ಪ್ರಸಾದ್ ರಕ್ಷಿದಿ
ಚಿತ್ರಗಳು: ಪ್ರಸಾದ್ ರಕ್ಷಿದಿ, ಪ್ರವರ ಕೊಟ್ಟೂರು, ವಿಲ್ಸನ್ ಕಟೀಲು
—-
ಮೂರು ದಿನಗಳ ಕಾಲ ತುಮರಿಯಲ್ಲಿ, ಮೂರು ನಾಟಕಗಳು. ಮೂರು ದಿನ ವಿಚಾರ ವಿನಿಮಯಗಳು.. ಅನುಭವಗಳ ಹಂಚಿಕೆ.. ಪ್ರೀತಿ ತುಂಬಿದ ಮಾತುಕತೆ, ಕವಿತೆ, ಹಾಡು, ಊಟ, ತಿಂಡಿ…ನೂರಾರು ನೆನಪುಗಳು…
ತುಮರಿಯ ಗೋಪಾಲ ಗೌಡ ರಂಗ ಮಂದಿರ, ಅದನ್ನು ಕಟ್ಟಿದ ಗೋಪಾಲಗೌಡರ ಸಹವರ್ತಿ ಹಾಲ್ಕೆರೆ ಮಂಜುನಾಥ ಭಟ್ಟರು. ( ಹಾ.ಮ. ಭಟ್).ಅವರ ನೆನಪಿನಲ್ಲಿ ಅವರ ಮಗ ರಘು ಹಾಲ್ಕೆರೆ ಅವರಿಂದ ಪ್ರತಿವರ್ಷ ಸಾಂಸ್ಕೃತಿಕ ದಾಸೋಹ…
ಅವರೊಂದಿಗೆ ತುಮರಿಯ ಲೋಕಪಾಲ್ ಜೈನ್, ಕೆ.ಜಿ ಕೃಷ್ಣ ಮೂರ್ತಿ, ಮುಂತಾದವರು, ಗಣಪತಿ, ಹಾಲಪ್ಪ ಇನ್ನೂ ಕೆಲವರ, ಸೇವಾ ಕೈಂಕರ್ಯ. ….
ಮೊದಲನೆಯ ದಿನ ಜಯಪ್ರಕಾಶ ಮಾವಿನಕುಳಿ ಅವರ ಅಧ್ಯಕ್ಷತೆ, ಕೇರಳದ ಸರಳ ಸಜ್ಜನ ಶಾಸಕ ವಿಷ್ಣು ನಾಥ್ ಅವರಿಂದ ಉದ್ಘಾಟನೆ…
ನಂತರ ಪ್ರಾರಂಭವಾದ ಗಾಂಧಿ – ಅಂಬೇಡ್ಕರ್- ನೆಹರೂ ವಿಚಾರ ಗೋಷ್ಠಿ ಯ ಮೊದಲಿಗೆ ವಿಚಾರದ ಕಿಡಿ ಹಚ್ಚಿದವರು… ಗೆಳೆಯ ಹೆಚ್. ಆರ್ ಸ್ವಾಮಿ..

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ.. ದಲಿತರಲ್ಲಿ ದಲಿತರಾದ ನಿರ್ಲಕ್ಷಿತ ಸಮುದಾಯಗಳ ನೋವಿನ ಬದುಕುಗಳ ಎದೆಯನ್ನೇ ಬಗೆದು ತೋರಿ.. ನಮ್ಮಂತವರಲ್ಲಿ ಗಾಢ ವಿಷಾದದ ಜೊತೆಗೆ ಪಾಪ ಪ್ರಜ್ಞೆಯ ತಾಪ ಮೂಡುವಂತೆ ಮಾಡಿದರು..
ಅವರ ನಂತರ ಮಾತಾಡಿದ ವಕೀಲ ಸುಧೀರ್ ಕುಮಾರ್ ಮುರೋಳಿ ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ ಯನ್ನೂ, ಹಾಗೂ ಅದರ ಕಾನೂನಾತ್ಮಕ ಆಯಾಮಗಳ ಬಗ್ಗೆ ಮಾತನಾಡಿದರು.
ಅಂದು ಮಧ್ಯಾನದ ಗೋಷ್ಟಿಯಲ್ಲಿ ವಿಲ್ಸನ್ ಕಟೀಲ್, ಫಾತಿಮಾ ರಲಿಯಾ, ದಿನೇಶ್ ಕುಕ್ಕುಜಡ್ಕ, ರಮ್ಯ ಮೂರ್ನಾಡು, ಪ್ರವರ ಕೊಟ್ಟೂರು, ಹೇಮಲತಾ ವಸ್ತ್ರದ, ವಸುಂದರಾ ಇವರೆಲ್ಲ ತಮ್ಮ ಬದುಕಿನ ಅನುಭವಗಳ ಮೂಲಕ ತಮ್ಮ ಬರಹ,ಕವಿತೆಗಳ ಹಿಂದಿನ ಪ್ರೇರಣೆಗಳ ಬಗ್ಗೆ ವಿವರಿಸಿದರು… ಪ್ರವರ ಕೊಟ್ಟೂರು ಗೋಷ್ಟಿ ಯನ್ನು ನಡೆಸಿಕೊಟ್ಟರು.

ಮೊದಲನೆಯ ದಿನದ ಸಂಜೆಯ ನಾಟಕ ಪ್ರಕಾಶ್ ರಾಜ್ ಅವರ ನಿರ್ದಿಗಂತ ತಂಡದ “ಗಾಯಗಳು” ನಾಟಕ. ತುಂಬ ಲವಲವಿಕೆಯ ಯುವ ತಂಡ.
ನಾಟಕ ಹಿಟ್ಲರ್ ನ ಕಾಲದ ದುರಂತ, ಕುವೆಂಪುರವರ ಸ್ಮಶಾನ ಕುರುಕ್ಷೇತ್ರ, ಶರೀಫನ್ ನ ಕತೆ, ಹಾಗೂ ಟಿಪ್ಪು ಇತಿಹಾಸ ಗಳೊಂದಿಗೆ ನಮ್ಮೆದುರಿರುವ ಸವಾಲುಗಳನ್ನು ಚರ್ಚಿಸಬಯಸುತ್ತದೆ. ಹಾಗೂ ಅವರೇ ಹೇಳಿದಂತೆ ದೇಶಕ್ಜಾದ ಗಾಯಗಳ ಬಗ್ಗೆಯೂ ಬೆಳಕು ಚೆಲ್ಲಲು ಪ್ರಯತ್ನ ಮಾಡುತ್ತದೆ.
ಆದರೆ ಈ ಎಲ್ಲ ತಾಂತ್ರಿಕ ಸೌಲಭ್ಯ ಮತ್ತು ಎನರ್ಜಿ ತುಂಬಿದ ಯುವ ತಂಡ ಇದ್ದೂ.. ನಾಟಕ ಅತಿ ಬೌದ್ಧಿಕತೆ ಬಾರದಲ್ಲಿ ಕುಸಿದು ನಿರೀಕ್ಷಿತ ಪರಿಣಾಮ ಬೀರುವಲ್ಲಿ ಸೋಲುತ್ತದೆ. ಇದಕ್ಕೆ ಕಾರಣ ತೀರ ಕಸರತ್ತಿನಂತೆ ಕಾಣುವ ಆಂಗಿಕಗಳು, ಹಾಗೂ ರೂಪಕಗಳಾಗಬೇಕಾದ ರಂಗತಂತ್ರಗಳು ಗಿಮಿಕ್ ಗಳಾಗಿಯೇ ಉಳಿದು ಬಿಡುವುದು. ಮತ್ತು ನಾಲ್ಕು ಕತಾ ವಸ್ತುಗಳುಗಳು ಸಿಂಕ್ರೊನೈಸ್ ಆಗದೆ ಉಳಿದು ಬಿಡುತ್ತವೆ.
ಗೆಳೆಯ ಶ್ರೀಪಾದ ಭಟ್ಟರ ಉತ್ತಮ ನಾಟಕಗಳನ್ನು ನೋಡಿದ ನನಗೆ ಗಾಯಗಳು ನಿರಾಶೆ ತಂದಿತು..

ನಮ್ಮ ಈ ಸಂದರ್ಭದಲ್ಲಿ ತುಸು ಸರಳೀಕೃತ ಅನ್ನಿಸಿದರೂ ಚಿಂತೆಯಿಲ್ಲ ಇಂತಹ ನಾಟಕಗಳು ದೊಡ್ಡ ಸಮುದಾಯಗಳಿಗೆ ತಲುಪುವಂತಹ ಪ್ರಯತ್ನವಾಗುವುದು ಮುಖ್ಯ.
ಎರಡನೆಯ ದಿನ ವಿಚಾರ ಗೋಷ್ಠಿಯಲ್ಲಿ ಸವಿತಾ ನಾಗಭೂಷಣ, ಮುಕುಂದರಾಜ್, ಕೆ.ವಿ. ಅಕ್ಷರ ಮಾತನಾಡಿದರು. ಸವಿತಾ ನಾಗಭೂಷಣ ಅವರು ತಮ್ಮ ಬದುಕಿನ ಅನುಭವಗಳೇ ಹೇಗೆ ಗಾಂಧಿಯನ್ನು ಅರಿತು ಕೊಳ್ಳುವ ದಾರಿಗಳೂ ಆದವೆಂದು ವಿವರಿಸಿದರು. ಮುಕುಂದ ರಾಜ್ ಅವರು ಸಂಘಪರಿವಾರದಿಂದ ಗಾಂಧಿಯೆಡೆಗೆ ನಡೆದ ತಮ್ಮನಡೆಗೆ ಕಾರಣರಾದ, ಕುವೆಂಪು, ಕಾರಂತ ತೇಜಸ್ವಿ ಲಂಕೇಶ್ ಸಿ.ಜಿ.ಕೆ ಅವರ ಬರಹ, ಒಡನಾಟಗಳ ಬಗ್ಗೆ ಮಾತನಾಡಿದರು. ಯುವಕರಿಗೆ ಮತ್ತೆ ಇವೆಲ್ಲವನ್ನೂ ಹೇಳದಿದ್ದರೆ ಮುಂದಿನ ದಿನಗಳು ಇನ್ನೂ ವಿಷಮಯವಾಗಲಿದೆ ಎಂದು ಎಚ್ಚರಿಸಿದರು.
ನಂತರ ಮಾತನಾಡಿದ ಕೆ.ವಿ.ಅಕ್ಷರ ಗಾಂಧಿ ಇಂದಿನ ದಿನಗಳಲ್ಲಿ ಪ್ರಸ್ತುತ ವೇ ಎಂಬ ಪ್ರಶ್ನೆ ನಮ್ಮ ಮುಂದಿದೆ ( ಎರಡೂ ದಿನಗಳಲ್ಲಿ ಈ ಪ್ರಶ್ನೆ ಮತ್ತೆ ಮತ್ತೆ ಮುಂದೆ ಬಂದಿತ್ತು)
ನಾವೀಗ ಗಾಂಧಿಯ ವಿಚಾರದಲ್ಲಿ ಎರಡು ಸಂಗತಿಗಳನ್ನು ಅರಿತರೆ ಈ ಪ್ರಶ್ನೆ ಗೆ ಉತ್ತರ ದೊರೆತೀತು.
ಮೊದಲನೆಯದು ನಮ್ಮೊಳಗಿನ ಧ್ವನಿಯನ್ನು ನಾವು ಕಂಡುಕೊಳ್ಳುವುದು..

ಎರಡನೆಯದು ನಮ್ಮ ಪ್ರತಿಯೊಂದು ನಡೆ ಈ ನೆಲದ ಕಟ್ಟ ಕಡೆಯ ಮನುಷ್ಯನ ಬದುಕಿಗೆ ಇದರಿಂದೇನಾದರೂ ಉಪಯೋಗವಿದೆಯೇ ? ಎಂದು ಯೋಚಿಸಿ ಪ್ರವೃತ್ತರಾಗುವುದು.
ಗಾಂಧಿಯ ಈ ನಿಲುವು ನಮ್ಮದೂ ಆಗುವುದು ಸದ್ಯ ಮಾತ್ರವಲ್ಲ ಸಾರ್ವಕಾಲಿಕವೂ ಹೌದು ಎಂದರು.
ಅಂದು ಕವಿ ಗೋಷ್ಠಿ ಯೂ ಇತ್ತು.
ಮಮತಾ ಅರಸೀಕೆರೆ ನಡೆಸಿಕೊಟ್ಟ ಕವಿಗೋಷ್ಟಿಯಲ್ಲಿ ಕೊಟ್ರೇಶ್ ಕೊಟ್ಟೂರು, ಪಾತಿಮಾ ರಲಿಯಾ, ಗೋಪಾಲ ತ್ರಾಸಿ, ವಿದ್ಯಾ ಹೆಗಡೆ, ಸತೀಶ್ ಜವರೇಗೌಡ,ದೊಡ್ಡ ಕಲ್ಲಳ್ಳಿ ನಾರಾಯಣಪ್ಪ , ವಿದ್ಯಾ ಭರತನಹಳ್ಳಿ,, ದೀಪಾ ಹಿರೇಗುತ್ತಿ, ಆನಂದ್ ಋಗ್ವೇದಿ ಹಾಗೂ ಹೈದರಾಬಾದ್ ನಿಂದ ಬಂದ ತೆಲುಗು ಕವಯಿತ್ರಿ ಮರ್ಸಿ ಮಾರ್ಗರೆಟ್ ಕವನ ಗಳನ್ನು ಪ್ರಸ್ತುತ ಪಡಿಸಿದರು..
ಇವೆಲ್ಲ ಕಾರ್ಯ ಕ್ರಮಗಳ ನಡು ನಡುವೆ ನಮ್ಮ ಸಾರ್ವಕಾಲಿಕ ಮಿತ್ರ ಪ್ಯಾಟ್ರಿಕ್ ರ ಆಶು ಕವಿತಾ ವಾಚನ, ಗೀತ ಗಾಯನವೂ ಇತ್ತು.
ಕಾರ್ಯಕ್ರಮ ಕ್ಕೆ ಬರಲಾಗದ ಸುಬ್ರಾಯ ಚೊಕ್ಕಾಡಿಯವರು, ಗೋಷ್ಠಿಯ ಸಮಯಕ್ಕೆ ಸರಿಯಾಗಿ ಗಾಂಧಿ ಮತ್ತು ಅಂಬೇಡ್ಕರ್ ಅವರ ಬಗ್ಗೆ ಎರಡು ಕವನ ಕಳುಹಿಸಿ.. ತಮ್ಮ ಹಕ್ಕನ್ನು ಸ್ಥಾಪಿಸಿದರು !!!
ವೀಣಾ ಹಾಲ್ಕೆರೆ ಅವರು ಹಾಡಿದ ರವೀಂದ್ರನಾಥ ಟಾಗೋರರ ಹೇ ಭುವನ ಮನ ಮೋಹಿನಿ ಮತ್ತೆ ನಮ್ಮನ್ನು ಶಾಲಾ ದಿನಗಳಿಗೆ ಒಯ್ದಿತ್ತು . ಹಳೆ ಮೈಸೂರು ವಿಭಾಗದಲ್ಲಿ ಅದು ಆಗ ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆಯ ಭಾಗವಾಗಿತ್ತು.

ಸಂಜೆ ಉಡುಪಿಯ ಭ್ರಮರಿ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಮೂರನೆಯ ದಿನ ಬೆಳಗ್ಗೆ ಗಾಂಧಿ ಜಯಂತಿ ಆಚರಣೆಯೊಂದಿಗೆ ಮಕ್ಕಳ ನಾಟಕ “,ಚಿಟ್ಟೆ ” ಪ್ರದರ್ಶನ ಇತ್ತು. ರಚನೆ ಬೇಲೂರು ರಘುನಂದನ ನಿರ್ದೇಶನ ಕೃಷ್ಣ ಮೂರ್ತಿ ಕವತ್ತಾರ್.
ತುಂಬ ಮಕ್ಕಳ ಪ್ರಶ್ನೆ ಗಳನ್ನು ಹಲವು ಪ್ರಶ್ನೆಗಳನ್ನು ನವಿರಾಗಿ ಸಾಗಿದ ನಾಟಕವನ್ನು ತುಮರಿ ಶಾಲಾ ಮಕ್ಕಳು ಮಾತ್ರವಲ್ಲ ದೊಡ್ಡವರು ಖುಷಿಯಿಂದ ನೋಡಿದರು. ಸ್ವಲ್ಪ ಅನಾರೋಗ್ಯ ಇದ್ದರೂ ಎಂಟನೇ ತರಗತಿಯ ಬಾಲಕ ಗೋಕುಲ ಸಹೃದಯ ಎಲ್ಲರ ಹೃದಯ ಗೆದ್ದ . ತುಮರಿಯಲ್ಲಿ ಆದದ್ದು ಈ ನಾಟಕದ 97 ಪ್ರದರ್ಶನ.
ನಂತರ ಸುಮಾರು ಮುಕ್ಕಾಲು ಗಂಟೆ ಅವಧಿ ನಮ್ಮ ನಿರಂತರ ಸಾಹಸಿ ಅಶೋಕ ವರ್ಧನ ಅವರ ಪುಸ್ತಕ ಮಾರಾಟ- ಹೋರಾಟ ಗಳ ಬಗೆಗಿನ ಅನುಭವಗಳ ಸಾರ ಸಂಗ್ರಹ.. ಮಂಡನೆ.
ಅವರ ಸೈಕಲ್ ಯಾತ್ರೆಗಳು, ಚಾರಣ, ಸಂಚಾರ ಪರಿಸರ ಜಾಗೃತಿಯಂತೆಯೇ ಅವರ ಪುಸ್ತಕ ಮಾರಾಟವೂ ಒಂದು ಅನನ್ಯ ಸಾಹಸವೇ…
ಕೊನೆಯ ಗೋಷ್ಠಿ ಯಲ್ಲಿ ಮತ್ತೆ ಅಂಬೇಡ್ಕರ್, ಮತ್ತು ಗಾಂಧಿ,
ನಾನು ಅಂಬೇಡ್ಕರ್ ನಮ್ ಭಾವವಲಯವನ್ನು ಪ್ರವೇಶಿಸಿದ ಬಗೆಗೆ ಮಾತನಾಡಿ ಅಂಬೇಡ್ಕರ್ ಮತ್ತು ಗಾಂಧಿ ನಮಗೆ ಅಕ್ಷರ- ಅರಿವು ಹೇಗೋ ಹಾಗೆಯೇ ಕಣ್ಣು ಮತ್ತು ಬೆಳಕು ಎಂದೆ

ಕೆ.ಪಿ ಸುರೇಶ್ ಸ್ವತಂತ್ರ ಭಾರತದಲ್ಲಿ ನೆಹರೂ ಗಾಂಧಿ ಅಂಬೇಡ್ಕರ್ ಇಬ್ಬರನ್ನೂ ಪಕ್ಕದಲ್ಲಿ ಇಟ್ಟುಕೊಂಡು ದೇಶ ಕಟ್ಟಿದ ರೀತಿಯನ್ನು ಪರಿಚಯಿಸಿದರು. ಪಿ.ಚಂದ್ರಿಕಾ ಅವರು ಗಾಂಧಿ ಮತ್ತು ಅಂಬೇಡ್ಕರ್ ಇವರಿಬ್ಬರೂ ಯಾಕೆ ಮತ್ತೆ ಮತ್ತೆ ಎದುರಾಗುತ್ತಾ ಪ್ರಸ್ತುತ ರಾಗುತ್ತಾರೆ ಎಂದು ಹಲವು ಅನುಭವಗಳ ಮೂಲಕ ತೆರೆದಿಟ್ಟರು.
ಶಶಿ ಸಂಪಳ್ಳಿಯವರು ಗೋಷ್ಠಿಯನ್ನು ನಡೆಸಿಕೊಟ್ಟರು.
ಅಂದು ಸಂಜೆ ನೀನಾಸಂ ಬಳಗದ ನಾಟಕ ಕುವೆಂಪು ಅವರ. ….”ರಕ್ತಾಕ್ಷಿ..” ಶೇಕ್ಸ್‌ಪಿಯರ್ ನ ಹ್ಯಾಮ್ಲೆಟ್ ನ ರೂಪಾಂತರ.
ನಿರ್ದೇಶನ ವೆಂಕಟರಮಣ ಐತಾಳರದು.
ಅನುಭವಿ ಮತ್ತು ಕಡಿಮೆ ಅನುಭವಿ ಗಳ ಮಿಶ್ರಿತ ತಂಡವನ್ನು ಇಟ್ಟುಕೊಂಡು ಐತಾಳರು ರಕ್ತಾಕ್ಷಿಯ ಎಲ್ಲ ಸೂಕ್ಷಗಳನ್ನು ಗಾಢವಾಗಿ ಕಡೆದಿಡುತ್ತಾರೆ.

ನಾಟಕದಲ್ಲಿ ರಾಣಿ ಚೆಲುವಾಂಬೆ,ತಿಮ್ಮ ಜಟ್ಟಿ, ಸನ್ಯಾಸಿ, ಮಂತ್ರಿ ,ಕಾವಲುಗಾರ ಮುಂತಾದವರು ಪಾತ್ರಗಳಿಗೆ ನ್ಯಾಯ ಒದಗಿಸಿದರೆ.
ರಕ್ತಾಕ್ಷಿ ಪಾತ್ರಮಾಡಿದ ವಿದ್ಯಾ ಮೂವತ್ತೆಂಟು ವರ್ಷಗಳ ಅಭಿನಯದ ನಂತರ ನಾನಿನ್ನೂ ನಾಲ್ಕು ದಶಕಗಳ ಕಾಲ ನಟಿಸಬಲ್ಲೆ ಎಂಬಂತೆ ಪಾತ್ರಕ್ಕೆ ಜೀವ ತುಂಬಿದರು..
ಮೂರು ದಿನಗಳ ಕಾಲವೂ ಗಾನಸುಮಾ ಪಟ್ಟಸೋಮನಹಳ್ಳಿ, ನಾದ ಮಣಿನಾಲ್ಕೂರು ಅವರ ಗಾನ ಸುದೆ ಹರಿದೇ ಇತ್ತು.. ಅದು ಕೆಲವು ಸಲ ರಾತ್ರಿ ಹನ್ನೆರಡರ ವರೆಗೂ ಮುಂದುವರಿಯಿತು.
ಈ ಆಫ್ ದ ರೆಕಾರ್ಡ್ ಗೋಷ್ಠಿ ಗಳಲ್ಲಿ ಪ್ರವರ ಕೊಟ್ಟೂರು, ಪ್ಯಾಟ್ರಿಕ್ ಸಿಪ್ರಿಯಾನ್ ಉರುಫ್ ಸುಪ್ರಿಯಣ್ಣ,ರಿಗೆ ರಿದಂ ಸಾತ್ ನೀಡುತ್ತಿದ್ದುದು ನಮ್ಮ ಚಿರಯಯವಕ ಗಿರಿಧರ ಕಾರ್ಕಳ !!
ಈ ಮೂರು ದಿನಗಳ ವಿಚಾರ – ಅನ್ನ ದಾಸೋಹದ ದಾತರಾದ ರಘು- ವೀಣಾ ದಂಪತಿಗಳು ಹಾಗೂ ಪ್ರತಿದಿನ ಜೊತೆಗಿದ್ದ ರಘು ಅವರ ತಾಯಿ ಮಧುರಾ ಭಟ್ ಅವರ ಪ್ರೀತಿ.. ಮನೆಘಟ್ಟ ಕೃಷ್ಣ ಮೂರ್ತಿ, ಶೈಲೇಂದ್ರ ಬಂದಗದ್ದೆ ಮುಂತಾದ ಊರವರ ಸ್ನೇಹದ ರುಚಿಗೆ ಮತ್ತೆ ಮುಂದಿನ ವರ್ಷಕ್ಕೆ ಕಾಯಬೇಕು.






0 Comments