ಜಿ ಜಿ ನಾಗರಾಜ್
ಜಿ ಜಿ ನಾಗರಾಜ್ ಚಲನಚಿತ್ರ ಲೋಕವನ್ನು ತೀರಾ ಹತ್ತಿರದಿಂದ ಬಲ್ಲವರು. ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರ ಆಪ್ತರಲ್ಲೊಬ್ಬರು.
ಪ್ರಜಾವಾಣಿ, ಸುಧಾ ಪತ್ರಿಕೆಗಳಲ್ಲಿ ದಶಕಗಳ ಕಾಲ ಕೆಲಸ ಮಾಡಿದ ನಾಗರಾಜ್ ಐ ಬಿ ಎಚ್ ಪ್ರಕಾಶನಕ್ಕಾಗಿ ಮನ್ನಾ ಡೇ ಕುರಿತ ಆಪ್ತ ಪುಸ್ತಕವನ್ನು ರಚಿಸಿದ್ದಾರೆ.
ಅದಕ್ಕೆ ನಾಗರಾಜ್ ಬರೆದ ನುಡಿಗಳು ಇಲ್ಲಿವೆ

ಮನ್ನಾಡೇ ಅವರು 1999-2000 ರಿಂದ ಬೆಂಗಳೂರಿನ ಕಲ್ಯಾಣನಗರದಲ್ಲಿ ನೆಲೆಸಿದ್ದಾರೆ. ಅವರಿಗೀಗ 94ರ ಇಳಿವಯಸ್ಸು. ಆದರೂ ಅವರಲ್ಲಿ ಹಾಡುವ ಹುಮ್ಮಸ್ಸಿಗೇನೂ ಬರವಿಲ್ಲ. ಈಗಲೂ ಹಾರ್ಮೋನಿಯಂ ಹಿಡಿದು ಕುಳಿತರೆ ತಾಸುಗಟ್ಟಲೆ ಹಾಡುತ್ತಾರೆ.
ಸಂಗೀತ ಪ್ರೇಮಿಗಳು ಸುಮಧುರ ಗಾಯನಗಂಗೆಯ ನಿರೀಕ್ಷೆಯಲ್ಲಿದ್ದಾಗಲೇ ಹೃದಯಗಳಿಗೆ ಹಿತವಾಗುವ ಸಂಗೀತ ಸುಧೆಯನ್ನೇ ಹರಿಸಿದವರು ಮನ್ನಾಡೇ. ಸಿನಿಮಾ ಸಂಗೀತಕ್ಕೆ ದನಿಗೂಡಿಸಿ ಹಿನ್ನೆಲೆ ಗಾಯನ ಪರಿಭಾಷೆಗೆ ಹೊಸ ಕಸುವು, ತಾದಾತ್ಮ ತುಂಬಿದವರು. ಯಾವುದೇ ಹಾಡು ಭಾವಪೂರ್ಣ ಸ್ಥಿತಿಗತಿಯಲ್ಲಿರಲಿ ಸ್ವರವೇ ತಾನಾಗಿ ಹಾಡುವ ಕಲೆಯನ್ನು ಮೈಗೂಡಿಸಿಕೊಂಡ ಜ್ಞಾನಶರಧಿ. ಶಾಸ್ತ್ರೀಯ ಹಂದರದ ಮೇಲೆ ವಿದ್ವತ್ಪೂರ್ಣ ಗಾಯನ ಅವರದಾಗಿತ್ತು. ಆ ಕಾರಣದಿಂದಲೇ ಇಂದಿಗೂ ಚಿತ್ರ ಜಗತ್ತು ಮತ್ತು ಹೊರಜಗತ್ತು ಅವರನ್ನು ಅಪಾರ ಗೌರವಾದರಗಳಿಂದ ಕಾಣುತ್ತದೆ. ‘ಮಾತು ಕಡಿಮೆ; ಕೆಲಸ ಜಾಸ್ತಿ’ ಜಾಯಮಾನಕ್ಕೆ ಸೇರಿದ ಮನ್ನಾಡೇಯವರು ಜನರೊಂದಿಗೆ ಅಷ್ಟಾಗಿ ಬೆರೆಯುವವರಲ್ಲ. ಇತರರಿಗೆ ತೊಂದರೆಕೊಡುವ ಸ್ವಭಾವವೂ ಅವರದಲ್ಲ. ಕೊಂಚ ಮೂಡಿ. ಆದರೆ ಬಿಡುವಿದ್ದಾಗ ಆತ್ಮೀಯರೊಂದಿಗೆ ಹಿತವಾಗಿ ಮಾತಿಗಿಳಿಯುತ್ತಾರೆ.
60 ವಸಂತಗಳ ಸುದೀರ್ಘ ಕಾಲ ಗಾಯನ ದೋಣಿಯ ಪಯಣದಲ್ಲಿ ಸಪ್ತಸ್ವರಗಳನ್ನೇ ಉಸಿರಾಗಿಸಿಕೊಂಡು ನಾದಝರಿಯ ಬದುಕು ಸಾಗಿಸಿದವರು ಮನ್ನಾಡೇ ಸಾಬ್. ಸಿನಿಮಾ ಹಾಡುಗಳು, ಧ್ವನಿಸುರುಳಿಗಳು ಮತ್ತು ಪ್ರತಿಷ್ಠಿತ ವೇದಿಕೆಗಳಲ್ಲಿ ಗಾಯನ ಕಾರ್ಯಕ್ರಮಗಳ ಮೂಲಕ ಅವರು ಸಹಸ್ರಾರು ಜನರಿಗೆ ಸುಪರಿಚಿತರು. ಅವರು ಬಿಚ್ಚಿಟ್ಟ ಸ್ವರಗಳು, ತಮ್ಮ ಗಾಯನ ಪಯಣದ ಮಗ್ಗಲುಗಳು ಈ ಪುಸ್ತಕದಲ್ಲಿ ಅನುರಣನಗೊಂಡಿವೆ. ಅವರ ಹಾಡುಗಳನ್ನು ಕೇಳುವುದೇ ಮಧುರಾನುಭವ.
ಅಚಲ ಶ್ರದ್ಧೆ, ಮನೋಸ್ಥೈರ್ಯ, ಕಲಿಯುವ ತುಡಿತ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಚಿಕ್ಕಪ್ಪ ಸಂಗೀತಾಚಾರ್ಯ ಕೆ.ಸಿ.ಡೇ (ಬಾಬು ಕಾಕ) ಅವರು ಬೆಳೆಸಿದ ಸಂಗೀತ ಪ್ರೀತಿಯ ಕೃಷಿ ತನ್ನ ಗಾಯನ ಕಲಾಸಿದ್ಧಿಗೆ ಕಾರಣ ಎಂದು ಅಭಿವ್ಯಕ್ತಿಸುತ್ತಾರೆ ಮನ್ನಾಡೇ.
ಸಿನಿಮಾ ಜನಮನವನ್ನು ಬೆಸೆಯುವ ಮಾಧ್ಯಮ. ಭಾರತೀಯ ಚಿತ್ರರಂಗ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಸುಸಂದರ್ಭದಲ್ಲಿ ಮನ್ನಾಡೇಯವರನ್ನು ಕುರಿತ ಪುಸ್ತಕ ಬರೆಯುವ ಸದವಕಾಶ ಲಭ್ಯವಾಗಿರುವುದು ನನ್ನ ಸುದೈವವೆಂದೇ ಭಾವಿಸುತ್ತೇನೆ. ಅವರ ಗಾಯನ ಬದುಕಿನ ಹಲವು ಆಯಾಮಗಳ ಹೆಜ್ಜೆ ಗುರುತುಗಳನ್ನು ದಾಖಲಿಸಲು ಇಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಗಾಯನ ಲೋಕದ ಖ್ಯಾತನಾಮರೊಬ್ಬರ ಜೀವನ ಚರಿತ್ರೆ ಬರೆಯುವುದು ಅಷ್ಟು ಸುಲಭವಲ್ಲದಿದ್ದರೂ ಅಭಿಮಾನದ ಸಂಗತಿ. ಇದು ನನ್ನ ಪಾಲಿಗೆ ಬಂದದ್ದು ಯೋಗಾಯೋಗ. ಈ ಪುಸ್ತಕ ಜೀವತಳೆಯಲು ಮನ್ನಾಡೇಯವರ ಅಭಿಮಾನಿಗಳು ಹಾಗೂ ಆಪ್ತರಾದ ಡಾ.ಕುಸುಮಾ ಮತ್ತು ಅವರ ಪತಿ ಎಂಜಿನಿಯರ್ ಎನ್.ವೆಂಕಟೇಶ್ ಎಲ್ಲ ರೀತಿಯ ಸಹಕಾರ ನೀಡಿ ಹೃದಯವಂತಿಕೆ ಮೆರೆದಿದ್ದಾರೆ. ಮನ್ನಾಡೇಯವರನ್ನು ಕುರಿತ ಚಿತ್ರಗಳು, ಮಾಹಿತಿ, ಅವರ ಕುಟುಂಬ ಸದಸ್ಯರ ಪರಿಚಯ, ಜೊತೆಗೆ ಬರವಣಿಗೆಯಲ್ಲೂ ಡಾ.ಕುಸುಮಾ ಮತ್ತು ವೆಂಕಟೇಶ್ ಕೈಜೋಡಿಸಿದ್ದಾರೆ. ಹಿರಿಯ ಚಿತ್ರಸಾಹಿತಿ ಸಿ.ವಿ.ಶಿವಶಂಕರ್ ಅವರು ಈ ಪುಸ್ತಕಕ್ಕೆ ಮೌಲಿಕವಾದ ಮುನ್ನುಡಿಯನ್ನು ಬರೆದು ಸಮರ್ಪಕ ಪ್ರವೇಶವನ್ನು ದೊರಕಿಸಿಕೊಟ್ಟಿದ್ದಾರೆ ಮತ್ತು ಈ ಪುಸ್ತಕವನ್ನು ಪ್ರಕಟಿಸಿದ ಐಬಿಎಚ್ ಪ್ರಕಾಶನದ ಸಂಜಯ್ ಅಡಿಗ ಅವರಿಗೆ ಕೃತಜ್ಞತೆಗಳು.
ಕೃತಿಯ ರಚನೆ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಿದ ಹಿರಿಯ ಪತ್ರಕರ್ತ ಹಾಗೂ ಆತ್ಮೀಯ ಗೆಳೆಯ ಲಕ್ಷ್ಮಣ ಕೊಡಸೆ ಅವರ ನೆರವನ್ನು ಸ್ಮರಿಸಿಕೊಳ್ಳುತ್ತೇನೆ.
ಛಾಯಾಗ್ರಾಹಕ ಎಚ್.ವಿಶ್ವನಾಥ್ ಮನ್ನಾಡೇಯವರ ಸೊಗಸಾದ ಚಿತ್ರಗಳನ್ನು ಸೆರೆ ಹಿಡಿದಿ
ದ್ದಾರೆ. ಈ ಪುಸ್ತಕ ಸಿದ್ಧಪಡಿಸಲು ಸಹಕರಿಸಿದ ನನ್ನ ಪತ್ನಿ ಕೃಷ್ಣವೇಣಿ, ಪುತ್ರರಾದ ವರುಣ್ ನಾಗರಾಜ, ನಿತಿನ್ ನಾಗರಾಜ, ಸೊಸೆ ಪ್ರೀತಿ ಹಾಗೂ ಪ್ರತ್ಯಕ್ಷ- ಪರೋಕ್ಷವಾಗಿ ಸಹಕರಿಸಿದ ಎಲ್ಲ ಮಿತ್ರರಿಗೂ ಅಭಿನಂದನೆಗಳು. ಈ ಕೃತಿಯನ್ನು ಸಹೃದಯರ ಕೈಗೆ ಒಪ್ಪಿಸುತ್ತಿದ್ದೇನೆ. ಪುಸ್ತಕ ಕುರಿತಾದ ಓದುಗರ ಸಲಹೆ, ಸೂಚನೆಗಳಿಗೆ ಮುಕ್ತ ಸ್ವಾಗತ.






visheshavaagi shastreeya sangeetada khayaali iruva chalanachitra sangeeta priyararu mareyalaarada/mareyabaarada gayaka MANNADE !!..hagendu bhaava-praadhana geete Mannade kantha-siriyinda hommillaa yedillaa !!Mehmooda gaagi Haasyada-Honalina geetegalannoo hadi Mehmooda-na DHWANI yendoo Manna-DA prasiddaru _ PADOSAN hadonde saakallave !! Avaru Bengalooralli bandu nelesiruvude sangeeta-priyara Bhagya ; avar bagge Kannadadalli pustaka bandiruvudu swagattarha-abhinandaneeyaa !!