ಮೊಟ್ಟ ಮೊದಲ
ಮಾವೋನ ಕೊನೆಯ ನರ್ತಕ
ಜ್ಯೋತಿ ಕಡ್ಲಾಡಿ
ವಸುಧೇಂದ್ರರ ಪುಸ್ತಕಗಳೆಂದರೆ ಹಾಗೆ. “ಹಂಪಿ ಎಕ್ಸಪ್ರೆಸ್” ನಷ್ಟು ವೇಗವಾಗಿ, ಸರಾಗವಾಗಿ ಸಾಫ್ಟ್ ವೇರ್ ಜಗತ್ತಿನ ಹೊರ ಒಳಗನ್ನು ತೋರಿಸಿ ಬಿಡುವಂತೆಯೇ, ನಾನು ಬೆಳೆದು, ಶಾಲಾ ಕಾಲೇಜು ಮುಗಿಸಿ ಉದ್ಯೋಗ ಜೀವನದ ಮೊಟ್ಟ ಮೊದಲ ಮೆಟ್ಟಿಲು ಮುಗಿಸಿದ ನನ್ನ ಬಳ್ಳಾರಿಯ ಬಗ್ಗೆಯೂ ಅಷ್ಟು ಸಲೀಸಾಗಿ, ಮನಸ್ಸಿಗೆ ತಟ್ಟುವಂತೆ ಬರೆದು ಬಿಡುತ್ತಾರೆ. ಹಾಗಾಗಿ ಅವರ ಪುಸ್ತಕಗಳಷ್ಟೇ ಅವರ ಪುಸ್ತಕ ಬಿಡುಗಡೆಯ ಸಮಾರಂಭವೂ ಸಂಭ್ರಮ ಕೊಡುತ್ತದೆ.
“ವರ್ಣಮಯ”ದ ಜತೆಗೆ “ಛಂಧ ಪುಸ್ತಕ” ದವರು ಪ್ರಕಟಿಸಿದ ಜಯಶ್ರೀ ಭಟ್ ಕನ್ನಡಕ್ಕೆ ಅನುವಾದಿಸಿದ “ಮಾವೋನ ಕೊನೆಯ ನರ್ತಕ” (ಲೀ ಕುನ್ ಕ್ಸಿನ್ (Lee Cunxin) ಆತ್ಮಕಥೆ) ಕೂಡ ಬಿಡುಗಡೆಗೊಂಡಾಗ ಅದನ್ನು ಖರೀದಿಸುವುದೋ ಬೇಡವೋ ಎಂಬ ಯೋಚನೆಯಲ್ಲಿದ್ದೆ, ಯಾಕೆಂದರೆ ಪುಸ್ತಕಗಳನ್ನು “ಜೋಷ್” ನಿಂದ ಖರೀದಿಸಿ, ನಂತರ ಸ್ವಲ್ಪ ಓದುತ್ತಿದ್ದಂತೆಯೇ ಬೋರ್ ಆಗಿ ನಿದ್ದೆ ಬಂದರೆ ಹಾಗೇ ಮುಚ್ಚಿಟ್ಟು ಬಿಡುವ ಕೆಟ್ಟ ಚಾಳಿಯ ಗುಂಪಿಗೆ ಸೇರಿದವಳು ನಾನು. ಕಡೆಗೆ “ನೋಡಿಯೇ ಬಿಡೋಣ” ಎಂದು ಖರೀದಿಸಿದ್ದಾಯ್ತು.

ಅಂದು ಭಾನುವಾರವಾದ್ದರಿಂದ ಮಧ್ಯಾಹ್ನ ಪುಸ್ತಕ ಬಿಡುಗಡೆ ಸಮಾರಂಭ ಮುಗಿಸಿ ಬಂದವಳೇ “ವರ್ಣಮಯ” ಓದಿ ಮುಗಿಸಿ ಸಂಜೆಯ ವೇಳೆ ವಸುಧೇಂದ್ರರಿಗೆ ಫೋನಾಯಿಸಿದ್ದೆ. ಮಾತಿನ ಮಧ್ಯೆ ವಸು ಹೇಳಿದರು- “ಮಾವೋ ಭಾಳ ಛಲೋ ಅದೆ ನೋಡು” ಅಂತ. ಮರುದಿನವೇ ’ಯಾವಾಗಲಾದರೂ ಬಿಡುವಿದ್ದಾಗ ಓದಿ ಮುಗಿಸಿದರಾಯ್ತು’ ಅಂತ ಪಕ್ಕಕ್ಕಿರಿಸಿದ ಮಾವೋನನ್ನು ಕೈಗೆತ್ತಿಕೊಂಡಿದ್ದಾಯ್ತು. ಮೊದಲ ಅಧ್ಯಾಯ ಮುಗಿಸಿದ್ದಂತೇ ಏನೋ ಆಪ್ತ ಭಾವನೆ- ನಮ್ಮ ದೇಶದಲ್ಲೇ ನಮ್ಮ ರಾಜ್ಯದಲ್ಲೇ, ಇಲ್ಲೇ ನಮ್ಮ ಹಳ್ಳಿಯಲ್ಲೇ ಯಾರೋ ಆತ್ಮೀಯ ಸ್ನೇಹಿತರು ತಮ್ಮ ಆತ್ಮಕಥೆಯನ್ನು ಇದ್ದುದನ್ನು ಇದ್ದಂತೆಯೇ ಯಾವುದೇ ಉತ್ಪ್ರೇಕ್ಷೆ ಇಲ್ಲದೇ ಹೇಳುತ್ತಿರುವಂತೆ!
ಕ್ಷಾಮ, ಬಡತನದ ಚಿತ್ರಣ ಯಾರಿಗೆ ಇಷ್ಟವಾಗುತ್ತದೆ?- ಅದೂ ’ನಮ್ಮದೇ ಕಷ್ಟ, ರಗಳೆ, ದು:ಖ ಹಾಸಲು ಹೊದೆಯಲು ಇರುವಾಗ?’- ಆದರೆ ಚೀನಾದ ಬಡತನ ನಮ್ಮದೇ ಉತ್ತರ ಕರ್ನಾಟಕದ ಬರಗಾಲ ಪೀಡಿತ ಬಡತನಕ್ಕಿಂತಲೂ ಘೋರ ಎಂದು ಓದುವಾಗ ಅನ್ನಿಸಿಬಿಡುತ್ತದೆ. ಆದರೆ ಆ ಬಡತನಕ್ಕೆ ಒಂದು ಸೌಂದರ್ಯವಿದೆ, ಹೊತ್ತು ಕೂಳಿನ ಸಂಪಾದನೆಯಲ್ಲಿ ಮೂಡುವ ಸಾರ್ಥಕ್ಯಭಾವನೆ ಇದೆ, “30 ಮಿಲಿಯನ್ ಜನರು ಹೊಟ್ಟೆಗಿಲ್ಲದೆ ಸತ್ತರೂ ನಮ್ಮನ್ನೆಲ್ಲ ಬದುಕಿಸಿದ್ದೇ ನಾನು ಜೀವನದುದ್ದಕ್ಕೂ ದ್ವೇಷಿಸಿದ ಈ ಗೆಣಸು” ಎಂದು ಲೀ ಹೇಳುವಾಗ ಅವನ ಧನಾತ್ಮಕ ದೃಷ್ಟಿ ಇಷ್ಟವಾಗುತ್ತದೆ. ಅಂಥ ಕಿತ್ತು ತಿನ್ನುವ ಘೋರಾತಿ ಘೋರ ಬಡತನದಲ್ಲೂ ಏಳು ಜನ ಗಂಡುಮಕ್ಕಳಿಗೂ ಅತೀವ ಸ್ವಾಭಿಮಾನ, ಆತ್ಮಗೌರವ, ಘನತೆ, ನಿಸ್ವಾರ್ಥ ಎಲ್ಲಕ್ಕೂ ಮೀರಿ ಕುಟುಂಬ ಪ್ರೀತಿಯನ್ನು ತಮ್ಮ ನಡತೆಯಲ್ಲಿಯೇ ಮೊಗೆ ಮೊಗೆದು ತುಂಬಿ ಬೆಳೆಸಿದ ಲೀಯ ನಿರಕ್ಷರಕುಕ್ಷಿ ತಂದೆತಾಯಿಯಿಂದ ಕಲಿಯುವುದು ಎಷ್ಟೊಂದಿದೆಯಲ್ಲಾ’ ಎನ್ನುವ ಅಚ್ಚರಿಯಾಗುತ್ತದೆ.
ಇದೆಲ್ಲಾ ಮೊದಲ ಭಾಗವಾದರೆ, ಮಧ್ಯದ ಭಾಗದಲ್ಲಿ ಲೀ ಕುನ್ ಕ್ಸಿನ್ , ಬೀಜಿಂಗ್ ನ ಮ್ಯಾಡಂ ಮಾವೋನವರ dance academy ಸೇರುವುದು, ಬ್ಯಾಲೆ ನೃತ್ಯ ಕಲಿಯುವುದು ಜೊತೆ ಜೊತೆಗೆ ಮಾವೋ ನ ತತ್ವಗಳನ್ನು ನಿಷ್ಠೆಯಿಂದ ದೇವರದ್ದೇ ವಾಕ್ಯ ಎಂಬಂತೆ ಜೀವನದಲ್ಲಿ ಅಳವಡಿಸಿಕೊಳ್ಳುವ ನಿರ್ಧಾರ ತೆಗೆದುಕೊಳ್ಳುವುದು, ಮಾವೋನ ತತ್ವದಂತೆ ತಾನು ಚೀನಾದಲ್ಲಿ ಹುಟ್ಟಿದ್ದೆ ತನ್ನ ಸೌಭಾಗ್ಯ, ಮಾವೋ ನಂತಹ ಪುಣ್ಯಾತ್ಮನಿಂದಲೇ ನಾವೆಲ್ಲ ಈ ಮಟ್ಟದಲ್ಲಿ ಜೀವಿಸುವುದು, ಪಾಶ್ಚಿಮಾತ್ಯ ದೇಶಗಳಲ್ಲಿ ಹುಟ್ಟಿದವರೆಲ್ಲ ಎಂತಾ ನತದೃಷ್ಟರು! ಎಂದೆಲ್ಲಾ ಬಾವಿಯೊಳಗಿನ ಕಪ್ಪೆಯಂತಹ ವಿಚಾರಧಾರೆ ಬೆಳೆಸಿಕೊಳ್ಳುವ ಚಿತ್ರಣವಿದೆ.
ನಂತರದ ಭಾಗದಲ್ಲಿ ಲೀಗೆ ಅಮೇರಿಕಾಕ್ಕೆ ಹಾರುವ ಅವಕಾಶ ಸಿಗುವುದು ಅಲ್ಲಿನ ಕಮೂನಿಷ್ಟ್ ಕಾನೂನು ಪ್ರಕಾರ ಪಾಸ್ ಪೋರ್ಟ್, ವೀಸಾ ಪಡೆದುಕೊಳ್ಳಲು ಪಡುವ ಪಾಡು, ಕಡೆಗೂ ಗೆದ್ದು ಹೊರ ಬಂದು, ಪ್ರಪಂಚವನ್ನು ಆವಾಕ್ಕಾಗಿ ನೋಡಿ- ’ತಾನಿಷ್ಟು ದಿನ ಎಂಥ ಕೂಪದಲ್ಲಿ ಬದುಕಿದ್ದೆ! ಸ್ವಾರ್ಥ ತತ್ವಗಳ ಬಾವಿಯೊಳಗಿನ ಬದುಕಿಗಿಂತ, ಸಾಗರದಂತೆ ವಿಶಾಲ, ತೆರೆದ ಜೀವನ ಎಷ್ಟು ಚಂದ’ ಎಂದು ಅರಿವಾಗುವುದು, ಅವನು ನಂಬಿದ ಕಮ್ಯೂನಿಷ್ಟ್ ತತ್ವಗಳೆಲ್ಲ ನೀರುಗುಳ್ಳೆಯಂತೆ ಒಡೆದು ಹೋಗುವುದು, ಭ್ರಮನಿರಸನಗೊಂಡು ಈಗ ಎಲ್ಲರಂತೆ ಸಾಮಾನ್ಯ, ನೆಮ್ಮದಿಯ ಜೀವನ ಸಾಗಿಸುತ್ತಿರುವುದು. ಅವನು ಸರಳವಾಗಿ ವಿವರಿಸುವ ರೀತಿ ಸಖತ್ ಖುಷಿ ಕೊಡುತ್ತದೆ.
ಮೊದಲ ಭಾಗದಲ್ಲಿ ಚಿತ್ರಿಸಿರುವ ಚೀನಾ ದೇಶದ ಮೂಢನಂಬಿಕೆಗಳು ಎಲ್ಲವೂ ನಮ್ಮ ಭಾರತದ್ದೇನೋ ಎಂಬಂತೆ ಅನ್ನಿಸಿ, ಈ ಕತೆ ಹೊರದೇಶದ್ದು ಎಂದು ಅನ್ನಿಸುವುದೇ ಇಲ್ಲ. ಶ್ರೀಮತಿ ಜಯಶ್ರೀ ಭಟ್ ರವರ ಅನುವಾದ superb!. ಇಂಥ ಛಂದದ ಪುಸ್ತಕ ಹೊರತಂದ ವಸುಗೊಂದು, ಅವರ ಪ್ರಕಾಶನಕ್ಕೊಂದು ಅಭಿನಂದನೆ. ಅನುವಾದ ಓದಿಯಾದ ಮೇಲೆ ಮೂಲ ಇಂಗ್ಲೀಷ್ ಕೃತಿಯನ್ನು ನೆಟ್ ನಿಂದ download ಮಾಡಿ ಓದಲಾರಂಭಿಸಿದ್ದೇನೆ. ಸರಳ ಇಂಗ್ಲೀಷ್ ನಲ್ಲಿದೆ ಅರ್ಧ ಓದಿದ್ದೇನೆ, ಕನ್ನಡದಷ್ಟೇ ಇಷ್ಟವಾಗುತ್ತಿದೆ.







Ondu sundara, aapta baraha Jyothi.
two thumbs up dear Jyo…as usual your lively style. write more.
Venkatraman avara rekha chitra kooda sooper
🙂
malathi S
ಪುಸ್ತಕದ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದ್ದಕ್ಕೆ ಧನ್ಯವಾದಗಳು ಜ್ಯೋತಿ. ನನಗೆ ವೈಯಕ್ತಿಕವಾಗಿ ಈ ಪುಸ್ತಕ ಪ್ರಕಟಿಸಿದ್ದರ ಬಗ್ಗೆ ಬಹಳ ಖುಷಿ ಇದೆ.
Chennada vishleshane Jyothu.Neenu tilisida mele nanu nangu e pustaka odiddu.Jayashriya anuvada nijakku chennagide.Mavona siddantagala bagegina nambikegalu hege kusiyutta hoguttave annuva chitrana chennagi moodi bandide.Pustaka odalu prarepisida ninagu, chendada anuvada madiruva Jayashirgu hagu adannu prakatisida Chenda pustakadavarigu big thanks.
ನಿಮ್ಮ ಬರಹವನ್ನೋದಿದ ಮೇಲೆ ಈ ಪುಸ್ತಕವನ್ನು ಓದಬೇಕೆಂದನಿಸುತ್ತಿದೆ ಜ್ಯೋತಿ.
Dear Jyothi,
Thank you so much for your wonderful summery of the book and liking my translation.
Jayashree