ಶಿಥಿಲಾವಸ್ಥೆಯಲ್ಲಿರುವ ಕವಿ ಕೆ ಎಸ್ ನರಸಿಂಹಸ್ವಾಮಿ ಹುಟ್ಟಿದ ಮನೆ
ಡಾ ಸತ್ಯಪ್ರಕಾಶ್ ಎಂ ಆರ್
ಕನ್ನಡದ ಅತ್ಯಂತ ಜನಪ್ರಿಯ ಕವಿಗಳಲ್ಲಿ ಒಬ್ಬರಾದ ಕೆ ಎಸ್ ನರಸಿಂಹಸ್ವಾಮಿ ಅವರ ವ್ಯಕ್ತಿತ್ವ ಮತ್ತು ಕಾವ್ಯಪ್ರತಿಭೆಯ ಬಗ್ಗೆ ಹಲವಾರು ಬರಹಗಳು ಪ್ರಕಟವಾಗಿವೆ. ಕನ್ನಡಿಗರೆಲ್ಲರಿಗೂ ಕೆಎಸ್ನ ಮೈಸೂರು ಮಲ್ಲಿಗೆಯ ಕವಿತೆಗಳ ಮೂಲಕ ಚಿರಪರಿಚಿತರೇ. ಆದರೆ ಕೆಎಸ್ನ ಅವರ ಹುಟ್ಟೂರು, ಹುಟ್ಟಿದ ಮನೆಯ ಪರಿಚಯ ಬಹಳಷ್ಟು ಮಂದಿಗೆ ಇರಲಿಕ್ಕಿಲ್ಲ. ರಾಷ್ಟ್ರಕವಿ ಕುವೆಂಪು ಆಡಿ ಬೆಳೆದ ಮನೆ ಕುಪ್ಪಳಿಯಲ್ಲಿ ಕವಿಮನೆಯಾಗಿ ರೂಪುಗೊಂಡಿದೆ. ಅದೇ ರೀತಿ ಕೆಎಸ್ನ ಅವರ ಹುಟ್ಟಿದ ಮನೆ ಈಗ ಯಾವ ಸ್ಥಿತಿಯಲ್ಲಿರುಬಹುದೆಂಬ ಕುತೂಹಲವನ್ನು ತಣಿಸಿಕೊಳ್ಳಲು ಕೆ ಆರ್ ಪೇಟೆಯ ಕಿಕ್ಕೇರಿಗೆ ಭೇಟಿ ನೀಡಿದ ಸಂದರ್ಭದ ಸಣ್ಣ ಲೇಖನ!

ಕೆ ಎಸ್ ನರಸಿಂಹಸ್ವಾಮಿ ಯಾರಿಗೆ ಗೊತ್ತಿಲ್ಲ ಹೇಳಿ! ಕನ್ನಡ ಸಹೃದಯರ ಮನಸಿನಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಮೈಸೂರು ಮಲ್ಲಿಗೆಯ ಪ್ರೇಮಕವಿ ಕೆ ಎಸ್ ನರಸಿಂಹಸ್ವಾಮಿ ಅವರ ಕವಿತೆಗಳು ಮತ್ತು ಗೀತೆಗಳು ಕನ್ನಡ ನಾಡಿನ ಮೂಲೆ ಮೂಲೆಗಳಲ್ಲಿ ಇಂದಿಗೂ ಜನಪ್ರಿಯ ಮತ್ತು ಅಜರಾಮರ..
ಕೆ ಎಸ್ ನರಸಿಂಹಸ್ವಾಮಿ ಕನ್ನಡಿಗರೆಲ್ಲರಿಗೂ ಚಿರಪರಿಚಿತರೇ ಆದರೂ ಅವರ ಹುಟ್ಟೂರು, ಹುಟ್ಟಿದ ಮನೆ, ಅವರ ಕಾವ್ಯಪ್ರತಿಭೆ ಚಿಗುರೊಡೆದ ಸ್ಥಳದ ಪರಿಚಯ ಬಹುತೇಕರಿಗೆ ಇರಲಿಕ್ಕಿಲ್ಲ. ಸಾಹಿತ್ಯಾಸಕ್ತರಿಗೆ ಕೆ ಎಸ್ ನರಸಿಂಹಸ್ವಾಮಿಯವರ ಹುಟ್ಟೂರಿನ ಹೆಸರು ಗೊತ್ತಿರಬಹುದು. ಆದರೆ, ಅವರು ಹುಟ್ಟಿದ ಮನೆಯನ್ನು ಬಹಳಷ್ಟು ಮಂದಿ ನೋಡಿರುವ ಸಾಧ್ಯತೆ ತೀರಾ ಕಡಿಮೆ.
ಮೈಸೂರಿನಿಂದ ಸುಮಾರು ೭೦ ಕಿ.ಮೀ ಅಂತರದಲ್ಲಿರುವ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ೧೯೧೫ರಲ್ಲಿ ಕೆಎಸ್ನ ಜನಿಸುತ್ತಾರೆ. ಮೈಸೂರಿನಿಂದ ಚನ್ನರಾಯಪಟ್ಟಣಕ್ಕೆ ಹಾದು ಹೋಗುವ ರಸ್ತೆಯಲ್ಲಿ ಕೆ.ಆರ್.ಪೇಟೆ ತಾಲೂಕು ಕೇಂದ್ರಸ್ಥಾನದಿಂದ ಸುಮಾರು ಐದು ಕಿ.ಮೀ ಸಾಗಿದರೆ ಇದೇ ರಾಜ್ಯ ಹೆದ್ದಾರಿಯಲ್ಲಿ ಕಿಕ್ಕೇರಿ ಊರು ಇದಿರಾಗುತ್ತದೆ. ಕಿಕ್ಕೇರಿಯ ಸರ್ಕಾರಿ ಬಸ್ನಿಲ್ದಾಣದ ಹಿಂಭಾಗದ ರಸ್ತೆಯಲ್ಲಿ ಕೂಗಳತೆಯ ದೂರದಲ್ಲಿ ನರಸಿಂಹ ಸ್ವಾಮಿ ದೇವಸ್ಥಾನವಿದೆ. ಒಂದು ಸಣ್ಣ ಕೋಟೆಯ ದ್ವಾರದಂತಿರುವ ಈ ರಸ್ತೆಯನ್ನು ಪ್ರವೇಶಿಸಿದರೆ ಸಿಗುವ ಅಗ್ರಹಾರದಲ್ಲಿಯೇ ಇದೆ ಮಲ್ಲಿಗೆಯ ಕವಿ ಕೆಎಸ್ ನರಸಿಂಹಸ್ವಾಮಿ ಅಂಬೆಗಾಲಿಡಲು ಕಲಿತ ಊರು ಮನೆ!

ಕೆಎಸ್ನ ತಂದೆ ಸುಬ್ಬರಾಯರು ಕಿಕ್ಕೇರಿಯವರು. ತಾಯಿ ನಾಗಮ್ಮ ಹತ್ತಿರದ ಹೊಸಹೊಳಲಿನವರು. ಕೆಎಸ್ನ ಮಗುವಾಗಿದ್ದಾಗಲೇ ಕೆಲಸ ಹುಡುಕಿಕೊಂಡು ಮೈಸೂರಿಗೆ ವಾಸ್ತವ್ಯ ಬದಲಿಸುತ್ತಾರೆ ಸುಬ್ಬರಾಯರು. ಅಲ್ಲಿಯೇ ಕೆಎಸ್ನ ಶಿಕ್ಷಣ ಪ್ರಾರಂಭವಾಗುತ್ತದೆ. ಅಲ್ಲಿಯೇ ಅವರ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ನಡೆಯುತ್ತದೆ. ನಂತರ ಮಹಾರಾಜ ಹೈಸ್ಕೂಲಿನಲ್ಲಿ ವಿಧ್ಯಾಭ್ಯಾಸ ಮುಂದುವರೆಸುತ್ತಾರೆ. ಕಿಕ್ಕೇರಿ ಮತ್ತು ಮೈಸೂರು ನಗರ ಎರಡೂ ಕೆಎಸ್ನ ಕಾವ್ಯ ಪ್ರತಿಭೆ ರೂಪುಗೊಳ್ಳಲು ಕಾರಣವೆಂದರೆ ತಪ್ಪಾಗಲಾರದು.
ಕನ್ನಡದಲ್ಲಿ ಜನಪ್ರಿಯ ಪ್ರೇಮ ಕವಿ ಹುಟ್ಟಿದ ಪರಿಸರದಲ್ಲಿಯೇ ಸರಳ ಸುಂದರ ಪ್ರೇಮದ ಕುರುಹುಗಳಿರಬೇಕು. ಈ ಭಾಗದ ಯಾವುದೇ ಒಂದು ಗ್ರಾಮದ ಹಾಗೆಯೇ ಇರುವ ಕಿಕ್ಕೇರಿ ವಿಶಿಷ್ಟವಾಗಿಯೇನೂ ಕಾಣಿಸುವುದಿಲ್ಲ. ಬಹುಶಃ, ಮನೆಯ ವಾತಾವರಣ, ಸಂಸ್ಕಾರ, ಮತ್ತು ಕೆಎಸ್ನ ಅವರ ಸಹಜ ಪ್ರತಿಭೆಯೇ ಅವರ ಕಾವ್ಯಕ್ಕೆ ಸ್ಫೂರ್ತಿಯಾಯಿತೇನೊ. ಕುವೆಂಪು ಅವರ ಕಾವ್ಯಕ್ಕೆ ಕವಿಶೈಲದ ಮನಮೋಹಕ ಪ್ರಕೃತಿ ಸ್ಪೂರ್ತಿಯಾದರೆ, ಕೆಎಸ್ನ ಅವರ ಬಾಲ್ಯದ ಸ್ಮೃತಿಪಟಲದಲ್ಲಿ ನಿಸ್ಪೃಹ ಪ್ರೇಮವನ್ನು ದಾಖಲಿಸಿದ್ದು ಹಳೆಯ ಮೈಸೂರು ಭಾಗದ ಸಾಧಾರಣವಾದ ಗ್ರಾಮ್ಯ ಪರಿಸರ.
ಕನ್ನಡದ ಅತ್ಯಂತ ಜನಪ್ರಿಯ ಕವಿ ಹುಟ್ಟಿದ ಮನೆ ಇಂದು ದಯನೀಯ ಸ್ಥಿತಿಯಲ್ಲಿರುವುದು ವಿಷಾದಕರ ಸಂಗತಿ. ಮನೆ ಈಗ ಬಹುತೇಕ ಶಿಥಿಲಗೊಂಡಿದೆ. ಮನೆಯ ಸುತ್ತ ಕಸದ ರಾಶಿಬಿದ್ದಿದೆ. ನಾಡಿಗೆ ಮಲ್ಲಿಗೆಯ ಕಂಪನ್ನು ಬೀರಿದ ಕವಿ ಹುಟ್ಟಿದ ಮನೆ ಇಂದು ಅಕ್ಷರಶಃ ನಾರುತ್ತಿದೆ! ಈ ಮನೆಯಲ್ಲಿ ಯಾರೂ ವಾಸ ಕೂಡ ಇಲ್ಲ! ತೀರ ಇತ್ತೀಚಿನವರೆಗೆ ಈ ಮನೆಯನ್ನು ಖರೀದಿಸಿದವರು ಬೇರೊಬ್ಬರಿಗೆ ಭೋಗ್ಯಕ್ಕೆ ಕೊಟ್ಟಿದ್ದರು. ಈಗ ಅವರೂ ಕೂಡ ಖಾಲಿ ಮಾಡಿದ್ದು, ಮನೆಗೆ ಬೀಗ ಹಾಕಲಾಗಿದೆ.
ಪ್ರೇಮಕವಿ ಹುಟ್ಟಿ ಬೆಳೆದ ಮನೆ ಬಹುತೇಕ ನಿರ್ಲ್ಯಕ್ಷಕ್ಕೆ ಒಳಗಾಗಿದೆ. ಮನೆಯನ್ನು ವಶಕ್ಕೆ ಪಡೆದು ಕೆಎಸ್ನ ಸ್ಮಾರಕ ನಿರ್ಮಿಸಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಆರಂಭಿಕ ಪ್ರಯತ್ನ ನಡೆಸಿ ನಂತರ ಮರೆತೇ ಬಿಟ್ಟಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಇಲ್ಲಿಗೆ ಭೇಟಿ ನೀಡಿದ್ದು, ಸ್ಮಾರಕ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದರು. ಎಚ್. ಡಿ. ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ಮತ್ತೊಮ್ಮೆ ಈ ಬಗ್ಗೆ ಮನವಿ ನೀಡಲಾಯಿತು. ಆದರೆ ಇದುವರೆಗೂ ಸ್ಮಾರಕ ನಿರ್ಮಾಣಕ್ಕೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

ಕೆಎಸ್ನ ಅವರ ಹೆಸರಿನಲ್ಲಿ ಕಿರಿದಾದ ಒಂದು ಗ್ರಂಥಾಲಯವನ್ನು ನಿರ್ಮಿಸಿ ಕಿಕ್ಕೇರಿಯ ಗ್ರಾಮಸ್ಥರು ನೆಚ್ಚಿನ ಕವಿಗೆ ಗೌರವ ತೋರಿದ್ದಾರೆ. ಆದರೆ ಈ ಗ್ರಂಥಾಲಯವೂ ನಿಯಮಿತವಾಗಿ ಬಳಕೆಯಾಗುತ್ತಿಲ್ಲ. ಓಣಿಯ ನಿವಾಸಿಗಳಿಗೆ ಕೆಎಸ್ನ ಬಗ್ಗೆ ಮಾಹಿತಿ ಇದ್ದರೂ, ಬಹುತೇಕರು ಅವರನ್ನು ನೋಡಿಯೇ ಇಲ್ಲ. ಒಂದು ಪೀಳಿಗೆಯೇ ಬದಲಾಗಿರುವಾಗ ಇದು ಸಹಜವೇ! ಆದರೆ ಗ್ರಾಮದಲ್ಲಿನ ಹಳೆಯ ತಲೆಮಾರಿನ ಕೆಲವು ಹಿರಿಯರು ಕೆಎಸ್ನ ಅವರನ್ನು ನೋಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ನಾಡಿನ ಸಹೃದಯರು ಎಂದೂ ಮರೆಯದ ಹಾಡುಗಳನ್ನು ರಚಿಸಿದ ಪ್ರೇಮಕವಿಯನ್ನು ಹುಟ್ಟಿದ ಊರೇ ಮರೆತಂತಿರುವಾಗ ಜನಪ್ರತಿನಿಧಿಗಳು ನಿರ್ಲಕ್ಷ್ಯ ತಾಳಿರುವುದರಲ್ಲಿ ಆಶ್ಚರ್ಯವೇನಿಲ್ಲ.
ರಾಷ್ಟ್ರಕವಿ ಕುವೆಂಪು ಅವರು ಕೂಡ ಕೆ ಎಸ್ ನರಸಿಂಹಸ್ವಾಮಿ ಅವರಂತೆಯೇ ಹುಟ್ಟಿದ ಊರನ್ನು ಬಿಟ್ಟು ಮೈಸೂರಿನಲ್ಲಿ ಸಾಹಿತ್ಯ ಮತ್ತು ಬದುಕನ್ನು ಕಟ್ಟಿಕೊಂಡಿದ್ದು. ಕುವೆಂಪು ಹುಟ್ಟಿ ಬೆಳೆದ ಕುಪ್ಪಳಿಯ ಮನೆ ಕವಿಮನೆಯಾಗಿ ರೂಪುಗೊಂಡರೆ, ಅವರ ಹುಟ್ಟೂರು ಸಾಹಿತ್ಯಾಸಕ್ತರಿಗೆ ಕವಿಶೈಲವಾಗಿ ರೂಪುಗೊಂಡಿತು. ಇಂದಿಗೂ ಸಾಹಿತ್ಯಕ ವಾತಾವರಣವನ್ನು ಜೀವಂತವಾಗಿರಿಸಿಕೊಂಡಿರುವ ಕುವೆಂಪು ಹುಟ್ಟಿ ಬೆಳೆದ ಮನೆಯನ್ನು ರಾಜ್ಯದ ಪ್ರಮುಖ ಸಾಹಿತ್ಯ ಸ್ಮಾರಕವನ್ನಾಗಿಸಲು ಸರ್ಕಾರ, ಸಂಘಸಂಸ್ಥೆಗಳು ತೋರಿದ ಕಾಳಜಿ ಮತ್ತು ಗೌರವ ಪ್ರೇಮಕವಿ ಕೆಎಸ್ನ ಅವರ ವಿಚಾರದಲ್ಲಿ ಸಾಧ್ಯವಾಗಲಿಲ್ಲ.
ಸ್ಮಾರಕ ನಿರ್ಮಾಣಕ್ಕಾಗಿ ಇದುವರೆವಿಗೂ ಯಾವ ಸಂಘ ಸಂಸ್ಥೆಗಳಾಗಲಿ, ಕನ್ನಡ ಸಾಹಿತ್ಯ ಪರಿಷತ್ತಾಗಲಿ ಸರ್ಕಾರಕ್ಕೆ ಬಲವಾದ ಒತ್ತಡ ಹೇರಲು ಸಾಧ್ಯವಾಗಿಲ್ಲ! ಬಹುಶಃ ಈ ವಿಚಾರದಲ್ಲಿಯೂ ಕೂಡ ಕೆಎಸ್ನ ಬಡವರಾಗಿಯೇ ಉಳಿದರೇನೋ ಎನ್ನಿಸದಿರದು. ಕುಪ್ಪಳಿಯ ಕವಿಶೈಲದಲ್ಲಿ ಕುವೆಂಪು ನೆನಪಿನಲ್ಲಿ ಕವಿಮನೆಯಿದೆ. ಧಾರವಾಡದ ಸಾಧನಕೇರಿಯಲ್ಲಿ ವರಕವಿ ಬೇಂದ್ರೆ ಸ್ಮಾರಕವಿದೆ, ಕಿಕ್ಕೇರಿಯಲ್ಲಿ ಪ್ರೇಮಕವಿಯ ಕೆಎಸ್ ನರಸಿಂಹಸ್ವಾಮಿ ಸ್ಮಾರಕವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಯಾಕೆ ನಿರ್ಮಿಸಬಾರದು? ಸ್ಮಾರಕ ನಿರ್ಮಾಣಗೊಳ್ಳಲಿ, ಬಿಡಲಿ, ಇಹದ ಪರಿಮಳದ ಹಾದಿಯಲ್ಲಿ ಮಲ್ಲಿಗೆಯ ಕಂಪನ್ನು ಬೀರಿದ ಅನನ್ಯ ಪ್ರೇಮಕವಿಯ ಕವಿತೆಗಳು ಮಾತ್ರ ಕನ್ನಡ ಸಹೃದಯರ ಮನಸಿನಲ್ಲಿ ಅಚ್ಚಳಿಯದೆ ಮನೆಮಾಡಿದೆ.








ಸರ್ಕಾರದಿಂದ ಸ್ಮಾರಕದ ಭಾಗ್ಯ ಕೆಲವೇ ಕೆಲವು ಪುಣ್ಯವಂತ ಸಾಹಿತಿಗಳಿಗೆ ಮಾತ್ರಾ ದೊರಕಿದೆಯಷ್ಟೇ