ಮರಳಿ ಊರಿಗೆ ಒಲುಮೆ ಗೂಡಿಗೆ..

ಸದಾಶಿವ್ ಸೊರಟೂರು

ಊರೆಂದರೆ ತರಚಿದ ಹಿತವಾದ ಮಂಡಿ, ಊರೆಂದರೆ ಬಲವಾಗಿ ಇಳಿದ ತಾಯಿ ಬೇರು, ಊರೆಂದರೆ ಅ ಆ ತಿದ್ದಿಸಿದ ಮೇಷ್ಟ್ರು, ಊರೆಂದರೆ ಅಪ್ಪ ಅಮ್ಮ, ಊರೆಂದರೆ ಹೊಲ, ಬೆಳೆದ ಪೈರು, ಹರಿವ ನೀರು, ಓರಗಿಯವರ ಜೋರು, ಸಾಲು ಹಬ್ಬಗಳ ತೇರು.. ಊರೆಂದರೆ ಸ್ವರ್ಗಕ್ಕೆ ಹಚ್ಚಿದ ಕಿಚ್ಚು!

ಬೆಚ್ಚಿಗಿನ ಊರಲಿ ಇರಗೊಡದ ಬದುಕು ಕ್ರೂರಿ. ಮಧ್ಯಮ ವರ್ಗದ ಬಾಳೊಂದು ಹೆಗಲೇರಿ ಕೂತಾಗ ಕಾಲಿಗೆ ಚಕ್ರಕಟ್ಟಿಕೊಳ್ಳದೆ ಬೇರೆ ದಾರಿಯಿಲ್ಲ. ಬರೀ ಅನ್ನಕ್ಕಾಗಿಯೆ ಇಡೀ ಊರನ್ನೇ ಸಣ್ಣ ಬ್ಯಾಗಿನಲಿ ತುಂಬಿಕೊಂಡು ಹೊರಡದೇ ವಿಧಿಯಿಲ್ಲ. ಸದಾ ಕರೆಯುವ ಊರಿನ ದನಿಗೆ ಕಿವುಡಾಗಿ ಎಲ್ಲೊ ಕೂತ ರೊಟ್ಟಿ ಮುರಿಯುವ ದರ್ದು ಬದುಕಿನದು..

ಅಂತ ದರ್ದಿಗೆ ಜೊತೆಯಾಗಿದ್ದು ನಾನು ಓದಿದ ಭರ್ತಿ ಅಂಕಗಳು. ಅನಾಯಾಸವಾಗಿ ನೌಕರಿಯೊಂದನು ಬದುಕು ದಯಪಾಲಿಸಿತು. ಜೇಬಿನಲ್ಲಿ ಅವ್ವ ಕೊಟ್ಟ ಐನೂರು ಇಟ್ಟುಕೊಂಡು, ಮಾಸಲು ಬ್ಯಾಗಿಗೆ ಎರಡು ಜೊತೆ ಬಟ್ಟೆ ಮತ್ತು ಹಸಿವು ಇಟ್ಟುಕೊಂಡು ಊರು ಬಿಟ್ಟಿದ್ದೆ. ಬದುಕು ನನ್ನನ್ನು ಊರು ಬಿಡಿಸಿ ಹೊರಡಿಸಿತ್ತು. ಊರಿಗೆ ನನ್ನ ಮೇಲೆ ಅದೆಂತಹ ಜಿದ್ದೊ!? ಮೈಸೂರು ನನ್ನನ್ನು ಪ್ರೀತಿಯಿಂದಲೆ ಬರಮಾಡಿಕೊಂಡು ಕೈಯಲೊಂದು ಬಳಪ, ಪುಸ್ತಕ ನೀಡಿ ಕಪ್ಪು ಹಲಗೆಯ ಮುಂದೆ ನಿಲ್ಲಿಸಿತ್ತು. ನಾನು ಮೇಷ್ಟ್ರಾಗಿ ಬಿಟ್ಟೆ!

ಮೀಸೆ ಮೂಡದ ಹುಡುಗ ಮೇಷ್ಟ್ರು ಅಂದರೆ ಯಾರೂ ನಂಬುತ್ತಿರಲಿಲ್ಲ. ‘ಮೇಷ್ಟ್ರಾಗಲು ಮೀಸೆಯೇ ಬರಬೇಕೆಂಬುದೇನು ಇಲ್ಲ’ ಅನ್ನೋದು ಬೇರೆ ಮಾತು. ಸರಿಯಾಗಿ ಇಪ್ಪತ್ತೊಂದನೆ ವಯಸ್ಸಿಗೆ ಮಕ್ಕಳ ಮುಂದೆ ನಿಂತು ಅ ಆ ಇ ಈ ತಿದ್ದಿಸತೊಡಗಿದೆ. ಎಂದೂ ಮನೆಬಿಟ್ಟಿರದ ನನಗೆ ಊರು-ಮನೆ ನೆನೆದಾಗಲೆಲ್ಲಾ ಕಣ್ಣು ತುಂಬುತ್ತಿತ್ತು. ಒಮ್ಮೆ ಊರಿಂದ ನೋಡಲು ಬಂದ ಅಣ್ಣನ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದೆ. ಊರಿಲ್ಲದೆ, ಆ ಮನೆಯಿಲ್ಲದೆ ನಾನೆಂದೂ ಎಲ್ಲಿಯೂ ಇರಲಾರೆ ಅನಿಸಿತು.

ಶನಿವಾರ ರಾತ್ರಿ ಅಲ್ಲಿಂದ ಹೊರಟು ಭಾನುವಾರ ಪೂರ್ತಿ ಊರಲ್ಲಿದ್ದು ಮತ್ತೆ ಅದೇ ರಾತ್ರಿ ನೌಕರಿಯ ಊರಿಗೆ ಹೊರಡುತ್ತಿದ್ದೆ. ಪ್ರಯಾಣಕ್ಕೆ ಪೂರ್ಣ ಒಂದು ರಾತ್ರಿ ಬೇಡುವ ದೂರದ ಊರಿನಲ್ಲಿ ನಾನಿದ್ದೆ. ಎರಡ್ಮೂರು ವರ್ಷಗಳ ಕಾಲ ಸತತವಾಗಿ ವೀಕೆಂಡ್ ರಾತ್ರಿಗಳು ನನಗೆ ಊರನ್ನು ತೋರಿಸುತ್ತಿದ್ದವು. ವರ್ಷಗಳ ಉರುಳಿದಂತೆ ಊರು ತಣ್ಣನೆ ಹಿಂದೆ ಸರಿಯತೊಡಗಿತು. ಬದುಕಿನ ಗೊಡವೆಗೆ ಊರು ನನ್ನನ್ನು ಇಷ್ಟಿಷ್ಟೆ ದೂರ ತಳ್ಳಿ ಸ್ವತಂತ್ರವಾಗಿ ಹಾರಾಡುವಂತೆ ಮಾಡಿತು. ನಾನು ರೆಕ್ಕೆ ಬಲಿತ ಹಕ್ಕಿಯಾದೆ. ವೀಕೆಂಡ್ ನಿಂದ ಹದಿನೈದು ದಿನಕ್ಕೆ, ಅಲ್ಲಿಂದ ತಿಂಗಳಿಗೆ ಮುಂದುವರೆದು ಮೂರಾಲ್ಕು ತಿಂಗಳಿಗೆ ಊರಿನ ಕಡೆ ಮುಖಮಾಡತೊಡಗಿದೆ. ನನ್ನ ಊರಿಗೆ ನಾನೇ ಅತಿಥಿಯಂತಾದೆ. ಮನೆಗೆ ಹೋದರೆ ಮನೆಯವರಲ್ಲ ನನ್ನನ್ನು ನೆಂಟನಂತೆ ಆರೈಕೆ ಮಾಡತೊಡಗಿದರು. ನನ್ನನ್ನು ಹಸಿವಿನ ನೆಪದಲ್ಲಿ ಆಚೆ ನೂಕಿದ್ದ ಊರೂ ಕೂಡ ಆಗ ಆ ಬದಲಾವಣೆಗೆ ಮೂಕವಿಸ್ಮಿತ!.

ನನ್ನೊಳಗಿನ ತುಂಟ ಹೊರ ಬಂದ. ಊರು ಮಸುಕು ಮಸುಕು. ಮೈಸೂರಿನ ಕಾವ್ಯಮಯ ರಸ್ತೆಗಳಲಿ ಮನಸೊ ಇಚ್ಚೆ ಅಲೆದೆ. ಅಲ್ಲಿನ ಸುಶೀಲ ಜನ ಇವ ನಮ್ಮವ ಇವ ನಮ್ಮವ ಅಂದರು. ಗೆಳೆಯರ ದಂಡೆ ನನ್ನ ಪಾಲಿನ ಗಳಿಕೆ. ಸಂಬಳ ಸದ್ದಿಲ್ಲದೆ ಊರು ಸೇರುತ್ತಿತ್ತು. ಕೈಯಲ್ಲಿ ದುಡ್ಡು, ಸಾಗಿಯೇ ಇದ್ದ ಸತತ ಓದು, ಭಾನುವಾರದ ಥಿಯೇಟರ್ ನ ಹಾಜರಿ, ಸಂಜೆಯ ಪಾನಗೋಷ್ಠಿಗಳು ಅಕ್ಷರಶಃ ಊರನ್ನು ಮರೆಸಿದವು. ಊರಿನ ಬೇರುಗಳು ಸಡಿಲವಾಗಿ ಮೈಸೂರಿನ ನೆಲದಲ್ಲಿ ಚಾಚತೊಡಗಿದವು.

ಅದಕ್ಕೂ ಒಂದು ಕೊನೆ ಬಂತು. ಉನ್ನತ ಓದು ಕೆಲಸದಲ್ಲಿ ನನ್ನನ್ನು ಮೇಲ್ದರ್ಜೆಗೆ ಏರಿಸಿತು. ಒಂಭತ್ತು ವರ್ಷದ ನಂತರ ಮತ್ತೆ ಅಲ್ಲಿಂದ ಹೊರಡಬೇಕಾಯ್ತು. ಊರು ಬಿಟ್ಟ ತಲ್ಲಣಗಳು ಮೈಸೂರು ಬಿಡುವಾಗಲೂ ಕಾಡಿದವು. ಕಣ್ಣು ತುಂಬಿ ಬಂದವು. ಮನೆ ಖಾಲಿ ಮಾಡಿ ಭಾರದ ಎದೆ ಹೊತ್ತುಕೊಂಡು ಚಿಂತಾಮಣಿಯ ದಾರಿ‌ ಹಿಡಿದೆ. ಈಗಲಾದರೂ ಇವ್ನು ಬರಬಹುದೇನೊ ಎಂದು ಊರು ಕಾದೇ ಇತ್ತೇನೊ! ಆದರೆ ಅದು ನನ್ನ ಅರಿವಿಗೂ ಬರಲಿಲ್ಲ.

ಹೊಸ ಜಾಗದಲ್ಲಿ ನನ್ನ ಹೊಸ ಸಂತೆಯನು ಹೂಡಿಕೊಂಡೆ. ಓದಿನ ಗೀಳು ಮೊದಲಿಗಿಂತ ಹೆಚ್ಚಾಯಿತು. ಚೂರು ಚೂರೆ ಬರೆಯತೊಡಗಿದೆ. ಶಾಲೆ ನನ್ನನ್ನು ಮತ್ತಷ್ಟು ವಿದ್ಯಾರ್ಥಿಯನ್ನಾಗಿ ಮಾಡಿತು. ನಾನು ಮೇಷ್ಟ್ರು ಅನ್ನುವುದು ಮರೆತೆ ಹೊಯಿತು. ಮೈಸೂರಿನ ತುಂಟ ಈಗ ಇಲ್ಲವಾದ. ಜವಾಬ್ದಾರಿಯೊಂದು ಬೆನ್ನು ಹತ್ತಿತು. ಚಿಂತಾಮಣಿಯ ಜನ ನನ್ನನ್ನು ಅವರವರ ಮನಸ್ಸಿನಲ್ಲಿ‌ ಕೂರಿಸಿಕೊಂಡರು. ಮಕ್ಕಳ ಪ್ರೀತಿ ಎಲ್ಲವನ್ನೂ ಮರೆಸುತ್ತಿತ್ತು. ಊರು ಆಗೀಗ ಕನಸಿನಲಿ ಬಂದು ಅರೆಕ್ಷಣ ದರ್ಶನ ಕೊಟ್ಟು ಹೋಗುತ್ತಿತ್ತು. ದೊಡ್ಡ ರಜೆಗಳು ಬಂದಾಗ ಸಣ್ಣದಾಗಿ ಹೋಗಿ ಬರುತ್ತಿದ್ದೆಯಷ್ಟೆ! ಮೈಸೂರಿನಲಿ‌ ಕಿತ್ತು ತಂದ ಬದುಕಿನ ಗಿಡ ಈಗ ಇಲ್ಲಿ ಹೂವು ಹೂವು!

ಮೊನ್ನೆ ಮೊನ್ನೆಯಷ್ಟೇ ಬದುಕು ‘ತಿರುಗಾಟ ಸಾಕು ಮಾಡು’ ಅಂತ ಗದರಿತು. ಊರಿಂದ ಹೊರಡಿಸಿಕೊಂಡ ಬಂದ ಅದೇ ಬದುಕು ‘ನಡೀ ಊರಿಗೆ, ನೀನು ಊರು ಬಿಟ್ಟು ಎಲ್ಲಿದ್ದರೂ, ಎಷ್ಟು ದಿನವಿದ್ದರೂ ಹೊರಗಿನವನೇ. ಊರು ಸೇರ್ಕೊ..’ ಅಂತ ತಾಕೀತು ಮಾಡಿತು. ಹತ್ತತ್ತಿರ ಇಪ್ಪತ್ತು ವರ್ಷದ ‘ಹೊರ ಜೀವನ’ಕೆ ವರ್ಗಾವಣೆಯೊಂದು ಈಗ ಇತಿಶ್ರೀ ಹಾಡಿದೆ. ಇನ್ನೇನು ಒಂದೆರಡು ದಿನಗಳಲಿ ಊರಿನ ಬಸ್ಸು ಹತ್ತಬೇಕು. ಇಲ್ಲಿನ ಬಾಳ್ವೆಯ ಗಿಡವನ್ನು ಮತ್ತೆ ಕೀಳಬೇಕು. ಎಂದೊ ಕಿತ್ತು ತಂದ ಜಾಗದಲ್ಲಿ ಮತ್ತೆ ನೆಡಬೇಕು. ಚಿಗುರಿಸಿಕೊಳ್ಳಬೇಕು. ನನ್ನ ಊರಿಗೆ ಈಗ ನಾನೇ ಹೊಸಬ.

ಇಪ್ಪತ್ತು ವರ್ಷಗಳ ಹಿಂದೆ ಇಲ್ಲೇ ಬಿಟ್ಟು ಹೋಗಿದ್ದ ಹಳೆಯ ಐಡಿ ಕಾರ್ಡನ್ನು ಹುಡುಕಿಕೊಳ್ಳಬೇಕು. ವರ್ಷಾನುಗಟ್ಟಲೆ ಕಾಲದ ಚಕ್ರಗಳು ಅದರ ಮೇಲೆ ಹಾದು-ಹಾದು ನಜ್ಜಗುಜ್ಜಾಗಿರುವ ಅದನು ರಿಪೇರಿ ಮಾಡಿಸಿಕೊಳ್ಳಬೇಕು. ಮುರಿದಿದ್ದೆಲ್ಲವನ್ನು ಮತ್ತೆ ಕಟ್ಟಿಕೊಳ್ಳಬೇಕು. ಊರಿನ ರಸ್ತೆಯಲ್ಲಿ ಬಿದ್ದು ಹೋಗಿರುವ ಎಲ್ಲಾ ಹಳೆಯ ನೆನಪುಗಳನ್ನು ಹೆಕ್ಕಿಕೊಳ್ಳಬೇಕು. ನಡು ವಯಸ್ಸಿಗೆ ಮತ್ತೆ ಊರಿಗೆ ತಂದುಬಿಟ್ಟ ಬದುಕಿಗೊಂದು ಥ್ಯಾಂಕ್ಸ್ ಹೇಳಬೇಕು. ಹಸಿವು ಎಂದೊ ನೀಗಿದೆ. ಅವ್ವನ ಐನೂರರ ಬದಲಿಗೆ ಐವತ್ತು ಸಾವಿರವನ್ನು ಅವಳ ಕೈಯಲ್ಲಿಟ್ಟೇನು!

ನನ್ನನ್ನು ಹೊರಡಿಸಿಕೊಂಡು ಎರಡು ದಶಕಗಳ ಕಾಲ ಅಲೆದಾಡಿಸಿ ಎರಡು ಜಾಗದಲ್ಲಿ ಹತ್ತೆಂಟು ಜಗತ್ತುಗಳನ್ನು ತೋರಿಸಿದ ಬದುಕಿನ ಗುರುವಿಗೆ ಯಾವ ಕಾಣಿಕೆ ನೀಡಲಿ. ಊರು ತೊರೆಯುವುದು ಸುಲಭ. ಪೂರ್ಣ ತೊರೆದೆ ಬದುಕುವುದು ಕಷ್ಟ. ಎಷ್ಟೊ ಜನ ತೊರೆದಂತೆ ನಟಿಸಿ ಬದುಕುತ್ತಿದ್ದಾರೆ. ನಟಿಸುವುದು ಎಷ್ಟೊಂದು ಕಷ್ಟವೆಂಬುದು ನನ್ನ ಅನುಭವಕ್ಕೂ ಬಂದಿದೆ. ಊರು ಜನ್ಮ ನೀಡಿದ ತಾಯಿಯಂತೆ ಸದಾ ಕರುಳಿನ ಹಂಗಿನಲಿ ಸುತ್ತುತ್ತದೆ. ಬಿಡಿಸಿಕೊಳ್ಳಲು ಸಾಧ್ಯವೇ ಇಲ್ಲ. ಏನೇನು‌ ಕಂಡ ಮೇಲೂ ನಮ್ಮೂರೆ ನಮಗೆ ಮೇಲು ಎಂಬುದು ಸುಳ್ಳಲ್ಲ.

ಮತ್ತೆ ಕಣ್ಣು ತುಂಬಿವೆ. ಚಿಂತಾಮಣಿ ಬಿಡುವ ಸಂಕಟಕ್ಕೊ, ಊರು ಸೇರುವ ಆನಂದಕ್ಕೊ ಅದರ ಬಗ್ಗೆ ನನಗೂ ಸ್ಪಷ್ಟವಿಲ್ಲ. ಊರಿನಲ್ಲಿ ಮತ್ತೆ ಮಗುವಾಗುವ ಹಂಬಲದಲಿ ಹೊರಟು ನಿಂತಿದ್ದೀನಿ. ಹಳೆಯ ಜಾಗದಲ್ಲಿ ಮತ್ತೊಂದು ಹೊಸ ಬದುಕು ಶುರುವಾಗಲಿದೆ. ಬದುಕೇ ನೀನೆಂತ ಮೋಡಿಗಾರ? ನಿನ್ನ ಜೋಳಿಗೆಯೊಳಗೆ ಇನ್ಯಾವ ಬೆರಗುಗಳಿವೆ ಹೇಳು. ನಿನ್ನು ಗುಟ್ಟುಗಳು ಏನಾದ್ರೂ ಇರಲಿ. ನಡು ವಯಸ್ಸು ಈಗ ಕೈಯಲ್ಲಿದೆ, ಕೈ ಹಿಡಿದು ನಡೆಸು..

‍ಲೇಖಕರು Admin

December 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: