ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮನುಷ್ಯ’ ಒಂದು ಸಣ್ಣ ಗದ್ದಲ ಮಾತ್ರ!

ಗೋಳೂರ ನಾರಾಯಣಸ್ವಾಮಿ

ನಮ್ಮ ಕಾಡಿನಲ್ಲಿ ಅಪಾರವಾದ ಜನಪದ ಕಾವ್ಯಗಳು ಜೀವಂತವಾಗಿವೆ. ಇಂತಿಪ್ಪ ಜನಪದ ಕಾವ್ಯಗಳನ್ನು ನಾನಾದರೂ ಪ್ರಜ್ಞಾಪೂರ್ವಕವಾಗಿ ಅಧ್ಯಯನ ಮಾಡಲು ಶುರುವಿಟ್ಟುಕೊಂಡು ಏಳು ವರ್ಷಗಳ ಕಾಲವಾಯಿತು. ಮೊದಲಾಗಿ, ಮಲೆ ಮಾದೇಶ್ವರ ಕಾವ್ಯದ ಹಳೆಯ ಬನಿ ಎಂದೆನಿಸಿಕೊಂಡು ಅದರ ನರನಾಡಿ ಹಿಡಿದು ಹಾಡುವ ಮೈಸೂರು ಮಾದೇವಯ್ಯ ಅವರು ಹಾಡಿರುವ  ಮಲೆಮಾದೇಶ್ವರ ಕಾವ್ಯ ಸೇರಿದಂತೆ ಜಿ.ಶಂ. ಪರಮಶಿವಯ್ಯನವರು ಸಂಗ್ರಹಿಸಿರುವ ಮಂಟೇಸ್ವಾಮಿ ಕಾವ್ಯದ ಸಾಲುಗಳನ್ನು ಓದಿ ಬಹಳ ಆನಂದಿಸುತ್ತಿದ್ದೆ.

ಹೀಗೆ ಶುರುವಾದ ನನ್ನ ಪಯಣ ಈ ಕಾವ್ಯದಲ್ಲಿ ಬರುವ ಸ್ಥಳನಾಮಗಳ ಬೆನ್ನೇರಿ ಸತತ ನಾಲ್ಕು ವರ್ಷಗಳ ಕಾಲ ಆಯಾ ಕಾಲಕ್ಕೆ ನಡೆಯುವ ಜನಪದ ಜಾತ್ರೆಗಳನ್ನು ಒಂದೂ ಬಿಡದಂತೆ ನೋಡಿಕೊಂಡು ಸಂಭ್ರಮ ಪಡುತ್ತಾ ಅಲ್ಲಲ್ಲೇ ಕವಿತೆಯನ್ನೋ, ಲೇಖನವನ್ನೋ ಬರೆಯುತ್ತಾ ಇದ್ದೆ. ಇವುಗಳನ್ನು ಸಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಿದ್ದೆ. ತುಂಬಾ ಜನರು ಓದಿ ಖುಷಿ ಪಡುತ್ತಿದ್ದರು.

ಮುಂದೆ ಅಧ್ಯಯನ ರೂಪದಲ್ಲಿ ನೋಡತೊಡಗಿದೆ. ನನ್ನ ಈ ಕಾರ್ಯಕ್ಕೆ ಸಂತೇಮರಹಳ್ಳಿಯ ಹೆಗ್ಗವಾಡಿಪುರದ ಗೋವಿಂದರಾಜು ಅವರು ಪ್ರೋತ್ಸಾಹಿಸಿದರು. ಅವರು ಚಾಮರಾಜನಗರದಲ್ಲಿ ಸಿರಿಗನ್ನಡ ಪುಸ್ತಕ ಮಳಿಗೆಯ ವ್ಯವಸ್ಥಾಪಕರಾಗಿದ್ದಾರೆ. ಅವರು ತಿಂಗಳಿಗೊಮ್ಮೆ ಕೇಂದ್ರ ಸಾಹಿತ್ಯ ಅಕಾದೆಮಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಇಲ್ಲಿ ನಮ್ಮ ಮೂಲ ಜನಪದ ಕಾವ್ಯಗಳಿಗೆ ಸಂಬಂಧಿಸಿದಂತೆ ವಿದ್ವಾಂಸರುಗಳನ್ನು ಕರೆಸಿ ಮಾತನಾಡಿಸುತ್ತಿದ್ದರು. ಭಾಷಣಕಾರರಾಗಿ ಬಂಜಗೆರೆ ಜಯಪ್ರಕಾಶ್, ಕಾಳೇಗೌಡ ನಾಗವಾರ, ವೆಂಕಟೇಶ್ ಇಂದ್ವಾಡಿ, ಹೆಚ್. ಗೋವಿಂದಯ್ಯ, ಮಂಜುನಾಥ್ ಲತಾ, ಮಹಾದೇವ ಶಂಕನಪುರ ಮುಂತಾದ ಸಾಹಿತಿಗಳನ್ನು ಕರೆಸಿ ಜನಪದ ವಿಚಾರಕ್ಕೆ ಸಂಬಂಧಿಸಿದ ತಳಸ್ಪರ್ಶಿ ಜ್ಞಾನ ನೀಡುತ್ತಿದ್ದರು. ಇವರ ಉಪನ್ಯಾಸಗಳು ನನ್ನನ್ನು ಜನಪದವನ್ನು ವೈಜ್ಞಾನಿಕವಾಗಿ ಅಭ್ಯಸಿಸಲು ಉತ್ತೇಜಿಸಿದವು.

ಕಾರ್ಯಕ್ರಮವನ್ನು ಕೊಳ್ಳೇಗಾಲ, ಚಾಮರಾಜನಗರ, ನಂಜನಗೂಡು, ಯಳಂದೂರು ಭಾಗದಲ್ಲಿ ಆಯೋಜಿಸುತ್ತಿದ್ದರಿಂದ ನನ್ನ ಓಡಾಟದಿಂದ ವಿವಿಧ ಸಂಸ್ಕೃತಿಯನ್ನು ಆಚರಿಸುವ ಜನರ ಸಂಪರ್ಕವಾಯಿತು. ಅಲ್ಲೆಲ್ಲ ನಿಷ್ಠಾವಂತ ಜನಪದ ವಿದ್ಯಾರ್ಥಿಯಾಗಿ ನಾನು ಕಲಿತದ್ದು ಬೆಟ್ಟದಷ್ಟಿದೆ. ಇಲ್ಲಿಯೇ ನಾನು ಜನಪದ ಸಾಹಿತ್ಯವನ್ನು ಅಧ್ಯಯನ ಮಾಡಲು ಕಲಿತದ್ದು. ಒಂದು ಹಂತಕ್ಕೆ ಇದೇ ನನ್ನ ಬುದ್ದಿಯನ್ನೆಲ್ಲ ಆವರಿಸಿಕೊಂಡಿತು. ಇದರ ನಡುವೆ ನಾನು ಬದುಕು ಸಾಗಿಸಲು ಅನೇಕ ಕೆಲಸಗಳನ್ನು ಮಾಡಬೇಕಾದ್ದರಿಂದ ಜನಪದ ಅಧ್ಯಯನ ಕ್ರಮ, ಇದಕ್ಕೆ ಸಂಬಂಧಿಸಿದಂತೆ ಓಡಾಟ ಥಟ್ಟನೆ ನಿಂತು ಹೋಯಿತು.

ನನಗೆ ಈ ದೇವರು ದಿಂಡಿರು ವಿಧಿ ವಿಪರ್ಯಾಸ ಅನ್ನುವ ವಿಚಾರಗಳಲ್ಲಿ ನಂಬುಗೆ ಇಲ್ಲ. ಆದರೆ ‘ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ’ ಅಂತ ಬೇಂದ್ರೆ ಅಜ್ಜ ಹೇಳ್ತಾನೆ ಅನ್ನುವ ಕಾರಣಕ್ಕೋ ಏನೋ ನಾನು ಅಂತಿಮವಾಗಿ ನಾನು ಅಪಾರವಾಗಿ ಪ್ರೇಮಿಸುವ ಕೃಷಿ ಕೆಲಸಕ್ಕೆ ಬರಬೇಕಾಯಿತು. ಈಗ ಕೃಷಿ ಕಷ್ಟ ಇದೆ ಅನ್ನುವ ಎಲ್ಲ ಮಿತಿಗಳನ್ನು ಮೀರಿ ನಾನಂತೂ ಹೊಂದುಕೊಂಡು ಬಿಟ್ಟಿದ್ದೇನೆ. ಇದಕ್ಕೆ ಸಹಕಾರ ಎನ್ನುವಂತೆ ನನಗೆ ಸದಾ ಒಳಿತನ್ನೇ ಬಯಸುವ ರೇಣಬ್ಬೆ ಹಾಗೂ ಎಂದೋ ಪರಿಚಯವಾದ, ದೂರದ ಊರಿನಲ್ಲಿರುವ ನನ್ನ ಸ್ನೇಹಿತೆ ರೇಖಾಗೌಡ ಅವರ ಬೆಂಬಲವೂ ಇದೆ. ಈ ಕಾರಣಕ್ಕೆ ಸ್ವಲ್ಪ ಹೊಂದಾಣಿಕೆಯ ಜೀವನ ಕ್ರಮದಲ್ಲಿ ಭರವಸೆ ಮೂಡಿದೆ. ಇದರಿಂದ ನನ್ನ ಜನಪದ ಸುತ್ತಾಟ ಮತ್ತೆ ಶುರುವಾಯಿತು.

ಇಷ್ಟೆಲ್ಲ ಹೇಳಿದ ಮೇಲೆ ನಾನು  ‘ಮನುಷ್ಯ ಒಂದು ಸಣ್ಣ ಗದ್ದಲ ಮಾತ್ರ’ ಎನ್ನುವುದಕ್ಕೆ ಕಾರಣ ಏನಂದರೆ:

ಅವತ್ತು ಬೆಳಿಗ್ಗೆ ಏಳು ಗಂಟೆ ಆಗಿತ್ತು. ಮರಿಸ್ವಾಮಿ ಮೂಲಂಗಿ ಕೀಳ್ತಾ ಇದ್ದ‌. ಅವನ ಕೆಲಸದ ನಡುವೆ ಯಾರೋ ಒಬ್ಬಾತ ತಲೆಹರಟೆ ಹೊಡೆಯುತ್ತಾ ಇದ್ದ. ದೂರದಿಂದಲೇ ಗಮನಿಸಿದ ನಾನು ಹತ್ತಿರಕ್ಕೆ ಹೋದೆ. ನಾನು ಹೋಗುವಷ್ಟರಲ್ಲಿ ಆ ತಲೆಹರಟೆ ಹೋಗಿದ್ದ. ಏನ್ ಮರಿಸ್ವಾಮಿ ಕೆಲಸ ಮಾತು ಎರಡೂ ಜೋರು ಅಂದೆ. ಬಾ ನಾರಾಯಣ ಅಂತದ್ದೇನು ಇಲ್ಲಕನ. ಅವನದು ಮಾಮೂಲಿ ಇದ್ದೇ ಇದೆ. ಏನೋ ಭೀಮನಕೊಲ್ಲಿ ಅಂದಂಗಿತ್ತು. ಅದೇ ನಾಳೆ ಹೋಗ್ತಾ ಇದ್ದೀವಿ ಬರ್ತಿಯ ಅಂದ. 

ಈಗಾಗಲೇ ಮಾದೇಶ್ವರ ಕಾವ್ಯದೊಡನೆ ನಂಟಿರುವ ಸರಗೂರು, ಕುಂತೂರು, ಮಾದೇಶ್ವರ ಬೆಟ್ಟ, ನಾಗಮಲೆ, ತಪಸ್ಸರೆ, ಕಂಬದಬೋಳಿ, ಕಂತೇಮಾದೇಶ್ವರ ಬೆಟ್ಟ, ಬೇಲದಕುಪ್ಪೆ, ಸುತ್ತೂರು, ಬದನವಾಳು ಎಲ್ಲ ಊರು-ಕಾಡು-ಗುಡ್ಡಗಳನ್ನು ನೋಡಿದ್ದೆ. ಹೀಗೆ ಮಾದೇಶ್ವರನ ಪಾದಗಳು ಓಡಾಡಿದ್ದ ಒಂದಿಂಚು ಭೂಮಿ ಮುಟ್ಟಿ ಬಂದಿದ್ದೆ. ಆದರೆ ಅದೇಕೋ ಮಾದಯ್ಯ ಬಹುಕಾಲವಿದ್ದ ಸ್ಥಳ ಭೀಮನಕೊಲ್ಲಿ ನೋಡಿರಲಾಗಲಿಲ್ಲ. 

ಅವತ್ತು ಬೆಳಿಗ್ಗೆ ಏಳಕ್ಕೆ ಮರಿಸ್ವಾಮಿ ಹೇಳಿದ ಹಾಗೆ ನಮ್ಮೂರ ಕಾಳಪ್ಪನ ಗುಡಿ ಹತ್ತಿರ ಬೈಕ್ ಏರಿದೆವು. ಜತೆಗೆ ರವಳಯ್ಯ, ಮಹೇಶ ಸೇರಿಕೊಂಡರು. ಇವರೆಲ್ಲ ನನ್ನ ಬಾಲ್ಯದ ಒಡನಾಡಿಗಳು. ನಮ್ಮೂರಿನವರು. 

ಅಲ್ಲಿಗೆ ಎರಡು ಬೈಕ್ ನಲ್ಲಿ ಪ್ರಯಾಣ ಶುರು ಮಾಡಿದ ಒಂದು ಗಂಟೆ ಹೊತ್ತಿಗೆ ಹೆಡಿಯಾಲ ಹತ್ತಿರದ ಬೇಲದಕುಪ್ಪೆ ಕಾಡಿನ ಬಳಿ ಇದ್ದೆವು. ಇಲ್ಲಿಂದ ಸರಿಯಾಗಿ ಐವತ್ತು ಕಿ.ಮೀ. ಪ್ರಯಾಣ ಅದಾಗಿತ್ತು. ಹೋಗುವ ಹಾದಿಯಲ್ಲಿ ಬೇಗೂರು ಕ್ರಾಸ್ ಕಡೆದ ನಂತರ ಬೆಳಚವಾಡಿಯಿಂದ ಬಡಗಲಪುರ-ಹಾದನೂರವರೆಗೆ ರಸ್ತೆಯುದ್ದಕ್ಕೂ ರೈತರು ಬೆಳೆದ ಚಂಡು ಹೂಗಳು, ಹೊಗೆಸೊಪ್ಪಿನ ಗಿಡಗಳು, ಬಾಳೆ ಗಿಡಗಳು, ಅಡಿಕೆ ಮರಗಳು ಹಾಗೂ ರಸ್ತೆ ಬದಿಯ ಆಲದ ಮರಗಳು ಸೇರಿದಂತೆ ಅನೇಕ ಗಿಡಗಂಟಿಗಳು ಬಹಳ ಹಿತವಾಗಿ ದಟ್ಟ ಮೋಡಗಳ ಕೆಳಗೆ ಹದವಾಗಿ ಬೀಸುತ್ತಿದ್ದ ತಂಗಾಳಿಯೊಂದಿಗೆ ಕಂಗೊಳಿಸುತ್ತಿದ್ದವು.

ನಾನು ರವಳಯ್ಯನ ಬೈಕ್ ಏರಿ ಕುಳಿತಿದ್ದೆ. ರವಳಯ್ಯ ಗಿಡ್ಡದವ. ಹಾಗಾಗಿ ನನ್ನ ಕಣ್ಣ ನೋಟಕ್ಕೆ ಯಾವ ಅಡ್ಡಿಯೂ ಆಗಲಿಲ್ಲ. ಸುತ್ತಲಿನ ಕಾಡು ಗುಡ್ಡಗಳ ಪ್ರಪಂಚವೆಲ್ಲವೂ ಸುಲಭವಾಗಿ ಗೋಚರಿಸುತ್ತಿತ್ತು.  ನಮ್ಮೂರಿನ ಈ ಸ್ನೇಹಿತರು ಬೈಕ್ ರೈಡಿಂಗ್ ನಲ್ಲಿ ದೆವ್ವಗಳು. ಆ ದಿನ ಸರಿ ಸುಮಾರು ಇನ್ನೂರು ಕಿ.ಮೀ. ಯಾವುದೇ ಬುರುಡೆಗವಚ, ಗ್ಲೌಸ್, ಮೇಲೊದಿಕೆ ಯಾವುದೂ ಇಲ್ಲದೆ ಎಂಭತ್ತರ ವೇಗದಲ್ಲಿ ಬೈಕ್  ಓಡಿಸಿದರು. 

ಬೇಲದಕುಪ್ಪೆಯ ಹಸಿರು ಕಾನನದಲ್ಲಿ ನಲಿದಾಡುವ ಹುಲ್ಲೇಮರಿಗಳ ಆಟಕ್ಕೆ ಮನೋಲ್ಲಾಸವಾಯಿತು. ದೇವಾಲಯದ ಪಕ್ಕದಲ್ಲೇ ಹರಿವ ಚಿಕ್ಕ ತೊರೆಯ ಜುಳು ಜುಳು ನಾದ ಕಾಡಿನ ಆ ನಿಶ್ಯಬ್ದಕ್ಕೆ ರಿಂಗಣಿಸುತ್ತಿತ್ತು. ಅಂದು ಬಿಡುವಿ‌ನ ದಿನವಾದ್ದರಿಂದ ಮನುಷ್ಯನ ಯಾವುದೇ ಗದ್ದಲವಿಲ್ಲದ ಪ್ರಕೃತಿಯ ದರ್ಶನವಾಗಿ ಮಾದಯ್ಯನನ್ನು ಮನದಲ್ಲೇ ನೆನೆದು ಇವನೆಷ್ಟು ಧೈರ್ಯವಂತ ಎನಿಸಿತು. ಕಾಡಿನ ನಡುವೆ ನೆಲೆಗೊಂಡ ಮಾದೇವನ ಗುಡಿಯ ಮುಂದಿನ ಆ ವಿಶಾಲವಾದ ಭೂ ಪ್ರದೇಶದ ಒಲುಮೆಗೆ ಸೋತು ತುಸು ಘಳಿಗೆ ಬಿದ್ದು ಒದ್ದಾಡಿದ್ದು ಆಯಿತು. ಈ ನಡುವೆ ನಮ್ಮನ್ನು ಎಚ್ಚರಿಸಿದ್ದು ಮಹೇಶ. ಹೇ ಬನ್ನಿ ಲೇಟಾಯ್ತ. ಇಲ್ಲಿಂದ ಇನ್ನೂ ಐವತ್ತು ಕಿ.ಮೀ. ಹೋಗಬೇಕು ಭೀಮನಕೊಲ್ಲಿ ತಲುಪಲು ಎಂದ. ಅವನ‌ ಮಾತಿಗೆ ನಾವು ಅಲ್ಲಿಂದ ಕಾಲ್ಕಿತ್ತೆವು. 

ಮರಿಸ್ವಾಮಿ ಮಾತನಾಡುತ್ತ ಹಂಗರ ನೀನು ಇದ್ನೆಲ್ಲ ನೋಡೇ ಇರಲಿಲ್ಲ ಅನ್ನು ಅಂದ. ನಾನು ಇಲ್ಲ ಅಂದೆ. ಬಾ ಬಾ ಬಾ ಇವತ್ತು ಎಲ್ಲವನ್ನು ತೋರಿಸ್ತಿವಿ ಅಂದ ರವಳಯ್ಯ ಉದ್ದಕ್ಕೂ ನನಗೆ ಆ ಸ್ಥಳ ನಾಮಗಳನ್ನು ಪರಿಚಯಿಸುತ್ತಾ ಪ್ರಯಾಣ ಮುಂದುವರೆಸಿದ. ನೋಡು ಇದು ಹೊಗೆಸೊಪ್ಪಿನ ಗೂಡು. ಇಲ್ಲಿಯೇ ಸೊಪ್ಪು ಬೇಯಿಸೋದು. ನೋಡಿಲ್ಲಿ ಇದು ನುಗು ಡ್ಯಾಂ ನ ಹಿನ್ನೀರು, ನೋಡಿಲ್ಲಿ ಇದು ಕಬಿನಿ ಡ್ಯಾಂ. ಇಲ್ಲಿಂದ್ಲೇ ನಮ್ಮ ಗದ್ದೆಗಳಿಗೆ ನೀರು ಬರೋದು. ಅಲ್ಲಿ ಕಾಣ್ತಿದೆಯಲ್ಲ ಅದೇ ಕಬಿನಿ ಬಲದಂಡೆ ಇಲ್ಲಿಂದನೇ ನಮ್ಮ ಕಡೆ ಗದ್ದೆಗಳಿಗೆ ನೀರು ಹರಿಯುವುದು ಎಂದು ಆ ಬೃಹತ್ ಗಾತ್ರದ ನೀರಿನ ಗೇಟ್ ನತ್ತ ಕೈ ತೋರಿಸಿದ. ಇಲ್ಲೆಲ್ಲ ಪೋಟೋ ಶೂಟ್ ಸಾಂಗವಾಗಿ ನಡೆಯುತ್ತಿತ್ತು.

ಚಿಕ್ಕಮ್ಮನ ಬೆಟ್ಟಕ್ಕೆ ಹೋದಾಗ ಮಳೆ ಬಂತು. ನಾಲ್ಕನೇ ಗುಡ್ಡ ಏರಿದಾಗ ಅನ್ನಿಸತ್ತೆ ಸ್ವಲ್ಪ ಬೈಕ್ ನಿಂತು ನಂತರ ಮುಂದೆ ಹೋಯಿತು. ಅಲ್ಲಿಗೆ ಇದೊಂದು ಕಡಿದಾದ ಬೆಟ್ಟ ಅಂತ ತಿಳಿಯಿತು. ಬೆಟ್ಟ ಏರುತ್ತಲೇ ಬೆಟ್ಟದ ದಕ್ಷಿಣ ತುದಿಯಿಂದ ಕೆಳಗೆ ನುಗು ಹಿನ್ನೀರು ಕಾಣುತ್ತಿತ್ತು. ಅಲ್ಲೇ ದೂರದಲ್ಲಿ ಪೂರ್ವದಲ್ಲಿ ಕಬಿನಿ ಹಿನ್ನೀರು ಸಮುದ್ರದಂತೆ ಕಾಣಿಸುತ್ತಿತ್ತು. ಚಿಕ್ಕಮ್ಮನ ದರ್ಶನವಾಗುವಷ್ಟರಲ್ಲಿ ಹೊಟ್ಟೆಗೆ ಚುರುಕು ಹತ್ತುತ್ತಿತ್ತು. ಅಲ್ಲಿ ಕಡ್ಲೇಪುರಿ ಫೇಮಸ್. ಎರಡು ಪಾಕೆಟ್ ಎತ್ತಾಕಿಕೊಂಡೆವು. ಚಿಕ್ಕಮ್ಮನೋ ಮೈಸೂರು ಸೀಮೆಯ ಕೊನೆಯಂಚಿನಲ್ಲಿ ನೆಲನಿಂತ ಮಹಾ ಚೆಲುವೆ. ಎಲೆ-ಅಡಿಕೆ ಸುಂದರಿ. ಆ ಪ್ರಕೃತಿಯ ಮಕ್ಕಳ ಕಾಯುತ್ತಿರುವ ಜನಪದ ಗರತಿಯರ ನೆಚ್ಚಿನ ಚಿಕ್ಕದೇವಿ. ನಾನಂತೂ ಬೆಟ್ಟದ ಮೇಲಿನ ಚಿಕ್ಕವ್ವನ ಗುಡಿಯ ಸುತ್ತಾ ಮಗುವಿನಂತೆ ಹರ್ಷದಿಂದ ನಾಲ್ಕೈದು ಬಾರಿ ಅಲೆದಾಡಿದೆ. 

ಆ ಬೆಟ್ಟದ ಮೇಲಿಂದಲೇ ಕೈ ಬೀಸಿ ಕರೆಯುತ್ತಿದ್ದ ಹಾಗೂ ನಮ್ಮ ಈ ದಿನದ ನಿರ್ಧಿಷ್ಟ ಗುರಿಯೇ ಆಗಿದ್ದ

ಮಾದಯ್ಯನ ಕೊಲ್ಲಿಯ ಕಡೆ ಹೋಗಲು ನಮಗೆ ನೆನಪಿಸಿದ್ದು ಮರಿಸ್ವಾಮಿ.

ಬೆಟ್ಟದ ಮೇಲಿಂದ ಹೊರಟ ರವಳಯ್ಯನ ಬೈಕ್ ಒಂದೇ ಉಸಿರಿಗೆ ಕೆಳಗಿಳಿಯಿತು. ಬೆಟ್ಟದ ತಟದಲ್ಲಿ ಹರಿಯುವ ಕಪನಿ ಹೊಳೆಯ ದರ್ಶನ ಮಾಡಿಕೊಂಡು ಹಸಿರು ಗುಡ್ಡಗಳನ್ನು ಹತ್ತಿ ಇಳಿದು ಹೋಗುವಾಗ ಬೆಟ್ಟದ ತುದಿವರೆವಿಗೂ ಉಳುಮೆ ಮಾಡಿ, ರೈತ ಹೊಡೆದಿದ್ದ ಹೊಲದ ಸಾಲುಗಳು ಮೋಡಗಳ ಕೆಳಗೆ ಬೆಳ್ಳಿ ಗೆರೆಗಳ ಹಾಗೆ ಕಾಣಿಸುತ್ತಿದ್ದವು. ಮಹೇಶ ವೇಗವಾಗಿ ಬೈಕ್ ಓಡಿಸಿದ ಪರಿಣಾಮವಾಗಿ, ನಾವೂ ಆತನನ್ನ ಹಿಂಬಾಲಿಸಿ ಭೀಮನಕೊಲ್ಲಿ ತಲುಪಲು ಅರ್ಧ ಗಂಟೆ ಸಾಕಾಯಿತು. ಇನ್ನೆನೋ ಮೂರು ಕಿ.ಮೀ. ಇದೆ ಎನ್ನುವ ಹಾಗೆ ತಾಳೆ ಮರಗಳ ತೋಪು ಕಣ್ಮನ ಸೆಳೆಯುತ್ತದೆ. ಭೀಮನಕೊಲ್ಲಿಯ ಹಾದಿಯ ಎರಡೂ ಬದಿಯಲ್ಲೂ ಎತ್ತರವಾಗಿ ಬೆಳೆದ ತಾಳೆ ಮರಗಳು ಚಾಮರದಂತೆ ಗಾಳಿ ಬೀಸುತ್ತಾ ನಮ್ಮನ್ನು ಬರಮಾಡಿಕೊಂಡವು.

ಕಪನಿ ಹೊಳೆಗೆ ಅಡ್ಡಲಾಗಿ ಕಟ್ಟಲಾದ ಕಬಿನಿ ಅಣೆಕಟ್ಟಿನ ಹಿನ್ನೀರಿನ ದಡದಲ್ಲಿ ನೆಲೆಗೊಂಡಿರುವ ಮಾದೇವನ ಗುಡಿಯ ತುಂಬಾ ಸಂತೋಷದ ಗಾಳಿ ತುಂಬಿತು. ನೆಮ್ಮದಿಯ ಚೆಂಡು ಮಲ್ಲಿಗೆ ಹೂ ಪರಿಮಳ ಚೆಲ್ಲಿತ್ತು. ಕಷ್ಟಕಾರ್ಪಣ್ಯಗಳಿಗೆ, ಎದೆಯೊಳಗ್ಹುದುಗಿದ ನೋವುಗಳಿಗೆ ಹೊಡೆಯಲೆಂದೇ ಕಕ್ಕೇ ಮರದ ದಂಡಗಳು ಬಿದ್ದಿದ್ದವು. ಅವುಗಳನ್ನು ಹೆಗಲ‌ ಮೇಲೆ ಹೊತ್ತು ಹುಲಿವಾಹನದಯ್ಯನಿಗೆ ಶರಣು ಶರಣಾರ್ಥಿಗಳನ್ನರ್ಪಿಸಿದೆವು.

ಆ ಅಂದದ ಗುಡಿಯ ಹಿಂದೆಯೇ ಸಮುದ್ರದಂತೆ ಕಣ್ಣಿಗೆ ಕಾಣುವಷ್ಟು ದೂರ ಕಬಿನಿ ಡ್ಯಾಂ ನ ಹಿನ್ನೀರು ಚಾಚಿಕೊಂಡಿದೆ. ಸುತ್ತ ಬೆಡ್ಟಗುಡ್ಡಗಳ ನಡುವೆ ನೀರು ನುಗ್ಗಿದೆ. ಅಲ್ಲೊಂದು ದೊಡ್ಡ ಗುಡ್ಡವನ್ನೇ ಸುತ್ತುವರೆದಿರುವ ನೀರು ಸುಂದರ ದ್ವೀಪ ನಿರ್ಮಾಣ ಮಾಡಿದೆ. ಅತ್ತ ಅಲ್ಲಿಂದ ಕಾಣುವ ಆ ಬೆಟ್ಟಗಳ ಸಾಲುಗಳ ಕಡೆದು ಹೋದರೆ ಸುಂದರ ವೈನಾಡು ಕೇರಳ ರಾಜ್ಯ. ಇತ್ತ ಕರುನಾಡು. ಈ ಕನ್ನಡ ನೆಲದ ಆದಿಯಿಂದಲೇ ಮಾದಯ್ಯನ ಮಹಾಯಾತ್ರೆ ಆರಂಭವಾಗಿದೆ. ಇದು ಕೊನೆಗೊಳ್ಳುವುದು ಏಳು ಮಲೆ ಬೆಟ್ಟದಲ್ಲಿ. ಸುಮಾರು ಇನ್ನೂರ ಐವತ್ತು ಕಿ.ಮೀ. ನಡೆದು ಹೋದ ದಾರಿಯಲ್ಲಿ ಮಾದಯ್ಯ ಸೃಷ್ಟಿಸಿದ ಪವಾಡಗಳು ಸಾವಿರಾರು. 

ಹೆಣ್ಣೇಳು ಕೋಟಿ, ಗಂಡೇಳು ಕೋಟಿ ಶರಣ ಭಕ್ತರು ಏಳು ಮಲೆಗೆ ಬರುತ್ತಾರೆಂದು ಅಂದು ಮಾದಯ್ಯ ಹಾಡಿದನೆಂದರೆ, ಈಗ ಅದು ಸಾಧ್ಯವಾಗಿದೆ. ಇದಕ್ಕೆ ಕಾರಣ ಈ ಮಹಾಯಾತ್ರೆ.

ನಮ್ಮ ಈ ದಿನದ ಪಯಣ ಮಲೆ ಮಾದೇಶ್ವರಂಗೆ ಅರ್ಪಿತವಾಗಲಿ.

ನನ್ನ ಬಲು ಪ್ರೀತಿಯಿಂದ ಕರೆದುಕೊಂಡು ಹೋಗಿ ಮಾದಯ್ಯನ ಜತೆ ಬೆಟ್ಟಗಳ ಬೀಡು ಸುತ್ತಿಸಿ, ಚಿಕ್ಕಮ್ಮ, ಗದ್ದುಗೆಯ ಕೆಂಡಗಣ್ಣ, ಸಂಗಮದ ಮಹದೇವ ತಾತಯ್ಯರ ಹಾದಿಯನ್ನೂ ತೋರಿಸಿದ ನನ್ನ ಬಾಲ್ಯದ ಒಡನಾಡಿಗಳಾದ ರವಳಯ್ಯ, ಮಹೇಶ, ಮರಿಸ್ವಾಮಿಗೆ ನನ್ನ ಕೃತಜ್ಞತೆಗಳು.

‍ಲೇಖಕರು avadhi

19 July, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading