–ಮ ಶ್ರೀ ಮುರಳಿಕೃಷ್ಣ
ಸಿನಿಮಾ ಮಾಧ್ಯಮದಲ್ಲಿ ಅಮೂರ್ತ-ಮೂರ್ತ ಮಿಶ್ರಣದ ಕಲಾತ್ಮಕ ಅಭಿವ್ಯಕ್ತಿ ವೀಕ್ಷಕರಲ್ಲಿ ಎಬ್ಬಿಸುವ ಪ್ರಶ್ನೆಗಳು, ಭಾವನೆಗಳು, ಗೊಂದಲಗಳು ಇತ್ಯಾದಿಗಳದ್ದು ಒಂದು ವಿಸ್ಮಯಕಾರಿ ವಿಶ್ವ. ಈ ನಿಟ್ಟಿನಲ್ಲಿ ಚಿತ್ರಕಲೆಯ ಅಮೂರ್ತ ಚಿತ್ರಗಳು ಮತ್ತು ರಂಗಭೂಮಿಯ ಅಸಂಗತ ನಾಟಕಗಳನ್ನೂ ಉದಾಹರಿಸಬಹುದು. ಇಂತಹ ಅಭಿವ್ಯಕ್ತಿಯ ಪೂರ್ಣ ಗ್ರಹಿಕೆ ಅನೇಕ ವೀಕ್ಷಕರಿಗೆ ದಕ್ಕುವುದಿಲ್ಲವಾದರೂ, ಗ್ರಹಿಕೆಗಾಗಿ ನಡೆಸುವ ಆಲೋಚನೆಗಳು ಹಾಗೂ ಪ್ರಯತ್ನಗಳ ಪಯಣವೇ ಒಂದು ಸೊಗಸು! ಹಾರಾಡುವ ಪಾತರಗಿತ್ತಿಯನ್ನು ಹಿಡಿಯಲು ಪ್ರಯತ್ನಿಸುವ ಬೆರಳುಗಳ- ಮನಸ್ಸುಗಳ ತಹತಹಕ್ಕೆ ಈ ಗ್ರಹಿಕೆಯ ಪಯಣವನ್ನು ಹೋಲಿಸಬಹುದು.

ಸಾಹಿತ್ಯದ ಕಾದಂಬರಿ ಪ್ರಕಾರದಲ್ಲಿ ಅಭಿವ್ಯಕ್ತಿಯ ಕ್ಯಾನ್ವಾಸ್ ದೊಡ್ಡದಿರುತ್ತದೆ. ಕಾದಂಬರಿಕಾರನಿಗೆ ಓದುಗರನ್ನು ತಲುಪಲು ವಿಫುಲ ಅವಕಾಶಗಳಿರುತ್ತವೆ. ಸಣ್ಣ ಕಥೆಗಳ ಕ್ಷೇತ್ರದಲ್ಲಿ ಈ ಸ್ಪೇಸ್ ಕ್ಷೀಣಿಸುತ್ತದೆ. ಮಿನಿ/ನ್ಯಾನೊ ಕಥೆಗಳ ವಲಯದಲ್ಲಿ ಇದು ಇನ್ನೂ ಕಿರಿದಾಗುತ್ತದೆ. ಫೀಚರ್ ಫಿಲ್ಮ್‌ಅನ್ನು ಒಂದರ್ಥದಲ್ಲಿ ಕಾದಂಬರಿ ಮತ್ತು ದೀರ್ಘ ಕಥೆಗೆ ಹೋಲಿಸಬಹುದು. ಕಿರುಚಿತ್ರಗಳನ್ನು (ಅದೂ ಕೆಲವೇ ನಿಮಿಷಗಳ) ನ್ಯಾನೊ ಅಥವಾ ಮಿನಿ ಕಥೆಗಳಿಗೆ ಸಮೀಕರಿಸಬಹುದು. ಕಿರುಚಿತ್ರಗಳ ಇಡೀ ಸಂಯೋಜನೆ, ಬೌದ್ಧಿಕವಾಗಿ ಮತ್ತು ಭೌತಿಕವಾಗಿ ಒಂದು ದೊಡ್ಡ ಸವಾಲಿನ ಕೆಲಸವೇ ಸರಿ.
2012ರಲ್ಲಿ ಚಂದ್ರಪ್ರಭ ಕಠಾರಿ ತಮ್ಮದೇ ಪ್ರಕಟಿತ ಸಣ್ಣ ಕಥೆ ಆಧಾರಿತ ʼ ಅಪ್ಪಯ್ಯʼ ಎಂಬ ಹತ್ತೂವರೆ ನಿಮಿಷಗಳ ಕಿರುಚಿತ್ರವನ್ನು ನಿರ್ಮಿಸಿದ್ದರು.. ಪ್ರಸ್ತುತ ಅವರು ಜನಶಕ್ತಿ ಮೀಡಿಯಾ ನಿರ್ಮಾಣದಡಿ ತಮ್ಮದೇ ಪರಿಕಲ್ಪನೆ ಮತ್ತು ಸಾಹಿತ್ಯವಿರುವ, ಸುಮಾರು ನಾಲ್ಕೂವರೆ ನಿಮಿಷಗಳ ʼನಾನಿಲ್ಲಿ ಇಳಿಯಲಾರೆ ʼಎಂಬ ಕಿರುಚಿತ್ರವನ್ನು ಮಾಡಿದ್ದಾರೆ.
ಚಿತ್ರದ ಓಪನಿಂಗ್ ಕ್ರೆಡಿಟ್ಸ್‌ನ ಮುನ್ನ ರೈಲು ನಿಲ್ದಾಣದ ಕೌಂಟರ್ ಬಳಿ ದಿನನಿತ್ಯದ ಸಂಭಾಷಣೆಗಳು ಕೇಳಿಬರುತ್ತವೆ. ಕೌಂಟರ್ ಕಾಣಿಸುವುದಿಲ್ಲ ; ಮಾತನಾಡುವವರು ಕೂಡ. ಆದರೆ ಎರಡು ದನಿಗಳು ಗಮನವನ್ನು ಸೆಳೆಯುತ್ತವೆ. ಒಬ್ಬ ಮಹಿಳೆ ತನ್ನ ಊರಿಗೆ ಟಿಕೆಟ್ ಕೇಳುತ್ತಾಳೆ! ಮತ್ತೊಬ್ಬ ತನ್ನ ಮನೆಗೆ! ಭೌಗೋಳಿಕತೆ ಹಿಂದೆ ಸರಿದು ಮಾನಸಿಕ ಸ್ಥಿತಿ ಮುನ್ನೆಲೆಗೆ ಬರುತ್ತದೆ.
ನಂತರ ರೈಲಿನ ಪ್ಲಾಟ್‌ಫಾರಂ, ಉದ್ಘೋಷಗಳು, ಕೆಲವು ಪ್ರಯಾಣಿಕರ ಓಡಾಟ, ಕೆಲವು ಕಿಶೋರಿಯರ ಕೊನೆಯ ಕ್ಷಣದ ರೈಲು ಹತ್ತುವಿಕೆ, ಮಹಿಳೆಯೊಬ್ಬಳ “ ನಾನಿಲ್ಲಿ ಇಳಿಯಲಾರೆ” ಎಂಬ ಮಾತುಗಳು, ಪಯಣಿಗರು ರೈಲಿನಿಂದ ಇಳಿಯುವಾಗ ಮತ್ತು ಪ್ಲಾಟ್‌ಫಾರಂ ಮೇಲೆ ಹಿಂದಕ್ಕೆ ಸಾಗುವಂತೆ ಕಾಣುವುದು, ರೈಲ್ವೆ ಲೈನ್ಗಳ ಪಕ್ಕದಲ್ಲಿ ,ರೈಲಿನ ಒಳಗಿಂದ ಕಾಣುವ ಸಣ್ಣ ಮರಗಳು, ಪೊದೆಗಳು ಇತ್ಯಾದಿ ಅನೇಕಾರ್ಥಗಳನ್ನು ಸ್ಪುರಿಸುತ್ತವೆ.
ಪಯಣದಲ್ಲಿ ನಿಶ್ಚಿತ ಗುರಿ ಇರುತ್ತದೆ. ಆದರೆ ಇಲ್ಲಿ ಕೆಲವರಿಗೆ ಅದ್ದು ಇದ್ದಂತಿಲ್ಲ! “ನಾನಿಲ್ಲಿ ಇಳಿಯಲಾರೆ” ಎನ್ನುವ ಮಹಿಳೆಯ ದನಿ ಸ್ತ್ರೀವಾದಿ ಸಂವೇದನೆಯಿಂದ ಕೂಡಿದೆ. ಹಿನ್ನೆಲೆಯಲ್ಲಿ ಆ ಮಹಿಳೆಯ ವಸ್ತುಸ್ಥಿತಿಯ ಸ್ವಗತ ಕೇಳಿಬರುತ್ತದೆ. ಘೋಷಣೆ, ಪ್ರತಿಭಟನೆ, ಯಾರನ್ನು ಬೊಟ್ಟು ಮಾಡಿ ತೋರಿಸುವ ಸನ್ನಿವೇಶವಿಲ್ಲ. ತನ್ನ ಆಯ್ಕೆಯನ್ನು ಮಾತ್ರ ಆಕೆ ತಿಳಿಸುತ್ತಾಳೆ!

ಸಿನಿಮಾದಲ್ಲಿ ಹಿಮ್ಮುಖ ಚಲನೆಗೆ ಅಂದರೆ ಜನ ಹಿಂದಕ್ಕೆ ಚಲಿಸುತ್ತಿರುವಂತೆ ತೋರಿಸಿದರೇ , ಅದು ಸ್ಮರಣೆ, ಮುಂದಕ್ಕೆ ಹೋಗಲಾಗದೆ, ಹಿಂದಿನ ಪರಿಸ್ಥಿತಿಯನ್ನು ಕೇಂದ್ರೀಕರಿಸುವ ಭಾವವನ್ನು ಸೂಚಿಸುತ್ತದೆ. ಚಿತ್ರದ ಕೊನೆಯಲ್ಲಿ ಕೇಳಿಬರುವ ಭಿನ್ನಲಿಂಗಿಯ ಮಾತುಗಳು ಚಿತ್ರವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುತ್ತದೆ.
ಒಂದೆರಡು ವ್ಯಕ್ತಿಗಳ ಮುಖಗಳನ್ನು ಮಾತ್ರ ತೋರಿಸಲಾಗಿದೆ. ಇಲ್ಲಿನ ಕಾಲುಗಳ ಚಲನೆಗಳು ಬಾಬು ಈಶ್ವರ್ ಪ್ರಸಾದ್ ಅವರ ನಿರ್ದೇಶನದ ʼ ಹರಿವ ನದಿಗೆ ಮೈಯೆಲ್ಲ ಕಾಲು ʼ ಎಂಬ ಸಿನಿಮಾದಲ್ಲಿ ತೋರಿಸಿರುವ ಚಲನೆಗಳನ್ನು ನೆನಪಿಸಿದವು.
ಪ್ರಯೋಗಶೀಲತೆ ಇರುವ ಈ ಕಿರುಚಿತ್ರವನ್ನು ಮೊದಲ ಬಾರಿ ವೀಕ್ಷಿಸಿದಾಗ, ಗ್ರಹಿಕೆಗೆ ದಕ್ಕುವುದಿಲ್ಲವೇನೋ ಎಂದೆನಿಸುವಂತಿದೆ! ಚಿತ್ರಿಕೆಗಳು ಇನ್ನು ಸ್ವಲ್ಪ ಸ್ಪಷ್ಟವಾಗಿ ಮೂಡಿಬರಬಹುದಿತ್ತು ಎಂದೆನಿಸಿತು. ಆದರೆ ಇರುವ ಪರಿಕರಗಳನ್ನು ದುಡಿಸಿಕೊಂಡು ಒಂದು ಭಿನ್ನ ಪ್ರಯತ್ನವನ್ನು ಮಾಡಿರುವುದಕ್ಕೆ ಚಂದ್ರಪ್ರಭ ಕಠಾರಿ ಮತ್ತು ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು.
ಕೆಳಗೆ ನೀಡಿರುವ ಲಿಂಕನ್ನು ಬಳಸಿ, ಈ ಕಿರುಚಿತ್ರವನ್ನು ಯೂಟ್ಯೂಬಿನ ಜನಶಕ್ತಿ ಮೀಡಿಯಾ ಚ್ಯಾನೆಲ್‌ನಲ್ಲಿ ವೀಕ್ಷಿಸಬಹುದು,
ಲಿಂಕ್: https://youtu.be/QMj4lTffp98?si=Irh8FfDfCtgHfq-k






0 Comments