ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮಳೆಯಲಿ, ಜೊತೆಯಲಿ..’ ಮಂಜುಳಾ ಬಬಲಾದಿ ಪ್ರವಾಸ ಕಥನ ಅಂತಿಮ ಭಾಗ

ಕೋಲ್ಕತ್ತ

ಇಲ್ಲಿಯವರೆಗೆ

ಮರುದಿನ ನಮ್ಮ ಚೆಕ್ಔಟ್ ದಿನ. ಬೆಳಗ್ಗೇನೆ ರೆಸಾರ್ಟ್ನವರೊಂದಿಗೆ ಮಾತಾಡಿ ಮಧ್ಯಾನ್ಹ ಒಂದು ಗಂಟೆಗೆ ಚೆಕ್ಔಟ್ ಆಗೋದಾಗಿ ಒಡಂಬಡಿಕೆ ಮಾಡಿಕೊಂಡು, ಬೆಳಗಿನ ಜಾವದ ವಿಹಾರಕ್ಕೆ ಎಲ್ಲರೂ ಒಟ್ಟಿಗೇ ಹೊರಟೆವು. ಪ್ರವಾಸ ಇನ್ನೇನು ಮುಗಿಯುತ್ತಲೇ ಬಂತು ಅನ್ನೋ ಭಾವ ಬೇಡ ಅಂದ್ರೂ ಕಾಡೋಕೆ ಶುರುವಾಗಿತ್ತು. ವಿಹಾರದ ನಂತರ ಅಪ್ಪ-ಮಗ ಈಜುಕೊಳಕ್ಕೆ ಹೊರಟರೆ, ನಾನು ಅದೇ ಬೇಕಾಗಿದ್ದವಳಂತೆ ನದಿ ದಂಡೆಗೆ ಹೊರಟೆ. ಪುಸ್ತಕ, ಲೇಖನಿ, ಕ್ಯಾಮೆರ ಜೊತೆಗೆ. ಅದನ್ನು ನೋಡಿದ ಇವರು ‘ತಿಂಡಿ ಸಮಯಕ್ಕಾದ್ರೂ ವಾಪಸ್ ಬಾ’ ಅಂತ ತಾಕೀತು ಮಾಡಿದರು. ನಾ ’ಹೂಂ’ ಅಂದು ಅಲ್ಲಿಂದ ನಡೆದೆ.

ನದಿ ತೀರದ ತುಂಬೆಲ್ಲ ಸಮಕಲು ಕಲ್ಲುಗಳು, ರಭಸದಿಂದ ಹರಿಯೋ ಸ್ವಚ್ಛಂದ ನದಿ, ಕಣ್ಣಾಯಿಸಿದಷ್ಟು ದೂರ ಹಸಿರು ಮತ್ತು ಬೆಳಗಿನ ಸಂಭ್ರಮ. ಕಾಲನ ಪರಿವೆ ಕಳೆದುಹೋಗಿತ್ತು ಆ ಕ್ಷಣಗಳಲ್ಲಿ ನನಗೆ. ನಂತರ ಶುರುವಾಗಿದ್ದು ಪಾತರಗಿತ್ತಿಯಾಟ. ಬಣ್ಣ ಬಣ್ಣದ ಚಿಟ್ಟೆಗಳು. ಒಂದಾದ ಮೇಲೊಂದು, ಕೆಲ ನಿಮಿಷ ಸ್ವಚ್ಛಂದ ಹಾರಾಟ, ಕೆಲ ನಿಮಿಷಗಳ ಧ್ಯಾನ… ನಾನಿರಲಿಲ್ಲ ಅಲ್ಲಿ! ಮತ್ತೆ ಮರಳಿದ್ದು, ನಂದನ್ ಮತ್ತು ಇವರು ನದಿ ತೀರಕ್ಕೆ ಬಂದು ನನ್ನ ಕರೆದಾಗಲೇ!

ದಿನಚರಿಯ ಕಾರ್ಯಕ್ರಮಗಳನ್ನೆಲ್ಲ ಮುಗಿಸಿ ಹೊರಟದ್ದು ನ್ಯೂ ಜಲ್ಪಾಯ್ಗುರಿ ರೇಲ್ವೆ ನಿಲ್ದಾಣಕ್ಕೆ. ಅಲ್ಲಿಂದ ಕೋಲ್ಕತ್ತಕ್ಕೆ ರಾತ್ರಿಯ ಪಯಣ. ನಮ್ಮ ನಾನ್-ಸ್ಟಾಪ್ ಕಾರ್ ಚಾಲಕನಿಗೊಂದು ವಿದಾಯ ಹೇಳಿ ನ್ಯೂ ಜಲ್ಪಾಯ್ಗುರಿ ರೇಲ್ವೆ ನಿಲ್ದಾಣದೊಳಗಡೆ ನಡೆದಾಗ, ೫ ದಿನಗಳಲ್ಲಿ ಮೊದಲ ಬಾರಿಗೆ ಧಗೆಯ ಅನುಭವ ಮರಳಿತ್ತು. ರಾತ್ರಿ ೮ ಗಂಟೆಗೆಲ್ಲ ಹೊರಟ ರೈಲು ಬೆಳಿಗ್ಗೆ ೬:೩೦ ರ ಹೊತ್ತಿಗೆ ಕೋಲ್ಕತ್ತ ತಲುಪಿತ್ತು. ಮೊದಲ ಬಾರಿಗೆ ಕೋಲ್ಕತ್ತ ದರ್ಶನ. ರವೀಂದ್ರನಾಥ ಟ್ಯಾಗೋರ್, ಮದರ್ ತೆರೇಸಾ, ರಾಮಕೃಷ್ಣ ಪರಮಹಂಸ, ಸುಭಾಷ್ ಚಂದ್ರ ಬೋಸ್… ಇಂಥವರೆಲ್ಲ ಶ್ರೀಮಂತಗೊಳಿಸಿದ ಈ ಊರಿನ ಬಗ್ಗೆ ನನ್ನದೇ ಆದ ಕಲ್ಪನೆಗಳು ನನಗೆ. ನನಗಿಂತ ಮೊದಲು ಕೋಲ್ಕತ್ತ ಕಂಡು ಬಂದಿದ್ದ ಇವರು, ’ಈ ಊರು ನೀ ನೋಡಲೇಬೇಕಾದ್ದು ಬಾ’ ಎಂದು ಹೇಳಿದಾಗ, ನನಗೆ ಆ ಮಾತಿನ ಅರ್ಥವಾಗಲಿಲ್ಲ.

ರೈಲು ನಿಲ್ದಾಣದಿಂದ ಹೊರಗಡೆ ಬಂದಾಗ ಕಂಡ ಮೊದಲ ದೃಶ್ಯ, ದಂಡಿ, ದಂಡಿ ಹಳದಿ ಬಣ್ಣದ ಟ್ಯಾಕ್ಸಿಗಳು ಮತ್ತೆ ಟ್ರಾಫಿಕ್ ಜಾಮ್! ಟ್ಯಾಕ್ಸಿ ಬಾಡಿಗೆ ಪಡೆದು ಹೊರಟಾಗ ಚಾಲಕ ಅವಸರಿಸಿದ, ’ಮೊದಲು ಇಲ್ಲಿಂದ ಹೊರಬೀಳಬೇಕು’ ಅಂತ. ರಸ್ತೆಯುದ್ದಕ್ಕೂ ನಾ ಕಂಡದ್ದು, ಬಗೆ ಬಗೆಯ ವಾಹನಗಳು, ಟ್ರ್ಯಾಂ, ಹೆಜ್ಜೆಗೊಂದರಂತಿದ್ದ ಚಹಾ-ತಿನಿಸು ಅಂಗಡಿಗಳು, ಗಜಿ-ಬಿಜಿ ಊರು! ಸಾಧಾರಣ ಅನಿಸೋ ಒಂದು ವಸತಿಗೃಹಕ್ಕೆ ಟ್ಯಾಕ್ಸಿ ಚಾಲಕ ನಮ್ಮನ್ನು ಕರೆತಂದ. ಆ ಟ್ಯಾಕ್ಸಿ ಚಾಲಕ, ಮಧ್ಯಾನ್ಹದವರೆಗೂ ಒಂದಿಷ್ಟು ಸ್ಥಳಗಳನ್ನು ಭೇಟಿ ಮಾಡಬಹುದು, ಮಧ್ಯಾನ್ಹದ ನಂತರ ಗಲಾಟೆ ಆಗುವ ಸಾಧ್ಯತೆಗಳಿವೆ, ಬೇಗ ತಯಾರಾಗಿ ಬನ್ನಿ ಎಂದು ನಮಗೆ ತಾಕೀತು ಮಾಡಿದ.

ನಾವೂ ಲಗು-ಬಗೆಯಿಂದ ತಯಾರಾಗಿ ಬಂದು, ಬೆಳಗಿನುಪಹಾರಕ್ಕೆ ನಮಗೆ ಸಸ್ಯಾಹಾರಿ ತಿಂಡಿಗಳೇ ಆಗಬೇಕು ಎಂದು ಟ್ಯಾಕ್ಸಿ ಚಾಲಕನಿಗೆ ಹೇಳಿದಾಗ, ಅವನು ನಮ್ಮನ್ನು ಪಕ್ಕಾ ದಕ್ಷಿಣ ಭಾರತದ ಆಹಾರ ದೊರೆಯುವ ಉಪಹಾರ ಮಂದಿರದೆದುರು ತಂದು ನಿಲ್ಲಿಸಿದ. ನಮ್ಮ ಪ್ರವಾಸದಲ್ಲಿ ಮೊದಲ ಬಾರಿ ನಮ್ಮ ಬೆಳಗಿನುಪಹಾರವಾಗಿತ್ತು ಇಡ್ಲಿ-ದೋಸೆ!ಅದಾದ ನಂತರ ನಾವು ಮೊದಲು ತೆರಳಿದ ಸ್ಥಳ ಕಾಲಿಘಾಟ್ನ ಕಾಲಿ ಮಂದಿರ್. ರಸ್ತೆಗುಂಟ ಮತ್ತವೇ ದೃಶ್ಯಗಳು… ಟ್ರಾಫಿಕ್ ಜಾಮ್, ಹಳೆಯ ಕಾಲದಿಂದ ಎತ್ತಿಕೊಂಡು ಬಂದದ್ದೇನೋ ಅನಿಸೊ, ಬಣ್ಣ-ಬಣ್ಣದ ಬಸ್ಗಳು, ಮೂರುಗಾಲಿ ರಿಕ್ಷಾ, ತಳ್ಳೋ ರಿಕ್ಷಾ, ಟಾಂಗಾ, ಟ್ಯಾಕ್ಸಿಗಳು, ಹಳೇ ಕಾಲದ ಕಟ್ಟಡಗಳು, ಬೆಳಗಿನ ಗಡಿಬಿಡಿಯಲ್ಲಿದ್ದ ಜನ-ಜಂಗುಳಿ… ಜೊತೆಗೆ ಹಿನ್ನೆಲೆಯಲ್ಲಿ ತಡೆದುಕೊಳ್ಳಲಾಗದಷ್ಟು ಧಗೆ! ಮೊದಲ ಬಾರಿಗೆ ನಾ ಬೆಂಗಳೂರನ್ನು ಮತ್ತೆ ಮತ್ತೆ ನೆನೆಯುವಂತಾಗಿತ್ತು. ಆದರೆ ಹೌರಾ ಸೇತುವೆಯ ಮೇಲೆ ನಮ್ಮ ಟ್ಯಾಕ್ಸಿ ಚಲಿಸುತ್ತಿದ್ದ ಕೆಲ ನಿಮಿಷಗಳು ಮಾತ್ರ ಈ ಧಗೆಯ ವಿಚಾರ ಮರೆತೇ ಹೋಗಿತ್ತು!

ಕಾಲಿಘಾಟ್ ನ ಕಾಲಿ ಮಂದಿರಕ್ಕೆ ತನ್ನದೇ ಆದ ಪ್ರಾಮುಖ್ಯತೆಯಿದೆ. ಇದು ಭಾರತದ ೫೧ ಶಕ್ತಿ ಪೀಠಗಳಲ್ಲಿ ಒಂದು. ಶಿವನ ರುದ್ರ ತಾಂಡವದ ಸಮಯದಲ್ಲಿ, ದಾಕ್ಷಾಯಣಿ(ಸತಿ)ಯ ಬಲಗಾಲಿನ ಬೆರಳುಗಳು ಈ ಸ್ಥಳದಲ್ಲಿ ಬಿದ್ದವೆಂಬುದು ನಂಬಿಕೆ. ಹೀಗಾಗಿ ಈ ದೇವಿ ಬಹಳ ಸತ್ವವುಳ್ಳವಳು ಎಂದು ಅಪಾರ ಜನರ ನಂಬಿಕೆ. ಮಂದಿರ ಬರುವ ಕೆಲವು ನಿಮಿಷಗಳ ಮೊದಲು ಟ್ಯಾಕ್ಸಿ ಚಾಲಕ ನಮ್ಮನ್ನು ಎಚ್ಚರಿಸಿದ, ಕಾಳಿ ಮಂದಿರದಲ್ಲಿ ಪೂಜೆಯ ಹೆಸರಿನಲ್ಲಿ ನಡೆಯುವ ಹಣ ಸುಲಿಗೆಯ ವಿಚಾರವಾಗಿ. ಮಂದಿರದಲ್ಲಿ ನಡೆಯುವ ಈ ಥರದ ಆಚರಣೆಗಳ ಕುರಿತು ನಮಗೆ ಯಾವಾಗಲೂ ಒಂದು ಥರದ ಮುಜುಗರ ಮತ್ತು ಅಸಮಾಧಾನ. ಆದರೆ ಏನೂ ಮಾಡಲಾಗದ ಪರಿಸ್ಥಿತಿ.

ಮಂದಿರದ ಬಳಿ ಟ್ಯಾಕ್ಸಿ ನಿಂತಾಗ, ಮೊದಲು ಪ್ರಸಾದ, ಹೂ-ಹಣ್ಣು ಖರೀದಿ. ನಂತರ ಕೈ-ಕಾಲು ತೊಳೆದುಕೊಂಡು ಹೊರಟಾಗ,

ನಮ್ಮೊಡನೇ ಬರುವ ಒಬ್ಬ ಪೂಜಾರಿ(?), ತುಂಬಿ-ತುಳುಕುವ ಜನಜಂಗುಳಿಯಲ್ಲಿ ಇನ್ನೇನು ಗರ್ಭಗುಡಿ ಹತ್ತಿರ ಹೋಗಬೇಕು ಅನ್ನುವಷ್ಟರಲ್ಲಿ ಪೂಜಾರಿಯ ಮಾತು ’ಈ ಗದ್ದಲದಲ್ಲಿ ಒಳಗೆ ಹೋಗಲು ಬಹಳ ಸಮಯ ಬೇಕಾಗುವುದು. ಪ್ರತಿ ಒಬ್ಬರಿಗೆ ನೂರು ರೂಪಾಯಿಯಂತೆ ನೀಡಿದರೆ, ಬೇರೆ ಸಾಲಿನಿಂದ ಒಳ ಹೋಗಿ, ಬೇಗ ದರ್ಶನ ಪಡೆಯಬಹುದು.’ ಬೇಡದೇ ಮಾಡಬೇಕಾದ ಚೌಕಾಶಿ ಮಂದಿರದಲ್ಲಿ! ಅಂತೂ-ಇಂತೂ ಗದ್ದಲದಲ್ಲಿ ದೇವಿಯ ದರ್ಶನ.

ಕಪ್ಪು ಬಣ್ಣ, ಕೆಂಪು ನಾಲಗೆ ಹೊರ ಚಾಚಿ ರೌದ್ರವಾಗಿ ಕಾಣುವ ದೇವಿಯ ಮುಖದಲ್ಲಿ ಅದೇನೋ ಅದ್ಭುತ ಕಳೆ. ಮಂದಿರದಲ್ಲಿ ಸ್ಪಷ್ಟವಾಗಿ ಕಾಣುವುದು ಈ ಮುಖವಷ್ಟೇ (ಈ ಮೂರ್ತಿಯ ಪೂರ್ಣ ರೂಪವಿಲ್ಲ. ಒಡಮೂಡಿದ ಮೂರ್ತಿಯಾದ್ದರಿಂದ ಕೇವಲ ಮುಖವಷ್ಟೇ ಎದ್ದು ಕಾಣುವುದು). ಒಂದೇ ನಿಮಿಷದಲ್ಲಿ, ’ದರ್ಶನವಾದ ಮೇಲೆ ದೇವಿ ಹೆಸರಲ್ಲಿ ಐನೂರೊಂದು ರೂಪಾಯಿ ಕೊಡಿ’ ಇನ್ನೊಂದು ದನಿ. ಅಲ್ಲಿ ನೂರು ರೂಪಾಯಿ ಕೊಟ್ಟು ಮರಳಿದ್ದಾಯಿತು. ನಂತರ ಸಂಕಲ್ಪ ಮಾಡಿಸಿ, ಪ್ರಸಾದ ನೀಡಿದ ಪೂಜಾರಿಯದು ಮತ್ತದೇ ಬೇಡಿಕೆ! ನಮಗೆ ತಿಳಿದಷ್ಟು ಹಣ ನೀಡಿದಾಗ ಆ ಮನುಷ್ಯ ಪ್ರಸಾದ ವಾಪಾಸು ಪಡೆಯಬೇಕಾಗಬಹುದು ಎಂದು ಬೆದರಿಕೆ ಹಾಕಿದಾಗಲಂತೂ ನಮಗೆ ರೋಸಿ ಹೋಗಿತ್ತು! ನಿಮ್ಮಿಷ್ಟ ಎಂದು ನಾವು ಕೈ ಚೆಲ್ಲಿದ ಮೇಲೆ ಅವರಿಷ್ಟದಂತೆ ಪ್ರಸಾದ ಅಂತೂ ಇಂತೂ ನಮ್ಮ ಕೈಗಿತ್ತರು ಪುಣ್ಯಾತ್ಮರು. ದೇವಿಯ ದರ್ಶನಕ್ಕಿಂತ, ಸುತ್ತ-ಮುತ್ತಲಿನ ಈ ವಾತಾವರಣಕ್ಕೆ ಎಲ್ಲರ ಮನಸೂ ಬಹಳ ಕಸಿವಿಸಿಗೊಂಡಿತ್ತು. ಹೊರಗೆ ಮರಳಿ, ಕುಂಕುಮ, ಬಳೆ, ದೇವಿಯ ಚಿತ್ರಪಟ ಖರೀದಿಸಿ ಟ್ಯಾಕ್ಸಿಗೆ ಮರಳಿದಾಗ, ಮನಸ್ಯಾಕೋ ಅರಳುವ ಬದಲು ಮುದುರಿ ಹೋಗಿತ್ತು!

ಅಲ್ಲಿಂದ ಮುಂದೆ ತೆರಳಿದ್ದು ಕೊಲ್ಕತ್ತದ ಇನ್ನೊಂದು ಪ್ರಮುಖ ಆಕರ್ಷಣೆಯಾದ ವಿಕ್ಟೋರಿಯ ಸ್ಮಾರಕ ಭವನಕ್ಕೆ. ವಿಶಾಲವಾದ ಉದ್ಯಾನವನದಿಂದ ಆವೃತವಾದ ಸುಂದರ, ಅಮೃತಶಿಲೆ ಕಟ್ಟಡ. ಈ ಕಟ್ಟಡವನ್ನು ದೂರದಿಂದ ನೋಡಿದರೂ, ಕೂಲಂಕುಷವಾಗಿ ಪರಿಶೀಲಿಸಿದರೂ ತಿಳಿಯುವುದು ಒಂದೇ ವಿಚಾರ, ಅದರ ವಾಸ್ತು ವಿನ್ಯಾಸದ ಅಪ್ರತಿಮತೆ. ಟಿಕೆಟ್ ತೆಗೆದು ಒಳ ಹೊರಟಾಗ, ಆ ವಿಶಾಲವಾದ ಜಾಗದಲ್ಲಿ ನಂದನ್ ಎಲ್ಲರಿಗಿಂತ ಮೊದಲು ಓಡಿದ್ದ. ಕಟ್ಟಡದ ಹತ್ತಿರ ಹೋದಂತೆ ಮೊದಲು ನಮ್ಮನ್ನು ಸ್ವಾಗತಿಸುವುದು ಸರ್ ಜಾರ್ಜ್ ಫ್ರ್ಯಾಂಪ್ಟನ್ ವಿರಚಿತ ವಿಕ್ಟೋರಿಯಾ ರಾಣಿಯ ಕಂಚಿನ ವಿಗ್ರಹ. ಮುಖ್ಯ ಕಟ್ಟಡದ ಮೆಟ್ಟಿಲುಗಳ ಬಳಿ ಮತ್ತೆ ಫೋಟೊ ಸಂಭ್ರಮ. ಪ್ರವಾಸದ ಪೂರ್ತಿ ತನಗೆ ಕ್ಯಾಮೆರ ನೀಡೆಂದು ಸತಾಯಿಸಿದ್ದ ನಂದನ್ಗೆ ಇಂದು ಶುಕ್ರದೆಸೆಯಿತ್ತು. ಅವನು ಹಲವಾರು ಚಿತ್ರ ಕ್ಲಿಕ್ಕಿಸಿದ, ಆ ಕ್ಲಿಕ್ಗಳಿಗೆ ಸಿಕ್ಕಿದ್ದು – ಒಂದು ಕಲ್ಲುಹಾಸು, ಇನ್ನೊಂದು ಅವರಮ್ಮ!

ಮ್ಯೂಸಿಯಂ ಒಳ ಹೊಕ್ಕ ತಕ್ಷಣ ಕಾಣುವುದು, ಕೋಲ್ಕತ್ತಾದ ಇತಿಹಾಸದ ಕುರಿತ ಛಾಯಾಚಿತ್ರಗಳು. ನಂತರದ ವಿಭಾಗದಲ್ಲಿ ಇತಿಹಾಸದಲ್ಲಿ ಬಳಕೆಯಾದ ವಿವಿಧ ಶಸ್ತ್ರಾಸ್ತ್ರಗಳ ಸಂಗ್ರಹ. ಪ್ರತಿಯೊಂದು ಸಂಗ್ರಹಕ್ಕೂ ಅದರದೇ ಆದ ವಿವರಗಳು. ಸಂಗ್ರಹಾಲಯದಲ್ಲಿ ನಂದನ್ನ ತಾಳ್ಮೆ ಪರೀಕ್ಷೆಯಾಗುತ್ತಲಿತ್ತು. ಹೀಗಾಗಿ ಅವನ ಚೇಷ್ಟೆಗಳು ನಿಧಾನವಾಗಿ ಶುರುವಾಗಿದ್ದವು. ಅಂತೂ-ಇಂತೂ ಅವನನ್ನು ಸಂಭಾಳಿಸಿಕೊಂಡು ಮೂರು ಮಹಡಿಗಳ ಮ್ಯೂಸಿಯಂ ಸುತ್ತು ಹೊಡೆದು ಬಂದದ್ದಾಯ್ತು. ಸ್ವಾತಂತ್ರ್ಯಪೂರ್ವ ಭಾರತದ ವಿವರವಾದ ದರ್ಶನ. ವಿರಳವಾಗಿ ದೊರೆಯುವ ಭಾರತದ ಪ್ರಮುಖ ಸ್ವಾತಂತ್ರ್ಯ ಯೋಧರ ಹಸ್ತಲಿಖಿತ ಪತ್ರಗಳು, ಐತಿಹಾಸಿಕ ಗ್ರಂಥಗಳು, ಐತಿಹಾಸಿಕ ಪ್ರಾಮುಖ್ಯತೆ ಹೊಂದಿದ ನೂರಾರು ಭಾರತೀಯ ಮತ್ತು ಪಾಶ್ಚಾತ್ಯ ವರ್ಣ ಚಿತ್ರಗಳು, ನಾಣ್ಯಗಳು, ತುಪಾಕಿ..ಹೀಗೆ ಈ ಸಂಗ್ರಹಾಲಯ ಅದ್ಭುತ ಸಂಗ್ರಹವನ್ನು ಹೊಂದಿದೆ. ಗಡಿಬಿಡಿಯಲ್ಲಿ ಸಂದರ್ಶನ ಮುಗಿಸಿಕೊಂಡು ಬಂದರೂ ಜೀವನದ ಕೆಲ ನಿಮಿಷ, ಇತಿಹಾಸದಲ್ಲಿ ಕಳೆದ ಅನುಭವ ನಮಗೆ. ಬಹಳ ವಿಶಾಲವಾಗಿರುವ, ಉತ್ತಮ ಸಂಗ್ರಹ ಹೊಂದಿರುವ ಸಂಗ್ರಹಾಲಯದಲ್ಲಿ ಇಡೀ ದಿನ ಕಳೆದುಬಿಡಬಹುದು. ಅಂಥದ್ದರಲ್ಲಿ, ನಾವು ಈ ಸಂಗ್ರಹಾಲಯದಲ್ಲಿ ಕಳೆದ ಕಾಲ ನಗಣ್ಯ. ಹಾಗೇ ತಿಳಿದುಕೊಂಡ ಜ್ಞಾನವೂ!

ಮ್ಯೂಸಿಯಂನಿಂದ ಹೊರ ಬಂದು ಟ್ಯಾಕ್ಸಿಗಾಗಿ ಕಾಯುತ್ತಾ ನಿಂತಾಗ ಕಂಡದ್ದು, ಅದರ ಎದುರಿನಲ್ಲೇ ಇರುವ ಮೈದಾನ್ ಮತ್ತು ರಾಜ-ಮಹಾರಾಜರ ಕಾಲದಲ್ಲಿ ಬಳಸುತ್ತಿದ್ದರೇನೋ ಎಂದೆನಿಸೋ, ಸರ್ವಾಲಂಕೃತವಾಗಿ ನಿಂತ ಕುದುರೆಯ ರಥ (ನಮ್ಮೂರ ಕಡೆ ಇದಕ್ಕೆ ಸರಳವಾಗಿ ಟಾಂಗಾ ಅನ್ನೋದು).ಇಷ್ಟೊತ್ತಿಗಾಗಲೇ ಫೇಸ್ಬುಕ್ ಮಿತ್ರ ನಟರಾಜು ಅವರಿಗೆ ಫೋನಾಯಿಸಿ. ಸಂಜೆ ೪ರ ಸಮಯಕ್ಕೆ ಅವರೊಂದಿಗೆ ಭೇಟಿಯಾಗುವುದೆಂದು ನಿರ್ಧಾರವಾಗಿತ್ತು. ನಾವೂ ಊಟ ಮುಗಿಸಿ, ಕೋಲ್ಕತ್ತ ಸ್ಪೆಶಲ್ ಕೆಲವು ಸಿಹಿಗಳನ್ನು ಸವಿದು, ಟ್ರ್ಯಾಂ ಮೂಲಕ, ನಮ್ಮ ಏ.ಸಿ. ಕೋಣೆಗೆ ತಲುಪಿ ಸ್ವಲ್ಪ ಸುಧಾರಿಸಿಕೊಂಡೆವು. ನಟರಾಜ್ ಅವರ ಪರಿಚಯವಾಗಿ ಇನ್ನೂ ಬಹಳ ದಿನಗಳಾಗಿರಲಿಲ್ಲ. ಸ್ವಲ್ಪ ಮುಜುಗರವೇ ಮನಸಲ್ಲಿದ್ದರೂ, ಅವರನ್ನು ಭೇಟಿಯಾದ ಮೇಲೆ ಹಾಗೆ ಅನ್ನಿಸಲೇ ಇಲ್ಲ. ಸಂಜೆ ನೋಡಬಹುದಾದ ಸ್ಥಳಗಳ ಬಗ್ಗೆ ಚರ್ಚಿಸುವಾಗ ಮಧ್ಯಾನ್ಹ ನಾವು ’ಇಂಡಿಯನ್ ಕಾಫಿ ಹೌಸ್’ ಅಂತ ತಿಳಿದು ’ಇಂಡಿಯ ಕಾಫಿ ಹೌಸ್’ ನೋಡಿ ಬಂದ ವಿಚಾರ ಬೆಳಕಿಗೆ ಬಂತು! ರವೀಂದ್ರನಾಥ ಟ್ಯಾಗೋರ್ ಮತ್ತು ಕಾಫಿ ಎರಡರ ಪ್ರಿಯಳಾದ ನನಗೆ ಈ ಸ್ಥಳವನ್ನು ಸಂದರ್ಶಿಸಬೇಕೆಂದು ಬಹಳ ಆಸೆಯಿತ್ತು. ಹೀಗಾಗಿ ನಮ್ಮ ಪಯಣ ಕಾಲೇಜ್ ಬೀದಿಯಲ್ಲಿರುವ ’ನಿಜವಾದ’ ಇಂಡಿಯನ್ ಕಾಫಿ ಹೌಸ್ ಕಡೆಗೆ ಹೊರಟಿತು.

ಸಾಲು-ಸಾಲು ಪುಸ್ತಕದಂಗಡಿಗಳನ್ನು ದಾಟಿ ನಾವು ಕಾಫಿ ಹೌಸ್ ಕಡೆ ಹೊರಟಿದ್ದರೆ, ನಟರಾಜ್ ಅವರು ರಸ್ತೆಯುದ್ದಕ್ಕೂ ಸಾಂದರ್ಭಿಕವಾಗಿ ಕಾಲೇಜು ಬೀದಿಯ ಬಗ್ಗೆ, ಅಲ್ಲಿರುವ ಆ ಪುಸ್ತಕ ಅಂಗಡಿಗಳ ಬಗ್ಗೆ ವಿವರಿಸುತ್ತಾ ನಡೆದಿದ್ದರು. ಕಾಫಿ ಕುಡಿಯುವ ಮುನ್ನ ನಂದನ್ ಅವರ ಕಬ್ಬಿನ ಹಾಲಿನ ಪಾನವಾಯಿತು. ಕವಿ ರವೀಂದ್ರನಾಥ ಟ್ಯಾಗೋರ್ ಅಂಥ ಮಹಾನ್ ವ್ಯಕಿಗಳು ಸಂದರ್ಶಿಸುತ್ತಿದ್ದ ಸ್ಥಳ, ಇಂದಿಗೂ ಕವಿಗಳು, ಕಲಾವಿದರು ಭೇಟಿಯಾಗಲು ಆಯ್ದುಕೊಳ್ಳುವ ಅಚ್ಚು-ಮೆಚ್ಚಿನ ಸ್ಥಳ, ಹೀಗೆಲ್ಲಾ ಓದಿ ತಿಳಿದವಳಿಗೆ, ಕಾಫಿ ಹೌಸ್ ಬೋರ್ಡನ ನಂತರ ಕಂಡದ್ದು, ಜಾಡುಗಟ್ಟಿದ ವಿದ್ಯುತ್ ಮೀಟರ್ಗಳು! ಮೇಲೇರಿ ಹೋದವಳಿಗೆ ಅಂತೂ ಇಂತೂ ಕಂಡದ್ದು ಬರಹಗಳಲ್ಲೆಲ್ಲ ಉಲ್ಲೇಖಿಸಿದಂಥ ಪ್ರಫುಲ್ಲ ವಾತಾವರಣ. ಎತ್ತರದ ಸೂರು, ಪ್ರಾಯಶಃ ದಶಕಗಳಿಂದ ತಿರುಗುತ್ತಿದ್ದಿರಬಹುದಾದ ಫ್ಯಾನ್ಗಳು, ರವೀಂದ್ರನಾಥ ಟ್ಯಾಗೋರರ ಒಂದೆರಡು ಅಪರೂಪದ ಚಿತ್ರಗಳು, ನೋಡಿದಾಕ್ಷಣ ಇಷ್ಟವಾಗುವಂಥ ಪೇಂಟಿಂಗ್ಗಳು ಮತ್ತು ವಿವಿಧ ವಯೋಮಾನದ ಜನರ ಸಂಗಮ! ನಾವು ಕಾಫಿ, ಪಕೋಡ ತರಿಸುವಷ್ಟರಲ್ಲಿ ನಂದನ್ ಮತ್ತೆ ತನ್ನ ಛಾಯಾಗ್ರಹಣ ಪ್ರಯೋಗಗಳನ್ನು ಮುಂದುವರೆಸಿದ್ದ. ಈ ಬಾರಿ ಕ್ಲಿಕ್ಕಿಗೆ ಸಿಕ್ಕಿದ್ದು ಅಟರಾಜ್/ನೋಟ್ರಾಜ್/ನಟರಾಜ್ ಅಂಕಲ್ .

ಅದಾದ ನಂತರ ಅಲ್ಲೇ ಸಮೀಪದಲ್ಲಿದ್ದ ಇನ್ನೊಂದು ಪುಟ್ಟ ಬುದ್ಧ ಮಂದಿರವನ್ನು ನೋಡಿ, ದಸರೆಗೆ ಅಣಿಯಾಗುತ್ತಿದ್ದ ಕೋಲ್ಕತ್ತದ ಒಂದು ಪೆಂಡಾಲ್ಗೆ ಭೇಟಿ ನೀಡಿ, ಮತ್ತೊಂದು ಐತಿಹಾಸಿಕ ಜ್ಯೂಸ್ ಅಂಗಡಿಯಲ್ಲಿ ಜ್ಯೂಸ್ ಕುಡಿದು – ಹೀಗೇ ಮುಂದುವರೆದಿತ್ತು ಕೋಲ್ಕತ್ತದಲ್ಲೊಂದು ನಮ್ಮ ಮಧುರ ಸಂಜೆ. ಕೋಲ್ಕತ್ತ ಬಜಾರಿನಲ್ಲಿ ಒಂದು ಸುತ್ತು ಹಾಕಿ, ನಟರಾಜ್ ಕರೆದೊಯ್ದ ಶಾಪಿಂಗ್ ಸೆಂಟರ್ ಅಲ್ಲಿ ಒಂದಷ್ಟು ಖರೀದಿ ಮಾಡಿ, ಕೊನೆಯಲ್ಲಿ ಪಾನಿ ಪೂರಿ ಮತ್ತು ಸ್ಯಾಂಡ್ವಿಚ್ ಅನ್ನು ಸವಿಯುವುದರೊಂದಿಗೆ ನಮ್ಮ ಅಂದಿನ ದಿನಕ್ಕೆ ಇನ್ನೇನು ತೆರೆ ಬೀಳುವುದರಲ್ಲಿತ್ತು. ನಡೆಯುತ್ತಲೇ ನಾವು ತಂಗಿದ್ದ ಕೋಣೆಗೆ ತಲುಪಿದಾಗ ಸಮಯ ಆಗಲೇ ಹತ್ತರ ಆಸು-ಪಾಸಿನಲ್ಲಿತ್ತು. ನಮ್ಮನ್ನು ಬೀಳ್ಕೊಂಡು ಹೊರಟ ನಟರಾಜ್ ಅವರು ಮರುದಿನ ನಮ್ಮೊಟ್ಟಿಗೆ ಬೇಲೂರು ಮಠ ಮತ್ತು ದಕ್ಷಿಣೇಶ್ವರಕ್ಕೆ ಬರಲು ಒಪ್ಪಿಕೊಂಡಾಗ ಖುಶಿಯಾಗಿತ್ತು.

ಮರುದಿನ ಮುಂಜಾನೆ, ಮತ್ತದೇ ದಕ್ಷಿಣ ಭಾರತದ ಉಪಹಾರ ಮುಗಿಸಿ ಹೊರಟದ್ದು ಬೇಲೂರು ಮಠಕ್ಕೆ. ನಮ್ಮಣ್ಣ ಮೈಸೂರಿನ ರಾಮಕೃಷ್ಣ ವಿದ್ಯಾಶಾಲಾನಲ್ಲೇ ತನ್ನ ಪ್ರೌಢಶಾಲೆಯ ದಿನಗಳನ್ನು ಕಳೆದಿದ್ದರಿಂದ, ನನಗೆ ಚಿಕ್ಕಂದಿನಿಂದಲೇ, ರಾಮಕೃಷ್ಣ ಪರಮಹಂಸ, ವಿವೇಕಾನಂದ, ಶಾರದಾದೇವಿ ಇವರುಗಳ ಕುರಿತಾದ ಹಲವಾರು ಪುಸ್ತಕಗಳು ಮೇಲಿಂದ ಮೇಲೆ ಓದಲು ಸಿಕ್ಕೇ ಸಿಗುತ್ತಿದ್ದವು. ಆ ಚಿಕ್ಕ ವಯಸಿನಲ್ಲಿ ಬೇಲೂರು ಮಠ, ದಕ್ಷಿಣೇಶ್ವರ ಇವೆಲ್ಲ ನನ್ನ ಮುಗ್ಧ ಮನಸಿನ ಕಲ್ಪನೆಗಳಲ್ಲಿ ಅದೆಷ್ಟೋ ಬಾರಿ ಮೂಡಿ ಮಾಯವಾಗಿದ್ದವು. ಈ ದಿನ ಪ್ರತ್ಯಕ್ಷ ದರ್ಶನದ ದಿನವಾಗಿತ್ತು.

ಆವರಣದೊಳಗೆ ಕಾಲಿಡುತ್ತಿದ್ದಂತೆ ಸ್ವಲ್ಪ ದೂರದಲ್ಲಿ, ಕಟ್ಟಡಗಳ ಮರೆಯಲ್ಲಿ ಕಾಣುವ ಹೂಗ್ಲಿ ನದಿ. ಗೇಟು ದಾಟಿ ಸ್ವಲ್ಪ ದೂರದಲ್ಲೇ ಇರುವುದು ರಾಮಕೃಷ್ಣ ಮ್ಯೂಸಿಯಂ. ರಾಮಕೃಷ್ಣ ಪರಮಹಂಸ, ಶಾರದಾದೇವಿ, ಸ್ವಾಮಿ ವಿವೇಕಾನಂದ ಇವರ ಜೀವನಕ್ಕೆ ಸಂಬಂಧಿತ ಸವಿಸ್ತಾರ ಮಾಹಿತಿ, ಅವರು ಬಳಸಿದ ವಸ್ತುಗಳು, ಅವರು ವಾಸವಾಗಿದ್ದ ಮನೆಯ ಮಾದರಿ, ಅವರ ದಿರಿಸುಗಳು, ಹೀಗೇ ಅನೇಕಾನೇಕ ವಸ್ತುಗಳ ಅಚ್ಚುಕಟ್ಟಾದ ಸಂಗ್ರಹ ಇಲ್ಲಿದೆ. ಅದಷ್ಟೇ ಅಲ್ಲದೇ ರಾಮಕೃಷ್ಣ ಮಿಶನ್ನ ಸ್ಥಾಪನೆ, ಮತ್ತು ಅದರ ಬೆಳವಣಿಗೆಯ ಕುರಿತಾದ ವಿವರಗಳೂ ಇಲ್ಲಿ ನೋಡ ಸಿಗುತ್ತವೆ. ಮತ್ತೊಮ್ಮೆ ಇತಿಹಾಸದಿನ್ನೊಂದು ಮಗ್ಗುಲಲ್ಲಿ ಕೆಲ ನಿಮಿಷ ಕಳೆದು ಹೊರಬಂದು ಪರಮಹಂಸ ಮಂದಿರದೆಡೆಗೆ ನಡೆದೆವು.

ಆವರಣದೊಳಗೆ ಫೋಟೊ ತೆಗೆಯಲು ಅವಕಾಶವಿರಲಿಲ್ಲ. ಈ ಪ್ರಮುಖ ಮಂದಿರದ ವಾಸ್ತು ವಿನ್ಯಾಸ ಮನಸೆಳೆಯುತ್ತದೆ. ಹಿಂದೂ, ಮುಸ್ಲಿಂ, ಮತ್ತು ಕ್ರೈಸ್ತ ಧರ್ಮದ ಸಂಕೇತಗಳನ್ನು, ವಾಸ್ತು ವಿನ್ಯಾಸದ ಮಾದರಿಯನ್ನು ಒಟ್ಟುಗೂಡಿಸಿ ಈ ಮಂದಿರದ ವಾಸ್ತು ವಿನ್ಯಾಸವನ್ನು ರೂಪುಗೊಳಿಸಲಾಗಿದೆಯಂತೆ. ಅಂದಹಾಗೆ ಈ ಮಂದಿರದ ವಿನ್ಯಾಸದ ಪರಿಕಲ್ಪನೆ ನೀಡಿದ್ದು ಬೇರೆ ಯಾರೂ ಅಲ್ಲ, ಸ್ವಾಮಿ ವಿವೇಕಾನಂದರು. ಇದನ್ನು ವಿನ್ಯಾಸಗೊಳಿಸಿದ್ದು ಸ್ವಾಮಿ ವಿಜ್ಞಾನಂದ. ಮಂದಿರದೊಳಗೆ ರಾಮಕೃಷ್ಣ ಪರಮಹಂಸರಿಗೆ ವಂದಿಸಿ, ಮತ್ತೆ ಕೆಲ ನಿಮಿಷಗಳ ಮೌನಾಚರಣೆ. ಮಂದಿರದ ಒಳಗಿನ ವಾಸ್ತು ವಿನ್ಯಾಸವನ್ನೂ ನಾ ಗಮನಿಸುತ್ತಲಿದ್ದೆ. ಬಹಳ ಚಂದದ ವಿನ್ಯಾಸ.

ಮಠದ ಆವರಣದಲ್ಲಿ ಇವೆರಡೂ ಸ್ಥಳಗಳನ್ನು ನೋಡಿ ನಾವು ದೋಣಿ ವಿಹಾರ ಹೊರಟಿದ್ದು ದಕ್ಷಿಣೇಶ್ವರದೆಡೆಗೆ. ಗಂಗೆಯಿಂದ ಹರಿದು ಬರುವ ಹೂಗ್ಲಿಯಲ್ಲಿ ಸುಮಾರು ಜನ ಮಿಂದು ಪಾವನರಾಗುತ್ತಿದ್ದರು. ಅಗಲವಾದ ನದಿಯಲ್ಲಿ, ಸುಡುವ ಬಿಸಿಲಲ್ಲಿ ದಕ್ಷಿಣೇಶ್ವರದೆಡೆಗೆ ದೋಣಿ ಪಯಣ. ದೋಣಿಯಲ್ಲಿ ಹೋಗುವಾಗ, ನಂಗೆ ಮತ್ತೆ, ಮತ್ತೆ ರಂಗೀತ್ ಮತ್ತು ತೀಸ್ತಾರದ್ದೇ ನೆನಪು. ಜಗದ ಹಂಗಿರದೇ ಕಾಡ ಮಡಿಲಲ್ಲಿ ಸಚ್ಛಂದವಾಗಿ ಹರಿಯುತ್ತಿದ್ದ ಆ ನದಿಗಳೆದುರು, ಗಂಗೆ ಬಹಳ ಶಾಂತವೆನಿಸಿದಳು, ತನ್ನೊಡಲಲ್ಲಿ ಸೇರಿದ ಎಲ್ಲ ಕಲ್ಮಶಗಳ ತಡೆದುಕೊಂಡು! ಅಲ್ಲೊಬ್ಬ ಹುಡುಗ, ನೀರಿನಲ್ಲಿ ಗಾಳದಂಥದ್ದೇನೋ ಬಿಡುತ್ತಿದ್ದ ನದಿಯೊಳಗೆ. ಇವರು ಪ್ರಶ್ನಿಸಿದರು ’ಅದು ಏನು ಗೊತ್ತೇ?’ ನಾನಂದೆ ಬಹುಶಃ ಮೀನು ಹಿಡಿಯುತ್ತಿರಬಹುದು ಅಂತ. ಆಗವರು, ’ಅವನು ತನ್ನ ಗಾಳಕ್ಕೆ ಅಯಸ್ಕಾಂತ ಅಂಟಿಸಿದ್ದಾನೆ, ನದಿಯಲ್ಲಿ ಜನ ಹಾಕಿರುವ ನಾಣ್ಯಗಳನ್ನು ಹೆಕ್ಕಿಕೊಳ್ಳಲು.’ ಅವರಂದ ಮಾತಿಗೆ ನನಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದೆ ಸುಮ್ಮನಾದೆ.

ದಕ್ಷಿಣೇಶ್ವರ ತಲುಪಿದಾಕ್ಷಣ ನಾವೆಲ್ಲರೂ ತಲೆಗೆ ನದಿ ನೀರು ಪ್ರೋಕ್ಷಿಸಿಕೊಂಡು ಒಳ ನಡೆದೆವು. ಕಾಳಿಯ ಮುಖ್ಯ ಮಂದಿರದೆಡೆಗೆ. ಈ ಭವತಾರಿಣಿಯ ಆಜ್ಞೆಯಂತೆ, ಇಲ್ಲಿ ಮಂದಿರ ನಿರ್ಮಿಸಿದ್ದು, ರಾಣಿ ರಾಷ್ಮೋನಿ. ಮತ್ತು ಈ ಮಂದಿರದಲ್ಲಿ ಮಾ ಕಾಳಿಯನ್ನು ವರ್ಷಗ್ಗಳಗಟ್ಟಲೇ ಆರಾಧಿಸಿದ್ದು ರಾಮಕೃಷ್ಣ ಪರಮಹಂಸ. ಸಾಂಪ್ರದಾಯಿಕ, ಬಂಗಾಳಿ ನವ-ರತ್ನ ವಾಸ್ತು ಶೈಲಿಯಲ್ಲಿ ನಿರ್ಮಿಸಿರುವ ಈ ಮಂದಿರವನ್ನು ನೋಡಲು ಎರಡು ಕಣ್ಣು ಸಾಲದು. ಮಂದಿರದೊಳಕ್ಕೆ ಹೋಗಲು ಸಾಲಿನಲ್ಲಿದ್ದ ಭಕ್ತಾದಿಗಳೊಂದಿಗೆ ನಾವೂ ಮಂದಿರದ ಆವರಣ ತಲುಪಿದೆವು. ಮಂದಿರದ ಆವರಣದಲ್ಲಿ ನೂರೆಂಟು ಪಾರಿವಾಳಗಳು, ಪಕ್ಕದಲ್ಲಿ, ಕೃಷ್ಣ, ರಾಧಾ ಕೃಷ್ಣರ ಮಂದಿರ. ಅಲ್ಲಿ ದೇವರ ದರ್ಶನ ಪಡೆದು ನಾವು ಮಾತೆಯ ದರ್ಶನ ಪಡೆಯಲು ಮತ್ತೆ ಸಾಲಿನಲ್ಲಿ. ಇಲ್ಲಿನ ಕಾಳಿ ಮಾತೆಯ ದರ್ಶನ ಬಹಳ ಸಹನೀಯ ಮತ್ತು ಸಮಂಜಸವಾಗಿ ಆಯಿತು. ಗರ್ಭಗೃಹದಲ್ಲಿ ಮತ್ತದೇ ರೌದ್ರ, ಆದರೆ ಕಳೆವಂತ ಕಾಳಿಯ ದರ್ಶನ. ಅವಳು ನಿಂತಿರುವುದು ಶಿವನ ಎದೆ ಮೇಲೆ. ದರ್ಶನ ಮುಗಿಸಿ ಅಲ್ಲೇ ಇದ್ದ ಹನ್ನೆರಡು ಶಿವ ಮಂದಿರಗಳನ್ನು ನೋಡಲು ನಾನು, ಇವರು ಹೋದರೆ, ನಂದನ್ ಮತ್ತೆ ಅಟರಾಜ್ ಅಂಕಲ್ ಪಾರಿವಾಳಗಳೊಂದಿಗೆ ಆಟವಾಡಲು ಹೋದರು.

ಅಲ್ಲಿಂದ ಮರಳಿ, ಮಂದಿರದಲ್ಲಿ ಕೆಲ ನಿಮಿಷ ಶಾಂತಚಿತ್ತರಾಗಿ ಕುಳಿತು ನಂತರ ಹೊರಬಿದ್ದೆವು. ಮಂದಿರದ ಆವರಣದ ಹೊರಗೆ ಇರುವ ಶಾರದಾ ಮಂದಿರ, ಮತ್ತು ರಾಮಕೃಷ್ಣರ ಕುಟೀರಗಳಿಗೆ ಭೇಟಿ ನೀಡಿ, ಅಲ್ಲೇ ಇರುವ ಪುಟ್ಟ ಮಾರುಕಟ್ಟೆಯಲ್ಲಿ ಒಂದು ಸುತ್ತು ಹಾಕಿಕೊಂಡು ಬಂದು ದಕ್ಷಿಣೇಶ್ವರ ಮಂದಿರದಿಂದ ನಮ್ಮೆಲ್ಲರ ಹೆಜ್ಜೆಗಳು ಹೊರ ನಡೆದಿದ್ದವು. ಮಂದಿರದಾಚೆಯ ರಸ್ತೆ ಬದಿಗಿನ ಉಪಹಾರ ಗೃಹದಲ್ಲಿ, ಲೂಚಿ, ಭಾಜಿ, ಸಮೋಸ ಮತ್ತು ಗುಲಾಬ್ ಜಾಮೂನಿನ ಮಧ್ಯಾನ್ಹದೂಟ ಮುಗಿಸಿ, ಟ್ಯಾಕ್ಸಿ ಏರಿ ಹೊರಟಿದ್ದು ಸುಭಾಷ್ ಚಂದ್ರ ಭೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ. ( ಬೆಳಿಗ್ಗೆ ಕೋಣೆಯಿಂದ ಹೊರಟಾಗಲೇ ಗಂಟು-ಮೂಟೆ ಕಟ್ಟಿ ಟ್ಯಾಕ್ಸಿಯಲ್ಲಿ ತುಂಬಲಾಗಿತ್ತು). ಅಲ್ಲಿಯವರೆಗೂ ನಮಗೆ ಆತ್ಮೀಯವಾಗಿ ಜೊತೆ ನೀಡಿದ ನಟರಾಜ್ ಅವರಿಗೆ ಹೃತ್ಪೂರ್ವಕ ವಂದನೆಗಳನ್ನು ತಿಳಿಸಿ, ನಾವು ವಿಮಾನ ನಿಲ್ದಾಣದೊಳಗೆ ತೆರಳಿದೆವು.

ಮತ್ತೆ ಸೆಕ್ಯುರಿಟಿ, ಮತ್ತೆ ಚೆಕ್ಇನ್, ಮತ್ತೆ ಕಾಯುವಿಕೆ. ವಿಮಾನವೇರಿ ಹೊರಟಾಗ ಸಂಜೆ ಮುಗಿಲಿನ ಸೊಬಗು. ಬೆಂಗಳೂರು ತಲುಪಿದಾಗ ರಾತ್ರಿ. ಕಾರ್ ಏರಿದ ಮೇಲೆ ಚಾಲಕನ ಮೊದಲ ಮಾತು ಕಾವೇರಿ ವಿವಾದದ ಬಗ್ಗೆ, ಹಿಂದಿನ ದಿನ ಆಚರಿಸಿದ ಬಂದ್ ಬಗ್ಗೆ. ಆ ಕ್ಷಣದಲ್ಲಿ ನಾವು ಮಾಡಿದ ಪ್ರವಾಸದ ಬಗ್ಗೆ ದೂರದಲ್ಲೆಲ್ಲೋ ಅಪರಾಧಿ ಭಾವ ಸುಳಿದು ಮಾಯವಾಯಿತು. (ಕಾವೇರಿಯ ಬೆಂಕಿಯಲ್ಲಿ ಕರ್ನಾಟಕವಿದ್ದರೆ, ನಾವು ಡಾರ್ಜೀಲಿಂಗ್ ತಂಪಿನಲ್ಲಿದ್ದೆವಲ್ಲ ಎಂದು). ಏನೋ ಅಸಹಾಯಕ ಭಾವ! ಮನೆ ತಲುಪಿ, ಎಲ್ಲದಕ್ಕೂ ತೆರೆ ಎಳೆದು ನಿದ್ದೆ!

– ಮುಗಿಯಿತು –

‍ಲೇಖಕರು G

20 October, 2012

3 Comments

  1. Nataraju S M

    ಅಕ್ಕೋ, ನನ್ನ ಹೆಸರಿಗೂ ನಿಮ್ಮ ಲೇಖನದಲ್ಲಿ ಒಂಚೂರು ಜಾಗ ಕೊಟ್ಟಿದ್ದಕ್ಕಾಗಿ ಥ್ಯಾಂಕ್ ಯೂ.. 🙂 ನಿಜ ಹೇಳಬೇಕು ಅಂದ್ರೆ ನಾನು ಭೋಜನ ಪ್ರಿಯ. ನೀವು ಇಲ್ಲಿಗೆ ಬಂದಾಗ ಒಳ್ಳೆ ರೆಸ್ಟೋರೆಂಟ್ ನಲ್ಲಿ ಊಟ ಕೊಡಿಸಬೇಕು ಅಂತ ನನಗೆ ಬಹಳ ಆಸೆ ಇತ್ತು.. ನಾನು ಹೋಗಬೇಕೆಂದಿದ್ದ ರೆಸ್ಟೋರೆಂಟ್ ನ ವಿಳಾಸವನ್ನು ನೆಟ್ ನಲ್ಲಿ ನೋಡಿ ಹಿರಿಯರೊಬ್ಬರಿಗೆ ನಿಮ್ಮಿಬ್ಬರ ಜೊತೆ ಊಟಕ್ಕೆ ಆ ರೆಸ್ಟೋರೆಂಟ್ ಗೆ ಹೋಗುವ ಕಾರ್ಯಕ್ರಮವಿದೆ ಅಂತ ಮೆಸೇಜ್ ಸಹ ಮಾಡಿಬಿಟ್ಟಿದ್ದೆ. ವಿಠ್ಠಲ್ ಮತ್ತು ನಿಮ್ಮ diet conscious ನಿಂದ ನನ್ನ ಆಸೆ ಆಸೆಯಾಗಿಯೇ ಉಳಿದುಬಿಟ್ಟಿದೆ.. ಅದಕ್ಕೋಸ್ಕರ ನೀವು ಕೋಲ್ಕತ್ತಾ ಮತ್ತೆ ಬಂದು ಊಟ ಮಾಡಿಕೊಂಡು ಹೋಗಬೇಕಾಗಿ ವಿನಂತಿ.. 🙂
    ಇತಿ
    ನೋಟ್ ರಾಜ್ ಅಂಕಲ್

  2. Gopaal Wajapeyi

    ಕೊಲ್ಕೊತ್ತಾ ಚಿತ್ರಣ ಚೆನ್ನಾಗಿದೆ. ಬಂಗಾಲಿಗಳೇ ಹಾಗೆ. ಹಿಂದೇನೋ ಬೆನ್ನಟ್ಟಿ ಬರುತಿದೆ ಎಂಬಂಥ ತರಾತುರಿಯ ಜನ. ಅವಸರ, ಅವಸರ, ಅವಸರ… ಮನೆಯಲ್ಲೂ ಅವಸರ, ಮಾತಿನಲ್ಲೂ ಅವಸರ, ಬೀದಿಯಲ್ಲಂತೂ ಅಬ್ಬಾ ಬಲೇ ಅವಸರ…ಅದರ ಪ್ರಭಾವವೋ ಎಂಬಂತೆ ಇಲ್ಲಿಯ ನಿರೂಪಣೆಯೂ ಅವಸರದಲ್ಲೇ ಸಾಗಿದೆ. ಮೊದಲೇ ಅವರ ಮಾತು ತಿಳಿಯುವುದಿಲ್ಲ. ನಾವು ‘ಅ’ ಎಂದು ಉಚ್ಚರಿಸುವುದನ್ನು ಅವರು ‘ಒ’ ಎಂದು ಉಚ್ಚರಿಸುತ್ತಾರೆ. ರೋಶೋಗುಲ್ಲಾ ಎಂದರೆ ಮುಗಿಯಿತು…
    ತೀಸ್ತಾ, ರಂಗೀತ್, ಹೂಗ್ಲಿ… ಅಲ್ಲಿಯ ಸವಕಲು ಕಲ್ಲುಗಳ ಬಗ್ಗೆ ಹೇಳಿದ್ದೀರಿ. ನೆನಪಿಗೆ ಒಂದೆರಡನ್ನಾದರೂ ತಂದಿದ್ದೀರೆನು? (ನನಗೆ ಹಿಂದೆ ಆ ಚಟವಿತ್ತು. ಎಲ್ಲಿಯೇ ಹೋದರು ಅಲ್ಲಿಯ ಚಿಕ್ಕದಾದ ಚಂದದ ಕಲ್ಲೊಂದನ್ನು ತಂದು ತೊಡೆದು ಇಟ್ಟುಕೊಳ್ಳುವುದು. ಹುಬ್ಬಳ್ಳಿಯಲ್ಲಿ ಮನೆ ಕಟ್ಟಿದ್ದಾಗ ಒಂದು ತೊಟ್ಟಿ ಥರ ಮಾಡಿ ಅಲ್ಲಿ ಈ ಚಿಕ್ಕ ಚಿಕ್ಕ ಕಲ್ಲುಗಳನ್ನು ಖಚಿತಗೊಳಿಸಿದ್ದೆ. ಆದರೆ, ಆ ಮನೆಯನ್ನು ಮಾರಬೇಕಾಗಿ ಬಂತು.) ಆರು ದಿನಗಳ ‘ಯಾನದ ಅನುಭವ’ ಮಜಾ ನೀಡಿತು. ಅದಕ್ಕಾಗಿ ಥ್ಯಾಂಕ್ಸ್.

  3. ಮಂಜುಳಾ ಬಬಲಾದಿ

    ಸರಿ ಬಿಡಿ ನಟರಾಜ್, ನೀವು ಕರೆಯೋದು ಹೆಚ್ಚಾ, ನಾವು ಬರೋದು ಹೆಚ್ಚಾ? 😛

    ವಾಜಪೇಯಿ ಸರ್ ನಿಮ್ಮ ಅವಲೋಕನ 100% ಸರಿಯಾಗಿದೆ..! ಶರಣು ನಿಮಗೆ.. 🙂 ಹೌದು ನಾನೂ ತಂದಿದ್ದೀನಿ ಬಹಳಷ್ಟು ಸಮೆಕಲಕಲ್ಲುಗಳನ್ನು.. ಅದಕ್ಕಾಗೇ ನಮ್ಮ ಬ್ಯಾಗೇಜ್ ಕನಿಷ್ಟ 1 ಕೆ.ಜಿ.ಯಾದ್ರೂ ಜಾಸ್ತಿಯಾಗಿತ್ತು.. ನಿಮಗಿದ್ದಂಥ ಹುಚ್ಚು ನನಗೂ ಇದೆ 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading