ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಯಿ ಗೌಡರ ’ಬ್ಲಾಸಮ್’ ಎನ್ನುವ ಪುಸ್ತಕದಂಗಡಿಯ ಕಥೆ

ಎ ಆರ್ ಮಣಿಕಾಂತ್

ಹದಿನೈದು ವರ್ಷಗಳ ಹಿಂದೆ, ಮಾಯಿಗೌಡ ಎಂಬ 23 ವರ್ಷದ ಯುವಕನೊಬ್ಬ ಮೈಸೂರಿನಿಂದ ಬೆಂಗಳೂರಿಗೆ ಬಂದ. ಹೊಟ್ಟೆಪಾಡಿಗಾಗಿ, ಫುಟ್‌ಪಾತ್‌ನಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಮಾರಾಟಕ್ಕೆ ನಿಂತ. ಇವತ್ತು ಏನಾಗಿದೆಯೆಂದರೆ, ಅದೇ ಹುಡುಗ, ಬ್ಲಾಸಮ್ ಬುಕ್‌ಹೌಸ್ ಎಂಬ ಪುಸ್ತಕದಂಗಡಿಯ ಮಾಲೀಕನಾಗಿದ್ದಾನೆ. 15 ಮಂದಿಗೆ ಕೆಲಸ ಕೊಟ್ಟಿದ್ದಾನೆ. ಮುಂದಿನ ಸಾಲನ್ನು ಉಸಿರು ಬಿಗಿ ಹಿಡಿದುಕೊಂಡು ಓದಿ: ಮಾಯಿಗೌಡರ ಪುಸ್ತಕದ ಅಂಗಡಿಯಲ್ಲಿ ಈಗ 3 ಲಕ್ಷ ಪುಸ್ತಕಗಳಿವೆ! ಇದರಲ್ಲಿ ಶೇ. 95ರಷ್ಟು ಪಾಲು ಇಂಗ್ಲಿಷ್ ಪುಸ್ತಕಗಳದ್ದು! ಅಮೆರಿಕ, ಇಂಗ್ಲೆಂಡ್, ರಷ್ಯಾ ಸೇರಿದಂತೆ ವಿದೇಶದ ಪ್ರಮುಖ ಪ್ರಕಾಶಕರು, ವಿಮಾನ ಹಾಗೂ ಹಡಗುಗಳ ಮೂಲಕ ತಮ್ಮ ಪುಸ್ತಕಗಳನ್ನು ಮಾಯಿಗೌಡರ ಪುಸ್ತಕದ ಅಂಗಡಿಗೆ ಕಳಿಸುತ್ತಾರೆ, ನಿಮ್ಮ ಮಳಿಗೆಯಲ್ಲಿ, ನಮ್ಮ ಪುಸ್ತಕಗಳಿಗೂ ಜಾಗ ಕಲ್ಪಿಸಿ ಸ್ವಾಮೀ ಎಂಬ ಮನವಿಯೊಂದಿಗೆ!!

ಸ್ವಾರಸ್ಯ ಕೇಳಿ: ಕೇವಲ 38ನೇ ವಯಸ್ಸಿಗೇ ಯಶಸ್ವಿ ಉದ್ಯಮಿ ಅನ್ನಿಸಿಕೊಂಡಿರುವ ಮಾಯಿಗೌಡರ ಕುಟುಂಬದಲ್ಲಿ ಯಾರಿಗೂ ಪುಸ್ತಕ ಮಾರಾಟದ ಅನುಭವವಿಲ್ಲ. ಈತನ ಕುಟುಂಬದಲ್ಲಿ ಯಾರೊಬ್ಬರೂ ಲೇಖಕರಿಲ್ಲ. ಲಕ್ಷಗಟ್ಟಲೆ ಪುಸ್ತಕಗಳನ್ನು ಖರೀದಿಸಲು ಹಣ ಬೇಕಲ್ಲ; ಆ ಹಣ ಈತನಿಗೆ ಲಾಟರಿಯ ಮೂಲಕ ಬರಲಿಲ್ಲ. ಬಿಜಿನೆಸ್‌ನ ನೆಪ ಹೇಳಿ ಈತ ಬ್ಯಾಂಕ್ ಸಾಲ ಪಡೆಯಲಿಲ್ಲ. ಪಿತ್ರಾರ್ಜಿತ ಆಸ್ತಿಯನ್ನೂ ಮಾರಲಿಲ್ಲ. ಉಚಿತ ಕೊಡುಗೆಯ ರೂಪದಲ್ಲೂ ಈತನಿಗೆ ಪುಸ್ತಕಗಳು ದೊರೆಯಲಿಲ್ಲ. ಒಂದರ ಪಕ್ಕ ಒಂದು ಇಟ್ಟಿಗೆ ಜೋಡಿಸುತ್ತಲೇ ಒಂದು ಮನೆ ಕಟ್ಟುವ ಹಾಗೆ, ಒಂದೊಂದೇ ಹೂವನ್ನು ಪೋಣಿಸುತ್ತಾ ಹೂ ಮಾಲೆ ತಯಾರಿಸುವ ಹಾಗೆ- ತನ್ನ ಅಲ್ಪ ಸಂಪಾದನೆಯಲ್ಲಿ ಪೈಸೆಗೆ ಪೈಸೆ ಕೂಡಿಸುತ್ತಾ ಸಂಗ್ರಹಿಸಿದ ಹಣದಿಂದಲೇ ಮಾಯಿಗೌಡನೆಂಬ ಹಳ್ಳಿಹೈದ, ಪುಸ್ತಕಗಳ ಮಹಲು ಕಟ್ಟಿಕೊಂಡ!
ಇದಿಷ್ಟೂ ವಿವರಣೆ ಓದಿದವರಿಗೆ ಖಂಡಿತ ಆಶ್ಚರ್ಯವಾಗುತ್ತದೆ. ಇದೆಲ್ಲಾ ನಿಜವಾ? ಹೆಚ್ಚಿನ ಬಂಡವಾಳ ಹಾಗೂ ಗಾಡ್‌ಫಾದರ್‌ಗಳ ಬೆಂಬಲ ಇಲ್ಲದಿದ್ದರೂ ಹಳ್ಳಿಹೈದನೊಬ್ಬ ಪುಸ್ತಕಗಳನ್ನು ಮಾರಿಕೊಂಡೇ ಲಕ್ಷಾಧಿಪತಿಯಾಗಲು ಸಾಧ್ಯವಾ ಎಂಬ ಅನುಮಾನ ಕಾಡುತ್ತದೆ. ಮಾಯಿಗೌಡರ ಹಿನ್ನೆಲೆ ಮತ್ತು ಅವರ ಯಶಸ್ಸಿನ ಹಿಂದಿರುವ ಸೀಕ್ರೆಟ್ ತಿಳಿಯುವ ಆಸೆಯಾಗುತ್ತದೆ. ಅದಕ್ಕೆಲ್ಲ ಉತ್ತರವೆಂಬಂತೆ, ತಮ್ಮ ಯಶೋಗಾಥೆಯ ವಿವರವನ್ನು ಮಾಯಿಗೌಡರೇ ಹೇಳಿಕೊಂಡಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ದಾಖಲಿಸುವುದಾದರೆ
-‘ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ರಂಗಸಮುದ್ರ ನನ್ನ ಹುಟ್ಟೂರು. ಅಪ್ಪನಿಗೆ ಪಿತ್ರಾರ್ಜಿತವಾಗಿ ಬಂದ ಅರ್ಧ ಎಕರೆ ಭೂಮಿಯಿತ್ತು. ನಮ್ಮ ಬದುಕಿಗೆ ಅದೇ ಆಧಾರ. ಜಾನುವಾರುಗಳಿಗೆ ಆಹಾರವಾಗಿ ಬಳಕೆಯಾಗುವ ಹುಲ್ಲನ್ನು ಗಾಡಿಯಲ್ಲಿ ತುಂಬಿಕೊಂಡು ಹೋಗಿ ಮೈಸೂರಿನಲ್ಲಿ ಮಾರಾಟ ಮಾಡುವುದು ಅಪ್ಪನ ಟೈಂಪಾಸ್ ವೃತ್ತಿಯಾಗಿತ್ತು. ಎಸ್ಸೆಸ್ಸೆಲ್ಸಿಯ ನಂತರ ನಾನು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾಕ್ಕೆ ಸೇರಿಕೊಂಡೆ. ಏಳನೇ ರ್ಯಾಂಕ್‌ನೊಂದಿಗೆ ಡಿಪ್ಲೊಮಾ ಮುಗಿಯಿತು. ಡಿಪ್ಲೊಮಾದಲ್ಲಿ ರ್ಯಾಂಕ್ ಬಂದಿರುವುದರಿಂದ ಬಿ.ಇ.ಗೆ ಸರ್ಕಾರಿ ಸೀಟು ಖಂಡಿತ ಸಿಗುತ್ತದೆ ಎಂಬ ಗ್ಯಾರಂಟಿಯಿತ್ತು. ಅರ್ಜಿ ಹಾಕಿದರೆ, ಯುವಿಸಿಇ ಕಾಲೇಜಿನಲ್ಲಿ ಸೀಟ್ ಸಿಕ್ಕಿತು. ಬೆಂಗಳೂರಲ್ಲಿ ಉಳಿಯಲು ಜಾಗ ಬೇಕಲ್ಲವೆ?
ಆಗ ನೆನಪಾದವನೇ ನಮ್ಮೂರಿನ ಗೆಳೆಯ. ಆತ, ಪೀಣ್ಯಾದ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಪುಟ್ಟ ಲಗೇಜಿನೊಂದಿಗೆ ಅವನ ರೂಂಗೆ ಬಂದೇಬಿಟ್ಟೆ. ಮೂರು ತಿಂಗಳು ಕಳೆಯುವಷ್ಟರಲ್ಲಿ, ಗೆಳೆಯನಿಗೆ ಹೊರೆಯಾಗುತ್ತಿದ್ದೇನೆಂಬ ಭಾವ ಕಾಡತೊಡಗಿತು. ಖರ್ಚುಗಳನ್ನು ನಿಭಾಯಿಸುವುದು ಕಷ್ಟ ಅನ್ನಿಸತೊಡಗಿತು. ಏಕೆಂದರೆ, ಬೇಸಾಯವನ್ನೇ ನಂಬಿಕೊಂಡು ಬದುಕಿದ್ದ ತಂದೆಯವರಿಂದ ಹಣದ ನಿರೀಕ್ಷೆ ಮಾಡುವಂತಿರಲಿಲ್ಲ. ನನ್ನ ಸಂದಿಗ್ದವನ್ನು ಗೆಳೆಯನಲ್ಲಿ ಹೇಳಿಕೊಂಡೆ. ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ಸೇರಿಕೊಂಡರೆ ಖರ್ಚು ನಿಭಾಯಿಸಬಹುದು ಎಂದು ಆತ ಸಲಹೆ ಮಾಡಿದ. ಆತನೇ, ಫ್ಯಾಕ್ಟರಿಯೊಂದರಲ್ಲಿ ಸೂಪರ್‌ವೈಸರ್ ಕೆಲಸವನ್ನೂ ಕೊಡಿಸಿದ. ಆದರೆ, ಫಲಿತಾಂಶ ನಮ್ಮ ಎಣಿಕೆಯಂತೆ ಆಗಲಿಲ್ಲ. ರಾತ್ರಿಯಿಡೀ ಕೆಲಸ ಮಾಡಿರುತ್ತಿದ್ದರಿಂದ ತುಂಬಾ ಸುಸ್ತಾಗುತ್ತಿತ್ತು. ಪಾಠ ಕೇಳಲು ಆಸಕ್ತಿ ಇರುತ್ತಿರಲಿಲ್ಲ. ಎಷ್ಟೋ ಬಾರಿ ತರಗತಿಯಲ್ಲೇ ನಿದ್ರೆ ಮಾಡಿ ಬಿಡುತ್ತಿದ್ದೆ. ಹಾಗೂ ಹೀಗೂ ಒಂದು ವರ್ಷ ಕಳೆಯಿತು. ಡಿಪ್ಲೊಮಾದಲ್ಲಿ ರ್ಯಾಂಕ್ ಬಂದಿದ್ದವನು, ಬಿ.ಇ. ಮೊದಲ ವರ್ಷದಲ್ಲಿ ಜಸ್ಟ್ ಪಾಸ್ ಆಗಿದ್ದೆ. ಈ ಕಡೆಯಲ್ಲಿ, ನನಗೆ ಆಶ್ರಯ ನೀಡಿದ್ದ ಗೆಳೆಯನಿಗೂ ಖರ್ಚು ನಿಭಾಯಿಸಲು ಕಷ್ಟವಾಗುತ್ತಿತ್ತು. ಆತ, ಈ ಬೆಂಗಳೂರಿನ ಸಹವಾಸವೇ ಬೇಡ. ಊರಿಗೆ ಹೋಗಿ ಬಿಡೋಣ ಎಂದ. ನಂತರದ ಕೆಲವೇ ದಿನಗಳಲ್ಲಿ ರೂಂ ಖಾಲಿ ಮಾಡಿ ಊರಿಗೆ ಹೋಗಿಬಿಟ್ಟ.
ಗೆಳೆಯ ರೂಂ ಖಾಲಿ ಮಾಡಿದ್ದರಿಂದ ಉಳಿಯಲು ಜಾಗವೇ ಇರಲಿಲ್ಲ. ಮುಂದೇನು ಎಂದುಕೊಂಡಾಗ ಕಾಣಿಸಿದ್ದೇ ಮೆಜೆಸ್ಟಿಕ್‌ನಲ್ಲಿದ್ದ ಆದಿಚುಂಚನಗಿರಿ ವಿದ್ಯಾರ್ಥಿ ನಿಲಯ. ತಕ್ಷಣವೇ ಅಲ್ಲಿಗೆ ಸ್ಥಳಾಂತರಗೊಂಡೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿಕೊಂಡು ಓದುವುದು ಕಷ್ಟ ಅನಿಸಿದ್ದರಿಂದ ಕೆಲಸಕ್ಕೆ ಗುಡ್ ಬೈ ಹೇಳಿದೆ. ದಿನದ ಖರ್ಚಿಗೆ ಹಣ ಹೊಂದಿಸುವುದು ಹೇಗೆ ಎಂಬ ಚಿಂತೆ ಆ ಕ್ಷಣದಿಂದಲೇ ಜೊತೆಯಾಯಿತು. ಕಾಸಿಲ್ಲದ ಕಾರಣಕ್ಕೆ ವಿದ್ಯಾಭ್ಯಾಸವೂ ನಿಂತುಹೋಯಿತು. ಒಂದು ಸಂಜೆ, ಮುಂದೇನು ಮಾಡಲಿ ಎಂದು ಯೋಚಿಸುತ್ತಾ ಬರುತ್ತಿದ್ದಾಗಲೇ ಮೆಜೆಸ್ಟಿಕ್ ಬಳಿ ಐದಾರು ಹುಡುಗರು ಫುಟ್‌ಪಾತ್‌ನಲ್ಲಿ ಇಂಗ್ಲಿಷಿನ ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ಮಾರುತ್ತಿದ್ದುದು ಕಾಣಿಸಿತು. ಅವತ್ತು ಯಾಕೆ ಹಾಗೆ ಮಾಡಿದೆನೋ ಗೊತ್ತಿಲ್ಲ. ತಕ್ಷಣ ಹೋಗಿ ಆ ಹುಡುಗರ ಪರಿಚಯ ಮಾಡಿಕೊಂಡೆ. ಪುಸ್ತಕಗಳನ್ನು ನೀಟಾಗಿ ಜೋಡಿಸಿಕೊಟ್ಟೆ. ಮರುದಿನದಿಂದ ದಿನವೂ ಆ ಹುಡುಗರ ಬಳಿ ಹೋಗುವುದು ನನ್ನ ದಿನಚರಿಯಾಯಿತು.
ಕೆಲವೇ ದಿನಗಳಲ್ಲಿ ಆ ಹುಡುಗರು ಪರಮಾಪ್ತರಾದರು. ಪುಸ್ತಕ ಮಾರಾಟದ ‘ಗುಟ್ಟು’ ಹೇಳಿಕೊಟ್ಟರು. ಅವರಿಗೆ ನನ್ನ ಪರಿಸ್ಥಿತಿ ವಿವರಿಸಿದೆ. ಬೇರೊಂದು ಏರಿಯಾದಲ್ಲಿ ನಾನೂ ಇದೇ ವ್ಯಾಪಾರ ನಡೆಸ್ತೇನೆ. ದಯವಿಟ್ಟು ಸಹಾಯ ಮಾಡಿ ಎಂದು ವಿನಂತಿಸಿದೆ. ನನ್ನಲ್ಲಿ ಇದ್ದಷ್ಟು ಹಣ ನೀಡಿ, ಅವರಿಂದ 20 ಪುಸ್ತಕ ಪಡೆದು ನೇರವಾಗಿ ಬಂದದ್ದು ಮೇಯೋಹಾಲ್ ಎದುರಿನ ಫುಟ್‌ಪಾತ್‌ಗೆ. ಚಿಕ್ಕಂದಿನಿಂದಲೂ ನನಗೆ ಓದುವ ಹವ್ಯಾಸವಿತ್ತು. ಹಾಗಾಗಿ, ಎಂಥ ಪುಸ್ತಕಗಳು ಮಾರಾಟ ಆಗುತ್ತವೆ ಎಂದು ಊಹಿಸಬಲ್ಲವನಾಗಿದ್ದೆ. ತಂದಿದ್ದ ಪುಸ್ತಕಗಳು ಮೂರೇ ದಿನದಲ್ಲಿ ಖರ್ಚಾಗಿ ಹೋದವು. ತಕ್ಷಣವೇ ಮೆಜೆಸ್ಟಿಕ್‌ಗೆ ಹೋದೆ. ಅಲ್ಲಿದ್ದ ಗೆಳೆಯರಿಗೆ ಹಣ ಪಾವತಿಸಿ, ಅವರಿಂದ ಮತ್ತಷ್ಟು ಪುಸ್ತಕಗಳನ್ನು ಖರೀದಿಸಿದೆ. ಮೂರು ತಿಂಗಳು ಕಳೆಯುವುದರೊಳಗೆ ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ಮಾರುತ್ತಲೇ ಬದುಕಬಹುದು ಎಂಬ ಗುಟ್ಟು ಅರ್ಥವಾಗಿ ಹೋಗಿತ್ತು. ಮೂರೇ ತಿಂಗಳಲ್ಲಿ ನೂರಾರು ಗ್ರಾಹಕರು ಒಲಿದಿದ್ದರು. ಕೆಲವರು, ತಮಗೆ ಬೇಕಿರುವ ಪುಸ್ತಕಗಳ ಲಿಸ್ಟ್ ಕೊಟ್ಟಿದ್ದರು.
ಅದೊಂದು ಸಂಜೆ, ವ್ಯಾಪಾರ ಮುಗಿಸಿಕೊಂಡು ಹಾಸ್ಟೆಲ್‌ಗೆ ಹಿಂತಿರುಗುವಾಗ, ಆಕಸ್ಮಿಕವಾಗಿ ಬ್ರಿಗೇಡ್ ರಸ್ತೆಯ ಕಡೆ ನೋಡಿದೆ. ಬೆರಗಾಯಿತು. ಏಕೆಂದರೆ, ಆ ರಸ್ತೆಯಲ್ಲಿ ವಿದೇಶಿಗರು ಹೆಚ್ಚಾಗಿ ಕಾಣಿಸುತ್ತಿದ್ದರು. ನನ್ನ ಇಂಗ್ಲಿಷ್ ಪುಸ್ತಕಗಳಿಗೆ ಇವರೇ ಹೆಚ್ಚಿನ ಗಿರಾಕಿಗಳು. ಅವರು ಓಡಾಡುವ ಜಾಗದಲ್ಲೇ ವ್ಯಾಪಾರ ಶುರುವಿಟ್ಟರೆ ಹೆಚ್ಚಿನ ಯಶಸ್ಸು ಕಾಣಬಹುದು ಅನ್ನಿಸಿತು. ಮರುದಿನವೇ ನನ್ನಲ್ಲಿದ್ದ ಸೆಕೆಂಡ್ ಹ್ಯಾಂಡ್ ಪುಸ್ತಕಗಳೊಂದಿಗೆ ಎಂ.ಜಿ. ರಸ್ತೆಯ ಫುಟ್‌ಪಾತ್‌ಗೆ ಬಂದು ಬಿಟ್ಟೆ. ಆ ಕ್ಷಣದಿಂದಲೇ ನನ್ನ ವ್ಯಾಪಾರ ದುಪ್ಪಟ್ಟಾಯಿತು. ನಿರೀಕ್ಷೆಗಿಂತ ಹೆಚ್ಚಿನ ಲಾಭ ಬಂತು. ಆ ದಿನಗಳಲ್ಲಿ ಕಷ್ಟಗಳು ಇರಲಿಲ್ಲವೆಂದಲ್ಲ: ಅವು ಮಳೆಯ ರೂಪದಲ್ಲಿ ಬರುತ್ತಿದ್ದವು! ಮಳೆ ಬಂದರೆ, ಪುಸ್ತಕಗಳನ್ನು ಸಂರಕ್ಷಿಸುವುದೇ ಕಷ್ಟವಾಗುತ್ತಿತ್ತು. ಫುಟ್‌ಪಾತ್‌ನ ಅಂಗಡಿ ಅಂದ ಮೇಲೆ ಮಳೆಯಿಂದ ಪಾರಾಗಲು ಸ್ಥಳವೆಲ್ಲಿ? ಅಂಥ ಸಂದರ್ಭಗಳಲ್ಲಿ ಎಂ.ಜಿ. ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಹಾಗೂ ರೇಮಂಡ್ಸ್ ಶೋರೂಂನ ಸಿಬ್ಬಂದಿ ಕರುಣೆ ತೋರಿಸುತ್ತಿದರು. ತಮ್ಮ ಕಚೇರಿಗಳ ಜಾಗದಲ್ಲಿ ಪುಸ್ತಕಗಳನ್ನು ಇಡಲು ಅವಕಾಶ ಒದಗಿಸುತ್ತಿದ್ದರು. ಮಳೆ ಬಂದಾಗಲೆಲ್ಲ ನನ್ನ ವ್ಯಾಪಾರ ನಿಂತು ಹೋಗುತ್ತಿತ್ತು.
ಪುಸ್ತಕ ವ್ಯಾಪಾರದಿಂದ ಒಂದಿಷ್ಟು ಹಣ ಬಂತಲ್ಲ; ಆಗಲೇ ಮತ್ತೆ ಬಿ.ಇ. ಓದಬೇಕೆಂಬ ಆಸೆಯಾಯಿತು. ಮತ್ತೆ ಮೊದಲ ವರ್ಷಕ್ಕೆ ಸೇರಿಕೊಂಡೆ. ಪುಸ್ತಕಗಳ ವ್ಯಾಪಾರ ನಡೆಸಲು ಜೊತೆಗೊಬ್ಬರು ಬೇಕು ಅನ್ನಿಸಿತು. ಆಗಲೇ, ದ್ವಿತೀಯ ಪಿಯುಸಿ ಮುಗಿಸಿ ಊರಲ್ಲಿದ್ದ ಮತ್ತೊಬ್ಬ ಗೆಳೆಯ ನೆನಪಾದ. ಅವನನ್ನು ಕರೆಸಿಕೊಂಡು, ಬಿ.ಕಾಂ.ಗೆ ಸೇರಿಸಿದೆ. ನಂತರ ಇಬ್ಬರೂ ಕೆಲಸ ಹಂಚಿಕೊಂಡೆವು. ಆನಂತರದಲ್ಲಿ ಫುಟ್‌ಪಾತ್‌ನಲ್ಲಿ ಪುಸ್ತಕ ಮಾರುತ್ತಲೇ ಕಾಲೇಜಿನ ಪುಸ್ತಕಗಳನ್ನೂ ಓದಿಕೊಂಡೆ. ಈ ಸಂದರ್ಭದಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕಗಳು ಎಲ್ಲೆಲ್ಲಿ ಸಿಗುತ್ತವೆ ಎಂದು ಅವರಿವರನ್ನು ಕೇಳಿ ತಿಳಿದು ಪುಸ್ತಕಗಳನ್ನು ತಂದಾಯ್ತು. ಪುಸ್ತಕಗಳ ಸಂಖ್ಯೆ ಹೆಚ್ಚಿದಾಗ, ಎಂ.ಜಿ. ರಸ್ತೆಯ ಹಿಂದೆ ಇರುವ ಚರ್ಚ್ ಸ್ಟ್ರೀಟ್‌ನಲ್ಲಿ 200 ಅಡಿ ವಿಸ್ತೀರ್ಣದ ರೂಂ ಒಂದನ್ನು ಬಾಡಿಗೆಗೆ ಪಡೆದು ಹೆಚ್ಚಾದ ಪುಸ್ತಕಗಳನ್ನು ಅಲ್ಲಿ ಇಡತೊಡಗಿದೆವು. ಈ ಮಧ್ಯೆ ಫುಟ್‌ಪಾತ್‌ಗೆ ಬರುತ್ತಿದ್ದ ಗ್ರಾಹಕರು ಮತ್ತಷ್ಟು ಪುಸ್ತಕಗಳು ಬೇಕು ಎಂದಾಗ, ತಕ್ಷಣವೇ ರೂಂಗೆ ಓಡಿ ಬಂದು, ಅವರು ಕೇಳಿದ ಪುಸ್ತಕಗಳನ್ನೂ ಪೂರೈಸುತ್ತಿದ್ದುದೂ ಉಂಟು.

ಹೀಗಿರುವಾಗಲೇ, ನನ್ನ ಗೆಳೆಯನ ಬಿ.ಕಾಂ. ಹಾಗೂ ನನ್ನ ಬಿ.ಇ. ಮುಗಿಯಿತು. ಡಿಸ್ಟಿಂಕ್ಷನ್ ಬಂದಿದ್ದ ಕಾರಣದಿಂದ ಜನರಲ್ ಎಲೆಕ್ಟ್ರಿಕಲ್ ಕಂಪನಿಯಲ್ಲಿ ಎಂಜಿನಿಯರ್ ಕೆಲಸವೂ ಸಿಕ್ಕಿತು. ಅದುವರೆಗೂ ನನ್ನ ವಿದ್ಯಾಭ್ಯಾಸದ ಬಗ್ಗೆ ಹೆತ್ತವರು ಒಂದು ಮಾತೂ ಕೇಳಿರಲಿಲ್ಲ. ನಾನೂ ಹೇಳಿರಲಿಲ್ಲ. ಎಂಜಿನಿಯರ್ ಕೆಲಸ ಸಿಕ್ಕಿತೆಂದು ತಿಳಿದಾಗ ಅವರಿಗೆ ಬಹಳ ಸಂತೋಷವಾಯಿತು. ನಾನು ಆ ಕೆಲಸಕ್ಕೆ ಹೋಗಿದ್ದು ಹದಿನೈದೇ ದಿನ. ಯಾಕೋ ಆ ಕೆಲಸ ಹಿಡಿಸಲಿಲ್ಲ. ಮತ್ತೊಬ್ಬರ ಕೈ ಕೆಳಗೆ ದುಡಿವ ಬದಲು ನಾನೇ ಬಾಸ್ ಆಗಿರುವ ಪುಸ್ತಕ ಮಾರಾಟವನ್ನೇ ಮುಂದುವರಿಸಿಕೊಂಡು ಹೋದರೆ ಹೇಗೆ ಅನ್ನಿಸಿತು. ನಾಲ್ಕು ದಿನ ಯೋಚಿಸಿ ಕಡೆಗೊಮ್ಮೆ ನೌಕರಿಗೆ ರಾಜೀನಾಮೆ ಕೊಟ್ಟೆ. ನಂತರ ಊರಿಗೆ ಹೋಗಿ-‘ಎಂಜಿನಿಯರ್ ಕೆಲಸ ಬಿಟ್ಟು ಪುಸ್ತಕ ಮಾರಿಕೊಂಡು ಬದುಕೋಣ ಅಂತಿದ್ದೀನಿ’ ಅಂದೆ. ಈ ಮಾತು ಕೇಳಿ ಹೆತ್ತವರು ಗಾಬರಿಯಾದರು. ನನ್ನ ಮಾತನ್ನು ತೀವ್ರವಾಗಿ ವಿರೋಧಿಸಿದರು. ಬಿ.ಇ. ಓದಿ, ಬುಕ್ ಮಾರಿಕೊಂಡು ಬದುಕ್ತೀಯಾ? ಛೆ, ಛೆ… ಅಂದರು. ವಾದಕ್ಕೆ ನಿಂತು ಪ್ರಯೋಜನವಿಲ್ಲ ಅನ್ನಿಸಿತು. ವಾಪಸ್ ಬೆಂಗಳೂರಿಗೆ ಬಂದೆ. ಹಿಂದಿನಂತೆಯೇ ಪುಸ್ತಕಗಳ ಮಾರಾಟದಲ್ಲಿ ತೊಡಗಿಕೊಂಡೆ.
ಹೀಗೇ ನಾಲ್ಕಾರು ತಿಂಗಳು ಕಳೆದವು. ಅದೊಂದು ದಿನ, ನನ್ನೊಂದಿಗೇ ಬಿ.ಇ. ಮುಗಿಸಿ ಸರ್ಕಾರಿ ನೌಕರಿಯಲ್ಲಿದ್ದ ನಮ್ಮೂರಿನ ಗೆಳೆಯರು ಆಕಸ್ಮಿಕವಾಗಿ ಎಂ.ಜಿ. ರಸ್ತೆಗೆ ಬಂದರು. ಫುಟ್‌ಪಾತ್‌ನಲ್ಲಿ ಪುಸ್ತಕ ಮಾರುತ್ತಿದ್ದ ನನ್ನನ್ನು ಕಂಡು ಗಾಬರಿ ಬಿದ್ದರು. ‘ಇದೇನೋ ಈ ಕೆಲ್ಸ ಮಾಡ್ತಿದೀಯಾ?’ ಅಂದರು. ಆ ವೇಳೆಗೆ, ಪುಸ್ತಕ ಮಾರುತ್ತಲೇ ಬದುಕುವುದೆಂದು ನಾನು ನಿರ್ಧರಿಸಿ ಆಗಿತ್ತು. ಹಾಗಾಗಿ ಯಾರ ಮಾತಿಗೂ ತಲೆಕೆಡಿಸಿಕೊಳ್ಳದೇ ಮತ್ತಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡತೊಡಗಿದೆ.ಇಸವಿ 2000ದ ವೇಳೆಗೆ ನನ್ನ ಸಂಗ್ರಹದ ಪುಸ್ತಕಗಳ ಸಂಖ್ಯೆ ಲಕ್ಷದ ಹತ್ತಿರ ಬಂತು. ಗ್ರಾಹಕರೂ ಹೆಚ್ಚಿದ್ದರು. ನನ್ನೊಂದಿಗೆ ವ್ಯಾಪಾರದಲ್ಲಿ ಜೊತೆಗಿದ್ದ ಗೆಳೆಯ, ತನ್ನದೇ ಒಂದು ಬುಕ್‌ಶಾಪ್ ಆರಂಭಿಸಿದ. ಆನಂತರದಲ್ಲಿ ಎಂ.ಜಿ. ರಸ್ತೆಯ ಹಿಂಭಾಗದಲ್ಲಿರುವ ಚರ್ಚ್ ಸ್ಟ್ರೀಟ್‌ನ ಮೂರಂತಸ್ತಿನ ಮಳಿಗೆಯನ್ನು ಬಾಡಿಗೆಗೆ ಪಡೆದು ಅಲ್ಲಿ ಬ್ಲಾಸಮ್ ಬುಕ್ ಹೌಸ್ ಹೆಸರಿನ ಮಳಿಗೆ ಆರಂಭಿಸಿದೆ.
ಹಳ್ಳಿಯಿಂದ ಬಂದ ಕಾರಣದಿಂದ, ಆರಂಭದಲ್ಲಿ ಕನ್ನಡ ಬಿಟ್ಟರೆ ಬೇರೊಂದು ಭಾಷೆ ಗೊತ್ತಿರಲಿಲ್ಲ. ಆದರೆ, ನಂತರದ ದಿನಗಳಲ್ಲಿ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಭಾಷೆ ಕಲಿತೆ. ವ್ಯಾಪಾರ ಜೋರಾದ ನಂತರ 15 ಮಂದಿಗೆ ಕೆಲಸ ಕೊಟ್ಟೆ. ಬೆಂಗಳೂರಿನಲ್ಲಿ ಸ್ವಂತ ಮನೆ ಕಟ್ಟಿಸಿಕೊಂಡೆ. ಈಗ, ಹೆತ್ತವರು ನನ್ನೊಂದಿಗೇ ಇದ್ದಾರೆ. ಹೆಂಡತಿ ಮಕ್ಕಳೊಂದಿಗೆ ನಾನೂ ಹ್ಯಾಪಿಯಾಗಿದ್ದೇನೆ. ಒಂದು ಕಾಲದಲ್ಲಿ ಪುಸ್ತಕಗಳನ್ನು ಖರೀದಿಸಲೆಂದೇ ಮುಂಬಯಿ, ಚೆನ್ನೈ, ದೆಹಲಿಗೆ ಹೋಗಿ ಬಂದದ್ದೂ ಉಂಟು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ದೇಶ-ವಿದೇಶಗಳ ಪುಸ್ತಕಗಳು ನೇರವಾಗಿ ನಮ್ಮ ಅಂಗಡಿಗೆ ಬರುತ್ತಿವೆ. ಗಿರೀಶ್ ಕಾರ್ನಾಡ್, ಪುನೀತ್ ರಾಜ್‌ಕುಮಾರ್, ಹಿರಿಯ ಪತ್ರಕರ್ತ ರಾಮಚಂದ್ರ ಗುಹಾ, ಬಾಲಿವುಡ್ ನಟರಾದ ಮನೋಜ್ ಬಾಜಪೇಯಿ, ಶೇಖರ್ ಕಪೂರ್ ಮುಂತಾದವರು ನಮ್ಮ ಅಂಗಡಿಯ ಖಾಯಂ ಗ್ರಾಹಕರಾಗಿದ್ದಾರೆ. ಇಂಥದೊಂದು ‘ಸ್ಟೇಜ್‌’ ತಲುಪಿಕೊಂಡಿರುವುದಕ್ಕೆ ನನಗೆ ಹೆಮ್ಮೆಯಿದೆ. ಪ್ರಚಂಡ ಆತ್ಮವಿಶ್ವಾಸ ಮತ್ತು ಪರಿಶ್ರಮದ ದುಡಿಮೆಯೇ ನನ್ನ ಯಶಸ್ಸಿಗೆ ಕಾರಣ ಎಂದು ವಿನೀತನಾಗಿ ಹೇಳಬಯಸುತ್ತೇನೆ…’ ಎನ್ನುತ್ತಾ ಗೌಡರು ತಮ್ಮ ಯಶೋಗಾಥೆಗೆ ಫುಲ್ ಸ್ಟಾಪ್ ಹಾಕುತ್ತಾರೆ.
ಇದಿಷ್ಟನ್ನೂ ಓದಿದವರಿಗೆ, ಬ್ಲಾಸಮ್ ಬುಕ್ ಹೌಸ್‌ನ ವಿಶೇಷವೇನು ಎಂಬ ಕುತೂಹಲ ಇದ್ದೇ ಇರುತ್ತದೆ. ಅದಕ್ಕೆ ಹೀಗೆ ಉತ್ತರಿಸಬಹುದು: ಮೂರು ಅಂತಸ್ತಿನ ಈ ಪುಸ್ತಕ ಮಳಿಗೆಯಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕಗಳ ರಾಶಿಯೇ ಇದೆ. ಒಂದೇ ಮಾತಲ್ಲಿ ಹೇಳುವುದಾದರೆ, ಬ್ಲಾಸಮ್ ಮಳಿಗೆಯಲ್ಲಿ ಕಾಣಿಸುವುದು- ಪುಸ್ತಕಗಳ ಸಮುದ್ರ! ಫಿಕ್ಷನ್, ಫ್ಯಾಂಟಸಿ, ಸೈನ್ಸ್, ಕ್ರೈಮ್, ಥ್ರಿಲ್ಲರ್, ಕ್ಲಾಸಿಕ್ಸ್, ಕಾಮಿಕ್ಸ್… ಹೀಗೆ ಎಲ್ಲ ವಯೋವಾನದವರಿಗೂ ಇಷ್ಟವಾಗುವಂಥ ಪುಸ್ತಕಗಳನ್ನು ಪ್ರತ್ಯೇಕ ಶೆಲ್ಫ್‌ಗಳಲ್ಲಿ ಕ್ರಮಬದ್ಧವಾಗಿ ಜೋಡಿಸಲಾಗಿದೆ. 150 ವರ್ಷಗಳ ಹಿಂದೆ ಪ್ರಕಟವಾಗಿರುವ ಪುಸ್ತಕಗಳೂ ಈ ಅಂಗಡಿಯಲ್ಲಿವೆ. ವಿಶೇಷವೆಂದರೆ, ಓದಿ ಮುಗಿಸಿದ ನಂತರ, ಆ ಪುಸ್ತಕವನ್ನು ಬ್ಲಾಸಮ್ ಬುಕ್‌ಹೌಸ್‌ಗೇ ಮಾರಬಹುದು!
ಮತ್ತೊಂದು ವಿಶೇಷ ಕೇಳಿ: 50 ವರ್ಷದ ಹಿಂದೆ ಪ್ರಕಟವಾಗಿರುವ ಯಾವುದೋ ಒಂದು ಇಂಗ್ಲಿಷ್ ಪುಸ್ತಕ ಬೇಕಾಗಿದೆ ಅಂದುಕೊಳ್ಳಿ. ಅದೇ ಪುಸ್ತಕವನ್ನು ಹೊಸದಾಗಿ ಪ್ರಕಟಿಸುವ ಪ್ರಕಾಶನ ಸಂಸ್ಥೆಗಳು ಆ ಪುಸ್ತಕಕ್ಕೆ ಕಡಿಮೆ ಅಂದರೂ 1000 ರೂ. ಬೆಲೆ ಇಡುತ್ತಾರೆ. ಆದರೆ ಬ್ಲಾಸಮ್ ಬುಕ್‌ಹೌಸ್‌ನಲ್ಲಿ, ಉತ್ತಮ ಕ್ವಾಲಿಟಿಯ ಅದೇ ಪುಸ್ತಕ, ಕೇವಲ 200 ರೂ.ಗೆ ಸಿಗುತ್ತದೆ! ಇಂಗ್ಲಿಷ್ ಪುಸ್ತಕಗಳು ಬೇಕು ಅನ್ನುವವರೆಲ್ಲ ಮಾಯಿಗೌಡರ ಅಂಗಡಿಯನ್ನೇ ಏಕೆ ಹುಡುಕಿಕೊಂಡು ಹೋಗುತ್ತಾರೆಂದು ಈಗ ಅರ್ಥವಾಯಿತಲ್ಲವೇ?
ಸ್ವಾರಸ್ಯದ ಸಂಗತಿಯೊಂದಿದೆ ಕೇಳಿ: ಏನೆಂದರೆ, ವಿದೇಶಿಗನೊಬ್ಬ, ಫ್ರಾಂಕ್ ಹರ್ಬರ್ಟ್ ಬರೆದ ‘ಡ್ಯೂನ್‌’ ಎಂಬ ಪುಸ್ತಕವನ್ನು ತನ್ನ ದೇಶದ ವಿಮಾನ ನಿಲ್ದಾಣದಲ್ಲಿ ಕಳೆದುಕೊಂಡ. ನಾಲ್ಕು ವರ್ಷಗಳ ನಂತರ ಆತ ಬೆಂಗಳೂರಿಗೆ ಬಂದ. ಇಲ್ಲಿಂದ ವಾಪಸಾಗುವ ಮೊದಲು ಬ್ಲಾಸಮ್ ಬುಕ್‌ಹೌಸ್‌ಗೆ ಹೋಗಿ ಐದಾರು ಪುಸ್ತಕ ಖರೀದಿಸಿದ. ನಂತರ ಕುತೂಹಲದಿಂದ ಫ್ರಾಂಕ್ ಹರ್ಬರ್ಟ್ ನ ‘ಡ್ಯೂನ್‌’ ಪುಸ್ತಕದ ಬಗ್ಗೆ ವಿಚಾರಿಸಿದ. ಮಾಯಿಗೌಡರು ಕೆಲವೇ ನಿಮಿಷದಲ್ಲಿ ಆ ಪುಸ್ತಕ ತಂದುಕೊಟ್ಟರು. ಪುಸ್ತಕದ ಒಳಪುಟವನ್ನು ತೆರೆದ ಆ ವಿದೇಶಿಗ ‘ಹೋ’ ಎಂದು ಉದ್ಗರಿಸಿದನಂತೆ. ಕಾರಣ, ಆ ಪುಸ್ತಕದೊಳಗೆ ಅವನ ಹೆಸರಿತ್ತು! ನಾಲ್ಕು ವರ್ಷದ ಹಿಂದೆ ಆತ ಕಳೆದುಕೊಂಡ ಪುಸ್ತಕ, ಸೆಕೆಂಡ್ ಹ್ಯಾಂಡ್ ಬುಕ್‌ನ ರೂಪದಲ್ಲಿ ಬ್ಲಾಸಮ್ ಬುಕ್ ಶಾಪ್‌ನ ಅಂಗಳಕ್ಕೆ ಬಂದಿತ್ತು!
ಮಾಯಿಗೌಡರ ಜೋಳಿಗೆಯಲ್ಲಿ ಇಂಥ ಹತ್ತಾರು ಕಲರ್‌ಫುಲ್ ಕತೆಗಳಿವೆ. ಬೆಂಗಳೂರು ಮಹಾನಗರದ ಎಂ.ಜಿ. ರಸ್ತೆಯ ಪರಿಸರದಲ್ಲಿ, ಪುಸ್ತಕೋದ್ಯಮದ ಡಾನ್‌ಗಳು ಅನ್ನಿಸಿಕೊಂಡಿರುವ ಇಂಗ್ಲಿಷಿನ ದೈತ್ಯ ಪ್ರಕಾಶನ ಸಂಸ್ಥೆಗಳ ಮಧ್ಯೆ ಸೆಣೆಸಿ ಮಾಯಿಗೌಡರು ಗೆದ್ದಿದ್ದಾರೆ. ತಮ್ಮ ಮಳಿಗೆಯಲ್ಲಿ ಇಂಗ್ಲಿಷ್ ಪುಸ್ತಕಗಳ ಜೊತೆಗೆ ಕನ್ನಡ ಪುಸ್ತಕಗಳ ಮಾರಾಟಕ್ಕೂ ಅವಕಾಶ ಕಲ್ಪಿಸಿದ್ದಾರೆ.
 

‍ಲೇಖಕರು G

24 March, 2014

7 Comments

  1. ಇಷ್ತಿ

    ಬ್ಲಾಸಮ್ ನ ರೆಗ್ಯುಲರ್ ಗ್ರಾಹಕರಲ್ಲಿ ನಾನೂ ಒಬ್ಬ, ಆದರೆ ಮೂರು ಅಂತಸ್ತು-ಮೂರು ಲಕ್ಷ ಪುಸ್ತಕಗಳ ಹಿಂದೆ ಇರುವ ಈ ರಹಸ್ಯ ನನಗೆ ಗೊತ್ತಿರಲಿಲ್ಲ. ಓದುಗರ ಮುಂದೆ ಈ ವಿಸ್ಮಯವನ್ನು ತೆರೆದಿಟ್ಟ ಲೇಖಕರಿಗೆ ಧನ್ಯವಾದಗಳು. ಈ ಹಿನ್ನೋಟದೊಂದಿಗೆ ಮುಂದಿನ ಬಾರಿ ಬ್ಲಾಸಮ್ ಗೆ ಹೋದಾಗ ಬಹುಷ ಅನುಭವ ಬೇರೆನೇ ಇರಬಹುದು.

  2. Prabhakar Nimbargi

    The efforts of Shri. Mayigoudar have really borne him fruits. It would be better if his address and e-mail id were mentioned along with his success story, especially for the out of Bangalore book-lovers like me who can’t purchase new books. Would any one believe, I got a good copy of Manohar Malgaonkar’s ‘Bend in the Ganges’ only for Rs. 7.00 (seven only) in a second hand book stall!

  3. Gopaal Wajapeyi

    Aataba saadhanege ondu dodda ‘Salaamu’

  4. Pradeep DJ

    Wonderfully narrated, thrilled to read the efforts & success of Shri Mayi Gowda & Blossom Book House.
    Education, Profession are our dreams (need not be same), Sir has clearly shown if you sow right seed and hard work, it reaps results. Passion towards our profession brings success, thrive to learn makes us educated, thanks for the author to cover such useful info.
    Your article made me to plan a visit to this shop in my next visit to Bangalore, (i love reading books, my best friend and hobby is books, so i would get lot of good collection here!!!!!!)
    All the best!

  5. P Mahamud

    Very inspiring story. I used to visit that book shop during my Prajavani days.

  6. Naveen

    Sadhanege Vidyaarhate ye Mukhyavalla annodanna Gowdaru Sabitu maadi torisiddare. Innu Pustaka premi galige hosa lokada parichayavu aytu Ee lekhana dinda…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading