– ವಿಶಾಲ್ ಮ್ಯಾಸರ್
ಮರವೊಂದು
ಊಳಿಡುತ್ತಿದೆ
ಹಕ್ಕಿಗಳೆಲ್ಲ ಎದ್ದು
ಗುಳೆ ಹೋಗಿವೆ
ಬೇರುಗಳೆಲ್ಲ ಆಳದಲ್ಲಿ
ಒಣಗಿ ಕೃಶವಾಗಿ
ಕೂದಲಂತೆ ಎಳೆ ಎಳೆಯ
ಸೀಳಿ ಹೊರಟಿವೆ
ಗುಡ್ಡವೊಂದು ಬೆಂಕಿಯ ಒಡಲುಗಟ್ಟಿ ಹೊಗೆಯಾಡುತ್ತಿದೆ
ಬೆವರೇ ಬಾಯಿ ತೆರೆದು
ಮಳೆಯ ಕರೆದಿದೆ
ತಂತಿ ಹರಿದಿದೆ
ಸ್ವರದ ವಾಸನೆ ಮರೆತು
ಕೆಳಗಿನ ಡಿಂಬ ಕಣ್ಣೀರ ತುಂಬಿ
ಚಿತ್ತಾರ ಅಣುಕಿ ಹಾಕಿದೆ
ನಾನು ಸುಡುತ್ತಿರುವೆ
ಮುಟ್ಟಬೇಡಿ ಇಲ್ಲಿ
ನೀವು ಮುಟ್ಟದ ಗಾಯಗಳು
ಹಾಗೆ ಮಾತಿನ ಉಪ್ಪು ಉಂಡಿವೆ
ಅಯ್ಯಾ
ರೆಕ್ಕೆಯ ಕರುಣಿಸು
ಗುರುವೇ
ಬಿಡಿ ಬಿಡಿಯಾಗಿ ಬೂದಿಯಾಗಿ
ಮತ್ತೊಮ್ಮೆ ಮಗದೊಮ್ಮೆ ಧೂಳಿಯಾಗದೆ
ಹಿಡಿ ಹಿಡಿ ನನ್ನನ್ನು
ಹಿಡಿಯಾಗಿ ಹಾರುವೆ
ಹಾರುವೆ
ಮರ್ತ್ಯದ ಮಾತು ತಿಳಿಯದ ಊರಿಗೆ
ನಾನೀಗ
ಉರಿದು ಹೋಗುತ್ತಿದ್ದೇನೆ
ಒಳಗೊಳಗೆ
ಹೊರಗೊರಗೆ






0 Comments