ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಂಬೈಯಲ್ಲಿ ಮೊಗವೀರರ ಸಾಹಸಪ್ರಥೆ..

ಡಾ ಜಿ ಪಿ ಕುಸುಮಾ ಅವರ ಕೃತಿ ‘ಮುಂಬಯಿಯಲ್ಲಿ ಮೊಗವೀರ ಸಮುದಾಯ’

‘ಮೊಗವೀರ ವ್ಯವಸ್ಥಾಪಕ ಮಂಡಳಿ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಪ್ರೊ ಜಿ ಎನ್ ಉಪಾಧ್ಯ ಅವರ ಅನಿಸಿಕೆ ಇಲ್ಲಿದೆ.

-ಪ್ರೊ ಜಿ ಎನ್ ಉಪಾಧ್ಯ

ಇದು ಡಾ. ಜಿ. ಪಿ. ಕುಸುಮಾ ಅವರ ಶೋಧ ಮಹಾ ಪ್ರಬಂಧ.ಮುಂಬೈಗೂ ಕರ್ನಾಟಕಕ್ಕೂ ಇರುವ ಸಂಬಂಧ ಅನುಬಂಧ ಅವಿನಾಭಾವವಾದುದು. ಕನ್ನಡಿಗರ ಭಾವಕೋಶದಲ್ಲಿ ಮುಂಬೈ ಹಾಸುಹೊಕ್ಕಾಗಿದೆ. ಇದೊಂದು ಶ್ರಮ ಸಂಸ್ಕೃತಿಯ ನಗರ. ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಬಿಟ್ಟರೆ ಅತಿ ಹೆಚ್ಚು ಕನ್ನಡಿಗರು ನೆಲೆಸಿರುವ ತಾಣವೆಂದರೆ ಮುಂಬೈ. ಈ ದೈತ್ಯನಗರಿಯಲ್ಲಿ ನೆಲೆನಿಂತು, ಕನ್ನಡಿಗರು ಗೈದ ಸಾಹಸ ಸಾಧನೆಗೆ ಹತ್ತಿರ ಹತ್ತಿರ ಎರಡು ಶತಮಾನಗಳ ಇತಿಹಾಸವಿದೆ. ಕನ್ನಡ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಬಲವರ್ಧನೆಗೆ ಮುಂಬೈ ಕೊಟ್ಟ ಕೊಡುಗೆಯೂ ಅನುಪಮವಾದುದು.ಸಂಘಟನೆಯಲ್ಲಿ ಮುಂಬೈನ ತುಳು ಕನ್ನಡಿಗರದು ಎತ್ತಿದ ಕೈ. ಇಲ್ಲಿರುವಷ್ಟು ಸಂಘ ಸಂಸ್ಥೆಗಳು ಜಗತ್ತಿನ ಯಾವುದೇ ಮೂಲೆಯಲ್ಲಿಯೂ ಇಲ್ಲ’ ಎಂಬ ಮಾತು ನಿಜವೇ ಆಗಿದೆ. ಈ ಭಾಗ್ಯನಗರಿಗೆ ಕರ್ನಾಟಕದಿಂದ ಮೊದಲು ವಲಸೆ ಬಂದು ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿ ಇತಿಹಾಸ ನಿರ್ಮಾಣ ಮಾಡಿದವರು ಮೊಗವೀರರು.

ಮುಂಬೈ ನಗರ ಉಪನಗರಗಳ ತುಂಬೆಲ್ಲ ಹರಿದು ಹಂಚಿ ಹೋಗಿರುವ ಮೊಗವೀರ ಸಮುದಾಯ, ಈ ಜನಾಂಗದ ಇತಿಹಾಸ, ಅವರ ಸಾಹಸಪ್ರಥೆ, ಮೊಗವೀರ ಸುಮುದಾಯದ ರೀತಿ ರಿವಾಜು, ಆಚರಣೆ, ನಂಬಿಕೆ, ಕಸುಬು,ಶಿಕ್ಷಣ ಪ್ರೇಮ, ಸಾಹಿತ್ಯ ಪ್ರೀತಿ, ಪತ್ರಿಕೋದ್ಯಮದ ಕುರಿತಾದ ಒಲವು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾಡಿದ ಕ್ರಾಂತಿ, ಸಮುದಾಯದ ಸಮಾಜಮುಖಿ ಜನಮುಖಿ ಸಾಂಘಿಕ ಚಟುವಟಿಕೆ ಹೀಗೆ ಮುಂಬೈ ಮಹಾನಗರದ ಸಮೃದ್ಧಿಗೆ ಹೆಗಲುಗೊಟ್ಟು ತಾವು ಸಹ ಅಭಿವೃದ್ಧಿಪಥದಲ್ಲಿ ಸಾಗಿ ಇತರ ಸಮುದಾಯಗಳಿಗೆ ಮಾದರಿಯಾದ ಮೊಗವೀರ ಜನಾಂಗದ ಸಾಂಸ್ಕೃತಿಕ ಸಂಕಥನವನ್ನು ಕಟ್ಟಿಕೊಡುವ ಘನ ಕಾರ್ಯ ಈ ಮಹಾಪ್ರಬಂಧದಲ್ಲಿ ಚೆನ್ನಾಗಿ ನೆರವೇರಿದೆ.

ಮುಂಬೈಯಲ್ಲಿ ಮೊಗವೀರ ಸಮುದಾಯ ನಡೆದು ಬಂದ ದಾರಿಯನ್ನು ಎಂಟು ಪ್ರಮುಖ ಅಧ್ಯಾಯ ಹಾಗೂ ಅನೇಕ ಉಪ ಅಧ್ಯಾಯಗಳಲ್ಲಿ ಡಾ. ಕುಸುಮಾ ಅವರು ವರ್ಣನಾತ್ಮಕವಾಗಿ ದಾಖಲಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.ಈ ಮೂಲಕ ಮೊಗವೀರ ಸಮಾಜದ ಮೂಲಚೂಲ, ಜತೆಗೆ ಬಹು ಭಾಷಿಕ ಬಹು ಸಂಸ್ಕೃತಿಯ ನಗರದಲ್ಲಿ ಕಾಲ ಕಾಲಕ್ಕೆ ಈ ಸಮುದಾಯ ಕಂಡ ಸ್ಥಿತ್ಯಂತರಗಳು, ಅಲ್ಲಿನ ಅಂತರಂಗ – ಬಹಿರಂಗಗಳನ್ನು ಹೊಸ ಒಳನೋಟಗಳ ಮೂಲಕ ಇಲ್ಲಿ ಲೋಕಸಮ್ಮುಖಗೊಳಿಸಿರುವುದು ಅವಲೋಕನೀಯವಾಗಿದೆ.ಮುಂಬಯಿ ನಗರಕ್ಕೆ ವಲಸೆ ಬಂದ ಬಳಿಕ ಮೊಗವೀರ ಸಮುದಾಯದ ಬದುಕು ಸಾಗಿಸಿದ ರೀತಿ, ಕುಟುಂಬ ಪದ್ಧತಿ, ನೌಕರಿ, ನ್ಯಾಯವ್ಯವಸ್ಥೆ, ಕೂಡು ಕುಟುಂಬಗಳ ವಸತಿ ವ್ಯವಸ್ಥೆ, ಮನೋರಂಜನೆಯ ಬಹುಬಗೆಗಳ ಜೀವನಾವರ್ತನದ ಆಚರಣೆಗಳು, ಆರಾಧನೆಗಳು, ಶಿಕ್ಷಣ, ಸಂಘ-ಸಂಸ್ಥೆಗಳು, ಹಣಕಾಸು ಸಂಸ್ಥೆಗಳು ಹೇಗೆ ಈ ಜನಾಂಗದ ವಿಕಾಸಕ್ಕೆ ಕಾರಣವಾಗಿವೆ ಎನ್ನುವುದನ್ನು ತಿಳಿಯಲು ಈ ಕೃತಿ ನಮ್ಮ ನೆರವಿಗೆ ಬರುತ್ತದೆ. ಉದ್ಯೋಗ, ಶಿಕ್ಷಣ, ವೃತ್ತಿ, ಮನೋರಂಜನೆ, ಕ್ರೀಡೆ, ಸಾಹಿತ್ಯಕ ಚಟುವಟಿಕೆಗಳನ್ನು ಮೊಗವೀರ ಜನಾಂಗ ಈ ನಗರದಲ್ಲಿ ತಮ್ಮ ಬದುಕಿನ ಭಾಗವನ್ನಾಗಿ ಮಾಡಿಕೊಂಡು, ತಮ್ಮ ಸಾಂಸ್ಕೃತಿಕ ಬೇರುಗಳನ್ನು ಸಜೀವಗೊಳಿಸುವ ನಿಟ್ಟಿನಲ್ಲಿ ಅನ್ಯ ಭಾಷಾ ಪರಿಸರದಲ್ಲಿ ನಡೆಸಿದ ಹೋರಾಟ, ಸಂಘರ್ಷ, ಆದರ್ಶಪ್ರಾಯವಾಗುವಂತಹ ಸಾಧನೆಗಳನ್ನು ಅವಲೋಕಿಸಿ ವಿಶ್ಲೇಷಣೆಗೊಳ ಪಡಿಸಿರುವುದು ಈ ಕೃತಿಯ ಧನಾತ್ಮಕ ಅಂಶ.

ಸ್ವಾತಂತ್ರ್ಯ ಪೂರ್ವದಲ್ಲೇ ಮುಂಬಯಿ ನಗರದಲ್ಲಿ ನೆಲೆನಿಂತು ತಮ್ಮ ಅಸ್ಮಿತೆಯನ್ನು ಕಾಪಿಟ್ಟು ಕೊಂಡು ಬಂದ ಮೊಗವೀರರು ಸ್ವಾತಂತ್ರ್ಯ ಹೋರಾಟದಲ್ಲಿಯೂ ಪಾಲ್ಗೊಂಡು ದೇಶಪ್ರೇಮವನ್ನು ಎತ್ತಿ ಹಿಡಿದವರು. ಈ ಜನಾಂಗವು ವಲಸೆ ಬಂದಂದಿನಿಂದ ಇಂದಿನವರೆಗೂ ತಮ್ಮ ಜೀವನದ ಬಗೆಗೆ, ತಮ್ಮ ಸಮಾಜದ ಕುರಿತಾಗಿ, ಸಮುದಾಯದ ಸಂಸ್ಕೃತಿ ಸಂಪನ್ನತೆಯನ್ನು ಸಮೃದ್ಧಿಗೊಳಿಸುವ ಸಲುವಾಗಿ ತುಂಬ ಶ್ರಮವಹಿಸಿ ದುಡಿದಿರುವುದರ ಸಂಕೇತವಾಗಿ ಹುಟ್ಟು ಹಾಕಿದ ಹಲವು ಸಂಸ್ಥೆಗಳು, ಶಿಕ್ಷಣ ಸಂಸ್ಥೆ, ಧಾರ್ಮಿಕ ಸಂಸ್ಥೆ, ವ್ಯಾಯಾಮ ಶಾಲೆ, ಭಜನಾ ಮಂಡಳಿಗಳು, ಯಕ್ಷಗಾನ ಮಂಡಳಿಗಳು, ಗ್ರಾಮ ಸಭೆ, ಮೂಲಸ್ಥಾನ ಸಭೆಗಳ ಶಾಖೆಗಳು ಶತವರ್ಷಗಳ ಸಂಭ್ರಮದ ಸಿದ್ಧಿಯನ್ನು ಪಡೆಯುವಂತಾಗಿರುವುದರ ಹಾಳತ ವಿವೇಚನೆಯೂ ಇಲ್ಲಿ ನೆಲೆ ಪಡೆದಿದೆ. ವಲಸೆ ಬಂದ ಸಣ್ಣ ಸಮುದಾಯವೊಂದು ಸರಕಾರದ ಯಾವುದೇ ಬೆಂಬಲ, ಮೀಸಲಾತಿ ಸಹಾಯ ನೆರವುಗಳಿಲ್ಲದೆ ಸಮಷ್ಟಿ ಪ್ರಜ್ಞೆಯ ಮೂಲಕ ಸಾಂಘಿಕವಾಗಿ ಸಮುದಾಯದ ಉನ್ನತಿ ಹಾಗೂ ಸಾಂಸ್ಕೃತಿಕ ಪ್ರಗತಿಯನ್ನು ಕಂಡುಕೊಂಡಿರುವ ವೀರಗಾಥೆಯೂ ಇಲ್ಲಿ ಸೊಗಸಾಗಿ ಅನಾವರಣಗೊಂಡಿದೆ.

ಮುಂಬಯಿ ನಗರದ ಔದ್ಯೋಗಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಕ, ಕ್ರೀಡೆ ಇತ್ಯಾದಿ ಕ್ಷೇತ್ರಗಳಲ್ಲಿ ಮೊಗವೀರರು ತಮ್ಮ ಸಾಹಸ ಪ್ರವೃತ್ತಿಯಿಂದ ಮುಂದೆ ಬಂದು ಶ್ರೀಮಂತರಾಗಿದ್ದಾರೆ. ಹೆಸರಾಂತ ಡಾಕ್ಟರರು, ಇಂಜಿನಿಯರು, ನ್ಯಾಯವಾದಿಗಳು, ಕುಸ್ತಿ ಪಟುಗಳು, ಶಿಕ್ಷಕರು, ನಟರು, ಸಂಗೀತ ತಜ್ಞರು, ನೃತ್ಯಗುರುಗಳು ಸಾಹಿತಿಗಳು ಹೀಗೆ ವಿವಿಧ ರಂಗಗಳಲ್ಲಿ ಸ್ತ್ರೀ-ಪುರುಷರಾದಿಯಾಗಿ ಕೀರ್ತಿಗಳಿಸಿದ್ದಾರೆ. ಮೊಗವೀರ ಸಮಾಜದ ಮಹಿಳೆಯರು ವಿದ್ಯಾವಂತರಾಗಿ ಪ್ರಗತಿ ಹೊಂದಿ ಮನೆಯ ಒಳ ಹೊರಗೆ ದುಡಿಯಲು ಶಕ್ತರಾಗಿದ್ದಾರೆ ಎಂಬುದನ್ನು ಸಮೃದ್ಧ ಆಕರಗಳ ಮೂಲಕ ತೋರಿಸಿಕೊಡಲಾಗಿದೆ.ಅನ್ಯಭಾಷಾ ಪರಿಸರವಾದ ಮುಂಬಯಿಯಲ್ಲಿ ಮೊಗವೀರ ಸಮುದಾಯದ ಸಿದ್ಧಿ ಸಾಧನೆ ಇಲ್ಲಿ ಅಧಿಕೃತವಾಗಿ ಚಿತ್ರಣಗೊಂಡಿದೆ.

ರಾಮ ಪಂಜಿಯವರು ಮುಂಬಯಿ ಮೊಗವೀರರ ಧಾರ್ಮಿಕ ಮುಖಂಡರಾಗಿ ಪ್ರಾಮುಖ್ಯತೆಯನ್ನು ಪಡೆಯುತ್ತಾರೆ. ಗ್ರಾಮಸಭೆ, ಹೋಬಳಿ ಸಭೆ, ಯಕ್ಷಗಾನ ಮಂಡಳಿ, ಭಜನಾ ಮಂಡಳಿಗಳ ಮೂಲಕ ಒಂದುಗೂಡಲಾರಂಭಿಸಿದ ಮುಂಬಯಿ ಮೊಗವೀರರು ರಾಮ ಪಂಜಿಯವರಿಂದ ಸ್ಥಾಪಿಸಲ್ಪಟ್ಟ ಶ್ರೀಮದ್ಭಾರತ ಮಂಡಳಿಯ ಮೂಲಕ ಸಾಮೂಹಿಕವಾಗಿ ಒಂದೆಡೆ ಸೇರುವುದು ಸಾಧ್ಯವಾಯಿತು. ಶ್ರೀಮದ್ಭಾರತ ಮಂಡಳಿಯು ಇಂದು ಮುಂಬಯಿಯಲ್ಲಿ ಮೊಗವೀರರ ಪ್ರಮುಖ ಧಾರ್ಮಿಕ ಸಂಸ್ಥೆಯಾಗಿದೆ. ಹಾಗೆಯೇ ಶಿಕ್ಷಣದಿಂದ ವಂಚಿತರಿಂದ ತುಂಬಿದ ಈ ಸಮಾಜದ ಜನರಿಗೆ ಮೊಗವೀರ ವ್ಯವಸ್ಥಾಪಕ ಮಂಡಳಿಯ ಮೂಲಕ ಶಿಕ್ಷಣದ ಹೆಬ್ಬಾಗಿಲನ್ನು ತೆರೆದುಕೊಟ್ಟ ಕಾಡಿಪಟ್ಣ ಚಂದು ಮಾಸ್ತರರು ಓರ್ವ ಯುಗಪುರುಷರಾಗಿ ಈ ಜನಾಂಗದಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಾರೆ. ಈ ಇಬ್ಬರು ಮಹಾಪುರುಷರು ಮುಂಬಯಿ ಮೊಗವೀರ ಸಮಾಜದ ಸಾಂಸ್ಕೃತಿಕ ಅಧ್ಯಯನದಲ್ಲಿ ಬಹಳ ಪ್ರಮುಖರಾಗುತ್ತಾರೆ. ಕಾಡಿಪಟ್ಣ ಚಂದು ಮಾಸ್ತರರು ಮತ್ತು ಇತರರು ತಟ್ಟೆ ಹಿಡಿದು ಮುಂಬಯಿಯ ಗಲ್ಲಿ ಗಲ್ಲಿಗಳಲ್ಲಿ ಬೇಡಿ ಶಾಲೆ ಆರಂಭಿಸುವಲ್ಲಿ ಶ್ರಮಿಸಿದರು. ಮುಂದೆ ಆಯಾ ಸಂದರ್ಭಗಳಲ್ಲಿ ಶಾಲೆಯ ವಿದ್ಯಾರ್ಥಿಗಳೆಲ್ಲರೂ ಮುಂಬಯಿಯ ರಸ್ತೆಯುದ್ದಕ್ಕೂ ಅಲೆದಲೆದು ಬೇಡಿ ಒಂದುಗೂಡಿಸುತ್ತಿದ್ದ ಮೊತ್ತವನ್ನು ವಿದ್ಯಾದಾನಕ್ಕಾಗಿ ವಿನಿಯೋಗಿಸಲಾಗುತ್ತಿತ್ತು. ಸಮಾಜದ ಉದ್ಧಾರಕ್ಕಾಗಿ ಮೊಗವೀರ ಹಿರಿಯರು ಪಟ್ಟಪಾಡನ್ನು ಸಹ ಇದು ವಿವರಿಸುತ್ತದೆ.

ಮೊಗವೀರರಲ್ಲಿ ವಿಶಿಷ್ಟ ರೂಪದ ನ್ಯಾಯವ್ಯವಸ್ಥೆ ಇದೆ. ತಮ್ಮ ಸಮಸ್ಯೆಗಳನ್ನು ಗ್ರಾಮಸಭೆಗಳಲ್ಲಿ ಬಗೆಹರಿಸಿಕೊಳ್ಳುತ್ತಾರೆ.ಮೊಗವೀರ ಜನಾಂಗವು ಸಾಮಾಜಿಕವಾಗಿ ನಿಯಂತ್ರಿಸಲ್ಪಡುವ ಜನಾಂಗಗಳಲ್ಲೊಂದು. ಕ್ರಿ.ಶ.1946ರಲ್ಲಿ ಮೊ. ವ್ಯ. ಮಂಡಳಿಯು ಮುಂಬಯಿಯಲ್ಲಿ ಮೊಗವೀರ ಕೋ. ಆಫ್. ಬ್ಯಾಂಕ್‌ನ್ನು ಸ್ಥಾಪಿಸಿ ಜನತೆಗೆ ಆರ್ಥಿಕ ಭದ್ರತೆಯನ್ನು ಒದಗಿಸಿದೆ.ಕ್ರಿ.ಶ. 1950ರಲ್ಲಿ ಶ್ರೀ ಮಹಾಲಕ್ಷ್ಮೀ ಹೌಸಿಂಗ್ ಸೊಸೈಟಿಯನ್ನು ಮೊಗವೀರ ವ್ಯವಸ್ಥಾಪಕ ಮಂಡಳಿಯು ಸ್ಥಾಪಿಸಿ, ದ. ಕನ್ನಡದ ಇತರ ಯಾವುದೇ ಸಮಾಜದವರು ಮುಂಬಯಿಯಲ್ಲಿ ಮಾಡಿರದಂತಹ ಮಹತ್ಸಾಧನೆ ಮಾಡಿರುವುದರ ಮೂಲಕ ಈ ಸಮಾಜದ ಸಾಂಘಿಕ ಶಕ್ತಿಯ ಮಹತ್ವವನ್ನು ಇಲ್ಲಿ ಇಲ್ಲಿ ಎತ್ತಿ ಹಿಡಿಯಲಾಗಿದೆ.

ಶತಮಾನಗಳಿಂದ ಮುಂಬೈಯಲ್ಲಿ ನೆಲೆನಿಂತು ವಿವಿಧ ಕ್ಷೇತ್ರಗಳಲ್ಲಿ ಅಪಾರವಾದ ಅನುಪಮವಾದ ಕೈಂಕರ್ಯಗಳನ್ನು ಗೈದ ಮೊಗವೀರ ಸಮಾಜದ ಏಳುಬೀಳುಗಳ ದಾಖಲಾತಿ ಇದೇ ಮೊದಲ ಬಾರಿಗೆ ಪ್ರಸ್ತುತ ಗ್ರಂಥದ ಮೂಲಕ ಇತಿಹಾಸಕ್ಕೆ ಸೇರ್ಪಡೆಯಾಗುತ್ತಿರುವುದು ಹೆಮ್ಮೆಯ ಸಂಗತಿ.

ಡಾ.ಕುಸುಮಾ ಅವರು ಒಳ್ಳೆಯ ಕವಿ, ಲೇಖಕರು. ಅವರ ಪ್ರತಿಭೆ, ಪರಿಶ್ರಮ, ಶ್ರದ್ದೆ ಈ ಮಹಾಪ್ರಬಂಧದಲ್ಲಿ ಒಡೆದು ತೋರುತ್ತದೆ.125ರ ಹೊಸ್ತಿಲಿನಲ್ಲಿರುವ ಮುಂಬೈಯ ನಾಮಾಂಕಿತ ಸಂಸ್ಥೆ ಮೊಗವೀರ ವ್ಯವಸ್ಥಾಪಕ ಮಂಡಳಿ ಈ ಮಹಾಪ್ರಬಂಧವನ್ನು ಪ್ರಕಟಿಸಿ ಮಹದುಪಕಾರವನ್ನು ಮಾಡಿದೆ. ಈ ಮೂಲಕ ಮುಂಬೈಯ ಮೊಗವೀರರ ಸಾಧನೆ ಜಗದಗಲ ತಿಳಿಯುವಂತಾಗಿದೆ. ಒಂದು ಒಳ್ಳೆಯ ಆಕರಗ್ರಂಥ ರಚನೆಗಾಗಿ ಡಾ. ಕುಸುಮಾ ಅವರಿಗೆ ಹಾರ್ದಿಕ ಅಭಿನಂದನೆಗಳು.

‍ಲೇಖಕರು Admin

13 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading