ಓಲಾ ಬಾರ್ಸಿಲೋನಾ
3
ಹುಡುಗಿ ಎಲೆನಾಗೆ “ಈ ಚುರ್ರೋಸ್ ನಿಮ್ದೇನಾ ಇಲ್ಲಾ ಸ್ಪೇನಿನವರದ್ದಾ?” ಎಂದು ಕಿಚಾಯಿಸಿದಳು. “ಇದು ಚೈನಾದಿಂದ ಪೋರ್ತುಗಲ್ಲಿಗೆ ಬಂದ್ದದ್ದು, ಆಮೇಲೆ ನಮ್ಮದಾಯ್ತು” ಎಂದು ಖಾರವಾಗಿಯೇ ಉತ್ತರಿಸಿದಳು. ಹುಡುಗಿ ಮಾತ್ರ ಈ ಎಲೆನಾಗೆ ಇಷ್ಟೊಂದು ದ್ವೇಷ ಒಳ್ಳೇದಲ್ಲ ಎಂದು ಮನಸಲ್ಲಿಯೇ ಅಂದುಕೊಂಡು ಸುಮ್ಮನಾದಳು. ಈ ಅರಗಾನ್ ಜನರ ಉದ್ಧಟತನ ಒಂದು ಥರಾ ಅವಳನ್ನ ಘಾಸಿಗೊಳಿಸಿತ್ತು. ಹಾಗಾಗಿಯೂ ಎಲೆನಾಳ ಮಾತನ್ನ ಕೇಳುತ್ತಾ ಹೋದಳು. ಒಂದು ದೊಡ್ಡ ನಕ್ಷೆಯನ್ನ ಟೇಬಲ್ಲಿನ ಮೇಲೆ ಹರಡಿ “ನೋಡು ನಾವ್ ಹೇಗಿದ್ವಿ ಅಂದಳು”.. ಹುಡುಗಿ ಶ್ರೀಲಂಕಾದ ನಕ್ಷೆಗಿಂತ ಚಿಕ್ಕದಾದ ಒಂದು ಭಾಗವನ್ನ ತೋರಿಸಿ ಇದೇ ಕತಲೂನ್ಯ ಎಂದಳು. “ಇಡೀ ಸೌರಮಂಡಲದಲ್ಲಿ ಭೂಮಿ ಒಂದು ಚುಕ್ಕಿ, ಆ ಚುಕ್ಕಿಯಲ್ಲಿ ನಾವೊಂದು ಧೂಳಿನ ಕಣ, ಈ ಕಣಕ್ಕೆ ಯಾಕೆ ಇಷ್ಟೊಂದು ಹೋರಾಟ, ಹಾರಾಟಗಳು” ಎಂದು ನಗುತ್ತಾ ಅಂದಳು. ಎಲೆನಾಗೆ ನಿಜವಾಗಿಯೂ ಕೋಪ ಬಂದು, “ಕೇಳೋಹಂಗಿದ್ರೆ ಕೇಳು, ಇಲ್ಲದಿದ್ದ್ರೆ ಎದ್ದೋಗು” ಎಂದು ಬೈಯ್ಯುತ್ತಾ ಇದ್ದಳು. ಆಯ್ತು ಮುಂದೆ ಹೇಳು ಎಂದು ಚುರೋಸ್ ಮೆಲ್ಲುತ್ತಾ ಹುಡುಗಿ ಪಟ್ಟಂಗ ಹಾಕುವ ಹಾಗೆ ಕೂತಳು.
ಬಾರ್ಸಿಲೋನಾವನ್ನ ಮುಂಚೆ ಬಾರ್ಸಿನೋ ಎಂದು ಕರೆಯುತ್ತಿದ್ದರು ಎಂದಳು. “ಓಹ್ ಅದ್ರಲ್ಲೇನು, ಬೆಂಗಳೂರನ್ನ ಬೆಂದಕಾಳೂರು ಅಂತಿದ್ರು, ವೆಂಗಳೂರು ಅಂತಿದ್ರು…” ಎಂದು ಮನಸಿನಲ್ಲಿಯೇ ನಗುತ್ತಿದ್ದಳು ಹುಡುಗಿ . ಅವಳು ಬಾರ್ಸಿಲೋನಾ ಪೋರ್ಟಿಗೆ ಹೋಗೋಣ್ವಾ ಅಂದಳು. ಸರಿ ಎಂದು ಹುಡುಗಿ ಹೊರಟಳು … ಅಲ್ಲಿ ಕೊಲಂಬಸ್ ದೊಡ್ಡ ಪ್ರತಿಮೆಯನ್ನ ತೋರಿಸಿದಳು. “ಇವನು ಗೊತ್ತಾ ? ” ಎಂದು ಕೇಳಿದಳು. “ಗೊತ್ತೆ ಅವನು ಕೊಲಂಬಸ್, ದಾರಿ ತಪ್ಪಿದ ಮಗ, ನಮ್ಮ ದೇಶ ಎಂದು ಅಮೇರಿಕಾಗೆ ಹಾರಿದ ಚತುರ, ನಿಮ್ಮೆ ದೇಶದಲ್ಲಿ ಮಾತ್ರ ಅನ್ನಿಸತ್ತೆ ತಪ್ಪು ಮಾರ್ಗವನ್ನ ಕಂಡುಹಿಡಿದವರನ್ನೂ ಇಷ್ಟೆಲ್ಲಾ ಗೌರವಿಸೋದು” ಎಂದು ಕಿಸಕಿಸ ಹುಡುಗಿ ನಗುತ್ತಿದ್ದಳು.

“ಈ ಇಟಾಲಿಯನ್ ಸೇಲರ್ ನನ್ನ ಸ್ಪೇನಿನ ರಾಜರು ದತ್ತು ತೆಗೆದುಕೊಂಡು ಅವನಿಗೆ ಭಾರತಕ್ಕೆ ಹೋಗುವ ದಾರಿಯನ್ನ ಹುಡುಕು ಎಂದರು. ಅದಾಗಲೇ ಪೋರ್ತುಗಲ್ಲಿನ ಜನರು ಭಾರತಕ್ಕೆ ದಾರಿ ಹುಡುಕಲು ಶುರು ಮಾಡಿದ್ದರು. ವಿಶ್ವದ ಖಜಾನೆ ಭಾರತವನ್ನ ಹೇಗಾದರೂ ಮಾಡಿ ಲಪಟಾಯಿಸುವ ಹುನ್ನಾರ ಇಡೀ ಯುರೋಪಿಯನ್ನರಿಗೆ ಇತ್ತು. ಆದರೆ ಆ ದಾರಿ ಬಹಳ ದುರ್ಗಮವಾಗಿತ್ತು. ಹಾಗಾಗಿಯೂ ಸ್ಪೇನಿನ ರಾಜ ದುಡ್ಡು ಕಾಸು ಕೊಟ್ಟು ಕೊಲಂಬಸನ್ನನ್ನು ಭಾರತಕ್ಕೆ ದಾರಿ ಹುಡುಕಲು ಕಳಿಸಿದರೇ ಅವನು ಅಮೇರಿಕಾವನ್ನು ತಲುಪಿ ಅಲ್ಲಿದ್ದವರನ್ನ ರೆಡ್ ಇಂಡಿಯನ್ಸ್ ಎಂದು ಕರೆದು ಅಲ್ಲಿನ ಜನರನ್ನ ಆಳ್ವಿಕೆ ಮಾಡಲು ಶುರುಮಾಡಿದ.
ಮೆಡಿಟರೇನಿಯನ್ ಸಮುದ್ರದ ಟ್ರೇಡಿನ ಸಾರ್ವಭೌಮತ್ವವನ್ನ ಸ್ವಲ್ಪ ಮಟ್ಟಿಗೆ ಅಟ್ಲಾಂಟಿಕ್ ಸಮುದ್ರಕ್ಕೆ ತಿರುಗಿಸಿದ. ಅಲ್ಲಿಗೆ ಸ್ಪಾನಿಷ್ ಸಾರ್ವಭೌಮತ್ವ ಅರಗನ್ನರ ಮೇಲೆ ಜಾಸ್ತಿ ಆಯಿತು. ಎಲ್ಲರೂ ತಮ್ಮ ವ್ಯಾಪರಕ್ಕೆ, ವ್ಯವಹಾರಕ್ಕೆ ಮೆಡಿಟರೇನಿಯನ್ ಸಮುದ್ರವನ್ನ ಅಂದರೆ ಬಾರ್ಸಿಲೋನಾದ ಬಂದರನ್ನ ಅವಲಂಬಿಸಿದವರು ಈಗ ಆರಾಮಾಗಿ ಅಟ್ಮಾಂಟಿಕ್ ಸರೋವರಕ್ಕೆ ಹಾದುಹೋಗಲು ಶುರುಮಾಡಿದರು.
ಸ್ಪಾನಿಷಿನವರ ಹಾಗೆ ಎಕ್ಸ್ಪ್ಯಾನ್ಷನ್ ಮಾಡದೆ ತಮ್ಮ ಪಾಡಿಗೆ ತಾವು ಸುಮ್ಮನಿದ್ದ ಕತಲನ್ನರಿಗೆ ಇದು ಕುತ್ತಾಯಿತು. ಮುಖ್ಯವಾದ ಆಡಳಿತ ಹುದ್ದೆಗಳಲ್ಲಿ ಕತಲಾನಿನೇತರರು ಇರಲು ಶುರು ಮಾಡಿದರು. ಅವರ ಬುಡಕ್ಕೆ ಬರುವವರೆಗೂ ತಮ್ಮ ಭಾಷೆ, ತಮ್ಮ ಸಂಸ್ಕೃತಿ ಎಂದು ಹಾಯಗಿದ್ದ ಅವರಿಗೆ, ದುಡ್ಡಿನ ಅಭಾವ ಬಂದಾಗ ಕಳ್ಳತನ, ದಗಾಕೋರರ ದಾಳಿಯೂ ಜಾಸ್ತಿಯಾಯಿತು. ಮುಖ್ಯವಾಗಿ ಎರಡನೇ ಫಿಲಿಪ್ಪಿನ ಕಾಲದಲ್ಲಿ ಸ್ಪೇನಿನ ಪೈರೇಟ್ಸ್ಗಳು ಕತಲನ್ನರಿಗೆ ಬಹಳ ಕಾಟ ಕೊಡಲು ಶುರು ಮಾಡಿದ್ದರು. ಅದೂ ಅವರ ರಾಜನ ಕುಮ್ಮಕ್ಕಿನಿಂದಲೇ. ಕತಲನ್ನರನ್ನ ಹೇಗೋ ಮೂಲೆಗುಂಪು ಮಾಡುವ ಪ್ರಯತ್ನ ಮಾಡಲಾಗಿತ್ತು.
ಅಲ್ಲಿಗೆ ೧೬೪೦ರಲ್ಲಿ ಫಿಲಿಪ್ಪಿನ ರಾಜ್ಯಾಡಳಿತದ ವಿರುದ್ಧ ಬಾರ್ಸಾ ಜನರು ದಂಗೆ ಎದ್ದಿದ್ದರು. ಇವನ ಅಮೇರಿಕಾದ ಹುಚ್ಚುತನಕ್ಕೆ ಕಾಸ್ಟಿಲ್ಲಿನ ದುಡ್ಡು, ಕತಲೂನ್ಯಾದ ದುಡ್ಡು ಎಲ್ಲವೂ ಬೇಕಿತ್ತು. ಈ ಯುದ್ಧವನ್ನು ಗೆರಿಲ್ಲ ದೆಸ್ ಸೆಗ್ರದೊಸ್ ಎಂದು ಕರೆಯಲಾಯಿತು. ತಮ್ಮ ರಾಜ್ಯದಲ್ಲಿಯೇ ತಮಗೇ ಜಾಸ್ತಿ ತೆರಿಗೆಯನ್ನ ಸ್ಪೇನಿನ ರಾಜನಿಗೆ ತುಂಬ ಬೇಕಾಯಿತು, ಇವೆಲ್ಲವೂ ತಮ್ಮ ಅಭಿವೃದ್ಧಿಗೆ ಅಲ್ಲದೇ ಬರೀ ಸ್ಪೇನಿನ ಹುಚ್ಚು ಅಮೇರಿಕಾ ಯಾನಕ್ಕೆ……. ” ಎಂದು ಉಸಿರೂ ಬಿಡದೇ ಎಲೆನಾ ಹೇಳುತ್ತಾನೆ ಹೋದಳು.

“ಹಲೋ ಹಲೋ ನಿಲ್ಲಿಸು, ಸಿಕ್ಕಾಪಟ್ಟೆ ಕಥೆ ಹೇಳಿಬಿಟ್ಟೆ ಇವತ್ತು, ನಮ್ಮ ದೇಶದಲ್ಲಿಯೂ ಸಿಪಾಯಿ ದಂಗೆಯಾಯಿತ್ತು, ನಮ್ಮ ಕಿತ್ತೂರು ಚೆನ್ನಮ್ಮ ಸಹ ತೆರಿಗೆಯ ವಿರುದ್ಧ ನಿಮಗೇಕೆ ಕೊಡಬೇಕು ಕಪ್ಪ ಎಂದು ಹೋರಾಡಿದ್ದಳು. I know this stuff… ಆದರೆ ಈ ರೀಪರ್ಸ್ ಯುದ್ಧ ಅಂತೇನೋ ಇದೆಯಂತಲ್ಲ, ಫ್ರಾನ್ಸ್ ನಿಮಗೆ ಸಹಾಯ ಮಾಡಿತಂತಲ್ಲ, ಈ ಸ್ಪ್ಯಾನಿಷ್ ಸಕ್ಸೆಷನ್ ವಾರ್ , ಇವೆಲ್ಲಾ ಎಂಥದ್ದುಕಥೆ, ಹೇಳೇ ಇಲ್ಲ ನೀನು, ಇದ್ಯಾವನೋ ಫಿಲಿಪ್ ಅಂತಿದ್ಯಾ” ಎಂದು ಹುಡುಗಿ ಅವಕ್ಕಾಗಿ ನೋಡುತ್ತಿದ್ದಳು..
ಎಲೆನಾ ನಿಟ್ಟುಸಿರು ಬಿಡುತ್ತಾ, ” ಯುದ್ಧ ನಡೆಯುವ ಮುನ್ನ ಸುಮಾರು ವಿಷಯಗಳಾಗುತ್ತವೆ, ಹೀರೋಗಳೇ ಬೇರೆ, ಚರಿತ್ರೆಯಲ್ಲಿ ದಾಖಲಾಗುವವರೇ ಬೇರೆ… ರೀಪರ್ಸ್ ಯುದ್ಧದಲ್ಲಿ ಏನಾಯಿತು ಎಂಬ ವಿಷಯ ನಾಳೆ ಹೇಳುತ್ತೇನೆ, ಇಲ್ಲಿ ಬಾ ಈ ರಸ್ತೆ ಇದೆಯಲ್ಲ ರಾಂಬ್ಲಾಸ್ ಈ ರಸ್ತೆಯಲ್ಲಿ ಗೆಲಿಲಿಯೋ ಸಹ ಓಡಾಡಿದ್ದನಂತೆ, ಈ ಸಮುದ್ರ ದಂಡೆಯಲ್ಲಿ ಕೂತಿದ್ದನಂತೆ, ಅವನ ಡಿಸ್ಕವರಿಯಲ್ಲಿ ಕತಲನ್ನರದ್ದೂ ಪಾಲಿತ್ತಂತೆ.. ಗೊತ್ತಾ” ಎಂದು ಹೇಳುತ್ತಿದ್ದರೂ, ಈ ರೀಪರ್ಸ್ ಯುದ್ಧದ ಬಗ್ಗೆಯೇ ಯೋಚನೆ ಮಾಡುತ್ತಾ, ಹುಡುಗಿ ಕೂತಳು..
ರೀಪರ್ಸ್ ಯುದ್ಧದ ಬಗ್ಗೆ ಮುಂದಿನ ವಾರ…






It is interesting