ಡೌವ್ ಸೋಪ್ ಹಾಕಿ!!!
ಡಾ ಡಿ ಟಿ ಕೃಷ್ಣ ಮೂರ್ತಿ
ಕೊಳಲು
ಈಗ ಸುಮಾರು ಹನ್ನೆರಡು ವರುಷಗಳ ಹಿಂದೆ ನಮ್ಮ ಆಸ್ಪತ್ರೆಗೆ ಇನ್ನೂ ಮದುವೆಯಾಗದ ತರುಣ ವೈದ್ಯರೊಬ್ಬರು ಸೇರಿದರು. ಸದಾ ನಗುಮುಖ. ಮೇಲೆ ಸ್ಪುರದ್ರೂಪಿ. ಸ್ವಾಭಾವಿಕವಾಗಿ ಅವರ ಬಳಿ ತರುಣಿಯರೇ ಹೆಚ್ಚು ಬರುತ್ತಿದ್ದರು. ಒಮ್ಮೆ ಹುಡುಗಿಯರಿಬ್ಬರು ಅವರನ್ನು ನೋಡುವ ಸಲುವಾಗಿ ಆಸ್ಪತ್ರೆಗೆ ಬಂದರು. “ಏನಮ್ಮಾ ಏನು ತೊಂದರೆ ?’ ಎಂದರು ಡಾಕ್ಟರು. ಹುಡುಗಿಯರು, ಏನೋ ಒಂದು ಕೇಳೋಣವೆಂದುಕೊಂಡು “ಮೊಡವೆಗೆ ಯಾವ ಸೋಪು ಹಾಕಬೇಕು ಹಾಕಬೇಕು ಸಾರ್?” ಎಂದು ನುಲಿಯುತ್ತಾ ಕೇಳಿದರು. ನಮ್ಮ ಚೆಂದದ ಡಾಕ್ಟರು ಸ್ವಾಭಾವಿಕವಾಗಿ “ಡೌವ್ ಹಾಕಿ”ಎಂದರು. ಹುಡುಗಿಯರು ಕಿಸಿ,ಕಿಸಿ ನಗುತ್ತಾ ಅಲ್ಲಿಂದ ಕಾಲ್ಕಿತ್ತರು. ಇವರಿಗೆ ಡೌವ್ ಸೋಪನ್ನು ಹಾಕಿ ಎಂದು ಹೇಳಿದ್ದಕ್ಕೆ ಹಾಗೇಕೆ ನಗುತ್ತಾ ಓಡಿಹೋದರೆಂಬುದು ಅರ್ಥವಾಗದೇ ನನ್ನ ಛೇಂಬರಿಗೆ ಬಂದು, ನಡೆದದ್ದೆನ್ನೆಲ್ಲಾ ತಿಳಿಸಿ “ಹುಡುಗಿಯರು ಹಾಗೇಕೆ ನಗುತ್ತಾ ಓಡಿ ಹೋದರು ಸಾರ್”ಎಂದರು. ನಾನು ‘ಡೌವ್ ಹಾಕುವುದು’ಎನ್ನುವುದರ ಅರ್ಥವನ್ನು ಹೇಳಿದ ಮೇಲೆ”ಅಯ್ಯೋ ರಾಮ”ಎನ್ನುತ್ತಾ, ಆದ ಎಡವಟ್ಟಿಗೆ ಡಾಕ್ಟ್ರು ನಾಚಿಕೆಯಿಂದ ಇನ್ನಷ್ಟು ಕೆಂಪಾದರು. ಈಗ ಅವರಿಗೆ ಮದುವೆಯಾಗಿ ಏಳು ವರ್ಷದ ಮಗನಿದ್ದಾನೆ. ಹೆಂಡತಿಯೂ ವೈದ್ಯೆ. ಹೋದವಾರ ಬೆಂಗಳೂರಿನಲ್ಲಿ ಮನೆಯವರೆಲ್ಲಾ ಸೇರಿದಾಗ ಈ ಘಟನೆಯನ್ನು ನೆನಪಿಸಿಕೊಂಡು, ಅವರನ್ನು ಛೇಡಿಸುತ್ತಾ , ಎಲ್ಲರೂ ನಕ್ಕಿದ್ದೇ ನಕ್ಕಿದ್ದು!



0 Comments