ಷಡಕ್ಷರಿ ತರಬೇನಹಳ್ಳಿ
ಎಲ್ಲೆಲ್ಲೂ ಸುಡು ಸುಡು ಬಿಸಿಲು.ರಾತ್ರಿ ಹಗಲುಗಳೆನ್ನದೆ ಮೈ ಬೆವರು ಸುರಿದು ಮೈಯೆಲ್ಲಾ ಕಟು ವಾಸನೆ. ಜನ ಮೈ ಉಜ್ಜಿಕೊಂಡರೆ ಸಾಕು ಕೈ ತುಂಬಾ ಮೆತ್ತಿಕೊಂಡು ಬರುವ ಮೈಕಸ. ಊರಿನ ಅರಳೀ ಮರದ ಕೆಳಗೆ, ಕೆಲ ಜನ ಆ ಮೈಕಸವನ್ನೇ ಉಂಡೆ ಮಾಡಿ ನಕ್ಕು ನಗಿಸುತ್ತಾ ಆಟವಾಡುವ ಸೊಬಗು. ಎಲ್ಲಿ ಹೋದವೋ ಈ ಮಳೆ ಮೋಡಗಳೂ? ಒಮ್ಮೆಯಾದರೂ ಬಂದು ಸುರಿದು ಈ ಧಗೆಯ ಬಿಸಿ ಕಡಿಮೆ ಮಾಡಲಾರವೇ? ಎಂಬ ಮಾತು ದಿನಕ್ಕೆ ಹತ್ತು ಬಾರಿಯಾದರೂ ಹಳ್ಳಿತುಂಬಾ ಪ್ರತಿಧ್ವನಿಸುತ್ತಿತ್ತು.
ಊರ ಹೆಣ್ಣು ಮಕ್ಕಳಂತೂ ಮನೆಯ ಒಳಗೂ ಮತ್ತು ಹೊರ ಅಂಗಣವನ್ನು ದಿನಕ್ಕೆ ಕನಿಷ್ಟ ಎರಡು ಬಾರಿ ಗುಡಿಸುತ್ತಿದ್ದವರು ಈಗ ಹಲವು ಬಾರಿ ಗುಡಿಸುತ್ತಾರೆ. ಅವರು ಮನೆ, ಅಂಗಳ ಗುಡಿಸುವಾಗೆಲ್ಲಾ ಈ ಕೆಟ್ಟ ಬಿಸಿಗಾಳಿ ಅದೇನೆಲ್ಲ ಹೊತ್ತು ತಂದು ಮನೆಯಂಗಳಕ್ಕೆ ಬಿಸುಟು ಹೋಗುತ್ತೆ ಅಂತಾ ಗುನುಗುತ್ತಾರೆ. ಹೆಂಗೆಳೆಯರಿಗೆ ಕಸ ಬಳಿಯುವ ಹೆಚ್ಚುವರಿ ಕೆಲಸ ಕೊಟ್ಟ ಬೇಸಿಗೆಯ ಬಿಸಿಗಾಳಿ, ಜನ ದನ ಎಂಬ ಬೇಧವೆಣಿಸದೆ ಎಲ್ಲರ ಮೈಯಿನ ನೀರು ಬಸಿದು ಬಸಿದು ಸುಸ್ತು ಮಾಡಿ ಬಿಟ್ಟಿರುತ್ತೆ. ಜನ ಯಾವಾಗಪ್ಪಾ ಮಳೆ ಬರುತ್ತೆ? ಎಂಬ ನಿರೀಕ್ಷೆಯಲ್ಲಿ ದಿನಕ್ಕೆ ನೂರು ಬಾರಿಯಾದರೂ ಮುಗಿಲ ದೇನಿಸಿ ನೋಡುತ್ತಾ ನಿಟ್ಟುಸಿರುಯ್ಯುತ್ತಿರುತ್ತಾರೆ.
ಇಂತಿಪ್ಪ ದಿನ ರಾತ್ರಿಗಳಲ್ಲಿ ಜನರೆಲ್ಲ ಮನೆಯೊಳಗೆ ನಿದ್ರಿಸುವ ಸುಖದಿಂದ ವಂಚಿತರಾಗಿ ಮನೆಯ ಅಂಗಳಗಳಲ್ಲೇ ನಿದ್ರಿಸುತ್ತಿರುತ್ತಾರೆ. ಯಾವುದೋ ಒಂದು ಸರೀ ರಾತ್ರಿ ಇದ್ದಕ್ಕಿದ್ದಂತೆ ಬಿಸಿಗಾಳಿ ತಂಪಾಗಿ ಬೀಸತೊಡಗುತ್ತೆ. ಮಲಗಿದ್ದ ಜನ ಎಚ್ಚರಗೊಳ್ಳುವ ಮುನ್ನವೇ ಟಪ ಟಪ ಟಪ ಅಂತಾ ಅದೆಲ್ಲಿಂದಲೋ ಯಾರೋ ಮರೆಯಿಂದ ಗುಂಡು ಹೊಡೆದಂತೆ ಬಿರುಸಾಗಿ ಮೊದಲ ಮಳೆಯ ಹನಿಗಳು ನೆಲಕ್ಕೆ ತಲುಪುತ್ತವೆ. ಎಚ್ಚರಗೊಂಡ ಹಿರಿಯರು ಮೈಮರೆತು ನಿದ್ರಿಸುತ್ತಿದ್ದ ನಮ್ಮಂಥ ಮಕ್ಕಳು ಮರಿಗಳನ್ನೆಲ್ಲಾ ಹೆಗಲ ಮೇಲೆ ಬಟ್ಟೆ ಎಸೆದುಕೊಂಡಂತೆ ಎಸೆದುಕೊಂಡು ಮನೆಯೊಳಕ್ಕೆ ಓಡಿಹೋಗುತ್ತಾರೆ. ಅರೆ ಬರೆ ನಿದ್ರೆಯಾದ ನಮ್ಮಂಥ ಮಕ್ಕಳು ಕಣ್ಣು ಉಜ್ಜಿ ಉಜ್ಜಿ ಮನೆಯ ಹೊರಗೆ ಧೋಎಂದು ಸುರಿವ ಮೊದಲ ಮಳೆ ನೋಡುತ್ತೇವೆ. ಹಿರಿಯರಿಗೆ ಬಯಲಲ್ಲಿ ಬಿಸಿಲಲ್ಲಿ ಒಣಗಲು ಬಿಟ್ಟಿದ್ದ ವಸ್ತುಗಳನ್ನು ಮನೆಯ ಒಳಕ್ಕೆ ಸೇರಿಸುವ ತವಕವಾದರೆ ನಮ್ಮಂಥ ಮಕ್ಕಳ ಪುಳಕವೇ ಬೇರೆ.
ನನಗಂತೂ ಮೊದಲಮಳೆಯೇ ಆಗಲೀ, ಯಾವುದೇ ಮಳೆಯಾಗಲಿ ಅದರಲ್ಲಿ ನೆಂದು ಮಿಂದು ಒದ್ದೆ ಒದ್ದೆಯಾದರೇ ನನಗೆ ಸಮಾಧಾನ. ಇಂತಹ ಸರಿರಾತ್ರಿಯ ಮಳೆಯಾದರೂ ಸರಿ, ನಾನು ನಿದ್ದೆಯಿಂದೆಬ್ಬರಿಸಿದ ಹಿರಯರ ಅವಸರವಸರದ ಗಡಿಬಿಡಿಯ ಕೆಲಸಗಳ ನಡುವೆಯೂ ಅದ್ಹೇಗೋ ನುಸುಳಿ ಮನೆಯ ಅಂಗಳದಲ್ಲಿರುತ್ತಿದ್ದೆ. ಆ ಮೊದಲ ಮಳೆಯ ಘಮದ ಸುವಾಸನೆ ನನ್ನ ಮೂಗಿನ ತುಂಬಾ ಆಸ್ವಾದಿಸಿಕೊಂಡು ನನ್ನನ್ನೇ ಮರೆತು ಕತ್ತಲಲ್ಲಿ ನಿಂತಿರುತ್ತಿದ್ದೆ. ಆ ಮಧ್ಯರಾತ್ರಿಯ ಮಳೆಯಲ್ಲಿಯೂ ಒಂಚೂರು ನೆನೆದು ಒದ್ದೆಯಾದರೇ ನಾನು ನನ್ನ ಹೆಸರಿನ ಹಿರಿಮೆಗೆ ಹುಟ್ಟಿದವನು. ಯಾರಾದರೂ ಕತ್ತಲಲ್ಲಿ ಮಳೆಯಲ್ಲಿ ನೆನೆಯುತ್ತ ನಿಂತ ನನ್ನ ಗಮನಿಸುವ ತನಕ, ಅಥವಾ ಮನೆಯ ಮುಂಬಾಗಿಲು ಮುಚ್ಚುವ ಮುನ್ನ ಒಮ್ಮೆ ನನ್ನ ಇಲ್ಲದಿರುವಿಕೆಯ ಗಮನಿಸುವ ತನಕ ನಾನು ಮಳೆಗೆ ಹುಟ್ಟಿದ ಮಣ್ಣಿನ ಮಗ. ನನ್ನ ತಲೆಮೇಲೊಂದು ಬಾರಿಸಿ ಯಾರಾದರೂ ಒಳಗೆ ಎಳೆದುಕೊಂಡು ಬಂದು ಟವೆಲ್ಲಿನಿಂದ ಮೈ ಒರೆಸಿ ಬೆಚ್ಚಗೆ ಕಂಬಳಿ ಹೊದಿಸಿ ಮಲಗಿಸಿದರೂ ನನಗೆ ಹೊರಗಿನ ಮಳೆಯದ್ದೇ ಧ್ಯಾನ. ಮನೆಯ ಹಿರಿಯರಾಗಲೇ ನನ್ನ ಮಳೆಯ ಹುಚ್ಚಿಗೆ “ಇವನಿಗೆ ಬೆಳಗ್ಗೆ ಜ್ವರ ಬಂದರೆ? ನೆಗಡಿಯಾದರೆ? ಮನೆಯ ಡಾಕ್ಟರ್ ಪರಮೇಶ್ವರಪ್ಪನವರ ಬಳಿಗೆ ಕರೆದುಕೊಂಡು ಹೋಗುವ! ಎಂಬ ಕಾಳಜಿಯ ಮಾತುಕತೆಯಲ್ಲಿ ಮುಳುಗಿರುತ್ತಿದ್ದರು. ಅವರ ಚಿಂತೆ ಅವರಿಗೆ, ನನಗೆ ಮಣ್ಣಲ್ಲಿ ಸಮಾಧಿಯಾಗಿದ್ದ ಬೀಜಗಳು ಮಳೆಯಲ್ಲಿ ನೆನೆದು ಬೆಳಗ್ಗೆ ಮೊಳಕೆಯೊಡೆಯುವ ಬೆರಗ ನೋಡುವ ತವಕ.
ಬೆಳಗ್ಗೆ ಎದ್ದವನೇ ಮನೆಯ ಸುತ್ತ ಮುತ್ತ ಇದ್ದ ಮರಗಿಡಗಳಿಂದ ಬಿದ್ದ ಒಣ ಬೀಜಗಳ ವೀಕ್ಷಣೆಯ ಕೆಲಸ. ಆ ಬೀಜಗಳ ತೆಳು ಸಿಪ್ಪೆಯೆಲ್ಲಾ ನೆನೆದು, ಬಿರಿದು ಅದರೊಳಗಿಂದ ಎರಡು ಹರಿಶಿಣ ಹಸಿರು ಮಿಶ್ರಿತ ಎಲೆಗಳೂ ಕೆಳಗೊಂದು ಬಿಳೀ ಬೇರೂ ಇಳೆಬಿದ್ದು ನೆಲದೊಳಗೆ ಇಳಿಯುವ ತಯಾರಿ ಮಾಡುತ್ತಿರುವುದನ್ನೇ ಕೈಗೆತ್ತಿಕೊಂಡು ತಿರುಗಿಸಿ ತಿರುಗಿಸಿ ನೋಡುತ್ತಾ ನನ್ನನ್ನೆ ಮರೆತ ನೆನಪುಗಳು. ಆ ಬೀಜವನ್ನ ಮತ್ತೆ ಮತ್ತೆ ನೋಡುವುದು ತಣಿದ ಮೇಲೆ ಅಲ್ಲೇ ನೆನೆದ ನೆಲ ಬಗೆದು ಅದರೊಳಗೆ ಮುಚ್ಚಿ ಮೆದುವಾಗಿ ಮಣ್ಣು ಮುಚ್ಚಿ ಹಿತ್ತಲಿನಲ್ಲಿದ್ದ ಕನಕಾಂಬರ ಗಿಡದ ಬಳಿಗೆ ಓಡುತ್ತಿದ್ದೆ. ಅದರ ಒಣಗಿದ ಬೀಜಗಳು ರಾತ್ರಿಯ ಮಳೆಗೆ ನೆನೆದು ಬೆಳಗಿನ ಮೊದಲ ಕಿರಣಗಳಿಗೆ ಮತ್ತೆ ಒಣಗಲಾಗಿ ಪಟ್ ಪಟ್ ಅಂತಾ ಸಿಡಿದು ಅದರ ಬೀಜಗಳನ್ನೆಲ್ಲ ದೂರ ದೂರ ಹಾರಿ ಹಾರಿ ಬೀಳುತ್ತಿದ್ದ ವಿಚಿತ್ರ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದ್ದೆ. ಈ ಕನಕಾಂಬರ ಗಿಡದ ಸಿಡಿವ ಬೀಜದ ನೆನಪು ನನ್ನನ್ನು ಮತ್ತೆಲ್ಲೋ ಕರೆದೊಯ್ಯುತ್ತಿದೆ.
{ ನಮ್ಮ ಮನೆಗಳಲ್ಲಿ ಆ ದಿನಗಳಲ್ಲೇ ಶೌಚಾಲಯವಿದ್ದರೂ ಸಹ ನಮ್ಮಂತಹ ಮಕ್ಕಳಿಗೆ ಅದರ ಬಳಕೆಯಿಂದ ವಿನಾಯಿತಿ ಇತ್ತು. ಒಮ್ಮೆ ನನಗೆ ಬೆಳಗ್ಗೆ ಬೆಳಗ್ಗೆ ತುಂಬಾ ಅರ್ಜೆಂಟಾಗಿ ಬಿಟ್ಟಿತ್ತು. ಕಣ್ಣು ಸರಿಯಾಗಿ ಬಿಟ್ಟಿರದೇ ಇದ್ದರೂ ನಮ್ಮ ಮನೆಯ ಹಿತ್ತಲಿನಲ್ಲಿದ್ದ ಶೌಚಾಲಯದ ಬಳಿ ಓಡಿದೆ. ಆದರೆ ಒಳಗೆ ಸೇರಿ ಕೆಲಸ ಮುಗಿಸುವ ಪರಿಸ್ಥಿತಿಯಲ್ಲಿರದಿದ್ದರಿಂದ ಹೊರಗೇ ನಿಂತು ಜಲ ಪಿರಂಗಿ ಹಾಯಿಸಿದ್ದೆ. ಇದ್ದಕಿದ್ದಂತೆ ಫಟ್ ಫಟ್ ಫಟ್ ಎಂದು ಸದ್ದು, ಮತ್ತು ಮುಖಕ್ಕೂ ಕೆಲವು ಸಣ್ಣ ಸೂಜಿಯಂತದ್ದರಿಂದ ಹೊಡೆದ ಹಾಗೆ ಹೊಡೆತ ಬಿತ್ತು. ಸರಿಯಾಗಿ ಕಣ್ಣು ಬಿಟ್ಟು ನೋಡಿದರೆ ಆ ಕನಕಾಂಬರ ಗಿಡದ ತುಂಬಾ ತುಂಬಿದ್ದ ಒಣಗಿದ ಬೀಜದ ಗೊಂಚಲುಗಳ ನಡುವೆ ಪೈಪೊಟಿಯಲ್ಲಿ ಸರಣಿ ಪಟಾಕಿ ಹೊಡೆವ ಸಂಭ್ರಮ!.}
ಇಂತೆಲ್ಲಾ ನೆನಪುಗಳ ಮಧ್ಯೆ ಮೈ ಮರೆತವನಿಗೆ, “ಎಲ್ಲಿದ್ದೀಯೋ ಬಾಬು? ಬರ್ತೀಯೇನೋ ಗುಡ್ಡದ ಕಡೆ ಹೋಗುತ್ತಿದ್ದೀನಿ” ಎಂದು ಕೂಗು ಹಾಕುತ್ತಿದ್ದ ಸೋದರ ಮಾವನ ಮಾತು ಕೇಳಿದ್ದೇ ಚಿಗರೆಯಂತೆ ನೆಗೆದು ಅವರೂಡಿದ್ದ ಎತ್ತಿನ ಗಾಡಿಯೇರಿರುತ್ತಿದ್ದೆ. ಅದರಲ್ಲಿ ಎಲ್ಲ ಆ ದಿನದ ಸಂಭ್ರಮಕ್ಕೆ ಸಿಧ್ದ ಮಾಡಿಕೊಂಡು ಕುಳಿತ ಅಕ್ಕ ಮತ್ತು ಅಜ್ಜಿಯಿರುತ್ತಿದ್ದರು.ಮೂರು ಮೈಲಿ ದೂರವಿದ್ದ ಗುಡ್ಡ ಸೇರಿದ ನಾವು ಅಂದು ರೈತರೆಲ್ಲಾ ಅವರ ಜಮೀನಿನಲ್ಲಿ ಮಾಡುವ ಹೊನ್ನಾರಿನ ಸಂಭ್ರಮದ ಆಚರಣೆಯಲ್ಲಿ ತೊಡಗುತ್ತಿದ್ದೆವು. ಸೋದರ ಮಾವ ಗಾಡಿ ಮರದ ನೆರಳಿಗೆ ನಿಲ್ಲಿಸಿ ಎತ್ತುಗಳನ್ನು ಹೊನ್ನಾರಿನ ಮೊದಲ ಉಳುಮೆಗೆ ಸಿದ್ಧ ಮಾಡುತ್ತಿದ್ದರು. ಮೈತೊಳೆದು ಮಡಿಯುಟ್ಟು ಬಂದಿದ್ದ ಅಕ್ಕ ಹೊನ್ನಾರಿನ ನೇಗಿಲಿಗೆ ಹೂಡಿದ ಎತ್ತುಗಳಿಗೆ ಪೂಜಿಸಿ ಪ್ರಸಾದದ ಬಾಳೆ ಹಣ್ಣು ತಿನ್ನಿಸಿ ನೆಲಕ್ಕೆ ನಮಸ್ಕರಿಸಿ ಬದಿಗೆ ಸರಿಯುತ್ತಿದ್ದರು. “ಹೇಯ್ ಹೇಯ್, ಅಚ್ಚಾ ಅಚ್ಚಾ, ಎಂದು ಮಧ್ಯೆ ಮಧ್ಯೆ ಚ್ಚ್ ಚ್ಚ್ ಚ್ಚ್, ಹಾ ಹಾ ಹಾ, ಎಂದು ಹುರಿದುಂಬಿಸುತ್ತಾ ಸೋದರ ಮಾವ ಇಡೀ ಜಮೀನಿನ ಹೊರ ವಿಸ್ತಾರಕ್ಕೆ ಒಂದು ಸುತ್ತು ಬರುತ್ತಿದ್ದರು.
ಇದೆಲ್ಲಾ ನಡೆಯುವ ಹೊತ್ತಿಗೆ ಅಕ್ಕ ನಮಗೆಲ್ಲಾ ಬಾಳೆಹಣ್ಣಿನ ರಸಾಯನ ಹಂಚಿರುತ್ತಿದ್ದರು. ಅದನ್ನೆಲ್ಲಾ ತಿಂದು ಮುಗಿಸುವುದರೊಳಗೆ ಅದೆಲ್ಲಿರುತ್ತಿದ್ದವೋ ಆ ಕಾಗೆ, ಮೈನಾ, ಬಿಳಿ ಕೊಕ್ಕರೆ, ಎಲ್ಲ ಹಾರಿ ಬಂದು ನಮ್ಮ ಮಾವ ಗೀಚಿದ ನೇಗಿಲ ಸಾಲುಗಳ ಸುತ್ತ ಮುತ್ತ ಮೇಲಕ್ಕೆದ್ದು ಬರುತ್ತಿದ್ದ ಹುಳು ಹುಪ್ಪಡಿಗಳೂ ಎರೆ ಹುಳುಗಳನ್ನೂ ಹಿಡಿದು ಹೊಟ್ಟೆತುಂಬಾ ತಿಂದು ಮುಗಿಸುತ್ತಿದ್ದವು. ಮದ್ಯಾಹ್ನದ ಬಿಸಿಲೇರುವ ಮುನ್ನ ಮಾವ ನೊಗ ಕಳಚಿ ಎತ್ತುಗಳನ್ನು ಮೇಯಲು ಬಿಡುತ್ತಿದ್ದರು.ಅಗ ನನಗೆ ಅಲ್ಲಲ್ಲೇ ಮೊದಲ ಮಳೆಗೆ ತುಂಬಿ ನಿಂತ ಗುಂಡಿಗಳಲ್ಲಿದ್ದ ಕೆಂಪು ಕೆಂಪು ನೀರಿನಲ್ಲಿ ಈಜುವ ಯೋಗ. ನನ್ನ ಹೊಟ್ಟೆ ಕೆಳಗೆ ಬಳಸಿ ಹಿಡಿದು ಮಾವ ಆ ನೀರಿನಲ್ಲಿ ನಾನು ಮುಳುಗದಂತೆ ಹಿಡಿದು ಕಾಲು ಕೈ ಬಡಿದು ಈಜಲು ಹುರಿದುಂಬಿಸುತ್ತಿದ್ದರು.
ನಾನಂತೂ ಮೈ ಹಣ್ಣಾಗುವವರೆಗೂ ಕೈ ಕಾಲು ಬಡಿದು ಸುಸ್ತಾಗುವವವರೆಗೂ ನೀರು ಬಿಟ್ಟು ಈಚೆ ಬರುತ್ತಿರಲಿಲ್ಲ.
ನಂತರ ಮದ್ಯಾಹ್ನ ಮರದ ನೆರಳಲ್ಲಿ ಕುಳಿತು ಅಕ್ಕ ಅಜ್ಜಿ ಮಾವ ಎಲ್ಲರೊಂದಿಗೆ ಊಟ ಮುಗಿಸುತ್ತಿದ್ದೆ. ಬಿಸಿಲಿಗೆ ಬಳಲಿದ ಎತ್ತುಗಳಿಗೂ ನೀರು ತುಂಬಿದ ಹೊಂಡಗಳಲ್ಲಿ ಸ್ನಾನ ಮಾಡಿಸುವ ಮಾವನ ಜೊತೆ ನಾನೂ ಮತ್ತೆ ಸ್ನಾನ ಮುಗಿಸುತ್ತಿದ್ದೆ. ನೀರಿನಲ್ಲಿ ದೇಹ ಪೂರ ಮುಳುಗದಂತೆ ಈಜಿ ಬರುತ್ತಿದ್ದ ಎತ್ತುಗಳ ಬೆನ್ನ ಮೇಲೇರಿ ಮಲಗಿ ಗಟ್ಟಿಯಾಗಿ ತಬ್ಬಿ ಹಿಡಿದು ನಾನೂ ಹಲವು ಬಾರಿ ನೀರಿನಲ್ಲಿ ಉಚಿತ ಎತ್ತಿನ ಬೋಟಿಂಗ್ ಮಜಾ ಅನುಭವಿಸುತ್ತಿದ್ದೆ. ಎಲ್ಲ ಮುಗಿದ ಮೇಲೆ ದಡದಲ್ಲಿ ಕುಳಿತು ನಾನೂ ಮಾವ ಇಬ್ಬರೂ ಕಲ್ಲಿನ ಬಿಲ್ಲೆಗಳ ಹಿಡಿದು ನೀರಿನ ಮೇಲ್ಮೈಗೆ ಬೀಸಿ ಅದೆಷ್ಟು ದೂರ ಹಾರಿ ಹಾರಿ ನೀರ ಮುಟ್ಟಿ ಮುಟ್ಟಿ ಮುಳುಗಿತು ಎಂದು ಪಂದ್ಯ ಕಟ್ಟಿ ಸೋತು ಗೆಲ್ಲುತ್ತಿದ್ದೆವು.
ಎಲ್ಲ ಮುಗಿಸಿ ಸಂಜೆ ಮನೆಗೆ ಮರಳುವ ದಾರಿಯ ಇಕ್ಕೆಲದಲ್ಲಿ ಇದ್ದಕ್ಕಿದ್ದಂತೆ ವಿಚಿತ್ರವೊಂದು ನಡೆದಿರುತ್ತಿತ್ತು. ಬೆಳಗ್ಗೆ ಹೋಗುವಾಗ ಬರೀ ಬಿಸಿಲಿಗೆ ಒಣಗೀ ಒಣಗೀ ಬಟಾ ಬಯಲಿನಂತೆ ಬೋಳು ಬೋಳಾಗಿದ್ದ ದಾರಿ ಇದ್ದಕ್ಕಿದ್ದಂತೆ ಪೂರಾ ಹರಿಶಿನ ಮಿಶ್ರಿತ ಹಸಿರಿನ ಬಣ್ಣ ಬಳಿದುಕೊಂಡಿರುತ್ತಿತ್ತು. ಬರೀ ಧೂಳಿನಿಂದ ಮುಚ್ಚಿ ಮಸುಕಾಗಿದ್ದ ಬಯಲಿನ ಮರಗಳೆಲ್ಲಾ ಯಾರೋ ಬಂದು ಹೊಸದಾಗಿ ಸುಣ್ಣ ಬಣ್ಣ ಬಳಿದಿರುವರೇನೋ ಎಂಬಂತೆ ಸಿಂಗರಿಸಿಕೊಂಡಿರುತ್ತಿದ್ದವು. ಇದ್ದ ಬದ್ದ ಹರಿಶಿಣದ ಎಲೆಗಳನ್ನೆಲ್ಲ ಕಳೆದುಕೊಂಡು ಉದುರಿಸಿ ಬೋಳು ಬೋಳಾಗಿದ್ದ ಮರಗಳಲ್ಲಿ ಅದೆಲ್ಲಿಂದಲೋ ಕೆಂಪು ಮಿಶ್ರಿತ ಎಳೆ ಚಿಗುರಿನ ಹಸಿರಿನ ಎಲೆಗಳು ಈಚೆ ಬರಲು ಹೊಂಚು ಹಾಕುತ್ತಿರುತ್ತಿದ್ದವು.
ಬನಾ ಬನಾ ನೋಡು ಹೀಂಗ ಹ್ಯಾಂಗ ಮದುವಿಮಗನ್ಹಾಂಗ ನಿಂತಾವ ಹರ್ಷಗೊಂಡೂ . ಮೊಳೆಯುವ ದಿನಗಳಲ್ಲೇ ಮೊಳಕೆಯ ಬಗ್ಗೆ ಬೆಳಸಿಕೊಂಡ ಕಾತರ ಚೆನ್ನಾಗಿದೆ.
Thank you ….