ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮಾರ್ಕ್ವೆಜ಼್ ಸಾವು ನನಗೊಂದು ವೈಯಕ್ತಿಕ ನೋವು’ – ಜಿ ಎನ್ ನಾಗರಾಜ್

ಜಿ ಎನ್ ನಾಗರಾಜ್

ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್-ವಿಶ್ವದ ಅಪ್ರತಿಮ ಕಾದಂಬರಿಕಾರರಲ್ಲೊಬ್ಬ ತಮ್ಮ 87ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ .ಅವರ ಕಾದಂಬರಿಗಳು ಕುವೆಂಪುರವರ ಕಾದಂಬರಿಗಳು , ದೇವನೂರವರ ಕಾದಂಬರಿಗಳಂತೆಯೇ ನನಗೆ ಸಮಾಜವನ್ನು , ನನ್ನನ್ನು ಅರ್ಥ ಮಾಡಿಕೊಳ್ಳಲು ನೀಡಿದ ನೆರವನ್ನು, ಖುಷಿಯನ್ನು ಬಣ್ಣಿಸಲಾಗದು. ತಮ್ಮ ಕಾದಂಬರಿ ” ಹಂಡ್ರಡ್ ಯಿಯರ್ಸ್ ಆಫ್ ಸಾಲಿಟ್ಯೂಡ್ – ನೂರು ವರ್ಷಗಳ ಏಕಾಂತ ” ಕ್ಕೆ ನೋಬೆಲ್ ಪ್ರಶಸ್ತಿ ವಿಜೇತ. ಅವರ ಕಾದಂಬರಿಗಳ ಹೊಸ ರೀತಿಯ ರಚನೆಗ ಮ್ಯಾಜಿಕಲ್ ರಿಯಲಿಸಂ ಎಂದು ಹೆಸರಾಯಿತು.
ಮೂರನೇ ಜಗತ್ತಿನ ದೇಶಗಳ ಸಮಾಜದಲ್ಲಿ ಹಾಸು ಹೊಕ್ಕಾಗಿರುವ ಪುರಾಣಗಳು, ಐತಿಹ್ಯಗಳು, ನಂಬಿಕೆಗಳು, ಗಾಳಿಸುದ್ದಿಗಳು ಅಲ್ಲಿಯ ಜನರ ಸಂಕಟಗಳೊಂದಿಗೆ ಹೆಣೆದುಕೊಂಡು ರೂಪಿಸಿದ ವರ್ಣಮಯ ಬದುಕನ್ನು ಚಿತ್ರಿಸಲು ಅವರು ಕಂಡರಿಸಿದ ಕಥನ ತಂತ್ರವೇ ಈ ಮ್ಯಾಜಿಕಲ್ ರಿಯಲಿಸಂ . ನಮ್ಮ ದೇವನೂರರ ಕುಸುಮಬಾಲೆಯ ಕಥನ ತಂತ್ರಕ್ಕೆ ಇದನ್ನು ಹೋಲಿಸಬಹುದು.. ಅವರ ಅನೇಕ ಕಾದಂಬರಿಗಳು- ಆಟಮ್ನ್ ಆಫ್ ಪೇಟ್ರಿಯಾರ್ಕ್ , ಕ್ರಾನಿಕಲ್ ಆಫ್ ಆಫ್ ಎ ಡೆತ್ ಫೋರ್ ಟೋಲ್ಡ್ , ಲವ್ ಇನ್ ದ ಟೈಮ್ ಆಫ್ ಕಾಲರಾ , ನೋ ಒನ್ ರೈಟ್ಸ್ ಟು ಕರ್ನಲ್ ಮೊದಲಾದವು ಮಾತ್ರವಲ್ಲ ಅವರ ಆತ್ಮ ಕಥೆಯೂ ಕೂಡ ಒಂದು ಕಾದಂಬರಿಯಂತೆಯೇ ಬಹಳ ಆಕರ್ಷಕವಾಗಿ ಓದಿಸಿಕೊಂಡು ಹೋಗುತ್ತವೆ. ವಸಾಹತು ಆಳ್ವಿಕೆಗೆ ತುತ್ತಾದ ಮೂರನೆಯ ಜಗತ್ತಿನ ನಮಗೆ ಅತಿ ಹತ್ತಿರದ ಬದುಕು , ಬವಣೆಗಳ ಚಿತ್ರಣ ಇವರ ಕಾದಂಬರಿ ಕಥೇಗಳಲ್ಲಿ ನಮ್ಮನ್ನು ಸೆಳೆಯುತ್ತದೆ. ಪಶ್ಚಿಮದ ಪ್ರಸಿದ್ಧ ಸಾಹಿತಿಗಳ ಕೃತಿಗಳಿಗಿಂತ ಮೂರನೇ ಜಗತ್ತಿನ ಸಾಹಿತಿಗಳ ಕೃತಿಗಳಿಗೆ ನಾವು ಹೆಚ್ಚು ಮಹತ್ವವನ್ನು ನೀಡಬೆಕಾಗಿದೆ.

ವ್ಯಕ್ತಿ ಮತ್ತು ಸಮಾಜದ ನಡುವಣ ಸಂಬಂಧದ ವಿಶ್ಲೇಷಣೆ , ವ್ಯಕ್ತಿತ್ವದ ಹಾಗೂ ವರ್ತನೆಗಳ ಮೇಲೆ ಸಮಾಜದ ಗಾಢ ಪ್ರಭಾವದ ಬಗ್ಗೆ ಇವರು ವಿವರಿಸಿರುವಂತೆ ಬೇರೇ ಯಾರೂ ವಿಶ್ಲೇಷಿಸಿಲ್ಲವೆನ್ನಬಹುದು . ಒಂದು ಸಮಾಜದಲ್ಲಿ ರೂಢಿಗತ ಪದ್ಧತಿ, ನಂಬಿಕೆಗಳಿಗನುಗುಣವಾಗಿ ಒಬ್ಬ ವ್ಯಕ್ತಿ ತಂದೆ, ತಾಯಿ, ಮಗ , ಅಣ್ಣ,, ತಮ್ಮ ಅಕ್ಕ ತಂಗಿ ಮೊದಲಾದ ಪಾತ್ರಗಳನ್ನು ನಿರ್ವಹಿಸುತ್ತಲೇ ಒಬ್ಬ ವ್ಯಕ್ತಿಯ ಮನಸ್ಸು , ವರ್ತನೆಗಳು ರೂಪುಗೊಳ್ಳುವ ಬಗೆಯನ್ನು ಅವರ ಕಾದಂಬರಿಗಳು ನಮ್ಮ ಅರಿವಿಗೆ ತರುತ್ತವೆ.. ದಕ್ಷಿಣ ಅಮೇರಿಕ ಖಂಡದ ಕೊಲಂಬಿಯಾ ದೇಶದ ಬೊಗೋಟಾ ನಗರದಲ್ಲಿ ಜನಿಸಿದ ಇವರು ತಮ್ಮ ದೇಶದಲ್ಲಿ ಹಾಗೆಯೇ ಲ್ಯಾಟಿನ್ ಅಮೇರಿಕದಲ್ಲಿ ಪ್ರಜಾಪ್ರಭುತ್ವವನ್ನು ಹತ್ತಿಕ್ಕಿ ಸರ್ವಾಧಿಕಾರವನ್ನು ಹೇರಿದ ಪ್ರಕ್ರಿಯೆಯ ಚಿತ್ರಣ, ಜನ ಸಾಮಾನ್ಯರ ಜೀವನದ ಸಂಕಟಗಳು, ಹೋರಾಟಗಳು ಇವರ ಕಾದಂಬರಿಗಳಲ್ಲಿ ಮೂಡಿಬಂದಿದೆ.
ಪತ್ರಿಕಾ ವರದಿಗಾರನಾಗಿ ತಮ್ಮ ಜೀವನವನ್ನು ಆರಂಭಿಸಿದ ಇವರ ಬರಹಗಳು ‘’ ಒಡಲ ನೂಲಿನಿಂದ ನೆಯ್ದ ಜಾಲ ‘ಎಂಬ ಬೇಂದ್ರೆಯವರ ನುಡಿಯನ್ನು ನೆನಪಿಸುತ್ತವೆ . ಇವರ ಕೃತಿಗಳ ಸೆಳೆತಕ್ಕೆ ಒಳಗಾದ ಕ್ಯೂಬಾದ ಕ್ರಾಂತಿಕಾರಿ ಫೀಡೆಲ್ ಕ್ಯಾಸ್ಟ್ರೋ ಮತ್ತು ಇವರ ಮೈತ್ರಿ ಲೋಕ ಪ್ರಸಿದ್ಧವಾಯಿತು .
ಅವರ ಕೆಲವು ಕಾದಂಬರಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಒಂದು ಮಾರ್ಕ್ವೆಜ್ ವಾಚಿಕೆಯನ್ನೂ ಹೊರತಂದಿದೆ.ಪ್ರಸನ್ನ ಅವರ ತದ್ರೂಪಿ ನಾಟಕಕ್ಕೆ ಮೂಲ ಪ್ರೇರಣೆ ನೀಡಿದ ಕಾದಂಬರಿ ಇವರ ಆಟಮ್ನ್ ಆಪ್ ಪೇಟ್ರಿಯಾರ್ಕ್ . ಅವರು ಮರೆವಿನ ಕಾಯಿಲೆಯಿಂದ 2012ರಿಂದಲೆ ಬಳಲುತ್ತಿದ್ದರು. ಅವರ ಸಾವು ನನಗೊಂದು ವೈಯುಕ್ತಿಕ ನೋವು.
 

‍ಲೇಖಕರು G

19 April, 2014

5 Comments

  1. jaykumar

    ಮಾರ್ಕ್ವೆಜ್ ರವರ ಸಾವು ತುಂಬಲಾರದ ದೊಡ್ಡ ನಷ್ಟವೇ ಸರಿ. ಅವರ ಮತ್ತೊಂದು ಪ್ರಸಿದ್ಧ ಕಾದಂಬರಿ ‘ಜನರಲ್ ಇನ್ ಎ ಲೆಬಿರಿಂತ್ ‘ ಐದು ಲ್ಯಾಟಿನ್ ಅಮೇರಿಕಾ ದೇಶಗಳ ವಿಮೋಚನೆಗೆ ನಾಯಕತ್ವ ನೀಡಿದ್ದ್ದ ಕ್ರಾಂತಿಕಾರಿ ಸೈಮನ್ ಬೊಲಿವಾರ್ ನ ಕೊನೆಯ ದಿನಗಳ ಕನವರಿಕೆಗಳನ್ನು ಕುರಿತಾದ್ದು. ನಿಜಕ್ಕೂ ಅದ್ಭುತವಾಗಿದೆ.

  2. nagraj.harapanahalli

    ನಿಜ, ಸರ್…..ನನ್ನೊಂದಿಗೆ ಯಾವಾಗಲೂ ಮಾತನಾಡುವವರನ್ನು ಕಳೆದುಕೊಂಡ ಅನುಭವ ನನಗೆ.

  3. kusuma

    ಅವರ ಬಗ್ಗೆ ಚಿಕ್ಕದಾಗಿ ಚೊಕ್ಕವಾಗಿ ಹೇಳಿದೀರಿ.

  4. parashuram boner

    ನಿಮ್ಮ ನೋವುನೊಂದಿಗೆ ನಾವಿದ್ದೇವೆ.
    ನಾಗರಾಜ್‌ ಸಾರ್‌ ನಿಮ್ಮನ್ನು ಅವಧಿಯಲ್ಲಿ ನೋಡಿ ತುಂಬಾ ಖುಷಿಯಾಯಿತು. ಗೆಬ್ರೀಯಲ್ ಗಾರ್ಸಿಯಾ ಮಾಕ್ವೆಜ್ ನಿಧನದ ಕುರಿತು ನಿಮ್ಮ ಲೇಖನ ಓದಿದೆ ಸಾರ್‌, ಆತನ ಬರಹಕ್ಕೆ ಮರುಳಾಗದವರು ಯಾರು? ಆ ಹೋರಾಟದ ಜಂಜಡದ ಮಧ್ಯೆ ನಿಮ್ಮನು ಕಾಡಿದ ಗೆಬ್ರೀಯಲ್ ಬಗ್ಗೆ ಓದಿ ಮನಸ್ಸಿಗೆ ಖೇದವೆನಿಸಿತು. ಅದನ್ನು ಅವದಿಯಲ್ಲಿ ನಿಮ್ಮ ಬರಹಕ್ಕಾಗಿ ಅಪರೂಪಕ್ಕೆ ಕಾದು ಕುಳಿತ ನನ್ನಂತವರಿಗೆ ಮರಳು ಗಾಡಿನಲ್ಲಿ ನೀರು ಸಿಕ್ಕಂತಾಯಿತು.
    ಧನ್ಯವಾದಗಳು ನಾಗರಾಜ್‌ ಸಾರ್‌.
    -ಪರಶುರಾಮ ಬೋನೇರ

  5. ganagadhar kolgi

    sir, nanu markveznannu svalpa odideeni. nimma bareha mattastu belaku cellide, matte bareetinee

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading