ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲ್ಲಿಗೆ ಕವಿಯನ್ನು ನೆನೆಸಿಕೊಂಡ್ರು ಟಿ ಎನ್ ಸೀತಾರಾಮ್

ಟಿ ಎನ್ ಸೀತಾರಾಮ್

ಮಾಯಾಮೃಗ ಮಾಡುವ ಮುನ್ನ ಮತ್ತೊಮ್ಮೆ ತೀವ್ರ ಆರ್ಥಿಕ ಕಷ್ಟಕ್ಕೆ ಮತ್ತು ಅವಮಾನಕ್ಕೆ ಸಿಕ್ಕಿ ಹಾಕಿಕೊಂಡಿದ್ದೆ… ಯಾವುದೇ ಪ್ರಾಜೆಕ್ಟ್ ಮಾಡಿ ಎರಡು ವರ್ಷ ಮುಗಿದಿತ್ತು… ಕೈಯಲ್ಲಿ ಪೈಸೆ ದುಡ್ಡಿರಲಿಲ್ಲ… ಲಂಕೇಶ್ ಮೇಷ್ಟ್ರಿಗೆ ಗುಡ್ ಬೈ ಹೇಳುವ ಮೊದಲ ಹೆಜ್ಜೆಯಲ್ಲಿ ನಿಂತಿದ್ದೆ…. ( ಮೇಷ್ಟ್ರ ಹತ್ತಿರ ಸೇರಿಕೊಂಡಿದ್ದ ಪುಣ್ಯಾತ್ಮನೊಬ್ಬ ಅವರ ಹತ್ತಿರದವರನ್ನೆಲ್ಲಾ ದೂರ ಮಾಡಿದಂತೆಯೇ ನನ್ನನ್ನೂ ದೂರ ಮಾಡಿದ್ದ… ತೇಜಸ್ವಿ, ಚಂಪಾ,ಜಿಎಸ್ಸೆಸ್, ಸತ್ಯಮೂರ್ತಿ ಆನಂದೂರು , ಚಂದ್ರಶೇಖರ ಆಲೂರು… ಮುಂತಾದ ಎಷ್ಟೋ ಜನ ಆ ವೇಳೆಗೆ ಇಂಥದ್ದೇ ಸಂಗತಿಗಳಿಂದಾಗಿ ಮೇಷ್ಟ್ರಿಂದ ದೂರ ಹೋಗಿದ್ದರು… ) ಇಂಥಾ ಒಂದುದಿನ ವಾರ್ತಾ ಇಲಾಖೆಯ ನಿರ್ದೇಶಕರಾಗಿದ್ದ ವಿಟ್ಠಲ ಮೂರ್ತಿ ಯವರು
ಕೆ. ಎಸ್. ನರಸಿಂಹ ಸ್ವಾಮಿ ಯವರ ಬಗ್ಗೆ ಸರಕಾರಕ್ಕಾಗಿ ಒಂದು ಸಾಕ್ಷ್ಯ ಚಿತ್ರ ಮಾಡಲು ಹೇಳಿದಾಗ ಇಂಥ ಗೌರವ ನನಗೆ ಸಂತೋಷ ಮತ್ತು ಪುಳಕಗಳನ್ನು ತಂದರೂ ಅದರಿಂದ ಸಿಗಬಹುದಾದ ಹಣದ ಯೋಚನೆ ನನಗೆ ಸ್ವಲ್ಪ ಮಟ್ಟಿನ ನಿರಾಳತೆ ತಂದಿತ್ತು ( ಈ ಪ್ರಾಜೆಕ್ಟ್ ನಿಂದ ನನಗೆ ಸ್ವಂತಕ್ಕೆ ಸುಮಾರು ೩೦ ರಿಂದ ೪೦ ಸಾವಿರದವರೆಗೆ ಸಿಗುವ ಸಾಧ್ಯತೆ ಇತ್ತು)

ಅರ್ಧ ಗಂಟೆಯ ಸಾಕ್ಷ್ಯ ಚಿತ್ರದಲ್ಲಿ ಯಾವ ನರಸಿಂಹಸ್ವಾಮಿ ಯವರ ಬಗ್ಗೆ ಹೇಳಲಿ ಎಂಬ ದ್ವಂದ್ವ… ಅವರ ಎಲ್ಲಾ ಪದ್ಯಗಳನ್ನೂ ಓದಿದರೆ ಕನಿಷ್ಠ ಮೂರು ಬಗೆಯ ಕವಿ ನರಸಿಂಹ ಸ್ವಾಮಿಗಳೂ, ಒಬ್ಬ ಮನುಷ್ಯ ನರಸಿಂಹಸ್ವಾಮಿ ಯವರೂ ಕಾಣುತ್ತಿದ್ದರು… ಕವಿಯಲ್ಲದ , ಸಾಹಿತ್ಯ ಅಭ್ಯಾಸ ಮಾಡಿಲ್ಲದ , ವಿಮರ್ಶಕನಲ್ಲದ ನಾನು ನನಗೆ ತೋಚಿದಂತೆ ಇದನ್ನು ಅರ್ಥ ಮಾಡಿಕೊಳ್ಳುತ್ತಾ ಬೆರಗಾದೆ…. ಶುರುವಿನಲ್ಲಿ ಪ್ರೀತಿ, ಪ್ರೇಮ , ಲಾಲಿತ್ಯ ,ಕುಡಿಮಿಂಚು , ಮುಂಗುರುಳು , ಮಲ್ಲಿಗೆಯ ದಂಡೆ , ಮದುವೆ , ಮೊದಲ ದಿನದ ಮೌನ…. ಮುಂತಾದ ನವಿರು ಭಾವಗಳನ್ನು ಹುಟ್ಟಿಸುತ್ತಾ ಅತ್ಯಂತ ಜನಪ್ರಿಯವಾಗಿದ್ದ ಪ್ರೇಮ ಜಾನಪದದ ಕವಿ ಇದ್ದಕ್ಕಿದ್ದಂತೆ” ಶಿಲಾಲತೆ “ಎಂಬ ಕಟುವಾದ ಹೆಸರಿನ ಸಂಕಲನ ತರುತ್ತಾರೆ..
‘ಬಿಳಿಯ ಹೂಗಳ ಕವಿತೆ ಗೋರಿಗಳ ಮೇಲೆ’ ಎಂಬ ಬೆಚ್ಚಿ ಬೀಳಿಸುವ ಹೆಸರನ್ನು ಮೊದಲ ಕವನಕ್ಕೆ ಇಡುತ್ತಾರೆ… ಪ್ರೀತಿ ಪ್ರೇಮದ ಜಾಗದಲ್ಲಿ ಸಿಟ್ಟು, ಆಕ್ರೋಶ , ನೋವುಗಳು ತುಂಬುತ್ತವೆ…
ಬಂದ ಬಾಗಿಲು ಮಣ್ಣು ; ಬಿಡುವ ಬಾಗಿಲು ಮಣ್ಣು…. ಎನ್ನುವಂಥಹ ನೂರಾರು ಸಾಲುಗಳನ್ನು ಬರೆಯುತ್ತಾರೆ ( ಇವರ ಅನುಭವ ತೆಳುವೆಂದೂ , ಹೂವಿಗಿಂತ ಇವರ ಕವನ ಮೇಲೆ ಏಳುವುದಿಲ್ಲವೆದು ಹಂಗಿಸಿ ನೋಯಿಸಿದ ನವ್ಯ ಸಾಹಿತಿಗಳ ಗುಂಪಿಗೆ ಇವರು ಕೊಟ್ಟ ಉತ್ತರ ಈ ಪದ್ಯಗಳೆಂದು ಬಲ್ಲವರು ಹೇಳುತ್ತಾರೆ ) ನಂತರ ಇವರು ಬರೆದ ‘ ತೆರೆದ ಬಾಗಿಲು ‘
ಸಂಕಲನದಿಂದ ಇವರು ಸೃಷ್ಟಿಸಿದ ಲೋಕವೇ ಬೇರೆ ಬಗೆಯದ್ದು…
ಬಿಡಿ… ಇದನ್ನೆಲ್ಲಾ ವಿವರಿಸುವಷ್ಟು ಪಂಡಿತ ನಾನಲ್ಲ… ಒಟ್ಟಿನಲ್ಲಿ ನನ್ನ ಪ್ರೀತಿಯ ಈ ಕವಿಯ ಬಗ್ಗೆ ಸಾಕ್ಷ್ಯ ಚಿತ್ರ ಮಾಡಿದೆ… ಶೂಟಿಂಗ್ ನ ಅಷ್ಟೂ ದಿನ ಅವರು ಮತ್ತು ಅವರ ಪತ್ನಿ ನಮ್ಮ ಜತೆಗೇ ಇದ್ದರು ….ಆ ಸಾಕ್ಷ್ಯಚಿತ್ರದಲ್ಲಿ ಅನಂತಮೂರ್ತಿ ಮೇಷ್ಟ್ರು, GSS , ಲಕ್ಷ್ಮಿನಾರಾಯಣ ಭಟ್ಟರು , HSV,ರಾಮಚಂದ್ರ ಶರ್ಮ ಮುಂತಾದವರೆಲ್ಲ ಕೆ ಎಸ್ ಎನ್ ಅವರ ಪದ್ಯ ಓದಿ ಮಾತನಾಡಿದ್ದಾರೆ….. ಶೂಟಿಂಗ್ ಮಧ್ಯದಲ್ಲಿಯೇ ಅವರ ಹುಟ್ಟಿದ ಹಬ್ಬ ಕೂಡಾ ಬಂತು…. ಎಲ್ಲರೂ ಇದ್ದರು… ಸಂತೋಷದ ದಿನಗಳು ಅವು…. ನನಗೆ ೩೦ ಸಾವಿರ ಸಿಕ್ಕಿತು…
ಕೆಎಸ್ ನ ಅವರಿಗೆ ಸಾಕ್ಷ್ಯ ಚಿತ್ರ ನೋಡಿ ಎಷ್ಟು ಸಂತೋಷ ಆಯಿತೆಂದರೆ ಕೆಲವೇ ದಿನದಲ್ಲಿ ನಾನು ಮಾಯಾಮೃಗ ಮಾಡಿದಾಗ ಅದಕ್ಕೆ ಒಂದೇ ದಿನದಲ್ಲಿ ಶೀರ್ಷಿಕೆ ಗೀತೆ ಬರೆದು ಕೊಟ್ಟರು… ಯಾವುದೇ ಚಿತ್ರಕ್ಕಾಗಲೀ , ಧಾರಾವಾಹಿ ಗಾಗಲೀ ಅವರು ಹಾಡು ಬರೆಯುತ್ತಿರಲಿಲ್ಲ…. ಬರೆದಿದ್ದನ್ನು ಉಪಯೋಗಿಸಿಕೊಳ್ಳಬಹುದಾಗಿತ್ತು ಅಷ್ಟೇ… ಮಾಯಮೃಗಕ್ಕೆ ಬರೆದರು… ಸಂತೋಷದ ದಿನಗಳು
 

‍ಲೇಖಕರು G

26 January, 2015

8 Comments

  1. ಅಕ್ಕಿಮಂಗಲ ಮಂಜುನಾಥ

    ‘ಪುಷ್ಪ ಕವಿಯ ಪರಾಕು’ ‘ತೆಳುವಾದ ಅನುಭವದವರು’ ಎಂದು ಕೆ.ಎಸ್.ನ.ರವರನ್ನು ನವ್ಯದವರು ಜರಿದುಕೊಳ್ತಾ ಇದ್ದರಂತೆ.ಬರು ಬರುತ್ತಾ ಯಾಕೋ ನವ್ಯದವರು ಓದುಗರಿಂದ ದೂರವಾಗಿ ಈ ಕೆ.ಎಸ್.ನ, ಜಿ.ಎಸ್.ಎಸ್, ಎಕ್ಕುಂಡಿ ಯಂತಹವರೇ ಉಳಿದುಕೊಂಡರು. ಇಂತಹ ಮಲ್ಲಿಗೆ ಕವಿಯ ಮಧುರ ನೆನಪುಗಳನ್ನು ಅವರ ಶತಮಾನೋತ್ಸವದ ಸಂದರ್ಭದಲ್ಲಿ ಮೆಲುಕು ಹಾಕಲು ಅವಕಾಶ ಮಾಡಿಕೊಟ್ಟ ಅವದಿಗೆ ಮತ್ತು ಟಿ.ಎನ್.ಸೀತಾರಾಂ ಅವರಿಗೆ ಅಭಿನಂದನೆಗಳು.

    • Aravind

      ಬರು ಬರುತ್ತಾ ಯಾಕೋ ನವ್ಯದವರು ಓದುಗರಿಂದ ದೂರವಾಗಿ ಈ ಕೆ.ಎಸ್.ನ, ಜಿ.ಎಸ್.ಎಸ್, ಎಕ್ಕುಂಡಿ ಯಂತಹವರೇ ಉಳಿದುಕೊಂಡರು
      … what a shallow observation.

  2. satish javaregowda

    Arthapoorna nenapina lekhana.

  3. Anonymous

    ಮಲ್ಲಿಗೆ ಮಹಾ ಕವಿಗಳನ್ನ ನೆನೆದು ….. ಸುಗಂಧ ಪಸರಿಸಿದ್ದಕ್ಕೆ ನಮ್ಮೂರಿನ ಶ್ರೀ ಸೀತಾರಾಮ ರವರಿಗೆ ಅಭಿವಂದನೆ

  4. ಶ್ವೇತಾ.ಎ

    ಮಲ್ಲಿಗೆಯ ಕವಿಯೊಂದಿಗೆ, ಮಾತಿನಲ್ಲಿಯೇ ಮಾರ್ಮಿಕತೆಯನ್ನು ಹುಟ್ಟಿಸಿ ಓದುಗರ ಮನವನ್ನು ಲೇಖನದಲ್ಲಿ ಸೆರೆಹಿಡಿಯುವ ಈ ಲೇಖನ ನಿಜಕ್ಕೂ ಆಸಕ್ತಿಯುತವಾಗಿದೆ…

  5. ಸತ್ಯನಾರಾಯಣ

    ವಿಮರ್ಶೆಯಲ್ಲಿ ಎರಡು ವಿಧವಂತೆ: ಬೈವಿಮರ್ಶೆ ಮತ್ತು ಜೈವಿಮರ್ಶೆ! ನವ್ಯರಿಂದ ಜೈವಿಮರ್ಶೆ ಮಾಡಿಸಿಕೊಂಡ ಬಹುತೇಕರ ಸಾಹಿತ್ಯ ಕಾಲದ ಕಸದಬುಟ್ಟಿ ಸೇರಿದೆ. ಬೈವಿಮರ್ಶೆ ಮಾಡಿಸಿಕೊಂಡರೂ ಮಲ್ಲಿಗೆಯ ಕವಿಯಂತಹ ನರಸಿಂಹಸ್ವಾಮಿಯವರ ಸಾಹಿತ್ಯ ಕಾಲದ ಪರೀಕ್ಷೆಯಲ್ಲಿ ಗೆದ್ದು ಉಳಿದಿವೆ.!

  6. n d ramaswamy

    Poet for all time. Thanks to TN seetharmsir

  7. ಮುಗಿಯದ ಮೌನ- GKN

    ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸೀತಾರಾಂ ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading