ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೊದಲ ಸಲ 'ನಾನು ಅವನನ್ನು ಪ್ರೀತಿಸುತ್ತೇನೆ' ಅಂದಾಗ – ವೈಶಾಲಿ

ನನ್ನೊಳಗೊಂದು ಕೊಲಾಜ್

ವೈಶಾಲಿ


ಸಾವು ಎದೆ ಏರಿ ಕೂತಿರುವಾಗಲೂ ಆ ಮನುಷ್ಯ ಬದುಕಿನ ಜೊತೆ ಜೂಜಾಡುತ್ತಾ ಗೆಲ್ಲುವ ಪ್ರಯತ್ನ ಪಡುತ್ತಿದ್ದ, ಒಂದೈದು ನಿಮಿಷ ಎಲ್ಲರಿಗೂ ಹೇಳಬೇಕಾದ್ದೆಲ್ಲ ಹೇಳಿ ಮುಗಿಸುವ ಆತುರದಲ್ಲಿ ಕಷ್ಟದಿಂದ ಮಾತಿಗೆ ಶುರುವಿಟ್ಟರೆ ಮತ್ತಷ್ಟೇ ಬೇಗ ಅಸಹನೀಯ ಮರೆವು ಆವರಿಸಿ ಮತ್ತೆ ಆಗಷ್ಟೇ ಹುಟ್ಟಿದ ಮಗುವಿನಂತೆ ಬಿಕ್ಕಳಿಸುತ್ತಾ, ತೆಳ್ಳಗೆ ನಗುತ್ತಾ ಮಲಗಿಕೊಂಡಿದ್ದ ಆ ಜೀವದಲ್ಲಿ ಇನ್ನೂ ಒಂದಷ್ಟು ಜವಾಬ್ದಾರಿಗಳಿದ್ದವು. ಬಹುಶಃ ಸ್ವಂತಕ್ಕಂತ ಆಸೆಗಳೂ ಇದ್ದವೇನೋ..! ಎಲ್ಲವನ್ನು ಕಲಸಿಹಾಕುವಂತೆ ಇದ್ದಕ್ಕಿದ್ದಂತೆ ಬಿದ್ದು ಹೋದ ದೇಹವನ್ನು ಹೇಗಾದರೂ ವಿವರಿಸುವುದು?

****

ಮೊನ್ನೆ ರಾತ್ರಿ ಹೀಗಾಯಿತು, ಇದ್ದಕ್ಕಿದ್ದ ಹಾಗೇ ಹಾಸಿಗೆ ಹಿಡಿದಿದ್ದ ದೊಡ್ಡಪ್ಪನ ಬದಲಾಗಿ ಆರಾಮಾಗಿದ್ದ ನನ್ನ ಮತ್ತೊಬ್ಬ ದೊಡ್ಡಪ್ಪ ಸತ್ತ ಕನಸು ಬಿದ್ದಿತ್ತು. ಕನಸುಗಳಿಗೇನು ಯಾವಾಗಾದರೂ, ಯಾರನ್ನಾದರೂ ತಂದು ನಿಲ್ಲಿಸಿ ಹೊಸ-ಹೊಸ ಸಿನಿಮಾ ತೋರಿಸುತ್ತವೆ. ಅದರಿಂದ ಹೊರ ಬರುಷ್ಟರಲ್ಲಿ ಮಾತ್ರ ಸಾಕು ಬೇಕಾಗುತ್ತದೆ. ಹಾಗೇ.. ಈ ಕನಸು ಬಿದ್ದದ್ದೇ ತಡ, ಸಾವು ತೀರಾ ಹತ್ತಿರದ ಕಳ್ಳನಂತೆ, ಕೊಲೆಗಾರನಂತೆ ಅನ್ನಿಸಿ ಇಲ್ಲೇ ಈಗಲೇ ಯಾರ ಮೇಲಾದರೂ ಎರಗುವಂತೆ ಭಾಸವಾಗತೊಡಗಿತು. ಪಕ್ಕದಲ್ಲೇ ಮಲಗಿದ್ದವನ ಎದೆ ಬಡಿತಕ್ಕೆ ಕಿವಿಯಾನಿಸುವಂತೆ ಮಾಡಿದರೆ, ಮುದ್ದಾಗಿ ಮಲಗಿದ್ದ ಮಗುವನ್ನು ರೆಪ್ಪೆ ಮುಚ್ಚದೇ ಗಮನಿಸುತ್ತ ಹೊಟ್ಟೆಯ ಏರಿಳಿತಗಳನ್ನು ಕಾಯುತ್ತಾ ಕೂರುವಂತೆ ಮಾಡಿಬಿಟ್ಟಿತ್ತು. ಒಂದೇ ನೋವಿನ ಕಥೆ, ಕನಸುಗಳು ಅದೆಷ್ಟು ಬಲವಾಗಿ ನಮ್ಮೊಳಗನ್ನು ಸೇರಿ ಬಿಡುತ್ತದೋ ಅರ್ಥವಾಗುವುದೇ ಇಲ್ಲ. ಇಂಥವೆಲ್ಲಾ ಖಾಯಿಲೆಗಳಿಗೆ ಮದ್ದಿಲ್ಲ ಬಿಡಿ.

***

ಆ ಹಿಂದಿ ಸೀರಿಯಲ್ನಲ್ಲಿ ಅವರಿಬ್ಬರು ಹುಡುಗ-ಹುಡುಗಿಯ ಮದುವೆ ಮತ್ತೆ ನಿಂತು ಹೋಯಿತು. ಛೇ! ಈ ಧಾರಾವಾಹಿಗಳೇ ಇಷ್ಟು. ಅದ್ಯಾವ ಸಂಪತ್ತಿಗೋ ಪ್ರೀತಿಸಿದ ಯಾರನ್ನೂ ಒಂದಾಗಲು ಬಿಡುವುದೇ ಇಲ್ಲ. ಕ್ಷಣಕ್ಷಣಕ್ಕೂ ಕಣ್ಣುಗಳಲ್ಲೇ ಮಾತಾಡಿಸಿ ಒಬ್ಬರಿಗೊಬ್ಬರು ಕಾಳಜಿಸುವುದನ್ನೇ ಪ್ರೀತಿ ಅಂತಂದುಕೊಂಡ ನಮ್ಮುಡುಗ ಹುಡುಗಿಯರು ಅದನ್ನು ನೋಡೇ ಪ್ರೀತಿಗೆ ಬಿದ್ದಿದ್ದಾರೆ ಅಂದರೆ ಅದೆಷ್ಟು ಸತ್ಯವಾಗುತ್ತದೋ ಗೊತ್ತಿಲ್ಲ. ಆದರೆ ಮೊದಲ ಸಲ ‘ನಾನು ಅವನನ್ನು ಪ್ರೀತಿಸುತ್ತೇನೆ’ ಅಂದಾಗ ಪಟೀರನೇ ಕೆನ್ನೆಗೆ ಬಿಟ್ಟ ಅಣ್ಣ ‘ಅದಕ್ಕೆ ಹೇಳ್ತಿದ್ದಿದ್ದು ಹಿಂದಿ ಸೀರಿಯಲ್ ನೋಡ್ಬೇಡ ಅಂತ’ ಅಂದಾಗ ಮಾತ್ರ ಆತ್ಮಾವಲೋಕನ ಶುರುವಿಟ್ಟಿತು. ಅದೆಲ್ಲಾ ಏನಾದರೂ ಆಗಲಿ. ಆದರೆ ಮತ್ತೆ ಆ ಸೀರಿಯಲ್ನಲ್ಲಿ ಅವರಿಬ್ಬರ ಮದುವೆ ಮುರಿದು ಬಿದ್ದದ್ದಕ್ಕೆ ನನಗೆ ರಾತ್ರಿ ನಿದ್ದೆ ಹತ್ತುತ್ತಿಲ್ಲ. ಕನಸಲ್ಲೆಲ್ಲ ಅವಳೇ ಬಂದು ಅಳುತ್ತಾಳೆ, ಅವಳೊಳಗೆ ನನಗೆ ಯಾರೋ ಕಾಣಿಸುತ್ತಾರೆ….!

****

ಎಷ್ಟು ದಿನವಾಯಿತು.. ಆಫೀಸಿನ ಆ ಬದಿಯಲ್ಲಿ ಸದಾ ಪೇಪರ್ ಹಿಡಿದು ಕೂರುವ ಆ ತಾತ ಮತ್ತು ಅವರ ಮಾತಿಲ್ಲದ ಮಂದಹಾಸ ಒಂಥರಾ ದಿನಚರಿಯಾಗಿಬಿಟ್ಟಿದೆ. ಈಗೀಗ ತಾತಾ ಮಾತಾಡುತ್ತಾರೆ, ದಿನಾ ಮಧ್ಯಾಹ್ನ ಕುಶಲೋಪರಿ ನಡೆದು ‘ಬೇಗ ಊಟಕ್ಕೆ ಹೊರಡು, ಗ್ಯಾಸ್ಟ್ರಿಕ್ ಬರತ್ತೆ’ ಅಂತ ಅವಸರಿಸಿ ಕಳಿಸುತ್ತಾರೆ. ‘ನಿಮ್ಮ ಊಟ’ ಅಂತ ಕೇಳಿದರೆ ಮಧ್ಯಾಹ್ನ ಫಲಾಹಾರ ಅಷ್ಟೇ ಅಂದು ಸುಮ್ಮನಾಗುತ್ತಿದ್ದರು. ನನ್ನಜ್ಜ ಇದೇ ಇಳಿಯವಯಸ್ಸಿನಲ್ಲಿದ್ದಾಗ ಹಲ್ಲಿಲ್ಲದಿದ್ದರೂ ಕೋಡುಬಳೆ ಪುಡಿಮಾಡಿಸಿ ತಿನ್ನುತ್ತಿದ್ದದ್ದು ನೆನಪಾದರೆ, ತಾತನಿಗೂ ಮನೆಯಲ್ಲಿ ಮಗಳೋ, ಸೊಸೆಯೋ ಇರಬೇಕಿತ್ತು ಅನ್ನಿಸುತ್ತದೆ. ಇದ್ದ ಒಬ್ಬೇ ಮಗ ಎಲ್ಲೋ ದೂರದಲ್ಲಿದ್ದಾನಂತೆ. ಎಷ್ಟೇ ಕಳಕಳಿಯಾಗಿ ಕಾಣಿಸಿದರೂ ಇಳಿ ಬಿದ್ದ ಕೆನ್ನೆಗಳಲ್ಲಿ ನೋವು ಉದಾಸೀನ ಕಾಣಿಸುತ್ತದೆ. ಅನಿವಾರ್ಯದ ಏಕಾಂತ ಒಬ್ಬಂಟಿತನ ತಾನೇ! ತಾತ ತೇಯುತ್ತಿದ್ದಾರೆ. ಆಗೆಲ್ಲ ಇದ್ದಕ್ಕಿದ್ದಂತೆ ನನಗೆ ‘ಒಂದ್ ಮಗ ಮಗ ಅಲ್ಲ, ಒಂದ್ ಕಣ್ಣ್ ಕಣ್ಣಲ್ಲ’ ಅನ್ನುವ ಅವ್ವ ನೆನಪಾಗುತ್ತಾಳೆ. ನನಗೆ ನನ್ನ ವಯಸ್ಸಾದ ಚಿತ್ರ ಕಂಗೆಡಿಸುತ್ತದೆ.
ಇದ್ದಕ್ಕಿದ್ದಂತೆ ಈ ಜಗತ್ತು, ಈ ದಾರಿ, ಜನ, ಮನೆಗಳೆಲ್ಲ ಪುಟಾಣಿ ಗೊಂಬೆಗಳೆನಿಸುವುದಕ್ಕೆ ಬಹುಶಃ ಒಂದು ಸರೀ ಕಾರಣವೇ ಬೇಕಾಗುವುದಿಲ್ಲ. ಇನ್ನೇನು ಎಲ್ಲ ಸರಿ ಹೋಯಿತು ಅನ್ನುವಷ್ಟರಲ್ಲಿ ಹೊಸ ಸವಾಲುಗಳು, ತಾಪತ್ರಯಗಳು ಕಾದು ಕೂತಿರುತ್ತವೆ. ಎಲ್ಲವೂ ಸ್ವಂತದ್ದೇ ಆಗಬೇಕಿಲ್ಲ. ಯಾರದ್ದಾಗಿದ್ದರೂ ಮನಸ್ಸು ಡಿಸ್ಟಬರ್್ ಆಗಿಬಿಡುತ್ತದೆ. ಎದೆಯ ಲಬ್ಡಬ್ ಬರೀ ವಿಜ್ಞಾನ ಅಂದುಕೊಂಡರೇ ನಾವು ‘ಪ್ರಾಣಿ ಜಾತಿ’ಯವರಷ್ಟೇ ಆಗುತ್ತಿದ್ದೆವೇನೋ. ಆದರೆ ನಾವೀಗ ಮನುಷ್ಯರಾಗಿರುವುದನ್ನು ಅನುಭವಿಸುತ್ತಿದ್ದೇವೆ. ನಮ್ಮ ಕಣ್ಣುಗಳಲ್ಲಿನ ಪಸೆ ಸೂಕ್ಷ್ಮವಾಗಿ ಹನಿಗಟ್ಟುವುದು ಅದನ್ನು ಸಾಬೀತು ಮಾಡುತ್ತಲೇ ಇದೆ. ಹಾಗಾಗೇ ನಮಗೆ ಯಾರದೇ ಎದೆ ಮಿಡಿತಗಳು ಅಷ್ಟು ಬೆಲೆಬಾಳುತ್ತವೆ. ಬಿಡಿ ಬಿಡಿ ಕಥೆಗಳಲ್ಲಿ ಏನಾದರೊಂದು ಲಿಂಕ್ ಹಿಡಿದು ಜೊತೆಗೇ ಬರುವ ವಿಷಯಗಳಿಗೂ ನಮಗೂ ನೇರಾ ನೇರಾ ಸಂಬಂಧವೇ ಇರಬೇಕೆಂತಿಲ್ಲ, ಇದ್ದರೂ ಆಗಿನ ನಮ್ಮ ಮನೋಸ್ಥಿತಿ ವಿಭಿನ್ನವಾಗಿರುವುದಿಲ್ಲ. ನಮ್ಮ-ನಮ್ಮ ನಡುವಿನ ಅಂತರಗಳನ್ನು ಯಾವ ಆಧಾರದಲ್ಲಾದರೂ ನಿರ್ಧರಿಸಿಡಬಹುದು, ಆದರೆ ಅವನಿಗಾದ ನೋವು ನಮ್ಮಲ್ಲಿ ಸಾಮ್ಯತೆ ತೋರಿಸಿಕೊಡುವುದನ್ನು ಅಲ್ಲಗಳೆಯಲಾಗುವುದಿಲ್ಲ ಅಲ್ಲವಾ. ಸ್ವಂತದವು, ಸ್ವಂತದ್ದಲ್ಲದವು ಯಾವುವೂ ನಮ್ಮನ್ನು ತಳಮಳಿಸದೇ ಉಳಿಸುವುದಿಲ್ಲ. ಹಾಗಾಗೇ ನಮ್ಮ ನೋವಿನ ಒರತೆಗಳು ಯಾವತ್ತಿಗೂ ಇಂಗುವುದೇ ಇಲ್ಲ.
ಆದರೂ ನಾಳೆಗಳಲ್ಲಿಯೇ ಕಣ್ಣು ನೆಟ್ಟು ಕಾಯುತ್ತೇವೆ. ಖುಷಿಗಾಗಿ ಬೇಡುತ್ತೇವೆ. ಸಾವು ಮುಂದೂಡುವ ಅಗತ್ಯ ಪ್ರಯತ್ನ ನಡೆಸುತ್ತೇವೆ.
ಇನ್ನೇನು ಜೀವದ ಬಗ್ಗೆ, ಜೀವನದ ಬಗ್ಗೆ ವೈರಾಗ್ಯ ತಾಳಿ ಬದುಕು ಇಷ್ಟೇ ಅಂತಂದುಕೊಳ್ಳುವ ಹೊತ್ತಿಗೂ ಸರಿಯಾಗಿ ಮತ್ತೆ ಆಸೆ ಮೊಳೆಸಿಕೊಂಡು ಸಧ್ಯದ ಚಿರಂಜೀವಿಗಳೇ ಅನ್ನಿಸುವಂತೆ ಎಲ್ಲಾ ಮರೆತು ಬಿಡುತ್ತೇವೆ. ಆದರೂ ಅಂತದ್ದೊಂದು ಸಣ್ಣ ಗ್ಯಾಪಿನಲ್ಲಿ ತಡವಾಗುವುದಕ್ಕೂ ಮುಂಚೆ ಏನಾದರೂ ಹೇಳಿಕೊಳ್ಳಲೇಬೇಕು ಅಂತನ್ನಿಸುವ ಕ್ಷಣಗಳಿವೆಯಲ್ಲ, ಆಗ ನಮ್ಮೊಳಗಿನ ಸಿದ್ಧಾರ್ಥನು ಬುದ್ಧನಾಗಲು ತಯಾರಾಗಿರುತ್ತಾನೆ.

‍ಲೇಖಕರು avadhi

27 July, 2013

5 Comments

  1. bharathi

    Waah tuuumba ishtavaythu vaishali …

  2. ಜಿ.ಎನ್ ನಾಗರಾಜ್

    ನಿರುದ್ದಿಶ್ಯವಾದ ಈ ಭಾವನೆಗಳ ಕೊಲಾಜ್ ತನ್ನ ಉದ್ದೇಶವನ್ನು ಈಡೇರಿಸುವುದರಲ್ಲಿ ಪರಿಣಾಮಕಾರಿಯಾಗಿದೆ.

  3. ಶಮ, ನಂದಿಬೆಟ್ಟ

    beautiful write up

  4. ಕೃಷ್ಣೇಗೌಡ ಟಿ.ಎಲ್.

    ಇಷ್ಟವಾಯಿತು. ಪರಿಣಾಮಕಾರಿಯಾಗಿಯೂ ಇದೆ..

  5. D.Ravivarma

    ಆದರೂ ಅಂತದ್ದೊಂದು ಸಣ್ಣ ಗ್ಯಾಪಿನಲ್ಲಿ ತಡವಾಗುವುದಕ್ಕೂ ಮುಂಚೆ ಏನಾದರೂ ಹೇಳಿಕೊಳ್ಳಲೇಬೇಕು ಅಂತನ್ನಿಸುವ ಕ್ಷಣಗಳಿವೆಯಲ್ಲ, ಆಗ ನಮ್ಮೊಳಗಿನ ಸಿದ್ಧಾರ್ಥನು ಬುದ್ಧನಾಗಲು ತಯಾರಾಗಿರುತ್ತಾನೆ…nice…manakaaduva baraha….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading