ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಮತಾ ರಾವ್ ಕಂಡಂತೆ ‘ವ್ಯಾಸರಾವ್ ನಿಂಜೂರ್ ಅವರ ಸಮಗ್ರ ಕಥೆಗಳು’…

ಮಮತಾ ರಾವ್

ಮಲ್ಪೆಯ ಕಡಲತಡಿಯಲ್ಲಿ ತೆಂಗಿನಮರದ ನೆರಳಲ್ಲಿ ಬೀಸುವ ತಂಪುಗಾಳಿಗೆ ಸೋತು ಹಾಯಾಗಿ ಪವಡಿಸೋಣ ಎನ್ನುತ್ತಾ ಮೈಚಾಚಿ ಇನ್ನೇನು ನಿದ್ರೆಯ ಮಡಿಲಿಗೆ ಜಾರುತ್ತಿದ್ದಂತೆ ‘ವೋಯ್ ಯಾರದು ಮಾರಾಯ್ರರೆ ?? ನಿಮಗೆ ಮಂಡೆ ಸಮ ಉಂಟಾನಾ ? ಮೇಲಿಂದ ತೆಂಗಿನಕಾಯ್ ಗೀಯ್ ಬಿದ್ದು ಪಡ್ಚಾ ಆದ್ರೆ ??’ ಎನ್ನುವ ಬೊಬ್ಬೆ ಕೇಳಿಸುವುದು ಖಂಡಿತ. ಕಣ್ರೆಪ್ಪೆ ಬಿಡಿಸಿ ನೋಡಿದರೆ ನಿಂಜೂರ್‌ರ ಕಥೆಗಳ ಪಾತ್ರಗಳಲ್ಲೊಂದು ನಿಮ್ಮ ಕಣ್ಮುಂದೆ ಧಿಡೀರನೆ ಕಾಣಸಿ ನೀವು ಬೆರಗಾಗದಿದ್ದರೆ ಕೇಳಿ. ಯಾಕೀ ಪ್ರಸ್ತಾವನೆ ಅಂದರೆ ಉಡುಪಿ ಪರಿಸರದಲ್ಲಿ ಒಂದು ಸುತ್ತು ಹಾಕಿದಿರೆಂದರೆ ನಿಮ್ಮ ಕಣ್ಮುಂದೆ ಪ್ರತ್ಯಕ್ಷವಾಗುವ ಅಸಲ್ ನೈಜ್ಯ ಪಾತ್ರಗಳು ವ್ಯಾಸರಾವ್ ನಿಂಜೂರ್ ಅವರ ಕಥೆಗಳ ಜೀವಾಳ.

ಕಳೆದಾರು ದಶಕಗಳಿಂದ ಮುಂಬಯಿಯಲ್ಲಿ ನೆಲೆನಿಂತು ಕನ್ನಡ ಸಾಹಿತ್ಯದ ಪರಿಚಾರಿಕೆಯನ್ನು ನಿರಂತರವಾಗಿ ಮಾಡುತ್ತಾ ಬಂದ ವ್ಯಾಸರಾವ್ ನಿಂಜೂರ್ ವೃತ್ತಿಯಲ್ಲಿ ವಿಜ್ಞಾನಿ ಎನ್ನುವುದು ಗಮನಿಸಬೇಕಾದ ಸಂಗತಿ. ವಿಜ್ಞಾನ ಮತ್ತು ಶಿಕ್ಷಣ ಕ್ಷೇತ್ರದ ತಮ್ಮ ಅನುಭವಗಳನ್ನು, ಗ್ರಾಮ ಪರಿಸರದ ಜನಸಾಮಾನ್ಯರ ವಿವರಗಳನ್ನು, ಪ್ರಾದೇಶಿಕ ನುಡಿಕಟ್ಟುಗಳನ್ನು, ನವಿರಾದ ಹಾಸ್ಯಭರಿತ ವಿಡಂಬನೆಯೊ೦ದಿಗೆ ಅಭಿವ್ಯಕ್ತಿಸುವ ವ್ಯಾಸರಾವ್ ನಿಂಜೂರ್‌ರ ಪ್ರಯತ್ನ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟವಾದ ಕೊಡುಗೆ.

ಬಾಲ್ಯದಿಂದಲೇ ಸಾಹಿತ್ಯದ ಹವ್ಯಾಸವನ್ನು ಮೈಗೂಡಿಸಿಕೊಂಡಿದ್ದ ನಿಂಜೂರರು, ಶಾಲಾ-ಕಾಲೇಜು ದಿನಗಳಲ್ಲಿಯೇ ‘ವ್ಯಾಸ ಉಡುಪಿ’ ಎನ್ನುವ ಕಾವ್ಯನಾಮದಡಿಯಲ್ಲಿ ಬರೆಯುತ್ತಿದ್ದ ಕಥೆ-ಕವಿತೆಗಳನ್ನು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡು ಓದುಗರ ಗಮನ ಸೆಳೆದಿದ್ದವು. ಪ್ರಾರಂಭದಿ೦ದಲೇ ಉತ್ತಮಕಥೆಗಾರನಾಗುವ ಲಕ್ಷಣಗಳನ್ನು ಹೊಂದಿದ್ದ ನಿಂಜೂರರು ಕಳೆದಾರು ದಶಕಗಳಲ್ಲಿ ಬರೆದ ಕಥೆಗಳು ಸುಮಾರು ನಲ್ವತ್ತಕ್ಕೂ ಅಧಿಕ. ಪ್ರಕಟಿತ ಕಥಾಸಂಕಲನಗಳು ಕೇವಲ ಮೂರು. `ಕುಂಕುಮ’ (೧೯೬೩), ಮಂಚ’ (೨೦೦೫), ‘ದೂಜ ಮಾಸ್ತರರ ಮಗಳು ಬಸಿರಾದುದು’ (೨೦೧೨). ಓದುಗರ ಕೈಗೆ ಅವರೆಲ್ಲಾ ಕಥೆಗಳು ಸಿಗುವಂತೆ ಮಾಡುವ ಉದ್ದೇಶದಿಂದ ಅಂಕಿತ ಪುಸ್ತಕವು ವ್ಯಾಸರಾವ್ ನಿಂಜೂರರ ಸಮಗ್ರ ಕಥಾಸಂಕಲನವನ್ನು ಇದೀಗ ಪ್ರಕಟಿಸಿದೆ.

ಅರವತ್ತರ ದಶಕದಲ್ಲಿ ಮುಂಬಯಿಗೆ ಪಾದಾರ್ಪಣೆ ಮಾಡಿದ ನಿಂಜೂರರಿಗೆ, ವಿದೇಶಕ್ಕೆ ಪಯಣ ಸುವ ಅವಕಾಶವೂ ಒದಗಿ ಬಂದಿತ್ತು. ಅವರ ವಸ್ತುವಿನ ಆಯ್ಕೆಯಲ್ಲಿ ಮೇಲ್ನೋಟಕ್ಕೆ ನವ್ಯದ ಪ್ರಭಾವ ಕಂಡುಬ೦ದರೂ, ನಿರೂಪಣಾ ಶೈಲಿ, ಪಾತ್ರಚಿತ್ರಣದಲ್ಲಿ ಮಾತ್ರ ಅವರ ವೈಶಿಷ್ಟ್ಯತೆ ಭಿನ್ನ. ಅತ್ಯಂತ ವಿವರಣಾತ್ಮಕವಾದ ವರ್ಣನೆಯೊಂದಿಗೆ ಪಾತ್ರಗಳನ್ನು ಪರಿಚಯಿಸುತ್ತಾ, ಅವರ ಸಮಸ್ಯೆಗಳನ್ನು ಮನೋವೈಜಾನಿಕವಾಗಿ ವಿಶ್ಲೇಷಿಸುತ್ತಾ, ಅವರ ಬದುಕನ್ನು ಅದನ್ನು ಪ್ರಭಾವಿಸುವ ಪರಿಸರವನ್ನು ಪರಿಶೀಲಿಸುತ್ತಾ ಕಥೆಯ ಮೂಲಕ ಇಡಿಯ ಜನಾಂಗೀಯ ಅಧ್ಯಯನವನ್ನು ಒಂದು ರೀತಿಯ ನಿರ್ಭಾವುಕತೆಯಿಂದ ಓದುಗನ ಮುಂದೆ ಬಿಚ್ಚಿಡುವ ಅವರ ಶೈಲಿ ಅನನ್ಯ.

‘ಉಸಿರು’, ‘ಚಾಮುಂಡೇಶ್ವರಿ ಭವನ’, ‘ತೆಂಕನಿಡಿಯೂರಿನ ಕುಳವಾರಿಗಳು’ ಇವರ ಪ್ರಕಟಿತ ಕಾದಂಬರಿಗಳು. ವ್ಯಾಸರಾವ್ ನಿಂಜೂರರು ಸಂದರ್ಶನ ಒಂದರಲ್ಲಿ “ನನ್ನ ಪ್ರಥಮ ಆದ್ಯತೆ ಸಣ್ಣಕತೆ, ಬಳಿಕ ಕಾದಂಬರಿ. ನಾಟಕ ಬರೆಯುವುದು ಒತ್ತಾಯಕ್ಕೆ” ಅಂತ ಹೇಳಿಕೊಂಡಿದ್ದರೂ ಅವರೊಳಗಿರುವುದು ಓರ್ವ ಕಾದಂಬರಿಕಾರನೇ ಎನ್ನುವುದಕ್ಕೆ ಅವರ ಬರವಣ ಗೆಯ ಶೈಲಿಯೇ ಸಾಕ್ಷಿ. ಪಾತ್ರ ಚಿತ್ರಣವಾಗಲಿ, ತಮ್ಮ ಊರಿನ ವರ್ಣನೆಯನ್ನಾಗಲಿ ಎರಡು ಮೂರು ಪುಟಕ್ಕೆ ಕಮ್ಮಿಯಿಲ್ಲದಂತೆ ಮಾಡಿ ಪರಿಣಾಮಕಾರಿಯಾದ ಸನ್ನಿವೇಶವನ್ನು ನಿರ್ಮಿಸುತ್ತಾ ತಾನು ಬರೆಯುತ್ತಿರುವುದು ಕಾದಂಬರಿಯಲ್ಲ ಕಥೆ ಎನ್ನುವುದನ್ನು ಫಕ್ಕನೆ ಅರಿತು, ಗಡಬಡಿಸಿ ಕೊನೆಯ ಒಂದೆರಡು ಪುಟಗಳಲ್ಲಿ ಕಥೆಯನ್ನು ಪೂರ್ಣಗೊಳಿಸುತ್ತಾರೆ. ಮಾತ್ರವಲ್ಲ, ಇಷ್ಟೆಲ್ಲ ಯಾಕೆ ಹೇಳಿದೆ ಅಂದರೆ? ಅಂತಾನೋ, ಅಥವಾ, ಇಷ್ಟೆಲ್ಲ ಹೇಳಿದ ಮೇಲೆ ತಾನು ಯಾರ ಬಗೆಗೆ ಹೇಳುತ್ತೇನೆ ಎನ್ನುವುದು ಗೊತ್ತಾಗಬೇಡವೇ? ಎನ್ನುವುದನ್ನು ವಿವರಿಸುವುದು ಅವರ ವೈಶಿಷ್ಟ್ಯ. (ಉದಾ. ಮಂಚ ಕಥೆಯಲ್ಲಿ ಸಣ್ಣಮ್ಮಳ ಕುರಿತಾದ ವಿವರಣೆ.)

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಸಮೀಪದ ಊರಾದ ತೆಂಕನಿಡಿಯೂರು ನಿಂಜೂರರ ಹುಟ್ಟಿದೂರಿನ ಪ್ರಸ್ತಾಪ ಮತ್ತೆ ಮತ್ತೆ ಅವರ ಕಥೆಗಳಲ್ಲಿ ಬರುವುದು ಅವರಿಗೆ ತಮ್ಮ ತಾಯ್ನೆಲದ ಕುರಿತಾಗಿರುವ ಅದಮ್ಯ ಪ್ರೀತಿ, ಮಮಕಾರ ಹಾಗೂ ಅಭಿಮಾನವನ್ನು ಅಭಿವ್ಯಕ್ತಿಸುತ್ತದೆ. ಉಡುಪಿ ಪರಿಸರದ ಆಡುಮಾತು, ತುಳು ನುಡಿಗಟ್ಟುಗಳು ಮಕ್ಕಾರ್(ಕುಶಾಲು), ಬಪ್ಪರ್(ಅಶ್ಲೀಲಬೆರೆತ ಮಾತು) ಮಿಶ್ರಿತ ಶ್ರೀ ಸಾಮಾನ್ಯನ ಬದುಕಿನ ಅಪರೂಪದ ವರ್ಣನೆ ಇವರಂತೆ ಇನ್ಯಾರೂ ಮಾಡಲು ಸಾಧ್ಯವೇ ಇಲ್ಲ. ತಮ್ಮೂರಿನ ವಿವಿಧ ಸ್ಥರದ ಜನಗಳಂತೆಯೇ, ಅಲ್ಲಿಯ ಹೋಟಲು, ಬಯಲಾಟ, ಗುತ್ತಿನ ಮನೆ, ಕೋಳಿಯ ಅಂಕ, ಕೋಣನ ಕಂಬಳ, ಜುಮಾದಿ ಕೋಲ, ಸಂಪಿಗೆ ಮರ, ಎಲ್ಲಾ ಬಿಟ್ಟು ದಾಸು ನಾಯಿಯನ್ನು ಸಹ ನಮ್ಮ ಕಣ್ಣಿಗೆ ಕಟ್ಟುವಂತೆ ಬಣ್ಣಿಸುವ ಪರಿ ಅಮೋಘ. ಇವರ ಕಥೆಗಳಲ್ಲಿ ಬರುವ ಪಾತ್ರಗಳು ಅಂದರೆ ಒಂದಕ್ಕಿ೦ತ ಒಂದು ಅಸಲ್!! ಕಲೀಮುಲ್ಲ, ದಾಸಣ್ಣ ಹೆಗಡೆ, ತೋಡುಬಳಿ ಶಿವರಾಮಯ್ಯ, ದಬ್ಬೆಟ್ಟು ದಾಮೋದರ, ಸಣ್ಣಮ್ಮ, ಮಾಧವ ಭಟ್ರು, ದೂಜ ಮಾಸ್ತರರ ಮಗಳು ಜೆಸಿಂತಾ, ಮದುವೆಯಾಗಿದ್ದರೂ ಕುಮಾರಿಯಾಗಿಯೇ ಉಳಿದ ಕಾವೇರಮ್ಮ, ಅಮೇರಿಕೆಯಲ್ಲಿ ತನ್ನತನವನ್ನು ಹುಡುಕಲು ಪ್ರಯತ್ನಿಸಿ ಸೋಲುತ್ತಿರುವ ಡಾ. ಹಂದಾಡಿ ಸುಬ್ರಾಯ, ಪುರೋಹಿತ ನರಸಿಂಹ ಸೋಮಯಾಜಿಗಳು, ಬಾಳಿಗ ಮೇಸ್ಟುç ಮುಂತಾದ, ಹುಟ್ಟಿದ ನೆಲದ ಮಣ್ಣಿನೊಂದಿಗೆ ಕರುಳ ಸಂಬ೦ಧ ಹೊಂದಿದ ಜೀವಿಗಳನ್ನು ನಮ್ಮ ಮನದಂಗಳದಲ್ಲಿ ಅಚ್ಚೊತ್ತಾಗಿ ನಿಲ್ಲುವಂತೆ ಕಟೆದ ಶ್ರೇಯಸ್ಸು ನಿಂಜೂರರದ್ದು. ಅಮೇರಿಕೆಯ ಬದುಕಿನಂತೆಯೇ ಮುಂಬಯಿಯ ಗಲ್ಲಿಗಲ್ಲಿಗಳು ಮುಖ್ಯವಾಗಿ ಮುಂಬಯಿಯ ಜೀವನಾಡಿಯಾದ ಲೋಕಲ್ ಟ್ರೇನಿನ ಡಬ್ಬಿಯ ಒಳಗಿನ ದೃಶ್ಯವನ್ನು ನಿಂಜೂರರು ಅದ್ಭುತವಾಗಿ ಕಟ್ಟಿಕೊಡುತ್ತಾರೆ.

ಇವರ ಹೆಚ್ಚಿನ ಪಾತ್ರಗಳು ಬ್ರಾಹ್ಮಣ ಕುಟುಂಬಕ್ಕೆ ಸಂಬ೦ಧಿಸಿದು, ಉಚ್ಚಕುಲದಲ್ಲಿ ಜನಿಸಿದ್ದರೂ ಕೀಳರಿಮೆಯಿಂದ ತೊಳಲಾಡುತ್ತಾ ತಮ್ಮ ಅಸ್ತಿತ್ವವನ್ನೇ ಪ್ರಶ್ನಿಸುತ್ತಿರುತ್ತವೆ. ತಮ್ಮ ಹೆಸರಿನ ಕುರಿತಾದ ತಾತ್ಸಾರ ಇವರಿಗೆ. ಅದಕ್ಕಾಗಿ ನಿರಾಕರಣೆಯ ಕೇಶವ, ಪ್ರವರದ ಡಾ ಅಣ ್ಣ ನಾಯ್ಕ ತಮ್ಮ ಹೆಸರನ್ನು ತಮ್ಮ ಜಾತಿಯನ್ನು ಮರೆಮಾಚುವ ಪ್ರಯತ್ನದಲ್ಲಿ ಬ್ರಾಹ್ಮಣತ್ವವನ್ನೇ ಧಿಕ್ಕರಿಸಲು ಯತ್ನಿಸುತ್ತಿದ್ದರೆ, ಸಲಾಂ ಬಾಂಬೆಯ ಕಲೀಮುಲ್ಲ ತನ್ನ ಧರ್ಮವನ್ನೇ ಬಚ್ಚಿಡುವವನಂತೆ ಕಾಣುತ್ತಾನೆ. ಮುಸ್ಲಿಮನಾಗಿದ್ದೂ ಕಷ್ಟಪಟ್ಟು ಸಂಸ್ಕೃತ, ಕನ್ನಡ ಕಲಿತು, ಯಕ್ಷಗಾನದಲ್ಲಿ ಶ್ರೀಕೃಷ್ಣನ ವೇಷ ತೊಟ್ಟು ಸೈ ಎನಿಸಿಕೊಂಡ ತೋನ್ಸೆ ಕಲೀಮುಲ್ಲಾ ತನ್ನ ಹೆಸರನ್ನು ಕೆ. ತೋನ್ಸೆ ಮಾಡುತ್ತಾನೆ. ಅಣ್ಣಪ್ಪ ನಾಯ್ಕ ಅಣ್ಣ ನಾಯ್ಕನಾಗುತ್ತಾನೆ. ಊರಿನಲ್ಲಿ ಜುಮಾದಿಯ ಪಾತ್ರಿಯಾಗಿದ್ದ ಚೀಂಕ್ರ ಮುಂಬಯಿಗೆ ಬಂದವ ಕಲ್ಯಾಣದ ಗುಡಿಯೊಂದರಲ್ಲಿ ಅರ್ಚಕನಾಗಿ ಮುಂದೆ ಚೇತನಾನಂದ ಗುರೂಜಿಯೆಂದು ಗುರುತಿಸಿಕೊಳ್ಳುತ್ತಾನೆ. ಅಕ್ಕಣ ಶೆಡ್ತಿಯ ಅಳಿಯ ದಾಸಣ್ಣ ಹೆಗ್ಡೆ ತಲೆಮರೆಸಿ ಮುಂಬಯಿಗೆ ಹೋದವ ಅಂಡರ್‌ವರ್ಲ್ಡ್ ಡಾನ್ ಆಗುತ್ತಾನೆ. ಕಥೆಯ ಪಾತ್ರಗಳು ಕಾರಣಾಂತರದಿ೦ದ ಒಂದೋ ಮುಂಬಯಿಗೆ ಅಥವಾ ಅಮೇರಿಕಾಗೆ ಹೋಗುತ್ತವೆ. ಎರಡೂ ಕಡೆಯಲ್ಲಿ ಭಿನ್ನ ಸ್ಥರದ ಆಧುನಿಕತೆಯೊಂದಿಗಿನ ಮುಖಾಮುಖಿಯಿಂದಾಗಿ ಸಂಪ್ರದಾಯಸ್ಥ, ಪ್ರಜ್ಞಾವಂತ ಯುವಕರಿಗಾಗುವ ತಲ್ಲಣ ಕಥಾವಸ್ತುವಾಗುತ್ತದೆ. ಧಾರ್ಮಿಕ ಕಟ್ಟುಕಟ್ಟಳೆ ಹಾಗೂ ರೂಢಿಮೂಲ ಸಂಪ್ರದಾಯಗಳ ನಡುವೆ ಸಿಕ್ಕಿ ತೊಳಲಾಡುವ ಹಾಗೂ ದಾರಿತಪ್ಪಿದ ಯುವಪೀಳಿಗೆ ಬಹುಮುಖ್ಯವಾಗಿ ಬ್ರಾಹ್ಮಣ ಯುವಕರು ಸದಾ ಜೀವನದ ಅರ್ಥವಂತಿಕೆಯ ಹುಡುಕಾಟ ನಡೆಸುವುದನ್ನು ತಮ್ಮ ಕಥೆಗಳಲ್ಲಿ ನಿಂಜೂರರು ಮತ್ತೆ ಮತ್ತೆ ಶೋಧಿಸುತ್ತಾರೆ.

ಮುಂಬಯಿ ಎನ್ನುವುದು ನಿಂಜೂರರ ಮಟ್ಟಿಗೆ ಬದುಕನ್ನು ಅಪಮೌಲ್ಯಗೊಳಿಸುವ ತಾಣ. ಒಟ್ಟಿನಲ್ಲಿ ಗ್ರಾಮ್ಯ ಜೀವನ ಹಾಗೂ ಮುಂಬಯಿಯ೦ತಹ ಮಹಾನಗರ ಹಾಗೂ ವಿದೇಶಗಳ ಬದುಕಿನ ನಡುವಿನ ಮುಖಾಮುಖಿ; ಸಾಂಪ್ರದಾಯಿಕ ಹಾಗೂ ಆಧುನಿಕ ವಿಚಾರಗಳ ತಾಕಲಾಟ; ಎರಡು ತಲೆಮಾರುಗಳ ನಡುವಿನ ಜಗ್ಗಾಟ ಹೀಗೆ ಈ ಎಲ್ಲ ಪ್ರಕಾರದ ಘರ್ಷಣೆಗಳ ಮೂಲಕ ಜೀವನಾನುಭವವನ್ನು ವಿಶ್ಲೇಷಿಸುವ ಪ್ರಯತ್ನವನ್ನು ನಿಂಜೂರರ ಕಥೆಗಳು ಪುನಃ ಪುನಃ ಮಾಡುತ್ತವೆ. ವೃತ್ತಿಯಲ್ಲಿ ಜೀವವಿಜ್ಞಾನಿಯಾದ ನಿಂಜೂರರು ಮಾನವ ಸಂಬ೦ಧಗಳನ್ನು ಮೈಕ್ರೋಸ್ಕೋಪಿನ ದೃಷ್ಟಿಯಿಂದ ವೈಜ್ಞಾನಿಕವಾಗಿಯೇ ಪರಿಶೀಲಿಸುವ ಪರಿ ಅನನ್ಯವಾದುದು. ಇದ್ದುದ್ದನ್ನು ಬಿಟ್ಟು ಇರದುದರ ಕಡೆಗೆ ತುಡಿಯುತ್ತಾ, ಬದಲಾಗುವುದನ್ನೇ ಆಧುನಿಕತೆ ಎಂದೆನಿಸಿಕೊಳ್ಳುವ ಯುವಪೀಳಿಗೆಯೊಂದಿಗೆ, ತಲತಲಾಂತರಗಳಿ೦ದ ಸಾಗಿ ಬಂದ೦ತಹ ಮೌಲ್ಯಗಳಿಗೆ ಅಂಟಿಕೊ೦ಡಿರುವ ಗ್ರಾಮೀಣ ಭಾವಜಗತ್ತನ್ನು ಮುಖಾಮುಖಿಗೊಳಿಸುವುದೆಂದರೆ ನಿಂಜೂರರಿಗೆ ಬಹಳ ಇಷ್ಟ. ಇವೆಲ್ಲವನ್ನೂ ಬಿತ್ತರಿಸುವ ದಕ್ಷಿಣಕನ್ನಡದ ತುಳುಮಿಶ್ರಿತ ಕನ್ನಡ ಭಾಷೆಯ ಸೊಗಡು, ನವಿರಾದ ಹಾಸ್ಯ ಲೇಪಿತ ವ್ಯಂಗ್ಯ, ಎಲ್ಲಕ್ಕಿಂತಲೂ ಮಿಗಿಲಾಗಿ ನೈಜ್ಯ ಪಾತ್ರಚಿತ್ರಣ ನಿಂಜೂರರ ಬಹುತೇಕ ಕಥೆ-ಕಾದಂಬರಿಗಳ ಮೂಲಧಾತು.

ವಿಜ್ಞಾನಿಯಾದ ನಿಂಜೂರರು ಮೂಢನಂಬಿಕೆಗಳನ್ನು ಗೊಡ್ಡುಸಂಪ್ರದಾಯಗಳನ್ನು ಪ್ರಶ್ನಿಸುತ್ತಾರೆ. ಆನುವಂಶಿಕವಾಗಿ ನಂಬಿಕೊ೦ಡು ಬಂದಿರುವ ಧಾರ್ಮಿಕ ಹಾಗೂ ನೈತಿಕ ನಂಬಿಕೆಗಳನ್ನು ಮೀರಿ ವಾಸ್ತವ ಜಗತ್ತಿನಲ್ಲಿ ಲೈಂಗಿಕತೆ ಹಾಗೂ ಹಣವೇ ಮಾನದಂಡವೆನಿಸುವುದು ಇವರ ಕಥೆಗಳಲ್ಲಿ ಪ್ರಾಶಸ್ತ್ಯ ಪಡೆಯುತ್ತದೆ. ಪ್ರತಿಯೊಂದು ಪಾತ್ರದ ಮನಸ್ಸಿನ ಸೂಕ್ಷ್ಮಾತಿ ಸೂಕ್ಷ್ಮ ಪದರುಗಳನ್ನು ವಿಶ್ಲೇಷಿಸುತ್ತಾ ಅನಿವಾರ್ಯವೆನಿಸಿದಾಗಲೆಲ್ಲ ಯಾವ ಮುಜುಗರವೂ ಇಲ್ಲದೆ ಬದುಕಿನ ಅವಿಭಾಜ್ಯ ಅಂಗವಾದ ಲೈಂಗಿಕತೆಯನ್ನು ಮುಕ್ತವಾಗಿ ಉಲ್ಲೇಖಿಸುತ್ತಾ ಕಥೆಯನ್ನು ಬರೆಯುತ್ತಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿದ್ದರೂ ಕನ್ನಡದ ವಿಮರ್ಶಕರಿಂದ ಉಪೇಕ್ಷೆಗೊಳಗಾದ ಕಥೆಗಾರರಲ್ಲಿ ವ್ಯಾಸರಾವ್ ನಿಂಜೂರರೂ ಒಬ್ಬರು. ಮುಂಬಯಿಯ ಕಥೆಗಾರರನ್ನು ಹೆಸರಿಸುವ ಸಮಯದಲ್ಲೂ ಸಹಜವಾಗಿ ಚಿತ್ತಾಲ, ಬಲ್ಲಾಳ, ಕಾಯ್ಕಿಣ ಎನ್ನುವ ಪಟ್ಟಿಯಲ್ಲಿ ಕೊನೆಯವರಾಗಿ ಕಾಣ ಸುತ್ತಾರೆ. ಇದೀಗ ಅವರ ಸಮಗ್ರ ಕಥಾಸಂಕಲನ ಹಾಗೂ ಆತ್ಮಕಥನ ಬಿಡುಗಡೆಗೊಳ್ಳುವ ಸಂಭ್ರಮದಲ್ಲಿ ತಮ್ಮಷ್ಟಕ್ಕೆ ತಾವು ಯಾವ ಪ್ರಚಾರವನ್ನೂ ಬಯಸದೆ ತೆರೆಮರೆಯಲ್ಲಿದ್ದು ಅತ್ಯಂತ ಅರ್ಥಪೂರ್ಣ ಕಥೆಗಳನ್ನು ಬರೆಯುತ್ತಿರುವ ನಿಂಜೂರರ ಸಾಹಿತ್ಯಕ್ಕೆ ಸೂಕ್ತ ಮನ್ನಣೆ ಇನ್ನಾದರೂ ದೊರೆಯಲಿ; ಕನ್ನಡ ಸಾಹಿತ್ಯಪ್ರೇಮಿಗಳು, ವಿಮರ್ಶಕರು ಅವರನ್ನು ಗಮನಿಸುವಂತಾಗಲಿ; ಅವರ ಅಪ್ರಕಟಿತ ಕಥೆಗಳು ಬೆಳಕು ಕಾಣುವಂತಾಗಲಿ; ಅವರ ಲೇಖನಿಯಿಂದ ಇನ್ನಷ್ಟು ಕಥೆ-ಕಾದಂಬರಿಗಳು ಹೊರಹೊಮ್ಮಲಿ; ಅಂಥಹ ಶಕ್ತಿ, ಸಾಮರ್ಥ್ಯ ಹಾಗೂ ಉತ್ತಮ ಆರೋಗ್ಯ ಅವರಿಗೆ ಲಭಿಸಲಿ ಎನ್ನುವುದು ನನ್ನ ತುಂಬು ಹೃದಯದ ಹಾರೈಕೆ.

‍ಲೇಖಕರು Admin

21 August, 2022

1 Comment

  1. ಎಸ್. ಆರ್. ಪ್ರಸನ್ನ ಕುಮಾರ್

    ವ್ಯಾಸರಾವ್ ನಿಂಜೂರರ ಚಾಮುಂಡೇಶ್ವರಿ ಭವನ ಹಾಗೂ ತೆಂಕುನಿಡಿಯೂರಿನ ಕುಳುವಾರಿಗಳು ಈ ಎರಡು ಕೃತಿಗಳನ್ನು ಓದಿದ್ದೇನೆ, ಕರಾವಳಿ ತೀರದ ಬದುಕಿನ ಚಿತ್ರಣವನ್ನು ಬಹಳ ಸೊಗಸಾಗಿ ನಿರೂಪಿಸಿದ್ದಾರೆ, ಬಯಲು ಸೀಮೆಯವನಾದ ನನ್ನಂತವರಲ್ಲಿ ಕರಾವಳಿ ಪ್ರದೇಶದ ಜನರ ವಿಶಿಷ್ಟವಾದ ಭಾಷೆ, ಆಚಾರ, ವಿಚಾರ, ಸಂಪ್ರದಾಯ, ಆಹಾರ, ವಿಹಾರ, ವೈರುದ್ಯ ವನ್ನು ಒಳಗೊಂಡಂತೆ ಮಾನವೀಯ ಸಂಬಂಧ, ಮೌಲ್ಯ ಇವುಗಳ ಬಗ್ಗೆ ಕುತೂಹಲ ಮೂಡಿಸುವ ಹಾಗೂ ತಣಿ ಸುವ ನಿಂಜೂರರ ಸಮಗ್ರ ಕಥಾಸಂಕಲನ ಹೊರ ಬಂದಿರುವುದಕ್ಕೆ ಬಹಳ ಸಂತೋಷವಾಗಿದೆ. ಅಭಿನಂದನೆಗಳು ಸಾರ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading