ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೋಸದ ಮದುವೆ ಮತ್ತು ಸಂಸಾರ ಕಾಪಾಡುವ ನಾಯಿ!

ರಾಜೇಶ್ವರಿ ಹುಲ್ಲೇನಹಳ್ಳಿ

**

 ಕಾರ್ ಪಾರ್ಕ್ ಮಾಡಿದ ಧಾತ್ರಿ ತನ್ನ ಛೆಂಬರಿನತ್ತ ಹೆಜ್ಜೆ ಹಾಕಿದಾಗ ಒಳಗೆ ಬಹಳ ಡೀಪ್ ಡಿಸ್ಕಷನ್ ನಡೀತಿತ್ತು. ಅವಳನ್ನೇ ಎದುರು ನೋಡುತ್ತಿದ್ದ staff ಮಾತು ನಿಲ್ಲಿಸಿದರು. ಅದು ಕಾಲೇಜಿನ ಅಡ್ಮಿಷನ್ ಸಮಯ ತರಗತಿಗಳನ್ನು ತೆಗೆದುಕೊಳ್ಳುವ ಗೋಜಿರಲಿಲ್ಲ ಪ್ರತಿಯೊಂದು ವಿಭಾಗದ ಬೇರೆ ಬೇರೆ ಸಮಸ್ಯೆಗಳು ಮುಂದಿನ ಸಾಲಿನ ಕೆಲವೊಂದು ರೂಪುರೇಷೆಗಳನ್ನು ಚರ್ಚಿಸುವುದಿತ್ತು. ಇದುವರೆಗೆ ಯಾವ ಯಾವ ವಿಭಾಗಗಳಿಗೆ ಎಷ್ಟು ವಿದ್ಯಾರ್ಥಿನಿಯರ ಅಡ್ಮಿಷನ್ ಆಗಿದೆ ಹೀಗೇ ಹಲವಾರು ಸಂಗತಿಗಳ ಕುರಿತು ವಿಷಯ ವಿನಿಮಯ ಮಾಡುವುದಿತ್ತು. ಈ ಕುರಿತಾಗಿ ಎಲ್ಲ Department heads ಹಾಗೂ ಎಲ್ಲ ವಿಭಾಗದ Lecturer’s Lab Assistants  ಎಲ್ಲರನ್ನೂ ಛೆಂಬರ್ ಗೆ ಬರಲು ಹೇಳಿದ್ದೆ. ಎಲ್ಲರೂ ಹೇಳಿದ ಸಮಯಕ್ಕಿಂತ ತುಸು ಮೊದಲೇ ಬಂದ ಹಾಗಿತ್ತು. ಆದರೆ ಅಲ್ಲಿ ನಡೆಯುತ್ತಿದ್ದ ಚರ್ಚೆಯೇ ಬೇರೆಯದಾಗಿತ್ತು. ನಾನು ಹೋದೊಡನೆ ಎಲ್ಲರೂ ತಮ್ಮ ಚರ್ಚೆಗೆ ವಿರಾಮ ಹಾಕಿ ಎದ್ದು ನಿಂತು Good morning ಹೇಳಿದರು. ಎಲ್ಲರನ್ನೂ ಕೂರಲು ಹೇಳಿ ಮುಂದಿನ ಚರ್ಚೆಯನ್ನು ಆರಂಭಿಸಿದೆವು.

ಕೆಲವೊಂದು ಗ್ರಾಮೀಣ ಶಾಲೆಗಳಿಗೆ ಭೇಟಿಯಿತ್ತು ಡಿಪ್ಲೋಮಾ ಶಿಕ್ಷಣದಿಂದ ಪಡೆಯುವ ಉದ್ಯೋಗಾವಕಾಶಗಳು ಹಾಗೂ ಇಲ್ಲಿ ಹಿಂದೆ ಡಿಪ್ಲೊಮಾ ಕಲಿತು ಉತ್ತಮ ಉದ್ಯೋಗಗಳನ್ನು ಪಡೆದು ಉತ್ತಮ ಸ್ಥಾನಗಳಲ್ಲಿರುವ ಸಾಧಕರ ವೀಡಿಯೋಗಳನ್ನು ಪ್ರದರ್ಶಿಸಿ ದೂರದ ಗ್ರಾಮೀಣ ಪ್ರದೇಶದಿಂದ ಬರುವ ಹೆಣ್ಣುಮಕ್ಕಳಿಗೆ ವಸತಿ ನಿಲಯದ ವ್ಯವಸ್ಥೆಯನ್ನು ಒದಗಿಸುವ ಕುರಿತು ತಿಳಿಸಿ ಒಂದು ಅಭಿಯಾನವನ್ನು ಮಾಡಿದ್ದರ ಫಲವಾಗಿ ಎಲ್ಲ ವಿಭಾಗಗಳಲ್ಲಿ ಕಳೆದ ಸಾಲಿಗಿಂತ ಈ ಸಾಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಡ್ಮಿಷನ್  ಆಗಿದ್ದುದಕ್ಕೆ ಎಲ್ಲರನ್ನೂ ಅಭಿನಂದಿಸಿ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯ್ತು. ಅಷ್ಟರಲ್ಲಿ ಅಟೆಂಡರ್ ಕಾಫಿ ಬಿಸ್ಕೆಟ್ ಸರಬರಾಜು ಮಾಡಿದರು. ಕಾಫಿ ಬಿಸ್ಕೆಟ್  ಮುಗಿಸಿ  Gents Staff  ಎಲ್ಲ ಹೊರ ಹೋದರು. ನಾವು ಮಹಿಳೆಯರು ಮಾತ್ರ ಇದ್ದೆವು ನಾನು ಪ್ರಿನ್ಸಿಪಾಲ್ ಆಗಿದ್ದರೂ ಕಾಲೇಜಿನ ಎಲ್ಲ Staff ನೊಂದಿಗೆ ಉತ್ತಮವಾದ ಬಾಂಧವ್ಯವಿದ್ದ ಕಾರಣ. ನಾನು ಛೇಂಬರಿಗೆ ಎಂಟ್ರಿ ಆಗುವ ಮೊದಲು ಏನೋ ಡೀಪ್ ಡಿಸ್ಕಷನ್ ನಡೆಯುತ್ತಿದ್ದ ವಿಷಯವೇನೆಂದು Casual ಆಗಿ ಕೇಳಿದೆ.

ಓದುವಾಗ ನನ್ನ ಜ್ಯೂನಿಯರ್ ಆಗಿ ಈಗ Department head ಆಗಿರುವ ಪ್ರವಲ್ಲಿಕ ಏನಿಲ್ಲ ಮೇಡಂ ಮೊನ್ನೆಯಷ್ಟೇ ರಿಲೀಸ್ ಆಗಿರುವ ಕನ್ನಡ ಸಿನೆಮಾ ಚಾರ್ಲಿಯ ಕುರಿತು ಚರ್ಚಿಸುತ್ತಿದ್ದೆವು ಎಂದರು. ಚಾರ್ಲಿಯ ಕುರಿತು ಒಬ್ಬೊಬ್ಬರಿಂದ ಒಂದೊಂದು ರೀತಿಯ ಪಾಸಿಟಿವ್ ಅಭಿಪ್ರಾಯ  ತೇಲಿಬಂತು. ಸಷ್ಮಾ, “ಮೇಡಂ ನೀವು ನೋಡಿದ್ರಾ ಎಂದಾಗ, ಇಲ್ಲಾ ನಾನು ಹೆಚ್ಚು ಸಿನೆಮಾ ನೋಡುವುದಿಲ್ಲ ಎಂದೊಡನೆ, ಇಲ್ಲ ಮೇಡಂ  ನೀವು ಖಂಡಿತಾ ಆ ಸಿನೆಮಾ ನೋಡಲೇಬೇಕು ತುಂಬಾ ಭಾವನಾತ್ಮಕವಾದ ಸಿನೆಮಾ”ಎಂದರು. ಹೌದಾ ಅಂಥಹ ವಿಶೇಷವೇನು ಎಂದೆ. ಒಂದು ನಾಯಿ ಮತ್ತು ಹೀರೋ ಇಬ್ಬರ ನಡುವಿನ ಭಾವನಾತ್ಮಕ ನಟನೆ ತುಂಬಾ ಅದ್ಭುತ! ಮೇಡಂ ಎಂದರು. ಹಾಗೇ ಎಲ್ಲರೂ ಸೇರಿ ಹೆಚ್ಚು ಕಡಿಮೆ ಸಿನೆಮಾ ಸಾರಾಂಶವನ್ನ ಹೇಳಿಯೇ ಬಿಟ್ಟರು. ಹೌದು ಪ್ರಾಣಿಗಳು ಮುಷ್ಯನಿಗಿಂತ ಹೆಚ್ಚು ಭಾವನಾತ್ಮಕ ಸಂಬಂಧಗಳನ್ನಿಟ್ಟು ಕೊಂಡಿರುತ್ತವೆ ಎಂದು ನಾನೂ ದನಿಗೂಡಿಸಿದೆ. ಎಲ್ಲರೂ ಹೌದೆಂದರು.

ಪ್ರತಿಭಾ, ಮೇಡಂ ನನ್ನ ಮಕ್ಕಳಂತೂ ಸಿನೆಮಾ ನೋಡುತ್ತಾ ಅತ್ತೇ ಬಿಟ್ಟರು ಎಂದರೆ, ಗ್ರೀಷ್ಮ ಮೇಡಂ, “ನನ್ನ ಮಗ ಮೂರು ದಿನದಿಂದ ಊಟ ತಿಂಡಿ ತಿನ್ನದೇ ಒಂದೇ ಹಠ ಮನೆಗೆ ನಾಯಿ ತರಬೇಕೆಂದು ಎಷ್ಟು ಸಮಾಧಾನಿಸಿದರೂ ಆಗುತ್ತಿಲ್ಲ ನಾವಿಬ್ಬರೂ ಹೊರಗೆ ಹೋಗುವವರು ಮಗ ಶಾಲೆಗೆ, ಮನೆಯಲ್ಲಿ ಬೇರಾರೂ ಇಲ್ಲ ನಾಯಿಯನ್ನು ತಂದರೆ ಅದನ್ನು ನೋಡಿಕೊಳ್ಳುವವರ್ಯಾರು ಎಂದರೆ ಕೇಳುತ್ತಿಲ್ಲ ಮೇಡಂ. ನಾನೇ ನೋಡ್ಕೋತಿನಿ, ನಾನೇ ಕ್ಲೀನ್ ಮಾಡ್ತಿನಿ ಅಂತ ಒಂದೇ ಸಮನೆ ಹಠ ಮಾಡ್ತಿದಾನೆ. ಅವನ ಹಠಕ್ಕೆ ಈಗ ಏನು ಮಾಡೋದೋ ತಿಳಿಯುತ್ತಿಲ್ಲ.” ಎಂದಾಗ ಹೋಗಲಿ ಒಂದು ಬೀದಿ ನಾಯಿ ಮರಿಯನ್ನು ತನ್ನಿ ಹೇಗಾದ್ರೂ ಸಾಕಬಹುದು. ಅವುಗಳು ಹೇಗೊ ಅಡ್ಜೆಸ್ಟ ಆಗ್ತವೆ. ತುಂಬಾ ಸೂಕ್ಷ್ಮವಲ್ಲವಾದ್ದರಿಂದ ಹೇಗೋ ಮ್ಯಾನೇಜ್ ಮಾಡಬಹುದು ಅದನ್ನೇ ಸಾಕಿ ಎಂದೆ. ವತ್ಸಲ, ಮೇಡಂ ನೀವು ನೋಡಲಿಲ್ವಾ ನಮ್ಮ C.M. ಬಸವರಾಜ್ ಬೊಮ್ಮಾಯಿ ಸರ್ ಕೂಡ ಸಿನೆಮಾ ನೋಡಿ ಕಣ್ಣೀರಿಟ್ಟರಂತೆ. ಅವರು ಕಣ್ಣು ಒರೆಸಿ ಕೊಳ್ಳುತ್ತಿರೋ ದೃಶ್ಯ News ಆಯ್ತಲ್ಲಾ  ಮೇಡಂ ಎಂದರು. ಹೇಗೂ ಮಕ್ಕಳು ಹೊರಗಿದ್ದಾರೆ ನೀವೂ ಸರ್ ಹೋಗಿ ನೋಡಿ ಮೇಡಂ ಎಂದರು. ಸರಿ ಖಂಡಿತಾ ನೋಡುವೆ ಎಂದೆ. 

ಅದಕ್ಕಿಂತಲೂ ಭಾವನಾತ್ಮಕ ಕಥೆಯೊಂದಕ್ಕೆ ಸಾಕ್ಷೀಭೂತಳಾಗಿ ನಾನಿರುವೆ ಎಂದುಕೊಂಡೆ ಮನಸಿನಲ್ಲೇ! ಅವರೆಲ್ಲ ಹೇಳಿದ ಸಿನಿಮಾದ ಕಥೆಗಿಂತ ನಾನು  ಕಣ್ಣಾರೆ ಕಂಡ ನಾಯಿಯ ನೈಜ ಕಥೆಯ ನೆನಪಾಯ್ತು. ಹಾಗೇ ಆ ನಾಯಿ ನನ್ನ ಬದುಕಿಗೊಂದು ಬೇರೆಯದೇ ನಿರ್ಧಾರವನ್ನು  ನೀಡಿದ್ದು ಕೂಡ ನೆನಪಾಯ್ತು! ಅಂದು ಶನಿವಾರ, ಕಾಲೇಜಿನಿಂದ ಮಧ್ಯಾಹ್ನವೇ ಬಂದವಳು ಗೇಟ್ ತೆಗೆಯುತ್ತಿದ್ದಂತೆ ಕಾಂಪೌಂಡಿನಲ್ಲಿದ್ದ ಬ್ರೌನಿ ಬೊಗಳುತ್ತಾ ನನ್ನ ಸುತ್ತಾ ನೆಗೆಯತೊಡಗಿದ. ಬ್ಯಾಗಿನಿಂದ ಬಿಸ್ಕೇಟ್ ತೆಗೆದು ಕೊಡಲೆಂದು. ಹೊರಗಿನಿಂದ ಬಂದಾಗ ಮಕ್ಕಳಿಗೆ ತರುವಂತೆ ಬಿಸ್ಕೆಟ್ ತಂದು ಬ್ರೌನಿಗೆ ಕೊಡುವುದು ಅಭ್ಯಾಸ.  ಜಿ.ಪಿ.ರಾಜರತ್ನಂ ರವರ ಪದ್ಯ “ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ?/ ತಿಂಡಿ ಬೇಕು, ತೀರ್ಥ ಬೇಕು ಎಲ್ಲ ಬೇಕು./ ನಾಯಿ ಮರಿ ನಿನಗೆ ತಿಂಡಿ ಏಕೆ ಬೇಕು?/ ತಿಂದು ಗಟ್ಡಿಯಾಗಿ ಮನೆಯ ಕಾಯಬೇಕು.”ಎನ್ನುವಂತೆ ನನ್ನನ್ನೂ ನನ್ನ ಮನೆಯನ್ನೂ ರಕ್ಷಿಸುತ್ತಿದ್ದ ನನ್ನ ಬ್ರೌನಿಗೆ ನಿತ್ಯ ಬಿಸ್ಕೆಟ್ ಬೇಕಿತ್ತು!

ಮನೆಯ ಹೊಳ ಹೊಕ್ಕರೆ ಮನೆಗೆಲಸದ ಗಂಗಿ ಬಂದು ಬಟ್ಟೆ ತೊಳೆದು ಹೋದ ಯಾವ ಕುರುಹೂ ಕಾಣಲಿಲ್ಲ. ಬ್ರೌನಿ ಗಂಗಿ ಬರಲಿಲ್ವೇನೋ ಎಂದೆ. ಅದು ತನ್ನದೇ ಶೈಲಿಯಲ್ಲಿ ಬೊಗಳಿತು. ಯುಟಿಲಿಟಿಯಲ್ಲಿದ್ದ ಬಟ್ಟೆಗಳ ರಾಶಿ ಹಾಗೆಯೇ ಬಿದ್ದಿತ್ತು. ನಾನಿದ್ದಾಗ ಬಂದು ಪಾತ್ರೆ ತೊಳೆದು ಕಸ ಗುಡಿಸಿ ನೆಲ ಒರೆಸಿ ಹೋಗುವಳು. ಬಟ್ಟೆ ಯುಟಿಲಿಟಿಯಲ್ಲಿರುತ್ತಿತ್ತು ಹೊರಗಿನಿಂದ ಬಂದು ಬಟ್ಟೆ ತೊಳೆದು ಹೋಗುತ್ತಿದ್ದ ಗಂಗಿ ಮೂರು ದಿನಗಳಿಂದ ನಾಪತ್ತೆ. ಒಮ್ಮೆಲೇ ರೇಗಿ ಹೋಯ್ತು. ಒಂದು ದಿನ ಬರವುದಿಲ್ಲವೆಂದವಳು ಮೂರು ದಿನಗಳಾದರೂ ನಾಪತ್ತೆ. ಊಟ ಮಾಡಿ ತುಸು ನಿದ್ರಿಸಿ ಎದ್ದು‌ ಕಾಫಿ ಕುಡಿದವಳು ಸರಿ ಹಾಗಾದ್ರೆ ಅಲ್ಲೇ ತುಸು ಹತ್ತಿರವೇ ಇದ್ದ ಗಂಗಿಯ ಮನೆಗೆ ಹೋಗಿಯೇ ಬರೋಣ ಇದ್ದರೆ ಜೊತೆಯಲ್ಲಿಯೇ ಕರೆದುಕೊಂಡು ಬಂದರಾಯ್ತು, ಹಾಗೆಯೇ ಸಂಜೆಯ ವಾಕ್ ಕೂಡ ಆದಂತಾಗುವುದೆಂದು ಅವಳ ಮನೆಯ ಹಾದಿ ಹಿಡಿದೆ. ಅದೊಂದು ವಠಾರ ಚಿಕ್ಕ ಚಿಕ್ಕ ಮನೆಗಳ ಸಾಲು ಅಲ್ಲಿ ಬೆಕ್ಕು, ನಾಯಿ, ಕುರಿ ಕೋಳಿಗಳ ಆವಾಸ ಕೂಡ. ವಠಾರ ತಲುಪಿ  ಹತ್ತಾರು ಮನೆ ದಾಟಿ ಅವಳ ಮನೆಯ ಬಳಿ ಹೋಗುವಷ್ಟರಲ್ಲಿ ಮನೆಯ ಮುಂದೆ ಜೋರು ಜೋರು ಕೂಗಾಟ ಕೇಳಿ ಬರುತ್ತಿತ್ತು.

ಅವಳ ಗಂಡನೆನ್ನುವ ಭೈರ ಜೋರು ಜೋರಾಗಿ ಅವಾಚ್ಯ ಶಬ್ಧಗಳಿಂದ ಅವಳನ್ನು ಬೈಯ್ಯುತ್ತಾ ಅವಳನ್ನು ಹೊಡೆಯಲು ಹೋಗುತ್ತಿದ್ದಂತೆ ಅವಳ ಮನೆಯ ನಾಯಿ ಅವನನ್ನು ಅಡ್ಡ ಗಟ್ಟಿ ಅವನು ಹೊಡೆಯಲು ಹತ್ತಿರಕ್ಕೆ ಬಾರದಂತೆ   ಬೊಗಳುತ್ತಾ  ಎಗರಿ ಎಗರಿ ಅವನನ್ನು ತಡೆಯುತ್ತಿತ್ತು.   ಅವನು ಕುಡಿದ ಮತ್ತಿನಲ್ಲಿ ಮತ್ತೆ ಮತ್ತೆ ತೂರಾಡುತ್ತಾ ಅವಾಚ್ಯವಾಗಿ ಬೈಯ್ಯುತ್ತಾ “ಏಯ್ ಕೊಡೆ ಮುಂಡೆ ದುಡ್ಡೆಲ್ಲಿ ಮುಚ್ಚಿಟ್ಟಿದಿಯ ಕೊಡೆ ಕೊಡೆ.” ಎಂದು ಅವಳನ್ನು ಹೊಡೆಯಲು ಹತ್ತಿರ ಹೋದಂತೆಲ್ಲಾ ಆ ನಾಯಿ ಅವನನ್ನು ಒಂದು ಹೆಜ್ಜೆಯೂ ಮುಂದೆ ಹೋಗದಂತೆ ಬೊಗಳುತ್ತಿತ್ತೋ ಅಥವಾ ಅದರದೇ ಆದ ಭಾಷೆಯಲ್ಲಿ ಅವನಿಗೆ ಉಗುಳುತ್ತಿತ್ತೋ ಏನೋ ತಿಳಿಯೆ! ಆ ದೃಶ್ಯ ಮಾತ್ರ ವಿಚಿತ್ರವಾಗಿತ್ತು. ಗಂಗಿಯ ತೊಡೆಯ ಮೇಲಿದ್ದ ಎರಡು ವರ್ಷದ ಹೆಣ್ಣು ಮಗು ಅವನು ಹೊಡೆಯಲು ಬಂದಂತೆಲ್ಲಾ ಅಳುತ್ತಿತ್ತು. ಪಕ್ಕದಲ್ಲಿ ನಿಂತಿದ್ದ ನಾಲ್ಕು ವರ್ಷದ ಗಂಡು ಮಗು ಹೆದರಿ ನಡುಗುತ್ತಾ “ಅಪ್ಪಾ ಬ್ಯಾಡ ಕಣಪ್ಪಾ ಅವ್ವುನ್ನಾ ಹೊಡಿಬ್ಯಾಡ ಕಣಪ್ಪಾ“ಎಂದು ಗೋಳಾಡುತ್ತಿತ್ತು. ಅವನು ಹೊಡೆಯಲು ಕೈ ಎತ್ತಿದಂತೆಲ್ಲಾ ನಾಯಿ ಜೋರಾಗಿ ಬೊಗುಳಿ ಅಡ್ಡ ನಿಂತಾಗ ಅವನು, “ನನ್ ಮಗಂದ್ ನನ್ಗೇ ಬೊಗಳ್ತಿಯಾ, ಲೇ ನಿನ್ಗೆ ತಿನ್ನಕ್ಕಾಕೋನ್ ನಾನು ನನ್ಗೇ ಬೊಗುಳ್ತಿಯಾ? ಆ ಮುಂಡೆ ಒಂದಿನ ನಿನ್ಗೆ ಅನ್ನ ಆಕಿಲ್ಲ ಇದ್ಯಾಕ್ ಕರ್ಕಬಂದೆ ಓಡ್ಸು ಅನ್ನಳು, ಅವ್ಳನೇ ವಯಿಸ್ಕಂಡ್ ಬತ್ತಿಯಾ ನಿನ್ನಮ್ಮುನ್” ಎಂದು ತೂರಾಡುತ್ತಾ ನಾಯಿಗೇ ಬೈಯ್ಯ ತೊಡಗಿದ.

ಅಕ್ಕ ಪಕ್ಕದ ಮನೆಯ ಜನಗಳು ಇದು ಸಾಮಾನ್ಯವೆಂಬಂತೆ ಸುಮ್ಮನೆ ಪುಕ್ಕಟೆ ಮನರಂಜನೆ ನೋಡುತ್ತಾ ನಿಂತಿದ್ದರು. ಅದನ್ನೆಲ್ಲಾ ನೋಡಿ ನನಗೋ ಮಾತೇ ಬರದಂತಾಯ್ತು. ಆದರೂ ಮಳೆ ಗಾಳಿ ಬಿಸಿಲೆನ್ನದೆ ನಿತ್ಯವೂ ನಾಲ್ಕಾರು ಮನೆಗಳಲ್ಲಿ ಕೆಲಸ ಮಾಡಿ ದುಡಿದು ಇಡೀ ಸಂಸಾರವನ್ನು, ಜೊತೆಗೆ ಕುಡುಕ ಗಂಡನನ್ನೂ ಸಾಕುತ್ತಿದ್ದವಳ ಅಸಹಾಯಕ ಸ್ಥಿತಿಯನ್ನು ನೋಡಿ ಕರುಳು ಚುರುಕ್ಕೆಂದಿತು. ಗಂಡು ಜಾತಿಯಲ್ಲಿ ಹಲವು ಗಂಡಸರು ಬಡವನಿರಲಿ, ಬಲ್ಲಿದನಿರಲಿ, ಅಕ್ಷರಸ್ಥನಿರಲಿ, ಅನಕ್ಷರಸ್ಥನಿರಲಿ, ಕೆಲವರ ಗುಣವೇ ಹೀಗಿರಬಹುದೆನಿಸಿತು! ಸುಮ್ಮನೆ ಗಂಗಿ ಎಂದೆ, ನನ್ನೆಡೆ ತಿರುಗಿದ ಅವಳು ಅಕ್ಕಾ ಎಂದು ಸುರಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಂಡು ಏಳಲು ಪ್ರಯತ್ನಿಸಿದಳು ನನ್ನನ್ನು ಕಂಡೊಡನೆ ಅವಳ ಪಕ್ಕದಲ್ಲಿದ್ದ ನಾಲ್ಕು ವರ್ಷದ ಗಂಡು ಮಗ ನನ್ನ ಬಳಿ ಬಂದ ಹಾಗೇ ಅ ನಾಯಿ ಕೂಡ ಬಳಿ ಬಂದು ಏನೋ ಹೇಳುವಂತೆ ಬೊಗಳುತ್ತಿತ್ತು. ನನ್ನ ಪರಿಚಯ ಅದಕ್ಕಿತ್ತು. ಗಂಗಿ ನಮ್ಮ ಮನೆಗೆ  ಕೆಲಸಕ್ಕೆ ಬಂದಾಗ ಒಮ್ಮೊಮ್ಮೆ  ಅವಳ ಮಗನೊಂದಿಗೆ ಅದೂ ಹಿಂದೆಯೇ ಬಂದು ಬಿಡುತ್ತಿತ್ತು. ಗಂಗಿ ಅದನ್ನು ಬೈದು ಓಡಿಸುತ್ತಿದ್ದಳು ಗೊಣಗುತ್ತಾ .”ನಾವೇ ಆಯ್ಕಂಡ್ ತಿನ್ನರು ಅದ್ರಲಿ ಈ ನಾಯಿ ಬ್ಯಾರೆ ತಂದ್ಕಂಡವ್ನೆ ಕಣಕ್ಕಾ ನನ್ನ ಗಂಡ ಅನ್ನೋ ಪಾಪ್ರ! ಅದ್ರ ಜೊತಿಗೆ ಈ ನನ್ಮಗ ಈಟುದ್ದ ಅವ್ನೆ ಅವ್ನು ಬ್ಯಾರೆ ಆ ನಾಯಿ ಓಡ್ಸಕೂ ಬುಡಕಿಲ್ಲಾ”ಎನ್ನುತ್ತಿದ್ದಳು.

ಅವಳು ಅಕ್ಕೋರೆ “ನೀವ್ಯಾಕಿಲ್ಲಿಗ್ ಬಂದ್ರಿ ಏನಾರ ಆಗ್ಲಿ ನಾಳಿಕ್  ಬತ್ತೀನಿ ಮೂರ್ ದಿನ್ದಿಂದ ಕುಡ್ಕಬಂದು ಇದೇ ಗೋಳಾಗೈತೆ ಕಣಕ್ಕಾ ನಮ್ ಗೋಳ್ ನೀವ್ಯಾಕ್ ನೋಡಕ್ಬಂದ್ರಿ ಓಗಿ ಅಕ್ಕೋರೆ” ಎಂದು ಬಿಕ್ಕಿ ಬಿಕ್ಕಿ ಅತ್ತಳು. ಸಾಮಾನ್ಯವಾಗಿ ಹೆಣ್ಣು ಮಕ್ಕಳ ಮನಸ್ಥಿತಿಯೇ ಹಾಗಲ್ಲವೇ! ನೊಂದಾಗ ಅವರನ್ನು ಪ್ರೀತಿಸುವವರು ಅವರ ನೋವಿಗೆ ಸ್ಪಂದಿಸುವವರು ಸಂತೈಸುವವರು ಬಂದರೆ, ಇಲ್ಲವೇ ಮನದಲ್ಲಿ ಸುಳಿದರೂ ಸಾಕು ಅವರ ದುಖಃ ಉಮ್ಮಳಿಸಿ ಬಿಡುತ್ತದೆ. ಮನೆಗೆ ಬಂದರೆ, ಅತ್ತೂ ಅತ್ತೂ ಊದಿಕೊಂಡಿದ್ದ ಗಂಗಿಯ ಕಣ್ಣುಗಳು, ಅವಳ ಮಡಿಲಲ್ಲಿ ಮಲಗಿದ್ದ ಮಗು, ಪಕ್ಕದಲ್ಲಿ ಅಳುತ್ತಾ ನಿಂತಿದ್ದ ಅವಳ ಮಗನ ಮುಖವೇ ಕಣ್ಣ ಮುಂದೆ ಬರುತ್ತಿತ್ತು. ಒಂದೆಡೆ ಗಂಗಿಯ ಸ್ಥಿತಿಯನ್ನು ನೆನೆದು ದುಖಃವಾದರೆ, ಮತ್ತೊಂದೆಡೆ ಹುಲಿಯಂತೆ ಎಗರಿ ಅವಳನ್ನು ಹೊಡೆತದಿಂದ ತಪ್ಪಿಸುತ್ತಿದ್ದ ವಠಾರದ ನೆರೆಹೊರೆಯವರೂ, ನಾನೂ ಕೂಡ ಮಾಡಲಾಗದ ಕೆಲಸವನ್ನು ಮಾಡುತ್ತಿದ್ದ ಆ ನಾಯಿಯ ನಡೆಯ ಬಗ್ಗೆ ಅಚ್ಚರಿಯೊಂದಿಗೆ ಮೆಚ್ಚುಗೆ ಹೆಮ್ಮೆ ಅಭಿಮಾನ ಕೂಡ ಮೂಡಿತು!

ವಿದ್ಯಾಭ್ಯಾಸಕ್ಕಾಗಿ ಮಕ್ಕಳನ್ನು ಹೊರಗೆ ಬಿಟ್ಟಿದ್ದ ಕಾರಣ ನಾವಿಬ್ಬರೇ ಇಲ್ಲಿ. ಪರೀಕ್ಷಿತ್ ಬಂದೊಡನೆ ಅವರಿಗೊಂದಿಷ್ಟು ಒಗ್ಗರಣೆ ಪುರಿಯೊಂದಿಗೆ ಕಾಫಿ ಕೊಟ್ಟು, ಕಾಫಿ ಪ್ರಿಯೆಯಾದ ನಾನೂ ಎರಡನೇ ಬಾರಿಗೆ ಕಾಪಿ ಕುಡಿಯುತ್ತಾ ಬೆಳಗ್ಗೆ ಬರೇ ಹೆಡ್ಲ್ ಲೈನ್ಸ್ ನೋಡಿದ್ದ ದಿನ ಪತ್ರಿಕೆಯನ್ನು ನಿಧಾನವಾಗಿ ಓದಿ. ಮಕ್ಕಳಿಗೆ ಫೋನ್ ಮಾಡಿ, ಊಟದ ತಯಾರಿಗಾಗಿ ಅಡುಗೆ ಮನೆಯತ್ತ ನಡೆದೆ. ಪರೀಕ್ಷಿತ್ ಗೆ ಮುದ್ದೆಯೋ ಚಪಾತಿಯೋ ಎಂದೆ. ಮುದ್ದೆಯನ್ನೇ ಮಾಡು ಎಂದಾಗ ಮುದ್ದೆ ಮಾಡಿ ಬೆಳಗ್ಗೆಯೇ ಮಾಡಿದ್ದ ಪಲ್ಯ, ಮತ್ತು ಸೊಪ್ಪಿನ ಸಾರಿಗೆ ಈಗಷ್ಟೇ ಕರೆದ ಉದ್ದಿನ ಹಪ್ಪಳದೊಂದಿಗೆ ಉಣ ಬಡಿಸಿ ನಾನೂ ಊಟ ಮಾಡಿದೆ. ತುಸು ಅಂತರ್ಮುಖಿಯಾಗಿದ್ದ ನನ್ನನ್ನು ಏನು? “ಏನಾಯ್ತು ಒಂಥರಾ ಇದೀಯಲ್ಲಾ ಯಾಕೆ? ನಾನೇನು ನಿನ್ನತ್ರ ಜಗಳ ಮಾಡಿಲ್ಲವಲ್ಲ? ನಾನೇ ಇಲ್ಲದೆ ನಿನ್ನತ್ರ ಜಗಳ ಮಾಡಿರೋರಾದ್ರೂ ಯಾರು?” ಎಂದು ಕುಹಕವಾಡಿದ ಪರೀಕ್ಷಿತ್. “ಸಧ್ಯ ಅಷ್ಟಾದರೂ ಒಪ್ಕೊಂಡ್ರಲ್ಲಾ ಯಾವಾಗ್ಲೂ ಜಗಳ ಮಾಡೋದು ನೀವೇ ಅಂತ!’ಎಂದೆ. “ಅದು ಬೇರೆ, ಮತ್ಯಾಕೆ ಈ ತರ ಇದೀಯಾ?”ಎಂದಾಗ ಏನಿಲ್ಲಎಂದು. ಬೆಳಗಿನ ತಿಂಡಿ ಪಲಾವಿಗೆ ಬೇಕಾದ ತರಕಾರಿ ಹೆಚ್ಚಿಟ್ಟು ಅಡುಗೆ ಮನೆ ಕ್ಲೀನ್ ಮಾಡಿ ಬಂದು ಮಲಗಿದೆ.  ಬಹಳಷ್ಟು ಹೊತ್ತು ನಿದ್ದೆ ಬರಲಿಲ್ಲ. ಕಣ್ಮುಂದೆ ಗಂಗೆಯ ನೋವಿನ ಮುಖ ಅವಳ ಮಕ್ಕಳದೇ ಚಿತ್ರಣ. ಹಾಗೂ ಹೀಗೂ ಹೊರಳಾಡಿ ನಿದ್ರೆಗೆ ಜಾರಿದೆ. 

ಬೆಳಗ್ಗೆ ಊರಿಗೆ ಹೋಗಿ ಬರುವೆನೆಂದು ಹೊರಟ ಪರೀಕ್ಷಿತ್ ಗೆ ತಿಂಡಿ ಮಾಡಿಕೊಟ್ಟು ಆರಾಮಾಗಿ ಸ್ನಾನ ಪೂಜೆ ಮುಗಿಸಿ ತಿಂಡಿ ತಿನ್ನುತ್ತಿದ್ದಾಗ ಗಂಗಿ ಬಂದ ಸದ್ದಾಯಿತು. ಎದ್ದು ಹೋಗಿ ಬಾಗಿಲು ತೆರೆದೆ ಪಾಪ ನಿನ್ನೆ ನಡೆದ ಘಟನೆಯನ್ನು ಮರೆತು ಕೆಲಸಕ್ಕೆ ಬಂದಿದ್ದಳು. ಅದು ಅವಳ ಹೊಟ್ಟೆಯ ಪಾಡು ಅವಳನ್ನು ನೋಡಿ ಕನಿಕರವೆನಿಸಿತು. ಸದಾ ಕೆಲಸ ಮುಗಿಸಿ ಕೊನೆಯಲ್ಲಿ ತಿಂಡಿ ತಿನ್ನುತ್ತಿದ್ದ, ಇಲ್ಲವೇ ಮನೆಗೆ ತೆಗೆದುಕೊಂಡು ಹೋಗುತ್ತಿದ್ದ ಅವಳಿಗೆ ತಿಂಡಿ ಕೊಟ್ಟು “ಮೊದಲು ತಿಂಡಿ ತಿನ್ನು ಆಮೇಲೆ ಕೆಲಸ ಮಾಡುವಿಯಂತೆ” ಎಂದಾಗ “ಬ್ಯಾಡ ‌ಅಕ್ಕಾ ಡಬ್ಬುಕ್ಕಾಕ್ಕೊಡಿ ಮನೆಗೆ ತಗೊಂಡೋಯ್ತಿನಿ” ಎಂದಳು ಪಾಪ ಮಕ್ಕಳಿಗಾಗಿ! ಅದನ್ನರಿತ ನಾನು “ಪರ್ವಾಗಿಲ್ಲ ನೀನೂ ತಿನ್ನು ಡಬ್ಬಿಗೂ ಹಾಕ್ಕೊಡ್ತಿನಿ ಮಕ್ಕಳಿಗೆ” ಎಂದು ಒತ್ತಾಯಿಸಿದಾಗ ಅಲ್ಲಿಯೇ ಕುಳಿತು ತಿನ್ನತೊಡಗಿದಳು. “ಅಲ್ಲಾ ಗಂಗೀ ಆ ನಾಯಿ ನಿನ್ನ ಗಂಡ ನಿನ್ನನ್ನ ಹೊಡೆಯದಂತೆ ಅದೆಷ್ಟು ತಡೀತಿತ್ತಲ್ವಾ?” ಎಂದಾಗ ಅವಳು ತಿನ್ನುವ ತಿಂಡಿಯನ್ನು ಕೆಳಗಿಟ್ಟು “ನಾನು ಪಾಪಿ ಕಣಮ್ಮೋರೆ” ಎಂದು ಗೊಳೋ ಎಂದು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು.

“ನೀನ್ಯಾಕೆ  ಪಾಪಿ ಅಂದ್ಕೋತಿಯಾ? ನೀನಲ್ಲ ನಿನ್ನ ಗಂಡ ಮತ್ತೆ ಅವನಂಥ ಜನರು ಪಾಪಿಗಳು. ಬಿಡು ಇನ್ನೆಷ್ಟು ಅಳ್ತಿಯಾ” ಎಂದೆ. “ಅಲ್ಲಾ ಕಣಕ್ಕಾ ನನ್ನ ಗಂಡ ಒಡ್ದಿದ್ದಕ್ಕೆ ಈಗ ಅಳ್ತಿಲ್ಲ ಆ ನಾಯಿ ನನ್ನುನ್ನ ನಮ್ ತೌರ ಮನೇರು ಅಣ್ಣತಮ್ದಿರು ಕಾಪಾಡ್ದಂಗೆ ಕಾಪಾಡ್ತಲ್ಲಾ ಅದ್ಕೆ ಅಳಾ ಬತ್ತಾ ಐತೆ. ಹಂಗೆಯಾ ಆ ನಾಯಿ ಕಾಲಿಗ್ ಬೀಳಬೇಕು ಅನ್ನುಸ್ತು. ಅದೇ ನನ್ನ ಪಾಲಿನ ದೇವ್ರು ಅಂತಾ ಈಗ್ ತಿಳೀತು ಎಂದಳು.” “ಇರಲಿ ಬಿಡು  ನಾಯಿ ಅಂದ್ರೆ ಎಲ್ಲ ಪ್ರಾಣಿಗಳಿಗಿಂತ ಅದರಲ್ಲೂ ಮನುಷ್ಯನಿಗಿಂತಲೂ ತುಂಬಾ ಕೃತಜ್ಞತೆ ಇರೋ ಪ್ರಾಣಿ. ನಿಯತ್ತಿಗೆ ಮತ್ತೊಂದು ಹೆಸರೇ ನಾಯಿಯಲ್ಲವೇ! ನೀನೇ ಅನ್ನ ಹಾಕಿ ಸಾಕಿರೋ ನಾಯಿ ‌ನಿನ್ನನ್ನ ಕಾಪಾಡಿದೆ ಬಿಡು” ಎಂದೆ. ಇಲ್ಲ ಅಕ್ಕಾ ಅದು ನಾನು ಸಾಕಿದ ನಾಯಿ ಅಲ್ಲ ಎಂದಳು. ಮತ್ತೆ ? ಎಂದೆ. ಒಂದಿನ ಬೆಳಿಗ್ಗೆಲೆ ನನ್ ಗಂಡ ಮಗ ಇಬ್ರೂ ಹಾಲ್ ತರಕೆ ಅಂತ ಅಂಗ್ಡೀ ತಕೆ ಓದಾಗ ಅಲ್ಲಿತ್ತಂತೆ. ನನ್ ಮಗ ತಿನ್ನಕೆ ಅಂತ ತಗಂಡ್ ಬನ್ನು ಬಿಸ್ಕತ್ತು ಅದ್ಕೆ ಆಕ್ಬುಟವ್ನೆ. ಅದು ಹಂಗೆಯ ಇವ್ನ ಇಂದ್ಗಡೆಲೆಯ ಮನೆತಕೆ ಬಂದ್ಬುಟೈತೆ. ನನ್ಮಗಿಗೆ ನಾಯಿ ಕಂಡ್ರೆ ಸ್ಯಾನೆ ಇಷ್ಟ. ಬೀದೀಲಿ ಯಾವ್ ನಾಯಿ ಮರಿ ಕಂಡ್ರೂ ಅಲ್ಲೇ ನಿಂತ್ಕಂಬುಡದು. ನೋಡಿ ಅಪ್ಪ ಮಗ ಇಬ್ರೂವೆ ಅದ್ನ ಓಡುಸ್ದಲೆಯ ಮನೀಗ್ ಕರ್ಕಂಬಂದವ್ರೆ. ನಾನು ನನ್ ಮಗುನ್ನೂ ಗಂಡನ್ನೂ ಬೈಕಂಡೆ. ನಾವೇ ಆಯ್ಕಂಡ್ ತಿನ್ನರು ನಮ್ಜೊತಿಗೆ ಈ ನಾಯಿ ಬ್ಯಾರೆಯ ಅಂತವ.

ಆ ನಾಯಿಯ ನಾನೆಷ್ಟೇ ಓಡ್ಸಿದ್ರೂ ಓಯ್ತಿರ್ಲಿಲ್ಲ. ಈ ನನ್ಮಗ್ನೂ ನನ್ ಗಂಡ್ನೂ ಸೇರ್ಕಂಡು ಅದ್ಕೆ ದಿನಾ ಬನ್ನು ಬಿಸ್ಕತ್ತು ಅಕ್ಯಂಡು ಅವ್ರಿಗಾಕಿದ್ ತಿಂಡಿ ಊಟ್ದಲಿ ಅದ್ಕೂ ಆಕ್ಯಂಡು ವೈನಾಗ್ ನೋಡ್ಕತಿದ್ರು. ಅಕ್ಕಾ ಒಂದೊಂದ್ಸತಿ ನಿಮ್ಮನೆತಕೂ ನನ್ಮಗ್ನ ಇಂದ್ಗಡೆಲೆಯ ಬಂದ್ ಬುಡದು ನೋಡಿ. ಈ ನಾಯಿಯ ನಾನು ಮನೆ ಒಳಿಕ್ ಸೇರುಸ್ತಿರ್ಲಿಲ್ಲ. ಒಳಿಕ್ ಬರ್ಬೇಡ ಅಂತ ಎದ್ರುಸ್ತಿದ್ದೆ. ನಾನಿದ್ದಾಗ ಅದು ಒಳಿಕ್ ಬತ್ತಿರ್ಲಿಲ್ಲ. ನಾನಿಲ್ಲದಾಗ ಮನೆ ಒಳಿಕ್ ಬಂದು ಚಾಪೆ ಮೇಲೆ ನನ್ ಮಗಂಜೊತಿಯಾ ಅದೂ ಕೂತಿರದು. ನನ್ನೆಜ್ಜೆ ಸದ್ದು ನನ್ ದನಿ ಕಿವಿಗೆ ಬಿದ್ರೆ ಸಾಕು ಆಚಿಗ್ ಬಂದ್ಬುಡದು. ಅದು ನನಿಗೆ ಎದ್ರದು ಅಕ್ಕಾ ಎಂದಳು. ಹೌದಾ ನೋಡು ನೀನು ಹೆದ್ರಿಸಿದ್ರೂ ಅದು ನಿನ್ನನ್ನ ಕಾಪಾಡಿದೆ ಎಂದಾಗ, ಅದಿರ್ಲಿ ಅಕ್ಕಾ ನಾಯಿಗೆ ಬಾರಿ ನೀಯತ್ತು. ಅನ್ನ ಆಕ್ದೋರ್ನ ಕಾಯುತ್ತೆ ಅಂತ ಕೇಳಿದ್ದೆ. ಆದ್ರೆ ಅನ್ನ ಆಕ್ತಿದ್ದೋನು ನನ್ ಗಂಡ ಆದ್ರೆ ಅದು ಕಾಪಾಡಿದ್ದು ನನ್ನ! ಇದೆಂಗೇ? ಇದೊಂಥರಾ ಜೋಜಿಗ! ಅಲ್ವಾ ಅಕ್ಕಾ , ನಾಯಿಗೆ ನಿಯತ್ತು ಅನ್ನದ್ ಕೇಳಿದ್ದೆ ಆದ್ರೆ ಇದು ನಿಯತ್ತಿನ್ ಜೊತಿಗೆ ನ್ಯಾಯನೂ ತಿಳ್ಕಂಡಿರ ನಾಯಿ ಅನ್ನಂಗ್ ಕಾಣುತ್ತೆ. ಅನ್ಯಾಯವಾಗಿ ಒಡೀತಿದ್ದ ನನ್ ಗಂಡ್ನಿಂದ ನ್ಯಾಯದ್ ಕಡೀಕ್ ಸಪೋಲ್ಟ್ ಮಾಡಿ ನನ್ನ ಕಾಪಾಡ್ಬುಡ್ತು. ಈ ನಾಯಿಗೆ ಮನುಸ್ರಿಗಿಂತಾ ಒಳ್ಳೇ ಬುದ್ದಿ! ಎಂದಳು ಗಂಗಿ.

ಅಕ್ಕಾ ಅದು ನಮ್ಮನಿಗ್ ಬರೋ ಮೊದ್ಲು ಯಾರೋ ಸ್ಕೂಟ್ರು ಇರೊ ಮಲ್ಲಿ ಸಾಕಿದ್ರೇನೋ ಯಾವ್ದಾರ ಸ್ಕೂಟ್ರು ಕಂಡೆ  ಓಡೋಗಿ ಮೂಸಿ ನೋಡಿ ವಾಪಸ್ ಬರುತ್ತೆ. ಸ್ಕೂಟ್ರಿರ ಮನಿಂದವ ತಪ್ಪಿಸ್ಕಂಡ್ ಬಂದಿರ್ಬೇಕೋ ಏನೋ ಕಾಣೆ. ಇನ್ನ ಅದೆಲ್ಲೂ ಓಗ್ದಂಗೆ ನಮ್ಮಲ್ಲೇ ಇಟ್ಕಂತಿನಿ ನನ್ ಕಾಪಾಡಿರ ನಾಯಿಯ ಎಲ್ಲೂ ಓಡ್ಸಕಿಲ್ಲ ನನ್ಮಗನಂಗೆ ಸಾಕತ್ತೀನಿ ಎಂದಳು ಹೆಮ್ಮೆ ಮತ್ತು ಕೃತಜ್ಞತೆ  ತುಂಬಿದ ದನಿಯಲ್ಲಿ! ಗಂಗಿಗೆ ತುಸು ಧೈರ್ಯ ಬಂದಂತಿತ್ತು ನಾಯಿಯ. ನ್ಯಾಯಪರತೆಯಿಂದ. ಹೌದು ನನಗೂ ಅಚ್ಚರಿಯೆನಿಸಿತು. ಮೂಕ ಪ್ರಾಣಿಯೊಂದು ಮನುಜನ ಸಂಸಾರದಲ್ಲಿ ಆಗುವ ಅನ್ಯಾಯ, ದೌರ್ಜನ್ಯದ ವಿರುದ್ಧ ದನಿಯೆತ್ತಿದ ನಾಯಿಯ ಸೂಕ್ಷ್ಮ ಸಂವೇದನೆಯನ್ನು ಕಂಡು. ಗಂಗಿಯ ಬದುಕಿಗಿಂತಾ ತುಂಬಾ ಭಿನ್ನವಾಗಿರಲಿಲ್ಲ ನನ್ನ ಬದುಕು ಕೂಡ! ಕೇವಲ ಅಂತಸ್ತು ವಿದ್ಯೆಯಲ್ಲಿ ಮಾತ್ರ ವೆತ್ಯಾಸವಿತ್ತು ಅಷ್ಟೆ. ಅವಳ ಹಿಂಸೆ ಬಯಲಲ್ಲಾದರೆ ನನ್ನದು ನಾಲ್ಕು ಗೋಡೆಯ ನಡುವೆ! ಅವಳು ಕೂಲಿ ಮಾಡಿ ಗಂಡನನ್ನು ಸಾಕಿ ದೈಹಿಕವಾಗಿ ಹಿಂಸೆಗೊಳಗಾದರೆ ನಾನು ಮಾನಸಿಕವಾಗಿ ಪ್ರತಿಕ್ಷಣವೂ ನೋಯುತ್ತಿದ್ದೆ. ಪರೀಕ್ಷಿತ್ ನನ್ನು ಮದುವೆಯಾಗಿ ಒಂದೆರಡು ವರ್ಷವಷ್ಟೇ ನೆಮ್ಮದಿಯಾಗಿ ಬದುಕಿದ್ದು. ಬಯಸಿ ಬಯಸಿ ಮದುವೆಯಾದವ, ನಾನಿಲ್ಲದಿದ್ದರೆ ಪ್ರಾಣವನ್ನೇ ಕಳೆದುಕೊಳ್ಳುವೆನೆಂದು ಹೇಳಿ ನನ್ನ ಹೆತ್ತವರ ಅಸಮಾಧಾನದ ನಡುವೆಯೇ ಮದುವೆಯಾದ ಪರೀಕ್ಷತ್ ಕೆಲವೇ ವರುಷಗಳಲ್ಲಿ ತನ್ನ ವರಸೆಯನ್ನೇ ಬದಲಿಸಿದ್ದ.

ಮಗಳು ಒಡಲಲ್ಲಿ ಅಂಕುರಿಸಿಯಾಗಿತ್ತು ಇಲ್ಲವಾಗಿದ್ದಲ್ಲಿ ಬೇರೆಯದೇ ಒಂದು ನಿರ್ಧಾರವನ್ನು ತೆಗೆದುಕೊಳ್ಳಬಹುದಿತ್ತು. ಆದರೆ ಎಲ್ಲಕೂ ಹೆಚ್ಚಾಗಿ ಹೆತ್ತವರ ಅಸಮಾಧಾನದ ನೋವಿನ ಮುಖಗಳು ಕಣ್ಣ ಮುಂದೆ ಸುಳಿಯುತ್ತಿತ್ತು. ತವರಿಗೆ ಹಿಂತಿರುಗಲು ಸ್ವಾಭಿಮಾನದ ಅಡ್ಡಿ, ಹೇಗಿದ್ದರೂ ಸಹಿಸಿಕೊಂಡೇ ಹೋಗಬೇಕಿತ್ತು. ಬಂಧು  ಬಳಗದವರೆದಿರು ತಲೆ ತಗ್ಗಿಸಬೇಕಾದ ಪರಿಸ್ಥಿತಿ ಹೀನಾಯವೆನಿಸಿ ಯಾರಿಗೂ ಕಿಂಚಿತ್ತೂ ತಿಳಿಯದಂತೆ ಹಲ್ಲು ಕಚ್ಚಿ ಸಹಿಸಿಕೊಂಡೇ ಬಂದೆ! ಹೇಗೂ ಮರ್ಯಾದೆಗೆ ಅಂಜಿ ಯಾರೊಂದಿಗೂ ಸಂಸಾರದ ಗುಟ್ಟನ್ನು ಹೇಳಲಾರಳೆಂಬ ಕಾರಣವನ್ನೇ ಆತ ನನ್ನ ದೌರ್ಬಲ್ಯವೆಂದುಕೊಂಡು ಇನ್ನೂ ಹೆಚ್ಚು ಹಿಂಸಿಸಲಾರಂಭಿಸಿದ. ಹಿಂಸೆಯೆಂದರೆ ಹೊಡೆಯುವುದು ಬಡಿಯುವುದಷ್ಟೇ ಅಲ್ಲ ಮಾನಸಿಕ ಹಿಂಸೆ ಕೂಡ ಹಿಂಸೆಯೇ ಅಲ್ಲವೇ. ಆ ಹಿಂಸೆ ಕೊಡುವ ನೋವು ಅಗಾಧ! ದೈಹಿಕ ಹಿಂಸೆಗಳಿಂದಾದ ಗಾಯಗಳಿಗೆ ಮದ್ದಿದೆ. ಆದರೆ ಮಾನಸಿಕ ಹಿಂಸೆಗಳಿಂದಾದ ಪೆಟ್ಟುಗಳಿಗೆ ಮದ್ದಿಲ್ಲ ಇದ್ದರೂ ಅವು ಸುಲಭವಾಗಿ ಮಾಯುವುದೂ ಇಲ್ಲ!

ಗೆಳತಿಯೊಬ್ಬಳ ಮದುವೆಯಲ್ಲಿ ಪರಿಚಿತನಾದ ಪರೀಕ್ಷಿತ್. ಪರಿಚಯದ ಮಾತುಕತೆಯಲ್ಲಿ ಆತ ಹೇಗೋ ಬಾದಾರಾಯಣ ಸಂಬಂಧವೆಂದು ತಿಳಿಯಿತು. ಪರಿಚಯ ಗೆಳೆತನಕ್ಕೆ ತಿರುಗಿ ಪ್ರೀತಿಯ ಟ್ರ್ಯಾಕ್  ತಲುಪಿಯೇ ಬಿಟ್ಟಿತ್ತು ನನಗೇ ಅರಿವಿರದಂತೆ! ಹೌದು ನಾನು ಅವನಿಗಿಂತ ಹೆಚ್ಚು ಕಲಿತವಳು ಒಳ್ಳೆಯ ಹುದ್ದೆಯಲ್ಲಿದ್ದವಳು ಕೂಡ. ಗೆಳತಿಯ ಮದುವೆಯಲ್ಲಿ ಪರಿಚಿತನಾದ ವ್ಯಕ್ತಿಯ ನಡವಳಿಕೆ ತೀರಾ ಸಭ್ಯವಾಗಿಯೇ ಕಾಣುತ್ತಿತ್ತು. ನನಗಿಂತ ಕಡಿಮೆ ವಿದ್ಯೆ, ಹುದ್ದೆಯಾದರೂ ಅದಾವ ಮೋಡಿ ಮಾಡುದನೋ ಕಾಣೆ ಹೆತ್ತವರಿಗೆ ಇಷ್ಟವಿಲ್ಲದಿದ್ದರೂ ಅವನನ್ನು ಮದುವೆ ಮಾಡಿಕೊಳ್ಳುವಂತಾಯ್ತು. ಆ ಮಟ್ಟದ ಸುಳ್ಳಿನ ಪ್ರೀತಿಯ ಬಲೆ ಹೆಣೆದು ನನ್ನನ್ನು ಬಂಧಿಸಿದ್ದ! ನಾನೇ ಅವನ ಉಸಿರು, ಜೀವ, ಪ್ರಾಣ, ಬದುಕು ನಾನಿಲ್ಲದೆ ಒಂದು ಕ್ಷಣವೂ ಬದುಕುವುದೇ ಇಲ್ಲವೆಂದು ನನ್ನನ್ನು Sentimental fool ಮಾಡಿದ್ದ. ಆ ಘಳಿಗೆಯಲ್ಲಿ ನನಗೇನೂ ತಿಳಿಲೇ ಇಲ್ಲವಾ? ಆಗ ನಾನೇಕೆ ನಾನಾಗಿರಲಿಲ್ಲ? ಅವನ ಪ್ರೀತಿಯ ಮಂಪರಿನಲ್ಲಿ ನಿದ್ರಿಸಿದ್ದೆನೇ? ಅದೆಷ್ಟು ಜನರಿಗೆ ಅಸಮಾಧಾನವಿತ್ತು ಅವನು ನನಗೆ ಸರಿಯಾದ ಜೋಡಿಯಲ್ಲವೆಂದು!

ಕೆಲವರು ತೋರಿಸಿಕೊಂಡರೂ ಬಾಯಿಬಿಟ್ಟು ಹೇಳಲಿಲ್ಲ. ಬಹುಷಃ ಅವನ ಬಗ್ಗೆ ತಿಳಿದವರೆಲ್ಲ ನನ್ನನ್ನು ಅನುಕಂಪದಿಂದ ನೋಡುತ್ತಿದ್ದರೇನೋ ಆಗ! ಬಂಧು ಬಳಗದವರಿಗೂ ಇಷ್ಟವಿರಲಿಲ್ಲ, ಆದರೆ ಪ್ರೀತಿಯ ಮಾಯೆ ನನ್ನ ಕಣ್ಣಿಗೆ ಪೊರೆ ಬರಿಸಿತ್ತು. ನನಗಿಂತ ವಿದ್ಯೆ ಹುದ್ದೆಯಲ್ಲಿ ಕಡಿಮೆಯಿದ್ದರೂ ಅವನ ಪ್ರೀತಿಯ ಮುಂದೆ ಅವೆಲ್ಲವೂ ಗೌಣವೆನಿಸಿತ್ತು. “ಪ್ರೀತಿ ಕುರುಡಂತೆ! ಅಲ್ಲಲ್ಲಾ ಪ್ರೀತಿಸುವವರೇ ಕುರುಡರು! ಎಂಬುದೀಗ ನನ್ನ ಅನುಭವದ ಮಾತು.

ನಾನು ಬಡವಿ, ಆತ ಬಡವ, 

ಒಲವೆ ನಮ್ಮ ಬದುಕು.

ಬಳಸಿಕೊಂಡೆವದನೆ ನಾವು 

ಅದಕು ಇದಕು ಎದಕು.

ಎನ್ನುವ ಬೇಂದ್ರೆಯವರ ಕವಿತೆಯ ಸಾಲುಗಳಿಲ್ಲಿ ಬದಲಾಗಿ, ಎಲ್ಲಕೂ ತದಕುತ್ತಿದ್ದ ಅವನ ನಡವಳಿಕೆ ಕಣ್ಣಲ್ಲಿ ನೀರು ತರಿಸುತ್ತಿತ್ತು ಆಗ್ಗಾಗ್ಗೆ! ಹೆತ್ತವರ ಸಂಕಟದ ಫಲವೇನೋ ಎಂದು ಅಣಕಿಸುತ್ತಿತ್ತು ಆತ್ಮಸಾಕ್ಷಿ! ಮದುವೆಯಾಗಿ ಮಗಳು ಹುಟ್ಟಿದ ತರುವಾಯ ನನ್ನ ತವರಿನ ಸಂಬಂಧಕ್ಕೆ ನಿರ್ಬಂಧದ ತಾಕೀತು ಮಾಡಿದ್ದ. ನನ್ನ ದುಡಿಮೆಯ ಹಣ ಯಾವುದೋ ರೂಪದಲ್ಲಿ ಅವನ ಕಡೆಗೇ ಸಂದಾಯವಾಗುತ್ತಿತ್ತು. ಸಂಸಾರದಲ್ಲಿ ನನ್ನ ನಿರ್ಧಾರಕ್ಕೂ ಕವಡೆ ಕಿಮ್ಮತ್ತಿನ ಬೆಲೆಯಿರಲಿಲ್ಲ. ಎಲ್ಲದಕೂ ವಿರೋಧವೇ ವ್ಯಕ್ತವಾಗುತ್ತಿತ್ತು. ನನ್ನ ಸಂಬಂಧಿಗಳ ಮನೆಗೆ ನಾನು, ನನ್ನ ಮನೆಗೆ ಅವರು ಬರುವಂತಿರಲಿಲ್ಲ. ನನ್ನ ದುಡಿಮೆಯ ಮೇಲೆ ಕಣ್ಣಿತ್ತು. ಅಪರೂಪಕ್ಕೊಮ್ಮೆ ಶೋಕಿಗೆಂದು ಇದ್ದ ಕುಡಿತ ನಿತ್ಯವಾಗಿ, ಇಸ್ಪೀಟಿನ ಚಟ ಕೂಡ ಹೆಜ್ಜೆಯಿಟ್ಟಿತ್ತು. ದಾಂಪತ್ಯದ ಸಾಮರಸ್ಯ ಕದಡಿ ವಿರಸಕ್ಕಡೆಮಾಡಿತ್ತು. ಮದುವೆಗೆ ಮುನ್ನ ಇದ್ದ ಪ್ರೀತಿಯ ಒರತೆ, ಮದುವೆಯ ನಂತರ ಅದರದೇ ಕೊರತೆ, ಪ್ರೀತಿಯ ಒರತೆ ಸುಳ್ಳೆಂದು ತಡವಾಗಿ ಅರಿತೆ!

ಅವನ ನಡವಳಿಕೆ ಮಕ್ಕಳ ಮೇಲೆ ಪರಿಣಾಮ ಬೀರದಿರಲೆಂದು ಚಿಕ್ಕಂದಿನಿಂದಲೇ ಓದಲು ರೆಸಿಡೆನ್ಶಿಯಲ್ ಸ್ಕೂಲಿಗೆ ಬಿಟ್ಡಿದ್ದಾಯ್ತು. ಸಹಸ್ರಾರು ಮಕ್ಕಳಿಗೆ ಪಾಠ ಹೇಳುವ ನನ್ನ ಬದುಕು ಹೀಗೆ ಎಂದು ಯಾರಿಗೂ ತಿಳಿಯಬಾರದೆಂದು ನಿತ್ಯವೂ ಸಹಿಸಿಕೊಂಡೇ ಬದುಕುತ್ತಿದ್ದೆ. ಮಗಳನ್ನು ಕೊಡಲು ಇಷ್ಟವಿಲ್ಲದೆ ವಿರೋಧಿಸಿದ್ದ ಹೆತ್ತವರ ಮೇಲಿನ ದ್ವೇಷವನ್ನು ನನ್ನ ಮೂಲಕ ತೀರಿಸಿಕೊಳ್ಳ ಹೊರಟ ಪರೀಕ್ಷಿತ್ ಒಂಥರಾ ಮೃಗವಾಗಿದ್ದ. ಮೂರು ಹೊತ್ತೂ ಅಸಹನೆ ಬೈಗುಳ ಒಮ್ಮೊಮ್ಮೆ ಕೈ ಎತ್ತುವಷ್ಟು ಕೆಳ ಮಟ್ಟಕ್ಕೆ ಇಳಿಯುತ್ತಿದ್ದ. ಈಗ ನನ್ನ ಸಮಸ್ಯೆಗೆ ಪರಿಹಾರವನ್ನು ಗಂಗಿಯ ಮನೆಯ ನಾಯಿ ತೋರಿಸಿತು! ಅಂದೇ ಒಂದು ದೃಢ ನಿರ್ಧಾರಕ್ಕೆ ಬಂದೆ ನಾನು! ಮರುದಿನ ಗಂಗಿ ಕೆಲಸಕ್ಕೆ ಬಂದಾಗ ಗಂಗಿ “ನಿಮ್ಮ ಗಲ್ಲಿಯಲ್ಲಿ ಯಾವುದಾದರೂಒಂದು ಬೀದಿ ನಾಯಿಮರಿ ಇದ್ದರೆ ತಂದುಕೊಡು” ಎಂದಾಗ ನನ್ನ ಮುಖವನ್ನೊಮ್ಮೆ ಅಚ್ಚರಿ ಹಾಗೂ ಗಾಭರಿಯಿಂದ ನೋಡಿದಳು ಗಂಗಿ!

‍ಲೇಖಕರು Admin MM

23 June, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading