ಮೈತ್ರೇಯಿ ಸಚ್ಚಿದಾನಂದ ಹೆಗಡೆ ಕಥೆ- ಪ್ರಶ್ನೆಗಳು

ಮೈತ್ರೇಯಿ ಸಚ್ಚಿದಾನಂದ ಹೆಗಡೆ

ಹೆಸರು ಗೊತ್ತಿಲ್ಲದ ನದಿ, ವಿಶಾಲವಾಗಿ ಹರಿಯುತ್ತಿದೆ. ಎಲ್ಲರ ಪಾಪಗಳನ್ನು ತನ್ನ ಪುಣ್ಯ ಅಂಬುಧಿಯಲ್ಲಿ ತೊಳೆಯುತ್ತಾ, ಅಸಂಖ್ಯ ಜೀವಿಗಳಿಗೆ ಆವಾಸವಾಗಿ, ಬೆಟ್ಟ- ಬಂಡೆಗಳ ನಡುವಲ್ಲಿ ನುಗ್ಗಿ ಸಾಗುತ್ತಿರುವ ಜನರ ಜೀವನಾಡಿ, ತಾಯಿ. ಬಹುಶಃ ನದಿಯನ್ನು ಮತ್ತು ಭೂಮಿಯನ್ನು ನಾವು ತಾಯಿಯೆನ್ನುವುದು ಪ್ರತಿಫಲದ ಅಪೇಕ್ಷೆಯಿಲ್ಲದೆ ತನ್ನದೆಲ್ಲವನ್ನೂ ನಿಸ್ಪೃಹವಾಗಿ ಕೊಡುವ, ಪ್ರೀತಿಸುವ ಅವುಗಳ ಗುಣದಿಂದಲೇ ಇರಬಹುದು. ಪ್ರೀತಿ – ಲೋಕದ ಎಂತಹ ಸುಂದರ ಸೃಷ್ಠಿಯಲ್ಲವೇ? ಆದರೆ ನಾನು ಪ್ರೀತಿಯನ್ನು, ಅಥವಾ ಪ್ರಣಯವನ್ನು ಕಂಡದ್ದು ಮತ್ತು ಅರಿತದ್ದು ನನಗೆ ಮಾತ್ರವಲ್ಲ ಲೋಕಕ್ಕೂ ಒಂದು ಕೌತುಕದ ಕಥೆಯೇ ಸರಿ.

ಬೆಂಕಿಯಿಂದ ಹುಟ್ಟಿಬಂದ ನಾನು, ಲೋಕ ಸುಂದರಿ ಎಂದೇ ನನ್ನಪ್ಪ-ಅಮ್ಮ ಹೇಳುವುದುಂಟು. ಕಪ್ಪು ಬಣ್ಣದ ಚರ್ಮ ನನ್ನ ಚಂದಕ್ಕೆ ಒಂದು ವೈಶಿಷ್ಟ್ಯತೆಯನ್ನೇ ಕೊಟ್ಟಿದೆ ಎನ್ನುತ್ತಾರೆ ಜನ. ದ್ರುಪದನ ಮಗಳಾಗಿ, ಪಾಂಚಾಲದ ರಾಜಕುಮಾರಿಯಾಗಿ ಅತ್ಯುತ್ತಮ ಶಿಕ್ಷಣ ನನಗೆ ದೊರಕಿತು. ಚಿಕ್ಕಂದಿನಿಂದಲೇ ನಾನು ಹಠವಾದಿಯಾಗಿದ್ದೆ.

ವೀರನೂ, ಬಲಶಾಲಿಯೂ ಆದ ಅಣ್ಣ ದೃಷ್ಟದ್ಯುಮ್ನನ ಸರಿ ನಿಲ್ಲಲು ಅರ್ಥಶಾಸ್ತ್ರವನ್ನು ಮತ್ತು ರಾಜ್ಯಶಾಸ್ತ್ರವನ್ನು ಅಭ್ಯಾಸ ಮಾಡಿದೆ. ಆಗ ಓದಿದ್ದು, ಕೆಲಸಕ್ಕೆ ಬಂದಿದ್ದು ಖಾಂಡವಪ್ರಸ್ಥದಲ್ಲಿ. ಯುಧಿಷ್ಠಿರನ ಅರಸಿಯಾಗಿ, ರಾಜ್ಯದ ಜವಾಬ್ದಾರಿಯನ್ನು ಅವನ ಹೆಗಲಿಗೆ ಹೆಗಲಾಗಿ ಹೊರಲು ಸಾಧ್ಯವಾಯಿತು. ರಾಜಕುಮಾರಿಯಾಗಿ ಹಾಡು – ಹಸೆಗಳಿಗೆ ಮೀಸಲಾಗದೆ, ಛಲಕ್ಕಾಗಿ ಕಲಿತ ವಿದ್ಯೆ ನನ್ನ ವ್ಯಕ್ತಿತ್ವ ರೂಪಿಸಿತು. 

ಎಷ್ಟೊಂದು ಸೋಜಿಗವಲ್ಲವೇ ಜೀವನ? ಪಾಂಚಾಲದಲ್ಲಿ ಅಂದು ಬೆಳೆದು, ಓದಿ ಓಡಿ, ಆಡುವಾಗ, ಅಷ್ಟೇಕೆ, ಸ್ವಯಂವರದ ಮಂಟಪದಲ್ಲಿ ನಿಂತಾಗಲೂ ಬದುಕು ಒಂದು ದಿನ ಈ ತಿರುವಿನಲ್ಲಿ ಬಂದು ನಿಲ್ಲುತ್ತದೆ ಎಂಬ ಅಂದಾಜಿತ್ತೇ ನನಗೆ? ಆದರೂ ಈ ತಿರುವಿನ್ನಲ್ಲೊಂದು ಸೊಗಸಿದೆ, ನನ್ನ ಜೀವನ ಸುತ್ತಲಿರುವವರಲ್ಲಿ ತಂದ ಸಂಚಲನ, ಕುತೂಹಲ ಮತ್ತೊಂದಿಷ್ಟು ಸಣ್ಣ ಈರ್ಷ್ಯೆ ಇವನ್ನು ನೆನೆದರೆ ಮೊಗದಲ್ಲಿ ಗೆಲುವಿನ ನಗೆಯೊಂದು ತಾನೇ ಅರಳಿಯೂ ಅರಳದಂತೆ ಮೊಗ್ಗಾಗುತ್ತದೆ. ಅರಮನೆಯ ಕನ್ನಡಿಯಿದ್ದಿದ್ದರೆ ಈಗ ನನ್ನ ಗುಳಿಕೆನ್ನೆಯನ್ನು ಕಂಡು ಚೂರು ಗರ್ವ ಪಡಬಹುದಿತ್ತು.

ಕನ್ನಡಿ ಎಂಬಂತೆ ನೆನಪಾಯ್ತು, ತುಂಬು ಪ್ರೀತಿಯ ತುಂಬಿಕೊಂಡ ಭೀಮನ ಕಣ್ಣಾಲಿಗಳು. ಅವನ ಆ ಕಂಗಳಲ್ಲಿ ನನ್ನನ್ನು ನೋಡಿಕೊಳ್ಳುವ ಸಂತಸವಿದೆಯಲ್ಲ, ಬೆಟ್ಟದಷ್ಟು ಪ್ರೀತಿಸುವ ಗಂಡನ ಪಡೆದ ಹೆಂಡತಿಯೇ ಅರಿತಾಳು. ನೋಡುಗರ ಎದೆಯಲ್ಲಿ ಅಂಜಿಕೆ ಹುಟ್ಟಿಸುವ ದೈತ್ಯಾಕಾರನಾದರೂ ನನ್ನ ನೆರಳು ಸುಳಿಯುತ್ತಲೇ, ಮಾವುತನ ಪ್ರೀತಿಸುವ ಆನೆಯಂತೆ ಮುದ್ದು – ಮುದ್ದಾಗುವ ಭೀಮನವನು. ಇವತ್ತು, ಆಸೆಕಂಗಳಿಂದ ಆ ಹೂ ಬೇಕೆಂದಾಗ ಮಗುವಂತೆ ಜಿಗಿ- ಜಿಗಿದು ಓಡಿಹೋಗಲಿಲ್ಲವೇ ಅವನು, ನನ್ನಾಸೆಯೇ ಅವನ ಜೀವಿತವೆಂಬಂತೆ ? 

ಎಷ್ಟೊಂದು ಚೆನ್ನಿತ್ತು ಆ ಹೂವು? ಎಂತಹ ಪರಿಮಳ? ಎಂತಹ ಬಣ್ಣಗಳು! ಈ ವನವಾಸ ಇಲ್ಲದಿದ್ದರೆ ಹೀಗೆ ಪ್ರಕೃತಿಯಲ್ಲಿ ಸ್ವಚ್ಛಂದವಾಗಿ ವಿಹರಿಸಲು ಸಾಧ್ಯವಿತ್ತೇ? ಅಂತಃಪುರದ ವಾಸವೆಂದರೆ ಬಂಗಾರದ ಪಂಜರವೇ ಸರಿ. ಇರುವಷ್ಟು ದಿನ ತಿಳಿಯಾದ ಗಾಳಿ- ನೀರು ಕುಡಿದು ಆನಂದಪಡಬೇಕು. ಆ ಹಾಯಿಯನ್ನು ಮನಸಲ್ಲಿ ತುಂಬಿಟ್ಟುಕೊಳ್ಳಬೇಕು.

ಮರಳಿದ ಮೇಲೆ ಜಗದ ಜಂಜಡದಲ್ಲಿ ದಣಿವಾದಾಗ ಕಣ್ಮುಚ್ಚಿ ಈ ದಿನಗಳನ್ನು ನೆನೆಯಬೇಕು. ಈ ಹಸಿರ ನೆನಪಿಂದ ಉಸಿರಪಡೆಯಬೇಕು, ಕಸುವು ತಂದುಕೊಳ್ಳಬೇಕು. ನಾನು ಹೀಗೆಯೇ, ತಾಸುಗಟ್ಟಲೆ ಆಲೋಚಿಸಬಲ್ಲೆ, ಕಳೆದು ಹೋಗಬಲ್ಲೆ. ಭೀಮನು ಹೋಗಿ ಅದೆಷ್ಟು ಹೊತ್ತಾಯಿತು? ಎಷ್ಟೊಂದು ಪ್ರೀತಿ ಅವನಿಗೆ ನನ್ನ ಮೇಲೆ? ಅದೃಷ್ಟವಂತೆ ನಾನು. 

ಅದೃಷ್ಟ ನನ್ನ ಪಾಲಿಗೆ ಐವರಾಗಿ ಮಡಿಲ ತುಂಬಿದೆ. ಯುಧಿಷ್ಠಿರನೋ ಮೃದುಭಾಷಿ, ಸಹೃದಯಿ. ಭೀಮನದೋ ಹುಚ್ಚು ಪ್ರೀತಿ. ಅರ್ಜುನನೋ ವೀರ, ಚಿತ್ತಾಕರ್ಷಕ. ನಕುಲನು ಪರಮಸುಂದರನಾದರೆ ಸಹದೇವನು ಮಹಾಜ್ಞಾನಿ. ಐವರೂ ಪ್ರೀತಿಯನ್ನು ವ್ಯಕ್ತಪಡಿಸುವ ಬಗೆ ಬೇರೆ. ಅಣ್ಣ ತಮ್ಮಂದಿರಾದರೂ ಪಂಚಭೂತಗಳ ಹಾಗೆ ಒಬ್ಬೊಬ್ಬರ ಸ್ವಭಾವವೂ ಒಂದೊಂದು ರೀತಿ. ಯಾರಾದರೂ ಈಗ ಈ ಐವರಲ್ಲಿ ಒಬರನ್ನು ಆರಿಸು ಎಂದರೆ ಸಾಧ್ಯವಾಗಲಾರದೇನೋ. 

ಮದುವೆಯ ಮುಂಚೆ ಯಾರು ಹಿತವರೆಂಬ ಪ್ರಶ್ನೆಗೆ ಉತ್ತರವಿತ್ತು ನನ್ನ ಬಳಿ. ಯವ್ವನದ ಹೊಸಿಲು ತುಳಿದಾಗಿಂದ ಪಾರ್ಥನ ಸಾಹಸಗಳ ಬಗ್ಗೆ ಕೇಳಿ ಅವನ ಮೇಲೆ ಮನಸನಿಟ್ಟಿದ್ದೆ. ಯಾವ ಪುಣ್ಯವೋ ಅಪ್ಪ ದ್ರುಪದನ ಆಸೆಯೂ ಅದೇ ಆಗಿತ್ತು. ಅದಕ್ಕೇ ಅರ್ಜುನನು ಮಾತ್ರ ಭೇದಿಸಲು ಬರುವಂತ ಸ್ಪರ್ಧೆ ಸ್ವಯಂವರಕ್ಕಿಟ್ಟಿದ್ದು. ಆ ಸಮಯದಲ್ಲಿ ಪಾಂಡವರು ಅರಗಿನ ಮನೆಯಲ್ಲಿ ಸುಟ್ಟುಹೋದರೆಂಬ ಗಾಳಿ ಸುದ್ದಿ ಇದ್ದರೂ, ಯಾರೂ ಅದನ್ನು ಸಂಪೂರ್ಣವಾಗಿ ನಂಬಿರಲಿಲ್ಲ. ಹಾಗಾಗಿಯೇ ನನ್ನಪ್ಪ ಅಷ್ಟೊಂದು ವಿಶ್ವಾಸದಿಂದ ನನ್ನ ಸ್ವಯಂವರವನೇರ್ಪಡಿಸಿದ್ದು. ಒಂದು ವೇಳೆ ಮಧ್ಯಮ ಪಾಂಡವ ಬದುಕಿಲ್ಲದಿದ್ದರೂ, ಅವನಷ್ಟೇ ಶೂರನಾದವನು ನನ್ನನ್ನು ವರಿಸಬೇಕೆಂಬುದು ಅಪ್ಪನ ಆಸೆಯಾಗಿತ್ತು. 

ಅರ್ಜುನ ಬಂದ. ಲೀಲಾಜಾಲವಾಗಿ ಸ್ವಯಂವರ ಗೆದ್ದ. ಬ್ರಾಹ್ಮಣ ವೇಷದಲ್ಲಿದ್ದ ಅವನು ಕೋಪಗೊಂಡ ರಾಜರೊಡನೆ ಕಾದಬೇಕಾಯಿತು. ಭೀಮನೂ, ಅರ್ಜುನನೂ ನನಗಾಗಿ ಕಾದಾಡಿದ್ದೂ ಆಯಿತು, ಗೆದ್ದದ್ದೂ ಆಯಿತು. ನನ್ನ ಕೈ ಹಿಡಿದು ಅರ್ಜುನನು ಮನೆಗೆ ಕರೆದುಕೊಂಡು ಹೋದದ್ದೂ ಆಯಿತು. ಅವನ ನೋಟ, ಸ್ಪರ್ಶ ಮತ್ತು ಸಾನಿಧ್ಯ ಕೂಗಿ ಹೇಳಿತ್ತು, ಇವನು ನನ್ನ ಮನದನ್ನ ಅರ್ಜುನನೇ ಸರಿ ಎಂದು. 

ಬಾಳು ಬಂಗಾರವಾಯಿತು ಎಂದುಕೊಂಡಷ್ಟರಲ್ಲಿ, ಹೊಸಿಲಲ್ಲಿ ಸ್ವಾಗತಿಸಿದ್ದು, ಆರತಿ- ಆದರಗಳಲ್ಲ, ಬದಲಾಗಿ ವಿಚಿತ್ರವೆನಿಸುವ ನನ್ನ ಭವಿಷ್ಯ  ಎಂದೇ ಹೇಳಬಹುದು. ಇಂದಿನ ಗಳಿಕೆಯನ್ನು ತಂದಿದ್ದೇವೆ ಎಂದು ಯಮಸುತನು ನುಡಿದಾಗ, ಅತ್ತೆ ಕುಂತಿ ಹೇಳಿದ್ದು, ‘ಎಲ್ಲರೂ ಸಮನಾಗಿ ಹಂಚಿಕೊಳ್ಳಿ’ ಎಂದು. ಒಮ್ಮೊಮ್ಮೆ ಅನಿಸುವುದು, ನನ್ನನು ಬರಿಯ ಗಳಿಕೆಯಾಗಿ ಕಾಣದೇ, ಮನುಷ್ಯಳಾಗಿ ಕಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲವೇನೋ.

ನೇರವಾಗಿ, ‘ನನ್ನ ತಮ್ಮ, ನಿನ್ನ ಸೊಸೆಯೊಂದಿಗೆ ಬಂದಿದ್ದಾನೆ’ ಎಂದು ಹೇಳಿದ್ದರೆ, ನನ್ನ ಜೀವನ ಹೀಗಿರುತ್ತಿರಲಿಲ್ಲವೇನೋ? ಹಾಗೆಂದ ಮಾತ್ರಕ್ಕೆ ನನ್ನ ಜೀವನದಲ್ಲೇನೋ ಕೊರತೆಯಿದೆಯೆಂಬುದಲ್ಲ. ಬಹುಶಃ ಯುಧಿಷ್ಠಿರನಿಗೆ ನಾನು ಧನ್ಯವಾದ ಹೇಳಬೇಕು, ಹೀಗೊಂದು ಅಪರೂಪವಾದ ಜೀವನವನ್ನು ನನ್ನಂಗಳಕ್ಕೆ ಕರೆತಂದಿದ್ದಕ್ಕೆ. ಆದರೆ ಆ ಕ್ಷಣದಲ್ಲೊಮ್ಮೆ ಆತಂಕವಾಗಿತ್ತು ನನಗೆ.

ಕುಂತಿಯೂ, ಅಣ್ಣ-ತಮ್ಮಂದಿರೂ ಚರ್ಚೆ ನಡೆಸಿದ್ದರು ಒಬ್ಬ ಹೆಣ್ಣು ಐದು ಗಂಡಸರನ್ನು ಏಕಕಾಲಕ್ಕೆ ಮದುವೆಯಾಗುವುದರ ಸರಿ – ತಪ್ಪುಗಳ ಬಗ್ಗೆ. ಸುಮ್ಮನೆ ತಲೆಯೆತ್ತಿ ನೋಡಿದೆ, ಒಬ್ಬರಾದ ಮೇಲೆ ಒಬ್ಬರ ಕಡೆಗೆ. ಎಲ್ಲರೂ ನನ್ನ ಅಂದದ ಆರಾಧಕರಾಗಿದ್ದರು ಎಂಬುದರಲ್ಲಿ ಸಂಶಯವಿರಲಿಲ್ಲ ನನಗೆ. ಎಲ್ಲರ ಕಂಗಳಲ್ಲೂ ನನ್ನೆಡೆ ನೋಡುವಾಗ ಹೌದೋ ಇಲ್ಲವೋ ಎಂಬಂತೆ ಆಸೆ ಹೊಳೆಯುತ್ತಿತ್ತು. ಎಲ್ಲರೂ ಸುಮುಖರೂ, ಸಧೃಡರೂ ಆಗಿದ್ದರು. ಅವರೇ ಪಾಂಡವರೆಂಬುದೂ ಅಷ್ಟರಲ್ಲಿ ನನಗೆ ಮನವರಿಕೆಯಾಗಿತ್ತು. ಅವರ ಬಗ್ಗೆ ಕೇಳಿ ಅರಿತಿದ್ದ ನನಗೆ ಜೀವನ ಇವರೊಟ್ಟಿಗೆ ಕಷ್ಟವಾಗಲಾರದು ಎಂದೆನಿಸಿತು. 

ಸಮಾಜದ ಅಳತೆಗಳಿಗಿಂತ ಬೇರೆಯಾದ ಹಾದಿಯಲ್ಲಿ ನಡೆಯುವ ಬಯಕೆ ನನ್ನ ಸೆಳೆಯುತ್ತಿತ್ತು. ನಿಜವಾಗಿಯೂ, ಈ ಮದುವೆ ಆಕರ್ಷಣೀಯವೆನಿಸಿತ್ತು. ಬೇಡವಾದದ್ದನ್ನು ಖಂಡಿತವಾಗಿ ಬೇಡವೆನ್ನುವ ನಾನು ಸುಮ್ಮನಾಗಿದ್ದೇ ಆ ಕಾರಣಕ್ಕಾಗಿ. ಬೇಕೆನಿಸಿದಾಗ ಲಿಂಗ – ವಯಸ್ಸಿನ ಮೇರೆಯಿಲ್ಲದೆ ದನಿ ಏರಿಸಿದ್ದಿದೆ ನಾನು. ಆದರೆ ಈ ಬಾರಿಯೇಕೋ ಪ್ರತಿಭಟನೆಗಿಂತ ಅನುಸರಣೆ ಹೆಚ್ಚು ಆಸಕ್ತಿ ಹುಟ್ಟಿಸಿತ್ತು. ಹಿರಿಯರು ಗೆರೆ ಹಾಕಿದರೆ ದಾಟದ ಬಡಪಾಯಿ ಹೆಣ್ಣಾದೆ, ಕುರುಕುಲದ ಸೊಸೆಯಾದೆ. ಪಾಂಡವರ ಪಟ್ಟಮಹಿಷಿಯಾದೆ!

ನನಗೈವರೂ ಇಷ್ಟ. ನನಗರಿವಾಗಿದೆ, ಮೊಗೆ- ಮೊಗೆದು ಕೊಡುವಷ್ಟು ಪ್ರೀತಿ ಇದೆ ನನ್ನ ಬಳಿ, ಯಾರಿಗೂ ಅಸಮಾಧಾನ, ಅತೃಪ್ತಿ ಆಗದ ರೀತಿಯಲ್ಲಿ. 

ನಾನು ಯೋಚಿಸುವುದಿದೆ, ಅಸಲಿಗೆ ರಾಮನೂ – ಸೀತೆಯೂ ಹೇಗೆ ಆದರ್ಶವಾಗುತ್ತಾರೆ? ಎಲ್ಲರೂ ಅವರವರ ಶಕ್ತ್ಯಾನುಸಾರ ಪ್ರೀತಿಸಬೇಕು, ಪ್ರೀತಿಸದವರೊಡನೆ ಜೀವಿಸಬೇಕು. ಎಲ್ಲರೂ ಹಲವು ಮದುವೆಯಾಗಬೇಕೆಂದಲ್ಲ, ಆದರೆ ಅದು ಅವರವರಿಗೆ ಬಿಟ್ಟದ್ದಲ್ಲವೇ? ಒಬ್ಬ ರಾಮನಿಗೆ ಒಬ್ಬ ಸೀತೆಯನ್ನು ಮಾತ್ರ ಪ್ರಣಯಿಸಲು ಸಾಧ್ಯವಾಯಿತೆಂದರೆ ಅದು ಆದರ್ಶವಾಗುವುದು ಹೇಗೆ? ಪ್ರಣಯ ಪ್ರೀತಿಯನ್ನು ನಿರ್ಬಂಧಿಸುವುದು ಶ್ರೇಷ್ಠವಾಗುವುದು ಹೇಗೆ? ಪ್ರೇಮ- ಪ್ರೀತಿಯೇನು ಹೊನ್ನು – ಮಣ್ಣಿನ ಹಾಗೆಯೇ, ಯಾರಾದರೊಬ್ಬರ ಹೆಸರಿಗೆ ಬರೆದುಕೊಡಲು? ಅರ್ಥವಾಗುವುದಿಲ್ಲ ನನಗೆ.

ಮದುವೆಯ ಮುಂಚೆ ಅರ್ಜುನನ್ನು ಮಾತ್ರ ನಾನು ಮೋಹಿಸಿದ್ದರೂ, ಈಗ ಪಂಚ- ಪಾಂಡವರೆಲ್ಲರೂ ನನ್ನ ಪಂಚ- ಪ್ರಾಣವಿದ್ದಂತೆ. ಜೀವನ ಸನ್ನಿವೇಶಗಳು ನನ್ನಲ್ಲಿ ಪ್ರೀತಿಸುವ, ಮೋಹಿಸುವ ಮತ್ತು ಕಾಮಿಸುವ ಶಕ್ತಿ ಕೊಟ್ಟಿದೆ. ತಪ್ಪೇನು ಇದರಲ್ಲಿ? ಆಶ್ಚರ್ಯದ ಸಂಗತಿ ಒಂದಿದೆ ಇದರಲ್ಲಿ. ಈ ವಿವಾಹಕ್ಕೆ ದೊಡ್ಡವರು ಒಪ್ಪಿದರು ಎನ್ನುವುದಕ್ಕಿಂತ ಇದನ್ನು ಅವರೇ ಮಾಡಿಸಿದರು. ಸಂಪ್ರದಾಯಬದ್ಧವಾಗಿ ವಿವಾಹ ನೆರವೇರಿಸುವ ಮುನ್ನ ಇದು ಬೇಡವೇ ಬೇಡವೆಂದಿದ್ದ ನನ್ನಪ್ಪ, ವ್ಯಾಸ ಮಹರ್ಷಿಗಳೊಟ್ಟಿಗೆ ನಡೆಸಿದ ಏಕಾಂತ ಸಂವಾದದ ನಂತರ ಖುಷಿಯಿಂದ ಆಶೀರ್ವದಿಸಿ ಕಲ್ಯಾಣ ನಡೆಸಿಕೊಟ್ಟ. 

ಇಂದಿನವರೆಗೆ ಆ ಮಾತುಕತೆಯಲ್ಲಿ ಏನು ನಡೆದಿತ್ತೆಂಬುದರ ಸ್ಪಷ್ಟ ಅರಿವು ನನಗಿಲ್ಲದಿದ್ದರೂ, ನನ್ನ ಮದುವೆ ಯಾವುದೋ ರಾಜತಂತ್ರದ ಭಾಗವಾಗಿಯೋ, ಅಥವಾ ನಂಬಿಕೆಯ ಬಲದ ಮೇಲೆಯೋ ಆಗಿದೆ ಎಂದು ನನಗೆ ಗೊತ್ತಿದೆ. ನನ್ನನ್ನು ಕಾಡುವ ಪ್ರಶ್ನೆಯೇನೆಂದರೆ, ನಾನು ಈ ಪಾಂಡವರನ್ನು ಯಾವುದೋ ಕಾಡಿನಲ್ಲಿಯೋ, ಹಳ್ಳಿಯಲ್ಲಿಯೋ ಕಂಡು, ಐವರಲ್ಲಿಯೂ ಅನುರಕ್ತಳಾಗಿದ್ದರೆ ಪರಿಸ್ಥಿತಿ ಹೇಗಿರುತ್ತೆಂಬುದು! ಈ ಪದ್ಧತಿ ಜನಸಾಮಾನ್ಯರ ಅರಿವಿನಲ್ಲಂತೂ ಇರುವುದಲ್ಲ. ಅಂದ ಮೇಲೆ, ಈಗ ಮಹಾಪತಿವ್ರತೆಯಲ್ಲೊಬ್ಬಳು ನಾನು ಎಂದು ಕೊಂಡಾಡುವ ಜನರು ಆಗ ಹೇಗೆ ಪ್ರತಿಕ್ರಿಯಿಸುತ್ತಿದ್ದರು? ಎರಡನೆಯ ಮಾತಿಲ್ಲದೇ, ಜಾರಿಣಿ ಎಂದು ಜರಿದಿರುತ್ತಿದ್ದರು. ಎಂತಹ ವಿಪರ್ಯಾಸವಲ್ಲವೇ!

ಪ್ರೀತಿಯೆಂದು ನಾನೆಂದರೆ ಅಶ್ಲೀಲ, ಅವರು ಹೇರಿದರೆ ಧರ್ಮ. 

ಭೀಮನು ಈಗಾಗಲೇ ಹಿಡಿಂಬೆಯನ್ನು ಮದುವೆಯಾಗಿ ಘಟೋತ್ಕಚನನ್ನು ಪಡೆದಿದ್ದಾನೆ. ಮತ್ತುಳಿದ ನಾಲ್ವರೂ ಬೇರೆ ಮದುವೆಗಳಾಗಬಹುದು. ಅದರಲ್ಲೂ ವೀರನೂ, ರಸಿಕನೂ ಆದ ಅರ್ಜುನನು ಇನ್ನೆಷ್ಟು ಮಾಡಿಕೊಳ್ಳಲಿದ್ದಾನೆಯೋ? ಸೋಜಿಗವೆಂದರೆ ಜಗತ್ತಿಗೆ ಇವು ನನ್ನ ಮದುವೆಯಷ್ಟು ಸೋಜಿಗವಲ್ಲ. ಏಕಿರಬಹುದು?

ಹೆಣ್ಣು ಭಾವನಾಜೀವಿ ಎನ್ನುತ್ತಾರೆ. ಅಂದರೆ ಅಕ್ಷಯವಾಗಿ ಪ್ರೀತಿಸುವ ಸಾಮರ್ಥ್ಯ ಹೆಣ್ಣಿಗಲ್ಲವೇ ಹೆಚ್ಚು? ಆದರೂ ಬಹುಪತ್ನಿತ್ವ ಹೇಗೆ ರೂಢಿಯಾಗಿ ಬೆಳೆದು ಬಂದಿದೆ? ನನಗನಿಸುವುದು ಹೀಗೆ, ಭಾವನೆಗಳಿಗೂ ಈ ವ್ಯವಸ್ಥೆಗೂ ಸಂಬಂಧವಿಲ್ಲ. ಸಂಬಂಧವಿರುವುದು ವಾರಸುದಾರತನ ಮತ್ತು ವ್ಯವಸ್ಥೆಯ ನಡುವೆ. ಹೆಣ್ಣು ಏಕಕಾಲಕ್ಕೆ ಇಬ್ಬರೊಂದಿಗೆ ಸಂಸಾರ ನಡಿಸಿದರೆ, ಗರ್ಭ ಯಾರದ್ದು ಎಂಬ ಪ್ರಶ್ನೆಗೆ ಉತ್ತರ ಕಷ್ಟ.

ಮಕ್ಕಳ ತಂದೆ ಯಾರು, ಯಾರ ಆಸ್ತಿಗೆ ಯಾರು ಹಕ್ಕುದಾರರು ಎಂದು ನಿರ್ಧರಿಸುವುದು ಕಠಿಣ. ಅದಕ್ಕೆ ಅಲ್ಲವೇ, ನನಗೂ ವರ್ಷಕ್ಕೊಬ್ಬನು ಮಾತ್ರ ಗಂಡನಾಗುವುದು? ಸಮಾಜದಲ್ಲಿ ಸಂಕೀರ್ಣತೆ ಹೆಚ್ಚಿದಂತೆ ಭಾವನೆಗಳ ಜಾಗದಲ್ಲಿ, ಅನುಕೂಲಗಳು ಮನ್ನಣೆ ಪಡೆಯುತ್ತವೆ. ಬಹುಪತ್ನಿತ್ವವೂ ಹೀಗೆ ಪುರುಷಪ್ರಧಾನ ಸಮಾಜದ ಆನುಕೂಲ್ಯದ ಕೂಸು. 

ಇವೆಲ್ಲ ಹೀಗೆಯೇ ಮುಂದುವರಿಯಲಿವೆಯೇ? ಬದುಕಿನ ಸಂಕೀರ್ಣತೆಗಳು ಹೆಚ್ಚಿ, ಮತ್ತೊಬ್ಬರ ಸರಿ ತಪ್ಪುಗಳ ವಿಮರ್ಶಿಸಲು ಸಮಯವಿಲ್ಲದೆ, ವ್ಯಕ್ತಿಗಳು ಸ್ವಾತಂತ್ರ್ಯ ಪಡೆಯುವ ದಿನಗಳು ಬರುವುದೇ ಮುಂದೆ? ಧರ್ಮ ವನ್ನು ಸಮಾಜದ ಸಮ್ಮತಕ್ಕಿಂತ ಭಾವನೆಗಳ ನೈಜತ್ವದ ಅಡಿಪಾಯದಲ್ಲಿ ತೀರ್ಮಾನಿಸುವ ದಿನಗಳು ಬರಬಹುದೇ ಮುಂದೆ? ಕೆಲವಾದರೂ ಹೆಣ್ಣು ಜೀವಗಳು ಆ ಬದುಕು ಬಾಳುವ ದಿನಗಳು ಬರಲಿವೆಯೇ? ನನ್ನಲ್ಲಿ ಇಂದು ಮೊಳೆಯುತ್ತಿರುವ, ಮೊಳೆದಿರುವ ಪ್ರಶ್ನೆಗಳು ಹೀಗೆಯೇ ಮಣ್ಣಾಗುವುದೇ, ಅಥವಾ ತಲೆಮಾರುಗಳು ಉರುಳಿದರೂ ಪ್ರಶ್ನೆಗಳಾಗಿಯೇ ಉಳಿಯುವವೋ?  

ಹೆಜ್ಜೆ ಸಪ್ಪಳ ಕೇಳುತ್ತಿದೆ, ಭೀಮನು ಬಂದನೆಂದೆನಿಸುತ್ತದೆ.

‍ಲೇಖಕರು Admin

July 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: