
ಬಿ ಎ ವಿವೇಕ ರೈ
ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ಧ್ವನಿಗಳಿಗೆ ಹೊಸ ಆಯಾಮಗಳನ್ನು ಕೊಟ್ಟ, ಧಾರ್ಮಿಕ ಆವರಣದಿಂದ ಮಹಿಳೆಯರಿಗೆ ಬಿಡುಗಡೆಯ ದಾರಿಯನ್ನು ತೋರಿಸಿದ ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ಅವರ ನಿಧನದ ಸುದ್ದಿ ಕನ್ನಡನಾಡಿಗೆ ದುಃಖದ ಆಘಾತ. ವೈಯಕ್ತಿಕವಾಗಿ ಕಳೆದ ಸುಮಾರು ಮೂವತ್ತೆಂಟು ವರ್ಷಗಳಿಂದ ಪರಿಚಿತರು ಹಾಗೂ ಆತ್ಮೀಯರಾಗಿ ಇದ್ದ ಸಾರಾ ಅವರ ಮನೆಗೆ ಈಗತಾನೇ ಹೋಗಿ ಕೊನೆಯ ಬಾರಿ ಅವರನ್ನು ಅವಲೋಕನ ಮಾಡಿ ಬಂದೆ.
ಸಾರಾ ಅವರ ಹೆಸರನ್ನು ನಾನು ಮೊದಲು ಕೇಳಿದ್ದು ‘ಲಂಕೇಶ್ ಪತ್ರಿಕೆ’ ಯಲ್ಲಿ ಅವರು ಬರೆಯುತ್ತಿದ್ದ ‘ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು’ ಆತ್ಮಕಥನದ ಲೇಖನಗಳಿಂದ. ಅವರನ್ನು ಮೊದಲು ನೋಡಿದ್ದು ಮಾತಾಡಿದ್ದು ೧೯೮೫ ರಲ್ಲಿ ಪುತ್ತೂರಿನಲ್ಲಿ ದಕ ಬಂಡಾಯ ಸಾಹಿತ್ಯ ಸಂಘಟನೆ ಆಯೋಜಿಸಿದ ‘ಜಾನಾಂಗಿಕ ಅಧ್ಯಯನ’ ವಿಚಾರಗೋಷ್ಠಿಯಲ್ಲಿ. ನಾನು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದೆ. ಸಾರಾ ಅವರು ಪ್ರಬಂಧ ಮಂಡಿಸಲು ಎದ್ದುನಿಂತಾಗ ಸಭೆಯಲ್ಲಿ ಇದ್ದ ತರುಣರ ಗುಂಪೊಂದು ಗಲಾಟೆ ಶುರುಮಾಡಿ ಅವರ ಮೈಮೇಲೆ ಹಲ್ಲೆಮಾಡಲು ಕಬ್ಬಿಣದ ಕುರ್ಚಿಗಳನ್ನು ಎಸೆಯಲು ತೊಡಗಿತು.
ಲಂಕೇಶ್ ಪತ್ರಿಕೆಯ ಸಾರಾ ಅವರ ಬರಹಗಳು ತಮ್ಮ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುತ್ತವೆ ಎನ್ನುವ ಬೊಬ್ಬೆ ಹಾಕುತ್ತಿದ್ದರು. ಸಂಘಟಕರು ಸ್ನೇಹಿತರು ಎಲ್ಲರೂ ತಡೆಗೋಡೆಯಂತೆ ನಿಂತು ಸಾರಾ ಅವರನ್ನು ಸಮಾಧಾನಪಡಿಸಿ ಮಂಗಳೂರಿಗೆ ಸುರಕ್ಷಿತವಾಗಿ ಕೊಂಡುಹೋಗುವಂತೆ ಸಹಾಯ ಮಾಡಿದರು. ಗಲಭೆಯ ವಿರೋಧದ ಸಂದರ್ಭದಲ್ಲಿ ಕೂಡಾ ಸಾರಾ ತಮ್ಮ ನಿಲುವನ್ನು ಬಿಟ್ಟುಕೊಡಲಿಲ್ಲ. ನಾನು ಅಧ್ಯಕ್ಷತೆ ವಹಿಸಿ ಅಧ್ಯಕ್ಷ ಭಾಷಣ ಮಾಡದ ದಾಖಲೆಯಾಗಿ ಉಳಿದ ಆ ಕಾರ್ಯಕ್ರಮವು ಸಾರಾ ಬಗೆಗಿನ ನನ್ನ ಅಭಿಮಾನವನ್ನು ಹೆಚ್ಚಿಸಿತು.
ಮುಂದೆ ಸಾರಾ ಅವರ ಕೃತಿಗಳನ್ನು ನಾನು ಓದುತ್ತಾ ಬಂದೆ. ‘ಚಂದ್ರಗಿರಿಯ ತೀರದಲ್ಲಿ’ ನ ನಾದಿರಾ, ‘ಸಹನಾ’ದ ನಸೀಮಾನಿಂದ ತೊಡಗಿ ಮಹಿಳೆಯರ ಕುರಿತ ಧಾರ್ಮಿಕ ಕಲ್ಪನೆಗಳಿಗೆ ಮಾನವೀಯ ಆಯಾಮಗಳನ್ನು ತಮ್ಮ ಕಾದಂಬರಿ ಮತ್ತು ಕಥೆಗಳಲ್ಲಿ ಕೊಡುತ್ತಾ ಬಂದರು. ಅವಕಾಶ ವಂಚಿತರಾದ, ನೋವು ಉಣ್ಣುವ ಎಲ್ಲಾ ಸಮುದಾಯಗಳ ಹೆಣ್ಣು ಮಕ್ಕಳನ್ನು ತೆಕ್ಕೆಯೊಳಗೆ ಸೇರಿಸಿಕೊಂಡು ಅವರನ್ನು ಹೊಸಬೆಳಕಿನೆಡೆಗೆ ಕೊಂಡೊಯ್ಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಧರ್ಮವು ಕೋಮುವಾದವಾಗಿ ಮಹಿಳೆಯರ ಮತ್ತು ಬಡವರ ಶೋಷಣೆಯ ಸಾಧನವಾದಾಗ ಅದನ್ನು ಸದಾ ಪ್ರತಿಭಟಿಸುತ್ತಾ ಬಂದಿದ್ದಾರೆ.

೧೯೮೫ರ ಪುತ್ತೂರಿನ ಘಟನೆಯ ಬಳಿಕ ಸಾರಾ ಅವರನ್ನು ಅನೇಕ ಸಂದರ್ಭಗಳಲ್ಲಿ ಭೇಟಿಯಾಗಿ ಅವರ ಮಾತುಗಳನ್ನು ಕೇಳಿದ, ಅವರ ಸಾಹಿತ್ಯ ಕೃತಿಗಳ ಬಗ್ಗೆ ಚರ್ಚಿಸಿದ ನೆನಪುಗಳು ಸಾಕಷ್ಟು ಇವೆ. ಅವರ ‘ವಜ್ರಗಳು’ ಕಾದಂಬರಿಯನ್ನು ಬಿಡುಗಡೆ ಮಾಡಿ ಮಾತನಾಡುವ ಅವಕಾಶವನ್ನು ಅವರು ನನಗೆ ಕಲ್ಪಿಸಿಕೊಟ್ಟಿದ್ದರು. ನಾನು ಮಂಗಳೂರು ವಿವಿಯ ಕನ್ನಡ ವಿಭಾಗದಲ್ಲಿ ಇದ್ದಾಗ ನಾನು ಕರೆದಾಗಲೆಲ್ಲ ಅವರು ಬಂದು ನಮ್ಮ ಕನ್ನಡ ಎಂಎ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದ್ದಾರೆ. ಸಾರಾ ಅವರು ಕರಾವಳಿ ಲೇಖಕಿ-ವಾಚಕಿಯರ ಸಂಘದ ಅಧ್ಯಕ್ಷರಾಗಿ ಇದ್ದಾಗ ನಾನು ಅತಿಥಿಯಾಗಿ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ.
ಮಂಗಳೂರಿನ ಸಾಹಿತ್ಯಕ, ಸಾಮಾಜಿಕ ಮತ್ತು ಪ್ರಗತಿಪರ ಕಾರ್ಯಕ್ರಮಗಳಲ್ಲಿ ಮತ್ತು ಆಂದೋಲನಗಳಲ್ಲಿ ಪಾಲ್ಗೊಂಡು ಅಂತಹ ಚಟುವಟಿಕೆಗಳಿಗೆ ಶಕ್ತಿಯನ್ನು ತುಂಬುತ್ತಾ ಬಂದಿದ್ದಾರೆ.
ನಾನು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಆಗಿದ್ದಾಗ ೨೦೦೬ ರಲ್ಲಿ ವಿಶ್ವವಿದ್ಯಾಲಯ ಪ್ರದಾನಮಾಡಿದ ‘ನಾಡೋಜ’ ಪದವಿಯನ್ನು ಪ್ರೀತಿಯಿಂದ ಸ್ವೀಕರಿಸಿ, ವಿವಿಯ ಗೌರವವನ್ನು ಹೆಚ್ಚಿಸಿದ್ದಾರೆ. ೨೦೦೭ ರಲ್ಲಿ ನಮ್ಮ ಪ್ರಸಾರಾಂಗದಿಂದ ಪ್ರಕಟಿಸಿದ ಸುವರ್ಣ ಕರ್ನಾಟಕ ಹೊನ್ನಾರು ಮಾಲೆಗೆ ‘ಸಾಹಿತ್ಯ, ಸಂಸ್ಕೃತಿ ಮತ್ತು ಮಹಿಳೆ’ ಎಂಬ ತಮ್ಮ ೪೭ ಲೇಖನಗಳ ಸಂಪುಟವನ್ನು ಹೊರತರಲು ಅವಕಾಶ ಕಲ್ಪಿಸಿದ್ದಾರೆ.
ರಾಜ್ಯದ ಅತ್ಯುನ್ನತ ಪದವಿ, ಪ್ರಶಸ್ತಿಗಳು ದೊರೆತಾಗಲೂ ತುಂಬಾ ವಿನಮ್ರವಾಗಿ ಅವುಗಳನ್ನು ಸ್ವೀಕರಿಸಿ, ತಮ್ಮ ಬರವಣಿಗೆಯನ್ನು ಮುಂದುವರೆಸುತ್ತಾ ಬಂದಿದ್ದಾರೆ.
ಸುಮಾರು ಮೂರು ದಶಕಗಳಿಗೂ ಮಿಕ್ಕಿದ ಅವರ ಸಾಹಚರ್ಯದ ಅವಧಿಯಲ್ಲಿ ಅನೇಕ ಹೊಸತಿಳುವಳಿಕೆಗಳನ್ನು ಅವರು ತಮ್ಮ ಬದುಕು ಬರಹಗಳ ಮೂಲಕ ನನಗೆ ತಂದುಕೊಟ್ಟಿದ್ದಾರೆ. ನಾನು ಕರಾವಳಿಯಲ್ಲಿಯೇ ಹುಟ್ಟಿ ಬೆಳೆದರೂ, ನನ್ನ ಕಣ್ಣಿಗೆ ಕಾಣದ, ಕಿವಿಗೆ ಕೇಳದ, ಗಮನಕ್ಕೆ ಬಾರದ ಸುತ್ತಮುತ್ತಲಿನ ನೂರಾರು ದನಿಗಳನ್ನು ಆಲಿಸುವಂತೆ ಅವರ ಬರಹಗಳು ಮಾಡಿವೆ. ಹೊರಜಗತ್ತನ್ನು ಮತ್ತು ಒಳಮನಸ್ಸುಗಳನ್ನು ನಿರಂತರ ಶೋಧಿಸುವ ಪ್ರವೃತ್ತಿಯನ್ನು ಹೊಂದಿದ್ದ ಸಾರಾ ಅವರು ನಮ್ಮ ಅಕಾಡೆಮಿಕ್ ವಲಯದ ಸಾಹಿತಿಗಳಿಗಿಂತ ಭಿನ್ನವಾಗಿ ಅನನ್ಯವಾಗಿ ನಮ್ಮ ನಡುವೆ ಕಾಣಿಸುತ್ತಾರೆ. ಮುಗ್ಧತೆ, ಮುಕ್ತತೆ, ಧೈರ್ಯ ಮತ್ತು ಕನಸು : ಇವುಗಳ ಜೊತೆಗೆ ಮಾನವೀಯ ಕಾಳಜಿ – ಇದು ಸಾರಾ ಅವರ ಬದುಕು ಮತ್ತು ಸಾಹಿತ್ಯ.
ಸಾರಾ ಅವರ ಜೊತೆಗೆ ನಾನು ವೇದಿಕೆ ಹಂಚಿಕೊಳ್ಳುತ್ತಿದ್ದಾಗ ಅವರು ನನ್ನ ಬಗ್ಗೆ ವಿಶ್ವಾಸ ಮತ್ತು ವಿನೋದದ ಒಂದು ಮಾತನ್ನು ಯಾವಾಗಲೂ ಹೇಳುತ್ತದ್ದರು: ‘ವಿವೇಕ ರೈಯವರು ಇವತ್ತು ತಮ್ಮ ಭಾಷಣದಲ್ಲಿ ನನ್ನ ಬಗ್ಗೆ ಹೇಳುವಾಗ ತಾನು ಅಧ್ಯಕ್ಷ ಭಾಷಣ ಮಾಡಲು ಸಾಧ್ಯ ಆಗದ ಪುತ್ತೂರು ಘಟನೆಯನ್ನು ಖಂಡಿತವಾಗಿ ಉಲ್ಲೇಖಿಸುತ್ತಾರೆ’ ಎಂದು.
ಆ ರೀತಿಯ ಆತ್ಮೀಯ ಮಾತಿನ ಮೂಲಕ ಬಂಧುತ್ವ ಕಟ್ಟಿದ ಸಾರಾ ಅಬೂಬಕ್ಕರ್ ಇನ್ನು ಇರುವುದಿಲ್ಲ ಎನ್ನುವ ನೋವು ಮಾತ್ರ ಸದಾ ಇರುತ್ತದೆ.






0 Comments