ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಾಭಾರತ ಪ್ರಜಾಪ್ರಭುತ್ವವಾದಿಯಾದಾಗ..

ಡಾ ಎಚ್ ಲಕ್ಷ್ಮೀನಾರಾಯಣಸ್ವಾಮಿ ಅವರ ‘ತೊಗಲ ಚೀಲದ ಕರ್ಣ’

‘ಅನ್ನಪೂರ್ಣ ಪಬ್ಲಿಷಿಂಗ್ ಹೌಸ್’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಬಗೆಗಿನ ಎಂ ವೇದಾ೦ತ ಏಳಂಜಿ ಅವರ ಅನಿಸಿಕೆ ಇಲ್ಲಿದೆ.

ಡಾ ಎಂ ವೇದಾ೦ತ ಏಳಂಜಿ

ಭಾರತದ ಇತಿಹಾಸ ಉದ್ಧಕ್ಕೂ ಸಾಮಾಜಿಕ ಪರಿವರ್ತನೆಗಳಿಗೆ ಪ್ರಯತ್ನಿಸಿದ ಮಹನೀಯರೆಲ್ಲರೂ ಬ್ರಾಹ್ಮಣ್ಯದ ಹುನ್ನಾರ, ತತ್ವ ಸಿದ್ಧಾಂತಗಳ ವಿರೋಧಿಸಿದವರಾಗಿದ್ದಾರೆ. ಈ ವಿರೋಧವು ೨೧ನೇ ಶತಮಾನದಲ್ಲಿಯೂ ಮುಂದುವರೆದಿದೆಯೆ೦ದರೆ, ಅದರ ಐಡಿಯಲಾಜಿ ಪ್ರಜಾಪ್ರಭುತ್ವದ ಸಮಾಜಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ಅರಿಯಬಹುದು. ಸಾವಿರಾರು ವರ್ಷಗಳ ಕಾಲ ಮೌಢ್ಯ, ಜಾತಿಪದ್ಧತಿ, ಲಿಂಗತಾರತಮ್ಯವನ್ನು ನಿರಂತರವಾಗಿ ಪೋಷಿಸಿಕೊಂಡು ಬಂದವರ ಕಥೆಗಳಾಗಿ, ಮೇಲು-ಕೀಳು, ಜನಾಂಗೀಯ ಬೇಧಗಳನ್ನು ಬಿಂಬಿಸುತ್ತಾ ಬರೆದ ಪುರಾಣ ಕಾವ್ಯಗಳು ಯಾವ ಸಮಾನತೆಯ ತತ್ವಗಳನ್ನು ಸಾರಲಿಲ್ಲ. ಆದರೂ ರಾಮಾಯಣ, ಮಹಾಭಾರತಗಳಿಗೆ ದೇಶ ವ್ಯಾಪಿ ಪ್ರಚಾರ ಪಡೆದು ದೈವಿಕಥೆಗಳಂತೆ ಬಿಂಬಿತಗೊ೦ಡವೇ ಹೊರತು ಸಾಮಾಜಿಕ ಕ್ರಾಂತಿಗೆ ಕಾರಣವಾಗಲಿಲ್ಲ. ಜಾಗತೀಕರಣದ ಕಾಲಘಟ್ಟಕ್ಕೆ ಅಂದಿನ ಪುರಾಣದ ಶೋಷಿತ ಪಾತ್ರಗಳು ಹೊಸ ಅರಿವು ಪಡೆದು ಸಂವಿಧಾನದ ಆಶಯದಂತೆ ಚರ್ಚೆಗೆ ಒಳಪಟ್ಟಿವೆಯಾದರೂ ಸಾಹಿತ್ಯಿಕ ಕೃತಿಗಳಾಗಿ ರಚನೆಗೊಂಡಿರಲಿಲ್ಲ. ಸಾಹಿತ್ಯದ ಬೆಳವಣಿಗೆಯನ್ನು ಗಂಭೀರವಾಗಿ ಅರ್ಥೈಸಿಕೊಂಡವರು ಹೊಸತನದ ಜಾಡು ಹಿಡಿದು ಆಯಾ ಪ್ರಕಾರಗಳಲ್ಲಿ ಹೊಸ ಮಾದರಿಯೊಂದನ್ನು ಹುಟ್ಟು ಹಾಕಿದವರು ಅನೇಕರಿದ್ದಾರೆ. ಅಂತವರ ಸಾಲಿನಲ್ಲಿ ಲಕ್ಷ್ಮೀನಾರಾಯಣಸ್ವಾಮಿ ನಿಲ್ಲಬಲ್ಲರು.

‘ತೊಗಲಚೀಲದ ಕರ್ಣ’ ಮಹಾಕಾವ್ಯವು ಮಹಾಭಾರತದ ಕಥನವನ್ನು ಹೊಂದಿದೆ. ಈ ಕಾವ್ಯದ ಕಥಾನಾಯಕ ಕರ್ಣ, ಮಾದಾರ ಚನ್ನಯ್ಯ ಚನ್ನವ್ವಳ ಸಾಕು ಮಗ, ಕಲ್ಯಾಣದ ಮಹಾಮನೆಯ ಪರಿಸರದಲ್ಲಿ ಬೆಳೆದ ಕರ್ಣನಿಗೆ ಏಕಲವ್ಯ ಗುರು. ಮಹಾಭಾರತವನ್ನು ಆಧರಿಸಿ ಬರೆದ ಕಥೆಯಾದರೂ ಆಧುನಿಕ ಭಾರತದ ಸಾಂಸ್ಕೃತಿಕ ರಾಜಕಾರಣಕ್ಕೆ ಮುಖಾಮುಖಿಯಾಗಿಸುವಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಬುದ್ಧ ಧಮ್ಮದ ಪಸರಿಸುವಿಕೆ, ಕಲ್ಯಾಣದ ಕ್ರಾಂತಿ, ಶೋಷಿತ ಸಮುದಾಯಗಳ ವಿಮೋಚನೆ ಹಾಗೂ ಜಗತ್ತಿನ ಕ್ರಾಂತಿಗಳಿಗೂ ಹೊಲಗೆರಿಗಳೇ ಕೇಂದ್ರ ಬಿಂದುಗಳಾಗಿವೆ. ಇದರ ಜಾಡು ಹಿಡಿದ ಲಕ್ಷ್ಮೀನಾರಾಯಣಸ್ವಾಮಿಯವರು ಚಾರ್ತುವರ್ಣ ಪದ್ಧತಿ ಹಾಗೂ ಬ್ರಾಹ್ಮಣ್ಯದ ನಿರೂಪಣೆಗಳನ್ನು ಕೈಬಿಟ್ಟು ವಿಭಿನ್ನವಾಗಿಸಿದ್ದಾರೆ. ವರ್ಣೀಯ ವ್ಯವಸ್ಥೆಯಿಂದ ದೂರ ಉಳಿದ ಬೌದ್ಧತತ್ವದ ಪಂಚಮ ಜನಾಂಗಕ್ಕೆ ಪುರಾಣ ಕಾವ್ಯಗಳಲ್ಲಿ ಅಸ್ತಿತ್ವವೇ ಇರಲಿಲ್ಲ. ವರ್ಣೀಯ ಪುರಾಣವೊಂದು ಅವರ್ಣೀಯನ ಕೈಗೆ ಸಿಕ್ಕು ಪಂಚಮತತ್ವದ ಮೂಲಕ ಹೇಗೆ ಮರುರೂಪಗೊಳಿಸಿದರೆ ಹೇಗೆ ರೂಪಗೊಳ್ಳುತ್ತದೆ ಎಂಬುದಕ್ಕೆ ಈ ಕಾವ್ಯವೂ ಸಾಕ್ಷಿಯಾಗಿದೆ.

ಕನ್ನಡವು ಸೇರಿ ಅನೇಕ ಭಾಷೆಯ ಕವಿಗಳು ಈ ಕಾವ್ಯಗಳನ್ನು ಮರುಸೃಷ್ಟಿಸಿದರಾದರೂ ಅವುಗಳಲ್ಲಿ ಮಹಾಭಾರತದ ಚಹರೆಯೇ ಕಾಣುವಂತಾಯಿತು. ಆ ಕೃತಿಗಳಿಂದ ಚಾರ್ತುವರ್ಣ ಪದ್ಧತಿಯ ನೋಟಗಳನ್ನು ದಿಕ್ಕರಿಸುವುದಕ್ಕೆ ಸಾಧ್ಯವಾಗಿಲ್ಲ. ಆದರೆ ತೊಗಲಚೀಲದ ಕರ್ಣ ಕಾವ್ಯವು ಇವುಗಳಿಗೆ ಅಪವಾದದಂತಿದೆ. ಮಹಾಭಾರತ ಕಾವ್ಯವನ್ನು ಪಂಚಮರ ಸಂಪರ್ಕದಲ್ಲಿ ಬೆಳೆದ ಕರ್ಣನ ದೃಷ್ಟಿಕೋನದಲ್ಲಿ ಹೇಳಲಾಗಿದೆ. ಇಲ್ಲಿ ಕರ್ಣ ಕುಂತಿ ಪುತ್ರನೇ ಆದರೂ ಮಗುವಿದ್ದಾಗಲೇ ವಚನಕಾರ ಮಾದಾರ ಚೆನ್ನಯ್ಯನಿಗೆ ಸಾಕು ಮಗನಾದವನು. ಬಾಲ್ಯದಲ್ಲಿಯೇ ಕಲ್ಯಾಣದ ಕ್ರಾಂತಿಯನ್ನು ಅರಿತವನು, ವಚನಗಳ ಆಶಯಗಳನ್ನು ಅನುಭವ ಮಂಟಪದ ಚರ್ಚೆಗಳನ್ನು ಸಾಮಾಜಿಕ ಕ್ರಾಂತಿಯ ಆಶಯಗಳನ್ನು ತಿಳಿದವನು. ಇಲ್ಲಿನ ಕಾಯಕ ಶರಣರ ಪರಿಸರವು ಕರ್ಣನಿಗೆ ಪ್ರಗತಿಪರ ಮತ್ತು ಪ್ರಶ್ನಿಸುವ ಗುಣವನ್ನು ಕಲ್ಪಿಸಿದೆ. ಕುಲಜ್ಞಾನವಿಲ್ಲದೆ, ಕಾವ್ಯಜ್ಞಾನ ಹುಟ್ಟಲಾರದು, ಕಾವ್ಯಜ್ಞಾನದ ಮೂಲ ಕುಲಜ್ಞಾನವೇ ಆಗಿದೆ ಎಂಬ ಕೆ.ಬಿ.ಸಿದ್ಧಯ್ಯನವರ ಮಾತು ಕರ್ಣ ತಾನೂ ಬೆಳೆದ, ಕಲಿತ ಪಂಚಮರ ಬದುಕಿನ ತತ್ವವನ್ನು ಪ್ರತಿನಿಧಿಸುವಂತಿದೆ. ಪ್ರಭುತ್ವದ ಸಂಕೇತವಾದ ಹಸ್ತಿನಾವತಿ ರಾಜ್ಯಕ್ಕಿಂತಲೂ ಹೊಲಗೆರಿಯಿಂದ ರೂಪಿತವಾದ ಈ ಸಮಾನತೆಯ ತತ್ವವನ್ನು ಸಾರುವ ಕಲ್ಯಾಣದ ಮಹಾಮನೆ ಕರ್ಣನಿಗೆ ವಿದ್ಯೆ ಮಾತ್ರವಲ್ಲ ವ್ಯಕ್ತಿತ್ವವನ್ನೇ ರೂಪಿಸಿದೆ. ಹೀಗಾಗಿ ಕಾವ್ಯದ ಆಶಯ ಕರ್ಣಪ್ರಜ್ಞೆ ಎನ್ನುವುದಕ್ಕಿಂತ ಅಸ್ಪೃಶ್ಯರ ಪರಿಸರದಲ್ಲಿ ಬೆಳೆದ ಕಾರಣಕ್ಕೆ ದಕ್ಕಿದ ಪ್ರಜ್ಞೆಯಾದರಿಂದ ಪಂಚಮರ ಪ್ರಜ್ಞೆ ಎನ್ನುವುದೇ ಹೆಚ್ಚು ಸೂಕ್ತವಾಗಿದೆ.

ಮಹಾಭಾರತ, ರಾಮಾಯಣ ಕೃತಿಗಳನ್ನು ಕಾವ್ಯಗಳಂತೆ ಕಾಣದೇ ಕೃತಿಯನ್ನು ಮತ್ತು ಅದರೊಳಗಿನ ಪಾತ್ರಗಳನ್ನು ದೈವತ್ವಕ್ಕೆರಿಸಿ ನೋಡಿರುವ ಕ್ರಮವೇ ಅಸಹಜವಾಗಿದೆ. ಏಕೆಂದರೆ ಭಾರತದ ಉದ್ದಗಲಕ್ಕೂ ಅನೇಕ ಬಗೆಯ ಮಹಾಭಾರತಗಳಿವೆ. ಅನೇಕ ಪ್ರದೇಶ, ಸಮುದಾಯಗಳಲ್ಲಿಯೂ ವಸ್ತು, ವಿನ್ಯಾಸ, ಸನ್ನಿವೇಶಗಳಲ್ಲಿ ಬದಲಾಗಿರುವುದನ್ನು ಕಾಣುತ್ತೇವೆ. ಜನಪದರಲ್ಲೂ ಭಿನ್ನ ಭಿನ್ನ ಮಹಾಭಾರತಗಳಿವೆ. ಅರ್ಜುನನನ್ನು ಮಹಾಪರಾಕ್ರಮಿ ಎಂದು ಬಿಂಬಿಸುವ ಪುರಾಣಗಳಿಗೆ ವ್ಯತಿರೇಕವಾಗಿ ಉತ್ತರ ಭಾರತದ ಬುಡಕಟ್ಟು ಜನಾಂಗಗಳಲ್ಲಿ ನಾಗವಂಶದ ದೊರೆಯು ಅರ್ಜುನನನ್ನು ಸೋಲಿಸಿ ಕಟ್ಟಿಹಾಕಿ ಅವನ ಎದುರಿಗೆ ದ್ರೌಪದಿಯನ್ನು ಸಂಭೋಗಿಸುವ ಕಥೆಗಳಿವೆ. ಇದಕ್ಕೆ ಸಾಕ್ಷಿಯಂತೆ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಬುಡಕಟ್ಟು ಜನಾಂಗವನ್ನು ಅರ್ಜುನನಿಂದಾಗಲಿ, ರಾಮನಿಂದಾಗಲಿ, ಯಾವುದೇ ರಾಜನಿಂದಾಗಲಿ ಸೋಲಿಸುವುದು ಅಸಾಧ್ಯವಾಗಿತ್ತೆಂಬುದು ದಾಖಲಾಗಿದೆ. ಇಂತಹ ಪ್ರಸಂಗಗಳು ಪ್ರಾದೇಶಿಕವಾರು ಭಿನ್ನ ವಿಭಿನ್ನ ಕಥೆಗಳಿವೆ. ಪುರಾಣದ ಕಥೆಗಳು ಭಾರತ ಉದ್ದಕ್ಕೂ ಒಂದು ಸಮಗ್ರ ಕಾವ್ಯವಾಗಿ ರಚನೆಯಾಗದೇ ಚದುರಿದ ಕಥೆಗಳಂತಿವೆ. ಅವುಗಳನ್ನು ಜೋಡಿಸಿಟ್ಟ ಸಮಗ್ರ ಕಾವ್ಯವಾಗಿ ಈಗ ಕಾಣುತ್ತೇವೆ. ಮೂಲದ ಈ ಪುರಾಣದ ಕಾವ್ಯಗಳು ಕಾಲಾಂತರದಲ್ಲಿ ಪ್ರಯೋಗಕ್ಕೆ ಒಳಪಟ್ಟವು. ಜಾತಿ ಧರ್ಮ ಮೌಢ್ಯತೆಗಳನ್ನೇ ಉಸಿರಾಗಿಸಿಕೊಂಡ೦ತೆ ರಚಿಸಿದರು. ಬರೀ ಕಾವ್ಯಗಳಂತಿರುವ ಹಾಗೂ ನಿರಂತರವಾಗಿ ತನ್ನ ಚಹರೆಗಳನ್ನು ಬದಲಾಯಿಸಕೊಂಡ ಕಾವ್ಯಗಳು ಈಗ ಒಂದು ಕೋಮಿನ ಅಸ್ತ್ರವಾಗಿ ನಿರ್ದಿಷ್ಟಗೊಳಿಸಲಾಗಿದೆ. ಇಂತಹ ಹೊತ್ತಿನಲ್ಲಿ ಲಕ್ಷ್ಮೀನಾರಾಯಣಸ್ವಾಮಿ ಈ ಮಹಾಕಾವ್ಯವನ್ನು ಸಂವಿಧಾನಿಕ ಚೌಕಟ್ಟನ್ನು ನೀಡಿ ಆಧುನಿಕೋತ್ತರ ದಲಿತ ಮಹಾಭಾರತ ಎನ್ನುವಂತೆ ನಿರೂಪಿಸಿದ್ದಾರೆ.

ಇವತ್ತಿನ ಬಂಡವಾಳಶಾಹಿ ಸಂಘದ ಮುಖ್ಯಸ್ಥನಂತೆ ಕಾಣುವ ಕೃಷ್ಣನು ಧರ್ಮದ ಸೋಗಿನಲ್ಲಿ ಕುತಂತ್ರ, ಪಕ್ಷಪಾತಿತನ, ಹಿಂಸೆಯನ್ನು ಪ್ರತಿಪಾದಿಸಿರುವುದೇ ಹೆಚ್ಚು. ಈ ಕಾರಣಕ್ಕಾಗಿ ಕೃಷ್ಣನಿಗೆ ಪ್ರಜಾಪ್ರಭುತ್ವವಾದವನ್ನು ಎತ್ತಿ ಹಿಡಿಯುವ ಕರ್ಣನ ರಾಜ್ಯದಲ್ಲಿ ಜಾಗವಿಲ್ಲದಂತೆ ಮಾಡಿರುವ ಕವಿಯ ಜಾಣ್ಮೆ ನಿಜಕ್ಕೂ ಶ್ಲಾಘನೀಯ. ಬರೀ ಕೃಷ್ಣನಿಗೆ ಮಾತ್ರವಲ್ಲದೇ ಸ್ತ್ರೀವಿರೋಧಿ, ಅಧಿಕಾರ ದಾಹ, ಬಲಾಢ್ಯ, ಕುಟಿಲತೆಯ ಯಾವ ಪಾತ್ರಗಳಿಗೂ ಇಲ್ಲಿ ಮಹತ್ವ ದಕ್ಕಿಲ್ಲ. ಮೂಲ ಭಾರತದಲ್ಲಿ ಯಾವೆಲ್ಲಾ ಪಾತ್ರಗಳು ಪ್ರಭುತ್ವದಿಂದಾಗಿ ತಿರಸ್ಕಾರಗೊಂಡಿದ್ದವೋ ಅವುಗಳು ಕರ್ಣಭಾರತದಲ್ಲಿ ಪುರಸ್ಕಾರ ಪಡೆದಿವೆ. ಜಾತಿಹೀನನೆಂದೇ ಕರೆಸಿಕೊಂಡಿದ್ದ ಕರ್ಣನನ್ನು ಮಾದಾರ ಚೆನ್ನಯ್ಯನ ಮಗನಾಗಿಸಿದ್ದು, ಕುಲದ ಕಾರಣಕ್ಕೆ ಹೆಬ್ಬರಳನ್ನು ಕತ್ತರಿಸಿಕೊಂಡಿದ್ದ ಏಕಲವ್ಯನನ್ನು ಕರ್ಣನ ಗುರುವಾಗಿಸಿದ್ದು, ಕೃಷ್ಣನೇ ಅಂತಿಮ, ದೈವಿಸ್ವರೂಪ ಎಂಬ ಭಾವನೆಯನ್ನು ಇಲ್ಲವಾಗಿಸಿದ್ದು, ಹೆಣ್ಣು-ಮಣ್ಣಿಗಾಗಿ ನಡೆದ ಕಥನ ಎಂಬ೦ತೆ ಬಿಂಬಿಸಿದ್ದನ್ನು ಸಾಮಾಜಿಕ ಕ್ರಾಂತಿ ಅಥವಾ ಸಮಾನತೆಯ ಕಥನವನ್ನಾಗಿಸಿದ್ದಾರೆ. ಆದರೆ ಪುರಾಣ ಕಾವ್ಯಗಳಂತೆ ಯುದ್ಧಗಳ ಭೀಕರತೆ ಇಲ್ಲಿ ಕಂಡುಬರುವುದಿಲ್ಲ. ಬುದ್ಧ ಬಸವ ಅಂಬೇಡ್ಕರ್‌ರ ಸಂದೇಶ ಪ್ರಾಮುಖ್ಯತೆ ಪಡೆದಿದ್ದರಿಂದ ಕೊಂದು ಬೋಧಿಸುವ ಧರ್ಮ, ಯಾವ ತರಹದ ಧರ್ಮ ಎಂಬ ಪ್ರಶ್ನಿಸುವ ಕರ್ಣನದು ಅಪ್ಪಟ ಸಂವಿಧಾನವಾದಿ ನಡೆ. ಬಹುಶಃ ಧರ್ಮ, ದೈವತ್ವ, ಭಕ್ತಿಯ ಹಿನ್ನೆಲೆಯಲ್ಲಿ ರಾಜ್ಯ ಪಾಲಿಸದೇ ಹಸ್ತಿನಾವತಿಯ ಅಧಿಕಾರ ಮೋಹಿ ಸಹೋದರರಿಗೆ ಅಂಬೇಡ್ಕರ್ ಆಶಯದ ಸಹೋದರತೆ, ಸ್ವಾತಂತ್ರ್ಯ, ಸಮಾನತೆಯನ್ನು ಸಾರುವ ಪ್ರಜೆಗಳ ಪ್ರಭುತ್ವವನ್ನು ಪರಿಚಯಿಸುತ್ತಾನೆ.

ದ್ರೌಪದಿಯ ವಸ್ತ್ರಾಪಹರಣ ಸಂದರ್ಭದಲ್ಲಿ ಧರ್ಮವನ್ನು ಉಳಿಸೆಂದು ಧರ್ಮರಾಯನ ಎದುರೆ ಮೊರೆಯಿಟ್ಟರೂ ಕರಗದೇ ಹೋದಾಗ ಧರ್ಮ ಉಳಿಸುವಲ್ಲಿ ಧರ್ಮರಾಯನದು ಯಾವ ಧರ್ಮ ಎನ್ನುವ ದ್ರೌಪದಿಯ ಮಾತಿನಲ್ಲಿ ಧರ್ಮಗಳ ದ್ವಂದ್ವತೆ ಕಾಣಿಸುತ್ತದೆ. ಸ್ತ್ರೀಯೊರ್ವಳ ಮಾನ ಉಳಿಸಿ ಗೌರವಿಸುವ ಧರ್ಮ ಒಂದಾದರೆ, ಮಾನ ಉಳಿಸದೆ ಅಪಮಾನಗೊಳಿಸಿ ಮೌನವಹಿಸುವ ಧರ್ಮ ಮತ್ತೊಂದು. ಹೆಣ್ಣನ್ನ ಜೂಜಿಗಿಟ್ಟು ಸೋತರೆ ತ್ಯಜಿಸುವ, ಜಯಿಸಿದರೆ ಭೋಗಿಸುವ, ಪಣಕ್ಕಿಟ್ಟು ನೋಡುವ ವಸ್ತು ಎಂಬ೦ತೆ ಪಾಂಡವ-ಕೌರವರ ನಿಲುವಿಗೆ ಗೆದ್ದಲತ್ತಿದ ನಿಮ್ಮ ಶಾಸ್ತ್ರ ಧರ್ಮಕ್ಕಿಂತ ಮಿಗಿಲಲ್ಲವೇ ಸ್ತ್ರೀಧರ್ಮ ಎನ್ನುವ ಕರ್ಣ ಸ್ತ್ರೀವಾದವನ್ನು ಸಾರಿದ್ದಾನೆ.

ದೊರೆಗಿಂತ, ಶಾಸ್ತ್ರಕ್ಕಿಂತ,
ವೇದ ಆಗಮ ಪಂಡಿತ ಪ್ರವೀಣರಿಗಿಂತ
ಮಿಗಿಲೇನು ನಿನ್ನ ಸ್ತ್ರೀಧರ್ಮ?
ದ್ರೋಣನ ಈ ಮಾತಿಗೆ ಕರುಳಿಗೆ ಕರುಳು ಕೊಟ್ಟು(ತಾಯಿ ಗರ್ಭ), ಹಸಿವಿನ ತುಟಿಗೆ ಮೊಲೆಯಿಟ್ಟು(ಶಿಶು) ಚಿಟ್ಟೆಯ ಹುಳುವಿನಂತೆ ಜೋಪಾನವಾಗಿಸುವ, ಕಾಮತೃಷೆಯನು ತೀರಿಸುವ(ಯೌವ್ವನ) ಕಣ್ಣಪಾಪೆಗಳಂತೆ ಬಚ್ಚಿಟ್ಟು ಕಾಯುವ ಸ್ತ್ರೀಯರು ದೊರೆಗಿಂತ, ಶಾಸ್ತ್ರಕ್ಕಿಂತ ನಿಮ್ಮ ಜ್ಞಾನವೆಂಬ ಅಜ್ಞಾನಕ್ಕಿಂತ ಮಿಗಿಲು ನನಗೆ! ಎನ್ನುವ ಕರ್ಣನ ಉತ್ತರ ಪುರುಷಾಹಂಕಾರವನ್ನೆಲ್ಲ ಎಚ್ಚರಿಸುವಂತಿದೆ. ಗರ್ಭದಿಂದ ಮರಣದವರೆಗೆ ಪುರುಷ ಸ್ತ್ರೀಗೆ ಸಹಬಾಳ್ವೆಯಲ್ಲಿ ಜೀವಿಸುವ ಪಾಠದಂತಿದೆ. ಧರ್ಮದ ಸಂಕೋಲೆಯಲ್ಲಿ ಕೂಡಿಟ್ಟು ಪುರುಷ ಸೇವೆಗೆ ಸೀಮಿತಗೊಳಿಸಿದ ಮಹಿಳೆಯರನ್ನು ಅಂಬೇಡ್ಕರ್ ಅವರು ಹಿಂದೂ ಕೋಡ್ ಬಿಲ್ ಮೂಲಕ ಧರ್ಮದಿಂದ ಬಿಡಿಸಿ ಸ್ವಾತಂತ್ರ್ಯಗೊಳಿಸಿದ ಪ್ರಸಂಗವೇ ನೆನಪಿಸುತ್ತದೆ. ಸ್ತ್ರೀಪರ ಕಾಳಜಿಯಿಂದಾಗಿ ಕರ್ಣನ ಕೀರ್ತಿ ಕಲ್ಯಾಣಕ್ಕೂ ಹಬ್ಬಿ, ಕರ್ಣನ ಅಸ್ತಿತ್ವವನ್ನು ವಚನಕಾರ್ತಿಯರು ಅಂಕಿತನಾಮದ ದೈವಕ್ಕೆ ಹೋಲಿಸುವುದು, ಶೀಲದ ಕುರಿತು ತರ್ಕಿಸುವ ಪ್ರಸಂಗಗಳು ಕಾವ್ಯದ ವಿಶಿಷ್ಟತೆಗಳಲ್ಲಿ ಒಂದು.
ತಿಳಿಸಿಲ್ಲ ಯಾರೂ ಎನ್ನ ಶೀಲವೂ ದಾಳವೆಂದೂ
ಹಕ್ಕುಂಟೆ ಗಂಡರಿಗೆ ಜೂಜಿಗಿಡಲು
ತಾಯಿಗೂ ಮಡದಿಗೂ ಮಣ್ಣು
ಬೀಜಗಳ ವ್ಯತ್ಯಾಸವೆಂದು!
ಸೂಳೆಯರಿಗೇಕಿಲ್ಲ ಹೇಳು
ಮಗ್ಗಲಲ್ಲಿ ಮಲಗೋ ಪುರುಷರ ಆಯ್ಕೆ

ಯಾವ ಶಾಸ್ತç ಹೇಳಿಹುದು ಸಖಿ?
ಹೆಣ್ಣಾದವಳಿಗೆ ಮಾಸದಲ್ಲಿ ಮೂರು ದಿನ ಮುಟ್ಟೆಂದು
ಉಳಿದ ದಿವಸಗಳು ಸಕಲರಿಗೆ ಮುದ್ದೆಂದು
ಇ೦ತಹ ಸ್ತ್ರೀವಾದ ತತ್ವಪ್ರತಿಪಾದನೆಯ ನಿಲುವುಗಳು ಕಾವ್ಯಕ್ಕೆ ಹೊಸತನವನ್ನು ನೀಡಿ ಪುರುಷಾಧಿಪತ್ಯವನ್ನು ಪ್ರಶ್ನಿಸುವಂತಿವೆ. ಮಹಾಭಾರತದ ಹಲವು ಸನ್ನಿವೇಶಗಳನ್ನು ಸಾರ್ವತ್ರಿಕವಾಗಿ ಮಹಿಳೆಯರನ್ನು ಬೆಂಬಲಿಸಿ ಅರಿವನ್ನು ನೀಡುತ್ತವೆ. ಕವಿಯ ಸಾಮಾಜಿಕ ಕಾಳಜಿಯೂ ಓದುಗರಿಗೆ ಚಿಂತನೆಗೆ ಅಚ್ಚುವಂತಿವೆ. ಕೃತಿಯ ನಿರೂಪಣೆಗಳು ಕಂಬಾರರ ಶಿವರಾತ್ರಿ ನಾಟಕದಲ್ಲಿನ ಭರತವಾಕ್ಯಗಳಂತೆ ಭಾಸವಾಗಿ ಕಾವ್ಯಕ್ಕೆ ಜೀವಾಳವಾಗಿವೆ.

ಗೋವೆಂಬುದು ನಿಮಗೆ ದೈವವಾದರೆ
ದೈವವೆಂದರೆ ನಮಗೆ ಹಸಿವು
ಗೋವು ಹತ್ಯೆ ನಿಷೇಧಿಸುವ ದ್ರೋಣನ ಮಾತಿಗೆ ಕರ್ಣನ ಉತ್ತರವಿದು. ವರ್ತಮಾನದ ಗೋವುನಿಷೇಧಕ್ಕಾಗಿ ತಿನ್ನುವವರ ಗಂಟಲು ಇಚುಕುವ ಇಂದಿನ ರಾಜಕಾರಣವನ್ನು ಕಾವ್ಯದಲ್ಲಿ ಮುಖಾಮುಖಿಯಾಗಿಸಿದ್ದಾರೆ. ಬ್ರಾಹ್ಮಣ್ಯಕ್ಕೆ ಗೋವು ಶ್ರೇಷ್ಠವೆಂದು ದೈವದ ಪಟ್ಟಕಟ್ಟಿದರೆ, ಬಡವರಿಗೆ ಹಸಿವೆಯನ್ನು ಹಿಂಗಿಸಿಕೊಳ್ಳುವ ಆಹಾರವಾಗಿ ಮಾತ್ರ ನೋಡಲಾಗುತ್ತದೆ. ಗೋವು ಒಬ್ಬರಿಗೆ ದೈವವಾದರೆ ಮತ್ತೊಬ್ಬರಿಗೆ ಹಸಿವು. ದೈವ ಮತ್ತು ಹಸಿವು ಎರಡನ್ನು ತಕ್ಕಡಿಗೆ ಹಾಕಿ ತೂಗುವ ಈ ಸಾಲುಗಳು ದೈವಕ್ಕಿಂತ ಮಿಗಿಲಾಗಿ ಬಹುಜನರ ಹಸಿವನ್ನು ನೀಗಿಸುವ ಜೀವಪೋಷಕ ಆಹಾರ ಎಂಬುದು ಸಾರ್ವತ್ರಿಕ ಸತ್ಯದಂತೆ ಕಾಣುತ್ತದೆ.

ಕಾವ್ಯದ ಕೊನೆಯಲ್ಲಿ ತಳಸಮುದಾಯದ ಕರ್ಣ ಕೃಷ್ಣಾರ್ಜುನರನ್ನು ಕೊಂದದ್ದು ಕಾವ್ಯದಲ್ಲಿ ಅಷ್ಟೇ ಸಹಜವಾಗಿ ಮೂಡಿಬಂದಿದೆ. ಒಂದು ವೇಳೆ ಕಾವ್ಯವು ಕೃಷ್ಣನ ಅಣತಿಯಂತೆ ರಚಿಸಿದ್ದರೆ, ಕೃಷ್ಣನ ಪ್ರಭುತ್ವದ ಸಂಕೇತವಾಗಿ ಉಳಿದುಬಿಡುವ ಸಾಧ್ಯತೆಯಿತ್ತು. ರಾಮ, ಅರ್ಜುನರ ಸಾವಿಗೆ ಅವರ ಶೌರ್ಯ ಸಾಹಸಗಳನ್ನೇ ರಕ್ತಗತವಾಗಿ ಪಡೆದ ಮಕ್ಕಳಿಂದ ಮರಣಕ್ಕೆ ಶರಣಾಗುವ ರಾಮ, ಅರ್ಜುನರ ಸಾವುಗಳು ಮತ್ತು ಕೃಷ್ಣ ಬಾಲ ಗೋಪಾಲನ ಮೂಲಕ ಕೃಷ್ಣಲೀಲೆಯಂತೆ ಕಾಣಿಸುವ ಕೃಷ್ಣನ ಸಾವಿನ ಅಣಕವು ಇಲ್ಲಿ ಇಲ್ಲ. ಕರ್ಣನ ಮೂಲಕವೇ ಕೃಷ್ಣನ ಅಂತ್ಯ ಕಾಣಿಸುವ ಮೂಲಕ ಎಲ್ಲವೂ ನನ್ನಿಂದಲೇ ಎಂದು ಕುರುಕ್ಷೇತ್ರ ಯುದ್ಧಕ್ಕೆ ಕಾರಣವಾಗುವ ಕೃಷ್ಣನ ನಿರಂಕುಶತನದ ಅಧಿಕಾರವನ್ನು ಕೊನೆಗಾಣಿಸಿದ್ದಾರೆ. ಕಥನದ ಕೊನೆಯಲ್ಲಿ ದುರ್ಯೋಧನನ ಸಾವಿನ ನಂತರ ಭಾನುಮತಿಯನ್ನು ಕರ್ಣನು ಮದುವೆಯಾಗುವ ಮೂಲಕ ಹೊಸ ಚಿಂತನೆಗೆ ಕಾರಣನಾಗುತ್ತಾನೆ. ಕರ್ಣನು ಮಹಾಮನೆಯ ತತ್ವವನ್ನು ಬೆಳೆಸುವ ಪಾತ್ರವಾಗಿ ಧರ್ಮದ ಸಾರವನ್ನು ತಿಳಿಸುವ ಪುರಾಣ ಕಾವ್ಯಕ್ಕೆ ಸಂವಿಧಾನದ ಸಮತಾವಾದವನ್ನು ಬೋಧಿಸಿದ್ದಾನೆ. ಈ ಮೂಲಕ ಮೊದಲ ಬಾರಿಗೆ ಮಹಾಭಾರತದ ಕಥೆಯನ್ನು ಪ್ರಜಾಪ್ರಭುತ್ವವಾದಿಯಾಗಿ, ಸಂವಿಧಾನವಾದಿಯಾಗಿಸಿದ್ದಾರೆ. ಅಂಬೇಡ್ಕರ್ ಹೇಳುವಂತೆ ಪ್ರಜೆಗಳು ಅನುಸರಿಸುವ ನೈತಿಕ ತಿಳುವಳಿಕೆಯಲ್ಲಿ ಪ್ರಜಾಪ್ರಭುತ್ವದ ಯಶಸ್ಸು ಅಡಗಿರುವಂತೆ, ನೈತಿಕವೇ ಇಲ್ಲದ ಮಹಾಭಾರತದ ಹಲವು ಪಾತ್ರಗಳಿಗೆ ಕರ್ಣನ ಮೂಲಕ ಅರಿವು ಮೂಡಿಸುವ ಪ್ರಯತ್ನ ಕಾವ್ಯದ ಉದ್ದಕ್ಕೂ ಸಾಗಿದೆ.

ಕೃಷ್ಣ, ಅರ್ಜುನ, ದ್ರೋಣ, ಭೀಷ್ಮ ಇಲ್ಲಿ ಬ್ರಾಹ್ಮಣಿಕೆಯನ್ನು ಪ್ರತಿಪಾದಿಸುವ ಅಸ್ತ್ರಗಳಂತಿವೆ. ವ್ಯಾಸ, ಪಂಪ, ಕುಮಾರವ್ಯಾಸ, ಕುವೆಂಪು ಅವರಲ್ಲಿ ಶೂರತ್ವ, ತ್ಯಾಗ, ದಾನಗಳ ಕರುಣೆಯ ಪಾತ್ರವಂತೆ ಕಂಡುಬರುವ ಕರ್ಣ, ಇಲ್ಲಿ ನ್ಯಾಯಕ್ಕಾಗಿ ಹೋರಾಡುವ ದಿಟ್ಟನಾಯಕನಂತೆ ಕಂಡುಬರುತ್ತಾನೆ. ಹುಟ್ಟಿನಿಂದ ಶೋಷಿತ ಪರಿಸರದಲ್ಲಿ ಬೆಳೆದು ಓದಿ ವಿದ್ಯಾವಂತನಾದ ಹೊಲೆಗೆರಿಯ ಯುವಕ(ಕರ್ಣ)ನೊಬ್ಬ ಸಮಾಜವನ್ನು ಪ್ರಶ್ನಿಸುತ್ತಾ, ಸಾಮಾಜಿಕ ನ್ಯಾಯಕ್ಕಾಗಿ ಪರಿತಪಿಸುತ್ತಾನೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮಹಾನೀಯರ ಆಶಯಗಳ ಜೊತೆಗೆ, ಜಾನಪದ, ಚರಿತ್ರೆ, ಪುರಾಣ, ತತ್ವಪದ, ದೇಸಿತನ, ಸಮಕಾಲೀನ ಸಾಮಾಜಿಕ ಚಿಂತನೆ, ರಾಜಕೀಯ ಪ್ರಜ್ಞೆಯನ್ನು ಮತ್ತು ಕಾವ್ಯಸೃಷ್ಟಿ, ನುಡಿಗಟ್ಟು, ತಂತ್ರಗಾರಿಕೆ, ಕಥನಕ್ರಮ ಮತ್ತು ಕಾವ್ಯದಲ್ಲಿ ಒಗ್ಗಿಸಿಕೊಂಡಿರುವ ಶೈಲಿಯಿಂದಾಗಿ ಕೃತಿಯನ್ನು ಅಪರೂಪವಾಗಿಸಿದೆ. ಕಾವ್ಯದ ಪಾತ್ರ, ಸಂದರ್ಭ, ಸನ್ನಿವೇಶಗಳಲ್ಲಿ ಬದಲಾಯಿಸಿ ನಿರೂಪಿಸಿದ ಕ್ರಮ ಕವಿಯ ಜಾಣ್ಮೆಯನ್ನು ಬಹುಕಾಲ ಓದುಗರ ಮನದಲ್ಲಿ ಅಚ್ಚೊತ್ತುವಂತೆ ಮಾಡುತ್ತದೆ. ಇದರ ಪ್ರೇರಣೆಯಿಂದ ಶತಮಾನಗಳಾಚೆ ಭವಿಷ್ಯದ ಸೂಕ್ಷ್ಮ ಜಾಗತೀಕರಣದ ಹಿನ್ನೆಲೆಯಲ್ಲಿ ಕೃತಿಗಳು ರಚನೆಗೊಳ್ಳಬಹುದು. ಕರ್ಣನ ಈ ಹೋರಾಟ ಪ್ರಾಚೀನ, ಮಧ್ಯಕಾಲೀನ ಮತ್ತು ವರ್ತಮಾನದ ಕಾಲಘಟ್ಟದಲ್ಲಿ ನಡೆಸುವುದು ಕಾವ್ಯಕ್ಕಿರುವ ಪ್ರತಿಭಾಶಕ್ತಿಯಾದರೂ ತೊಡಕುಗಳಾಗಿಯೂ ಕಾಡಿಸುತ್ತದೆ. ಮಹಾಭಾರತದ ವಿಸ್ತಾರವಾದ ಕಥನವನ್ನು ಅಲ್ಲಿನ ಬಹುಸಂಖ್ಯಾತ ಪಾತ್ರಗಳು ಈ ಕಾವ್ಯದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಕರ್ಣ ಮತ್ತು ದ್ರೌಪದಿ ಪಾತ್ರಗಳ ಹೊರತಾಗಿ ಉಳಿದ ಪಾತ್ರಗಳು ಪ್ರಶ್ನಿಸುವುದಿಲ್ಲ. ಮೂಲ ಭಾರತಕ್ಕಿದ್ದ ಸಾತತ್ಯದ ಕೊರತೆ ಎದ್ದು ಕಾಣುತ್ತದೆ. ಬಿಡಿ ಬಿಡಿ ಕಥನಗಳನ್ನು ಸಮಕಾಲೀನ ಸಂದರ್ಭಕ್ಕೆ ಒಗ್ಗಿಸುವುದು ತ್ರಾಸದಾಯಕವಾಗಿದೆ. ಕಾವ್ಯದ ಹಲವು ಭಾಗಗಳಲ್ಲಿ ಅಲ್ಲಲ್ಲಿ ಇಂಗ್ಲೀಷ್ ಪದಗಳ ಬಳಕೆ ಮಾಡಿರುವುದನ್ನು ತಪ್ಪಿಸಿ ಕನ್ನಡದಲ್ಲಿಯೇ ಪದಗಳನ್ನು ಬಳಕೆ ಮಾಡುವುದೇ ಸೂಕ್ತ ಎಂದು ಎನಿಸದಿರದು.

ಬ್ರಾಹ್ಮಣತ್ವವನ್ನು ಪ್ರಶ್ನಿಸುತ್ತಾ ಜಾಗತೀಕರಣದ ಸಂದರ್ಭದಲ್ಲೂ ಬ್ರಾಹ್ಮಣ್ಯದ ಅಜೆಂಡಾಗಳಾದ ಹೆಣ್ಣನ್ನು ಬೆತ್ತಲೆಗೊಳಿಸಿ ಶೋಷಿಸುವ, ಗೋಹತ್ಯೆ ನಿಷೇಧ, ಅಸ್ಪೃಶ್ಯತಾ ಆಚರಣೆಗಳನ್ನು ತೀವ್ರವಾಗಿ ಖಂಡಿಸಿದೆ. ಸ್ವಚ್ಛಭಾರತ, ಅಚ್ಛೇದಿನವೆಂಬ ಕಣ್ಕಟ್ಟು ತಂತ್ರಗಳನ್ನೂ ನಿರಾಕರಿಸಿದೆ. ಆಧುನಿಕ ಭಾರತ ನಡೆಯಬೇಕಾದದ್ದು ಭೀಷ್ಮ, ದ್ರೋಣ, ಅರ್ಜುನ, ದುರ್ಯೋಧನರಂತಹ ಮನಸ್ಥಿತಿಯವರಿಂದಲ್ಲ ಅಥವಾ ಅಧಿಕಾರಕ್ಕೆ ಅಂಟಿಕೊ೦ಡು ಕೂರುವ ಕೃಷ್ಣ ಮತ್ತು ಅವನ ಪಕ್ಷಪಾತಿಯವರಿಂದಲ್ಲ. ಮೌಢ್ಯ ಸಾರುವ ಪುರಾಣ ಕೃತಿಗಳಿಂದಲೂ ಅಲ್ಲ. ಇವುಗಳ ಬದಲಾಗಿ ಪ್ರಜಾಪ್ರಭುತ್ವದ ಸಂದೇಶ ಒಪ್ಪಿ ಬಾಳಬೇಕಾದ, ಜನಸಾಮಾನ್ಯರಿಗೂ ನ್ಯಾಯ ಒದಗಿಸಬಲ್ಲಂತಹ ಪ್ರಜಾಪ್ರಭುತ್ವವಾಗಿ ಹಾಗೂ ಸಂವಿಧಾನವಾದಿಯಾಗಿ ನಿಲ್ಲುವ ಈ ಕಾವ್ಯವು ಓದುಗ ವಲಯಕ್ಕೆ ಹೊಸ ಸಂವೇದನೆಗಳನ್ನು ಹುಟ್ಟುಹಾಕುವ ಮತ್ತು ಬಹುಕಾಲ ನೆನಪಿನಲ್ಲಿಡಬಹುದಾದ ಕಾವ್ಯವಾಗಿ ಗುರುತರವಾಗುತ್ತದೆ.

‍ಲೇಖಕರು Admin

7 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading