ಡಾ ಜ್ಯೋತಿ
ನಿನ್ನೆ, ಜುಲೈ 30ನ್ನು ‘ಅಂತಾರಾಷ್ಟ್ರೀಯ ಸ್ನೇಹ ದಿನ’ವೆಂದು ವಿಶ್ವಸಂಸ್ಥೆಯು ಘೋಷಿಸಿದೆ. 2011ರಲ್ಲಿ ಅಧಿಕೃತವಾಗಿ ಘೋಷಣೆಯಾದಾಗಿನಿಂದ, ವಿಶ್ವದಾದ್ಯಂತ ಜನರು ತಮ್ಮ ಆತ್ಮೀಯ ಸ್ನೇಹಿತರನ್ನು ನೆನಪಿಸಿಕೊಳ್ಳುವುದು, ಭೇಟಿಯಾಗುವುದು ಅಥವಾ ಶುಭಾಶಯ ಹೇಳುವುದರ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಈ ವರ್ಷದ ಧ್ಯೇಯ ವಾಕ್ಯ-ಸ್ನೇಹದ ಮೂಲಕ ಮಾನವ ಚೈತನ್ಯವನ್ನು ಉದ್ದೀಪನಗೊಳಿಸುವುದು.
ವಿಶ್ವಕ್ಕಿಂದು ಮನುಷ್ಯ-ಮನುಷ್ಯರ ನಡುವೆ, ಹಾಗೆಯೇ ಮನುಷ್ಯ ಮತ್ತು ಪ್ರಕೃತಿಯ ಮಧ್ಯೆ ಸ್ನೇಹದ ಬೆಸುಗೆಯ ಅಗತ್ಯ, ಹಿಂದೆಂದಿಗಿಂತ, ಬಹಳ ಹೆಚ್ಚಾಗಿದೆ. ಈ ದಿನಾಚರಣೆಯ ಮುಖ್ಯ ಉದ್ದೇಶ- ವಿಭಿನ್ನ ಸಂಸ್ಕ್ರತಿಗಳನ್ನು ಒಳಗೊಂಡಿರುವ ಮತ್ತು ವಲಸೆಗಳು ಹೆಚ್ಚಾಗಿರುವ ಪ್ರಸ್ತುತ ಸಂದರ್ಭದಲ್ಲಿ, ಪರಸ್ಪರ ಅಪನಂಬಿಕೆಗಳನ್ನು ಕಳೆದು ಸ್ನೇಹದ ಮೂಲಕವಷ್ಟೇ ಮನುಷ್ಯರ ನಡುವೆ ಸೇತುವೆಗಳನ್ನು ಕಟ್ಟಬಹುದು, ಸಮುದಾಯ ಚಟುವಟಿಕೆಗಳ ಮೂಲಕ ಯುವಜನತೆಯನ್ನು ಒಂದಾಗಿಸಬಹುದು ಹಾಗು ಮಕ್ಕಳಲ್ಲಿ ಶಾಂತಿ ಮತ್ತು ಅಹಿಂಸೆಯ ಸಂಸ್ಕೃತಿಯನ್ನು ಬಿತ್ತಬಹುದು.
ಸಾಮಾನ್ಯ ಗ್ರಹಿಕೆಯಂತೆ, ಮನುಷ್ಯನ ಮನಸ್ಸು ಮತ್ತು ಸಂಬಂಧಗಳು ಬಹಳ ಸಂಕೀರ್ಣವಾದುದು. ನಮ್ಮ ಜೀವನ ಪ್ರಯಾಣದ ವಿವಿಧ ಘಟ್ಟಗಳಲ್ಲಿ, ಜಗತ್ತಿನ ಸಹಪಯಣಿಗರು ವಿಭಿನ್ನ ಕಾರಣಗಳಿಗೆ ಮುಖಾಮುಖಿಯಾಗುತ್ತಾರೆ. ಕೆಲವರು, ಆಕಸ್ಮಿಕವಾಗಿ ಯಾವುದೋ ಒಂದು ಸನ್ನಿವೇಶದಲ್ಲಿ ಮಾತ್ರ ನಮ್ಮ ಜೀವನ ಪ್ರವೇಶಿಸಿ ಆಮೇಲೆ ಅದೃಶ್ಯರಾಗಿಬಿಡಬಹುದು.

ಈ ಅಲ್ಪಕಾಲದಲ್ಲಿಯೇ ಅವರು ನಮ್ಮ ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರಬಹುದು ಅಥವಾ ಮರೆಯಲಾರದ ಪಾಠ ಕಲಿಸಲೂ ಬಹುದು. ಆದರೆ, ಅವರನ್ನು ಕೇವಲ ಪರಿಚಯಸ್ತರೆನ್ನಬಹುದೇ ಹೊರತು ಸ್ನೇಹಿತರೆನ್ನಲಾಗದು. ಕೆಲವೇ ಮಂದಿ ಮಾತ್ರ, ನಮ್ಮ ಜೀವನಪರ್ಯಂತ ಸಂಪರ್ಕದಲ್ಲಿ ಉಳಿದುಕೊಂಡು ಮನಸ್ಸಿನಲ್ಲಿ ಸ್ಥಾನ ಪಡೆಯುತ್ತಾರೆ. ಅವರನ್ನಷ್ಟೇ ನಾವು ಆತ್ಮಸ್ನೇಹಿತರೆಂದು ಪರಿಗಣಿಸಬಹುದು.
ಸಾಮಾನ್ಯವಾಗಿ, ಕೌಟುಂಬಿಕ ಸಂಬಂಧಗಳಲ್ಲಿ ನಿರೀಕ್ಷೆ ಮತ್ತು ಜವಾಬ್ದಾರಿಯ ಭಾರವಿದ್ದರೆ, ಸ್ನೇಹದಲ್ಲಿ ಮಾತ್ರ ಯಾವುದೇ ನಿರ್ಬಂಧಗಳಿಲ್ಲದ ಸಂಪೂರ್ಣ ಅಭಿವ್ಯಕ್ತತೆಗೆ ಸ್ವಾತಂತ್ರ್ಯವಿರುತ್ತದೆ. ಹಾಗಾಗಿ, ಸ್ನೇಹಿತರು ನಮ್ಮ ಬದುಕಿಗೆ, ಉಸಿರಿನಂತೆ ಬಹಳ ಮುಖ್ಯ. ಕೌಟುಂಬಿಕ ಸಂಬಂಧಗಳು, ಜೀವನದ ಅನಿವಾರ್ಯ ಭಾಗವಾದರೆ, ಸ್ನೇಹವೆನ್ನುವುದು ನಮಗೆ ಎಲ್ಲರೊಂದಿಗೆ ಮೂಡುವುದಿಲ್ಲ. ಬದಲಾಗಿ, ಕೆಲವೇ ಮಂದಿ ಮಾತ್ರ ನಮಗೆ ಇಷ್ಟವಾಗುತ್ತಾರೆ. ಅದರಂತೆಯೇ, ನಿರ್ಮಲ ಮನಸ್ಸಿನ ಸ್ನೇಹಕ್ಕೆ ಜಾತಿ, ಲಿಂಗ, ಧರ್ಮ ಅಥವಾ ಜನಾಂಗ ಯಾವುದೂ ಅಡ್ಡಿಯಾಗುವುದಿಲ್ಲ.
ಈ ಸ್ನೇಹ ಹೇಗೆ ಹುಟ್ಟುತ್ತದೆ ಎನ್ನುವುದಕ್ಕೆ ಸ್ಪಷ್ಟ ವ್ಯಾಖ್ಯಾನವಿಲ್ಲ. ಇದು ಪದಗಳಲ್ಲಿ ಹಿಡಿದಿಡಲಾಗದ ಸಂಬಂಧ. ನಮ್ಮಲ್ಲಿ ಆತ್ಮವಿಶ್ವಾಸ ಹುಟ್ಟಿಸಲು, ಕಷ್ಟಗಳ ಹಗುರವಾಗಿಸಲು, ಅಗತ್ಯ ಸಮಯದಲ್ಲಿ ಜೊತೆಯಾಗಿರಲು, ಸಂತೋಷವನ್ನು ಹಂಚಿಕೊಳ್ಳಲು ಸ್ನೇಹಿತರು ಬೇಕು. ಎಲ್ಲಾ ಸಂದರ್ಭಗಳಲ್ಲಿ ನಮ್ಮ ಮನೆಮಂದಿ ಜೊತೆಯಾಗಿರುವುದಿಲ್ಲ. ಕೆಲವೊಮ್ಮೆ ಇದ್ದರೂ ಸ್ನೇಹಿತರ ಸಾಂಗತ್ಯವೇ ಹಿತವೆನಿಸುತ್ತದೆ.
ಉತ್ತಮ ಸ್ನೇಹಿತ, ನಮ್ಮ ಸಂಕಷ್ಟದ ಸಮಯದಲ್ಲಿ ಭುಜ ಕೊಟ್ಟು ಆಸರೆಯಾಗುತ್ತಾನೆ. ಹೃದಯ ಬಿಚ್ಚಿ ಮಾತನಾಡಲು ಅವಕಾಶಕೊಟ್ಟು, ಮೌನವಾಗಿ ನಮ್ಮ ಅಸಂಬದ್ಧ ಆಲಾಪಗಳಿಗೆ ಕಿವಿಯಾಗುತ್ತಾನೆ. ಅದೇ ರೀತಿ, ನಮ್ಮ ಮಾನಸಿಕ ಆರೋಗ್ಯಕ್ಕೆ, ಖಿನ್ನತೆ ಯನ್ನು ದೂರ ಮಾಡಲು, ಮನಬಿಚ್ಚಿ ನಗಲು, ಸ್ನೇಹಿತರ ಸಾಥ್ ಸಹಾಯಕ. ಜೊತೆಗೆ, ಸಾಹಸ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಲು ಹಾಗು ಮನಬಿಚ್ಚಿ ಸುತ್ತಾಡಲು ಸ್ನೇಹಿತರ ಸಾಂಗತ್ಯ ಬೇಕು.

ಆದರೆ, ಯಾವುದೇ ಸ್ನೇಹ ಪರಿಪೂರ್ಣವಾಗಿರುವುದಿಲ್ಲ. ಮನುಷ್ಯ ಸಂಬಂಧಗಳು ಪರಿಪಕ್ವವಾಗಲು ಸಾಕಷ್ಟು ಕಾಲಾವಕಾಶ ಬೇಕು. ಹಾಗಾಗಿ, ಸ್ನೇಹದಲ್ಲಿ ಪರಸ್ಪರ, ಭಿನ್ನಾಭಿಪ್ರಾಯ, ಅಪನಂಬಿಕೆಗಳು ಕಾಣಿಸಿಕೊಳ್ಳಬಹುದು. ಇದು ಆರೋಗ್ಯಕರ ಹಾಗು ಒಬ್ಬರನೊಬ್ಬರು ಇನ್ನಷ್ಟು ಅರ್ಥಮಾಡಿಕೊಳ್ಳಲು ಸಹಾಯಕಾರಿ ಕೂಡ. ವಿಶಾಲ ಮನಸ್ಸಿನ ಸ್ನೇಹಿತರು ಪರಸ್ಪರರ ತಪ್ಪುಗಳನ್ನು ಅರ್ಥೈಸಿಕೊಂಡು ಕ್ಷಮಿಸಿ, ಜೊತೆಯಾಗಿ ಮುಂದುವರಿ ಯುತ್ತಾರೆ.
ಆದರೆ, ವರ್ತಮಾನದ ವಸ್ತುನಿಷ್ಠ ಪ್ರಪಂಚದಲ್ಲಿ ಮನುಷ್ಯ ಸ್ನೇಹ ಸಂಬಂಧಗಳನ್ನು ಕೂಡ ಸ್ವ ಲಾಭ ನಷ್ಟಗಳ ತಕ್ಕಡಿಯಲ್ಲಿ ತೂಗಿ ನೋಡುವವರಿದ್ದಾರೆ. ಸ್ನೇಹದ ಹೆಸರಲ್ಲಿ, ಮೋಸ ಹೋಗುವುದರಿಂದ ಎಚ್ಚರ ವಹಿಸುವುದು ಬಹಳ ಮುಖ್ಯ. ಯಾಕೆಂದರೆ, ಕೇವಲ ತಮ್ಮ ಅಗತ್ಯಗಳ ಪೂರೈಕೆಗಾಗಿ ಸ್ನೇಹದ ಮುಖವಾಡ ಧರಿಸಿ ಇನ್ನೊಬ್ಬರನ್ನು ಸಂಪರ್ಕಿಸುವವರಿದ್ದಾರೆ. ಇದನ್ನೊಂದು ಪಕ್ಕಾ ಅನುಕೂಲಸಿಂಧು ಸ್ನೇಹವೆನ್ನಬಹುದು.
ಈ ನಿಟ್ಟಿನಲ್ಲಿ, ಪರಿಶುದ್ಧ ಸ್ನೇಹಕ್ಕೆ ಪ್ರತೀಕವೆಂದು ಹೆಸರಿಸಬಹುದಾದ ಸಿನೆಮಾವೆಂದರೆ, ಹಿಂದಿಯ ‘ಶೋಲೆ’ ಚಲನಚಿತ್ರ. ಸ್ನೇಹಿತರೆಂದರೆ ಜಯ್ ಮತ್ತು ವೀರುವಿನ ಹಾಗಿರಬೇಕೆಂದು, ಸಿನಿಮಾ ನೋಡಿದವರಿಗೆಲ್ಲಾ ಅನ್ನಿಸುವುದು ಸಹಜ.
ಒಟ್ಟಿನಲ್ಲಿ, ಸಮುದಾಯ ಜೀವಿ ಮನುಷ್ಯನಿಗೆ ಸಂತ್ರಪ್ತಿಯಿಂದ ಮತ್ತು ಪರಿಪೂರ್ಣವಾಗಿ ಬದುಕಲು, ಉತ್ತಮ ಸ್ನೇಹಿತರ ಸಾಂಗತ್ಯವೇ ಅಮೂಲ್ಯ ಬಂಡವಾಳ.






0 Comments