
ರಾಜ್ಯದಲ್ಲಿನ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರ ಅನೇಕ ಅಡೆ-ತಡೆಗಳ ನಡುವೆಯೂ ಚೇತರಿಸಿಕೊಳ್ಳತೊಡಗಿದೆ. ಕೆಲವರ ಪಾಲಿಗೆ ಸರ್ಕಾರ ಇನ್ನೂ ‘ಟೇಕಾಫ್’ ಆಗಿಲ್ಲ ಎಂಬ ಟೀಕೆಗಳ ಹೊರತಾಗಿಯೂ ಮೈತ್ರಿ ಸರ್ಕಾರ ಕ್ರಮೇಣ ಚುರುಕುಗೊಳ್ಳತೊಡಗಿದೆ.
ಯಾವುದೇ ಮೈತ್ರಿ ಸರ್ಕಾರ ವ್ಯವಸ್ಥೆ ಆರಂಭದಲ್ಲಿ ಅನೇಕ ಎಡರು-ತೊಡರುಗಳನ್ನು ನಿವಾರಿಸಿಕೊಳ್ಳಲು ಕಾಲಾವಕಾಶ ಹಿಡಿಯುತ್ತದೆ. ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೂ ಕಾಲಾವಕಾಶ ಬೇಕಾಗಿದೆ. ಜೆ.ಹೆಚ್. ಪಟೇಲರು ಹೇಳಿದ ಕಥೆಯಂತೆ ಹೋರಿಯ ಜೋತು ಬಿದ್ದ ಬೀಜಕ್ಕೆ ಕಾಯುವ ನಾಯಿಯಂತೆ ಅನೇಕರು ಬಾಯಿ ನೀರೂರುತ್ತ ಸರ್ಕಾರದ ಅನಿಶ್ಚಿತತೆಯನ್ನು ಆಶಿಸುತ್ತಲೆ ಇದ್ದಾರೆ.
ಪ್ರಜಾಪ್ರಭುತ್ವದಲ್ಲಿ ಇಂತಹದ್ದೊಂದು ಸನ್ನಿವೇಶಕ್ಕೆ ಕಾರಣರಾದವರು ಅಂತಿಮವಾಗಿ ಮತದಾರರೇ. ಯಾವೊಂದು ಪಕ್ಷಕ್ಕೂ ನಿರ್ಧಿಷ್ಟ ಬಹುಮತ ಕೊಡಲಾರದ ಮತದಾರ ರಾಜಕೀಯ ಒಡಂಬಡಿಕೆಗಳಡಿಯಲ್ಲಿ ರೂಪುಗೊಂಡ ‘ಮೈತ್ರಿ’ಯನ್ನು ಅಲ್ಲೆಗೆಳೆಯುವುದು ಬೇಜವಾಬ್ದಾರಿಯೂ ಆಗಬಹುದು. ಸಿದ್ದಾಂತ ಬೇಧಗಳ ಎರಡು ಪಕ್ಷಗಳು ಕೂಡಿಕೊಂಡರೂ ಅದನ್ನು ‘ನಾಗರೀಕ ಸರ್ಕಾರ’ ದ ರೂಪದಲ್ಲಿ ಕಂಡು ಕಾಯಬೇಕಾದದ್ದು ಮತದಾರರ ಹೊಣೆಗಾರಿಕೆ.
ಕೆಲವು ಮಾಧ್ಯಮಗಳಂತೂ ಮೈತ್ರಿ ಸರ್ಕಾರವನ್ನು ಕೆಡವಲು ಕೂಲಿ ಕೊಲೆಗಾರರಂತೆ ಹಗಲಿರುಳು ಶ್ರಮಿಸುತ್ತಾ ಅದನ್ನೆ ಜನಾಭಿಪ್ರಾಯವೆಂಬಂತೆ ಬಿಂಬಿಸಲು ಹರಸಾಹಸ ಮಾಡುತ್ತಿವೆ. ಇಂತಹ ಹೊತ್ತಿನಲ್ಲಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಮತ್ತು ಅವರ ಸಹವರ್ತಿ ಕಾಂಗ್ರೆಸ್ ಮುಖಂಡರುಗಳು ಹೆಚ್ಚು ಸಂಯಮದಿಂದ ಆಡಳಿತ ಸೂತ್ರ ನಡೆಸುವ ಎಚ್ಚರಿಕೆ ವಹಿಸಬೇಕು.
‘ವಿಧಾನಸೌಧದಲ್ಲಿ ಭ್ರಷ್ಟಾಚಾರವಿದೆ. ಅಧಿಕಾರಿಗಳು ಲಂಚಕ್ಕಾಗಿ ಕೈಚಾಚುತ್ತಿದ್ದಾರೆ. ಈ ಭ್ರಷ್ಟಾಚಾರವನ್ನು ತಡೆಯಲು ಕೈ ಹಾಕಿದರೆ ತಮ್ಮ ಅಧಿಕಾರವೇ ಹೋಗಬಹುದು’, ‘ ನಾನು ಎಷ್ಟು ದಿನ ಮುಖ್ಯಮಂತ್ರಿಯಾಗಿರುತ್ತೇನೋ ಗೊತ್ತಿಲ್ಲ’, ‘ಲೋಕಸಭಾ ಚುನಾವಣೆವರೆಗೆ ಮಾತ್ರ ಈ ಸರ್ಕಾರ’ ಇಂತಹ ಮಾತುಗಳು ಆಡುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಸಲಿಗೆ ಕಾಡುತ್ತಿರುವ ಸಂದೇಹವಾದರೂ ಏನು?
ಅವರಾಗಲೆ ತಮ್ಮಲ್ಲಿನ ಆತ್ಮ ವಿಶ್ವಾಸವನ್ನು ಕಳೆದುಕೊಂಡು ಬಿಟ್ಟರಾ? ಎಂಬ ಪ್ರಶ್ನೆಗಳಿಗೆ ತಾವೇ ಊಡು ಕೊಟ್ಟುಬಿಟ್ಟಿದ್ದಾರೆ. ಅಧಿಕಾರ ದಂಡ ಹಿಡಿದ ನಾಯಕನೇ ತನ್ನ ಪರಿಸರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಅದು ತನ್ನ ಅಧಿಕಾರವನ್ನೇ ಅಲುಗಾಡಿಸುವ ಮಟ್ಟಿಗೆ ಪ್ರಬಲವಾಗಿದೆ ಎಂದು ಹೇಳುವುದು ರಣರಂಗದಲ್ಲಿ ದಂಡನಾಯಕ ಶತ್ರು ಪಡೆ ಕುರಿತು ವ್ಯಕ್ತಪಡಿಸುವ ಆತಂಕಕ್ಕೆ ಸಮವಾಗಿರುತ್ತದೆ.
ಇದರ ಪರಿಣಾಮ ಏನಾಗಬಹುದು ಎಂಬುದನ್ನು ಯೋಚಿಸಬೇಕು. ಈ ಮಾತುಗಳನ್ನೆ ಹಿಡಿದುಕೊಂಡು ಎದುರಾಳಿಗಳು ಸರ್ಕಾರದ ಗಟ್ಟಿತನದ ಬಗ್ಗೆ ಜನರಲ್ಲಿ ನಂಬಿಕೆ ಕೆಡಿಸುವ ಅಪಾಯವೂ ಇದೆ. ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆಯ ಹಿಂದೆ ಈ ನಾಡಿನ ಜನರ ನೋವು, ಕಷ್ಟಗಳಿಗೆ ಪರಿಹಾರ ಹುಡುಕಲು ಅಧಿಕಾರ ಬೇಕು ಎಂದು ಪ್ರತಿಪಾದಿಸುತ್ತಲೇ ಬಂದ ಹೆಚ್ಡಿಕೆ ಅವರು ‘ನಾನೆಷ್ಟುದಿನ ಬದುಕಿರುತ್ತೇನೋ ಗೊತ್ತಿಲ್ಲ, ನನಗೆ ಹಣ,ಆಸ್ತಿಯ ಮಾಡುವ ಆಸೆ ಇಲ್ಲ. ಈ ನಾಡಿನ ಜನರ ಕಣ್ಣೀರು ಒರೆಸುವ ಅವಕಾಶವೊಂದು ಬೇಕು ..’ ಎಂದು ಚುನಾವಣಾ ಸಂದರ್ಭದಲ್ಲಿ ಅಡಿದ ಮಾತುಗಳು ಅವರು ಇಷ್ಟು ಬೇಗ ಮರೆತೆರೇಕೆ? ಚಿನ್ನದ ಹರಿವಾಣದಲ್ಲಿಟ್ಟುಕೊಟ್ಟಂತೆ ಮುಖ್ಯಮಂತ್ರಿ ಪದವಿ ತಮ್ಮ ಪಾಲಿಗೆ ಬಂದೊದಗಿರುವಾಗ ಹತಾಶೆಯ ಮಾತುಗಳು ಸೋಜಿಗವೇ ಸರಿ.
ಕುಮಾರಸ್ವಾಮಿ ಅವರಿಗೆ ರಾಜಕೀಯ ಚಾಣಕ್ಯತನದ ಅಳವಿಲ್ಲ. ನಾಜೂಕುಗಳೂ ಇಲ್ಲ. ಅಂತರಂಗ-ಬಹಿರಂಗದ ತೆರೆ-ಮರೆಗಳಿಲ್ಲ. ಜನರನ್ನು ಕಂಡೊಡನೆ ಭಾವಾನಾತ್ಮಕವಾಗಿ ಕೆರಳಿಬಿಡುತ್ತಾರೆ. ತಮ್ಮದುರಿಗೆ ಕಣ್ಣಿರಿಟ್ಟವರಿಗೆ ಕೈಲಾದ ಸಹಾಯವನ್ನು ಮಾಡಿ ತಮ್ಮನ್ನು ತಾವೇ ಸಮಾಧಾನಿಸಿಕೊಂಡು ಬಿಡುತ್ತಾರೆ.
ಆಡಳಿತದಲ್ಲಿನ ಒಳಗುಟ್ಟುಗಳನ್ನು ಬಯಲಲ್ಲಿ ಬಿಚ್ಚಿಟ್ಟು ಸುದ್ದಿಶೂರರ ಬಾಯಿಗೆ ತುತ್ತಾಗುತ್ತಿದ್ದಾರೆ. ಹೆಚ್. ಡಿ ಕುಮಾರಸ್ವಾಮಿ ರಾಜಕೀಯದಲ್ಲಿ ‘ಸಾಂದರ್ಭಿಕ ಶಿಶು’ ನಿಜವಿರಬಹುದು. ಆದರೆ ಅವರು ಅಸಮರ್ಥ ರಾಜಕಾರಣಿ ಅಲ್ಲ ಎಂಬುದನ್ನು ಅವರು 20 ತಿಂಗಳ ಮುಖ್ಯಮಂತ್ರಿಯಾಗಿ ಕೊಟ್ಟ ಆಡಳಿತ ಸಾಬೀತು ಮಾಡಿದೆ.
ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ದೊಡ್ಡಗೌಡರಂತೆ ರಾಜಕೀಯ ಚಾಣದ ಪೆಟ್ಟುಗಳು ಬಿದ್ದು ರೂಪುಗೊಂಡ ನಾಯಕನಲ್ಲ. 2006 ರಲ್ಲಿ ತಾವೇ ಸೃಷ್ಟಿಸಿಕೊಂಡ ರಾಜಕೀಯ ಸನ್ನಿವೇಶದಿಂದ ಮುಖ್ಯಮಂತ್ರಿಯಾದವರು. ಅಂದು ಪಕ್ಷ ಉಳಿಸಲು ಕಾಂಗ್ರೆಸ್ ಸಂಬಂಧವನ್ನು ಮುರಿದುಕೊಂಡು ಬಿಜೆಪಿ ಜೊತೆ ಸರ್ಕಾರ ಮಾಡಬೇಕಾದಂತಹ ಪರಿಸ್ಥಿತಿ ಎದುರಾಗಿತ್ತು ಎಂದು ಹೇಳುತ್ತಾ ತಮ್ಮ ನಡೆಯನ್ನು ಸಮರ್ಥಿಸಿಕೊಂಡರೆ ಈಗಿನ ಸನ್ನಿವೇಶದಲ್ಲೂ ನಾನು ಸಾಂದರ್ಭಿಕ ಕೂಸು ಎಂದು ಹೇಳಿಕೊಳ್ಳುತ್ತಿದ್ದಾರೆ.
ಈಗಿನದ್ದು ಮತದಾರನೇ ಸೃಷ್ಟಿಸಿದ ಸನ್ನಿವೇಶವೇ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತಂದು ಕೂರಿಸಿದೆ. 2006 ರಲ್ಲಿ ಘಟಿಸಿದ ರಾಜಕೀಯ ಸ್ಥಿತ್ಯಂತರದಲ್ಲಿ ಕುಮಾರಸ್ವಾಮಿ ಕರ್ನಾಟಕ ರಾಜಕಾರಣಕ್ಕೆ ಹೊಸ ನಾಯಕತ್ವದ ಹೊಸ ನೀರಿನಂತೆ ಚಿಮ್ಮಿ ಬಂದವರು. ಜಡ್ಡುಗಟ್ಟಿದ , ಕಳೆಗುಂದಿದ ಹಳೆಯ ಮುಖಗಳ ನಾಯಕತ್ವದಿಂದ ರೋಸಿಹೋಗಿದ್ದ ರಾಜ್ಯದ ಜನತೆಗೆ ಹೊಸತೊಂದು ನಾಯಕತ್ವ ಸಿಕ್ಕಂತಾಗಿತ್ತು. ಆದರೆ ವಚನ ಭ್ರಷ್ಟತೆಯ ಶಾಪಕ್ಕೆ ಗುರಿಯಾದ ಕುಮಾರಸ್ವಾಮಿ ಅದರಿಂದ ವಿಮೋಚನೆಗೆ ಹತ್ತು ವರ್ಷಗಳು ಬೇಕಾಯಿತು.
ಜಾತಿಯ ಧ್ರುವೀಕರಣದಲ್ಲಿ ಕುಮಾರಸ್ವಾಮಿ ಯಶಸ್ವಿ ಆಗಿದ್ದು, ಅವರ ರಾಜಕೀಯ ಮಹತ್ವಾಕಾಂಕ್ಷೆಗೆ ದೊಡ್ಡ ಭೂಮಿಕೆಯನ್ನೇ ನಿರ್ಮಿಸಿದೆ. ಅದಕ್ಕಾಗಿ ಜಾತ್ಯತೀತ ಜನತಾದಳ ಒಂದು ಜಾತಿಗೆ ಸೀಮಿತ ಎನ್ನುವ ಆರೋಪದ ನಡುವೆ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಅಪಾರ ಪ್ರಮಾಣದ ಬಿಎಸ್ಪಿ ಹೆಸರಿನಲ್ಲಿ ದಲಿತ ಮತಗಳನ್ನು ಬಾಚಿಕೊಂಡಿದೆ.
ಮಂತ್ರಿ ಮಂಡಲದಲ್ಲಿ ಅವರ ಪಕ್ಷದಿಂದ ಒಬ್ಬ ದಲಿತರನ್ನೂ ಗುರುತಿಸಿಲ್ಲ. ಬಿಎಸ್ಪಿ ಮಿತ್ರ ಪಕ್ಷವಾಗಿ ತನ್ನ ಪಾಲನ್ನು ಪಡೆದಿದೆ. ಈ ಕಾರಣಕ್ಕೆ ಮಹೇಶ್ ಅವರನ್ನು ಜೆಡಿಎಸ್ ನ ದಲಿತ ಕೋಟಾ ಎಂದು ನೋಡಲು ಸಾಧ್ಯವಿಲ್ಲ. ಆದರೆ ಜೆಡಿಎಸ್ ನ ಮಂತ್ರಿಮಂಡಲ ಕೂಡ ಒಂದೇ ಜಾತಿಗೆ ಮೀಸಲಾದಂತೆ ರೂಪಿಸಿರುವುದು ಮಿತಿಗಳಲ್ಲಿ ಒಂದು. ಹಾಗಂತ ಯಾವ ದಲಿತರೂ ಜೆಡಿಎಸ್ ತಲೆಬಾಗಿಲಲ್ಲಿ ನಿಂತು ಪ್ರಶ್ನಿಸದಷ್ಟು ಮಟ್ಟಿಗೆ ಕುಮಾರಸ್ವಾಮಿ ಮೇಲುಗೈ ಸಾಧಿಸಿದ್ದಾರೆ.
ಹೀಗಿರುವಾಗ ತಮ್ಮ ಕುಟುಂಬ ಸಂಬಂಧಿ ಪ್ರೊ.ರಂಗಪ್ಪ ಅವರನ್ನು ಶಿಕ್ಷಣ ಖಾತೆಯ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲು ಮುಂದಾಗಿರುವ ಮಾತು ವಿವಾದಾತ್ಮಕವಾಗುವ ಎಲ್ಲಾ ಬಾಗಿಲುಗಳನ್ನು ತೆರೆದಿದೆ. ಮೈಸೂರು ವಿವಿ. ಮುಕ್ತ ವಿವಿಯ ಕುಲಪತಿಗಳಾಗಿ ಸ್ವತಃ ರಂಗಪ್ಪ ಭ್ರಷ್ಟಾಚಾರದ ಕಪ್ಪುಚುಕ್ಕೆ ಹೊದ್ದು ಕುಂತಿದ್ದಾರೆ. ಅದಲ್ಲದೆ ಮೊನ್ನೆಯಷ್ಟೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಂಗಪ್ಪ ಜನರಿಂದ ತಿರಸ್ಕರಿಸಲ್ಪಟ್ಟಿದ್ದಾರೆ. ಕೆಂಪಯ್ಯ ಅವರನ್ನು ಗೃಹ ಇಲಾಖೆಯಸಲಹೆಗಾರರನ್ನಾಗಿ ಮಾಡಿಕೊಂಡಿದ್ದ ಸಿದ್ದರಾಮಯ್ಯ ಅವರನ್ನು ಬಿಡದೆ ಕಾಡಿದ ಕುಮಾರಸ್ವಾಮಿ ಅವರು ಇದೀಗ ಅದೇ ಹಾದಿಯಲ್ಲಿ ನಡೆದರೆ ತಾವೇ ಪ್ರಶ್ನೆ ಮಾಡಿದ ಅನೈತಿಕತೆ, ಜಾತಿವಾದವನ್ನು ಸಕ್ರಮಗೊಳಿಸಿಕೊಂಡು ಹೊರಟಂತೆ ಅಲ್ಲವೆ?
ಜನತಾದರ್ಶನ, ಗ್ರಾಮವಾಸ್ತವ್ಯದಂತಹ ಜನಪ್ರಿಯ ಜನಪ್ರಿಯ ಕಾರ್ಯಕ್ರಮಗಳು ಕುಮಾರಸ್ವಾಮಿ ಅವರನ್ನೂ ಜನಜನಿತರನ್ನಾಗಿ ಮಾಡಿತು. ಆದರೆ ಆ ಎರಡೂ ಯೋಜನೆಗಳು ಆದರ್ಶ ಪ್ರಜಾಪ್ರಭುತ್ವದ ಮಾದರಿಗಳಲ್ಲ. ರಾಜಮಹಾರಾಜರ ಕಾಲಘಟ್ಟದ ಅನುಕರಣೆಯಷ್ಟೆ. ರಾಜ್ಯದ ಪ್ರತಿ ಹಳ್ಳಿ ಹಳ್ಳಿಗೂ, ರಾಜ್ಯದ ಕೋಟ್ಯಂತರ ಮಂದಿಗೂ ಕೋಟ್ಯಂತರ ಸಮಸ್ಯೆಗಳು ಇದ್ದೇ ಇರುತ್ತವೆ. ಅವರೆಲ್ಲ ‘ಮಹಾಪ್ರಭು’ವಿನ ಸನ್ನಿಧಾನಕ್ಕೆ ಬಂದು ತಮ್ಮ ದುಃಖ ದುಮ್ಮಾನಗಳನ್ನು ತೋಡಿಕೊಳ್ಳಲು ಸಾಧ್ಯವೆ.? ಇದರಿಂದಾಗಿ ಆಗುವ ಪ್ರಜಾ ವೆಚ್ಚವೇನೂ ಕಡಿಮೆಯಲ್ಲ.
ಅದರ ನ್ಯೂನ್ಯತೆ ಏನೇ ಇದ್ದರೂ ಜನಮಾನಸದಲ್ಲಿ ಒಂದಿಷ್ಟು ಸಮಾಧಾನವನ್ನು ತುಂಬಿದ್ದ ತಮ್ಮ ಸಿಎಂ ಭೇಟಿ ದಂತಗೋಪುರದ ರಾಜಕುಮಾರನ ಕನಸು ಅಲ್ಲ. ಯಾರಾದರೂ ಸಲೀಸಾಗಿ ಹೋಗಬಹುದು ಎನ್ನುವ ಜನಾಭಿಪ್ರಾಯ ಮೂಡಿಸಿತ್ತು. ಈ ಸಂಬಂಧ ವೈಯಕ್ತಿಕವಾಗಿ ನೂರಾರು ತಾಪತ್ರಯಗಳನ್ನು ಎದುರಿಸಿದರೂ ಜನ ಸಾಗರದಂತೆ ನೆರೆಯುತ್ತಿದ್ದರು. ಪ್ರಜೆಗಳು ಖುದ್ದು ಬರದಂತೆ ಸಮಸ್ಯೆ ಇತ್ಯರ್ಥಕ್ಕೆ ಮಾಹಿತಿ ತಂತ್ರಜ್ಞಾನವನ್ನು ಇನ್ನಾದರೂ ಬಳಸಲಿ.
ಮೊದಲು ಪ್ರಜಾಸತ್ತಾತ್ಮಕ ನೆಲೆಯಲ್ಲಿ ರಚನೆಗೊಂಡಿರುವ ತಮ್ಮ ಸಚಿವ ಸಂಪುಟ ಸುಭದ್ರ ಸರ್ಕಾರವನ್ನು ಈ ರಾಜ್ಯಕ್ಕೆ ನೀಡುತ್ತದೆ . ಜನಕಲ್ಯಾಣಕ್ಕೆ ಸರ್ಕಾರ ಕಂಕಣಬದ್ದ ಎನ್ನುವ ಭರವಸೆಯನ್ನು ಮುಖ್ಯಮಂತ್ರಿಗಳು ನಾಡಿಗೆ ನೀಡಲಿ.
ಇದನ್ನು ಬಿಟ್ಟು ಮುಂದಿನ ಲೋಕಸಭೆ ಚುನಾವಣೆ ನಂತರ ತಮ್ಮ ಸರ್ಕಾರ ಬಿದ್ದೇ ಹೋಗುತ್ತದೆ ಎನ್ನುವಂತೆ ಗೋಳಾಡಿದರೆ ಜನತೆಗಾದರೂ ಇವರ ಬಗ್ಗೆ ಹೇಗೆ ವಿಶ್ವಾಸ ಬರುತ್ತದೆ.?
ಈಗಾಗಲೇ ಅವರು ವಚನಭ್ರಷ್ಟ ಎನ್ನುವ ಆರೋಪ ಹೊತ್ತು ಬಿಜೆಪಿ ಕೊಬ್ಬಿ ಬೆಳೆಯಲು ಮೇವು ನೀಡಿದ್ದಾಗಿದೆ. ಬಿಜೆಪಿ ಜತೆ ಮೈತ್ರಿ ಹೊಂದಿದ್ದೆ ತಮ್ಮ ತಪ್ಪೆಂದು ಮೇಲಿಂದ ಮೇಲೆ ಹೇಳುತ್ತಿದ್ದಾರೆ. ಆದರೆ ಈಗ ಹೊಸ ತಪ್ಪನ್ನು ಮಾಡಲು ಅವರೇ ಹೊರಟಿದ್ದಾರೆ. ಏನೇ ಆಗಲಿ, ಫೀನಿಕ್ಸ್ ನಂತೆ ಎದ್ದು ಬಂದಿರುವ ಕುಮಾರಸ್ವಾಮಿ ಅವರಿಗೆ ಸುಭದ್ರ ಸರ್ಕಾರವನ್ನು ನೀಡುವ ಮನಸ್ಸು -ಶಕ್ತಿ ಬರಲಿ ಎಂದು ನಾನು ಬಯಸುತ್ತೇನೆ.






0 Comments