ಸ್ವರ್ಣ ಎನ್ ಪಿ
ಬಾಲ್ಯಕ್ಕೆ ತಾನು ಕಟ್ಟಿದ ಕಪ್ಪೆ ಗೂಡಿಗಿಟ್ಟ ಹಳದಿ ಹೂವಿನ ಘಮವೂ ಗೊತ್ತು. ಹರೆಯದ ಹುಚ್ಚು ಹೊಳೆಯ ಗುಂಟ ಚಾಚಿಕೊಂಡ ಮರಳಲ್ಲಿ ಹೆಜ್ಜೆ ಗುರುತು ಸ್ಪಷ್ಟವಾಗಲ್ಲದಿದ್ದರೂ ಗುರುತಿಸಬಹುದಾದ ಹೆಜ್ಜೆ ಮೂಡುತ್ತದೆ. ನಂತರದ ಪಯಣವೇನಿದ್ದರೂ ರಭಸ, ಗಮ್ಯ , ಗುರಿಗಳಿಗೆ ಮೀಸಲು. ಅಂಕುಡೊಂಕಿನ , ಕಲ್ಲು ಮುಳ್ಳಿನ ಹಾದಿಯಲ್ಲಿ ಹೆಜ್ಜೆ ಮೂಡಿಸುವಷ್ಟು ಸಮಯ , ಸದವಕಾಶ ಸಿಗುವವರು ಕಡಿಮೆ. ಹಾದಿಯಲ್ಲಿ ಬಸವಳಿದು ಕುಂತಾಗ ಹೆಜ್ಜೆಗಳನ್ನು ಹುಡುಕುವ ಪ್ರಯತ್ನ ಮತ್ತೆ ಪ್ರಾರಂಭವಾಗುತ್ತದೆ. ಸಾಗಿ ಬಂದ ಹಾದಿಯಲ್ಲಿ ಮತ್ತೆ ಒಂಟಿಯಾಗಿ ನಡೆಯುವುದು ಸುಲಭವಲ್ಲ , ಏಕಾಂತದ ಮೊದಲ ಹೆಜ್ಜೆ ಒಂಟಿತನವೇ ಎಂಬುದನ್ನು ನಂಬಿ ಸಾಗಿದಾಗ ಸಿಕ್ಕಿದ್ದು ಅಸ್ಪಷ್ಟ ಬೆರಳ ಗುರುತುಗಳು, ಆ ಗುರುತುಗಳ ಜಾಡು ಹಿಡಿದು ಹೆಜ್ಜೆಗಳನ್ನು ಹುಡುಕುವುದು ಬಾಕಿ ಇದೆ. ಈ ಬರಹ ಅಂತಹ ಒಂದು ಪಯಣದ ಅಸ್ಪಷ್ಟ ದಾಖಲೆ.
ಬಾರದ ಮಳೆಗೆ ಕಾದು ಕಾದು ನಿದ್ದೆ ಹೋದ ಮಹಾನಗರಿ ಮುಸುಕು ಸರಿಸುವ ಮುಂಚೆಯೇ ಮನೆಯಿಂದ ಪಯಣ ಆರಂಭವಾಗಿತ್ತು . ಕುಸುಮಬಾಲೆ ಬರೆದಂತೆ ‘ಸೂಟ್ಕೇಸ್ ನೊಂದಿಗೆ ಬಂದಿಳಿದ ಅದೆಷ್ಟೋ ಜನಕ್ಕೆ , ಲಾರಿ ತುಂಬಾ ಸಾಮಾನು ಕೊಟ್ಟ ನಗರಿ’ ಯಲ್ಲಿ ಇನ್ನೂ ಬೆಳಕು ಹರಿದಿರಲಿಲ್ಲ. ಸರಿಯುತ್ತಿರುವ ಕ್ಷಣಗಳು ಅನುಭವವಾಗಿ , ಅನುಭೂತಿಯಾಗಿ ಒಳಗಿನೊಂದಿಗೆ ಬೆರೆಯುತ್ತಿದ್ದವು. ಕೆಲ ದಶಕಗಳ ಹಿಂದೆ ರವಿ ಬೆಳಗೆರೆ ಈ ನಗರವನ್ನು ಕೆಂಪೇಗೌಡರು ಹಾಕಿಸಿದ ಮಹಾ ಶಾಮಿಯಾನ ಎಂದು ಕರೆದಿದ್ದರು. ಸಮಾರಂಭ ಮುಗಿಯುವವರೆಗೆ ಮಾತ್ರ ಶಾಮಿಯಾನದ ಅಗತ್ಯ ಆಮೇಲೆ ? ನೆಟ್ಟ ಗೂಟ , ಕಟ್ಟಿದ ಬಟ್ಟೆ , ಹಾಕಿದ ಹೂವು ಎಲ್ಲವೂ ಮತ್ತೆಲ್ಲಿಗೋ , ಇನ್ಯಾವ ಶಾಮಿಯಾನಕ್ಕೋ . ನಗರಗಳ ನೋವು ಕೇಳುವವರಾರು ? ಸದಾ ಸವಿ ನಿದ್ದೆಯಲ್ಲಿರುವವರಂತೆಯೇ, ಈ ನಗರದಲ್ಲೂ ರಾತ್ರಿಯಾಗದವರೂ ಇದ್ದಾರೆ . ಅದೆಷ್ಟೋ ಕಸುಬುದಾರರಿಗೆ ರಾತ್ರಿ ಎಂಬುದು ಅಪರಿಚಿತ. ಆದರೆ ನನಗೆ ರಾತ್ರಿಯಾಗದವರು ಎನ್ನುತ್ತಿದ್ದಂತೆ ನನಗೆ ನೆನಪಾಗುವುದು ಅವರೇ …ಕತ್ತಲಾಗುತ್ತಿದ್ದಂತೆ ಢಾಳಾಗಿ ಅಲಂಕರಿಸಿಕೊಂಡ ಮೆಜೆಸ್ಟಿಕ್ಕಿನ ಸಣ್ಣ ಸಣ್ಣ ಸಂಧಿಗಳಲ್ಲಿ ಕಾಣುವ ಹೆಂಗಸರು . ಅವರನ್ನು ಎದುರಿಸಲಾಗದ ಭಯಕ್ಕೆ ಬಳಸಿ ಹೋದರೂ ಸರಿ , ಕೆಲವು ರಸ್ತೆಗಳಲ್ಲಿ ನಾನು ಹೆಜ್ಜೆ ಇಡುತ್ತಿರಲಿಲ್ಲ . ಈಗವರು ಮೆಜಸ್ಟಿಕ್ಕಿಗಿಂತಲೂ ಹೆಚ್ಚಾಗಿ ಏರ್ಪೋರ್ಟ್ ರೋಡಿನಲ್ಲಿ ಕಾಣಿಸುತ್ತಾರೆ. ರಸ್ತೆ ಬದಲಾಯಿಸುವ ಅವಕಾಶವೂ ಇಲ್ಲ. ಎಲ್ಲಿಂದೆಲ್ಲಿಗೆ ಮಾನವತೆಯ ಪಯಣ ? ಎಲ್ಲಿಯೋ ಓಡುತ್ತಿದ್ದ ಮನಸನ್ನು ಮತ್ತೆ ಹಿಡಿದು ತಂದಿದ್ದು ಟ್ಯಾಕ್ಸಿಯಲ್ಲಿ ಕೇಳಿ ಬಂದ ತೆಲುಗು ಹಾಡು. ಹೊರಗಡೆ ಕಣ್ಣು ಹಾಯಿಸಿದರೆ , ರಾತ್ರಿ ಗಾಡಿ ಓಡಿಸಿ ದಣಿದಿದ್ದ ಟ್ಯಾಕ್ಸಿ ಚಾಲಕರು ಅದಾಗಲೇ ತೆರೆದು ಒಲೆ ಹಚ್ಚಿದ್ದ ಕೆಲವು ಟೀ ಅಂಗಡಿಗಳಲ್ಲಿ ಒಂದಷ್ಟು ಚಹಾ ಹೀರಿ ಮುಂದಿನ ಪಯಣಕ್ಕೆ ಅಣಿಯಾಗುತ್ತಿದ್ದರು. ನನ್ನ ಚಾಲಕ ಸಮಯಕ್ಕೆ ಸರಿಯಾಗಿ ನಿಲ್ದಾಣ ತಲುಪಿಸಿಯಾನೇ ? ಎಂಬ ಪ್ರಶ್ನೆಯನ್ನೂ ಮೀರಿ ಬೆಳಗೊಂದು ನನ್ನ ಮುಂದೆ ತೆರೆದುಕೊಳ್ಳುತ್ತಿತ್ತು. ತಲುಪಿದ ಗಮ್ಯ ನನ್ನದು ಮಾತ್ರ . ಚಾಲಕನಿಗೆ ಪಯಣವೇ ಗಮ್ಯ. ಸತ್ಯ , ಗಮ್ಯ , ಪ್ರೀತಿ , ದ್ವೇಷ, ಅಸೂಯೆ ಎಲ್ಲವೂ ಅವರವರು ಕಂಡಂತೆ, ಉಂಡಂತೆ .
ಪಯಣಿಗರನ್ನು ನಿಗದಿತ ಸ್ಥಳಕ್ಕೆ ಕರೆದೊಯ್ಯಲು , ಹಲವು ಪಯಣಗಳನ್ನೊಳಗೊಂಡ ಬೃಹತ್ ಪಯಣ ಸರಣಿಯಂತೆ ಕಾಣುತ್ತಿದ್ದ ಬಂಡಿ ಸಿಧ್ಧವಾಗಿ ನಿಂತಿತ್ತು. ಮಾನವ ಜಗತ್ತಿನ ಎಲ್ಲ ಭಾವಗಳನ್ನು ದಿನವೂ ನೋಡುವ ಈ ಬಂಡಿಗೂ ದನಿ ಇರಬಹುದೇ ? ನಿರ್ಜೀವ , ಸಜೀವ ಎಂಬುದು ವಿಜ್ಞಾನದ ಮಾತಾಯ್ತು ಹೇಳುವ ಹಕ್ಕು ಎಲ್ಲರಿಗೂ ಸಮಾನ ಎಂಬುದು ಭಾವಲೋಕದ ಮೂಲವಲ್ಲವೇ ? ಹಲವು ಪ್ರಶ್ನೆಗಳಿಗೆ ಕಾಲ ಮಾತ್ರ ಉತ್ತರ ಕೊಡಬಲ್ಲುದು . ಕಿಟಕಿಯ ಪಕ್ಕದ ಸ್ಥಳ ದೊರೆಯದ್ದು ಇರಿಸು ಮುರಿಸು. ಇರಲಿ ಬಿಡು, ಬದುಕನ್ನು ಎಲ್ಲ ಕೋನಗಳಿಂದಲೂ ನೋಡು ಎಂಬ ಪಾಠವನ್ನು ಮತ್ತೆ ಹೇಳಿದ್ದು ಅಂದಿನ ಬೆಳಗು. ಜೊತೆಗಾರನೊಡನೆ ಎಲ್ಲಿಗೋ ಹೊರಟ ವೃಧ್ಧ , ನಿದ್ದೆ ಮಂಪರಿನಲ್ಲಿ ಫೋನಿನಲ್ಲೇ ವ್ಯಾಪಾರ ಮಾಡುತ್ತಿದ್ದ ಹರೆಯದ ವ್ಯಾಪಾರಿ, ಕಾಲು ಚಾಚುವಷ್ಟು ಸ್ಥಳದ ಹುಡುಕಾಟದಲ್ಲಿರುವ ಬಳಲಿದ ದಂಪತಿ …ಅನಿವಾರ್ಯವಾಗಿ ಒಂದಷ್ಟು ಹೊತ್ತು ಒಟ್ಟಿಗೆ ಸಾಗ ಬೇಕಾದ ಪಯಣಗಳು. ಪಯಣದ ಆರಂಭದಲ್ಲಿ ನೀ ಯಾರೋ ನಾ ಯಾರೋ ? ಎನ್ನುವಂತಿದ್ದರೂ ದಾರಿ ಸಾಗಿದಂತೆ ಒಬ್ಬರ ಮೇಲೊಬ್ಬರು ವಾಲಿ, ಕನಸುಗಳಲ್ಲಿ ತೇಲಿ ಪಯಣ ಮುಗಿಯುವಷ್ಟರಲ್ಲಿ ಮುಖದ ನರಗಳು ಸಡಿಲವಾಗಿ ಮುಗುಳ್ನಗೆಯೊಂದನ್ನು ಸೂಸುತ್ತವೆ. ಎದುರಾದ ಎಲ್ಲರಿಗೂ ಕೈಗಡದಂತೆ ‘ನಗೆಗಡ’ ಕೊಡಲು ಸಾಧ್ಯವಾದರೆ ಬದುಕು ಸುಂದರವಾಗುತ್ತದೆ. ನನ್ನ ಪಾಲಿನ ಬಂಡಿಯ ಪಯಣ ಮುಗಿದು ನೆನಪುಗಳನ್ನು ಮತ್ತೆ ಪೋಣಿಸಲು ಹುಟ್ಟಿದ ಊರು ತಲುಪಿದ್ದೆ . ಬದಲಾವಣೆ ಜೀವಂತಿಕೆಯ ಪ್ರಮುಖ ಲಕ್ಷಣ, ನನ್ನೂರು ಕೂಡ ಜೀವಂತಿಕೆಯನ್ನು ಹೊತ್ತು ಮೆರೆಯುತ್ತಿತ್ತು. ಗಿಳಿಗಳಿಗೆ ನೆರಳಾಗಿದ್ದ ಮರವೊಂದು ಉರುಳಿ ಡಾಂಬರಿನ ರಸ್ತೆಯಾಗಿತ್ತು . ಇಲ್ಲಿ ಹೆಜ್ಜೆ ಮೂಡುವುದಿಲ್ಲ! ಗಿಳಿಗಳಿಗೆ ನೆರಳಾಗಿ ನೆರಳಿಗೆ ಅಲೆಯುವಾ ಎಲೆ ..’ ಹಂಸಲೇಖಾರ ಸಾಲು ನೆನಪಾಗಿತ್ತು. ಬೀದಿಗಳಲ್ಲಿದ್ದ ಸುಂದರ ಮರಗಳನ್ನು ಉರುಳಿಸಿ ಊರನ್ನು ಚಂದಗಾಣಿಸುವ ಪ್ರಯತ್ನದ ಭಾಗವಾಗಿ , ಎಲ್ಲಿಂದಲೋ ತಂದ ‘ಸೈಕಾಸ್’ ಮರಗಳನ್ನು ನೆಡಲಾಗಿತ್ತು. ನಾಲ್ಕೈದು ಅಡಿ ಬೆಳೆದ ನಂತರವೂ ಎಲ್ಲಿ ನೆಟ್ಟರೂ ಬೆಳೆವ ಸೈಕಾಸ್ ,ಬೇರು ಬಿಟ್ಟು, ಗೂಡು ಕೊಟ್ಟು ನೆರಳಾಗುವ ಮರಗಳ ಸ್ಥಾನವನ್ನು ಆಕ್ರಮಿಸಿಕೊಂಡಿತ್ತು. ಇಂದಿನ ಕಾಲಮಾನದಲ್ಲಿ ಹೊರಗಿನ ಬೆಳವಣಿಗೆಗೆ ಮಾತ್ರ ಆದ್ಯತೆ , ಬೇರುಗಳನ್ನು ಗಮನಿಸುವ ಪುರೊಸೊತ್ತು ಯಾರಿಗಿದೆ ? ಗೂಡಿಲ್ಲದೆ ಅಳುವ ಗಿಳಿಗಳ ಭಾಷೆ ಬಲ್ಲವರಾರು ?
ಹೆಜ್ಜೆಹೆಜ್ಜೆಗೊಂದು ಹೆಜ್ಜೆ ಸೇರುತ್ತಿದ್ದರೆ ದಾರಿಗೆಲ್ಲಿಯ ಕೊನೆ ? ಸುತ್ತಲ ಜಗತ್ತು ಪ್ರತೀ ಕ್ಷಣವೂ ಬದಲಾಗುತ್ತಲೇ ಇರುತ್ತದೆ. ನಮ್ಮ ಗಮನದ ಹಂಗು ಅದಕೆಲ್ಲಿ ? ಭಾವದಲ್ಲಿ ಬೆಸೆದ ಬಂಧಗಳೇ ಬದಲಾಗುವಾಗ ಸುತ್ತಲ ಜಗತ್ತು ಯಾವ ಲೆಕ್ಖ ? ಮನೆಯ ಬಾಗಿಲ ಕಂಡು ಲಹರಿ ತುಂಡಾಗಿತ್ತು. ಒಳಗಿನ ಮನುಷ್ಯರೂ ಬದಲಾಗಿರಲಿಲ್ಲ ಅಥವಾ ಹಾಗೆ ನಂಬುವುದು ನನ್ನ ಇಂದಿನ ಅಗತ್ಯ . ಪ್ರಶ್ನೆಗಳೊಂದಿಗೆ ಆರಂಭವಾದ ಒಂದು ಪಯಣ ಪ್ರಶ್ನೆಗಳಲ್ಲೇ ಸಾಗಿ , ಪ್ರಶ್ನೆಗಳಲ್ಲೇ ಮುಗಿದಿತ್ತು . ಹಲವು ಬಾರಿ ಬದುಕು ಒಂದು ಪ್ರಶ್ನೆಗೆ ಮತ್ತೊಂದು ಪ್ರಶ್ನೆಯ ಮೂಲಕ ಉತ್ತರಿಸುತ್ತದೆ. ಪ್ರತೀ ದಿನವೂ ಹೊಸ ಅಡುಗೆಯೊಂದನ್ನು ಮಾಡಿ , ಚಂದಮಾಮನನ್ನು ತೋರಿಸಿ ‘ಒಂದೇ ತುತ್ತು ಉಣ್ಣು ಮಗು ‘ ಎನ್ನುವ ಅಮ್ಮನಂಥಾ ಬದುಕು. ಇವು ಒಂದು ಪಯಣದ ನಂತರ ನನ್ನ ನೆನಪಿನಲ್ಲುಳಿದ ಕೆಲವು ಅನುಭೂತಿಗಳು. ಚುಕ್ಕಿಗಳನಿಡುವ ಕಾರ್ಯ ಈಗಷ್ಟೇ ಆರಂಭವಾಗಿದೆ , ಚಿತ್ತಾರವಾಗಲು ಇನ್ನೂ ಕಾಯಬೇಕಿದೆ.
ದಾರಿಗಳು ಮತ್ತು ದಾರಿಹೋಕರ ನಡುವಿನ ಮಾತುಗಳನ್ನು ಗೆಳತಿ ಮಂಜುಳಾ ಸುಂದರ ಕವಿತೆಯಾಗಿಸಿದ್ದಳು . ‘ಹೊಸ ಹೆಜ್ಜೆಗೊಂದು ಹೊಸ ಅನುಭೂತಿ ‘ ಇದು ಪಯಣದ ಪರಮ ಸತ್ಯ. ಅನುಭೂತಿಯಿಂದ ನಾವು ವಿಮುಖರಾದರೂ , ಅಲಕ್ಷಿಸಿದರೂ ಅದು ಘಟಿಸುತ್ತಲೇ ಇರುತ್ತದೆ. ದಾರಿಹೋಕರು ದಾರಿಯೊಡನೆ ಮುನಿಯಬಾರದೆಂಬ ಸಾಲಿನೊಂದಿಗೆ ಅಂತ್ಯವಾಗುವ ಕವಿತೆ ನನ್ನಿಷ್ಟದ ಕವಿತೆಗಳಲ್ಲೊಂದು .
ಕವಿತೆಯ ಪೂರ್ಣ ಪಾಠ ಕೆಳಗಿದೆ :
ತಿರು-ತಿರುಗಿ ನೋಡಿ ಕತ್ತುಳುಕಿದೆ
ಸಾಗಿ ಬಂದ ಹಾದಿ ತನ್ನ ಪಾಡಿಗೆ ತಾನಿದೆ
ನನ್ನಾತಂಕಗಳ
ತಿಳಿದೇ ಇಲ್ಲವೆಂಬ ಭಾವದ
ರಸ್ತೆಯ ನಿರಂಬಳ ನೋಟದಲಿ
ಮತ್ತಿನ್ನಿನೇನೋ ಕೇಳಿಸತೊಡಗಿದೆ…
ನನ್ನ ತುಳಿದವರೆಷ್ಟೋ ಹುಡುಗಿ..
ಲೆಕ್ಕವಿಡಲು ನನಗೆ ಬರುವುದಿಲ್ಲ
ನೀ ತಿರುಗಿ ನೋಡಿದರೂ
ನೋಡಿ ದಿಟ್ಟಿಸಿದರೂ
ದುರುಗುಟ್ಟಿ ಗದರಿದರೂ
ನಾನೇನೂ ಹೇಳಲಾರೆ ನಿನಗೆ
ಪ್ರಶ್ನೆ ಕೇಳುವುದು ನಿನ್ನ ಚಾಳಿಯೇ?
ಯಾರು-ಯಾರೆಂದು ನೆನಪಿರುವುದಿಲ್ಲ ನನಗೆ
ಸುಮ್ಮನೇ ನಾ ಹರವಿಕೊಂಡಿದ್ದೇನೆ
ಹರವಿದವರಾರೆಂಬುದೂ ನನಗೆ ಬೇಕಿಲ್ಲ
ನಿನ್ನ ತೀಕ್ಷ್ಣ ನೋಟಕೆ
ಇಷ್ಟಾದರೂ ಮಾತಾಗಿದ್ದೇನೆ
ಕೇಳಿಸಿಕೋ…
ತುಳಿತ ನೋವು ತಂದಿಲ್ಲ ಗೆಳತಿ
ಪ್ರತಿ ಕ್ಷಣವೂ ಹೊಸ ಸ್ಪರ್ಶದ
ಹಸಿವ ತಣಿಸಿದೆ!
ಹಿಂದಿರುಗಿ ಮರುಗಬೇಡ
ನಾ ಸಂತೈಸಲಾರೆ
ಪ್ರಶ್ನೆಗಳೊಡನೆ ನನ್ನ ದಿಟ್ಟಿಸಬೇಡ
ನಾನುತ್ತರಿಸಲಾರೆ
ಹೊಸ ಹೆಜ್ಜೆಗೊಂದೊಂದು
ಹೊಸ ಅನುಭೂತಿ
ಗಗನಕೇರಿ ನೀ ಹಾರಿದರೂ
ಇದಷ್ಟೇ ಪಯಣದ ರೀತಿ
ಬಿಕ್ಕಳಿಕೆ ನಿಲ್ಲಿಸು
ಹೆದೆಗೇರಿಸು ಕನಸು
ಸವೆಸಿದಷ್ಟೇ ದಾರಿ
ಹದವಾಗಿಸು ಮನಸು
ನಿನಗಿದು ತಿಳಿದಿರಲಿ
ಪಯಣದಲೆಂದೂ
ತರವಲ್ಲ ಮುನಿಸು!
ಇದು ದಾಖಲೆಯ ಅಂತ್ಯ ಮಾತ್ರ, ಪಯಣದ್ದಲ್ಲ !







Thumba ista aiytoo…………..