'ಮುಷ್ಟಿಯೊಳಗಣ ಮಾತು…' ಭಾನುವಾರದ ಸಣ್ಣ ಕಥೆ

ಡಾ ಎಸ್ ಬಿ ಜೋಗುರ

ಪ್ರಕಾಶನ ಪಾಲಿಗೆ ಮನೆ ಎನ್ನುವುದು ಮಂತ್ರಾಲಯವಾಗಿರಲಿಲ್ಲ. ಓಣಿಯ ಹುಡುಗರೊಂದಿಗೆ ಆಟವಾಡುವಾಗಲೂ ಹಿಂದಿನ ದಿನದ ರಾತ್ರಿ ಅವನನ್ನು ಪೀಡಿಸುತ್ತಿತ್ತು. ಅವನಪ್ಪ ಅವ್ವಳನ್ನ ಕುಡಿದು ಬಂದು ಹಿಗ್ಗಾ ಮುಗ್ಗ ಹೊಡೆದದ್ದು ನೆನಪಾಗಿ ಮನಸು ಕಹಿಯಾಗಿ, ಆಟದಲ್ಲೂ ಮಜವಿರಲಿಲ್ಲ.. ಅಪ್ಪನ ಆ ಬೈಗುಳ, ಹೊಡೆತ, ಚೀರಾಟಗಳೆಲ್ಲವನ್ನು ಹಾಸಿಗೆಯಲ್ಲಿ ಮುಸುಕು ಹಾಕಿ, ಉಗುಳು ನುಂಗುತ್ತಲೇ ಕೇಳಿಸಿಕೊಂಡ ಪ್ರಕಾಶನ ಪಾಲಿಗೆ ಅಪ್ಪ ಪಕ್ಕಾ ವಿಲನ್ ಆಗಿದ್ದ. ಅವ್ವಳನ್ನು ಕೈಗೆ ಸಿಕ್ಕಿದ್ದರಿಂದ ಥಳಿಸುವ ಅಪ್ಪನ ತಿಕ್ಕಲುತನ, ಅವ್ವಳ ಗೋಳಾಟ, ಮನೆಯ ಮಕ್ಕಳ ಪೀಕಲಾಟಗಳೆಲ್ಲವೂ ಆ ಮನೆಯನ್ನು ತಿಂದುಂಡು ಮಲಗುವ ತಾಣವಾಗಿಸಿದೇ, ಸ್ಮಶಾನ ಕುರುಕ್ಷೇತ್ರವಾಗಿಸಿತ್ತು. ಮನೆಕಡೆ ನಡೆಯುವದೆಂದರೆ ಒಂಥರಾ ದುಗುಡ, ಭಯ ಪ್ರಕಾಶನನ್ನು ಆವರಿಸುತ್ತಿತ್ತು. ಅವನ ಅಪ್ಪನ ಕುಡಿತಕ್ಕೆ ಹೇಗೆ ಹೊತ್ತು ಗೊತ್ತು ಇರಲಿಲ್ಲವೋ.. ಹಾಗೆಯೇ ಕಲಹಕ್ಕೆ ಕೂಡಾ.. ಹೊಟ್ಟೆ ಹಸಿವಾದರೂ ಅದರ ನೆತ್ತಿಗೆ ಕುಕ್ಕಿ, ಗುಡಿಯ ಹಿಂದೆ ಕುಳಿತು ಹೊತ್ತು ಕಳೆದು, ಅಪ್ಪನ ರಂಪಾಟ ತಣ್ಣಗಾದ ಮೇಲೆ ಮನೆಗೆ ತೆರಳುತ್ತಿದ್ದ ಪ್ರಕಾಶನಿಗೆ ಅನೇಕ ಸಾರಿ ಮನೆ ಬಿಟ್ಟು ಓಡಬೇಕೆಂದುಕೊಂಡರೂ ಧೈರ್ಯ ಸಾಥ್ ನೀಡಿರಲಿಲ್ಲ.

ಬೆಂಗಳೂರಿನ ಬ್ಯಾಂಕ್ ಒಂದರಲ್ಲಿ ನೌಕರಿ ಮಾಡುವ ಚಿಕ್ಕಪ್ಪ ಸಂಬಂಧಿಯೊಬ್ಬರ ಮದುವೆಗೆ ಬಂದಾಗ ಪ್ರಕಾಶನ ಅಪ್ಪ-ಅವ್ವ ದಿನವಿಡೀ ಕಚ್ಚಾಡುವುದನ್ನು ಕಂಡು ‘ಪ್ರಕಾಶನನ್ನ ನಾನು ಕರಕೊಂಡು ಹೋಗ್ತೇನೆ’ ಅಂದದ್ದೇ ಅವನು ತನ್ನ ಬಟ್ಟೆ -ಪುಸ್ತಕ ಒಂದು ಚೀಲದಲ್ಲಿ ತುಂಬಿ ತಯಾರಾಗಿ ನಿಂತಿದ್ದ. ಪ್ರಕಾಶನ ಪಾಲಿಗೆ ಅವನ ಹೆತ್ತವರೇ ದಿನನಿತ್ಯ ನರಕದರ್ಶನ ಮಾಡಿಸುತ್ತಿದ್ದರು. ಅಲ್ಲಿಂದ ಪಾರು ಮಾಡುವವರೇ ತನ್ನ ಪಾಲಿನ ದೇವರು ಎಂದು ಬಗೆದಿದ್ದ ಪ್ರಕಾಶನ ಪಾಲಿಗೆ ಅವನ ಚಿಕ್ಕಪ್ಪ ಅವತಾರವಾಗಿ ಕಂಡಿದ್ದ. ಮಗನ ಬಗ್ಗೆ ಎಳ್ಳಷ್ಟೂ ವಾತ್ಸಲ್ಯವಿರದ ಪ್ರಕಾಶನ ತಂದೆ ಶರಣಪ್ಪ ಮಗ ಬೆಂಗಳೂರಿಗೆ ತೆರಳುತ್ತಿರುವ ಬಗ್ಗೆ ಯೋಚಿಸದೇ ತನ್ನ ತಮ್ಮನ ಬಳಿ ಕುಡಿಯಲು ನೂರು ರೂಪಾಯಿಗಾಗಿ ಪಟ್ಟು ಹಿಡಿದಿದ್ದ. ಪ್ರಕಾಶ ಓದುವುದರಲ್ಲಿ ತುಂಬಾ ಜಾಣ ವಿದ್ಯಾರ್ಥಿ ಎನ್ನುವ ಬಗ್ಗೆ ಅವನ ಶಿಕ್ಷಕರಿಂದ ತಿಳಿದು, ಅವನ ಚಿಕ್ಕಪ್ಪನಿಗೆ ತುಂಬಾ ಖುಷಿಯಾಗಿತ್ತು. ಹೇಗೂ ತಮಗಂತೂ ಮಕ್ಕಳಿಲ್ಲ. ಪ್ರಕಾಶನನ್ನೇ ತಮ್ಮ ಮಗ ಎಂದು ತಿಳಿದು ಓದಿಸುವ ಯೋಚನೆ ಮಾಡಿ ಅವನನ್ನು ಬೆಂಗಳೂರಿಗೆ ಕರೆತಂದರು.

ಪ್ರಕಾಶ ಅನೇಕ ವರ್ಷಗಳಿಂದ ಕಣ್ತುಂಬ ನಿದ್ದೆಯನ್ನೇ ಮಾಡಿರಲಿಲ್ಲ. ಅಪ್ಪ ಕುಡಿದು ಬರುವುದು, ಅವ್ವಳ ಜೊತೆಗೆ ಜಗಳ ತೆಗೆಯುವುದು, ಅವಳನ್ನು ಹೊಡೆಯುವುದು ಆಮೇಲೆ ನಿತ್ರಾಣನಾಗಿ ಮಲಗುವುದು. ಇದೆಲ್ಲವೂ ತನ್ನ ಮನೆಯಲ್ಲಿಯ ದಿನಚರಿ. ಇದು ಮುಗಿಯುವವರೆಗೂ ಮುಸುಕು ಹಾಕಿಕೊಂಡು ಎದೆ ಢವಢವಿಸುತ್ತಾ ಇಲ್ಲವೇ ಅಳುತ್ತಾ ಇರುವುದು. ಆಮೇಲೆ ಅದೇ ಸುಸ್ತಿನಲ್ಲಿ ನಿದ್ದೆಹೋಗುವುದು. ಇಂಥಾ ಪರಿಸರದಲ್ಲಿ ತನ್ನ ಅಣ್ಣನಿಗೂ ಓದಲಾಗಲಿಲ್ಲ, ಅಕ್ಕಳಿಗೂ.. ಈಗ ಬರುವ ವರ್ಷ ತನ್ನನ್ನೂ ಬಿಡಿಸಿ ಬಟ್ಟೆಯಂಗಡಿಯೊಂದರಲ್ಲಿ ಕೆಲಸಕ್ಕಿಡುವ ಯೋಚನೆಯಲ್ಲಿರುವಾಗಲೇ ಚಿಕ್ಕಪ್ಪ ದೇವರಂತೆ ಪ್ರತ್ಯಕ್ಷನಾಗಿದ್ದ. ಬೆಂಗಳೂರಿನ ಪ್ರತಿಷ್ಟಿತ ಶಾಲೆಯೊಂದರಲ್ಲಿ ಪ್ರಕಾಶನನ್ನು ಸೇರಿಸಲಾಯಿತು. ಪ್ರಕಾಶ ಅಲ್ಲಿಯೂ ಜಾಣ ವಿದ್ಯಾರ್ಥಿ ಎಂದು ಹೆಸರು ಪಡೆದ. ಆ ವರ್ಷ ಆತ ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆದು ನಿರೀಕ್ಷೆಯಂತೆ ಪ್ರಥಮ ದರ್ಜೆಯಲ್ಲಿ ಪಾಸಾದ. ತಾನು ಪಾಸಾದ ವಿಷಯವನ್ನು ತನ್ನ ಹೆತ್ತವರಿಗೆ ತಿಳಿಸುವಲ್ಲಿಯೂ ಅವನಿಗೆ ಆಸಕ್ತಿಯಿರಲಿಲ್ಲ. ಚಿಕ್ಕಪ್ಪನೇ ಆ ವಿಷಯದ ಬಗ್ಗೆ ಮಾತನಾಡಿದ್ದ.

ಚಿಕ್ಕಪ್ಪ ಊರಿಗೆ ಪೋನ್ ಮಾಡಿದಾಗಲೊಮ್ಮೆ ಪ್ರಕಾಶನ ಎದೆ ಬಡಿದುಕೊಳ್ಳುತ್ತಿತ್ತು. ತನ್ನ ಕೈಯಲ್ಲಿ ಮಾತಾಡು ಎಂದು ಕೊಡದಿದ್ದರೆ ಸಾಕು ಎಂದುಕೊಳ್ಳುತ್ತಿದ್ದ. ಪ್ರಕಾಶನ ಆಯ್ಕೆಯಂತೆ ಪಿ.ಯು.ಸಿ. ವಿಜ್ಞಾನ ವಿಭಾಗಕ್ಕೆ ಸೇರಿಸಲಾಯಿತು. ಅದು ಬೆಂಗಳೂರಿನ ಹೃದಯಭಾಗದಲ್ಲಿರೋ ಕಾಲೇಜು. ಚಿಕ್ಕಪ್ಪ ಈಗವನಿಗೆ ತಿಂಗಳಿಗೆ ಎರಡು ನೂರು ರೂಪಾಯಿ ಪಾಕೆಟ್ಮನಿ ನೀಡಲಾರಂಭಿಸಿದ. ಚಿಕ್ಕಪ್ಪನಿಗೆ ಗೊತ್ತಾಗದ ಹಾಗೆ ಚಿಕ್ಕಮ್ಮಳೂ ಆಗಾಗ ಅವನ ಖರ್ಚಿಗೆ ಹಣ ಕೊಡುವುದಿತ್ತು. ಪ್ರಕಾಶನಿಗೀಗ ಆ ಕಾಲೇಜಿನಲ್ಲಿ ಹತ್ತಾರು ಸ್ನೇಹಿತರು. ಅದರಲ್ಲಿ ಕೆಲವರು ದೊಡ್ಡ ದೊಡ್ಡ ಉದ್ದಿಮೆದಾರರ ಮಕ್ಕಳು. ಹೀಗಾಗಿ ಪ್ರಕಾಶನ ಪಾಕೇಟ್ ಮನಿ ಖರ್ಚಾಗದೇ ತಿಂಗಳಪೂರ್ತಿ ಹಾಗೇ ಉಳಿಯುತ್ತಿತ್ತು.

ಆ ದಿನ ಪ್ರಕಾಶನ ಕಾಲೇಜ್ ಕ್ಯಾಂಪಸ್ಲ್ಲಿ ಸಿನೇಮಾ ಒಂದರ ಶೂಟಿಂಗಿತ್ತು. ಮೊದಲಿಂದಲೂ ಸಿನೇಮಾ ಬಗ್ಗೆ ಹುಚ್ಚಿರುವ ಪ್ರಕಾಶ ಗೆಳೆಯರ ಜೊತೆ ಶೂಟಿಂಗ್ ನೋಡುತ್ತಿದ್ದ. ಚಿತ್ರದ ನಾಯಕಿ ಅದೇ ಕಾಲೇಜಿನ ಸೀನಿಯರ್ ವಿದ್ಯಾರ್ಥಿನಿ. ದೃಶ್ಯ ಒಂದರಲ್ಲಿ ನಾಯಕನ ಗೆಳೆಯರಾಗಿ ನಟಿಸುವಂತೆ ಪ್ರಕಾಶ ಮತ್ತು ಅವನ ಸ್ನೇಹಿತರಿಗೆ ನಿರ್ದೇಶಕ ಬುಲಾವ್ ನೀಡಿದ. ಪ್ರಕಾಶನಿಗೆ ಸಿನೇಮಾ ಬಗ್ಗೆ ಆಸಕ್ತಿಯಿತ್ತಾದರೂ ನಟನೆಯ ಬಗ್ಗೆ ಇರಲಿಲ್ಲ. ಈಗ ಆಕಸ್ಮಿಕವಾಗಿ ಅದಕ್ಕೂ ಅವಕಾಶ ಒದಗಿ ಬಂದು, ಒಂದೆರಡು ಡೈಲಾಗ್ ಡೆಲಿವರಿಯೂ ಅವನಿಗಿತ್ತು. ಆ ಚಿತ್ರ ಬಿಡುಗಡೆಯಾಗಿದ್ದೇ ಕಾಲೇಜಿನ ಕ್ಯಾಂಪಸ್ಲ್ಲಿ ಪ್ರಕಾಶನನ್ನು ಚಿತ್ರದ ನಾಯಕನಟನೆಂಬಂತೆಯೇ ಗುರುತಿಸಲಿಕ್ಕೆ..ಕರೆಯಲಿಕ್ಕೆ ಶುರು ಮಾಡಿದರು. ಇದ್ದಕ್ಕಿದ್ದಂಗೆ ಪ್ರಕಾಶನಿಗೆ ನಟನೆಯ ಗುಂಗು ತಲೆಗೇರಿತು.

ಮತ್ತೊಂದು ಧಾರವಾಹಿಯಲ್ಲೂ ಸಣ್ಣ ಅವಕಾಶ ದೊರೆಯಿತು. ಚಿಕ್ಕಪ್ಪನಿಗೆ ಹೇಳದೇ ಅಭಿನಯಿಸಿಯೂ ಆಯಿತು. ಅದು ಸ್ವಲ್ಪ ದೊಡ್ದ ಪಾತ್ರ. ಹೀಗಾಗಿ ಒಂದೆರಡು ಸಾವಿರ ರೂಪಾಯಿ ಸಂಭಾವನೆಯೂ ದಕ್ಕಿತ್ತು. ಆ ಬಗ್ಗೆಯೂ ಮನೆಯಲ್ಲಿ ಹೇಳಿರಲಿಲ್ಲ. ಅವನ ಡ್ರೆಸ್ಸು..ಹೇರ್ ಸ್ಟೈಲ್ ಲ್ಲಿ ದಿಢೀರನೇ ಉಂಟಾದ ಬದಲಾವಣೆಗಳನ್ನು ಗಮನಿಸಿ ಆತನ ಚಿಕ್ಕಪ್ಪ ಬೆಂಗಳೂರಿನ ಗ್ಲಾಮರ್ ಬಗ್ಗೆ ತಿಳಿ ಹೇಳಿದ್ದ..ತುಸು ಹುಷಾರಾಗಿರು ಎಂದಿದ್ದ. ಅವನ ನಟನೆಯ ಬಗ್ಗೆ ಪಕ್ಕದ ಮನೆಯವರು ಕೊಂಡಾಡಿದಾಗಲೇ ಇವರಿಗೆ ತಿಳಿದು ಖುಷಿಯೂ ಪಟ್ಟರು. ಹೆದರಿ ನಿಮ್ಮ ಮುಂದೆ ಹೇಳಿರಲಿಲ್ಲ ಎಂದಾಗ ಚಿಕ್ಕಪ್ಪ ಮುಗುಳ್ನಗೆಯ ಮೂಲಕ ಹೆಂಡತಿಯ ಕಡೆಗೆ ನೋಡಿರುವುದಿತ್ತು.

ಈಗೀಗ ಪ್ರಕಾಶನಿಗೆ ಸಿನೇಮಾ ನಟನಾಗುವ ಖಯಾಲಿ ಶುರುವಾಗಿತ್ತು. ಬರೀ ಅದೇ ಧ್ಯಾನ. ಮನೆಗೆ ಬಂದದ್ದೇ ಬಾಗಿಲು ಹಾಕಿಕೊಂಡು ಕುಳಿತುಬಿಡುತ್ತಿದ್ದ. ರಾತ್ರಿ ತುಂಬಾ ಹೊತ್ತಿನವರೆಗೆ ಯಾರಾರಿಗೋ ಪೋನ್ ಮಾಡಿ ಹರಟುತ್ತಿದ್ದ. ನಗುತ್ತಿದ್ದ.. ಜೋರಾಗಿ ಬೈಯುತ್ತಿದ್ದ..ಮರುಗಳಿಗೆಯಲ್ಲಿಯೇ ಮೆಲು ದನಿಯಲ್ಲಿ ಮಾತನಾಡುತ್ತಿದ್ದ. ‘ಪ್ರಕಾಶ ಘಂಟೆ ಹನ್ನೆರಡು ಮಲಗು’ ಅಂದ ಮೇಲೂ ಒಂದು ಘಂಟೆ ಎಚ್ಚರವಾಗಿರುತ್ತಿದ್ದ. ಅಧ್ಯಯನದಲ್ಲಿಯೂ ಮುಂಚಿನ ಆಸಕ್ತಿ ಅವನಲ್ಲಿಲ್ಲ. ಸದಾ ಏನನ್ನೋ ಯೋಚಿಸುವಂತಿರುತ್ತಾನೆ. ತೀರಾ ನಿತ್ರಾಣಗೊಂಡವನಂತೆ ತೋರುತ್ತಾನೆ. ಊಟದ ಟೇಬಲ್ಲ್ಲಿಯೂ ತೂಕಡಿಸುತ್ತಿರುತ್ತಾನೆ. ಕುಡಿದು ಬಂದವರ ಹಾಗೆ ತೊದಲುತ್ತಾನೆ. ಮೈ ಮೇಲೆ ಏನೋ ಬಿದ್ದವರ ಹಾಗೆ ತಟ್ಟನೇ ಕಂಪಿಸುತ್ತಾನೆ. ‘ಪ್ರಕಾಶ ಏನಾಯ್ತು..?’ ಅಂದರೆ ‘ಏನೋ ಕನಸು’ ಎನ್ನುತ್ತ ನಗುತ್ತಾನೆ.


ಈಗೀಗ ಅವನ ವರ್ತನೆ ಆತನ ಚಿಕ್ಕಪ್ಪ-ಚಿಕ್ಕಮ್ಮ ಇಬ್ಬರಿಗೂ ಬಿಡಿಸದ ಕಗ್ಗಂಟಾಗಿದೆ. ನಡಿ ಆಸ್ಪತ್ರೆಗೆ ಹೋಗೊಣ ಎಂದರೆ ಕೆರಳುತ್ತಾನೆ. ಎದ್ದು ಕೋಣೆಯೊಳಗೆ ತೆರಳಿ ಜೋರಾಗಿ ಬಾಗಿಲು ಹಾಕಿಕೊಳ್ಳುತ್ತಾನೆ. ಅವನ ಚಿಕ್ಕಪ್ಪ ಕಾಲೇಜಿಗೆ ತೆರಳಿ ಅವನ ಬಗ್ಗೆ ಅವನ ಸ್ನೇಹಿತರ ಬಗ್ಗೆ ವಿಚಾರಿಸಿದಾಗ ಅವರಾರೂ ಈಗ ರೆಗ್ಯುಲರ್ ಆಗಿ ಕಾಲೇಜಿಗೆ ಬರುವದಿಲ್ಲ ಎಂದು ಹಾಜರಿ ಪುಸ್ತಕ ತೆಗೆದು ಅಧ್ಯಾಪಕರು ತೋರಿದ್ದೇ ಆತ ಹೌಹಾರಿದಂತಾಗಿದ್ದ. ಅದೊಂದು ದಿನ ಚಂದ್ರಶೇಖರ ಅವರನ್ನೆಲ್ಲಾ ಹಿಂಬಾಲಿಸಿದ್ದ. ಅವರು ಎಮ್.ಜಿ.ರಸ್ತೆಯಲ್ಲಿಯ ಪಬ್ ಒಂದರಲ್ಲಿ ಹೋಗುವುದನ್ನು ದೂರದಿಂದಲೇ ನೋಡಿ ಹಿಂತಿರುಗಿದ್ದ. ಪ್ರಕಾಶ ಏನಾಗಬಾರದು ಎಂದು ಅವನನ್ನು ಸಿಂದಗಿಯಿಂದ ಬೆಂಗಳೂರಿಗೆ ಕರೆತಂದಿದ್ದನೋ ಈಗ ಅದೇ ಆಗಿದ್ದ. ಚಂದ್ರಶೇಖರನಿಗೆ ತುಂಬಾ ಬೇಸರವಾಗಿತ್ತು. ಮನಸು ಭಾರವಾಗಿತ್ತು. ಕಣ್ಣಾರೆ ಕಂಡದ್ದನ್ನು ಹೆಂಡತಿಯ ಮುಂದೆ ಹೇಳಲಾಗದೇ ತೊಳಲಾಡಿದ್ದ.

ಪ್ರಕಾಶನ ಗೆಳೆಯರು ಅವನನ್ನು ಮೇಲೆ ಬರಲಾರದ ಪ್ರಪಾತಕ್ಕೆ ನೂಕಿರುವದಿತ್ತು. ಆತ ವಿಲಿವಿಲಿ ಒದ್ದಾಡುವುದನ್ನು ಕಂಡು ಕೇಕೆ ಹೊಡೆದು, ಗಹಗಹಿಸಿ ನಗುತ್ತಿದ್ದರು. ಪ್ರಕಾಶ ಒಂದು ಕ್ಷುದ್ರ ಜಂತುವಿನಂತಾಗಿದ್ದ. ಕೈ ಕಾಲುಗಳೆಲ್ಲಾ ಸಣ್ಣಾಗಿ, ತಲೆ ಮಾತ್ರ ದೊಡ್ದದಾಗಿ ಕಾಣುತ್ತಿತ್ತು. ಮಾತು ಸತ್ತಿತ್ತು. ಮೇಲೆ ಬರಲು ತಹತಹಿಸುತ್ತಿದ್ದ. ತಕ್ಷಣವೇ ಎಚ್ಚರಾಯಿತು. ಛೇ..! ಹಾಳಾದ ಕನಸು ಎಂದು ಅವನ ಚಿಕ್ಕಪ್ಪ ಸೋಫಾದಿಂದ ಎದ್ದವನೇ ಮಲಗುವ ಕೋಣೆಗೆ ನಡೆದ. ಘಂಟೆ ಹನ್ನೆರಡಾಗಿತ್ತು.. ಪ್ರಕಾಶ ಇನ್ನೂ ಬಂದಿರಲಿಲ್ಲ. ಮತ್ತೊಮೆ ಬಾಗಿಲು ಬಳಿ ಬಂದು ನೋಡಿದ. ದೂರದಲ್ಲಿ ತೂರಾಡುತ್ತಾ ಬರುತ್ತಿರುವುದನ್ನು ಕಂಡು ಬಾಗಿಲು ತೆರೆದ.

ಮನೆ ಹತ್ತಿರ ಬರುತ್ತಿರುವಂತೆ ಎಷ್ಟೇ ಅಲರ್ಟ್ ಆದರೂ ಅವನಿಗೆ ತೂರಾಡುವುದನ್ನು ತಪ್ಪಿಸಲಾಗಲಿಲ್ಲ. ಬಾಗಿಲಲ್ಲಿ ಅವನ ಚಿಕ್ಕಪ್ಪನನ್ನು ಕಂಡ ಮೇಲಂತೂ ಅವನು ಇನ್ನಷ್ಟು ಕಂಪಿಸತೊಡಗಿದ. ಹತ್ತಿರ ಬರುತ್ತಿರುವಂತೆ ಮೂಸಿದ. ಕುಡಿತದ ವಾಸನೆಯೇ ಇಲ್ಲ. ಮಾತು ಮಾತ್ರ ತೊದಲುತ್ತಿದೆ. ಇಡೀ ಶರೀರ ಕಂಪಿಸುತ್ತಿದೆ. ಆ ಗಳಿಗೆಯಲ್ಲಿ ಚಂದ್ರಶೇಖರ ಏನನ್ನೂ ಮಾತನಾಡಲಿಲ್ಲ. ಪ್ರಕಾಶ ಊಟವನ್ನೂ ಮಾಡದೇ ನೇರವಾಗಿ ತನ್ನ ಕೋಣೆಗೆ ತೆರಳಿದ. ಕೈಯಲ್ಲಿಯ ಸಿಗರೇಟ ತುಂಡು ನೆಲಕ್ಕೆ ಜಾರಿತ್ತು. ಮುರಿದ ಅದರ ಸೊಂಟದಿಂದ ಸಣ್ಣನೆಯ ಬಿಳಿ ಪುಡಿ ಉದುರುತ್ತಿತ್ತು.

ಸೊಂಟ ಮುರಿದ ಸಿಗರೇಟನ್ನು ಪ್ರಕಾಶನ ಚಿಕ್ಕಪ್ಪ ವೈದ್ಯರ ಮುಂದಿಟ್ಟ. ಪರೀಕ್ಷಿಸಿ ‘ಹೌದು ಇದು ಕೊಕೇನ್ ಎನ್ನುವ ಡ್ರಗ್ಸ್’ ಅಂದದ್ದೇ ಚಂದ್ರಶೇಖರಗೆ ಸಿಡಿಲು ಬಡಿದಂತಾಯ್ತು. ಮಾತೇ ಹೊರಡಲಿಲ್ಲ. ಅದೇ ಯೋಚನೆಯಲ್ಲಿ ಮನೆಗೆ ಬಂದು ಹೆಂಡತಿಗೂ ವಿಷಯ ತಿಳಿಸಿದ. ಪಿ.ಯು.ಸಿ. ಓದುವಾಗಲೇ ಫ್ರೆಂಡ್ಸ್ ಅನ್ನೋ ಕಿರಾತಕರು ಪ್ರಕಾಶನನ್ನು ಈ ಡ್ರಗ್ಸ್ ಜಾಲಕ್ಕೆ ನೂಕಿರುವುದಿತ್ತು. ಅದೊಂದು ದಿನ ಮೂರ್ನಾಲ್ಕು ಹೈ ಡೋಜ್ ಕೊಕೇನ್ ಮೂಗಿಗೇರಿಸಿಕೊಂಡು ಪ್ರಸಿದ್ಧ ಚಿತ್ರ ನಿರ್ದೇಶಕನೊಬ್ಬನ ಮನೆಗೆ ತೆರಳಿ ಅವನ ಸೆಕ್ಯುರಿಟಿಯವನ ಜೊತೆಗೆ ಗಲಾಟೆ ಮಾಡಿ ಜೈಲಿಗೆ ಹೋಗಿಯೂ ಆಗಿತ್ತು. ಚಂದ್ರಶೇಖರ ಅವನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿದ್ದ. ಅದೇ ದಿನ ಅವನನ್ನು ಒಂದು ಆಸ್ಪತ್ರೆಗೆ ದಾಖಲು ಮಾಡಿಸಿದ್ದ. ವೈದ್ಯರು ‘ಅದಾಗಲೇ ಇವನು ತುಂಬಾ ದೂರ ಬಂದಾಗಿದೆ..

ಮರಳಿ ಮೊದಲಿನ ನೆಲೆಗೆ ಇವನನ್ನು ತಲುಪಿಸುವುದು ಕಷ್ಟ’ ಎಂದು ಚಿಕಿತ್ಸೆ ಶುರು ಮಾಡಿದ ಮೂರೇ ದಿನದಲ್ಲಿ ಆಸ್ಪತ್ರೆಯಿಂದಲೇ ರಾತ್ರೋರಾತ್ರಿ ಫರಾರಿಯಾಗಿದ್ದ. ಅವನನ್ನು ಹುಡುಕುವುದರಲ್ಲಿ ಆತನ ಚಿಕ್ಕಪ್ಪನಿಗೆ ಸಾಕು ಬೇಕಾಗಿತ್ತು. ಹೇಗಾದರೂ ಮಾಡಿ ಅವನನ್ನು ಈ ಚಟದಿಂದ ಮುಕ್ತಗೊಳಿಸಿ ಊರಿಗೆ ಅಟ್ಟಿಬಿಡುವುದು ಒಳ್ಳೆಯದು ಎಂದು ಯೋಚಿಸಿ ಅತ್ಯಂತ ಬಂದೋಬಸ್ತಾಗಿರುವ, ಪೂರ್ಣ ಪ್ರಮಾಣದ ಸೆಕ್ಯುರಿಟಿಯಿರುವ ಆಸ್ಪತ್ರೆಯಲ್ಲಿ ಅವನನ್ನು ದಾಖಲು ಮಾಡಲಾಯಿತು. ಆ ಕೋಣೆಯಲ್ಲಿ ಅವನನ್ನು ಕೂಡಿಹಾಕಿ ಚಿಕಿತ್ಸೆಯನ್ನು ಆರಂಭಿಸಲಾಯಿತು. ಆ ವೈದ್ಯರಿಗೆ ಅವನು ಸ್ಪಂದಿಸುವ ರೀತಿಯಿಂದಲೇ ಅವರು ಅವನನ್ನು ಗುಣಮುಖನನ್ನಾಗಿಸುವ ಭರವಸೆಯನ್ನು ಹೊಂದಿದ್ದರು. ಒಂದು ವಾರದೊಳಗೆ ಅವನು ಸರಿ ಹೋಗುವ ಮಾತನ್ನಾಡಿರುವುದು ಅವನ ಚಿಕ್ಕಪ್ಪನಿಗೂ ಸಮಾಧಾನ ತಂದಿತ್ತು.

ಅದೇಕೋ ಆ ದಿನ ರಾತ್ರಿ ಮಾತ್ರೆ ನುಂಗುವಲ್ಲಿ ತುಸು ಕಿರಿಕಿರಿ ಶುರು ಮಾಡಿದ. ವೈದ್ಯರು ಅರ್ಧ ಘಂಟೆ ಕಸರತ್ತು ಮಾಡಿ ಅವನಲ್ಲಿ ವಿಶ್ವಾಸ ತುಂಬಿ, ಬದುಕನ್ನು ಪ್ರೀತಿಸುವ ಮಾತುಗಳನ್ನಾಡಿ ಗುಳಿಗೆಯನ್ನು ನುಂಗುವಂತೆ ಮಾಡಿದ್ದರು. ಆತ ತೀರಾ ನಾರ್ಮಲ್ ಆಗಿ ವೈದ್ಯರು ಹೇಳುವ ಪ್ರತಿಯೊಂದು ಮಾತನ್ನು ಸೀರಿಯಸ್ ಆಗಿ ಕೇಳಿದ್ದ. ‘ನಾಳೆ ನಿನ್ನನ್ನು ಸಾಧ್ಯವಾದರೆ ಹೊರಗಿನ ವಾರ್ಡಗೆ ಶಿಪ್ಟ್ ಮಾಡ್ತೇವೆ, ನೀನು ಸರಿ ಹೋಗುತ್ತಿ ಏನೂ ಆಗಲ್ಲ’ ಎನ್ನುವ ಭರವಸೆಯ ಮಾತನ್ನಾಡಿ ವೈದ್ಯರು ನಿರ್ಗಮಿಸಿದರು. ಆಗ ಸಮಯ ರಾತ್ರಿ ಹನ್ನೆರಡು ಘಂಟೆ. ಸ್ವಲ್ಪ ಹೊತ್ತಿನಲ್ಲಿಯೇ ನರ್ಸ್ ಒಬ್ಬಳು ಓಡಿ ಬಂದು ‘ಸರ್.. ಪ್ರಕಾಶನ ರೂಮಲ್ಲಿ ಲೈಟ್ ಆಫ್ ಆಗಿದೆ ಏನೂ ಕಾಣುತ್ತಿಲ್ಲ, ಬಾಗಿಲು ಬಡಿದೆ..ಪ್ರತಿಕ್ರಿಯೆ ಇಲ್ಲ.’ ಎನ್ನುತ್ತಿರುವಂತೆ ವೈದ್ಯರು ಟಾರ್ಚರ್ ಸಮೇತ ಗಡಬಡಿಸಿ ಅವನ ಕೋಣೆಗೆ ಬಂದರು. ಕಿಡಕಿಯ ಮೇಲಿಂದ ಟಾರ್ಚರ್ ತೂರಿದರು ಸಲಾಯನ್ ವೈಧ್ಯರು ಶೀಲಿಂಗ್ ಫ್ಯಾನಿಗೆ ಬಿಗಿದದ್ದು ಕಾಣುತ್ತಿತ್ತು. ಅವನ ಬಲಗೈ ಮುಷ್ಟಿಯಲ್ಲಿ ಒಂದು ಪೇಪರ್ ತುಂಡಿತ್ತು ಅದರಲ್ಲಿದ್ದದ್ದು ಒಂದೇ ಸಾಲು…

‍ಲೇಖಕರು avadhi

June 29, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: