ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೂಕಾಂಬಿಕೆ ಅಲಿಯಾಸ್ 'ಮುಕ ಬಿಂಕ'

ಕನ್ನಡ ಕಥಾ ಲೋಕದ ಮುತ್ತಜ್ಜ, ಮಾಸ್ತಿ ವೆಂಕಟೇಶ ಅಯ್ಯಂಗಾರರನ್ನು ಆಗ ತಾನೇ ನಡು ಹರೆಯದಲ್ಲಿದ್ದ ಅನಂತಮೂರ್ತಿಯವರು ಸಂದರ್ಶಿಸಿರುವ ವೀಡಿಯೋ ತುಣುಕೊಂದನ್ನು ನೋಡುತ್ತಿದ್ದೆ. ಆ ಹೊತ್ತಿಗೆ ಮಾಸ್ತಿಯವರದ್ದು, 95ರ ತುಂಬು ಜೀವನದ ಪರಿಪಕ್ವ ಅನುಭವಗಳಾದರೆ ಅನಂತಮೂರ್ತಿಯವರದ್ದು, ಆಗತಾನೆ ನಡು ವಯಸ್ಸಲ್ಲಿ ಮಾಗುತ್ತಿದ್ದ ಖಚಿತ ಅಭಿಪ್ರಾಯಗಳು.
avadhi-column-nagashree- horiz-editedಮಾಸ್ತಿಯವರು ಮಾತಾಡುತ್ತಾ, ಶಿವಾರಪಟ್ಟಣ, ಹೊಂಗೇನಹಳ್ಳಿ, ಮಾಸ್ತಿಯಂತಹ ಅಂದವಾದ ಗ್ರಾಮಗಳ ಭೂಮಿಯ ಬಗ್ಗೆ ಅದರ ಸೌಂದರ್ಯದ ಬಗ್ಗೆ ವಿವರಿಸುತ್ತಿದ್ದರು.
“ಮಾಸ್ತಿ ಸಾಕಷ್ಟು ದೊಡ್ಡ ಊರು. ಶಿವಾರಪಟ್ಟಣ ಸಣ್ಣ ಊರು, ನಮ್ಮ ಹೊಂಗೇನಹಳ್ಳಿ ಇನ್ನೂ ಚಿಕ್ಕದಾದ ಊರು. ಇವತ್ತು ಅಲ್ಲಿಗೆ ಹೋಗಿ ನೋಡಿದರೆ ನಾನು ಹೇಳುವ ಯಾವುದೂ ಅಲ್ಲಿಲ್ಲ. ಹೊಂಗೇನಹಳ್ಳಿಯ ಊರ ಬಾಗಿಲಿನಿಂದ ಹೊರಟರೆ ತೋಟದ ಬಾವಿ ಸಿಕ್ತಿತ್ತು. ಬಲಗಡೆಗೆ ಹನುಮಂತರಾಯನ ದೇವಸ್ಥಾನ. ಎದುರಿಗೊಂದು ಬೃಹದಾಕಾರದ ಅಶ್ವತ್ಥ ಮರ. ಅಲ್ಲಿಂದ ಎಡಕ್ಕೆ ಹೋದರೆ ಅಲ್ಲೊಂದು ನೇರಳೆ ಹಣ್ಣಿನ ಗಿಡ. ಹೊಟ್ಟೆ ತುಂಬಾ ನೇರಳೆ ಹಣ್ಣನ್ನು ತಿನ್ನೋದು. ಅಲ್ಲಿಂದ ಮುಂದಕ್ಕೆ ಹೋದರೆ ಅಲ್ಲೊಂದು ಅತ್ತಿಮರ. ಅದರ ತುಂಬಾ ಅತ್ತಿ ಹೂವು-ಹಣ್ಣು ಬಿಟ್ಟಿರೋದು. ಅದರ ಹಣ್ಣೂ ರುಚಿಯೇ, ಹೂವೂ ರುಚಿಯೇ” ಎಂದಾಗ ಅನಂತಮೂರ್ತಿಯವರು, “ಹೊಂಗೇನಹಳ್ಳಿಯಲ್ಲಿ ದೊಡ್ಡ ಅರಳಿ ಮರ ಇತ್ತು ಅಂದ್ರಲ್ಲ, ಅದು ಇನ್ನೂ ಇದೆಯಾ ಸರ್? ಯಾವ ಮರ ಉಳಿದಿದೆ? ನೇರಳೆ ಮರ ಇದೆಯಾ?” ಎಂದು ಕೇಳುತ್ತಿದ್ದರು.
 
ಮೊನ್ನೆ ನಾನು ಐವತ್ತು ರೂಪಾಯಿಗೆ ಕಾಲು ಕೆ.ಜಿ ನೇರಳೆ ಹಣ್ಣನ್ನು ಕೊಂಡು ತಿನ್ನುತ್ತಿದ್ದೆ. ಸಣ್ಣ ಕಾಗದದ ಪೊಟ್ಟಣದೊಳಗೆ ಒಂದೆರಡು ಸೀಳಿದ ನೇರಳೆ ಹಣ್ಣಿನ ಬಣ್ಣ ಅಂಟಿಕೊಂಡು, ನನ್ನ ಬಾಲ್ಯದಲ್ಲಿ ತಿನ್ನುವಾಗ ಕೈ, ನಾಲಗೆಯೆಲ್ಲಾ ನೇರಳೆ ನೇರಳೆಯಾಗಿದ್ದು ನೆನಪಾಗುತ್ತಿತ್ತು. ನಾವು ಶಾಲೆಗೆ ಹೋಗುತ್ತಿದ್ದಾಗ ಹತ್ತಿರದಲ್ಲಿ ನೇರಳೆ ಗಿಡ ಇಲ್ಲದಿದ್ದರೂ ಒಂದು ಪೇರಳೆ ಮರವಿತ್ತು. ಅದು ಹಣ್ಣಾಗಿ ತುಂಬಿದ ಬಸುರಿಯ ಪರಿಮಳದಂತೆ ತಿಳಿ ಅರಶಿನ ಬಣ್ಣಕ್ಕೆ ತಿರುಗಿ ಅದರೊಳಗಿನ ನಸುಗೆಂಪು ಹಣ್ಣನ್ನು ಅಳಿಲುಗಳು ತಿನ್ನುತ್ತಿದ್ದವು. ಕಾಣದ ಮುದ್ದು ಅಳಿಲುಗಳ ಎಂಜಲನ್ನು ನಾವು ದೇವರ ನೈವೇದ್ಯದಂತೆ ಶಾಲೆಯ ಬಿಡುವಿನಲ್ಲಿ ಆಸೆಯಿಂದ ತಿನ್ನುತ್ತಾ, ಅಲ್ಲೇ ಹತ್ತಿರದ ಸೀತಾರಾಮನ ಅಂಗಡಿಯಲ್ಲಿರುತ್ತಿದ್ದ ಬುಗರಿ ಹಣ್ಣನ್ನೂ ತಿಂದು ಕ್ಲಾಸಿನ ತುಂಬಾ ಹಣ್ಣಿನ ಪರಿಮಳದಲ್ಲಿ ಓಡಾಡುತ್ತಿದ್ದೆವು.
ನಮ್ಮ ಬಾಲ್ಯದಲ್ಲಿ ಈ ಮರಗಳನ್ನು ನೋಡುವ ಭಾಗ್ಯ ನಮಗಿದ್ದುದರಿಂದ ಮಾಸ್ತಿಯವರು ಹೇಳುವ ಮರಗಳು ನಮ್ಮ ಪಾಲಿಗೂ ಅನುಭವಿಸಲು ಇದ್ದವಲ್ಲಾ  ಎಂದುಕೊಳ್ಳುತ್ತಿದ್ದೆ. ಅದು ಸುಮಾರು 80ರ ದಶಕದಲ್ಲಿ ನಡೆದ ಸಂದರ್ಶನವಿರಬೇಕು. ನಾನಾಗ ಹುಟ್ಟಿಯೇ ಇರಲಿಲ್ಲ. ಮಾಸ್ತಿಯವರು ಮಾತಾಡುತ್ತಿದ್ದ ಆ ಮರಗಳೆಲ್ಲಾ ಆಗಲೇ ಇರಲಿಲ್ಲವಂತೆ. ಅವರು ಹೇಳುತ್ತಿದ್ದ 1902ರ ಹೊಂಗೇನಹಳ್ಳಿಯ ಮರಗಳಿರಲಿ, ಹತ್ತಿಪ್ಪತ್ತು ವರುಷಗಳ ಹಿಂದೆ ನಾನು ನೋಡಿದ್ದ ನನ್ನೂರ ಮರಗಳೂ ಕೂಡ ಈಗ ಮಾಯವಾಗಿದೆ.
ನಮ್ಮ ನೆಂಟರ ಮನೆಯಲ್ಲಿ ಅಶ್ವತ್ಥ ಮರವೊಂದಿತ್ತು, ಬಹಳ ಹಳೆಯದ್ದು. ಅದರ ಸಣ್ಣ ಅಗಲವಾದ ಒಂಥರಾ ಹಾರ್ಟ್ ಶೇಪಿನ ಎಲೆಗಳು, ಸುತ್ತ ಕಟ್ಟಿದ್ದ ಕಲ್ಲಿನ ಕಟ್ಟೆ, ಬೆಳಂಬೆಳಗ್ಗೆ ಕೈ ಮುಗಿದು ಪ್ರದಕ್ಷಿಣೆ ಬರುತ್ತಿದ್ದ ಹೆಂಗಸರನ್ನು ನೋಡುತ್ತಾ ಆ ದೈತ್ಯಾಕಾರದ ಮರದ ಬುಡದಲ್ಲಿ ಕಲ್ಲಾಟ ಆಡುತ್ತಿದ್ದೆವು. ಹಳೆ ಮನೆಯ ಹೆಂಚಿನ ಮೇಲೆ ಬೀಳುವಂತೆ ಅದರ ಗೆಲ್ಲುಗಳು ನೆಟ್ಟ ನಿಂತಿದ್ದವು. ಮಳೆಗಾಲದಲ್ಲಿ ಕರಾವಳಿಯ ಮಳೆ, ಗಾಳಿಗೆ ತತ್ತರಿಸಿ ಮರದ ಗೆಲ್ಲೇನಾದರೂ ಬಿದ್ದರೆ ಮನೆ ಢಮಾರನೆ ಒಡೆದು ಪುಡಿಯಾಗುತ್ತಿತ್ತು. ಗಾಳಿ ಬೀಸಿದರೆ ಎದೆಯೇ ಬಿರಿವಂತೆ, ಯಾವಾಗ ಏನಾಗುತ್ತದೆಂಬ ಆತಂಕದಲ್ಲಿಯೇ ಮನೆಯವರೆಲ್ಲಾ ಇರುತ್ತಿದ್ದರು.
ಮುನಿಸಿಪಾಲಿಟಿಯವರಿಗೆ ಎಷ್ಟು ಹೇಳಿದರೂ, “ಅಶ್ವತ್ಥ ಮರದ ಗೆಲ್ಲನ್ನು ಕಡಿಯಲು ಯಾವ ನರಮಾನಿಯೂ ಬರುವುದಿಲ್ಲಾ ಮಾರಾಯ್ರೇ, ನಾವೆಂತ ಮಾಡುವುದು? ಬೇಕಾದರೆ ನೀವೇ ಜನ ಕರೆಸಿ ಕಡಿಸಿ” ಎನ್ನುತ್ತಿದ್ದರು. ಕಡೆಗೂ ದೈವ ಸ್ವರೂಪವಾದ ಆ ಅಶ್ವತ್ಥ ಮರದ ಗೆಲ್ಲನ್ನು ಕಡಿಯಲು ಯಾರೂ ಒಪ್ಪಿರಲಿಲ್ಲ. ಅಶ್ವತ್ಥನಾರಾಯಣನೇ ಅಭಯ ನೀಡುವಂತೆ, ಹಗುರ ಗಾಳಿಗೆ ಭಯಂಕರವಾಗಿ ಅಲ್ಲಾಡುತ್ತಾ, ಮಕ್ಕಳಿಗೆ, ಹಕ್ಕಿಗಳಿಗೆ ಗೆಳೆಯನಂತೆ, ಮರಕ್ಕೆ ಸುತ್ತು ಬರುವ ಹೆಂಗಸರಿಗೆ ಸೌಮ್ಯ ಸುಂದರ ದೇವನಂತೆ, ಈಗಲೂ ಹಾಗೆಯೇ ಅಲ್ಲಿ ನಿಂತಿದ್ದಾನೆ. ಆ ಮನೆಯಲ್ಲಿ ಈಗ ಯಾರೂ ಇಲ್ಲದ ಕಾರಣ, ಬಿದ್ದರೆ ಬಿದ್ದು ಹಾಳಾಗಲಿ ಎಂದು ಎಲ್ಲರೂ ಸುಮ್ಮನಿದ್ದಾರೆ.
5eedc6cd-0d04-42b7-a92d-ecf7994e473aಅಶ್ವತ್ಥ ಮರವನ್ನು ನೆನೆಯುತ್ತಾ ನೇರಳೆ ಹಣ್ಣು ತಿನ್ನುವಾಗ, ನನ್ನ ಎಳೆಯ ಗೆಳೆಯರ ಗುಂಪೊಂದು,  ಕುವೆಂಪು, ಕಾರಂತ, ಅನಂತಮೂರ್ತಿ, ತೇಜಸ್ವಿ, ಅಡಿಗರನ್ನು ಹುಡುಕಿಕೊಂಡು ಅವರ ಊರಿಗೆ ಹೊರಟಿದ್ದರು. ಕಾಲೇಜು ಮುಗಿಸಿ ಅವರಿಗೂ ಬೋರು ಹೊಡೆದಿತ್ತು, ಅಮ್ಮನ ಹತ್ತಿರ ಬೈಯಿಸಿಕೊಂಡು, ಅಪ್ಪನ ಗುರಾಯಿಸುವ ಮುಖವನ್ನು ನೋಡುತ್ತಾ ಹೊರಟೇ ಬಿಟ್ಟ ಹುಡುಗರು ಊರೂರು ಸುತ್ತಿ, ಬಸ್ ಸ್ಟಾಂಡು, ಹಳೆಯ ಬಿಲ್ಡಿಂಗು, ಪಾಳು ದೇವಸ್ಥಾನದಲ್ಲಿ ಮಲಗಿ, ಸಿಕ್ಕಿದ ಲಾರಿ, ಕಾರುಗಳಲ್ಲಿ ಡ್ರಾಪ್ ಪಡೆದುಕೊಂಡು, ಕವಿವರ್ಯರ ಮನೆಗೆ ಭೇಟಿ ನೀಡಿದ್ದರು. ಅವರ ಕಥೆಯ ಜಾಗವನ್ನೋ ಪಾತ್ರಗಳನ್ನೋ ನೋಡಿ ತಲೆಗೆ ಎಣ್ಣೆ ಇಲ್ಲದೆ, ಮೈಗೆ ನೀರಿಲ್ಲದ ಎಳೆಯ ಅನುಭಾವಿ ಚಿಂತಕರಂತೆ ಜೀವನ ಕೃತಾರ್ಥವಾದಂತೆ ತಿರುಗುತ್ತಿದ್ದರು.
“ಯಾವ್ಯಾವುದೋ ಕಾಡಲ್ಲಿ ಅಲೀಬೇಡಿರೋ, ಕವಿಗಳ ಮನೆ ನೋಡುವ ಭರದಲ್ಲಿ ಕಳ್ಳರೆಂದು ತಗಲಾಕೋಳ್ಬೇಡಿ”, ಎಂದು ಸುಮ್ಮನೆ ಕಿಚಾಯಿಸುತ್ತಿದ್ದೆ. ಕಾಟು ಮಾವಿನ ಹಣ್ಣು ಚೀಪುತ್ತಾ, ಪೇರಳೆ ಹಣ್ಣು ತಿನ್ನುತ್ತಾ, ಯಾರೋ ಪುಣ್ಯಾತ್ಮರು ಕೊಟ್ಟ ಕೋಳಿ ರೊಟ್ಟಿಯೋ, ಮದುವೆ ಮನೆಯ ಬಾಡೂಟವನ್ನೋ ತಿಂದು, ಸಕ್ಕತ್ ಖುಷಿಯಲ್ಲಿದ್ದ ಹುಡುಗರು, ಇಂಗ್ಲಂಡ್ ಗೆ ಹೋಗಿ ಷೇಕ್ಸ್ ಪಿಯರ್ ಮನೆ ನೊಡಿಬರಬೇಕು ಎನ್ನುತ್ತಿದ್ದರು. “ಹೇಗೂ ನಮ್ಮೂರಿಗೂ ಹೋಗಿದ್ದೀರಿ, ನಮ್ಮ ಮನೆಯ ಹತ್ತಿರ ಒಂದು ತೋಡು ಇದೆ, ಅಲ್ಲಿಯ ಮೀನುಗಳು ಹಾಗೇ ಈಜಿಕೊಂಡು ಅರಬ್ಬೀ ಸಮುದ್ರವನ್ನು ಸೇರುತ್ತದೆ, ನೀವ್ಯಾಕೆ ಹೋಗಿ ನೋಡಬಾರದು” ಎಂದು ಜೋಕು ಮಾಡಿದ್ದೆ.
ಮಾಸ್ತಿಯವರ ಹೊಂಗೇನಹಳ್ಳಿಯ ಹನುಮಂತರಾಯನ ಗುಡಿಯ ಪಕ್ಕದ ನೇರಳೇ ಮರ ಅನಂತಮೂರ್ತಿಯವರಿಗೂ ಹೀಗೆ ಏನೇನೋ ನೆನಪು ತರಿಸಿರಬಹುದು.
ಇಂತಹ ಸುಂದರ ಭೂಮಿಯನ್ನು ಅನುಭವಿಸುತ್ತಾ ಶಾಲೆಗೆ ಹೋಗುತ್ತಿದ್ದ ಮಾಸ್ತಿಯವರಿಗೆ ಸಾಹಿತ್ಯ ಪ್ರೇರಣೆ ನೀಡಿದ್ದು ಈ ಪ್ರಕೃತಿಯಷ್ಟೇ, ಕಾವ್ಯಗಳೂ ಕೂಡಾ ಹೌದು. ಹೊಂಗೇನಹಳ್ಳಿ ಸಣ್ಣ ಗ್ರಾಮವಾಗಿತ್ತು. ಅಲ್ಲಿ ಶಾಲೆ ಇಲ್ಲದ ಕಾರಣ ಅವರು ಶಿವಾರಪಟ್ಟಣದ ಶಾಲೆಗೆ ಹೋಗುತ್ತಿದ್ದರಂತೆ.
ಶಾಲೆಯ ಕುರಿತು ಮಾತಾಡುತ್ತಾ, “ನನಗೆ ಜ್ಞಾಪಕ ಇರುವ ಹಾಗೆ, ನಾನು ಮೂರನೇ ಕ್ಲಾಸಿನಲ್ಲಿ ಇದ್ದ ವರ್ಷ, ನನ್ನ ಮೇಲಿನ ಕ್ಲಾಸಿನವರಿಗೆ ಕಾಳಿದಾಸನ ರಘುವಂಶದ “ದಿಲೀಪ ಚರಿತೆ” ಅನ್ನುವ ಸರ್ಗವಿತ್ತು. ಅದರ ಭಾಷಾಂತರ ಎಸ್.ಜಿ. ನರಸಿಂಹಾಚಾರ್ರು ಮಾಡಿದ್ದು. ಅದು ಪಠ್ಯ ಪುಸ್ತಕವಾಗಿತ್ತು. ಅದರ ಪಾಠ ಹೇಳುವ ಮೇಲಿನ ಕ್ಲಾಸಿನ ಮೇಷ್ಟ್ರು ಆ ಭಾಷಾಂತರ ಪಾಠ ಹೇಳ್ತಾ ಯಾಕೆ ಅವರಿಗೆ ತೋಚಿತೋ, ಕಾಳಿದಾಸನ ಮೂಲ ಪುಸ್ತಕಾನೇ ತಂದ್ರು, ಅವರಿಗೆ ಸಂಸ್ಕೃತ ತಿಳಿದಿತ್ತು. ಅದರ ಶ್ಲೋಕಗಳನ್ನೆಲ್ಲಾ ಓದಿ ಅರ್ಥ ಹೇಳ್ತಿದ್ರು.
ನಮಗೆ ಪಾಠ ಮಾಡುತ್ತಿದ್ದ ನಮ್ಮ ಹೆಡ್ ಮಾಷ್ಟ್ರು, ಪಾಠ ನಿಲ್ಲಿಸಿ,  ನೀವೂ ಕೇಳಿ ಆ ಕಥೆನ ಅಂದ ಬಿಟ್ರು. ದಿಲೀಪ ಚರಿತೆಯ ಈ ಕಥೆಯನ್ನು ನಾನು ಕನ್ನಡದ ಮೂರನೇ ತರಗತಿಯಲ್ಲಿ ಕೇಳಿದ್ದೆ. ಅದರ ಅರ್ಥ ಕೇಳಿ ಸಂಪೂರ್ಣವಾಗಿ ಮನಸ್ಸಿಗೆ ಮುಟ್ಟಿತ್ತು. ಹಾಗೇ ನನಗೆ ಕಾವ್ಯದ ರುಚಿ ಆರಂಭ ಆಯ್ತು”, ಎಂದು ತಮ್ಮ ಪ್ರಖಾಂಡ ಅನುಭವದಲ್ಲಿ ಕಳಿತ ಹಣ್ಣಿನಂತೆ ಮಾಸ್ತಿಯಜ್ಜ ಮಾತಾಡುತ್ತಿದ್ದರು.
DSC09123ನಾನು ಮೂರನೇ ತರಗತಿಯಲ್ಲಿದ್ದದ್ದು 94-95ರ ಸಮಯ. ಒಂದು ದಿನ ಬೆಳಗ್ಗೆ ಶಾಲೆಯಲ್ಲಿ ನಮ್ಮ ಮೇಷ್ಟು, “ನಮ್ಮೂರು ನಮಗೆ ಸವಿ ಬೆಲ್ಲ, ನಮ್ಮೂರ ಹಳ್ಳ ಬತ್ತುವುದಿಲ್ಲ, ನಮ್ಮೂರ ಹುಲ್ಲು ಒಣಗುವುದಿಲ್ಲ..” ಎಂದು ರಾಗಬದ್ಧವಾಗಿ ಹಾಡುತ್ತಾ ಪಾಠ ಹೇಳುತ್ತಿದ್ದರು. ಎಂದೂ ಬತ್ತದ, ಒಣಗದ ನಮ್ಮೂರ ಗದ್ದೆ, ಭತ್ತ, ತೆಂಗು ಗೊತ್ತಿದ್ದ ನಮಗೆ ಅದೆಲ್ಲಾ ಕಣ್ಣ ಮುಂದೆ ಬರುತ್ತಿತ್ತು. ನಾವು ಒಕ್ಕೊರಲಿನಲ್ಲಿ ಮೇಷ್ಟ್ರು ಹಾಡಿದಂತೆ ಇಡೀ ಶಾಲೆಗೆ ಕೇಳುವಂತೆ ಹಾಡುತ್ತಿದ್ದೆವು.
ಆಗ, ಇದ್ದಕ್ಕಿದ್ದಂತೆ ನಮ್ಮ ಮೇಷ್ಟ್ರು ಪಾಠ ನಿಲ್ಲಿಸಿ, “ಈಗ ಅಸೆಂಬ್ಲಿ ಉಂಟು, ಎಲ್ಲರೂ ಸಾಲಾಗಿ ಬನ್ನಿ ಹೊರಗೆ”, ಅಂತ ಕರ್ಕೊಂಡು ಹೋದ್ರು. ಕೊಬ್ಬರಿ ಎಣ್ಣೆ ಹಾಕಿ ನೀಟಾಗಿ ಬಾಚಿದ ತಲೆಯನ್ನು ಸುಮ್ಮನೆ ತುರಿಸುತ್ತಾ, ಬಿಳಿ ಅಂಗಿ ಪಂಚೆಯನ್ನು ಸರಿ ಮಾಡುತ್ತಾ ನಮ್ಮ ಹೆಡ್ ಮಾಷ್ಟ್ರು, ಏನೋ ಭಾಷಣ ಮಾಡಿದ್ದರು. ಈಗ ನನಗೆ ಅದೇನೆಂದು ನೆನಪಾಗುತ್ತಿಲ್ಲ. ಆದರೆ ಅವತ್ತು ಕುವೆಂಪು ತೀರಿಕೊಂಡಿದ್ದಕ್ಕೆ ರಜೆ ಘೋಷಿಸಿದ್ದರು. ಆಗ ಕುವೆಂಪು ಯಾರೆಂದೂ ನಮಗೆ ಗೊತ್ತಿರಲಿಲ್ಲ, ಅವರ ಯಾವ ಪದ್ಯಗಳೂ  ಆ ಕ್ಲಾಸಲ್ಲಿ ಪಾಠ್ಯವಾಗಿದ್ದೂ ನನಗೆ ನೆನಪಿಲ್ಲ.
ಆದರೂ ನಮ್ಮ ಪಾಲಿಗೆ ದಕ್ಕಬೇಕಾಗಿದ್ದೆಲ್ಲಾ ತಕ್ಕ ಮಟ್ಟಿಗೆ ದಕ್ಕುತಿತ್ತಲ್ಲ ಎಂದು ನನಗೆ ಈಗ ನೆಮ್ಮದಿಯಾಗುತ್ತಿದೆ.
ಶಾಲೆಯ ಬಳಿಯಲ್ಲೇ ಇದ್ದ ಮನೆಯೊಂದರಿಂದ ಟೀಚರು, ಮೇಷ್ಟ್ರುಗಳಿಗೆ ಕುಡಿಯುವುದಕ್ಕೆ ತಂಬಿಗೆಯಲ್ಲಿ ನೀರು ತರಿಸಿ ಹೆಡ್ ಮಾಸ್ಟ್ರ ಕೋಣೆಯಲ್ಲಿ ಇಡುತ್ತಿದ್ದರು. ನಮ್ಮ ಮೇಷ್ಟ್ರಿಗೇನಾದರೂ ಬಾಯಾರಿಕೆಯಾದರೆ ಪಾಠದ ಮಧ್ಯದಿಂದಲೇ ನಮ್ಮನ್ನು ಯಾರನ್ನಾದರೂ, “ಹೋಗಿ ನೀರು ತನ್ನಿ”, ಎಂದು ಕಳುಹಿಸುತ್ತಿದ್ದರು. ನೀರು ಖಾಲಿಯಾಗಿದ್ದರೆ, ಶಾಲೆಯ ಬಳಿಯ ಆ ಮನೆಗೆ ಹೋಗಿ ನೀರು ತರುತ್ತಿದ್ದೆವು.
ಒಂದು ಸಲ ಹಾಗೇ ನಾನು ನೀರು ತರಲು ಗೆಳತಿಯ ಜೊತೆ ಹೋಗಿದ್ದೆ. ಬೆಳಗ್ಗಿನ ಎಳೆಯ ಬಿಸಿಲು ಮುಗಿದು, ಪ್ರಖರ ಬೆಳಕಿನ ಮಧ್ಯಾಹ್ನದ ಕಡು ಬಿಸಿಲು ಮೆಲ್ಲಗೆ ಪಸರಿಸುತ್ತಿತ್ತು. ಲೋಕವೆಲ್ಲಾ ಬೆಳ್ಳಗಿನ ಬಿಸಿಲಲ್ಲಿ ಬೆಳಗುತ್ತಾ, ತಾಳೆ ಮರದ ಗರಿಗಳೆಲ್ಲಾ ಬೀಸುವ ಗಾಳಿಗೆ ಸಣ್ಣಗೆ ಅದುರುತ್ತಿದ್ದವು. ಚುರುಕು ಬಿಸಿಲಿಗೆ ದೂರದ ಕಡಲಿನ ಮೀನ ವಾಸನೆ ಮೂಗಿಗೆ ಬಡಿಯುತ್ತಿತ್ತು. ಕ್ಲಾಸಿಂದ ಹೊರಟು ಗುಡ್ಡೇಯೇರಿದರೆ, ಸೀತಾರಾಮನ ಅಂಗಡಿ ಸಿಗುತ್ತದೆ. ಹುರಿಗಡಲೆ, ನೆಲಗಡಲೆಯ ಡಬ್ಬಿಯ ಮೇಲೆ ಕೈ ಇಟ್ಟು, ಸೀತಾರಾಮ ಪೇಪರು ಓದುತ್ತಿದ್ದ. ಅಂಗಡಿ ಪಕ್ಕದ ಟೈಲರ್ ಶಾಪಿನಲ್ಲಿ ಹೆಂಗಸರು ಮಧ್ಯಾಹ್ನದ ಅಡುಗೆ ಮುಗಿಸಿ ಟೈಲರಣ್ಣನ ಜೊತೆ ಮಾತಾಡುತ್ತಾ, ಅಲ್ಲಿದ್ದ ಬಾವಿಯ ನೀರು ಸೇದಿ ಬಟ್ಟೆ ಒಗೆಯುತ್ತಿದ್ದರು. ಹಳೆಯ ಮುದುಕರು ಸೈಕಲು ಏರಿ ಪೇಟೆಗೆ ಹೊರಡುತ್ತಿದ್ದರು. ದೂರದ ಶುಭ್ರವಾದ ತಿಳಿ ಗಾಳಿಗೆ ಏನೋ ಸುಖವೆನಿಸಿ, ನೆಮ್ಮದಿಯಾಗಿ, ಅದು  ಪ್ರಕೃತಿಯ ಒಡನಾಟದ ಸೌಖ್ಯವೆಂದೂ ಗೊತ್ತಿಲ್ಲದೆ ನಾವು ಪಕ್ಷಿಗಳಂತಿದ್ದೆವು.
25ವಾಪಾಸು ಶಾಲೆಗೆ ಬಂದಾಗ ಕ್ಲಾಸು ಮುಗಿಯುತ್ತಾ ಬಂದಿತ್ತು. ಒಳಗೆ ಹೋದರೆ  ಪಾಠ ಮುಗಿದು ಮೇಷ್ಟ್ರು ಕೈಯಲ್ಲೊಂದು ಸ್ಕೇಲು ಹಿಡಿದು ನಮ್ಮ ಕ್ಲಾಸಿನ ಭಾನುಮತಿಯನ್ನು ಬೈಯ್ಯುತ್ತಿದ್ದರೆ, ಎಲ್ಲರೂ ಗೊಳ್ಳೆಂದು ನಗುತ್ತಿದ್ದರು. ಆಮೇಲೆ ನೋಡಿದರೆ, ಭಾನುಮತಿಗೆ, ಬೋರ್ಡಿನ ಮೇಲೆ ಅವಳ ಅಮ್ಮನ ಹೆಸರನ್ನು ಬರೆಯಲು ಹೇಳಿದ್ದರಂತೆ. ಅವಳಮ್ಮನ ಹೆಸರು ಮೂಕಾಂಬಿಕ ಅಂತ. ಅವಳು ಅದನ್ನು “ಮುಕ ಬಿಂಕ”  ಎಂದು ಬರೆದಿದ್ದಳು. “ಮೂರನೇ ಕ್ಲಾಸಿಗೆ ಬಂದರೂ ಅಕ್ಷರ ಗೊತ್ತಿಲ್ಲವಾ ನಿನಗೆ?”, ಎಂದು ಅವಳಿಗೆ ಸಮಾ ಎರಡು ಏಟು ಬಿದ್ದಿತ್ತು.
ಕಾಳಿಕಾಮಾತೆ ಕಾಳಿದಾಸನ ನಾಲಗೆಯಲ್ಲಿ ಬೀಜಾಕ್ಷರ ಬರೆದು ಶ್ರೇಷ್ಠ ಕವಿಯಾಗಿಸಿದ್ದಳು. ಅಂತಹ ಕಾಳಿದಾಸನ ದಿಲೀಪ ಚರಿತೆಯನ್ನು ಮಾಸ್ತಿಯವರು ಮೂರನೇ ಕ್ಲಾಸಿಗೆ ಓದಿದ್ದರೆ, ನಾವು ಮೂರನೇ ಕ್ಲಾಸಲ್ಲಿ ಮೂಕಾಂಬಿಕೆಯನ್ನು “ಮುಕ ಬಿಂಕ” ವಾಗಿಸಿದ್ದೆವು!
ಈಗ ಮತ್ತೆ ಯಾಕೋ ಭಾನುಮತಿಯ ನೆನಪಾಗುತ್ತಿದ್ದಂತೆ, ಮಾಸ್ತಿಯಜ್ಜನ ಜೊತೆ, ನಾನೂ, ಅನಂತಮೂರ್ತಿಯವರೂ ಆ ಎಳೆಯ ಹುಡುಗರೂ ಹೋಗಿ ಅರಳೀ, ಅಶ್ವಥ ಮರವನ್ನು ನೋಡಿ ನೇರಳೆ ಹಣ್ಣು ತಿನ್ನುವ ಹಾಗಿದ್ದರೆ ಎಷ್ಟು ಚಂದವಿರುತ್ತಿತ್ತು ಅನ್ನಿಸುತ್ತಿದೆ.
 

‍ಲೇಖಕರು avadhi

14 July, 2016

7 Comments

  1. Vinay

    The way u write is just amazing… will be waiting for ur column every week.. thanks..

  2. Anonymous

    ಬಾಲ್ಯದ ಆ ತಲ್ಲೀನತೆಯನ್ನು ಮತ್ತೆ ನೆನಪಿಸುವ ನಿರೂಪಣೆ

  3. Shama, Nandibetta

    “ಮಾಸ್ತಿಯಜ್ಜನ ಜೊತೆ, ನಾನೂ, ಅನಂತಮೂರ್ತಿಯವರೂ ಆ ಎಳೆಯ ಹುಡುಗರೂ ಹೋಗಿ ಅರಳೀ, ಅಶ್ವಥ ಮರವನ್ನು ನೋಡಿ ನೇರಳೆ ಹಣ್ಣು ತಿನ್ನುವ ಹಾಗಿದ್ದರೆ ಎಷ್ಟು ಚಂದವಿರುತ್ತಿತ್ತು ”
    ಇಂಥ ಆಸೆಗಳನ್ನ ಹುಟ್ಟುಹಾಕುತ್ತ ಬರೆಯುವುದು ಅದೆಷ್ಟು ಚಂದ. ಇನ್ನೊಮ್ಮೆ ಊರಿಗೆ ಹೋದಾಗ ಅರಬ್ಬೀ ಸಮುದ್ರದ ಮೀನಿನ ಕಿವಿಯಲ್ಲಿ ಅದರ ಹೆಸರು ಅವಧಿಗೆ ಬಂದ ಗುಟ್ಟನ್ನೂ ಉಸುರಿ ಬರುತ್ತೇನೆ

  4. sindhu

    ಮ್ಮ್…. ತುಂಬ ಚೆನಾಗಿದೆ. ನಾಗಶ್ರೀ… ನೀವು ತಿಂದ ನೆನಪಿನ ನೇರಳೆಯ ಬಣ್ಣ ನನ್ನ ಓದಿಗೂ ಅಂಟಿಕೊಂಡುಬಿಟ್ಟಿತು…ಈಗ.

  5. Roopa

    Nostalgic

  6. latha

    Thumba chennagidhe Nagashree avre

  7. Chandru

    Woow one of the best article I have read after long time…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading