
ಮಂಜುಳಾ ಹುಲಿಕುಂಟೆ
ಈ ನೀರವತೆಯ ಕರಾಳ ರಾತ್ರಿಗಳು ತಲೆಗೆ ತುಂಬಿದ ಗೊಂದಲಗಳಿಗೆ ಮತ್ತೆ ಗೋಜಲಾಗಿದ್ದೇನೆ. ಇಲ್ಲಿ ಕಳೆದುಕೊಂಡದ್ದು ಪಡೆದುಕೊಂಡದ್ದರ ಲೆಕ್ಕಕ್ಕೆ ಕೂತು ಪದೇ ಪದೇ ಸೊಲುತ್ತೇನೆ. ಎಲ್ಲವನ್ನು ತೊರೆದು ಖಾಲಿಯಾದೇ ಎಂದುಕೊಳ್ಳುವುವಾಗಲೇ ಹಠವಿಡಿದು ಎದೆಗಿಳಿದ ಬಂಧಗಳು, ನಿರಾಕಾರಣ ತೊರಿದ ಪ್ರೀತಿ, ಕಾಳಜಿಗಳಿಗೆ ಮತ್ತೆ ಮರು ಜೀವ ಪಡೆವ ಜೀವತಂತು, ಕಳೆದುಕೊಂಡ ಬದುಕು ಮರುಕಳಿಸಿದ ಸಂಭ್ರಮದಲ್ಲೇ ಸಿಕ್ಕ ಚಿಕ್ಕ ಖುಷಿಗಳಿಗೆ ಬೀಗುವಾಗ, ಬಣ್ಣತುಂಬಿದ ಬಂಧಗಳು ಕತ್ತರಿಸಿಕೊಳ್ಳಲು ಹವಣಿಸುತ್ತವೆ. ಮತ್ತದೇ ಖಾಲಿತನದ ಆಳಕ್ಕೆ ಇಳಿದು ಅಲೆದಾಡುವುದು ಅನಿವಾರ್ಯ…..
ಈ ಸುದೀರ್ಘ ಏಕಾಂತದಲ್ಲಿ ಮೆಲ್ಲನೆ ಕಿವಿ ಸೇರಿದ ಅದೇ ಹಾಡು ಅವನದೇ ಧ್ವನಿಯಲ್ಲಿ ಅನುರಣಿಸುವಾಗ ಹಗಲು, ಇರುಳುಗಳ ಅರಿವಿಲ್ಲದಂತೆ ತಲ್ಲೀನಳಾಗುತ್ತೇನೆ. ಕಣ್ಣಂಚಿನ ಹನಿಗೆ ಕಾರಣವೇ ಇರುವುದಿಲ್ಲ, ಹರಿದ ಕರುಳ ಸೇರಿಸಿ ಹೊಲೆದ ಬಂಧ ಮತ್ತೆ ಕತ್ತರಿಸಿಕೊಳ್ಳುವಾಗ ಸಾವಿನ ಸಂಗ ಬಯಸಿದ್ದ ಅದೇ ಹಳೆಯ ಬದುಕು ಮರುಕಳಿಸುತ್ತದೆ….
ಇಲ್ಲಿ ಯಾವುದಕ್ಕೂ ನನ್ನ ಅನಿವಾರ್ಯತೆಯಾಗಲಿ, ಅವಶ್ಯಕತೆಯಾಗಲಿ ಇಲ್ಲ ಎನಿಸಿದಾಗಲೆಲ್ಲಾ ಕಳೆದುಕೊಂಡ ನನ್ನದೇ ಮುಗ್ಧತೆಗಾಗಿ ತಡಕಾಡುತ್ತೇನೆ. ಜೊಂಪಿನ ಕಣ್ಣಿಗೀಗ ನಿರಾಳತೆಯ ನಿದಿರೆ ಅಪರಿಚಿತ. ಹೊಸ ನೋವಿನ ಆಲಾಪನ ಮನದ ತುಂಬಾ.
ಆಗಷ್ಟೇ ಕಸಿದುಕೊಂಡ ಒಲವು, ಕಳೆದುಕೊಂಡ ಕನಸುಗಳ ನೆನಪಿನ ಶವದ ಮುಂದೆ ಬದುಕು ಮಂಡಿಯೂರಿ ಕುಳಿತು ಪರಿತಪಿಸುತ್ತದೆ…
ಈ ಎಲ್ಲವೂ ನನ್ನ ಇನ್ನಿಲ್ಲದಂತೆ ಕಾಡುವಾಗ ಎಂದೊ ಇದ್ದ ಸಂತಸಗಳ ನೆನಪಿಸಿಕೊಳ್ಳಲು ಪರದಾಡುತ್ತೇನೆ. ನಾನು ನಾನಾಗಷ್ಟೇ ಬದುಕಿದ ಆ ದಿನಗಳ ನೆನಪಿಗೆ ಕೈಚಾಚುತ್ತೇನೆ….
ರೆಪ್ಪೆ ಮುಚ್ಚಿದ ಕಣ್ಣಿನಲ್ಲಿ ಆ ಮಾಯಾ ಲೋಕ ಇಂಚೆಂಚೆ ತೆರೆದುಕೊಳ್ಳುತ್ತದೆ,……
ರಾಗಿ ಹೊಲದ ಅಂಚಿನ ಹೊಂಗೆ ಮರ, ಜೀಕಿದ ಜೊಕಾಲಿಯ ಸೀರೆ, ಮೊದಲು ಕಟ್ಟಿದ ಮರಳಿನ ಮನೆ, ಕೂಡಿಟ್ಟ ಕಾಗಗದ ಚೂರು, ಸೆರಗಿನಲ್ಲಿ ಮುಚ್ಚಿಟ್ಟು ಕೊಟ್ಟ ಅಮ್ಮನ ಕೈತುತ್ತು, ಕೂಸುಮರಿಯಾಗಿಸಿ ಊರು ಸುತ್ತಿಸಿದ ಅಣ್ಣನ ಹೆಗಲು, ಅಮ್ಮನ ಮಡಲಿನಷ್ಟೇ ಬೆಚ್ಚಗಿನ ಆ ಪುಟ್ಟ ಗುಡಿಸಲು, ನಾನೇ ಮಾಡಿದ ಮಣ್ಣಿನ ಬಟ್ಟಲು ಆ ಎಲ್ಲವೂ ಕಣ್ಣಮುಂದೆ ಸುಳಿದಾಡುತ್ತವೆ, ಕಪ್ಪಿಟ್ಟ ತುಟಿಯಂಚಿಗೆ ಸಣ್ಣದೊಂದು ಮುಗುಳ್ ನಗೆ. ನಿಜ ಅದು ನಾನು ನನ್ನಲ್ಲಿ ನಾನಾಗಿ ಬದುಕಿದ್ದ ದಿನಗಳು….
ಎಷ್ಟೆಲ್ಲಾ ಖುಷಿ.. ಅರಿದ ಲಂಗದ ತುದಿಗೆ ಅಮ್ಮನ ಪ್ರೀತಿಯ ತೇಪೆಯೂ ಖುಷಿಕೊಡುತ್ತಿದ್ದ ದಿನಗಳವು. ಮಳೆ ನೀರಿಗೆ ಎದೆಯೊಡ್ಡಿ ಕುಣಿದು ಸಂಭ್ರಮಿಸಿದ್ದು, ಕೆರೆಯಂಚಿನ ನೇರಳೆ ಹಣ್ಣಿಗೆ ಉಪ್ಪುಸೇರಿಸಿ ಚಪ್ಪರಿಸಿ ತಿಂದದ್ದು, ರಾತ್ರಿಪೂರ ನಕ್ಷತ್ರ ಎಣಿಸುತ್ತ ಅಂಗಳದಲ್ಲಿ ಮಲಗಿದ್ದು. ಹಸಿವಿನ ರಾತ್ರಿಗಳಲ್ಲಿ ಅಮ್ಮ ಹೇಳಿದ ಕಥೆಗಳೇ ಅನ್ನವಾಗಿದ್ದು ಎಲ್ಲವೂ ಮತ್ತೆ ಮರಳಿ ಬರಬೇಕೆನಿಸುತ್ತದೆ.
ಈ ನಿಷ್ಕರುಣಿ ಕಾಲ ಕಸಿದುಕೊಂಡ ಅಷ್ಟೂ ಮುಗ್ಧತೆಗಾಗಿ ಕೈಚಾಚುತ್ತೇನೆ..ಇಲ್ಲಿ ಎಸಿ ರೂಮಿನ ಮೆತ್ತನೆಯ ಕುರ್ಚಿಗಳು ಕಟ್ಟಿಕೊಡಲಾಗದ ನನ್ನ ಖುಷಿ, ಮಾಯಾ ನಗರದ ಜಿಗಿಜಿಗಿ ಬೆಳಕು ಎದೆಯಲ್ಲಿ ಮೂಡಿಸದ ಬೆಳಕು, ನಿಜವಲ್ಲದ ಮಂದಹಾಸ, ಹುಸಿ ಬಂಧಗಳು, ಕಡಿದುಕೊಳ್ಳಲೆಂದೇ ಕಟ್ಟಿಕೊಳ್ಳುವ ಟೊಳ್ಳು ಸಂಬಂಧಗಳು, ಯಾರದೋ ಅವಶ್ಯಕತೆಗೆ ಅನಿವಾರ್ಯವಾಗಿ ಒಗ್ಗಿ ಹೋಗುವ ಭಾವವಿಲ್ಲದ ಬದುಕು, ಖುಷಿ ನೀಡಲಾರದ ಹಣ, ಸ್ವಂತಿಕೆಯೇ ಇಲ್ಲದ ಕನಸು, ಮಳೆ ಹನಿಗೆ ಮುತ್ತಿಡಲಾಗದ ಅಸಹಾಯಕತೆ, ಅಚ್ಚಿಕೊಳ್ಳುವ ಮುಗ್ಧತೆಗೆ ಹುಚ್ಚೆಂದು ಅಣಕಿಸಿ ಬಿಡುವ ಭಾವ ಹೀನ ಬುದ್ಧಿವಂತೆಕೆ. ಸೂಕ್ಷ್ಮತೆಯೇ ಇಲ್ಲದ ಲೆಕ್ಕಾಚಾರದ ಸ್ನೇಹ, ಎಲ್ಲವೂ ನನ್ನ ಭಾವುಕತೆಗೆ ಬೇಲಿ ಕಟ್ಟುವಾಗ…ಅದೇ ಬಾಲ್ಯ ನೆನಪಾಗುತ್ತದೆ…
ನೋವು-ನಲಿವು, ಸೋಲು-ಗೆಲುವಿನ ಅರಿವೇ ಇಲ್ಲದ ಮಾಯಾ ಲೋಕ, ಲೆಕ್ಕಾಚಾರವಿಲ್ಲದ ಬಂಧ, ನಿಷ್ಕಲ್ಮಷ ಭಾವ, ಜಿಗಿದು ಬೊಬ್ಬಿಡುವ ನಗು, ಹಂಚಿತಿನ್ನುವ ಆ ಸಣ್ಣ ಸಣ್ಣ ಖುಷಿ, ಕೈಮೇಲೆ ಕೈಜೋಡಿಸುವ ಅವಲಕ್ಕಿ ಪವಲಕ್ಕಿ ಆಟ, ಕಣ್ಣು ಕಟ್ಟಿಯೂ ತೆರೆದುಕೊಳ್ಳುವ ಒಳಗಣ್ಣಿನ ಕಣ್ಣಾ-ಮುಚ್ಚಾಲೆ ಆಟ. ಏಳು ಬೀಳಿನ ಗಾಳಿಪಟ, ಬದುಕ ಇಡೀ ಕಳಿತ್ವ ತಿಳಿಸಿ ಬಿಡುವ ಅದೇ ಬಾಲ್ಯ ಮರುಕಳಿಸಬೇಕೆನಿಸುತ್ತದೆ….





ನೆನಪ ಆಳಗಳಲ್ಲಿ ನಿಧಿಯಾದ ಬಾಲ್ಯ ಸುಖವನ್ನು ಕಾವ್ಯಮಯವಾಗಿ ಎಲ್ಲರಿಗೆ ಹಂಚಿಬಿಟ್ಟಿದ್ದಾರೆ.