ಪ್ರಿಯರೇ
‘ಅವಧಿ’ಯಲ್ಲಿ ಪ್ರಕಟವಾದ ಹರೀಶ ಕೇರರ ಲೇಖನಕ್ಕೆ ಪೂರಕವಾಗಿ ಕಳಿಸಿದ ಟಿಪ್ಪಣಿ
ನಿನ್ನೆ ಸಂಜೆ ಉಡುಪಿಯಲ್ಲಿ (ಸುಂದರರಾಯರೂ ಸೇರಿದಂತೆ) ಕಣ್ಣೆವೆ ಬಡಿಯದೆ ಎರಡು ಗಂಟೆಯುದ್ದಕ್ಕೆ ನಾಟಕ ನೋಡಿದೆ. ನನ್ನ ಮನೋಭೂಮಿಕೆಯಲ್ಲಿ ಸುಬ್ರಹ್ಮಣ್ಯದ ಅಡ್ಡಹೊಳೆಯ ಚೊಳಚೊಳ ಒಂದೇ ಸದ್ದು. ಬೆತ್ತ ಕೀಸುತ್ತ, ಬೇಟೆಯಾಡಿ ದಣಿದು, ತೀರ್ಥಯಾತ್ರೆಗಿಳಿದು, ದಾರಿಹೋಕರ ಹೊಡೆದು, ಜಾನುವಾರು ನಡೆಸಿ, ಜಲಕ್ರೀಡೆಗಾಗಿ, ವನವಿಹಾರಕ್ಕಾಗಿ, ಅಸ್ಥಿ ಸಂಚಯನಕ್ಕೆ, ಪಿಂಡಪ್ರದಾನಕ್ಕೆ, ಪ್ರಾಣ ನೀಗುವುದಕ್ಕೆ, ಕ್ಷಣಿಕ ರತಿಗೆ, ಮೀನಿಗೆ, ತೇಲು ದಿಮ್ಮಿಗೆ ಹೀಗೇ ಕಾಲದ ಅಖಂಡ ಪ್ರವಾಹದಲ್ಲಿ ಮುಗಿಯದ ಮನುಷ್ಯ ಯಾತ್ರೆ ನಿಧಾಆಆಆಅನಕ್ಕೆ ಸಾಗಿಯೇ ಇತ್ತು. ಮುಗಿಯದ ಮಾತು, ನಿಲ್ಲದ ಅಳು, ಹೊಡೆದ ಬೊಬ್ಬೆ, ಉಕ್ಕಿದ ಕೇಕೆ, ಸ್ಫುರಿಸಿದ ಹಾಡು ಹೀಗೇ ಎಲ್ಲವೂ ಹಿಂಜಿ ಹಿಂಜಿ ಮೌನವಾದವೇ? ಇಲ್ಲ, ಅಡ್ಡಹೊಳೆಯ ಚೊಳಚೊಳ ಒಂದೇ ನಿರಂತರ. ದಾರಿ ಕಡಿಯುವ, ಸೇತುಬಲಿಯುವ, ಅಣೆಕಟ್ಟುವ, ವಿದ್ಯುತ್ ಬಸಿಯುವ, ಬಾಟಲಿ ತುಂಬುವ, ಮೂಲಕ್ಕೇ ಬಾಯಿಯಿಕ್ಕುವ, ಮೇಲಿನಿಂದ ಲೆಕ್ಕಿಸುವವ, ತಳದಲ್ಲಿ ನುಸುಳುವ, ಕಸಕುಪ್ಪೆ ಬೆಳೆಸುವ ಎಲ್ಲವೂ ಪಿಸಿಪಿಸಿದು ಗುಡ್ಡೆಬಿದ್ದರೂ ಅಡ್ಡಹೊಳೆಯ ಚೊಳಚೊಳ ನಿರಂತರ?
ಈ ವಲಯಕ್ಕೆ ನಾಟಕದ ಒಂದೇ ಪ್ರದರ್ಶನ ಲಭ್ಯ ಎನ್ನುವ ಒತ್ತಡದಲ್ಲಿ ನನ್ನ ಸಂಪರ್ಕಕ್ಕೆ ಬಂದವರನ್ನೆಲ್ಲಾ ಒತ್ತಾಯಿಸಿ, ಕಾರು ತುಂಬಿಕೊಂಡು ಧಾವಿಸಿದ್ದೆ. ಕೊನೆಯಲ್ಲಿ ಜೊತೆಗೊಟ್ಟಿದ್ದ, ನೇತ್ರಾವತಿ ತಿರುಗಿಸುವ ಹುನ್ನಾರದವರ ವಿರುದ್ಧ ಮಾಹಿತಿ ಹಕ್ಕಿನ ಬ್ರಹ್ಮಾಸ್ತ್ರ ಹಿಡಿದು ಹೋರುವ, ಸುಂದರರಾಯರಿಗೆ ಇದು ಕೇವಲ ನಿಮ್ಹಾನ್ಸ್ ಗಿರಾಕಿಗಳ ಪ್ರಯೋಗವಾಗಿ ಕಂಡದ್ದು ನನಗೆ ಪರಮಾಶ್ಚರ್ಯ.
ಚಕ್ರದ ಮರುಶೋಧವಾದರೂ ಸರಿ, ವರ್ತಮಾನಕ್ಕಷ್ಟೇ ತೀವ್ರವಾಗಿ ಸ್ಪಂದಿಸುವ, ಕುತೂಹಲದ ಕುದುರೆಯ ನಿರಂತರ ಕಾಸ್ತಾರ/ಸವಾರ ವೆಂಕಟ್ರಮಣ ಉಪಾಧ್ಯ “ಮುಂದೆ ಯಾರು ಒತ್ತಾಯಿಸಿದರೂ ನಾಟಕ ನೋಡಬಾರದು ಎಂದು ನಿರ್ಧರಿಸಿದ್ದೇನೆ” ಎಂದದ್ದು ನನಗೆ ವಿಪರೀತವಾಗಿ ಕಾಣಿಸಲಿಲ್ಲ.
ಅಂತರ್ಜಾಲದ ಸಿಕ್ಕು ಬಿಡಿಸಿ ಜಪಾನೀ ಟಿಪ್ಪಣಿಗಳನ್ನೆಲ್ಲಾ ಸಂಗ್ರಹಿಸಿ ತಂದ ಯುವ ಅಧ್ಯಾಪಕ ಅರವಿಂದ ನಮ್ಮ ಕಾರುಯಾನದ ಉದ್ದಕ್ಕೆ (ಮಂಗಳೂರಿನಿಂದ ಉಡುಪಿಗೆ)ಸರೇಂದ್ರ ಪೈಯವರಿಗೆ ಓದಿಸಿ ಮತ್ತಷ್ಟು ಜಟಿಲ ಬಂಧಕ್ಕೆ ಬಿದ್ದಿರುವುದು ಇನ್ಯಾವ ರೂಪದಲ್ಲಿ ಪ್ರಕಟವಾಗುತ್ತದೋ ಗೊತ್ತಿಲ್ಲ.








ನೀನಾಸಮ್ ತಿರುಗಾಟದವರು ನೀರಿನ ನಿಲುತಾಣ ಉಡುಪಿ ನಡೆದಾಗ , ರಂಗಮಂದಿರದಲ್ಲಿ ಫ್ಯಾನ್ ಹಾಕದೆ ನಮಗೆ ಸೆಕೆಯಲ್ಲಿ ತಲೆನೋವು ಉಚಿತ ಕೊಡುಗೆ ನೀಡಿದರು.