯಿಲ್ಲದ ಅವಸರದ ಬರವಣಿಗೆಯ ಬಗ್ಗೆ. ಓದಬೇಕಾದ ಪುಸ್ತಕಗಳ ಬಗ್ಗೆ. ಲೇಖಕನಿಗಿರಬೇಕಾದ ಹುಡುಕಾಟದ ಬಗ್ಗೆ, ಸೃಜನಶೀಲತೆಯ ಬಗ್ಗೆ.. ಕಚೇರಿಯಲ್ಲಿ ಮಾತು ಸಾಧ್ಯವಾಗದ ಸಮಯದಲ್ಲಿ ಅಲ್ಲೆÃ ಹಿಂಬದಿಯಲ್ಲಿ ಇದ್ದ ನಿಮ್ಮ ಮನೆಯಲ್ಲಿ ಮತ್ತೆ ನಮ್ಮ ಮಾತು ಸಾಗುತ್ತಿತ್ತು. ಅದಕ್ಕೆ ಮಂದಾರವಲ್ಲಿ ಮೇಡಂನ ಕಾಫಿ ಮತ್ತು ಮಾತು ಜೊತೆಯಾಗುತ್ತಿತ್ತು.
ಒಂದಿಷ್ಟು ದಿನ ನಾನು ಅತ್ತ ಬರಲು ಸಾಧ್ಯವಾಗದೇ ಇದ್ದಾಗಲೆಲ್ಲ ಯಾಕೆ ಬರಲಿಲ್ಲ ದೀಪ್ತಿ ಎಂದು ಕರೆ ಮಾಡುತ್ತಿದ್ರಿ. ನನ್ನ ಹಲವಾರು ಕವಿತೆಗಳನ್ನು ತಿದ್ದಿದಿರಿ. ಅದಕ್ಕೆ ಶೀರ್ಷಿಕೆ ಇಟ್ಟಿರಿ. ನಿಮಗೆ ಕವಿತೆ ಬರೆಯುವಾಗ ಸಂಯಮ ಸಾಲದು ಎಂದಿರಿ.. ನನ್ನ ಪ್ರಕಟವಾದ ಎಲ್ಲ ಕತೆಗಳನ್ನು ಓದಿ ಅಭಿಪ್ರಾಯ ಹೇಳಿದಿರಿ. ಒಮ್ಮೆಯಂತೂ ನಾನು “ ಸರ್ ನನ್ನ ಕತೆಯೊಂದು ಪತ್ರಿಕೆಯಲ್ಲಿ ಪ್ರಕಟವಾಗಿದೆ ಆದರೆ ಅದರಲ್ಲಿ ಏನೋ ಕೊರತೆ ಇದೆ” ಎಂದು ಕರೆ ಮಾಡಿದಾಗ ಪಯಣದಲ್ಲೆಲ್ಲೋ ಇದ್ದ ನೀವು ಬಸ್ ಸ್ಟಾಂಡ್ ಒಂದರಲ್ಲಿ ಪತ್ರಿಕೆ ಕೊಂಡು ಒಂದು ಗಂಟೆಯಲ್ಲಿ ಓದಿ ಕರೆ ಮಾಡಿದ್ದಿರಿ. “ಬರೆಯಬೇಕು ದೀಪ್ತಿ ನೀವು ಇನ್ನಷ್ಟು ಚನ್ನಾಗಿ ನಿಮ್ಮದೇ ಭಾಷೆ ರೂಪಿಸಿಕೊಳ್ಳಬೇಕು, ಶೈಲಿ ರೂಪಿಸಿಕೊಳ್ಳಬೇಕು” ಎಂದಿರಿ.
ಆದರೆ ಸಣ್ಣ ಕೋಪವೆಂದರೆ ನೀವು ಕೊನೆಗೂ ಮನೆಗೆ ಬರಲಿಲ್ಲ. “ಹೇಗೂ ವೆಹಿಕಲ್ ಇದೆ, ಬಿಡುವಾದಾಗಲೆಲ್ಲ ನೀವೇ ಬಂದು ಬಿಡಿ ನಾವು ಹೊರಡುವುದೆಂದರೆ ದೊಡ್ಡ ಪ್ಲಾನ್ ಮಾಡಿದ ಹಾಗಿರತ್ತೆ ಎನ್ನುತ್ತಲೇ ಕಾಲ ತಳ್ಳಿದಿರಿ. ಆದರೆ ಇಲ್ಲಿಂದ ವರ್ಗವಾಗಿ ಹೊರಡುವ ಹಿಂದಿನ ದಿನ ಕರೆ ಮಾಡಿ ನಾಳೆ ಊಟ ನಿಮ್ಮ ಮನೆಯಲ್ಲಿ ಎಂದಿರಿ. ಆದರೆ ದುರಾದೃಷ್ಟಕ್ಕೆ ಅಂದು ನಾನು ಊರಿನಲ್ಲಿರಲಿಲ್ಲ. “ಸರಿ ಬಿಡಿ ಮತ್ತೆ ಬರುತ್ತೆÃವೆ” ಎನ್ನುತ್ತಲೇ ಊರು ಬಿಟ್ಟಿರಿ. ಬೆಂಗಳೂರಿಗೆ ಹೋದ ಮೇಲೆಯೂ ನಿಮ್ಮ “ತಾರಸಿ ಮಲ್ಹಾರ್” ಪುಸ್ತಕ ಬಂದ ತಕ್ಷಣಕ್ಕೆ ಅನನ್ಯನ (ಮಗ) ಕಡೆ ಅದನ್ನು ಕೊಟ್ಟು ನನಗೆ ತಲುಪಿಸುವಂತೆ ತಿಳಿಸಿದ್ದಿರಿ. ಕವಿತೆಗಳ ತರಿಸಿಕೊಂಡು ಅದಕ್ಕೆ ಧ್ವನಿ ಕೊಡಿಸಿದಿರಿ. ಪ್ರತಿ ಹೆಜ್ಜೆಯಲ್ಲು ಪ್ರೊÃತ್ಸಾಹಿಸುತ್ತಲೇ ಹೋದಿರಿ. ಆದರೆ ನೀವು ಕೇಳಿದ ಆ ನಂತರವೂ ನಾನು ನನ್ನ ಪುಸ್ತಕ ತಲುಪಿಸಲಿಲ್ಲ. “ಸರ್ ಬೆಂಗಳೂರಿಗೆ ಬಂದಾಗ ಖುದ್ದು ಕೊಡುತ್ತೆÃನೆ ಎನ್ನುತ್ತಲೇ ಕಾಲ ತಳ್ಳಿದೆ”
ಈಗ…ಎಲ್ಲವೂ ಹಾಗೆ ಉಳಿದು ಹೋಯಿತು ಸರ್
ವಿದಾಯ ಹೇಳಲಾರೆ
ಮಂದಾರವಲ್ಲಿ ಮೇಡಂ ಗೆ ಅನನ್ಯಗೆ ನೋವು ಭರಿಸುವ ಶಕ್ತಿ ಬರಲಿ ಎಂದು ಹಾರೈಸುವೆ..
ದೀಪ್ತಿ
ಸರ್.. ವಿಳಾಸ ತಿಳಿಸಿ ಪ್ಲೀಸ್..
ಸ್ಮಿತಾ ಅಮೃತರಾಜ್, ಸಂಪಾಜೆ
ಸರ್, ನಂಬಲಗುತ್ತಿಲ್ಲ. ಇದು ನಿಜವಾ?. ನೀವು ಹೋದ ದ್ದಾದರೂ ಎಲ್ಲಿಗೆ?. ಹೀಗೆ ಹೇಳದೇ ಕೇಳದೇ..
ನೀವು ಮಡಿಕೇರಿ ಆಕಾಶವಾಣಿಯಲ್ಲಿ ಇದ್ದಷ್ಟು ದಿನ ಬಾನೂಲಿಯಿಂದ ನಿಮ್ಮ ಕಂಚಿನ ಕಂಠ ಕೇಳಿದ್ದೆನೇ ಹೊರತು ನಿಮ್ಮ ಪರಿಚಯವಾಗಿರಲಿಲ್ಲ. ನೀವು ಭದ್ರಾವತಿ ಆಕಾಶವಾಣಿಗೆ ಹೋದ ಮೇಲೆ ಮಡಿಕೇರಿಗೊಮ್ಮೆ ಸಾಹಿತ್ಯ ಕಾರ್ಯಕ್ರಮಕ್ಕೆ ಬಂದಿದ್ರಿ. ಒಂದೇ ವೇದಿಕೆಯಲ್ಲಿ ನಿಮ್ಮೊಂದಿಗೆ ಕುಳಿತುಕೊಳ್ಳುವ ಭಾಗ್ಯ. ಅಲ್ಲಿಯೇ ನಿಮ್ಮನ್ನು ಮೊದಲು ಮುಖ:ತ ಬೇಟಿಯಾದದ್ದು. ನನ್ನ ಉಪನ್ಯಾಸವನ್ನು ಮೆಚ್ಚಿಕೊಂಡು ಕಿರಿಯಳಾದ ನನಗೂ ಪ್ರೋತ್ಸಾಹದ ಮಾತುಗಳನ್ನ ಆಡಿದ್ರಿ. ನನ್ನ ಕವಿತೆ ಸಂಕಲನವನ್ನು ನಿಮಗೆ ಅಲ್ಲಿಯೇ ಕೊಟ್ಟ ನೆನಪು. ೫-೬ ವರುಷದ ಬಳಿಕ ಮೊನ್ನೆ ಮೊನ್ನೆ ಮಾರ್ಚಿನಲ್ಲಿ ಸುಂದರ ಪ್ರಕಾಶನದ ಸಾಹಿತ್ಯ ಕಾರ್ಯಕ್ರಮದಲ್ಲಿ ನಿಮ್ಮನ್ನು ದೂರದಿಂದ ನೋಡಿದ್ದೆ. ನಿಮ್ಮನ್ನು ಮಾತನಾಡಿಸಬೇಕೆಂದು ಓಡೋಡಿ ಬರುವಷ್ಟರಲ್ಲಿ ನೀವು ಮಂದೆ ಮುಂದೆ ಸಾಗುತ್ತಾ ಕವಿ ಮಿತ್ರರ ಗುಂಪಿನಲ್ಲಿ ಮರೆಯಾದಿರಿ. ಯಾಕೋ ಆವತ್ತು ಸಣ್ಣಗೆ ಬೇಸರ ಆಗಿತ್ತು.
ಇತ್ತೀಚೆಗೆ ಎರಡು ತಿಂಗಳ ಹಿಂದೆ ಮೆಸೇಜಿಸಿ ಆಕಾಶವಾಣಿಗೆ ಭಾವಗೀತೆ ಬರೆದು ಕೊಡುವಿರಾ ಸ್ಮಿತಾ? ಅಂದಿದ್ರಿ. ಬರೆದ ಮೂರು ಗೀತೆಗಳನ್ನ ಮೆಚ್ಚಿಕೊಂಡು ನಿಮ್ಮ ಕವಿತೆಗಳು ಮಾರ್ಧವ ಭಾವ ಮತ್ತು ಚೊಕ್ಕ ನಿರ್ವಹಣೆಯಿಂದ ಮನಸೆಳೆಯುತ್ತದೆ ಅಂತ ಆತ್ಮವಿಶ್ವಾಸದ ಮಾತುಗಳನ್ನ ಆಡಿದ್ರಿ. ಮತ್ತಷ್ಟು ಭಾವಗೀತೆ ಬರೆದು ಕಳಿಸುವೆ, ಆಯ್ಕೆ ಮಾಡಿ ಬಳಸಿಕೊಳ್ಳಿ ಅಂದಿದ್ದೆ. ಅದು ಸರಿ. ಹಾಗೇ ಮಾಡಿ ಸ್ಮಿತಾ ಅಂದಿದ್ರಿ.
ಸರ್.. ನೀವು ಹೇಳಿದಂತೆ ಒಂದಷ್ಟು ಭಾವಗೀತೆ ಬರೆದಿರುವೆ. ಬರೆಯುತ್ತಿರುವೆ. ಸರ್,. ನಿಮ್ಮ ವಿಳಾಸ ತಿಳಿಸಿ ಪ್ಲೀಸ್.. ಪ್ಲೀಸ್..
ನೀವಿಲ್ಲ ಇಲ್ಲಿ, ಬಾರದೂರಿಗೆ ಹೋಗಿರುವಿರಿ ಅಂತ ಲೋಕ ಕಣ್ಣೀರಿಡುತ್ತಿದೆ. ‘ಕದವಿಲ್ಲದ ಊರಲ್ಲಿ ‘, ‘ಮರವನ್ನಪ್ಪಿದ ಬಳ್ಳಿ ‘, ‘ತಾರಸಿ ಮಲ್ಹಾರ ‘. ನೀವು ನಮ್ಮ ನಡುವೆ ಬದುಕಿಯೇ ಇದ್ದೀರ ಅನ್ನುವುದನ್ನ ಮತ್ತೆ ಮತ್ತೆ ಸಾಬೀತು ಪಡಿಸುತ್ತಿದೆ.
-ಸ್ಮಿತಾ ಅಮೃತರಾಜ್. ಸಂಪಾಜೆ.
ನಾಗರಾಜ ಹರಪನಹಳ್ಳಿ
ಕವಿ ಜಿ.ಕೆ. ರವೀಂದ್ರ ಕುಮಾರ್ ಅವರ ಸಾವಿನ ಕುರಿತು ವ್ಯಾಟ್ಸಾಪ್, ಎಫ್‍ಬಿ ಯಲ್ಲಿ ಸುದ್ದಿ ಹರಿದಾಡಿದಾಗ ನಂಬಲಾಗಲಿಲ್ಲ. 1993-95 ರ ಅವಧಿಯಲ್ಲಿ ರವೀಂದ್ರ ಕುಮಾರ್ ಅವರು ಕಾರವಾರ ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು. ತುಂಬಾ ಒಳ್ಳೆಯ ಮನುಷ್ಯರು.
ಹೊಸಬರಿಗೆ ಆಕಾಶವಾಣಿಯಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಿದ್ದರು. ಅವರ ಕವನ ಸಂಕಲನ ಸಿಕಾಡ ಪ್ರಕಟವಾದುದು ಅವರು ಉತ್ತರ ಕನ್ನಡದಲ್ಲಿದ್ದಾಗ. ಅವರು ವಿಜ್ಞಾನದ ವಿದ್ಯಾರ್ಥಿ. ಸಾಹಿತ್ಯದ ಓದುಗ. ಅವರು ಹಠಾತ್ ನಿರ್ಗಮನ ದುಃಖ ತಂದಿದೆ. ಅವರು ಇನ್ನಿಲ್ಲ ಎಂದರೆ ನಂಬಲಾಗುತ್ತಿಲ್ಲ.
ಆಕಾಶವಾಣಿ ಕಾರವಾರದಲ್ಲಿ ನಾವು ಭಾಗಿಗಳಾಗುಂತೆ ಮಾಡಿದ್ದರು.
ಕಾಪ್ಕನ ತಪ್ಪಿದ ಎಳೆಯ ನಾಟಕ ಅವರ ಸಾವಿನ ಕ್ಷಣಕ್ಕೆ ನೆನಪಾಯಿತು. ಬದುಕು ಆಶಾಶತ್ವವಾದುದು. ಅಸ್ತಿತ್ವಕ್ಕಾಗಿ ಹೋರಾಡುವುದೇ ಬದುಕು ಎಂಬುದು ನೆನಪಿಸುವಂತೆ ರವೀಂದ್ರ ಕುಮಾರ್ ತಣ್ಣಗೆ ಹೊರಟು ಹೋಗಿದ್ದಾರೆ. ಸಾವು ಕ್ರೂರಿ ಎಂಬುದನ್ನು ಬದುಕಿದ್ದವರಿಗೆ ನೆನಪಿಸುತ್ತಾ ಎದ್ದು ಹೋಗಿದ್ದಾರೆ.
ಅವರ ಕವನ ಈಚೆಗೆ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು. ಕತೆ ಮುಗಿದ ಮೇಲೆ ಎಂಬ ಕವಿತೆಯನ್ನು ಅವರು ಸಾವಿಗೆ ಹತ್ತಿರವಾಗುವ ಸುಳಿವು ಕೊಟ್ಟಂತೆ ಬರೆದರೋ ಎಂಬಂತೆ ಇದೆ. ಅವರ ಅಗಲಿಕೆ ಅಪಾರ ನೋವು ತಂದಿದೆ.
Avara atmakke shanthi sigali avra kutambakke kastagalannu edarisuva shakti kodali