
ಡಾ ಎಚ್ ಎಂ ಕುಮಾರಸ್ವಾಮಿ
ಡಾ.ಎಚ್. ಎಂ. ಕುಮಾರಸ್ವಾಮಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನೆಹರು ಮೆಮೊರಿಯಲ್ ಕಾಲೇಜಿನಲ್ಲಿ ಹಿಂದಿ ಭಾಷಾ ಪ್ರಾಧ್ಯಾಪಕರಾಗಿದ್ದರು. ೨೦೧೩ರಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಮೈಸೂರಿನಲ್ಲಿ ವಾಸವಾಗಿದ್ದಾರೆ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಅನುವಾದ ಮಾಡುತ್ತಾರೆ. ಉಭಯ ಭಾಷೆಗಳಲ್ಲಿ ಅನುವಾದದ ಹಾಗೂ ಸ್ವತಂತ್ರ ರಚನೆಯ ೩೦ ಪುಸ್ತಕಗಳು ಪ್ರಕಟಗೊಂಡಿವೆ.
ಉತ್ತರ ಪ್ರದೇಶ ಹಿಂದಿ ಸಂಸ್ಥಾನ್ ನೀಡುವ ’ಸೌಹಾರ್ದ ಸಮ್ಮಾನ್ʼ, ಶ್ರೀನಗರ (ಕಾಶ್ಮೀರ) ದ ಹಿಂದಿ ಕವಯತ್ರಿ ’ರೂಪ್ ಭವಾನಿ ಹಿಂದಿ ಪುರಸ್ಕಾರʼ, ಪ್ರಿಯಾಂಕ್ ಪತ್ರಿಕೆಯ ಅನುವಾದ ನಗದು ಪುರಸ್ಕಾರ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕು ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಹೀಗೆ ಹಲವಾರು ಸನ್ಮಾನ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಈ ಸಂಚಿಕೆಗಾಗಿ ಅಮರೀಕ್ ಸಿಂಗ್‌ದೀಪ್ ಹಾಗೂ ಕಮಲೇಶ ಭಾರತೀಯ ಅವರ ಸಣ್ಣ ಕತೆಗಳನ್ನು ಹಿಂದಿಯಿಂದ ಅನುವಾದಿಸಿದ್ದಾರೆ.
ಅಮರೀಕ್ ಸಿಂಗ್‌ದೀಪ್ ಅವರು ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯವರು. ಹಿಂದಿಯಲ್ಲಿ ಸಣ್ಣಕತೆಗಳು, ಲೇಖನಗಳನ್ನು ಬರೆಯುತ್ತಾರೆ. ಕಹಾಂ ಜಾಯೇಗ ಸಿದ್ಧಾರ್ಥ, ಕಾಲಾ ಹಾಂಡಿ, ಚಾಂದಿನಿ ಹ್ಞೂಂ ಮೇಂ, ಸಿರ್ ಪೊಡ್ತಿ ಚಿಡಿಯಾ, ಆಜಾದಿ ಕ ಫಸಲ್, ಕಾಲಿ ಬಿಲ್ಲಿ ಇವರ ಕೆಲವು ಕಥಾಸಂಕಲನಗಳು. ಕಡೆ ಪಾನಿ ವಾಲಾ ಶಹರ್ ಲೇಖನಗಳ ಸಂಗ್ರಹ. ಇವರು ಅಖಿಲ ಭಾರತೀಯ ಎಲ್ಲಭಾಷೆಗಳ ಕತೆಗಳ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.
ಕಮಲೇಶ್ ಭಾರತೀಯ ಪಂಜಾಬಿನ ಹೋಶಿಯಾರ್‌ಪುರದವರು. ಹಿಂದಿಯ ಪ್ರಸಿದ್ಧ ಸಣ್ಣಕತೆಗಾರರು. ಮಹಕ್ ಸೆ ಊಪರ್, ಮಸ್ತ್ ರಾಮ್ ಜಿಂದಾಬಾದ್, ಮಾಂ ಔರ್ ಮಿಟ್ಟಿ, ಇತ್ನಿ ಸಿ ಬಾತ್, ಯಹ್ ಆಮ್ ರಸ್ತಾ ನಹಿ ಹೈ ಮೊದಲಾದ ಕಥಾಸಂಕಲಗಳನ್ನು ಪ್ರಕಟಿಸಿದ್ದಾರೆ. ಹರಿಯಾಣ ಸಾಹಿತ್ಯ ಅಕಾಡಮಿಯ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಸುಸಂಸ್ಕೃತ ಅರಣ್ಯ ರಾಜ್ಯ
ಆ ದೇಶ ಒಮ್ಮೆ ಭಯಾನಕ ಕಾಡಿನ ರಾಜ್ಯವಾಗಿ ಪರಿವರ್ತನೆಗೊಂಡಿತು. ಅದರಲ್ಲಿನ ಮುಂದವರೆದ ಜಾತಿಗಳೆಲ್ಲವೂ ಸಿಂಹಗಳಾಗಿ ಪರಿವರ್ತನೆಗೊಂಡವು. ಜಿಂಕೆ, ಕುರಿ, ಮೊಲ, ಇಲಿ ಮುಂತಾದವು ಹಿಂದುಳಿದ ಜಾತಿಯ ಜೀವಿಗಳಾದವು.
ಸಿಂಹಗಳು ತಮ್ಮ ಹಿಂಗದ ಹಸಿವನ್ನು ತಣಿಸಿಕೊಳ್ಳಲು ಕುರಿ, ಜಿಂಕೆ ಮುಂತಾದ ಹಿಂದುಳಿದ ವರ್ಗದ ಪ್ರಾಣಿಗಳ ಮೇಲೆ ಎರಗಲಾರಂಭಿಸದವು. ಎಲ್ಲಕಡೆ ತ್ರಾಹಿಮಾಮ್… ತ್ರಾಹಿಮಾಮ್… ಹರಡಿತು.
ಆಗ ಹಿಂದುಳಿದ ಪ್ರಾಣಿಗಳು ತಮ್ಮ ನಾಯಕರನ್ನು ಭೇಟಿಮಾಡಿದವು. ತಮಗಾಗುತ್ತಿರುವ ಸಂಕಷ್ಟವನ್ನು ವಿವರಿಸಿ ಏನಾದರೂ ಉಪಾಯ ಹುಡುಕಲು ಅವುಗಳು ವಿನಂತಿಸಿದವು. ಚಿಂತನ-ಮಂಥನ ನಡೆದು ಒಂದು ಪರಿಹಾರವನ್ನು ಕಂಡುಕೊಳ್ಳಲಾಯಿತು.
ಆ ಸೂತ್ರದ ಪ್ರಕಾರ… ಹಿಂದೆ ಇದ್ದಂತೆಯೇ ಸಿಂಹಗಳ ಹಸಿವನ್ನು ನೀಗಿಸಲು ಪ್ರತೀ ಸಾರಿಯೂ ಒಂದೊಂದೇ ಪ್ರಾಣಿಯನ್ನು ಅವುಗಳ ಬಳಿಗೆ ಕಳುಹಿಸಿಕೊಡುವುದು. ಹೀಗೆ ಮಾಡಿದರೆ ಸಿಂಹಗಳು ಯದ್ವಾತದ್ವಾ ನಮ್ಮ ಮೇಲೆ ಆಕ್ರಮಣ ಮಾಡುವುದು ತಪ್ಪುತ್ತದೆ. ತಿನ್ನುವುದಕ್ಕೂ ಒಂದು ಕ್ರಮ ಬರುತ್ತದೆ… ಎಲ್ಲಾ ಪ್ರಾಣಿಗಳು ಸರ್ವಸಮ್ಮತಿಯಿಂದ ಒಪ್ಪಿದವು.

ನಂತರ ಆ ಕಾಡಿನ ರಾಜ್ಯದಲ್ಲಿ ಅರಾಜಕತೆ ಕಡಿಮೆ ಆಗಿ ಶಾಂತಿ ನೆಲೆಸಿತು. ಯಾವುದೇ ಆಕ್ರಮಣ, ದಂಗೆ, ಕೊಲೆ ಇಲ್ಲದಾಯಿತು.
ಒಂದು ದಿನ ಸಿಂಹಗಳು ಹಿಂದುಳಿದ ಜಾತಿಯ ಹೆಣ್ಣು ಜೀವಿಗಳ ಮೇಲೆ ಬಲಾತ್ಕಾರ ಮಾಡಿದರೆ ಮತ್ತೊಂದು ದಿನ ಗಂಡುಜೀವಿಗಳ ಮೇಲೆ ಎರಗಿ ಸಾರ್ವಜನಿಕವಾಗಿ ಹಂಟರ್‌ನಿಂದ ಹೊಡೆಯುವುದು, ಹತ್ಯೆ ಮಾಡುವುದು, ಮನೆಗಳಿಗೆ ಬೆಂಕಿ ಇಡುವುದು ಇತ್ಯಾದಿ ಕ್ರಮಬದ್ಧವಾಗಿ ನಡೆಯತೊಡಗಿತು. ಧ್ವನಿ ಸ್ವಾತಂತ್ರ್ಯಕ್ಕೆ ಬೀಗಬಿದ್ದು ಎಲ್ಲವುಗಳ ಬಾಯಿಗಳೂ ಮುಚ್ಚಿಹೋದವು.
ನಂತರ ಆ ಕಾಡಿನ ಭಯಾನಕ ರಾಜ್ಯದಲ್ಲಿ ಎಲ್ಲವೂ ಶಾಂತಿ ಮತ್ತು ಸುಂಸ್ಕೃತ ರೀತಿಯಲ್ಲಿ ನಡೆಯತೊಡಗಿತು.
* * * *
ಜಾದು
ಗಾಢ ನಿಶಬ್ಧದ ಆ ರಾತ್ರಿಯಲ್ಲಿ ಹತ್ತಿರದ ಪಾಳುಬಿದ್ದ ಫ್ಯಾಕ್ಟರಿಯ ಆವರಣದಿಂದ ಒಬ್ಬಳು ಯುವತಿಯ ಆರ್ತನಾದ, ಚೀರಾಟ ಕೇಳಿಸುತ್ತಿತ್ತು. ಮರುದಿನ ಬೆಳಿಗ್ಗೆ ಎಲ್ಲಾ ಪತ್ರಿಕೆಗಳು ಆ ಚೀರಾಟ, ಆರ್ತನಾದವನ್ನು ಮನೆಮನೆಗೆ ತಲುಪಿಸುತ್ತಿದ್ದವು. ಮಧ್ಯಾನ್ಹದ ಹೊತ್ತಿಗೆ ಪೊಲೀಸು ಠಾಣೆಯಲ್ಲಿ ಆ ಯುವತಿಯ ಮೇಲೆ ಮೀಡಿಯಾದ ಕ್ಯಾಮರಾಗಳು ಮುಗಿಬೀಳುತ್ತಿದ್ದವು.
ಆ ಪ್ರಾಂತದ ಪ್ರಭಾವಿ ಜನನಾಯಕರೊಬ್ಬರ ಸಂಬಂಧಿಕನೊಬ್ಬನ ಹೆಸರು ಪ್ರಸಾರವಾಗುತ್ತಿತ್ತು. ಆ ಯುವತಿ ವಿದೇಶದಿಂದ ಬಂದಿದ್ದಳು. ಆಕೆ ಸಂಜೆಯ ಸಮಯದಲ್ಲಿ ಅಲ್ಲಿನ ರೆಸ್ಟೋರೆಂಟ್ ಒಂದರಲ್ಲಿ ಕಾಫಿಯನ್ನು ಗುಟುಕರಿಸುತ್ತ ಕುಳಿತಿದ್ದಳು. ಅದೇ ಹೊತ್ತಿಗೆ ನಾಯಕರ ಸಂಬಂಧಿ ಅಲ್ಲಿಗೆ ಬಂದ. ಆ ವಿದೇಶಿ ಯುವತಿಯ ಸೌಂದರ್ಯ ಆತನ ಕಣ್ಣಿಗೆ ರಾಚಿತು. ಸರಿ, ಚತುರ ಮಾತುಗಾರನಾಗಿದ್ದ ಆತ ಮಾತಿಗಿಳಿದ. ಮಾತಿನಲ್ಲಿಯೇ ಆಕೆಯನ್ನು ಮರಳುಮಾಡಿ, ನಂಬಿಸಿ ಆಕೆಯೊಂದಿಗೆ ಹೊರಟ. ನಂತರ ತಲುಪಿದ್ದು ಪಾಳುಬಿದ್ದಿದ್ದ ಆ ಫ್ಯಾಕ್ಟರಿಯ ಆವರಣಕ್ಕೆ.
ನಂತರ …ಅಯ್ಯೋ, ದೇಶದ ಗೌರವ ಹಾಳಾಯಿತು. ’ಅತಿಥಿ ದೇವೋಭವ’ದ ಅರ್ಥವೇ ಮಣ್ಣುಪಾಲಾಯಿತು… ಉದ್ಗಾರಗಳು ಹರಿದಾಡಿದವು. ವಿದೇಶಿ ರಾಯಭಾರಿ ಕಚೇರಿಯಲ್ಲಿ ಪ್ರಕರಣ ದಾಖಲಾಯಿತು. ಒತ್ತಡದ ಪರಿಣಾಮವಾಗಿ ಪ್ರಭಾವಿ ನಾಯಕರ ಸಂಬಂಧಿ ಶರಣಾಗಬೇಕಾಯಿತು.

ಆದರೂ ಜನರಿಗೆ ನಂಬಿಕೆ ಬರಲಿಲ್ಲ…. ಇದೆಲ್ಲಾ ಇದ್ದದ್ದೇ. ಕೇಸು ನಡೆಯುತ್ತದೆ. ಇಂತಹ ರಾಜಕುಮಾರರು ತಿರುಗಾಡಿಕೊಂಡೇ ಇರುತ್ತಾರೆ. ಇಂಥವರಿಗೆ ಶಿಕ್ಷೆ ಆದ ಉದಾಹರಣೆ ಎಲ್ಲಾದೂ ಇದೆಯೇ…? ಮುಂದೆ ಇವರೇ ರಾಜಕೀಯ ಪ್ರವೇಶಿಸಿ ಜನನಾಯಕರೂ ಆಗಿಬಿಡುತ್ತಾರೆ.
ಛೀ…ಥೂ…ಎಲ್ಲಾ ಆಯಿತು. ಆ ಯುವತಿಯೂ ಒಂದೆರಡು ಸಾರಿ ನ್ಯಾಯಾಲಯಕ್ಕೆ ಹಾಜರಾದಳು ಕೂಡ. ಆಕೆಯ ವೀಸಾ ಮುಗಿಯುವುದರಲ್ಲಿತ್ತು… ಒಂದು ದಿನ ತನ್ನ ದೇಶಕ್ಕೆ ಹೊರಟುಹೋದಳು.
ಜನನಾಯಕನ ಸಂಬಂಧಿ ಮುಂದೊಂದಿನ ನಿರಪರಾಧಿಯಾಗಿ ಖುಲಾಸೆಗೊಂಡ.
ಇದು ಜಾದು ಅಲ್ಲದೆ ಮತ್ತೇನು? ಮತ್ತೆ ಎಲ್ಲವೂ ಯಥಾ ಪ್ರಕಾರ.
ನಾನೇಕೆ ಅನುವಾದಿಸುತ್ತೇನೆ
ʼಅನುವಾದ’ಎಂಬುದು ಮಾನವನ ಸಹಜ ಪ್ರಕ್ರಿಯೆ. ಹಾಗೇನೆ ಅಂತರಂಗದ ಕ್ರಿಯೆ ಕೂಡ. ಪ್ರಕೃತಿ-ಪರಿಸರದೊಂದಿಗೆ ಬೆಳೆಯುತ್ತ ಮನುಷ್ಯ ಅನುಕರಣೆ-ಅನುವಾದದ ಮೂಲಕವೇ ಇಂದು ನಾಗರೀಕತೆಯ ಈ ಸ್ಥಿತಿಗೆ ತಲುಪಿದ್ದಾನೆ ಎಂದರೆ ಅದು ಸ್ವಾಭಾವಿಕ ಕ್ರಿಯೆಯೇ ಹೌದು.ನಮ್ಮ ಪ್ರಾಚೀನ ಸಾಹಿತ್ಯವೆಲ್ಲವೂ ಅನುವಾದದ ಮೂಲಕವೇ ಇಂದು ನಮಗೆ ದಕ್ಕಿದೆ ಹಾಗೂ ನಾವು ಜಗತ್ತಿನಾದ್ಯಂತ ಸಂವಹಿಸುವುದು ಅನುವಾದದ ಮೂಲಕವೇ.
ನಾನು ಕನ್ನಡ ಮಾತೃಭಾಷಿಕನಾಗಿದ್ದು ಹಿಂದಿಭಾಷೆಯಲ್ಲಿ ಶಿಕ್ಷಣ ಪಡೆದು ವೃತ್ತಿ ಮುಗಿಸಿ ನಿವೃತ್ತನಾಗಿದ್ದೇನೆ. ಹಿಂದಿ ಪ್ರಾಧ್ಯಾಪಕನಾಗಿದ್ದ ಕಾರಣ ಉಭಯ ಭಾಷೆಗಳಲ್ಲಿ ಅನುವಾದ ಕಾರ್ಯಮಾಡುವುದು ನನ್ನ ಆದ್ಯ ಹಾಗೂ ಪ್ರೀತಿಯ ಕರ್ತವ್ಯ ಎಂದು ಭಾವಿಸುತ್ತ ಎರಡೂ ಭಾಷೆಗಳ ಪರಸ್ಪರ ಅನುವಾದ ಕಾರ್ಯದಲ್ಲಿ ತೊಡಗಿಕೊಂಡೆ. ಭಾಷಾ ಅಧ್ಯಾಪಕನಾದ ನನ್ನ ವೃತ್ತಿಗೂ ನ್ಯಾಯಸಲ್ಲುತ್ತದೆ ಎಂದು ಮನಃಪೂರ್ವಕವಾಗಿ ಕಳೆದ ನಲವತ್ತು ವರ್ಷಗಳಿಂದಲೂ ಉಭಯ ಭಾಷೆಗಳಲ್ಲಿ ಅನುವಾದ ಕಾರ್ಯ ನಡೆಸುತ್ತಿದ್ದೇನೆ. ಎರಡೂ ಭಾಷೆಗಳಲ್ಲಿ ವಿವಿಧ ಪ್ರಕಾರದ ಅನುವಾದಗಳು ಹಾಗೂ ಪುಸ್ತಕಗಳು ಪ್ರಕಟವಾಗಿವೆ.






ಅನುವಾದ ಸಂಚಿಕೆ ಅರ್ಥಪೂರ್ಣ ಹಾಗೂ ಚಿಂತನಾರ್ಹವಾಗಿದೆ.ಎಲ್ಲಾ ಲೇಖಕರಿಗೆ ಅಭಿನಂದನೆಗಳು.