
ಟಿ ಆರ್ ಅನಂತರಾಮು
ನೀವು ಶಿಶು ವಿಹಾರಕ್ಕೆ ಹೋಗಿದ್ದರೆ ಅಥವಾ ನಿಮ್ಮ ಮಕ್ಕಳೋ ಮೊಮ್ಮಕ್ಕಳೋ ನರ್ಸರಿ ಶಾಲೆಗೆ ಸೇರಿದ್ದರೆ ಕಣ್ಣುಮುಚ್ಚಿಕೊಂಡು ಹೇಳಬಹುದು ‘ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್’ ಪದ್ಯ ನಿಮ್ಮ ಕಂಠಪಾಠವಾಗಿರುತ್ತದೆ. ಎರಡು ಶತಮಾನಗಳಿಂದಲೂ ಈ ಶಿಶುಗೀತೆ ಜಗತ್ತಿನ ಎಲ್ಲ ಜಾತಿ, ಧರ್ಮ, ದೇಶ, ವರ್ಣ, ಭಾಷೆ ಎಲ್ಲವನ್ನೂ ಮೀರಿ ಈಗಲೂ ಮಕ್ಕಳ ನಾಲಗೆಯ ಮೇಲೆ ನಲಿಯುತ್ತಲೇ ಇದೆ. ಇದರ ಮುಂದುವರಿದ ಪಟ್ಟಿಯಾಗಿ ‘ಬಾ ಬಾ ಬ್ಲಾಕ್ ಷೀಪ್, ಜಾಕ್ ಅಂಡ್ ಜಿಲ್, ಲಂಡನ್ ಬ್ರಿಡ್ಜ್ ಈಸ್ ಫಾಲಿಂಗ್ ಡೌನ್, ಜಾನಿ ಜಾನಿ ಎಸ್ ಪಾಪ, ಮೇರಿ ಹ್ಯಾಡ್ ಎ ಲಿಟ್ಲ್ ಲ್ಯಾಂಬ್’ ಹೀಗೆ ಸೇರಿಸುತ್ತಲೇ ಹೋಗಬಹುದು. ಆದರೆ ನಿಸ್ಸಂಶಯವಾಗಿ ಶಿಶುಗೀತೆಗಳಲ್ಲಿ ಮೊದಲ ಸ್ಥಾನ ‘ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್’ಗೆ ಸಲ್ಲುತ್ತದೆ.
ಈ ಗೀತೆ ಸರಳ, ಕಂಠಪಾಠ ಮಾಡಲು ಸುಲಭ, ವಿಸ್ಮಯ, ಪ್ರಾಸಬದ್ಧ, ಸಾರ್ವಕಾಲಿಕ. ಇನ್ನೇನು ಬೇಕು ಜನಪ್ರಿಯವಾಗಲು. ಕನ್ನಡದಲ್ಲಿ ಬೇಕಾದಷ್ಟು ಜನಪ್ರಿಯ ಶಿಶುಗೀತೆಗಳಿವೆ. ‘ಬಣ್ಣದ ತಗಡಿನ ತುತ್ತೂರಿ, ನಾಯಿಮರಿ, ನಾಯಿಮರಿ, ಬೆಕ್ಕೇ ಬೆಕ್ಕೇ, ನಾಗರವಾವೇ ಹಾವೊಳು ಹೂವೇ ‘ಇತ್ತೀಚೆಗೆ ಆನೆ ಬಂತೊಂದ್ ಆನೆ, ಯಾವೂರ್ ಆನೆ?’ ಹೊಸತಾಗಿ ಈಗಿನ ಕವಿಗಳು ಎಷ್ಟೇ ಶಿಶುಗೀತೆ ಬರೆದರೂ, ಮಕ್ಕಳ ನಾಲಗೆಯ ಮೇಲೆ ನಲಿಯುವುದು ಈ ಪದ್ಯಗಳೇ ಅಲ್ಲವೆ? ಜನಪ್ರಿಯತೆಯ ದೃಷ್ಟಿಯಿಂದ ಕನ್ನಡಕ್ಕೆ ಭೌಗೋಳಿಕ ಮಿತಿ ಇದೆ, ಇಂಗ್ಲಿಷ್ ಗೆ ಇಲ್ಲ. ನೀವು ಎಂದಾದರೂ ಯೋಚಿಸಿದ್ದೀರಾ? ‘ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್’ ಎಂಬ ಮಾಂತ್ರಿಕ ಪದ್ಯ ಬರೆದವರು ಯಾರು ಎಂದು? ಇರಲಿ ಬಿಡಿ, ಆ ಕವಿಗೆ ಇದರಿಂದೇನೂ ಬೇಸರವಿಲ್ಲ.
ಆ ಪದ್ಯ ಈಗಲೂ ಜೀವಂತವಿದೆಯಲ್ಲ ಸಾಕು. ಇದನ್ನು ಬರದಾಕೆ ಇಂಗ್ಲೆಂಡಿನ ಜೇನ್ ಟೇಲರ್ (ಜನನ 1796). ಅಮ್ಮ ಆ ಕಾಲಕ್ಕೆ ದೊಡ್ಡ ಸಾಹಿತಿ. ನೀತಿಕಥೆ, ಧರ್ಮಪ್ರಧಾನ ಕಥೆ ಬರೆದು ಹೆಸರು ಗಳಿಸಿದ್ದಳು. ಅಪ್ಪ ಶಿಲ್ಪಿ. ಇನ್ನು ಜೇನ್ ಳ ಅಕ್ಕ ಆ್ಯನ್ ಟೇಲರ್ ಕೂಡ ಶಿಶುಗೀತೆಗಳನ್ನು ಬರೆದು ಶಾಲೆಯ ಹಂತದಲ್ಲೇ ಪ್ರಸಿದ್ಧಳಾಗಿದ್ದಳು.

ವಾಸ್ತವವಾಗಿ ‘ಟ್ವಿಂಕಲ್ ಟ್ವಿಂಕಲ್’ ಬರೆಯುವ ಮುನ್ನ ಈ ಇಬ್ಬರು ಸಹೋದರಿಯರು ‘Original poems for the Infant minds’ ಎಂಬ ಶಿಶುಗೀತೆಗಳ ಸಂಗ್ರಹವನ್ನು 1804ರಲ್ಲೇ ಪ್ರಕಟಿಸಿದ್ದರು. ಅದರಲ್ಲಿ ಬೇರೆ ಬೇರೆ ಹಿರಿ, ಕಿರಿಯರ ಕವನಗಳೂ ಸೇರಿದ್ದವು. ಅದು ಬೇಗ ಜನಪ್ರಿಯವಾಗುತ್ತಿದ್ದಂತೆ ಪ್ರಕಾಶನ ಸಂಸ್ಥೆಯೊಂದು ಮುಂದೆ ಬಂದು ಮುಂದಿನ ಸಂಕಲನವನ್ನು ತಾನೇ ಪ್ರಕಟಿಸುವುದಾಗಿ ಉತ್ಸಾಹ ತೋರಿತು. ಇದರ ಫಲವಾಗಿಯೇ ಈ ಇಬ್ಬರು ಸಹೋದರಿಯರು 1806ರಲ್ಲಿ ‘Rhyms for the Nursary’ ಎಂಬ ಸಂಕಲನ ತಂದರು.
ಸುಮಾರು 60ಕ್ಕಿಂತ ಹೆಚ್ಚು ಪದ್ಯಗಳಲ್ಲಿ ‘ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್’ ಕೂಡ ಇದರಲ್ಲಿ ಸೇರಿದೆ. ಅದು ಎಲ್ಲ ಪದ್ಯಗಳಿಗಿಂತ ಬಹುಬೇಗ ಜನಪ್ರಿಯವಾಯಿತು (ಎಷ್ಟೋವೇಳೆ ಅನೇಕ ಒಳ್ಳೆಯ ಕವಿತೆಗಳಲ್ಲಿ ಒಂದು ಪದ್ಯ ಬಹುಬೇಗ ಪಿಕ್ ಅಪ್ ಆಗಿಬಿಡುತ್ತದೆ. ಕವಿ ಕೆ. ಎಸ್. ನಿಸಾರ್ ಅಹಮದ್ ಅವರು ನನ್ನ ಬಳಿ ಎಷ್ಟೋ ಸಲ ಹೇಳಿದ್ದರು: ‘ನೋಡ್ರೀ, ನಿತ್ಯೋತ್ಸವ ಕವನಕ್ಕಿಂತಲೂ ಬೇಕಾದಷ್ಟು ಒಳ್ಳೆಯ ಪದ್ಯಗಳನ್ನು ಬರೆದಿದ್ದೇನೆ, ಆದರೆ ಏಕೋ ಜನ ನನ್ನನ್ನು ‘ನಿತ್ಯೋತ್ಸವ ಕವಿ’ ಎಂದು ಕರೆದು ಅದಕ್ಕೆ ಸೀಮಿತ ಮಾಡಿಬಿಟ್ಟರು’ ಎಂದಿದ್ದರು). ಆಗಲೂ ಈ ಸಂಕಲನ ಅಕ್ಕ ಆ್ಯನ್ ಮತ್ತು ತಂಗಿ ಜೇನ್ ಹೆಸರಿನಲ್ಲಿತ್ತು.
‘ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್’ ತಾನೇ ಬರೆದದ್ದು ಎಂದು ಇಬ್ಬರಲ್ಲಿ ಯಾರೂ ಹೇಳಿಕೊಳ್ಳಲಿಲ್ಲ. ಆದರೆ 1824ರಲ್ಲಿ ಸ್ತನದ ಕ್ಯಾನ್ಸರ್ ನಿಂದ ಜೇನ್ ಟೇಲರ್ ಸತ್ತಾಗ, ಆಕೆಯ ಸಹೋದರನ ಮಗ ಅಲ್ಲಿ ಇಲ್ಲಿ ಹುಡುಕಿ ಇದು ನಮ್ಮ ಸೋದರತ್ತೆ ಜೇನ್ ಬರೆದ ಪದ್ಯ ಎಂದು ಗುರುತಿಸಿದ. ಆಕೆ ಸತ್ತ ನಂತರವೇ ಈ ಗುಟ್ಟು ಬಯಲಾದದ್ದು. ಅನಂತರ ಜೇನ್ ಹೆಸರಿನಲ್ಲಿ ಇಡೀ ಸಂಕಲನವೇ ಪ್ರಕಟವಾಗುತ್ತ ಹೋಯಿತು. ಈ ಗೀತೆಗೆ ಫ್ರೆಂಚ್ ಸಂಗೀತ ನೀಡಲಾಗಿದೆ. ಈಗಲೂ ಅದೇ ದಾಟಿಯಲ್ಲಿ ಹಾಡುವುದು. ಜೇನ್ ಟೇಲರ್ ಬರೆದ ಪದ್ಯ ನಮ್ಮ ನಾಲಗೆಗೂ ಜೇನು ರುಚಿ ಹಚ್ಚಿಸಿದೆ ಅಲ್ಲವೆ?







0 Comments