ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಾರಾಜರ ರೈಲು ಬಂಡಿ…

ಕೆ ನಲ್ಲತಂಬಿ

ಕೆ ನಲ್ಲತಂಬಿ ಅವರು ಮೈಸೂರಿನಲ್ಲಿ ಹುಟ್ಟಿ, ಬೆಳೆದವರು. ಮೈಸೂರಿನಲ್ಲಿಯೇ ವಿದ್ಯಾಭ್ಯಾಸ ಮುಗಿಸಿದರು. ಖಾಸಗಿ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್ ಮ್ಯಾನೇಜರಾಗಿ 35ವರ್ಷಗಳು ಕೆಲಸ ಮಾಡಿ ನಿವೃತ್ತಿಯಾದವರು. ನೆರಳುಚಿತ್ರದಲ್ಲಿ ಬಹಳ ಆಸಕ್ತಿ. ಬಹಳಷ್ಟು  ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಪ್ರದರ್ಶನಗಳಲ್ಲಿ ಇವರ ನೆರಳು ಚಿತ್ರಗಳು ಪ್ರದರ್ಶನಗೊಂಡು ಬಹುಮಾನ ಗಳಿಸಿವೆ.  ನಾಣ್ಯ ಸಂಗ್ರಹಣೆ  ಹವ್ಯಾಸ.  ಭಾರತೀಯ ಅಂಚೆ ಇಲಾಖೆಯ ‘ಪಿಲಾಟೆಲಿ’ ವಿಭಾಗದ ಸದಸ್ಯರಾಗಿ ಎರಡು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಸಾಹಿತ್ಯ ಆಕಾಡೆಮಿಯ ಸದಸ್ಯರು. (2021-22) 

ನಿವೃತ್ತಿಯಾದ ನಂತರ  ಬರಹದಲ್ಲಿ ತೊಡಗಿಕೊಂಡವರು. ಕನ್ನಡದಿಂದ ತಮಿಳಿಗೆ ಮತ್ತು ತಮಿಳಿನಿಂದ ಕನ್ನಡಕ್ಕೆ ಅನುವಾದಗಳನ್ನು ಮಾಡುತ್ತಾರೆ. ಕೆಲವು ತಮಿಳು ಸಣ್ಣ ಕಥೆಗಳು, ಕವನಗಳು ಕನ್ನಡದ ಪತ್ರಿಕೆಗಳಲ್ಲೂ, ಕನ್ನಡ  ಸಣ್ಣಕಥೆಗಳು, ಕವನಗಳು ತಮಿಳು ಪತ್ರಿಕೆಗಳಲ್ಲೂ ಪ್ರಕಟಗೊಂಡಿವೆ. 

ಇವರು ನಲ್ಲಿ – ತಿಸೈ ಎಟ್ಟುಮ್  ಅನುವಾದ ಸಾಹಿತ್ಯ ಪ್ರಶಸ್ತಿ, ತಿರುಪ್ಪೂರ್ ಸಾಹಿತ್ಯ ಪ್ರಶಸ್ತಿ, ಸ್ಪ್ಯಾರೋ ಸಾಹಿತ್ಯ ಪ್ರಶಸ್ತಿ, ವಿಜಯ ಪ್ರಕಾಶನ -ಕೊಯ್ಯಂಬತ್ತೂರ್ – ಕೆ. ವಿ. ಸುಬ್ರಮಣಿಯಂ ಅನುವಾದ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ‘ಗೌರವ ಪ್ರಶಸ್ತಿ, ಕುಪ್ಪಂ ದ್ರಾವಿಡ ವಿಶ್ವವಿದ್ಯಾಲಯ Award of Recognition ಮೊದಲಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಈ ಸಂಚಿಕೆಯಲ್ಲಿ ಅ. ಮುತ್ತುಲಿಂಗಂ ಅವರ ಕತೆಯೊಂದನ್ನು ತಮಿಳಿನಿಂದ ಅನುವಾದಿಸಿದ್ದಾರೆ.

ಅ. ಮುತ್ತುಲಿಂಗಂ ಶ್ರೀಲಂಕಾದ ತಮಿಳು ಲೇಖಕ. ಇವರ ಸಣ್ಣಕತೆಗಳು ಅಪಾರ ಮೆಚ್ಚುಗೆಯನ್ನು ಗಳಿಸಿವೆ. ಅಕ್ಕ, ಮಹಾರಾಜವಿನ್‌ ರೈಲು ವಂಡಿ, ವಡಕ್ಕು ವೀದಿ ಮೊದಲಾದ ಕತಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಲಿಲ್ಲಿ ದೇವಶಿಖಾಮಣಿ ಪ್ರಶಸ್ತಿ, ತಮಿಳುನಾಡು ಸರ್ಕಾರದ ಪ್ರಶಸ್ತಿ, ಶ್ರೀಲಂಕಾ ಸರ್ಕಾರದ ಸಾಂಸ್ಕೃತಿಕ ಪ್ರಶಸ್ತಿ ಹೀಗೆ ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ.

ಒಂದು ವಿಪತ್ತಿನಂತೆಯೇ ಅದು ನಡೆದದ್ದು. 

ಸೆಲ್ವನಾಯಕಂ ಮಾಸ್ಟರ್ ಮನೆಯಲ್ಲಿ ಉಳಿದುಕೊಳ್ಳಬೇಕಾದ ನಾನು ಒಂದು ಸಣ್ಣ ಅನಾನುಕೂಲದಿಂದ  ಹೀಗೆ ಜಾರ್ಜ್ ಮಾಸ್ಟರ್ ಮನೆಯಲ್ಲಿ ತಂಗಬೇಕಾಯಿತು. ನನಗೆ ಅವರು ಈ ಮೊದಲು ಗೊತ್ತಿಲ್ಲ. ಆ ಎರಡು ರಾತ್ರಿಗಳು ಒಂದು ಹಗಲು ನನ್ನ ಬದುಕಿನಲ್ಲಿ ಬಹಳ ಮುಖ್ಯವಾದುದಾಗಿ ಮಾರ್ಪಡುತ್ತವೆ. ನನ್ನ ಹದಿನಾಲ್ಕು ವಯಸ್ಸಿನ ಬದುಕಿನಲ್ಲಿ ನಾನು ಕಂಡಿರದ ಕೇಳಿರದ ಕೆಲವು ವಿಷಯಗಳು ನನಗೆ ಅರ್ಥವಾಗುತ್ತವೆ. ಮತ್ತಷ್ಟು ಕೆಲವು ಗಾಬರಿಗಳಿಗೂ ಸಿದ್ಧವಾಗಲು ಸಾಧ್ಯವಾಗುತ್ತವೆ. 

ಜಾರ್ಜ್ ಮಾಸ್ಟರ್ ಪೂರ್ವದಲ್ಲಿ ಕೇರಳದಿಂದ ಬಂದವರು. ಅವರು ಕುತ್ತಿಗೆಯ ಮೂಲಕ  ಮಾತ್ರವೇ ಕಳಚಬಲ್ಲ ಮೂರು ಗುಂಡಿಗಳಿಟ್ಟ ಮೊಳಕೈ ಮುಟ್ಟುವ ಶರ್ಟನ್ನು ತೊಟ್ಟಿದ್ದರು. ಅವರ ಮುಖ ಶಾಲಾ ಮಾಸ್ಟರಿಗೆ ಹೊಂದಿಕೊಳ್ಳುವಂತಿಲ್ಲ. ಬಾಯಿಯ ಗೆರೆಯ ಮೇಲು ಭಾಗ ಬಾಗಿ ಸದಾ ನಗಲು ತಯಾರಿರುವಂತೆಯೇ ಕಾಣುತ್ತಾರೆ. 

ಮಿಸಸ್ ಜಾರ್ಜ್ ನೋಡಿದಕೂಡಲೇ ಬಹಳ ಕರಾರಾದವರು ಎಂಬುದು ತಿಳಿಯುತ್ತದೆ. ಬೊಟ್ಟಿಡದ ಹಣೆ ಬಹಳ ಬಿಳಿಯಾಗಿತ್ತು. ಯೌವನದಿಂದ ಅರ್ಧ ದೂರ ಬಂದಿದ್ದರೂ ಅವರ ಕಣ್ಣು ಮೂಗಿನ ಕೆಳಗೆ ಕಾಣುವುದನ್ನು ನೋಡಿ ಅಭ್ಯಾಸವಿಲ್ಲದವು. ಕಪ್ಪು ಅಂಚಿನ ಬಿಳಿಯ ಸೀರೆ ಉಟ್ಟಿದ್ದರು. ಸೀರೆಯ ಪ್ರತಿ ನೆರಿಗೆಗಳು ಕಡಕ್ಕಾಗಿ ತಮ್ಮ ಜಾಗವನ್ನು ಬಿಟ್ಟು ಕದಲದೆ ಹಾಗೆಯೇ ನಿಂತಿದ್ದವು. 

ನಾನು ಅಲ್ಲಿಗೆ ಹೋದಾಗ ಇಬ್ಬರೂ ಮಗಳನ್ನು ಎದುರುನೋಡುತ್ತಾ ಹೊಸಿಲಲ್ಲಿ ನಿಂತಿದ್ದರು. 

ಮೂವರು ಹುಡುಗಿಯರು ದೂರದಿಂದ ಬಂದರು. ಎಲ್ಲರೂ ಒಂದೇ ರೀತಿಯಲ್ಲಿ ಸಮವಸ್ತ್ರದಂತೆ ಒಂದನ್ನು ತೊಟ್ಟಿದ್ದರು. ಆದರೂ ಅವರಲ್ಲಿ ಈ ಹುಡುಗಿ ಅವಳ ಎತ್ತರಕ್ಕೆ ಬಹಳ ದೂರದಲ್ಲಿ ಮೊದಲೇ ಕಂಡಳು. ಅವಳು ನಡೆಯುವಾಗ ನಡುನಡುವೆ ಅವಳ ನಡು ಕಂಡಿತು; ಉಳಿದವು ಮರೆಯಾಗಿದ್ದವು. ಹತ್ತಿರ ಬಂದಾಗ ಅವಳ ಕಣ್ಣುಗಳು ಕಂಡವು. ಅವು ಅಪರೂಪವಾಗಿ ಒಂದು ಇಪ್ಪೆ ವಾಟೆಯನ್ನು ಎರಡೂ ಕಡೆ ಸೀಳಿದಂತೆ ಚೂಪಾಗಿ ಇದ್ದವು. ಕುತ್ತಿಗೆಯಲ್ಲೋ ಕಿವಿಯಲ್ಲೋ ಬೇರೆ ಅಂಗಾಂಗಗಳಲ್ಲೋ ಯಾವ ಬಗೆಯ ಒಡವೆಯೂ ಇಲ್ಲ. ಆದರೆ ಮೂಗಿನ ಕೆಳಗೆ, ಮೇಲು ತುಟಿಯಲ್ಲಿ ಒಂದು ಸಣ್ಣ ಗಂತಿ (ನರಹುಲಿ)  ಇತ್ತು. ಇದು ಆಕೆಯ ತುಟಿ ಚಲಿಸುವಾಗಲೆಲ್ಲಾ ಚಲಿಸಿ ನಮ್ಮ ನೋಟವನ್ನೂ ಅವಳ ನೋಟವನ್ನೂ ತಿರುಗಿಸಿತು. ಹಾಗೆಯೇ ಆಕೆ ದೇಹವನ್ನು ಅವಧಾನಿಸುವ ಕುತೂಹಲವನ್ನೂ ಹೆಚ್ಚಿಸಿತು. ಇದು ಒಂದು ನೂತನವಾದ ತಂತ್ರವಾಗಿಯೇ ನನಗೆ ಕಂಡಿತು. 

ರೊಸಲಿನ್ ಎಂದು ಅವಳನ್ನು ನನಗೆ ಪರಿಚಯ ಮಾಡಿಸಿದರು. ಬೇಸರದಿಂದ ಕಣ್ಣೆತ್ತಿ ನೋಡಿದಳು. ಆ ಮುಖ ಹದಿಮೂರು ವರ್ಷದ್ದಾಗಿತ್ತು. ಆದರೆ ದೇಹ ಅದನ್ನು ಒಪ್ಪಿಕೊಳ್ಳದೆ ಮತ್ತಷ್ಟು ಹೆಚ್ಚು ವಯಸ್ಸಿಗೆ ಆಸೆಪಟ್ಟಿತು. 

ನನ್ನ ಮೊದಲ ವಿಸ್ಮಯ ಆ ಮನೆ. ಅದು ನನಗೆ ಪರಿಚಯವಿಲ್ಲದ ಅಧಿಕ ವಸತಿಗಳನ್ನು ಉಳ್ಳದ್ದು. ನನಗಿಂತಲೂ ಎತ್ತರವಾದ ಗಡಿಯಾರ ಪ್ರತಿ ಗಂಟೆಗೂ ಆ ಸ್ಥಾನವನ್ನು ನೆನಪಿಟ್ಟುಕೊಂಡು ಬಾರಿಸುತ್ತಿತ್ತು. ಬಿಟ್ಟು ಬಿಟ್ಟು ಶಬ್ಧ ಮಾಡುತ್ತಿತ್ತು. ನಾನು ಈ ಹಿಂದೆ ಮುಟ್ಟಿ ಅರಿಯದ ಒಂದು ಫ್ರಿಡ್ಜ್ ಇತ್ತು. ತೂಗುವ ಸರಪಳಿಯ ಹಿಡಿದು ಎಳೆದರೆ ದೊಡ್ಡ ಶಬ್ಧದೊಂದಿಗೆ ನೀರು ಹರಿದು ಬರುವ ಶೌಚಾಲಯವಿತ್ತು. ಜೀವನ ಪೂರ್ತಿ ಪರಾಮರಿಸಿದರೂ ಒಂದು ಹೂ ಸಹ ಅರಳದ ಗಿಡಗಳನ್ನು ಕುಂಡಗಳಲ್ಲಿ ಇಟ್ಟು ಬೆಳೆಸುತ್ತಿದ್ದರು. 

ನನಗೆ ಮೀಸಲಿಟ್ಟ ಕೋಣೆ ಅವಸರದಿಂದ ತಯಾರಿಮಾಡಿದ್ದು. ಅಲಮಾರಿಯೂ ಮೇಜೂ ಒಂದು ಪಕ್ಕವನ್ನು ತುಂಬಿಕೊಂಡಿದ್ದವು.  ಬಹಳ ಪುಸ್ತಕಗಳು ಖಾಲಿ ಪೆಟ್ಟಿಗೆಗಳೂ ಒಂದರ ಮೇಲೊಂದು ಜೋಡಿಸಿ ಇಡಲಾಗಿದ್ದವು. ಅಲಮಾರಿಗೆ ಅನುಮತಿ ದೊರಕದ ಉಡುಪುಗಳು ಹೊರಗೆ ಕಾಯುತ್ತಿದ್ದವು. ಹಾಸಿಗೆಯ ಮೇಲೆ ಮಡಿಕೆ ಕದಲದ ಬಿಳಿಯ ಹಾಸು, ಅವ್ಯವಸ್ಥೆಯಾಗಿ ಎರಡು ದಿಂಬುಗಳೂ ಬಿದ್ದಿದ್ದವು. ಆ ಕೋಣೆಗೆ ಸೇರಿದಂತೆ  ಮೂರು ಮೂರು ಬಾಗಿಲುಗಳುಳ್ಳ ಒಂದು ಸ್ನಾನದ ಕೊಠಡಿ. ಮೂರು ಜನ ಮೂರು ಬಾಗಿಲುಗಳ ಮೂಲಕ ಅದರೊಳಗೆ ಬರಬಹುದು. 

ಆದ್ದರಿಂದ ಬಹಳ ಎಚ್ಚರಿಕೆಯಿಂದ ಒಳಗೆ ಚಿಲುಕ ಹಾಕಲು, ನಂತರ ಜ್ಞಾಪಕದಿಂದ ತೆರೆಯಲು ತಿಳಿದಿರಬೇಕು. ಸ್ನಾನದ ತೊಟ್ಟಿ ಬಿಳಿಯ ಬಣ್ಣದಿಂದ ಕಂದು ಬಣ್ಣಕ್ಕೆ ಬದಲಾಗುತ್ತಿದೆಯೇ ಅಥವಾ ಕಂದು ಬಣ್ಣದಿಂದ ಬಿಳಿಯ ಬಣ್ಣಕ್ಕೆ ತಿರುಗುತ್ತಿದೆಯೇ ಎಂಬುದನ್ನೂ ಹೇಳಲು ಸಾಧ್ಯವಿಲ್ಲ. ಅದರಲ್ಲಿ ಉದ್ದನೆಯ ಕೂದಲೊಂದು ನೀರಲ್ಲಿ ಒದ್ದೆಯಾಗಿ ಬಳುಕುತ್ತಾ ಇತ್ತು. ಮತ್ತಷ್ಟು ಹೆಣ್ಣಿನ ಚಿನ್ಹೆಗಳೂ, ಒಳ ಉಡುಪುಗಳೂ ಮರೆಯಿಲ್ಲದೆ ತೂಗುತ್ತಿದ್ದವು. 

ಎರಡನೇಯ ವಿಸ್ಮಯ ಮುತ್ತು ಕೊಡುವ ದೃಶ್ಯ. ಆ ಹುಡುಗಿ ಆಗಾಗ ಮುತ್ತು ಕೊಟ್ಟಳು. ಸುಮ್ಮನೆ ಹೋಗುವ ಅಮ್ಮನನ್ನು ಎಳೆದು ಅವಳ ಕೆನ್ನೆಯ ಮೇಲೆ ಮುತ್ತಿಟ್ಟು ಹೋದಳು. ಕೆಲವೊಮ್ಮೆ ಹಿಂದಿನಿಂದ ಬಂದು ಅವಳನ್ನು ಆಲಿಂಗಿಸಿಕೊಂಡು ಆಶ್ಚರ್ಯ ಉಂಟುಮಾಡಿದಳು. ಕೆಲವೊಮ್ಮೆ ಕೆನ್ನೆಯ ಮೇಲೆ ಕೊಟ್ಟಳು; ಕೆಲವೊಮ್ಮೆ ಹಣೆಯ ಮೇಲೆ ಕೊಟ್ಟಳು. ತಾಯಿಯೂ ಹಾಗೆಯೇ ಮಾಡಿದಳು. ಕೆಲವು ಸಮಯಗಳಲ್ಲಿ ಹಾಗೆ ಕೊಡುವಾಗ ನನ್ನನ್ನು ಓರೆ ಕಣ್ಣುಗಳಿಂದ ನೋಡುವಳು. ನನಗೆ ಆ ಸಮಯಗಳಲ್ಲಿ ಏನು ಮಾಡಬೇಕೆಂದೇ ತಿಳಿಯುವುದಿಲ್ಲ. 

ನಾನು ಮೊದಲ ಸಲ ಅನ್ಯರ ಮನೆಯಲ್ಲಿ ಉಳಿದುಕೊಂಡಿದ್ದೇನೆ. ಅದರಲ್ಲೂ ಅವರು ಕ್ಯಾಥಲಿಕ್.  ಅವರ ನಡೆನುಡಿಗಳು ಹಾಗಿರಬಹುದು ಎಂದು ಯೋಚಿಸಿದೆ. ಆದರೂ ನಾಚಿಕೆಯಾಗುತ್ತಿತ್ತು. ನನ್ನ ಕಣ್ಣುಗಳನ್ನು ಇದು ಸಾಧಾರಣವಾದ ಘಟನೆ ಎಂದು ಅಂದುಕೊಳ್ಳುವಂತೆ  ಇರಲು ಪಳಗಿಸಿಕೊಂಡೆ. 

ಊಟವನ್ನು ಮೇಜಿನ ಮೇಲಿಟ್ಟಾಗ ಆತುರದಿಂದ ಕೈಯಿಟ್ಟು ಬಿಟ್ಟೆ. ನಂತರ ಪ್ರಾರ್ಥನೆ ಪ್ರಾರಂಭಿಸಿದಾಗ ಅದನ್ನು ಸೆಳೆದುಕೊಂಡೆ. ಕೊನೆಗೆ ‘ಆಮೆನ್’ ಎಂದು ಹೇಳಿದಾಗ ನಾನು ಭಾಗವಹಿಸಲು ತಪ್ಪಿದೆ. ಅದಕ್ಕೆ ಆ ಹುಡುಗಿ ನನ್ನನ್ನು ಒಂದು ತರಹ ನೋಡಿದಳು. 

ಅಂದು ರಾತ್ರಿ ನಡೆದದ್ದೂ ವಿನೋದವಾದ ಘಟನೆಯೇ. ಅಭ್ಯಾಸವಿಲ್ಲದ ಕೋಣೆ. ಅಭ್ಯಾಸವಿಲ್ಲದ ಮಂಚ, ಅಭ್ಯಾಸವಿಲ್ಲದ ಶಬ್ಧಗಳು, ಬಹಳ ಸಮಯ ನಿದ್ರೆ ಬರಲಿಲ್ಲ. ಮೆಲ್ಲಗೆ ನನ್ನ ಬಾಗಿಲು ತೆರೆಯುವ ಶಬ್ಧ, ಒಂದು ಮೇಣದಬತ್ತಿಯನ್ನು ಹಿಡಿದುಕೊಂಡು ಆ ಹುಡುಗಿ ಮೆಲ್ಲಗೆ ನಡೆದು ಬಂದಳು. ಬಂದವಳು ನನ್ನ ಕಡೆ ತಿರುಗಿ ನೋಡದೆ ಸೀದಾ ಪೆಟ್ಟಿಗೆಗಳನ್ನು  ಜೋಡಿಸಿಟ್ಟ ದಿಕ್ಕಿಗೆ ಹೋಗಿ ನಿಂತುಕೊಂಡು ಅಮೇರಿಕದ  ಸ್ವಾತಂತ್ರ ಶಿಲೆಯಂತೆ ಮೇಣದಬತ್ತಿಯನ್ನು ಎತ್ತರಿಸಿ ಹಿಡಿದಳು. ನಾನು ಧಕ್ಕನೆ ಎದ್ದು ಕುಳಿತೆ. 

“ಹೆದರ್ಕೊಂಡೆಯಾ?” ಇದೆ ಅವಳು ನನ್ನ ಜತೆ ಮಾತನಾಡಿದ ಮೊದಲ ಪದ. ನಾನೂ ಅವಳ ಪಕ್ಕದಲ್ಲಿ ನಿಂತು ಏನೆಂದು ನೋಡಿದೆ. ಆ ಮರದ ಪೆಟ್ಟಿಗೆಯಲ್ಲಿ ಐದು ಬೆಕ್ಕಿನ ಮರಿಗಳು ಒಂದರ ಮೇಲೊಂದಾಗಿ ಕಣ್ಣುಮುಚ್ಚಿಕೊಂಡು ಬಿದ್ದಿದ್ದವು. 

ಒಂದೊಂದನ್ನೇ ಕೈಗೆತ್ತಿಕ್ಕೊಂಡು ಹೂಗೊಂಚಲನ್ನು ಪರೀಕ್ಷಿಸುವಂತೆ ನೋಡಿದಳು. ಅವಳ ಕೈಬಿಸಿ ಆರುವ ಮೊದಲೇ ನಾನೂ ಮುಟ್ಟಿ ನೋಡಿದೆ. ಹೊಸ ಅನುಭವವಾಗಿತ್ತು. 

“ಮೂರು ದಿನಗಳ ಹಿಂದೆಯೇ ಮರಿ ಹಾಕಿತ್ತು. ಎರಡು ಜಾಗ ಬದಲಾಯಿಸಿದೆ. ತಾಯಿ ಬೆಕ್ಕು ಈ ಕಿಟಕಿಯ ಮೂಲಕ ಬರುತ್ತದೆ, ಹೋಗುತ್ತದೆ. ನೋಡಿಕೋ” ಎಂದಳು. ಅದಕ್ಕೆ ನಾನು ಮರುತ್ತರ ಹೇಳಲಿಲ್ಲ. ಕಾರಣ ನಾನು ಅವಳ ಮೊದಲ ಪ್ರಶ್ನೆಗೆ ಅಕ್ಷರ ಕೂಡಿಸಿ ಉತ್ತರ ತಯಾರಿ ಮಾಡುತ್ತಿದ್ದೆ. 

ಸ್ವಲ್ಪ ಹೊತ್ತು ನನ್ನನ್ನೇ ನೋಡುತ್ತಾ ನಿಂತವಳು, ನನಗೆ ಪರಿಚಯವಿರುವವಳಂತೆ ಗುಟ್ಟಾದ ದನಿಯಲ್ಲಿ, “ಈ ಬೆಕ್ಕು ಮರಿಯಾಗಿದ್ದಾಗ ಗಂಡಾಗಿತ್ತು. ಇದ್ದಕ್ಕಿದ್ದಂತೆ ಒಂದು ದಿನ ಹೆಣ್ಣಾಗಿ ಬದಲಾಗಿ ಮರಿ ಹಾಕಿದೆ” ಎಂದಳು. ನಂತರ ಮತ್ತೆ ದನಿ ತಗ್ಗಿಸಿ, “ಈ ಕಪ್ಪು ಮರಿಗೆ ಮಾತ್ರ ನಾನು ಹೆಸರಿಟ್ಟಿದ್ದೇನೆ. ಅರಿಸ್ಟಾಟಲ್” ಎಂದಳು. 

“ಯಾಕೆ ಅರಿಸ್ಟಾಟಲ್?”

“ನೋಡೋದಿಕ್ಕೆ ಹಾಗೆಯೇ ಅರಿಸ್ಟಾಟಲ್ ತರಾನೇ ಇದೆ ಅಲ್ಲಾ?” 

ಅಷ್ಟಕ್ಕೂ ಅವಳು ನನಗೆ ಬಹಳ ಸನಿಹದಲ್ಲಿ ನಿಂತಳು. ಅವಳ ನೈಟಿ ಮಂದ ಬೆಳಕಿನಲ್ಲಿ ನುಣುಪಾದ ಎಳೆಯಾಗಿ ಬದಲಾಗಿದ್ದವು. ಕೂದಲು ಬಿಸಿಯಾಗಿತ್ತು. 

ನನ್ನ ಬೆರಳುಗಳು ಅವಳ ದೇಹದ ಯಾವ ಭಾಗವನ್ನೂ ಸುಲಭವಾಗಿ ಮುಟ್ಟುವ ದೂರದಲ್ಲಿ ಇತ್ತು. ತೋರು ಬೆರಳನ್ನು ತೆಗೆದು ತನ್ನ ಬಾಯ ಮೇಲೆ ಶಿಲುಬೆಯಂತೆ ಇಟ್ಟುಕೊಂಡು ಸನ್ನೆ ಮಾಡುತ್ತಾ, ಮೆಲ್ಲಗೆ ಬಾಗಿಲು ತೆರೆದು ಹೋದಳು. ಅವಳು ಹೋದ ದಿಕ್ಕಿನಲ್ಲಿ ಕುತ್ತಿಗೆಯನ್ನು ತಿರುಗಿಸಿಟ್ಟುಕೊಂಡು ಕ್ಷಣ ಹೊತ್ತು ಕಾದಿದ್ದೆ. 

ಬೆಳಗಿನ ತಿಂಡಿ ಬಹಳ ಅವಸರದಲ್ಲಿ ನಡೆಯಿತು. ಅವರೆಲ್ಲರೂ ಬಹಳ ಅಚ್ಚುಕಟ್ಟಾಗಿ ಉಟ್ಟಿದ್ದರು. ಮಿಸಸ್ ಜಾರ್ಜ್ ಬಳಿಯಿಂದ ಮೆಲ್ಲಗೆ ಮತ್ತೇರಿಸುವ ಒಂದು ವಾಸನೆ ದ್ರವದ ಪರಿಮಳ ಬಂದಿತು. ರಾತ್ರಿ ಏನೂ ನಡೆಯದಂತೆಯೇ ಒಂದು ಬೆಕ್ಕಾಗಿಯೇ ರೂಪತಾಳಿ ರೊಸಲಿನ್ ಕುಳಿತಿದ್ದಳು. ನವಿಲು ಗರಿಯಂತಹ ಉಡುಪನ್ನೂ, ಕಪ್ಪು ಶೂವನ್ನೂ, ಉದ್ದನೆಯ ಬಿಳಿಯ ಕಾಲುಚೀಲವನ್ನೂ ತೊಟ್ಟಿದ್ದಳು. 

ಅವಳು ಬೇಕಂತಲೇ ಸಾವಧಾನವಾಗಿ ಆಹಾರ ಸೇವಿಸಿದಳು. ಮೇಜಿನ ಮೇಲೆ ನಾವಿಬ್ಬರೇ ಉಳಿದೆವು. ಯಾರೂ ಇಲ್ಲದ ಆ ಸಮಯಕ್ಕೆ ಕಾದಿದ್ದವಳಂತೆ ತಕ್ಷಣ ನನ್ನ ಕಡೆಗೆ ತಿರುಗಿ, ಗುಟ್ಟು ಹೇಳಲು ಬರಮಾಡಿಕೊಂಡ ದನಿಯಲ್ಲಿ, “ನನ್ನ ಅಪ್ಪನ ಬಳಿ ಒಂದು ರೈಲು ಬಂಡಿ ಇದೆ” ಎಂದಳು. 

“ರೈಲು ಬಂಡಿಯೇ?” ಎಂದೆ. 

“ರೈಲು ಬಂಡಿಯೇ. ಹದಿನಾಲ್ಕು ಬೋಗಿಗಳು.” 

“ಹದಿನಾಲ್ಕು ಬೋಗಿಗಳೇ?” 

“ಇದೇ ತಿರುವನಂತಪುರಕ್ಕೂ ಕನ್ಯಾಕುಮಾರಿಗೂ ಮಧ್ಯೆ ಓಡುವ ರೈಲು ಬಂಡಿ. ಬೆಳಗ್ಗೆ ಆರು ಗಂಟೆಗೆ ಹೊರಟು ಮತ್ತೆ ರಾತ್ರಿ ಹಿಂತಿರುಗಿ ಬರುತ್ತದೆ.” 

“ರೈಲು ಬಂಡಿಯನ್ನು ಯಾಕೆ ನಿಮ್ಮ ಅಪ್ಪ ಕೊಂಡುಕೊಂಡರು?” 

“ಕೊಂಡುಕೊಳ್ಳಲಿಲ್ಲ. ಸ್ಟುಪಿಡ್. ತಿರುವನಂತಪುರಂ ಮಹಾರಾಜ ಈ ಲೈನನ್ನು ನನ್ನ ತಾತನಿಗೆ ಅವರ ಸೇವೆಯನ್ನು ಮೆಚ್ಚಿ ಬಹುಮಾನವಾಗಿ ಕೊಟ್ಟರಂತೆ. ಅವರ ನಂತರ ಅಪ್ಪನಿಗೆ ದೊರಕಿತು. ಅವರ ನಂತರ ಅದು ನನಗೇ.” 

ಅವಳ ನಂತರ ಅದು ಯಾರಿಗೆ ಸ್ವಂತವಾಗುತ್ತದೆ  ಎಂದು ನಿರ್ಧಾರವಾಗುವ ಮೊದಲು ಜಾರ್ಜ್ ಮಾಸ್ಟರ್ ಹಿಂತಿರುಗಿದರು. ಹಾಗೆಯೇ ಎಲ್ಲರೂ ಅವಸರವಾಗಿ ಮಾತಾ ದೇವಾಲಯಕ್ಕೆ ಹೊರಟಾಗ ಆ ಸಂಭಾಷಣೆಯನ್ನು ಮುಂದುವರಿಸಲಾಗದೆ ಅಲ್ಲೇ ನಿಂತು ಹೋಯಿತು. 

ಒಬ್ಬ ಹದಿನಾಲ್ಕು ವಯಸ್ಸಿನ ಹುಡುಗ ಎಷ್ಟು ಹೊತ್ತು ತನಗೆ ಮೀಸಲಿಟ್ಟ ಕೋಣೆಯಲ್ಲಿ ಅಡಗಿಕೊಂಡು ಓದಲು ಏನೂ ಇಲ್ಲದೆ ಡೇವಿಸ್ ಎಂಬ ಇಂಗ್ಲೀಷಿನವನು ಬರೆದ Heat ಪುಸ್ತಕವನ್ನು ಓದುತ್ತಿರಲು ಸಾಧ್ಯ? ಅವರು ಹಿಂತಿರುಗಿ ಬಂದ ಶಬ್ಧ ಕೇಳಿ ಬಹಳ ಸಮಯವಾಯಿತು. ಧೈರ್ಯ ತಂದುಕೊಂಡು ಮೆಲ್ಲಗೆ ನನ್ನ ಕೋಣೆಯ ಬಾಗಿಲನ್ನು ತೆರೆದು ಇಣಕಿ ನೋಡಿದೆ. ಯಾರೂ ಇಲ್ಲ. 

ಹೊರಗೆ ಅಂಗಳಕ್ಕೆ ನಾನು ಬಂದಾಗ ಅಂಚಿನಲ್ಲಿ ಒದ್ದೆಯಾಗಿದ್ದ ಒಂದು ಉದ್ದನೆಯ ಕಾಗದದ ಚೀಲದೊಳಗೆ  ಅವಳು ಕೈಬಿಟ್ಟು ಏನೋ ಒಂದನ್ನು ತೆಗೆದು ಬಾಯಿಗೆ ಹಾಕಿಕೊಂಡು ಮೆಲ್ಲುತ್ತಿದ್ದಳು. ಅವಳ ಕೈ ಹುತ್ತದೊಳಗೆ ಹಾವು ನುಸುಳುವಂತೆ ಹೋಗುವುದು ಬರುವುದು ಮಾಡುತ್ತಿತ್ತು. ಹೆಸರು ತಿಳಿಯದ ಒಂದು ಅವಳ ಬಾಯೊಳಗೆ ಬೀಳುತ್ತಿತ್ತು. 

ಚೀಲವನ್ನು ನನ್ನ ಬಳಿ ನೀಡಿದಳು. ಅವಳ ಮಣಿಕಟ್ಟಿನ ಗಂಟು ನನ್ನ ಮುಖಕ್ಕೆ ಎದುರು ನುಣುಪಾಗಿತ್ತು. ಅನಾಮದೇಯ ತಿಂಡಿ ಪದಾರ್ಥಗಳನ್ನು ನಾನು ತಿನ್ನುವುದಿಲ್ಲ. ಬೇಡ ಎಂದು ತಲೆಯಾಡಿಸಿದೆ. ‘ಐಸ್ ಗೆಡ್ಡೆ ಬೇಕೆ’ ಎಂದು ತಕ್ಷಣ ಕೇಳಿದಳು. ನನ್ನ ಉತ್ತರಕ್ಕೆ ಕಾಯದೆ ಅವಳಾಗಿಯೇ ಹೋಗಿ ಶೀತ ಪೆಟ್ಟಿಗೆಯ ಬಾಗಿಲು ತೆರೆದು ಆಕಾಶ ನೀಲಿ ಬಣ್ಣದಲ್ಲಿ ಸಣ್ಣ ಸಣ್ಣ ಚೌಕಟ್ಟುಗಳುಳ್ಳ ಒಂದು ಪ್ಲಾಸ್ಟಿಕ್ ಪೆಟ್ಟಿಗೆಯನ್ನು ತೆಗೆದುಕೊಂಡು ಬಂದಳು. ಬಿಲ್ಲನ್ನು ಬಗ್ಗಿಸುವಂತೆ ಅದನ್ನು ಬಗ್ಗಿಸಿದಾಗ ಐಸ್ ಗೆಡ್ಡೆಗಳು ಜಿಗಿದು ಚದುರಿ ಮೇಲಕ್ಕೆ ಹಾರಿದವು. ಅವಳು ಅದನ್ನು ಒಂದೊಂದಾಗಿ ಹಿಡಿದು ಬಾಯಿಗೆ ಹಾಕಿಕೊಂಡಳು. ತನ್ನ ಕೈಯಿಂದ ಹಿಡಿದು ನೀರು ತೊಟ್ಟಿಕ್ಕುವ ಒಂದನ್ನು ನನಗೂ ಕೊಟ್ಟಳು. ನಂತರ ಕಚಕ್ ಎಂದು ಕಚ್ಚಿದಳು. 

ತಿರುಗಿ ಎರಡೂ ಕಡೆ ನೋಡಿ, ಫ್ರಿಡ್ಜ್ ಕೇಳಿಸದ ದೂರದಲ್ಲಿ ಇದೆ ಎಂಬುದನ್ನು ಖಾತ್ರಿ ಮಾಡಿಕೊಂಡು, ಮೆಲ್ಲಗೆ ಮಾತನಾಡಿದಳು. “ಈ ನೀರು ಕೇರಳದಿಂದ ಬಂದದ್ದು. ಅರ್ಧ ಗಂಟೆಯಲ್ಲಿ ಐಸ್ ಗೆಡ್ಡೆಗಳಾಗುತ್ತವೆ.  ಇಲ್ಲಿಯ ನೀರು ಬಹಳ ಸ್ಲೋ. ಎರಡು ದಿನ ತೆಗೆದುಕೊಳ್ಳುತ್ತದೆ” ಎಂದಳು. 

ನಾನೂ ಅವಳಂತೆ ಕಚಕ್ ಎಂದು ಕಚ್ಚಿದೆ. ಹಲ್ಲುಗಳೆಲ್ಲವೂ ಜುಂ ಎಂದು ತಲೆಗೆ ಹೊಡೆದವು. ನೀರು ಹಲ್ಲಿನ ಸಂಧಿಗಳಿಂದ ಹರಿದು ಹೊರಗೆ ಬಂದಿತು. ನನ್ನನ್ನೇ ನಗುತ್ತಾ ನೋಡುತ್ತಿದ್ದವಳು, “ನಿನಗೆ ಐಸ್ ಗೆಡ್ಡೆ ತಿನ್ನಲಿಕ್ಕೆ ಬರೋದಿಲ್ಲ” ಎಂದಳು. 

ಅವಳನ್ನು ನೋಡಿದೆ. ಗಂಡಸಿನಂತೆ ಉಡುಪು ಧರಿಸಿದ್ದಳು, ಮಧ್ಯಕ್ಕೆ ಸರಿಯಾಗಿ ಹೊಲಿದ ಪ್ಯಾಂಟಿನಂತಹ ಲಂಗ. ಅವಳ ಮೇಲುಡುಪು ಎರಡು ನಾಡಾಗಳಿಂದ  ಹೆಣೆಯಲ್ಪಟ್ಟು, ತೋಳುಗಳನ್ನೂ, ಕುತ್ತಿಗೆಯ ಗುಳಿಯನ್ನೂ ಮರೆಮಾಚಲು ಪ್ರಯತ್ನಿಸುವಂತೆ ಇತ್ತು. ಅವಳ ತೋಳು ಎಲುಬುಗಳು ಎರಡೂ ಕಡೆ ಎದ್ದು ನಿಂತಿದ್ದವು. 

ಆ ಸಮಯಕ್ಕೆ ಜಿವ್ವೆಂದು ನೊಣ ಒಂದು ಹಾರಿ ಬಂದು ಅವಳನ್ನು ಸುತ್ತಿತು. ತಾನಾಗಿಯೇ ಪ್ರಕಾಶ ಬೀರುವ ಹಸಿರು ನೊಣ. ದುಂಡನೇ ಕಣ್ಣುಗಳು. ತೋಳಿನ ಅಂಚಿನಲ್ಲಿ ಕೂರಲು ಪ್ರಯತ್ನಿಸಿದಾಗ ಕೆಡವಿದಳು. ನಾನು ತಡೆಯಲಾಗದೆ ಕೈಯನ್ನು ಬೀಸಿದೆ. 

ನೆಟ್ಟ ಚಾಕುವಿನಂತ ತೋಳ ಅಂಚಿನಲ್ಲಿ ಕೈ ತಾಕಿದ ಕೂಡಲೇ ತಕ್ಕಡಿಯಂತೆ ಅದು ಒಂದು ಕಡೆ ಕೆಳಗೆ ಇಳಿಯಿತು. 

ಮತ್ತೆ, ಬಹಳ ಚುರುಕಾದ ಕಣ್ಣುಗಳು ಮಾತ್ರವೇ ಕಂಡುಹಿಡಿಯುವಂತಹ ಒಳಗೆ ಬಗ್ಗಿದ ಅವಳ ಮೊಳಕಾಲಿನಲ್ಲಿ ಅದು ಹೋಗಿ ಕುಳಿತಿತು. ನಾನು ಮತ್ತೆ ಕೈಯನ್ನು ಬೀಸಲು ಎತ್ತಿದ ಕೂಡಲೇ ನಗಲು ತೊಡಗಿದಳು. ಸುತ್ತು ಮುಗಿಯದ ಚಕ್ರದಂತೆ ಅದು ಮುಂದುವರೆಯುತ್ತಲೇ ಹೋಯಿತು. 

ಮನಸ್ಸು ಉಕ್ಕಿ ನಾನೂ ನಕ್ಕೆ. ಆ ಕ್ಷಣ ದೇವರು ಹೇಗೂ ಅದಕ್ಕೆ ಒಂದು ಅಡ್ಡಿ ತರುತ್ತಾನೆ ಎಂದು ನನಗೆ ಹೆದರಿಕೆಯಾಯಿತು. ಹಾಗೆಯೇ ಆಯಿತು. ಕೆಲಸದ ಹೆಣ್ಣಾಳು ಬಂದು ಅಮ್ಮ ಕರೆಯುವುದಾಗಿ ಸೂಚಿಸಿದಳು. 

ಆ ಭಾನುವಾರ ನಡೆದ ಟೀ ಪಾರ್ಟಿಯೂ ಮರೆಯಲಾಗದ್ದು. ದೊಡ್ಡ ಆಲಾಪನೆಯೊಂದಿಗೆ ಅದು ಹೊರಗೆ ತೋಟದಲ್ಲಿ ಪ್ರಾರಂಭವಾಯಿತು. ಹಳದಿ ಹಸಿರು ಬೆರೆತ ದೊಡ್ಡ ಹಣ್ಣುಗಳನ್ನು ಹೊತ್ತು ನಿಂತ ಒಂದು ಪಪ್ಪಾಯ ಮರದ ಕೆಳಗೆ ಅದು ನಡೆಯಿತು. ದೂರದಲ್ಲಿ ಎರಡು ತಾಳೆ ಮರಗಳಿಗೆ ಕಟ್ಟಿದ ಉದ್ದನೆಯ ಬಿದುರುಗಳಿಂದ ವಯರ್ ಇಳಿದು ಬಂದು ಜಾರ್ಜ್ ಮಾಸ್ಟರಿನ ಪ್ರತ್ಯೇಕ ಓದುವ ಕೋಣೆಯ ರೇಡಿಯೊಗೆ ಹೋಯಿತು. 

ಮಿಸಸ್ ಜಾರ್ಜ್ ಎಲ್ಲರಿಗೂ ಅಳೆದು ಟೇಯನ್ನು ಕಪ್ಪಿಗೆ ಸುರಿದು ಕೊಟ್ಟರು. ತೆಳುವಾಗಿ ಸಕ್ಕರೆ ಉದುರಿಸಿದ ಉದ್ದನೆಯ ಚೌಕಾಕಾರದ ಬಿಸ್ಕತ್ತುಗಳು, ಒಂದು ಪಿಂಗಾಣೆ ತಟ್ಟೆಯಲ್ಲಿಟ್ಟು ನೀಡಲಾಯಿತು. ಅವು ಕಚ್ಚಿದ ಕೂಡಲೇ ಕರಗಿ ಹೋಗುವ ಗುಣವುಳ್ಳದ್ದಾಗಿದ್ದವು. 

ಇದ್ದಕ್ಕಿದ್ದಂತೆ ಜಾರ್ಜ್ ಮಾಸ್ಟರ್ ಮಗಳನ್ನು ನೋಡಿ ಗಿಟಾರ್ ನುಡಿಸುವಂತೆ ಕೇಳಿಕೊಂಡರು. 

“ಓ, ಡ್ಯಾಡಿ” ಎಂದು ಅವಳು ಬೇಸರದಿಂದ, ಅದನ್ನು ತೆಗೆದುಕೊಂಡು ಬಂದಳು. ಕಾಲ ಮೇಲೆ ಕಾಲು ಹಾಕಿಕೊಂಡು ಗುಳಿಯಾಗಿದ್ದ ಬಿದಿರಿನ ಕುರ್ಚಿಯ ಮೇಲೆ ಮುಜುಗರದಿಂದ ಕುಳಿತು ಗಿಟಾರ್ ನುಡಿಸುತ್ತಾ ಹಾಡಿದಳು. ಅವಳ ಸ್ಕರ್ಟ್ ಮೇಲಕ್ಕೆ ಸರಿದು ಸೂರ್ಯ ಬೀಳದೆ ಕಾಪಿಟ್ಟ ಒಳ ತೊಡೆಯ ಬಿಳಿಯ ಭಾಗವನ್ನು ಕಣ್ಣ ನೋಟಕ್ಕೆ ತಂದಿತು. ‘ನನ್ನ ಕಣ್ಣಿಗೆ ನಕ್ಷತ್ರ ಬೀಳಲು ಅನುಮತಿಸ ಬೇಡ’ ಎಂದು ಪ್ರಾರಂಭವಾಯಿತು ಆ ಹಾಡು. Love blooms at night, in day light it dies  (ಪ್ರೇಮ ರಾತ್ರಿ ಅರಳುತ್ತದೆ; ರಾತ್ರಿ ಸಾಯುತ್ತದೆ) ಎಂಬ ಸಾಲುಗಳು ನನಗಾಗಿ ಜೋಡಿಸಿದಂತೆ ಕಂಡವು. ಸಂಗೀತಕ್ಕೆ ಸ್ವಲ್ಪವೂ ಹೊಂದಿಕೊಳ್ಳದ ಒಂದು ಪಾರಿವಾಳದ ದನಿಯಲ್ಲಿ ಅವಳು ಹಾಡಿದ್ದು ಯಾವ ವಿಧವಾದ ಅಡೆತಡೆಗಳಿಲ್ಲದೇ ನೇರವಾಗಿ ನನ್ನ ಎದೆಯೊಳಗೆ ಇಳಿಯಿತು. 

ಹೀಗೊಂದು ಅನ್ಯೋನ್ಯವಾದ ಸಂಸಾರವನ್ನು ನನ್ನ ಜೀವನದಲ್ಲಿ ಕಂಡಿರಲಿಲ್ಲ. ಮಿಸಸ್ ಜಾರ್ಜ್ ಅಡ್ಡಕ್ಕೆ ಹಾಕಿದ್ದ ದಾವಣಿಯನ್ನು ತಾಳೆ ಗರಿಯ ಬೀಸಣಿಗೆಯ ಮಡಿಕೆಯಂತೆ ಜೋಡಿಸಿ ತೋಳು ಪಟ್ಟಿಯಲ್ಲಿ ಒಂದು ಬೆಳ್ಳಿ ಬ್ರೌಚ್ ನಿಂದ ಚುಚ್ಚಿದ್ದರು. ರೊಸಲಿನ್ ಕಣ್ಣುಗಳು ಹಿಂದೆ ನೋಡಿದ್ದಕ್ಕಿಂತಲೂ ಈಗ ನೋಡಲು ನೀಳವಾಗಿ ಕಂಡವು. ಮುಖದಲ್ಲಿ ಇನ್ನೂ ಪ್ರಕಾಶ ಹೆಚ್ಚಾಗಿತ್ತು. ಜಾರ್ಜ್ ಮಾಸ್ಟರ್ ಕೈಗಳನ್ನು ಉಜ್ಜುತ್ತಾ ಮುಂದೆ ಬರಲಿರುವ ಒಳ್ಳೆಯ ಆಹಾರಗಳ ಬಗ್ಗೆಯ ಆಲೋಚನೆಯಲ್ಲಿ ಉತ್ಸಾಹದಿಂದ ಮಾತನಾಡಿದರು. ಅವರು ಮಾಡಿದಂತೆ ನಾನೂ ಊಟದ ಮೇಜಿನ ಸುತ್ತ ಕುಳಿತುಕೊಂಡೆ. “ಜಪ ಮಾಡುವ” ಎಂದು ಅವರು ಪ್ರಾರಂಭಿಸಿದರು. 

“ನಮ್ಮ ದೇವರಾದ ಏಸು ಕ್ರಿಸ್ತನೇ, ನಿನ್ನ ಅಪರಿಮಿತವಾದ ಕೃಪೆಯಿಂದ ನಿನ್ನೆಯಂತೆಯೇ ಇಂದೂ ನಮಗೆ ದೊರೆತ ರೊಟ್ಟಿಗಾಗಿ ಇಲ್ಲಿ ಪ್ರಸನ್ನವಾಗಿರುವ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಅದೇ ರೀತಿ ಈ ರೊಟ್ಟಿಗೆ ಮಾರ್ಗವಿಲ್ಲದಿವರಿಗೂ, ದಾರಿ ತೋರಿಸು. ಭಾರ ಎಳೆಯುವವರಿಗೆ ದಣಿವಾರಿಸಿಕೊಳ್ಳುವಂತೆ  ಮಾಡುವವರೇ, ನಮ್ಮ ಭಾರವನ್ನು ಲಘುವಾಗಿಸು. ನಮ್ಮ ಜತೆ ಇಂದು ಕೂಡಿರುವ ಚಿಕ್ಕ ಗೆಳೆಯನನ್ನು ರಕ್ಷಿಸುವಂತವರಾಗಿ. ಅವರ ನಿರೀಕ್ಷೆಗಳೆಲ್ಲ ಸಿದ್ದಿಸಲಿ. ನಿಮ್ಮ ಮಹಿಮೆಯನ್ನು ನಾವು ಮುಂದೆ ತೆಗೆದುಕೊಂಡು ಹೋಗಲು  ಆಶೀರ್ವದಿಸು. ಆಮೆನ್.” 

ಸರಿಯಾದ ಗಳಿಗೆಯಲ್ಲಿ ನಾನೂ ‘ಅಮೆನ್’ ಎಂದು ಹೇಳಿದೆ. ಮೊದಲ ಸಲ ನನ್ನನ್ನೂ ಸಭೆಗೆ ಸೇರಿಸಿದ್ದು ನನಗೆ ಬಹಳ ಸಂತೋಷ ನೀಡಿತು. ನಾನು ಅಮೆನ್ ಹೇಳಿದಾಗ ತುಂಟತನದಿಂದ ನೋಡಿ ಅವಳು ಕಣ್ಣುಗಳನ್ನು ತೆಗೆಯದೆ ಅಲ್ಲೇ ನೆಟ್ಟಳು. 

ಆದರೆ ಹೀಗೆ ಸುಂದರವಾಗಿ ಪ್ರಾರಂಭವಾದ ರಾತ್ರಿ ಬಹಳ ಅಸಹ್ಯವಾಗಿ ಮುಗಿಯಿತು. 

ಊಟದ ಮೇಜಿನ ಸುತ್ತ ಇರುವ ಸಮಯಗಳಲ್ಲಿ ಸಂಭಾಷಣೆ ಬಹಳ ಮುಖ್ಯ. ಅದು ಸಂಪೂರ್ಣ ಶುದ್ಧವಾದ ಇಂಗ್ಲಿಷಿನಲ್ಲೇ ನಡೆಯಿತು. ಒಂದು ಪದ ತಮಿಳೋ, ಮಲೆಯಾಳವೋ ಔಷಧಿಗೂ ಸಹ ಇರಲಿಲ್ಲ. ಅವಳೋ ನದಿಗಿಂತಲೂ ಬಿರುಸಾಗಿ ಮಾತನಾಡುವವಳು. ನನ್ನದೋ ಕತ್ತಲಲ್ಲಿ ನಡೆಯುವಂತೆ ತಡವರಿಸಿಕೊಂಡು ಬರುತ್ತದೆ. ಆದ್ದರಿಂದ ಮಾತನ್ನು ಮಿತಿಯಾಗಿ ಇಟ್ಟುಕೊಳ್ಳುವ ಕಡ್ಡಾಯ ನನಗೆ. ಹಾಗೂ ಮಾತನಾಡ ಬೇಕಾದರೆ ಮಾತಿಗಿಂತ ಮೊದಲೇ ಉಸಿರಿನ ಗಾಳಿ ಬಂದು ಬೀಳುತ್ತಿತ್ತು. 

ಮತ್ತೊಂದು, ಪಿಂಗಾಣೆ ತಟ್ಟೆಯನ್ನು ನೋಡುತ್ತಾ ತಿನ್ನುವುದು ಇಲ್ಲಿ ತಡೆಮಾಡಲಾಗಿತ್ತು. ಬಗೆ ಬಗೆಯಾದ ಆಹಾರಗಳು ಮೇಜಿನ ಮೇಲೆ ಹರಡಿರುವುದರಿಂದ “ಅದನ್ನು ದಯವಿಟ್ಟು ಪಾಸ್ ಮಾಡಿ”, “ಆ ರೊಟ್ಟಿಯನ್ನು ಸ್ವಲ್ಪ ಈ ಕಡೆ ಜರುಗಿಸಿ” ಎಂದು ಹೇಳುತ್ತಲೇ ತಿನ್ನುವರು. ಇದೂ ಸಹ ನನಗೆ ಹೊಸದೆ. ಅವಿಯಲ್ ಎಂಬ ಹೊಸ ಬಗೆಯ ಪದಾರ್ಥದ ರುಚಿಯಲ್ಲಿ ನಾನು ಮುಳುಗಿದ್ದೆ. 

ಆಗ ಜಾರ್ಜ್ ಮಾಸ್ಟರ್ ಏನನ್ನೋ ಇಂಗ್ಲಿಷಿನಲ್ಲಿ ಕೇಳಿದರು. ಅದಕ್ಕೆ ಅವಳು ಸಣ್ಣ ದನಿಯಲ್ಲಿ ಉತ್ತರಿಸಿದಳು. ಆ ಮಾತಿನ ಪ್ರಾಮುಖ್ಯತೆ ಮೊದಲೇ ಗೊತ್ತಿದ್ದರಿಂದ ನಾನು ಕಿವಿ ಕೊಟ್ಟು ಗಮನಿಸಲು ತಪ್ಪಿದೆ. 

ಇದ್ದಕ್ಕಿದ್ದಂತೆ ಚಪ್ಪಟೆಯಾದ ಬಿಳಿಯ ಸೂರು ಅದರುವಂತೆ ಜಾರ್ಜ್ ಮಾಸ್ಟರ್ ಕಿರುಚಿದರು. ನಾನು ನಡುಗಿಹೋದೆ. ಗ್ಲಾಸಿನಲ್ಲಿ ನೀರು ನಾಟ್ಯವಾಡಿತು. ಅವಳು ಸ್ವಲ್ಪ ಹಿಂದೆ ತುಂಟತನದಿಂದ ಕಣ್ಣುಗಳನ್ನು ಕೆಳಮಾಡಿ, ತಟ್ಟೆಯನ್ನು ನೋಡುತ್ತಾ ಇದ್ದಳು. ಕಣ್ಣ ರೆಪ್ಪೆಯಲ್ಲಿ ಒಂದೆರಡು ಮುತ್ತುಗಳು ಸೇರಿ ಮಿನುಗಿದವು. 

ಮಿಸಸ್ ಜಾರ್ಜ್ ಪರಿಸ್ಥಿತಿಯನ್ನು ಸಂಬಾಳಿಸಲು ಕಣ್ಣುಗಳಿಂದ ಸನ್ನೆ ಮಾಡಿ ನೋಡಿದಳು. ಆಗಲಿಲ್ಲ. ಹಾಗೂ ಜಾರ್ಜ್ ಮಾಸ್ಟರ್ ಮುಖದಲ್ಲಿ ಕೋಪ ಬುಸುಗುಟ್ಟಿತು. ಶಾಂತವಾಗಲು ಹಲವು ಗಂಟೆಗಳೇ ಬೇಕಾಯಿತು. 

ಅಂದು ರಾತ್ರಿ ನಾನು ಬಹಳ ಸಮಯ ಹೊರಳಾಡುತ್ತಿದ್ದೆ. ಗಾಳಿಯ ಸಣ್ಣ ಚಲನೆಯೂ ಬಾಗಿಲು ತೆರೆಯುತ್ತದೆಯೇ ಎಂಬುದನ್ನೂ ಎಚ್ಚರಿಕೆಯಿಂದ ಗಮನಿಸಿದೆ. ತೆರೆಯಲಿಲ್ಲ. ಹೇಗೋ ದಣಿದು ತಡರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಯಿತು.  ಕಣ್ಣಿಗೆ ಕತ್ತಲು ಇನ್ನೂ ಅಭ್ಯಾಸವಾಗಲಿಲ್ಲ. ಕಿವಿಗಳನ್ನು ಚುರುಕಾಗಿಸಿ ಕೊಂಡೆ.  ಪಿಸುಮಾತಿನಲ್ಲಿ ಒಂದು ಹೆಣ್ಣಿನ ದನಿ, “ಸ್ವಲ್ಪ ಪ್ರಯತ್ನಿಸಿ, ಪ್ಲೀಸ್” ಎಂದಿತು. 

ಗಂಡು ದನಿ ಏನನ್ನೋ ಮುಲುಕಿತು. ಮತ್ತೆ ನಿಶಬ್ಧ. ಸ್ವಲ್ಪ ಸಮಯದ ನಂತರ ಅದೇ ಹೆಣ್ಣು ದನಿ “ಸರಿ ಬಿಡಿ” ಎಂದಿತು ಕೋಪದಿಂದ. ನಂತರ ಬಹಳ ಸಮಯ ಕಾದಿದ್ದರೂ ಏನೂ ಕೇಳಿಸಲಿಲ್ಲ. 

ಹೇಳಿದಂತೆ ಮುಂಜಾನೆಯೇ ಸೆಲ್ವನಾಯಕಮ್ ಮಾಸ್ಟರ್ ಬಂದರು. ನೋಂದಣಿ ಕೆಲಸವನ್ನು ಬೇಗನೆ ಮುಗಿಸಿ ನನಗೆ ಸಭಾರತ್ನಂ ವಿದ್ಯಾರ್ಥಿ ನಿಲಯದಲ್ಲಿ ಜಾಗ ಒದಗಿಸಿಕೊಟ್ಟರು. 

ಎಲ್ಲರೂ ಅದು ಒಳ್ಳೆಯ ವಿದ್ಯಾರ್ಥಿ ನಿಲಯ ಎಂದು ಒಪ್ಪಿಕೊಂಡರು. ನನಗೆ ಮೀಸಲಿಟ್ಟ ಕೋಣೆಗೆ ಇನ್ನೆರಡು ವಿದ್ಯಾರ್ಥಿಗಳು ಬರುತ್ತಾರೆ ಎಂದರು. ತಕ್ಷಣ ಒಂದು ಅನ್ಯ ದೇಶದ ಸೈನ್ಯದಂತೆ ನಾನು ಗಡಿಗಳನ್ನು ಹಿಡಿದಿಟ್ಟುಕೊಂಡೆ. 

ನಾನು ಪೆಟ್ಟಿಗೆಯನ್ನು ತೆಗೆದುಕೊಳ್ಳಲು ಹಿಂತಿರುಗಿ ಜಾರ್ಜ್ ಮಾಸ್ಟರ್ ಮನೆಗೆ ಹೋದಾಗ ಅದು ತೆರೆದಿತ್ತು. ಒಬ್ಬ ಕೆಲಸದ ಹೆಣ್ಣು ಹೊರಗೆ ಕಟ್ಟೆಯ ಮೇಲೆ ಒಂದು ದೊಡ್ಡ ಮೀನನ್ನು ಇಟ್ಟುಕೊಂಡು ಕತ್ತರಿಸುತ್ತಿದ್ದಳು. ಅದರ ಕಣ್ಣುಗಳು ಒಂದು ಕಡೆ ಬಾಗಿ ನನ್ನನ್ನೇ ನೋಡಿತು. ಆದರೆ ಅವಳು ನನ್ನ ಕಡೆ ತಿರುಗಲಿಲ್ಲ. ನನ್ನ ಕೋಣೆಯ ಬಾಗಿಲು ಸ್ವಲ್ಪ ಹೆಚ್ಚಾಗಿಯೇ ತೆರೆದಿತ್ತು. ಆದರೂ ನಾನು ಅಲ್ಲಿ ಕಲಿತ ಶಿಷ್ಟಾಚಾರದಂತೆ ತೋರು ಬೆರಳನ್ನು ಮಡಚಿ ಟಕ್ ಟಕ್ ಎಂದು ಎರಡು ಸಲ ಕುಟ್ಟಿ ಒಳಗೆ ಹೋದೆ. ಹಾಸಿಗೆ ಹಾಗೆಯೇ ಇತ್ತು. ನನ್ನ ಪೆಟ್ಟಿಗೆಯೂ ಪುಸ್ತಕದ ಚೀಲವೂ ಇಟ್ಟ ಜಾಗದಲ್ಲೇ ಇದ್ದವು. ಅವನ್ನು ತೆಗೆದುಕೊಂಡ ಮೇಲೆ ಕೋಣೆಯ ಸುತ್ತ ನೋಡಿದೆ. ನನ್ನ ಬದುಕಿನಲ್ಲಿ ನನಗೆ ಮತ್ತೆ ಇಲ್ಲಿಗೆ ಬರುವ ಅವಕಾಶ ಸಿಗದು ಎನ್ನುವುದು ತಿಳಿಯಿತು. 

ತಕ್ಷಣ ಒಂದು ನೆನಪಾಗಿ ಮರದ ಪೆಟ್ಟಿಗೆಯನ್ನು ಇಣಕಿ ನೋಡಿದೆ. ನಾಲ್ಕು ಮರಿಗಳೇ ಇದ್ದವು. ತಾಯಿ ಬೆಕ್ಕು ಮತ್ತೆ ಮರಿಗಳನ್ನು ಹೊತ್ತುಕೊಂಡು ಹೋಗ ತೊಡಗಿದೆ.  ಕಪ್ಪು ಮರಿ ಹೊರಟುಹೋಯಿತು. ಉಳಿದ ನಾಲ್ಕು ತಮ್ಮ ಸರದಿಗಾಗಿ ಕಾಯುತ್ತಿದ್ದವು. ಅವು ಮೆತ್ತಗೆ, ಬೆಚ್ಚಗೆ ಇದ್ದವು. ರೊಸಲಿನ್ ಎಂದು ಹೇಳುತ್ತಾ ಪ್ರತಿ ಅಕ್ಷರಕ್ಕೂ ಒಂದು ಮರಿಯನ್ನು ಮುಟ್ಟಿ ನೋಡಿದೆ. 

ಹಿಂತಿರುಗುವ ದಾರಿಯಲ್ಲಿ ಅವಳು ಮಾತನಾಡಿದ ಮೊದಲ ಪದ ನೆನಪಾಯಿತು. ‘ಹೆದರ್ಕೊಂಡೆಯಾ?’ ಏನೇ ಯೋಚಿಸಿದರೂ ಕೊನೆಯ ಪದ ನೆನಪಿಗೆ ಬರಲು ನಿರಾಕರಿಸಿತು. 

ಮಳೆ ಬಿಟ್ಟ ನಂತರವೂ ಮರದ ಎಲೆಗಳು ತಲೆ ಮೇಲೆ ಬೀಳುತ್ತಿದ್ದವು. ಬ್ರಹ್ಮಾಂಡವಾದ ಕಂಬಗಳನ್ನು ಕಟ್ಟಿ ನಿಲ್ಲಿಸಿದ ಆ ಶಾಲೆಗಳಲ್ಲೂ, ಅದರ ಸುತ್ತ ಇರುವ ಹಳ್ಳಿಗಳಲ್ಲೂ,  ಅದರಾಚೆಗಿನ ನಗರಗಳಲ್ಲೂ ಇರುವ ಅಷ್ಟೂ ಜನಗಳಲ್ಲಿ ನನಗೆ, ನನ್ನೊಬ್ಬನಿಗೆ ಮಾತ್ರ ಆ ಕಪ್ಪು ಬೆಕ್ಕು ಮರಿಯ ಹೆಸರು ಅರಿಸ್ಟಾಟಲ್ ಎಂಬುದು ಗೊತ್ತು. ಆ ಭಾವನೆ ಸಂತೋಷ ತಂದಿತು. 

ರೊಸಲಿನ್ ಎಂಬ ಅವಳ ಅದ್ಭುತವಾದ ಹೆಸರನ್ನು Rosalin ಎಂದು ಬರೆಯುವುದೇ ಅಥವಾ Rosalyn ಎಂದು ಬರೆಯುವುದೇ ಎಂಬ ಬಹಳ ಸಾಮಾನ್ಯವಾದ ವಿಷಯವನ್ನೂ ಸಹ ನಾನು ತಿಳಿಯಲು ತಪ್ಪಿದೆ. 

ಬಹಳ ಸಮಯದ ನಂತರ ಅವಳು ಕೇರಳದಿಂದ ಬೇಸಿಗೆ ರಜೆ ಕಳೆಯಲು ಬಂದಿದ್ದಳು ಎಂದೂ, ನಂತರ ಓದನ್ನು ಮುಂದುವರೆಸಲು ಹಿಂತಿರುಗಿ ಹೋದಳು ಎಂದೂ ಊಹಿಸಿಕೊಂಡೆ. ಎಂದಿನಂತೆ ಬಹಳ ತಡವಾಗಿಯೇ ಈ ಊಹೆಯನ್ನು ಮಾಡಿದೆ. 

ನಾನು ಹೊಸದಾಗಿ ಸೇರಿದ ಆ ಶಾಲೆಯಲ್ಲಿ ಕೆಮಿಸ್ಟ್ರಿ (ರಸಾಯನ ಶಾಸ್ತ್ರ) ಮೇಷ್ಟ್ರು ವಿಲಿಯಂಸ್ ನ ದಬ್ಬಾಳಿಕೆ ನಡೆಯುತ್ತಿತ್ತು. ಮೆಂಟಲೇವ್ ಎಂಬ ರಷ್ಯನ್ ಮಾಡಿದ ಪಿತೂರಿಯಿಂದ ನಾವು ಎಲಿಮೆಂಟ್ (ಅಂಶ, ಘಟಕ) ಪಟ್ಟಿಯನ್ನು ಉರು ಹಚ್ಚಬೇಕೆಂದು ಹಟ ಮಾಡಿದ. ಆಗ 112 ಅಂಶಗಳು ಇರಲಿಲ್ಲ. 92 ಇದ್ದರೂ ನನ್ನಿಂದ ಮನನ ಮಾಡಲಾಗಲಿಲ್ಲ. ತೂಕದಲ್ಲಿ ಕಡಿಮೆಯಾದದ್ದು ಹೈಡ್ರಜನ್ ಎಂದೋ, ಹೆಚ್ಚಾದದ್ದು ಯುರೇನಿಯಮ್ ಎಂಬುದೋ ನೆನಪಿನಿಂದ ಜಾರುತ್ತಲೇ ಇತ್ತು. ಮೊದಲೇ ನಾಮಕರಣ ಮಾಡಿ ನಂತರ ಕಂಡು ಹಿಡಿಯಲಾದದ್ದು ಜೆರ್ಮೇನಿಯಂ ಎಂಬುದು ನೆನಪಿಗೆ ಬರಲು ನಿರಾಕರಿಸಿತು. ಹೀಗೆ  ಎರಡು ವರ್ಷಗಳು ಅವನ ಸಂಪೂರ್ಣ ಅತೃಪ್ತಿಗೆ ತುತ್ತಾಗಿದ್ದೆ. 

ಸಹಾನುಭೂತಿಯಿಂದಲೋ ಅಥವಾ ದೊಡ್ಡತನದಿಂದ ಮರೆತೋ ನನಗೆ E ಗೆ ಹೆಚ್ಚಾದ ಅಂಕವನ್ನು ಆತ ನೀಡಲು ಪ್ರಯತ್ನಿಸಲಿಲ್ಲ. ಈ ಕ್ರೌರ್ಯತೆಯ ಉಚ್ಚದಲ್ಲಿ ಒಂದೆರಡು ಸಲ ನಾನು ಮಲಗುವ ಮುನ್ನ ಅವನನ್ನು ನೆನಪು ಮಾಡಿಕೊಳ್ಳದೆ ಇದ್ದದ್ದೂ ಉಂಟು. 

ಇವೆಲ್ಲ ನಡೆದು ಬಹಳ ವರ್ಷಗಳು ಕಳೆದುಹೋದೆವು. ಹಲವು ದೇಶಗಳನ್ನು ಸುತ್ತಾಡಿದ್ದೇನೆ. ಹಲವು ಭೂಪಟಗಳನ್ನು ಪಾಠವಾಗಿಸಿದ್ದೇನೆ. ಹಲವು ಮುಖಗಳ ರಸಿಕನಾಗಿದ್ದೇನೆ. ಹಲವು ಗಾಳಿಗಳನ್ನು ಶ್ವಾಸಿಸಿದ್ದೇನೆ. ಹಲವು ಬಾಗಿಲುಗಳನ್ನು ತೆರೆದಿದ್ದೇನೆ. 

ಆದರೂ ಕೆಲವು ಸಮಯ ಕಚ್ಚಿದ ಕೂಡಲೇ ಕರಗುವ, ಹಿತವಾಗಿ ಸಕ್ಕರೆ ಉದುರಿಸಿದ ಗರಿಗರಿಯಾಗಿ ರುಚಿಸುವ, ಒಂಭತ್ತು ರಂಧ್ರಗಳನ್ನುಳ್ಳ ಉದ್ದನೆ ಚೌಕಾಕರದ ಬಿಸ್ಕಟ್ಟನ್ನು ತಿನ್ನುವಾಗ ಒಂದು ಗಿಟಾರಿನ ಪರಿಮಳ ಬರುವುದನ್ನು ನನ್ನಿಂದ ತಪ್ಪಿಸಲು ಸಾಧ್ಯವಾಗದೆ  ಇದ್ದೇನೆ.  

ನಾನೇಕೆ ಅನುವಾದಿಸುತ್ತೇನೆ ? 

ಈ  ಪ್ರಶ್ನೆಗೆ ಏನು ಉತ್ತರ ಕೊಡುವುದು? ಈವರೆಗೆ ನನಗೆ ನಾನು ಕೇಳಿಕೊಳ್ಳದ ಪ್ರಶ್ನೆ! ಬೇರೆಯವರು ಕೇಳುವಾಗ ಸ್ವಲ್ಪ ಕಕ್ಕಾಬಿಕ್ಕಿಯಾಗುವುದು ಸಹಜ. ಉತ್ತರ ನೀಡಬೇಕಾದ ಹೊಣೆ ಇದೆ. ರಿಟೈರ್ಡ್ ಆದ ಮೇಲೆ ಅದೃಷ್ಟವಶಾತ್ ದೊರಕುವ ಆರೋಗ್ಯವಾದ ಬೋನಸ್ ಬದುಕನ್ನು ಹೇಗೆ ಕಳೆಯುವುದು? ಸ್ವಲ್ಪ ಕಾಲ ಹೆಗಲಿಗೆ ಕ್ಯಾಮರಾ ಬ್ಯಾಗ್ ತೂಗಾಕಿಕೊಂಡು ಊರೂರು ತಿರುಗಿದ್ದಾಯಿತು. ಜೇಬೂ ಖಾಲಿಯಾಯಿತು. ಮುಂದೇನು? ಎಂಬ ಪ್ರಶ್ನೆ ಎದ್ದು ನಿಂತಾಗ ಫೇಸ್ ಬುಕ್ನಲ್ಲಿ ಒಂದಿಷ್ಟು ತಮಿಳು ಕವನಗಳನ್ನು ಕನ್ನಡಕ್ಕೂ,  ಕನ್ನಡ ಕವನಗಳನ್ನು ತಮಿಳಿಗೂ ಅನುವಾದಿಸಿದ್ದು ಆಕಸ್ಮಿಕವಾಗಿ. ಅನೇಕರು ಮೆಚ್ಚಿಕೊಂಡಾಗ, ಧೈರ್ಯ ತಂದುಕೊಂಡು ಲಂಕೇಶರ ಸುಮಾರು ನಾನೂರು  ‘ನೀಲೂ ಕಾವ್ಯ’ ಗಳನ್ನು ತಮಿಳಿಗೆ ಅನುವಾದಿಸಿ, ಹರ ಸಾಹಸ ಮಾಡಿ ಪ್ರಕಟಿಸಿದ್ದಾಯಿತು.

ಹೀಗೆಯೇ ಮುಂದುವರೆದ ನನ್ನ ಅನುವಾದ ಕೆಲಸಗಳು ಕಳೆದ 9 ವರ್ಷಗಳಲ್ಲಿ ಸುಮಾರು ಇಪ್ಪತ್ತೈದು ಕನ್ನಡ ಕೃತಿಗಳನ್ನು ತಮಿಳಿಗೂ, ಹದಿನೈದು ತಮಿಳು ಕೃತಿಗಳನ್ನು ಕನ್ನಡಕ್ಕೂ ಅನುವಾದಿಸುವಂತೆ ಮಾಡಿತು.  ಹೀಗೆ ಆಕಸ್ಮಿಕವಾಗಿ ಈ ಕ್ಷೇತ್ರಕ್ಕೆ  ಬಂದು ಅನುವಾದ ಮಾಡುತ್ತಾ, ಮಾಡುತ್ತಾ ಆ ಕೆಲಸ ನನ್ನನ್ನು ಅದರೊಳಗೆ  ಸೆಳೆದುಕೊಂಡಿತು. ಅನುವಾದ ಮಾಡುವುದು ಖುಷಿ ಕೊಡ ತೊಡಗಿತು.  ಹೊತ್ತು ಕಳೆಯುವುದು ಸುಲಭವಾಯಿತು. ಪ್ರಡಕ್ಟಿವ್ ಆಗಿ ಏನೋ ಮಾಡುತ್ತಿದ್ದೇನೆ ಎಂಬ ಸಮಾಧಾನ ನೀಡಿತು.  ಇದರಿಂದ ಜೇಬು ತುಂಬದಿದ್ದರೂ, ಯಾವಾಗಲಾದರೂ ಬೇಕೆಂದಾಗ ಗೆಳೆಯರೊಂದಿಗೆ ಕಾಫಿ, ತಿಂಡಿ, ಬಿಯರ್ ಜತೆ ಕಾಲ ಕಳೆಯಲು ಬರವಿಲ್ಲ ಎಂದಾಯಿತು.   

ಇದರಿಂದ ಏನಾದರೂ ಸಕಾರಾತ್ಮಕ ಕೆಲಸ ನಡೆಯುತ್ತಿದೆ, ಸಾಹಿತ್ಯ ಸೇವೆ ಮಾಡುತ್ತಿದ್ದೇನೆ, ತಮಿಳು – ಕನ್ನಡದ ಕೊಂಡಿಯಾಗಿದ್ದೇನೆ ಎಂದು ಉಳಿದವರು ಅಂದು ಕೊಂಡರೆ ನನ್ನ ಅಭ್ಯಂತರವಿಲ್ಲ. ನಾನಂತೂ ಆ ಉದ್ದೇಶದಿಂದ ಏನನ್ನೂ ಮಾಡುತ್ತಿಲ್ಲ. ಅವೆಲ್ಲವೂ ನಡೆಯುತ್ತಿದ್ದರೆ ಅದಕ್ಕಿಂತ ಮಿಗಿಲಾದ ಖುಷಿ ಬೇರೊಂದಿಲ್ಲ. ಹಾಗೇನಾದರೂ ನಡೆಯುತ್ತಿದ್ದರೇ ಕನ್ನಡ, ತಮಿಳಿನ ಹಲವು ಸಾಹಿತ್ಯಾಸಕ್ತರ ಪ್ರೋತ್ಸಾಹವೂ ಇದೆ ಎಂಬುದನ್ನು  ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತೇನೆ. ಅವರನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳುತ್ತೇನೆ. ಕೆಲವು ಸಮಯ ಪ್ರಯಾಣ ಆಕಸ್ಮಿಕವಾಗಿ ತಿರುವೊಂದನ್ನು ತಂದು ಬಿಡುತ್ತದೆ. ನನ್ನ ಪಾಲಿಗೆ ಅದು ಒಂದು ಸುಂದರವಾದ ತಿರುವಾಗಿದೆ. ಸಧ್ಯಕ್ಕೆ ಅದನ್ನು ಎಂಜಾಯ್ ಮಾಡುತ್ತಾ ನಡೆಯುತ್ತಿದ್ದೇನೆ. ಅದರಲ್ಲಿ ಅನೇಕರ ಸಹಯೋಗವೂ, ಪಾಲೂ ಇದೆ. Otherwise it is just a pleasant accident for me. 

                                                                        

‍ಲೇಖಕರು Admin

30 September, 2022

1 Comment

  1. ಭವತಾರಿಣಿ

    ಹಾಗೆಯೇ ಆಕೆ ದೇಹವನ್ನು ಅವಧಾನಿಸುವ ಕುತೂಹಲವನ್ನೂ ಹೆಚ್ಚಿಸಿತು. ಇದು ಒಂದು ನೂತನವಾದ ತಂತ್ರವಾಗಿಯೇ ನನಗೆ ಕಂಡಿತು. 🙂 Simply superb sir

    ಜೀವನ ಪೂರ್ತಿ ಪರಾಮರಿಸಿದರೂ ಒಂದು ಹೂ ಸಹ ಅರಳದ ಗಿಡಗಳನ್ನು ಕುಂಡಗಳಲ್ಲಿ ಇಟ್ಟು ಬೆಳೆಸುತ್ತಿದ್ದರು.

    ಅವಳ ನಂತರ ಅದು ಯಾರಿಗೆ ಸ್ವಂತವಾಗುತ್ತದೆ ಎಂದು ನಿರ್ಧಾರವಾಗುವ ಮೊದಲು ಜಾರ್ಜ್ ಮಾಸ್ಟರ್ ಹಿಂತಿರುಗಿದರು.

    ಹೊರಗೆ ಅಂಗಳಕ್ಕೆ ನಾನು ಬಂದಾಗ ಅಂಚಿನಲ್ಲಿ ಒದ್ದೆಯಾಗಿದ್ದ ಒಂದು ಉದ್ದನೆಯ ಕಾಗದದ ಚೀಲದೊಳಗೆ ಅವಳು ಕೈಬಿಟ್ಟು ಏನೋ ಒಂದನ್ನು ತೆಗೆದು ಬಾಯಿಗೆ ಹಾಕಿಕೊಂಡು ಮೆಲ್ಲುತ್ತಿದ್ದಳು. ಅವಳ ಕೈ ಹುತ್ತದೊಳಗೆ ಹಾವು ನುಸುಳುವಂತೆ ಹೋಗುವುದು ಬರುವುದು ಮಾಡುತ್ತಿತ್ತು. ಹೆಸರು ತಿಳಿಯದ ಒಂದು ಅವಳ ಬಾಯೊಳಗೆ ಬೀಳುತ್ತಿತ್ತು.

    ಸಂಗೀತಕ್ಕೆ ಸ್ವಲ್ಪವೂ ಹೊಂದಿಕೊಳ್ಳದ ಒಂದು ಪಾರಿವಾಳದ ದನಿಯಲ್ಲಿ ಅವಳು ಹಾಡಿದ್ದು ಯಾವ ವಿಧವಾದ ಅಡೆತಡೆಗಳಿಲ್ಲದೇ ನೇರವಾಗಿ ನನ್ನ ಎದೆಯೊಳಗೆ ಇಳಿಯಿತು.

    ಅದು ಸಂಪೂರ್ಣ ಶುದ್ಧವಾದ ಇಂಗ್ಲಿಷಿನಲ್ಲೇ ನಡೆಯಿತು. ಒಂದು ಪದ ತಮಿಳೋ, ಮಲೆಯಾಳವೋ ಔಷಧಿಗೂ ಸಹ ಇರಲಿಲ್ಲ.

    ಒಂದು ಅನ್ಯ ದೇಶದ ಸೈನ್ಯದಂತೆ ನಾನು ಗಡಿಗಳನ್ನು ಹಿಡಿದಿಟ್ಟುಕೊಂಡೆ.

    ರೊಸಲಿನ್ ಎಂಬ ಅವಳ ಅದ್ಭುತವಾದ ಹೆಸರನ್ನು Rosalin ಎಂದು ಬರೆಯುವುದೇ ಅಥವಾ Rosalyn ಎಂದು ಬರೆಯುವುದೇ ಎಂಬ ಬಹಳ ಸಾಮಾನ್ಯವಾದ ವಿಷಯವನ್ನೂ ಸಹ ನಾನು ತಿಳಿಯಲು ತಪ್ಪಿದೆ.

    ನಾನೇಕೆ ಅನುವಾದಿಸುತ್ತೇನೆ? – ultimate sir

    ಕಚ್ಚಿದ ಕೂಡಲೇ ಕರಗುವ, ಹಿತವಾಗಿ ಸಕ್ಕರೆ ಉದುರಿಸಿದ ಗರಿಗರಿಯಾಗಿ ರುಚಿಸುವ, ಒಂಬತ್ತು ರಂಧ್ರಗಳನ್ನುಳ್ಳ ಉದ್ದನೆ ಚೌಕಾಕರದ ಬಿಸ್ಕಟ್ಟನ್ನು ತಿನ್ನುವಾಗ ಒಂದು ಗಿಟಾರಿನ ಪರಿಮಳದ ನಿರೀಕ್ಷೆಯಲ್ಲಿ ಇರುವಂತೆಯೇ ಇರುತ್ತೇನೆ… ಇಂಥದೊಂದು ಕಥೆ ಓದಲು… Thank You

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading