
ಸಂತೋಷ ಕೌಲಗಿ
ಮೊನ್ನೆಯ ದಿನ ಸಂಜೆ ಮೈಸೂರಿನ ಚಾಮರಾಜಪುರಂ ನಲ್ಲಿರುವ ಪಕೃತಿ ಸಾವಯವ ಆಹಾರ ಮಳಿಗೆಯಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ. ಮೈಸೂರಿನ ನೂಲುಗಾರರ ಬಳಗದ ವಾರ್ಷಿಕೋತ್ಸವದ ನೆಪದಲ್ಲಿ ಏರ್ಪಾಟಾಗಿದ್ದ ಕಾರ್ಯಕ್ರಮ ಅದು. ಖ್ಯಾತ ಸೂಫಿ ಗಾಯಕ ಮುಕ್ತಿಯಾರ್ ಅಲಿ ಅವರ ಸೂಫಿ ಗಾಯನ ಸಂಜೆ.
ಎರಡು ವರ್ಷದ ಹಿಂದೆ ಸಣ್ಣದಾಗಿ ಪ್ರಾರಂಭವಾದ ಮೈಸೂರಿನ ನೂಲುಗಾರರ ಬಳಗ ಇಂದು ನಿರೀಕ್ಷೆಗೂ ಮೀರಿ ಸದಸ್ಯರನ್ನು ಹೊಂದಿದೆ. ಅವರೆಲ್ಲರನ್ನೂ ಚರಕ, ಹತ್ತಿ, ನೂಲು ಬಂಧಿಸಿಟ್ಟಿದೆ.
೨೧ ನೇ ಶತಮಾನದ ಯಂತ್ರ ನಾಗರಿಕತೆ ನಮ್ಮೆಲ್ಲರ ಬದುಕನ್ನೂ ಆಪೋಶನ ತೆಗೆದು ಕೊಳ್ಳುತ್ತಿರುವಾಗ, ನಮ್ಮ ಬದುಕನ್ನು ಕಾಣದ ಕೈಯೊಂದು ನಿಯಂತ್ರಿಸುತ್ತಿರುವ ಅನುಭವ ಆಗುತ್ತಿರುವಾಗ, ಕೊಳ್ಳುಬಾಕ ಸಂಸ್ಕೃತಿಯ ದಾಹ ಹೆಚ್ಚುತ್ತಿರುವಾಗ, ನಮ್ಮ ಸ್ವಾಭಾವಿಕ ಸಂಪನ್ಮೂಲಗಳೆಲ್ಲ ನೆಲ ಕಚ್ಚಲು ಪ್ರಾರಂಭವಾಗಿರುವಾಗ, ನಮ್ಮ ಸಂಬಂಧಗಳ ಎಳೆಗಳು ಸೂಕ್ಷ್ಮವಾಗುತ್ತಿರುವಾಗ, ಮೈಸೂರಿನ ಈ ನೂಲುಗಾರರಿಗೆ ಚರಕದ ಮಹತ್ವ ಅರಿವಾಗಿದೆ. ಅದರಲ್ಲಿರುವ ಬಿಡುಗಡೆಯ ದಾರಿ ಕಾಣತೊಡಗಿದೆ. ಮಾತಿಗಿಂತ ಕೃತಿ ಮೇಲು ಎಂಬುದು ನಿಜ ಎನಿಸತೊಡಗಿದೆ. ಹಾಗಾಗಿ ಅವರೆಲ್ಲರೂ ಚರಕದ ಹಿಂದೆ ಹೊರಟಿದ್ದಾರೆ.

ಸೂಫಿ ಪಂಥಕ್ಕೂ ಚರಕ ಮತ್ತು ನೇಯ್ಗೆ ಗೂ ಅವಿನಾಭಾವ ಸಂಬಂಧ. ಖ್ಯಾತ ಸೂಫಿ ಕಬೀರ ಸ್ವತ: ನೇಕಾರ. ಹಾಗಾಗಿ ನಮ್ಮ ಮುಕ್ತಿಯಾರ್ ಅಲಿಗೂ ಚರಕಕ್ಕೂ ನೆಂಟಸ್ತಿಕೆ. ಎರಡು ವರ್ಷದ ಹಿಂದೆ ಮೈಸೂರಿಗರ ಈ ಚರಕ ಪಯಣ ಕಂಡು ಆನಂದ ಪಟ್ಟಿದ್ದ ಮುಕ್ತಿಯಾರ್ ಅಲಿ, ನೂಲುಗಾರಿಕೆ , ಚರಕ, ಬಟ್ಟೆ,ನೇಯ್ಗೆ ಮುಂತಾದ ವಿಷಯ ವಸ್ತುಗಳ ಮೇಲೆ ಇರುವ ಸೂಫಿ ರಚನೆಗಳನ್ನು ಸಂಗ್ರಹಿಸಿ ಮೊನ್ನೆಯ ದಿನ ಅವುಗಳನ್ನು ಸುಮಾರು ಒಂದೂವರೆ ತಾಸು ಹಾಡಿದರು.
ಬದುಕೆಂಬ ನೂಲು, ಬಟ್ಟೆ, ಹಳೆಯದಾಗುತ್ತಿರುವ ದೇಹವೆಂಬ ಚರಕ, ನೂಲು, ಬಟ್ಟೆ, ಹಾಸು -ಹೊಕ್ಕು, ಚರಕ ಮುಂತಾದ ರೂಪಕಗಳನ್ನು ಬಳಸಿ ಹೇಳಿದ ಅನೇಕ ಪಾರಮಾರ್ಥಿಕ ಚಿಂತನೆಗಳ ರಚನೆಗಳನ್ನು ಹಾಡಿದರು.
ಸುಮಾರು ಇನ್ನೂರು ಜನರ ಅಪ್ತ ವೃಂದ ಚಾಮರಾಜ ಪುರಂ ನ ಮಾರ್ಗೋಸಾ ಕಟ್ಟಡದ ಬೇವಿನ ಮರದ ಕೆಳಗೆ ಕುಳಿತು ಈ ಸೂಫಿ ಗಾಯನವನ್ನುಕೇಳಿದರು. ಅನೇಕ ನೂಲುಗಾರರು ನೂತರು.

ಸುತ್ತಿ ಸುತ್ತಿ ಹಳೆಯದಾಗಿ ಲೊಡ್ಡು ಹಿಡಿದು ಹೋಗುವ ದೇಹವೆಂಬ ಚರಕದ ಸುತ್ತುವಿಕೆ ನಮ್ಮ ನಿಯಂತ್ರಣದಲ್ಲೇ ಇರಲು ಗಾಂಧಿ ಹಿಡಿದ ಚರಕದ ಸುತ್ತುವಿಕೆಯಲ್ಲಿ ಉತ್ತರವಿದೆ ಎಂಬುದು ಹೊಸತಲೆಮಾರಿನ ಅರಿವಿಗೆ ಬರುತ್ತಿರುವುದು ಮುಕ್ತಿಯಾರ್ ಅಲಿಯ ಸೂಫಿ ಗಾಯನ ದಂತೆಯೇ ಸಂತೋಷ, ನೆಮ್ಮದಿಯನ್ನು ನೀಡುವ ವಿಚಾರ.
ಮೈಸೂರಿನ ಪ್ರಕೃತಿ ಸಾವಯವ ಆಹಾರದ ಆವರಣದಲ್ಲಿ ಪ್ರತಿ ಶನಿವಾರ, ಭಾನುವಾರ ನೂಲುಗಾರಿಕೆಯ ಕಾರ್ಯಾಗಾರ ನಡೆಯುತ್ತದೆ. ಆಸಕ್ತರು ಸಂಪರ್ಕಿಸಿ: ೯೦೦ ೮೪ ೮೪ ೮೮೦ ; ೮೨೭ ೭೪ ೧೭ ೮೭೮ .
ಫೋಟೋ ಕೃಪೆ : ಅಮೋಘವರ್ಷ







0 Comments