ಅನಿತಾ ದೇಸಾಯಿ ಸಂದರ್ಶನ
ಕರೆಯುವ ಕನಸಿನಂತಹ ಗುಣದ ಗದ್ಯ ರಚಿಸುವ ಅನಿತಾ ದೇಸಾಯಿ ಹೊಸ ಕಾದಂಬರಿ Rosarita ಸುತ್ತ ಮಾತುಕತೆ…

ಹೇಮಾ ಖುರ್ಸಾಪೂರ
‘ಕಣಿವೆಯ ತಪ್ಪಲಿನಲ್ಲಿ, ಎದೆಮಟ್ಟ ನಿಂತ ಹೂ ಬಳ್ಳಿಗಳ ನಡುವೆ; ಎಲ್ಲರಿಂದ ಬಲುದೂರ ದೂರ ತಾನಾಗಿ…’ ನಿಂತು ಹೊಂಗನಸಿನ ನಡುವೆ ತೂಗಿದ ದನಿಯಂತೆ ಮೃದು ಮಾತುಗಳನ್ನಾಡುವ 87 ವಯಸ್ಸಿನ ಕಾದಂಬರಿಗಾರ್ತಿ ಅನಿತಾ ದೇಸಾಯಿ ಮೂರು ಬಾರಿ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಗದ್ಯದಲ್ಲಿ ಕಾವ್ಯದ ತಂತ್ರಗಳನ್ನು ಬಳಸುವ, ಕಾದಂಬರಿ ರಚನೆಯಲ್ಲಿ ಸದಾ ಹೊಸತರ ಪ್ರಯೋಗ ಮಾಡುವ ದೇಸಾಯಿ ಕಳೆದ ಒಂದು ದಶಕದಲ್ಲಿ ಒಂದು ಕಾದಂಬರಿ ಬರೆದಿದ್ದಾರೆ! ಹೊಸ ಕಾದಂಬರಿ Rosaritaದ ಕಥಾಹಂದರ ಸೆಟ್ ಆಗಿರುವುದು ಮೆಕ್ಸಿಕೊದಲ್ಲಿ. ನ್ಯೂಯಾರ್ಕಿನಲ್ಲಿ ವಾಸಿಸುತ್ತಿರುವ ದೇಸಾಯಿ ಮೆಕ್ಸಿಕೊಕ್ಕೆ ಅನೇಕ ಬಾರಿ ಭೇಟಿ ನೀಡಿದ್ದಾರೆ.
ಎಲ್ಲ ಕಡೆಯೂ ಅಪರಿಚಿತರಂತೆ ಭಾಸವಾಗುವ ಇವರು ಬೋಧಿಸಲು ಮತ್ತು ಬರವಣಿಗೆಯಲ್ಲಿ ತೊಡಗಿಕೊಳ್ಳುವ ಸಲುವಾಗಿ ಭಾರತವನ್ನು ತೊರೆದಿದ್ದರ ಬಗ್ಗೆ ಮಾತನಾಡಿದ್ದಾರೆ. ಬದುಕು ಮತ್ತು ಸೃಜನಶೀಲತೆಯ ನಡುವಿನ ಹದ ತಿಳಿದಾಗ ಒಳಗೂ ಹೊರಗೂ ಉಂಟಾಗುವ ಅಂತರ್ ಪ್ರವಾಹಗಳನ್ನು ತಣ್ಣಗೆ ದಾಟಿ, ದಡ ಸೇರಿದ ಜೀವವನ್ನು ನೋಡುವಾಗ ಮನದೊಳಗೆ ಮೂಡುವ ಭಾವ Ripeness is all… ಮಾಗುವುದೊಂದೇ…
***
ಅನಿತಾ ದೇಸಾಯಿ ಅವರನ್ನ ಸಂದರ್ಶಿಸುತ್ತೇನೆ ಅಂತ ಗೊತ್ತಾಗಿದ್ದಕ್ಕೋ ಏನೋ ಅವತ್ತು ಗ್ರೇಟರ್ ನ್ಯೂಯಾರ್ಕಿನಲ್ಲಿ ಹಠಾತ್ ಪ್ರವಾಹ. ನಾನು ಪ್ರಯಾಣಿಸುತ್ತಿದ್ದ ರೈಲು ಸ್ಥಗಿತಗೊಂಡಿತು. ನಿಲ್ದಾಣವೊಂದರಲ್ಲಿ ಸಿಲುಕಿಕೊಂಡವಳನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಲು ಬಂದಿದ್ದು 87 ವರ್ಷದ ವೃದ್ಧೆ. ಪುಟ್ಟ ನಿಲುವಿನ, ನೇರ ನೋಟದ ಈ ಮಾಗಿದ ಜೀವವನ್ನು ಮೊದಲ ಸಲ ನೋಡಿದವರಿಗೆಲ್ಲ ವೇದ್ಯವಾಗುತ್ತದೆ – ಇವರಿಗೆ ಮೂರ್ಖರನ್ನು ಸಹಿಸಿಕೊಳ್ಳುವ ಅಪಾರ ತಾಳ್ಮೆಯಿದೆ ಎಂದು! “ಅಮೆರಿಕದಲ್ಲಿನ ಜೀವನವು ನನಗೆ ಯಾವಾಗಲೂ ಬಹಳ ಯಾದೃಚ್ಛಿಕವಾಗಿ ತೋರುತ್ತದೆ. ಕಾದಂಬರಿ ಬರೆಯುವುದನ್ನೇ ವೃತ್ತಿಯಾಗಿ ಮಾಡಿಕೊಳ್ಳಬೇಕು ಎಂದರೆ, ಆರಂಭಿಕ ಹಂತಗಳು ಭಾರೀ ಕೆಟ್ಟದಾಗಿರುತ್ತವೆ,” ಎನ್ನುವ ಕಾದಂಬರಿಗಾರ್ತಿಗೆ ತನ್ನ ಜೀವನದ ಈ ಹಂತದಲ್ಲಿ, ಮ್ಯಾನ್ಹ್ಯಾಟನ್ನ ಉತ್ತರಕ್ಕೆ ಸುಮಾರು 90 ನಿಮಿಷ ಪ್ರಯಾಣಿಸಿದರೆ ಸಿಗುವ ಹಡ್ಸನ್ ಕಣಿವೆಯ ಒಂದು ಸಣ್ಣ ಪಟ್ಟಣದಲ್ಲಿ ವಾಸಿಸುತ್ತಿರುವುದು ಸಂಪೂರ್ಣವಾಗಿ ಅಸಂಬದ್ಧವೆಂದೇ ಅನ್ನಿಸುತ್ತದೆ.
ಇತ್ತೀಚಿಗೆ ಬರೆದ (ಇಲ್ಲಿಯವರೆಗೆ ಬರೆದದ್ದರಲ್ಲೇ ಚಿಕ್ಕದು) ಕಾದಂಬರಿ, Rosarita ತೋರಿಸುತ್ತ – “ನಾನು ಮತ್ತೆ ಕಾದಂಬರಿ ಬರೆದಿದ್ದೇನೆ!” ಎನ್ನುವ ಇವರ ಕಾದಂಬರಿಗಳ ಶಕ್ತಿಯಿರುವುದು, ತಡೆಹಿಡಿಯುವ ಸಾಮರ್ಥ್ಯದಲ್ಲಿ. ಇದು ವಯಸ್ಸಿನೊಂದಿಗೆ ಇನ್ನೂ ಹೆಚ್ಚು ಸ್ಪಷ್ಟವಾಗುತ್ತಿದೆ. ಕಾದಂಬರಿಯಲ್ಲಿರುವುದು; ಅಧ್ಯಯನಕ್ಕೆಂದು ಮೆಕ್ಸಿಕೊಕ್ಕೆ ಪ್ರಯಾಣಿಸುವ ಬೊನಿಟಾ ಎಂಬ ಯುವಭಾರತೀಯ ಮಹಿಳೆಯ ಕತೆ. ಅಲ್ಲಿಗೆ ಹೋದ ಬೊನಿಟಾ ದಶಕಗಳ ಹಿಂದೆ ತನ್ನ (ಈಗ ಇಲ್ಲದ) ಅಮ್ಮನೂ ಮೆಕ್ಸಿಕೊಕ್ಕೆ ಹೋಗಿದ್ದಳು ಎನ್ನುವ ಅಪರಿಚಿತ ಪುರಾವೆಗಳಿಗೆ ಮುಖಾಮುಖಿಯಾಗುತ್ತಾಳೆ. “ಇದು ಬಹುಶಃ ದುಃಖ, ಹಂಬಲ, ಇತರರ ಬಗ್ಗೆ, ವಿಶೇಷವಾಗಿ ಯಾರಿಗೂ ಅವರವರ ಸ್ವಂತ ಕುಟುಂಬಗಳ ಬಗ್ಗೆ ನಿಜವಾಗಿಯೂ ಏನೂ ತಿಳಿದಿಲ್ಲ ಎಂಬ ಅಂಶ. ನಾನು ಇದನ್ನು ಬಹಳ ಭಾವಪೂರ್ಣವಾಗಿ ಕಂಡುಕೊಂಡಿದ್ದೇನೆ; ನಿರೂಪಣೆಯಲ್ಲಿ, ಯಾವುದು ನಿಜ? ದುಃಖಿತ ಮಗಳ ಚಿತ್ರಣವೇನು ಎಂಬುದರ ಬಗ್ಗೆ ನಿಮಗೆ ಖಚಿತವಾಗಿ ಏನೂ ಸಿಗುವುದಿಲ್ಲ. ಕಾದಂಬರಿ ಓದಿದವರಲ್ಲಿ ಬಹುತೇಕರು: ಕೊನೆಯಲ್ಲಿ ಏನಾಗುತ್ತದೆ? ಎಂದು ಕೇಳಿದ್ದಾರೆ. ನನ್ನ ಉತ್ತರ ಇಷ್ಟೇ: ನಾನೇನು ಬಾಲ್ಯದಿಂದ ಪ್ರಾರಂಭವಾಗಿ ವೃದ್ಧಾಪ್ಯ ಮತ್ತು ಮರಣದವರೆಗಿನ ಎಳೆಎಳೆಯಾದ ಚಿತ್ರಣ ಕೊಡುವ ವಿಕ್ಟೋರಿಯನ್ ಕಾದಂಬರಿಯನ್ನು ಬರೆಯುತ್ತಿಲ್ಲ! ಇದು ಕೇವಲ ಒಂದು ಸಣ್ಣ ತುಣುಕು. ಅವರ ಜೀವನದ ಒಂದು ಸಣ್ಣ ಭಾಗ ಎಂದು. ಇದಕ್ಕಿಂತ ಹೆಚ್ಚಿನದನ್ನು ಬಯಸುವ ಓದುಗರಿಗೆ ನಿರಾಶೆಯಾಯ್ತೇನೋ!” ಎನ್ನುತ್ತಾರೆ ನಗುತ್ತ.
ನಾವೀಗ ದೇಸಾಯಿ ಅವರ ಮನೆಯಲ್ಲಿದ್ದೇವೆ. ಶಾಂತವಾದ ಗುಡ್ಡಗಾಡು ಬೀದಿಯಿಂದ ಮುಂದಕ್ಕೆ ಕಣ್ಣು ಹಾಯಿಸಿದರೆ, ನೋಟ, ಸಣ್ಣ ಚರ್ಚಿನ ಪಕ್ಕದಿಂದ ಹಾಯ್ದು ವಿಶಾಲವಾದ, ಕಾಡಿನ ಬೆಟ್ಟದಲ್ಲಿ ನೆಲೆ ನಿಲ್ಲುತ್ತದೆ. ನೈಸರ್ಗಿಕ ಪ್ರಪಂಚವನ್ನು ನಿರ್ಮಿಸುವುದರಲ್ಲಿ ನಿಸ್ಸೀಮರಾಗಿರುವ ಅನಿತಾರ ಬರವಣಿಗೆಯ ಹೆಚ್ಚಿನ ಭಾಗ ಪ್ರಕೃತಿಗೆ ಸಂಬಂಧಿಸಿದೆ. ಅದನ್ನ ಓದುವುದೆಂದರೆ ತಲ್ಲೀನಗೊಳಿಸುವ ಅನುಭವವೊಂದರಲ್ಲಿ ಮುಳುಗೆದ್ದಂತೆ. ಬೂಕರ್ ಪ್ರಶಸ್ತಿಗೆ ಆಯ್ಕೆಯಾದ ಇವರ ಮೂರು ಕಾದಂಬರಿಗಳಲ್ಲಿ ಒಂದಾದ 1980ರ Clear Light of Dayಯಲ್ಲಿ, ಹಳೆಯ ದೆಹಲಿಯನ್ನು ಕೈಹಿಡಿದು ಕರೆದುಕೊಂಡು ಬಂದಿದ್ದಾರೆ. ಓದುವಾಗ ಅಲ್ಲಿ ಸುಳಿದು ಸುತ್ತುವ ಸುಳಿಗಾಳಿ ನಮ್ಮನ್ನ ಸವರಿಯೇ ಹೋಗುವ ಅನುಭವಾಗುತ್ತದೆ. ದೋಷಾರೋಪಗಳ ಕಿರುಚಾಟ ಕೇಳಿಸುತ್ತದೆ. Rosaritaದಲ್ಲೂ ಮೆಕ್ಸಿಕೋ ಥೇಟು ಹೀಗೇ ನಿಖರವಾಗಿ ಜೀವತಳೆಯುತ್ತದೆ. ಧೂಳು ತುಂಬಿದ ಏರುರಸ್ತೆ ಹತ್ತಿದ್ದ ಬಸ್ಸು ನಿಲ್ದಾಣದಲ್ಲಿ, “ಉಸ್ಸಪ್ಪ ಎಂದು ಕುಸಿಯುತ್ತದೆ.” ಕಬ್ಬಾರೆ ಹಕ್ಕಿಯೊಂದು ಹಾರುವಾಗ, “ಅದರ ಕಡ್ಡಿಯಂತಹ ಉದ್ದನೆಯ ಕಾಲುಗಳು ಹಕ್ಕಿಯನ್ನು ಹಿಂಬಾಲಿಸುತ್ತವೆ.” ಬೇಲಿಯಲ್ಲಿ, ಕಾಡು ಕತ್ತೆಗಳು ಒಟ್ಟುಗೂಡುತ್ತವೆ, “ನಿದ್ರೆ ಅಥವಾ ಹತಾಶೆಯಿಂದ ತಲೆ ತಗ್ಗಿಸುತ್ತವೆ.”
ಭಾರತವನ್ನು ನೆನಪಿಸುವ ಮೆಕ್ಸಿಕೋ ಎಂದರೆ ದೇಸಾಯಿಗೆ ಅಪಾರ ಪ್ರೀತಿ; 30 ವರ್ಷಗಳ ಹಿಂದೆ USಗೆ ತೆರಳಿದಾಗ ಬೋಸ್ಟನ್ನಿನ ಚಳಿಗಾಲದಿಂದ ತಪ್ಪಿಸಿಕೊಳ್ಳುವ ಕಾರಣಕ್ಕಾಗಿ ಮೆಕ್ಸಿಕೋಕ್ಕೆ ಪ್ರಯಾಣಿಸಲು ಪ್ರಾರಂಭಿಸಿದ್ದಂತೆ. “ಎಂಐಟಿಯಲ್ಲಿ ಬೋಧಿಸುತ್ತಿದ್ದ ನನಗೆ, ಮೊದಲ ಚಳಿಗಾಲ ಸೈಬೀರಿಯಾವನ್ನು ನೆನಪಿಸುತ್ತಿತ್ತು. ಒಂದೇ ಸಮ ರಾಶಿ ರಾಶಿ ಸುರಿಯುತ್ತಿದ್ದ ಮಂಜಿನಿಂದ ನಿರ್ಮಾಣವಾಗುತ್ತಿದ್ದ ಕೋಟೆಯಿಂದ ತಪ್ಪಿಸಿಕೊಳ್ಳುವುದು ಹೇಗಪ್ಪ ಎಂದು ಹತಾಶಳಾಗಿ ಯೋಚಿಸುತ್ತಿದ್ದೆ. ಓಕ್ಸಾಕಾದಲ್ಲಿ ವಿಮಾನದಿಂದ ಇಳಿದಾಗ ಅಕ್ಷರಶಃ ಕಿರುಚಿಕೊಂಡಿದ್ದೆ. ಅಲ್ಲಿರುವುದೆಲ್ಲವೂ ಭಾರತೀಯವಾಗಿತ್ತು; ಧೂಳು, ವಾಸನೆ, ಬೋಗನ್ ವಿಲ್ಲಾ, ಸಣ್ಣ ಪುಟ್ಟ ಮನೆಗಳು. ಅದು ನನಗೆ ತುಂಬಾ ಪರಿಚಿತ ಪ್ರದೇಶ ಎನ್ನುವಂತೆ ಭಾಸವಾಯಿತು. ಕೌಟುಂಬಿಕ-ಧಾರ್ಮಿಕ ಜೀವನ ಸೇರಿದಂತೆ ಎಲ್ಲದರಲ್ಲೂ ಭಾರತೀಯತೆ ಎದ್ದು ಕಾಣುತ್ತಿತ್ತು. ಮೆಕ್ಸಿಕೋ ನನ್ನನ್ನು ಯಾವಾಗಲೂ ಬರೆಯಲು ಪ್ರೇರೇಪಿಸುವ ದೇಶ.”
ದೇಸಾಯಿ ತಮ್ಮ ಮಕ್ಕಳಿದ್ದಲ್ಲಿಗೆ ಸ್ಥಳಾಂತರಗೊಳ್ಳಬಹುದಿತ್ತು ಅಥವಾ ನಿವೃತ್ತರಾಗಬಹುದಿತು. ಮಗಳು ಕಿರಣ್ ಸೇರಿದಂತೆ ಇಬ್ಬರು ನ್ಯೂಯಾರ್ಕ್ನಲ್ಲಿದ್ದಾರೆ. ಕಿರಣ್ ದೇಸಾಯಿ ಬರೆದ The Inheritance of Loss ಕಾದಂಬರಿಗೆ 2006ರಲ್ಲಿ ಬೂಕರ್ ಪ್ರಶಸ್ತಿ ಸಂದಿದೆ. ಇನ್ನೊಬ್ಬ ಮಗಳು ಫ್ಲೋರಿಡಾದಲ್ಲಿ. ಹಿರಿಯ ಮಗ ಭಾರತದಲ್ಲಿಯೇ ಇದ್ದಾರೆ. 20ನೇ ವಯಸ್ಸಿಗೆ ಮದುವೆಯಾಗಿ, ನಾಲ್ಕು ಮಕ್ಕಳು. 1963ರಲ್ಲಿ ಮೊದಲ ಕಾದಂಬರಿ Cry, The Peacock ತಮ್ಮ 20ರ ಹರೆಯದಲ್ಲಿ ಪ್ರಕಟಿಸಿದರೂ, ಜೀವನದಲ್ಲಿ ತುಲನಾತ್ಮಕವಾಗಿ ಎಷ್ಟು ತಡವಾಗಿ ತನ್ನದೇ ಆದ ಪ್ರಮುಖ ಪ್ರಯಾಣವನ್ನು ಕೈಗೊಂಡರು ಎಂಬುದು ಕುತೂಹಲಕಾರಿ ಹಾಗೂ ಸ್ಫೂರ್ತಿದಾಯಕ ಅಂಶ. ವಿದೇಶದಲ್ಲಿ ಬೋಧಿಸಲು, ಲೇಖಕಿಯಾಗಿ ಬದುಕು ಬದುಕಲು ಭಾರತವನ್ನು ಬಿಟ್ಟಿದ್ದು 40ರ ನಡುವಯಸ್ಸಿನಲ್ಲಿ.
“ಕೇಂಬ್ರಿಡ್ಜ್ನ ಗಿರ್ಟನ್ ಕಾಲೇಜ್ನಿಂದ visiting fellow ಆಹ್ವಾನಕ್ಕೆ ಧನ್ಯವಾದಗಳು. ಅದೊಂದು ರೂಪಾಂತರದ ಗಳಿಗೆ. ಲೈಬ್ರರಿಯಲ್ಲಿ ಕಳೆದ ಜೀವನದಿಂದ ನನಗೆ ಇಂಗ್ಲೆಂಡ್ ಪರಿಚಯವಾಗಿದ್ದರೆ, ಅಮ್ಮನಿಂದ ಯುರೋಪ್ ಪರಿಚಿತವಾಗಿತ್ತು. ಹೊಸದೇನೆಂದರೆ, ಇಂಗ್ಲೆಂಡಿನಲ್ಲಿ ನಾನು ಯಾರ ಹೆಂಡತಿಯೂ, ತಾಯಿಯೂ ಆಗಿರಲಿಲ್ಲ, ಲೇಖಕಿಯಾಗಿದ್ದೆ. ಅದೊಂದು ಅದ್ಭುತ ಅನುಭವ. ಏಕೆಂದರೆ ಭಾರತದಲ್ಲಿ ಇದು ತದ್ವಿರುದ್ಧ. ಇದಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ನನ್ನ ಆಲೋಚನೆ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ತರಬೇತಿ ಪಡೆಯಬೇಕಾಗಿತ್ತು. ನನಗದರ ಅಭ್ಯಾಸವೇ ಇರಲಿಲ್ಲ. ಭಾರತದಲ್ಲಿ ಎಂದಿಗೂ ನನ್ನ ಅಭಿಪ್ರಾಯವನ್ನು ಕೇಳಿರಲಿಲ್ಲ; ನಾನು ಸುಮ್ಮನಿದ್ದು ಇತರರ ಮಾತು ಕೇಳುತ್ತಿದ್ದೆ. ತದನಂತರದಲ್ಲೊಮ್ಮೆ ನಾನು ಭಾರತಕ್ಕೆ ಹಿಂತಿರುಗಿದಾಗ ನನ್ನ ಆಲೋಚನೆಗಳನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದು ನೋಡಿ ಅಲ್ಲಿದ್ದವರೆಲ್ಲ ನನಗೇನಾಯಿತು ಎನ್ನುವಂತೆ ನೋಡಿದ್ದರು. ಇವಳು ಏನು ಯೋಚಿಸುತ್ತಾಳೆಂದು ನಮಗೆ ಏಕೆ ಹೇಳುತ್ತಿದ್ದಾಳೆ?! ಎನ್ನುವ ಆಶ್ಚರ್ಯಸೂಚಕ, ಪ್ರಶ್ನಾರ್ಥಕ ಮುಖಭಾವಗಳನ್ನು ನಾವು ಈಗಲೂ ಎದುರಿಸುತ್ತೇವೆ. ಕಿರಣ್ ಮತ್ತು ನಾನು ಭಾರತಕ್ಕೆ ಹೋದಾಗ ನಮ್ಮ ಆಲೋಚನೆಗಳನ್ನು ಹೆಚ್ಚು ವ್ಯಕ್ತಪಡಿಸದಂತೆ ಬಹಳ ಜಾಗರೂಕರಾಗಿರುತ್ತೇವೆ.”
ಕೋಟ್
ಇಂಗ್ಲೆಂಡಿನಲ್ಲಿ ನಾನು ಯಾರ ಹೆಂಡತಿಯೂ, ತಾಯಿಯೂ ಆಗಿರಲಿಲ್ಲ, ಲೇಖಕಿಯಾಗಿದ್ದೆ. ಅದೊಂದು ಅದ್ಭುತ ಅನುಭವ.

ಅಮ್ಮ ಇಂಗ್ಲೆಂಡಿಗೆ ಹೋಗುತ್ತಿದ್ದಾಗ ಜೊತೆಯಾಗಿದ್ದು, ಹದಿಹರೆಯದ ಕಿರಣ್. ಅಲ್ಲಿನ fellowship ಮುಗಿದಾಗ ದೇಸಾಯಿ; ಹಿರಿಯ ಮಕ್ಕಳಿಬ್ಬರು ಓದುತ್ತಿದ್ದ ಅಮೆರಿಕದತ್ತ ನೋಟ ಹರಿಸಿದರು. ಎಂಐಟಿಯಲ್ಲಿ ಸೃಜನಶೀಲ ಬರವಣಿಗೆಯನ್ನು ಕಲಿಸುವ ಹುದ್ದೆಗೆ ಆಯ್ಕೆಯಾದರು ನಂತರ ಸ್ಮಿತ್ ಮತ್ತು ಮೌಂಟ್ ಹೋಲಿಯೋಕ್ಗೆ ತೆರಳಿದರು. ದೇಸಾಯಿಯವರ ದಿವಂಗತ ಪತಿ, ಕಂಪನಿಯ ನಿರ್ದೇಶಕರಾದ ಅಶ್ವಿನ್ ಎಂದಿಗೂ ಭಾರತದಿಂದ ಆಚೆ ನೆಲೆಸುವ ಯೋಚನೆ ಮಾಡಲಿಲ್ಲ. “ಅವರು ನಾ ಇದ್ದಲ್ಲಿಗೆ ಬರುತ್ತಿದ್ದರು, ನಾನು ಅಲ್ಲಿಗೆ ಹೋಗುತ್ತಿದ್ದೆ.” 20ರಿಂದ 30ನೇ ವಯಸ್ಸಿನ ವರೆಗಿನ ಸಾಂಪ್ರದಾಯಿಕ ಜೀವನದ ನಂತರ ಈ ಇಂಗ್ಲೆಂಡ್ ವರೆಗಿನ ಸಿಮೋಲ್ಲಂಘನ; ಗಂಡನ ದೇಖರೇಕಿಯ ಕೆಲಸವಿಲ್ಲದ್ದು ನಿಮಗೆ ನಿಮ್ಮದೇ ಆದ ಒಂದು ಸ್ಪೇಸ್ ಮತ್ತು ಬರೆವಣಿಗೆಗೆ ಸಮಯ ನೀಡಿತು ಅಲ್ಲವೇ? “ಖಂಡಿತವಾಗಿ ಹೌದು. ಅಶ್ವಿನ್ ಎಂದೂ ಭಾರತ ಬಿಟ್ಟು ಬರುವ ಬಗ್ಗೆ ಉತ್ಸುಕರಾಗಿರಲಿಲ್ಲ. ಅಲ್ಲಿ ತಾವು ಬದುಕುತ್ತಿರುವುದೇ ಅತ್ಯುತ್ಯಮ ಜೀವನ ಎಂದು ಭಾವಿಸಿದ್ದರು. ಇಲ್ಲಿಗೆ ಬಂದು ಅಮೆರಿಕನ್ ಅಥವಾ ಇಂಗ್ಲಿಷರಂತೆ ಜೀವನವನ್ನು ನಡೆಸಲು ಬಯಸಲಿಲ್ಲ.”
ಅಶ್ವಿನ್, ನಿಮ್ಮನ್ನು ಭಾರತದಲ್ಲೇ ಉಳಿಯುವಂತೆ ಮನವೊಲಿಸಲು ಪ್ರಯತ್ನಿಸಿದರು? ದೀರ್ಘ ವಿರಾಮ… “ಹೌದೂಂತ ನಾನಿದನ್ನ ಒಪ್ಪಿಕೊಳ್ಳಲೇಬೇಕು.” ಈ ಪ್ರತ್ಯೇಕತೆಯು ಆ ಕಾಲದಲ್ಲಿ ಅಸಾಂಪ್ರದಾಯಿಕ ಅಂತ ಅನಿಸಿತೇ? “ಹೌದು, ಇದರ ಬಗ್ಗೆ ಮಾತನಾಡಿದ್ದೇನೆ. ಆ ಕಾಲದ ದಾಂಪತ್ಯದಲ್ಲಿ ಇದು ಸಹಜ ದಾರಿ ಅಲ್ಲ. ಈಗ ನೀವು ಪ್ರತ್ಯೇಕ ಜೀವನ, ಪ್ರಯಾಣ, ಭೇಟಿ ಮಾಡಬಹುದು.”
ದೇಸಾಯಿಯವರ ಅಮ್ಮ-ಅಪ್ಪ ಅಸಾಂಪ್ರದಾಯಿಕ ದಂಪತಿ. 1928ರಲ್ಲಿ ಜರ್ಮನಿಯಲ್ಲಿ ಅನಿತಾ ತಂದೆ ಓದುತ್ತಿದ್ದರೆ, ತಾಯಿ ಶಾಲಾ ಶಿಕ್ಷಕಿಯಾಗಿದ್ದರು. ಈ ಜೋಡಿ ಭೇಟಿಯಾಗಿದ್ದು ಕಾಮನ್ ಸ್ನೇಹಿತರ ಮೂಲಕ. ಜರ್ಮನ್ ಶಿಲ್ಪಿಯೊಬ್ಬರು ಒಂದು ದಿನ ಇವರ ತಂದೆಯನ್ನು ಬೀದಿಯಲ್ಲಿ ನಿಲ್ಲಿಸಿ, ಮಾಡೆಲ್ ಆಗ್ತೀರಾ ಎಂದು ಕೇಳಿದ್ದರಂತೆ. ದಶಕಗಳ ನಂತರ, ಅನಿತಾಗೆ ಬರ್ಲಿನ್ ಮ್ಯೂಸಿಯಂನಲ್ಲಿ ತನ್ನ ತಂದೆಯ ಪ್ರತಿಮೆ ನೋಡಲು ಸಿಗುತ್ತದೆ! “ನನ್ನಮ್ಮನಿಗೆ ಈ ವಿದೇಶಿಯ ಬಹಳ ಕುತೂಹಲಕಾರಿಯಾಗಿ ಕಂಡಿರಬೇಕು! 1920ರ ದಶಕದ ಜರ್ಮನಿಯಲ್ಲಿ ಭಾರತೀಯರು ಇರಲಿಲ್ಲ. ಕಾವ್ಯ ಮತ್ತು ತತ್ವಜ್ಞಾನಿಗಳಿಂದಾಗಿ ಭಾರತ ಇನ್ನೂ ರೋಮ್ಯಾಂಟಿಕ್ ಆಗಿದ್ದ ಕಾಲಘಟ್ಟ. ಇಬ್ಬರೂ ಸಾಹಸಿಗಳು, ಒಂದು ರೀತಿಯಲ್ಲಿ ದೇಶಭ್ರಷ್ಟರು ಕೂಡ. ನನ್ನ ತಂದೆ ಅಂದಿನ ಪೂರ್ವ ಬಂಗಾಳದಿಂದ ಬಂದವರು. ಅವರು ಜರ್ಮನಿಯಿಂದ ಹಿಂತಿರುಗಿದಾಗ, ಪೂರ್ವ ಬಂಗಾಳವು ಬಾಂಗ್ಲಾದೇಶವಾಯಿತು; ಆದ್ದರಿಂದ ಅಪ್ಪ ತಮ್ಮ ಪೂರ್ವಜರ ಭೂಮಿಯನ್ನು ಕಳೆದುಕೊಂಡರು. ಈ ಎಲ್ಲದರ ಹಿನ್ನೆಲೆಯಲ್ಲಿ ಅಮ್ಮ-ಅಪ್ಪ ತಮ್ಮಿಬ್ಬರಿಗೂ ಸೇರಿರದ ಅಪರಿಚಿತ ಉತ್ತರ ಭಾರತದಲ್ಲಿ ಹೊಸ ಜೀವನವನ್ನು ಪ್ರಾರಂಭಿಸಬೇಕಾಯಿತು.
ಮನೆಯಲ್ಲಿ ಮಕ್ಕಳು ಜರ್ಮನ್ ಮಾತಾಡುತ್ತಿದ್ದರೂ, ಅನಿತಾ ಅಮ್ಮ ಒಮ್ಮೆಯೂ ಜರ್ಮನಿಗೆ ಹೋಗಿ ಬರಲಿಲ್ಲ. “ಅಮ್ಮ ಅವಳ ಅಪ್ಪ-ಅಮ್ಮಂದಿರಿಗೆ ಒಬ್ಬಳೇ ಮಗು. ಇವಳು ಅಲ್ಲಿಂದ ಹೊರಡುವುದು, ತಿಂಗಳಾನುಗಟ್ಟಲೆ ದೋಣಿಯಲ್ಲಿ ಪ್ರಯಾಣಿಸುವುದು ಎಂದಾದಾಗ ಏಕೈಕ ಮಗುವನ್ನು ಬೀಳ್ಕೊಡಲು ಬಂದ ಅಜ್ಜಿಯ ಮನಸ್ಸಲ್ಲಿ ಏನಿದ್ದಿರಬಹುದು ಎಂದು ನಾನಾ ಯಾವಾಗಲೂ ಯೋಚಿಸುತ್ತಿರುತ್ತೇನೆ. ಅಜ್ಜಿ ಹೇಳಿದ ಒಂದು ಮಾತನ್ನು ಅಮ್ಮ ಯಾವಾಲೂ ಹೇಳುತ್ತಿದ್ದಳು: ನಿಮ್ಮ ಮಕ್ಕಳಿಗೆ (ಮಕ್ಕಳಾದ ಮೇಲೆ) ಬರೀ ಜರ್ಮನಿಯ ಬಗ್ಗೆ ಕೊರೆಯುತ್ತಿರಬೇಡಿ, ಜರ್ಮನಿಯಲ್ಲೇ ಮಾತಾಡಬೇಡಿ. ಭಾರತದಲ್ಲಿ ಹುಟ್ಟುವ ಮಕ್ಕಳು ಭಾರತೀಯರಾಗಿ ಬೆಳೆಯಬೇಕು. ಅವರನ್ನು ಭಾರತೀಯರಾಗಿಯೇ ಬೆಳೆಸಿ.”
ತಾನು ಒಂದು ಪ್ರದೇಶಕ್ಕೆ ಸೇರಿದವಳು ಎನ್ನುವ ಅನನ್ಯತೆಯ ಭಾವ ದೇಸಾಯಿಯವರನ್ನು ಬಹಳ ಹಿಂದೆಯೇ ಬಿಟ್ಟು ಹೋಗಿದೆ. ಈ ದಿನಗಳಲ್ಲಿ ಭಾರತಕ್ಕೆ ಹಿಂದಿರುಗಿದಾಗ, ಇದು ತಾನು ಬಿಟ್ಟುಹೋದ ದೇಶವಲ್ಲ ಎನ್ನುವುದನ್ನು ಕಂಡುಕೊಂಡಿದ್ದಾರೆ. ಮತ್ತೊಂದೆಡೆ ಅಮೆರಿಕ ಪರನಾಡು ಎನ್ನಿಸಿದೆ. “ಇದು ಕೇವಲ ನನ್ನ ದೇಶವಲ್ಲ. ಇಲ್ಲಿನ ಜನ ನನ್ನನ್ನು ಅಪರಿಚಿತರಂತೆ ನೋಡುತ್ತಾರೆ.” ಒಂದು ಲೆಕ್ಕಕ್ಕೆ ಈ ಹಿನ್ನೆಲೆ ಅನಿತಾಗೆ ಸರಿಯಾಗಿ ಹೊಂದುತ್ತದೆ – “ಪಾಲ್ಗೊಳ್ಳುವುದಕ್ಕಿಂತ ಹೆಚ್ಚಾಗಿ ವೀಕ್ಷಕರಾಗಿರುವುದು ಲೇಖಕರಿಗೆ ಹೀಗೆ ಎಲ್ಲಿಗೂ, ಎಲ್ಲಿಯೂ ಅಂಟಿಯೂ ಅಂಟದಂತಿರುವುದು ಹೆಚ್ಚು ಹೊಂದುತ್ತದೆ.” Rosaritaದಲ್ಲಿ ಈ ಸ್ಥಳಾಂತರದ ಪ್ರಜ್ಞೆಯು ಅತ್ಯಂತ ಶಕ್ತಿಯುತವಾಗಿ ಮೂಡಿಬಂದಿದೆ. ಜೊತೆಗೆ ದೇಸಾಯಿಯವರ ಸ್ವಂತ ಆಯ್ಕೆಯ ಏಕಾಂಗಿತನದ ಭಾವವೂ ಅಷ್ಟೇ ಸಶಕ್ತವಾಗಿ ಒಡಮೂಡಿದೆ. ಕಾದಂಬರಿಗಾರ್ತಿಯಾಗಿರುವ ತಮ್ಮ ಜೀವನದ ಬಗ್ಗೆ ಅವರು ಹೇಳುವುದು; “ನಾನು ಯಾರನ್ನೂ ಸಹಾಯಕ್ಕಾಗಿ ಕೇಳಲಿಲ್ಲ. ತುಂಬಾ ಅಧೀರಳಾಗಿರುತ್ತಿದ್ದೆ, ಹೆದರುತ್ತಿದ್ದೆ. ಯಾರಾದರೂ ನನಗೆ ಏನಾದರೂ ಹೇಳಿದರೆ ಅಥವಾ ನಾನು ಅವರನ್ನು ಕೇಳಿದರೆ, ನಾನು ಏನು ಮಾಡಬೇಕು ಎಂದಿರುವೆನೊ ಅದನ್ನು ಮಾಡಲು ಆಗುವುದಿಲ್ಲವೇನೋ ಎನ್ನುವಷ್ಟು ಅಲ್ಲಾಡಿ ಹೋಗುತ್ತಿದ್ದೆ.”
ಬಹುಶಃ ಇದು ಆತ್ಮವಿಶ್ವಾಸದ ಒಂದು ರೂಪವಿರಬಹುದು ಎಂದರೆ, “ಆತ್ಮವಿಶ್ವಾಸದ ಕೊರತೆಯೂ ಇರಬಹುದು,” ಎಂದು ಜೋರಾಗಿ ನಗುತ್ತ, “ತುಂಬಾ ಅಳೆದು ತೂಗುವ ಮಾತುಗಳು. ಹಂಚಿಕೊಳ್ಳಲು ಜೊತೆಯಲ್ಲಿ ಯಾರಾದರೂ ಇದ್ದಿದ್ದರೆ ಚೆನ್ನಾರ್ಗಿತ್ತಿತ್ತು ಅಂತ ಈಗ ಅನ್ನಿಸುತ್ತದೆ,” ಎನ್ನುತ್ತಾರೆ.
ಹೊಸ ಕಾದಂಬರಿಯಲ್ಲಿ, ದೇಸಾಯಿ ಅಸಾಮಾನ್ಯ ವಿಧಾನದ ನಿರೂಪಣೆಯನ್ನು ಬಳಸಿದ್ದಾರೆ. second person ಕತೆ ಹೇಳುವುದರಿಂದ ಪುಸ್ತಕದುದ್ದಕ್ಕೂ ನಾಯಕಿಯನ್ನು “ನೀನು” ಎಂದು ಸಂಬೋಧಿಸುತ್ತಾರೆ. ಕಾದಂಬರಿಯ ಒಂದು ಸಾಲು – “ನಿನ್ನ ತಾಯಿ ಸ್ಯಾನ್ ಮಿಗೆಲ್ನಲ್ಲಿ ವಾಸವಿದ್ದಳು ಎನ್ನುವುದು ಇರಲಿ, ಅವಳು ಮೆಕ್ಸಿಕೋಗೆ ಬಂದಿಲ್ಲ. ಇದೊಂದು ಹಾಸ್ಯಾಸ್ಪದ ಮಾತೆಂದು ನಿನಗೇ ಗೊತ್ತು!”
ದೇಸಾಯಿ ಈ ದಿನಗಳಲ್ಲಿ ನಗರಕ್ಕೆ ಹೋಗುವುದು ಅಪರೂಪ. ಭಾರತದ ಪ್ರವಾಸಗಳು ಕಡಿಮೆಯಾಗುತ್ತಿವೆ. ಲೌಕಿಕ ಜಗತ್ತಿನ ಜೊತೆಗಿನ ವ್ಯವಹಾರಗಳ ಬಗ್ಗೆ ಎಳ್ಳಷ್ಟೂ ಆಸ್ತಕಿ ಇಲ್ಲ. ಇದು ಇವರ ಕಾದಂಬರಿಯಲ್ಲಿ ಕಾಣಿಸಿಕೊಳ್ಳುವ ಪ್ರತ್ಯೇಕತೆಯ ಸಹಜ ಪ್ರವೃತ್ತಿ!
‘ಕಣಿವೆಯ ತಪ್ಪಲಿನಲ್ಲಿ, ಎದೆಮಟ್ಟ ನಿಂತ ಹೂ ಬಳ್ಳಿಗಳ ನಡುವೆ; ಎಲ್ಲರಿಂದ ಬಲುದೂರ ದೂರ ತಾನಾಗಿ…’ ನಿಂತು ಹೊಂಗನಸಿನ ನಡುವೆ ತೂಗಿದ ದನಿಯಂತಹ ಮೃದುಮಾತಿನ ಒಡತಿಗೆ ವಿದಾಯ ಹೇಳುವಾಗ ಅವರೆದೆಯ ಕುಲುಮೆಯಲಿ ಮೈತಳೆದ ಕೋಲ್ಮಿಂಚೊಂದು ಬಾನಂಚಿನಲ್ಲೂ ಫಳಫಳಿಸುತ್ತಿತ್ತು.






0 Comments