ಜಯರಾಮ ಅಡಿಗ
ಗಿರೀಶ್ ಕಾರ್ನಾಡ್ ೨೬ ವರ್ಷ ಹಿಂದೆ ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಗೋಪಾಲಕೃಷ್ಣ ಅಡಿಗರ ಸಾಕ್ಷ್ಯಚಿತ್ರವನ್ನು ಮಾಡಿದ ದಿನಗಳ ನೆನಪಾಗುತ್ತಿದೆ.
**
ಚಿತ್ರೀಕರಣದ ಮೊದಲ ಹಂತದಲ್ಲಿ ಕಾರ್ನಾಡರು ಅಡಿಗರ ಬೆಂಗಳೂರು ಮನೆಯಲ್ಲೇ ಅಡಿಗರ ದಿನಚರಿ, ಮಾತುಕತೆ, ಲೋಕಾಭಿರಾಮಗಳ ಮತ್ತು ಸಂದರ್ಶನದ ಸುದೀರ್ಘ ಚಿತ್ರೀಕರಣ ಮಾಡಿ ಮುಗಿಸಿದ ಕೆಲವೇ ದಿನಗಳಲ್ಲಿ ೪-೧೧-೧೯೯೨ ರಂದು ಅಡಿಗರು ಇನ್ನಿಲ್ಲರಾದರು.
ಮುಂದಿನ ಹಂತಗಳಲ್ಲಿ ಅಡಿಗರನ್ನು ಅವರ ಬಾಲ್ಯ, ವಿದ್ಯಾಭ್ಯಾಸ – ಅಧ್ಯಾಪನ ವೃತ್ತಿಯ ಮುಖ್ಯ ಊರುಗಳಿಗೆ ಕರೆದೊಯ್ದು ಅಲ್ಲಲ್ಲಿ ಚಿತ್ರೀಕರಿಸುವುದಿತ್ತು. ಅಡಿಗರು ತಮ್ಮ ಕುಸಿದಿದ್ದ ದೇಹಸ್ಥಿತಿಯಲ್ಲೂ ತಮ್ಮ ಮೂಲ ಊರು ಮೊಗೇರಿಗೆ ಹೋಗಿ ಬರಲು ಅತ್ಯುತ್ಸಾಹದಿಂದಿದ್ದರು. ಅಷ್ಟರಲ್ಲಿ ಅವರು ಕಾಲವಶರಾದಾಗ ಕಾರ್ನಾಡರು ಅಡಿಗರಿಲ್ಲದೆಯೂ ಆ ಊರುಗಳಲ್ಲಲ್ಲ್ಲಿಗೆ ಹೋಗಿ ಚಿತ್ರೀಕರಿಸಿ ಮುಗಿಸಬೇಕೆಂದು ನಿರ್ಧರಿಸಿರುವುದಾಗಿ ನನಗೆ ತಿಳಿಸಿದರು.
ನನಗೆ ಅವರ ಪರಿಚಯವಾಗಿ ಆಗಲೇ ಬರೋಬ್ಬರಿ ೨೦ ವರ್ಷವಾಗಿತ್ತು. ಭೇಟಿಯಾದಾಗ ಹೇಳುವುದಕ್ಕಿಂತ ಕೇಳುವ ಆಸಕ್ತಿ; ಫೊನಿನಲ್ಲಿ ಆಪ್ತ ಧ್ವನಿ, ಅಗತ್ಯದಷ್ಟು ಅಳತೆಯ ಮಾತು ಇರುತ್ತಿತ್ತು.(ಎಲ್ಲಕ್ಕಿಂತ ಮೊದಲು ಬಿ.ವಿ.ಕಾರಂತರು ಬೆಂಗಳೂರಿನಲ್ಲಿ ಜಯನಗರ ೬ನೆ ಬ್ಲಾಕ್ ನಲ್ಲಿದ್ದ ಮನೆಯಲ್ಲಿ ಒಂದು ಸಂಜೆ ಕಾರ್ನಾಡರನ್ನು ಭೇಟಿಯಾದ ನೆನಪು ಮರೆಯಲಾಗದ್ದು : ಆ ದಿನ ಕಾರಂತ-ಕಾರ್ನಾಡರಿಬ್ಬರು ರಾಜ್ ಕುಮಾರ್ ಅವರ ಪ್ರತಿಭೆ, ಪ್ರಭಾವಗಳ ಪಕ್ಕಾ ಅಭಿಮಾನದ ಮುಕ್ತ ಹರಟೆ ನಡೆಸಿದ್ದರು. ಆಗಿನ್ನೂ ಇವರಿಬ್ಬರು ನಾಟಕ, ಸಿನಿಮಾಗಳಲ್ಲಿ ಜೊತೆಗೂಡಿಕೊಂಡಿದ್ದ ಕಾಲ.).
**
ಅಡಿಗರ ಸಾಕ್ಷ್ಯಚಿತ್ರ ಕ್ಕಾಗಿ ಕಾರ್ನಾಡರ ಅಪೇಕ್ಷೆಯಂತೆ ನಾನು ಅವರೊಂದಿಗಿದ್ದು ಉಡುಪಿಯಿಂದ ಬೈಂದೂರುವರೆಗೆ ನಾನಾ ಕಡೆಗಳಲ್ಲಿ ಚಿತ್ರೀಕರಿಸಲಾಯಿತು.
**
ಮೊಗೇರಿ ಮನೆ, ಶಂಕರನಾರಾಯಣ ದೇವಸ್ಥಾನ, ಪ್ರಾಥಮಿಕ ಶಾಲೆಗಳಲ್ಲಿ ಸನ್ನಿವೇಶಗಳನ್ನು ಕಲ್ಪಿಸಿ ಚಿತ್ರೀಕರಿಸಲಾಯಿತು. ಸಾಸ್ತಾನ, ಕುಂದಾಪುರ, ಅರೆಹೊಳೆ, ಬೈಂದೂರು ಒತ್ತಿನಣೆ ಇತ್ಯಾದಿ ಹತ್ತಾರು ಕಡೆ ನಿಸರ್ಗ ದೃಶ್ಯಗಳನ್ನು ಸಾಕ್ಷೀಕರಿಸಿಕೊಳ್ಳಲಾಯಿತು.
**
ಯಾವುದೇ ಮುನ್ಸೂಚನೆ ಇಲ್ಲದೆ ಚಿತ್ರೀಕರಣದ ವ್ಯಾನ್ ತಲುಪಿ ಕಾರ್ನಾಡ್ ಇಳಿದೊಡನೆ ಜನ ಜಮಾಯಿಸುತ್ತಿದ್ದರು. ಅಲ್ಲೆಲ್ಲಾ ಏನೂ ಗ್ಲಾಮರ್ ಮೂಡದಂತೆ ಎಚ್ಚರಿಕೆಯಿಂದ ತೀರಾ ಸಾಮಾನ್ಯತೆಯಿಂದ ಕಾರ್ನಾಡ್ ನಡಕೊಂಡಿದ್ದನ್ನು ಕಂಡ ನೆನಪು ನನ್ನದು. (ಇಳಿಹೊತ್ತಿನಲ್ಲಿ ತೀರ್ಥಹಳ್ಳಿ ಬಸ್ ನಿಲ್ದಾಣದ ಬಳಿ ಕಾಫಿಗಾಗಿ ನಿಲ್ಲಿಸಿದಾಗ ಜನ ಸೇರಿ ನೋಡುತ್ತಿದ್ದಂತೆ ಗಿರೀಶ್ ನಿಧಾನವಾಗಿ, ರಸ್ತೆ ದಾಟಿ ಆಚೆ ಮರದ ಕೆಳಗೆ ನಿಂತು ಫ್ರೆಶ್ ಆಗಿ ಬಂದರು.)
**
ಮೊಗೇರಿಯಲ್ಲಿ ಪಕ್ಕಾರಸ್ತೆ, ಅಂಗಡಿ ಯಾವುದೂ ಇರಲಿಲ್ಲ. ಗದ್ದೆ, ಹಾಡಿಗಳ ನಡುವಿನ ಪ್ರಾಥಮಿಕ ಶಾಲೆಯಲ್ಲಿ ಚಿತ್ರೀಕರಣ ಮುಗಿಯುವಷ್ಟರಲ್ಲಿ ಅಧ್ಯಾಪಕರು, ಊರವರೆಲ್ಲ ಸೇರಿ ಕಾರ್ನಾಡರನ್ನು ಸನ್ಮಾನಿಸಲು ಒಂದು ಸಭೆ ಸೇರಿಸಿಬಿಟ್ಟಾಗಿತ್ತು. ದಿನವಿಡೀ ಬಳಲಿದ್ದ ಗಿರೀಶ್, ಮೂಲತಃ ತಾವು ಅಡಿಗರ ಅಭಿಮಾನಿಯಾಗಿರದೆ ಅನಂತರ ಅವರ ಮಹತ್ಸಾಧನೆಯ ಬಗ್ಗೆ ಅರಿತವನೆಂದು ಪ್ರಾರಂಭಿಸಿದರು. ಅಡಿಗರ ಬದುಕು-ಬರಹದ ಬಗ್ಗೆ ಸರಳ ನೇರ ನಿರರ್ಗಳವಾಗಿ ಒಂದು ಗಂಟೆಗೂ ಮೀರಿ ಅವರಾಡಿದ ಮಾತನ್ನು ಆ ಸಂಜೆ ಹಳ್ಳಿಯ ಸಭೆ ಕಿವಿಗೊಟ್ಟು ಆಲಿಸಿ ಧನ್ಯತಾ ಭಾವದಿಂದ ಸ್ಪಂದಿಸಿದ್ದನ್ನು ನಾನು ಮರೆಯಲಿಕ್ಕುಂಟೇ ?






0 Comments