‘ದೇಶ ಕಾಲ’ ವಿಶೇಷ ಸಂಚಿಕೆ ಬಗ್ಗೆ ಮಂಜುನಾಥ್ ಲತಾ ಹಾಗೂ ಚಂದ್ರಶೇಕರ್ ಐಜೂರು ಬರೆದ ಲೇಖನ ಪ್ರಕಟವಾಗಿತ್ತು. ಅದು ಇಲ್ಲಿದೆ. ಜುಗಾರಿ ಕ್ರಾಸ್ ನಲ್ಲಿ ಅದನ್ನು ಚರ್ಚೆಗೆ ಇಡಲಾಗಿತ್ತು. ಕವಿ ಡಿ ಎಸ್ ರಾಮಸ್ವಾಮಿ ಬರೆದ ಪ್ರತಿಕ್ರಿಯೆ ಇಲ್ಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ‘ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಸಾಹಿತಿ ಎಸ್ ಜಿ ಸಿದ್ಧರಾಮಯ್ಯ ಅವರು ಮಂಡಿಸಿದ ಅಭಿಪ್ರಾಯ ಇಲ್ಲಿದೆ. ಮಂಗಳೂರಿನಿಂದ ಜಿ ಎನ್ ಅಶೋಕವರ್ಧನ ತಮ್ಮ ಅನುಭದ ಜೊತೆ ದೇಶಕಾಲದ ಕಥೆಯನ್ನು ಮೇಳೈಸಿದ್ದಾರೆ ಅದು ಇಲ್ಲಿದೆ. ಸಂದೀಪ್ ಕಾಮತ್ ಬರಹದ ರುಚಿ ನಿಮಗೆಲ್ಲರಿಗೂ ಗೊತ್ತೇ ಇದೆ. ಇಲ್ಲಿ ಅವರು ಪತ್ರ ಬರೆದಿದ್ದಾರೆ. ಇನ್ನೂ ಸಾಕಷ್ಟು ಪತ್ರಗಳಿವೆ.
ಈಗ ಈ ಚರ್ಚೆ ಎಲ್ಲವನ್ನೂ ಒಟ್ಟು ಮಾಡಿ ಪುಸ್ತಕ ರೂಪದಲ್ಲಿ ತರಲಾಗುತ್ತಿದೆ.
ಈ ಸಂದರ್ಭದಲ್ಲಿ ಡಿ ಎಸ್ ನಾಗಭೂಷಣ ಅವರು ಈ ಚರ್ಚೆಗಳತ್ತ, ‘ದೇಶಕಾಲ’ದತ್ತ ಮತ್ತೆ ಕಣ್ಣು ಹಾಯಿಸಿದ್ದಾರೆ. ನಿನ್ನೆ ಮೊದಲ ಭಾಗ ಪ್ರಕಟವಾಗಿತ್ತು . ಎರಡನೆಯ ಭಾಗ ಇಲ್ಲಿದೆ.
ಎಂದಿನಂತೆ ಇದೂ ಜುಗಾರಿ ಕ್ರಾಸ್ ನಲ್ಲಿ ಪ್ರಕಟವಾಗುತ್ತಿದೆ. ನಿಮ್ಮ ಚರ್ಚೆಗೂ ಸ್ವಾಗತ..
ಮೊದಲಾಗಿ ದೇಶಕಾಲ, ನಿರ್ದಿಷ್ಟವಾಗಿ ಅದರ ವಿಶೇಷಾಂಕ; ನಾನು ಈಗಾಗಲೇ ಸೂಚಿಸಿದ ಹಾಗೆ, ಶ್ರೇಷ್ಠ ಸಾಹಿತ್ಯದ ಕಲ್ಪನೆಯನ್ನು ನಂಬಿ ರೂಪುಗೊಂಡಿಲ್ಲ. ನಂಬಿಯೇ ರೂಪುಗೊಂಡಿರುವುದು ಎಂದು ಯಾರಾದರೂ ಸಂಪಾದಕರ ಮೇಲೆ ಮಂಪರು ಪರೀಕ್ಷೆ ನಡೆಸಿ ಕಂಡು ಹಿಡಿದಿದ್ದರೂ, ಅದರ ಕುರುಹುಗಳು ಸಂಚಿಕೆಯಲ್ಲ್ಲಿ ಕಾಣುವುದಿಲ್ಲ. ಇದರ ಬಗ್ಗೆ ನಾನು ಹೆಚ್ಚು ಮಾತಾಡಲು ಹೋಗುವುದಿಲ್ಲ. ಏಕೆಂದರೆ, ಈ ಪತ್ರಿಕೆಯ ಬಗ್ಗೆ ತಮ್ಮ ಪ್ರತಿಕ್ರಿಯೆಗಳುದ್ದಕ್ಕೂ ಕಾಣುವ ಹಾಗೆ ವಿಪರೀತ ಅಭಿಮಾನವಿಟ್ಟವರಂತೆ ತೋರುವ ರಾಜಶೇಖರರು, ಎಲ್ಲಿ, ನಿಮ್ಮ ಈ ಮಾತಿಗೆ ಪಠ್ಯದ ಸಾಕ್ಷ್ಯ ನೀಡಿ ಎಂದು ಕೇಳಿಯಾರ! ಆದುದರಿಂದ ಅವನ್ನೆಲ್ಲ ಬಿಟ್ಟು, ಸಂಪಾದಕರು ಆರಿಸಿರುವ ೨೧ನೇ ಶತಮಾನದ ೨೧ ಲೇಖಕರ ಮತ್ತು ೨೧ ಕೃತಿಗಳ ಪಟ್ಟಿಯ ಹಿಂದಿನ ಯೋಜನೆಯ ರೀತಿ-ನೀತಿಗಳನ್ನಷ್ಟೇ ನೋಡೋಣ. ಈ ಪಟ್ಟಿಯ ಹೆಸರುಗಳ, ಕೃತಿಗಳ ಆಯ್ಕೆಯ ಹಿಂದಿರುವ ನ್ಯಾಯಾನ್ಯಾಯಗಳ ವಿಷಯ ಬೇಡ(ಮತ್ತೆ ಅದಕ್ಕೆ ರಾಜಶೇಖರ್ ಸಾಕ್ಷ್ಯ ಕೇಳಿಯಾರು!); ಅದರ ಕಲ್ಪನೆಯ ಹಿಂದಿನ ಧಾರ್ಷ್ಟ್ಯವನ್ನು ನೋಡಿದರೇ ಈ ಸಂಚಿಕೆಯ ಆಯೋಜಕರ ಅಡ್ಡಕಸುಬಿತನ ಕಾಣುತ್ತದೆ. ೨೧ನೇ ಶತಮಾನದ ಹತ್ತನೇ ಒಂದು ಭಾಗವೂ ಮುಗಿದಿಲ್ಲದಿರುವಾಗ ಮತ್ತು ಒಬ್ಬ ಮನುಷ್ಯನ ಬರಹದ ಬದುಕೇ ಸರಾಸರಿ ೪೦-೫೦ ವರ್ಷ ಇರುವಾಗ, ಇವರು ಮುಂದಿನ ನೂರು ವರ್ಷಗಳ ಸಾಹಿತ್ಯದ ಬಗ್ಗೆ, ಕೃತಿಗಳ ಬಗ್ಗೆ ಮಾತನಾಡಬಲ್ಲ(ಆ ಮಾತು ಎಂತಹುದೇ ಆಗಿರಲಿ) ಧೈರ್ಯ ಮಾಡುತ್ತಾರೆಂದರೆ ಇವರನ್ನು ತಲೆ ಕೆಟ್ಟವರೆಂದು ನಿರ್ಲಕ್ಷಿಸಬೇಕೋ ಅಥವಾ ಇದರ ಹಿಂದಿನ ಅಪ್ರಬುದ್ಧ ಸಾಹಿತ್ಯ ರಾಜಕಾರಣವನ್ನು ಕಂಡು ಹೇಸಬೇಕೋ ತಿಳಿಯದಾಗುತ್ತದೆ!
ಜೊತೆಗೆ ಈ ೨೧ ಜನ ಲೇಖಕ/ಲೇಖಕಿಯರ ಬಗ್ಗೆ ಇವರೇ ಅಥವಾ ಇವರ ಸಂಪಾದಕೀಯ ಬಳಗದ ಯಾರಾದರೂ ಬರೆಯದೆ, ಈ ಆಯ್ಕೆಗೆ ಸಂಬಂಧವೇ ಇಲ್ಲದ ಮತ್ತು ಯಾವ ಉದ್ದೇಶಕ್ಕಾಗಿ ತಾವು ಬರೆಯುತ್ತಿದ್ದೇವೆ ಎಂಬುದು ಗೊತ್ತಿಲ್ಲದೇ ಇರುವವರಿಂದ ಬರೆಸುವ ಹುನ್ನಾರ ಬೇರೆ! ಬರಿ ಹುನ್ನಾರವೇನು, ಕೆಟ್ಟ ರಾಜಕಾರಣವಿದು. ನನ್ನ ಪತ್ನಿಗೂ ಹೀಗೆ ಯಾಕೆಂದು ಗೊತ್ತಿಲ್ಲದೆ ಒಬ್ಬ ಕವಿ/ಕವಯತ್ರಿಯ ಬಗ್ಗೆ ಬರೆಯುವ ಆಹ್ವಾನ ಬಂದಿದ್ದುದರಿಂದ; ಆದರೆ ಆಕೆಗೆ ಆ ಆಹ್ವಾನದ ಈ ಪರಿಯಲ್ಲೇ ಇದ್ದ ರಾಜಕಾರಣದ ವಾಸನೆ ಬಡಿದೋ ಏನೋ ನಿರಾಕರಿಸಿದ್ದರಿಂದ ಇದು ನನಗೆ ಗೊತ್ತಾಯಿತಷ್ಟೆ. ಈ ಸಂಬಂಧ ನನಗೆ ತಿಳಿದುಬಂದ ಇನ್ನೊಂದು ಸಂಗತಿಯೆಂದರೆ, ನನ್ನ ಪತ್ನಿಯಂತೆಯೇ ಹಲವು ಲೇಖಕರು ಬರೆಯಲು ನಿರಾಕರಿಸಿದ್ದರಿಂದಾಗಿ, ತಮ್ಮ ಈ ಆಯ್ದ ೨೧ ಜನ ಲೇಖಕರಲ್ಲಿ ಹಲವರ ಬಗ್ಗೆ ಈ ಪತ್ರಿಕೆಯ ಸಂಪಾದಕ ಬಳಗ ಯಾರನ್ನು ಸಾಹಿತ್ಯದ ಗಂಧ-ಗಾಳಿ ಇಲ್ಲದವರು ಎಂದು ಪರಿಗಣಿಸಿ ನಿರ್ಲಕ್ಷಿಸಿತ್ತೋ, ಕೊನೆಗೆ ಅಂತಹವರನ್ನೇ ಕಾಡಿ ಬೇಡಿ, ಪುಸಲಾಯಿಸಿ ಬರೆಯಿಸಿದ್ದಾರೆ! ಇನ್ನು ಈ ಇಡೀ ಯೋಜನೆಯ ಮಟ್ಟ ಎಲ್ಲಿಗೆ ಇಳಿದಿರಬಹುದು ಯೋಚಿಸಿ!
ಬಹುಶಃ ಇದನ್ನು ತಿಳಿದೇ-ತಮ್ಮ ಈ ಗುಪ್ತ ರಾಜಕೀಯ ಸಾಹಸ ಹಾಸ್ಯಾಸ್ಪದ ರೀತಿಯಲ್ಲಿ ವಿಫಲಗೊಂಡಿದ್ದರಿಂದಾದ ಮುಜುಗರವನ್ನು ಮರೆಮಾಚಿಕೊಳ್ಳಲೆಂದೇ-ಸಂಪಾದಕ ಮಂಡಳಿಯವರು, ಕೆಲವರು ಪತ್ತೇದಾರಿ ನಡೆಸಿ ಹೇಳುತ್ತಿರುವಂತೆ, ತಮ್ಮ ಈ ಉತ್ಪನ್ನದ ಬಿಡುಗಡೆಗಾಗಿ ಮಾಧ್ಯಮಗಳ ಮೇಲೆ ಕಾರ್ಪೋರೇಟ್ ಸಂಸ್ಥೆಗಳು ಅನುಸರಿಸುವ ಅತ್ಯಾಧುನಿಕ ಮಾದರಿಯ ಸಂಪನ್ಮೂಲಗಳನ್ನೇ ಬಳಸಿ ಭರ್ಜರಿ ಪ್ರಚಾರ ಪಡೆದಿರಬಹುದು! ಆದರೆ ಇದೇ ಅವರಿಗೆ ಮುಳುವಾಗಿ, ನಮ್ಮಂತಹವರ ಕೆಟ್ಟ ಕಣ್ಣು(ಮತ್ತು ಮಂಜುನಾಥ್ ಲತಾ-ಐಜೂರರಂತಹ ಹಲವರ ದುಷ್ಟ ಕಣ್ಣೂ?) ಅವರ ಮೇಲೆ ಬೀಳುವಂತೆಯೂ ಆಗಿಬಿಟ್ಟಿತಲ್ಲಾ? ಅದೇನೇ ಇರಲಿ, ದೇಶಕಾಲದ ಈ ಪ್ರಯತ್ನ ಬಂಡಾಯದ ಕೆಲವರು ಮಾಡಿದ ಪ್ರಯತ್ನದಂತೆಯೇ ಸಾಹಿತ್ಯಕ್ಕೆ ಹಾನಿ ಮಾಡುವ ಪ್ರಯತ್ನವೇ ಆಗಿದೆ. ವಾಸ್ತವ ಹೀಗಿರುವಾಗ ಈ ಪತ್ರಿಕೆಯ ಮೇಲೆ ಶ್ರೇಷ್ಠ ಸಾಹಿತ್ಯದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರೆ ಅದಕ್ಕಿಂತ ಹಾಸ್ಯಾಸ್ಪದ ಸಂಗತಿ ಇನ್ನೊಂದಿರಲಾರದು!
ಇನ್ನು ಪತ್ರಿಕೆಯಲ್ಲಿ/ವಿಶೇಷಾಂಕದಲ್ಲಿ ಬ್ರಾಹ್ಮಣ ಲೇಖಕರ ಸಂಖ್ಯೆ ಹೆಚ್ಚಾಗಿದೆ(ಅರುಣ್ ಜೋಳದಕೂಡ್ಲಿಗಿಯವg ಭಾಷೆಯಲ್ಲಿ, ಬ್ರಾಹ್ಮಣರ ಲಾಬಿ) ಎನ್ನುವ ಆಧಾರದ ಮೇಲೆ ಶ್ರೇಷ್ಠತೆಯ ವ್ಯಸನದ ಆರೋಪ ಮಾಡಿದರೆ, ಅದು ಲಂಕೇಶ್ ನಂಬಿದ್ದ ಶ್ರೇಷ್ಠ ಸಾಹಿತ್ಯದ ಕಲ್ಪನೆಗೇ ಮಾಡುವ ಅವಮಾನ. ಹಾಗಾಗಿ, ಇದರ ಮೇಲೆ ಹೆಚ್ಚೆಂದರೆ ಸುಪ್ತ (ಮೇಲ್)ಜಾತೀಯತೆಯ ಆರೋಪ ಮಾಡಿ ತೃಪ್ತಿ ಪಟ್ಟುಕೊಳ್ಳಬಹುದು. ಆದರೆ ಇಂದು ಸಾಮಾಜಿಕ ನ್ಯಾಯದ ರಾಜಕಾರಣ ಸಾಹಿತ್ಯ ಕ್ಷೇತ್ರಕ್ಕೂ ಹಬ್ಬಿ ಅಕಾಡೆಮಿ ಅಧ್ಯಕ್ಷತೆ, ಸದಸ್ಯತ್ವ, ಬಹುಮಾನ-ಪ್ರಶಸ್ತಿ ಇತ್ಯಾದಿ ಬಹುತೇಕ ಅಧಿಕೃತ ಮಾನ್ಯತೆಗಳು ಸಾಹಿತ್ಯ ನ್ಯಾಯವೊಂದನ್ನು ಬಿಟ್ಟು ಸಾಮಾಜಿಕ ನ್ಯಾಯದ ವಿವಿಧ ಶಾಖೆಗಳಿಗೆ ಸಂಬಂಧಿಸಿದ ನ್ಯಾಯಗಳ ಹೆಸರಲ್ಲಿ ಬಹುಪಾಲು ಅಯೋಗ್ಯರ ಪಾಲಾಗುತ್ತಾ, ಸಾರ್ವಜನಿಕರಲ್ಲಿ ಸಾಹಿತ್ಯದ ಗುಣಾತ್ಮಕತೆ ಕುರಿತಂತೆ ಗಂಭೀರ ಸಂದೇಹಗಳು ಸೃಷ್ಟಿಯಾಗುತ್ತಿರುವ ದಿನಗಳನ್ನು ನಾವು ನೋಡುತ್ತಿದ್ದೇವೆ. ಹಾಗಾಗಿ ಇದು ಇಂದಿನ ಈ ಸಂದರ್ಭಕ್ಕೆ ಪತ್ರಿಕೆ ತೋರಿಸುತ್ತಿರುವ ತನ್ನದೇ ರೀತಿಯ ಪ್ರತಿಕ್ರಿಯೆ ಯಾಕಾಗಿರಬಾರದು?(ಅಥವಾ ಪತ್ರಿಕೆಯ ಆರಂಭದ ಹಿಂದಿನ ಸ್ಫೂರ್ತಿಯೇ ಇದಾಗಿರಬಹುದು, ಯಾರಿಗೆ ಗೊತ್ತು?) ತೇಜಸ್ವಿ ಪ್ರಕಾರ ಇಂದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮೀಸಲು ಏನಾದರೂ ಅಗತ್ಯವಿದ್ದರೆ ಅದು ಬ್ರಾಹ್ಮಣರಿಗೆ ಅಗತ್ಯವಾಗಿದೆ.೬ ಅದನ್ನು ದೇಶಕಾಲ ಅರ್ಥ ಮಾಡಿಕೊಂಡು ಜಾರಿಗೆ ತಂದಿರಲೂಬಹುದು!
-೪-
ಇರಲಿ. ಈ ಚರ್ಚೆಯಲ್ಲಿ ನನಗೆ ಮೊದಲಿಗೇ ಎದ್ದು ಕಾಣುವ ದುಃಖ, ವಿಷಾದದ ಸಂಗತಿ ಎಂದರೆ, ಮಂಜುನಾಥ್ ಲತಾ-ಐಜೂರರ ಲೇಖನವನ್ನು, ಅದರಲ್ಲಿನ ಪ್ರತಿ ಮಾತನ್ನೂ ಫಣಿರಾಜ್-ರಾಜಶೇಖರರು ವಿಮರ್ಶೆಯೆಂದು(ಅದು ಸೂಕ್ತ ಪರಿಭಾಷೆಯಲ್ಲಿಲ್ಲವೆಂದು ದೂರುತ್ತಲೇ!) ಬಗೆದು, ಸಹಜವಾಗಿಯೇ ಅದಕ್ಕೆ ಉತ್ತರಿಸಲಾಗದ ಹತಾಶೆ-ಕ್ರೋಧಗಳಿಗೆ ತಮ್ಮನ್ನು ತಾವು ತೆತ್ತುಕೊಂಡಿರುವುದು. ಆದರೆ ನನಗೆ ಅದು ಮೊದಲ ನೋಟಕ್ಕೇ ದಿಕ್ಕು ದೆಸೆಯಿಲ್ಲದ ಸಾರ್ವಜನಿಕ ದೂರು-ಬೈದಾಟಗಳು ತುಂಬಿದ ದೊಡ್ಡ ರಂಪದಂತೆ ಕಂಡಿದೆ. ಹಾಗಾಗಿಯೇ ನಾನು ಅದಕ್ಕೆ ಪ್ರತಿಕ್ರಿಯಿಸಬೇಕಾಗಿಲ್ಲ; ಪ್ರತಿಕ್ರಿಯಿಸಬೇಕಾದವರು ಬೇರೆ ಇದ್ದಾರೆ ಎಂದು ಸುಮ್ಮನಾದೆ. ನನ್ನ ಆಶ್ಚರ್ಯಕ್ಕೆ, ಇದಕ್ಕೆ ಯಾರು ಪ್ರತಿಕ್ರಿಯಿಸಬೇಕಿತ್ತೋ(ಪ್ರತಿಕ್ರಿಯಿಸಬೇಕೆನಿಸಿದರೆ) ಅವರು ಪ್ರತಿಕ್ರಿಯಿಸದೆ, ಈ ಇಬ್ಬರು ಪ್ರತಿಕ್ರಿಯಿಸಿದ್ದಾರೆ! ಅದೂ ಕತ್ತಿವರಸೆಯ ಆವೇಶದೊಂದಿಗೆ… ಇದರಿಂದಾಗಿ, ಇವರು ಈ ರಂಪವಾದರೂ ಏಕೆ ಹುಟ್ಟಿಕೊಂಡಿದೆ ಎಂದು ಯೋಚಿಸುವ, ಅದರ ಹಿಂದಿನ ಪ್ರವೃತ್ತಿಗಳನ್ನೂ, ಕಾರಣಗಳನ್ನು ಗುರುತಿಸಿ ಅವಕ್ಕೆ ನೇರವಾಗಿ ಪ್ರತಿಕ್ರಿಯಿಸುವ ಮೂಲಕ ಚರ್ಚೆಯನ್ನು ಆರಂಭದ ಹಂತದಲ್ಲೇ ಮುಕ್ತಾಯಗೊಳಿಸುವ ಸಹನೆ-ವ್ಯವಧಾನಗಳನ್ನು ಸಂಘಟಿಸಿಕೊಳ್ಳಲಾಗದೆ, ಸುಖಾಸುಮ್ಮನೆ ತಮ್ಮ ದೌರ್ಬಲ್ಯಗಳನ್ನು ಬಯಲು ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಂಡಿದ್ದಾರೆ. ಈ ತಪ್ಪು ಹೆಜ್ಜೆಯಿಂದಾಗಿ ಇವರ ವಾದಗಳೂ ಒಂದೇ ಸಮನೆ ತಪ್ಪು ಹೆಜ್ಜೆಗಳನ್ನಿಡುತ್ತಾ ಹೋಗಿವೆ. ಕೆಲವೆಡೆ ಅನುಮಾನಾಸ್ಪದವೆನ್ನಿಸುವಂತೆ ಕೂಡಾ. ಇದು ನನ್ನಲ್ಲಿ ಸಾಕಷ್ಟು ಕಸಿವಿಸಿಯನ್ನೂ ಕೆಲವು ಆತಂಕಗಳನ್ನೂ ಹಟ್ಟು ಹಾಕಿದೆ.
ಏಕೆಂದರೆ, ಇವರಿಬ್ಬರು ಇವೊತ್ತಿನ ಕನ್ನಡ ಸಾಹಿತ್ಯ ಸಂದರ್ಭವನ್ನು ಇಂದು ತಮ್ಮದೇ ವಿಶಿಷ್ಟ ಜವಾಬ್ದಾರಿ ಮತ್ತು ಒಳನೋಟಗಳೊಂದಿಗೆ ವ್ಯಾಖ್ಯಾನಿಸುತ್ತಿರುವ ಎರಡು ಪ್ರಮುಖ ವೈಚಾರಿಕ ಧಾರೆಗಳಲ್ಲಿ ಒಂದರ ಬಹು ಮುಖ್ಯ ವಕ್ತಾರರೆಂದು ನಾನು ಭಾವಿಸಿದ್ದೇನೆ. ಇವರು ಸದರಿ ಚರ್ಚೆಯೇ ಒಂದು ನೆಪವಾಗಿ, ಈ ಧಾರೆಯ ಇವೊತ್ತಿನ ನಂಬಿಕೆಗಳನ್ನು, ನಿಲುವುಗಳನ್ನು ತಮ್ಮದೇ ಕಾರಣಗಳಿಂದಾಗಿ ಸಾಕಷ್ಟು ಕಟುವಾಗಿ ಮತ್ತು ನಿರ್ದಾಕ್ಷಿಣ್ಯವಾಗಿ ಮಂಡಿಸಿದ್ದಾರೆ. ಇದರಿಂದ ಕೆರಳಿದ, ಕುತೂಹಲಗೊಂಡ ಇತರ ಅನೇಕರು ಅನಿವಾರ್ಯವೆಂಬಂತೆ ಮಧ್ಯ ಪ್ರವೇಶಿಸಿ, ಚರ್ಚೆಯನ್ನು ದೇಶಕಾಲವನ್ನು ಮೀರಿದ ಸಮಕಾಲೀನ ಸಾಹಿತ್ಯ ರಾಜಕಾರಣದ ಕೆಲವು ಪ್ರಶ್ನೆಗಳಿಗೆ ವಿಸ್ತರಿಸಿ ಒಳ್ಳೆಯದನ್ನೇ ಮಾಡಿದ್ದಾರೆ. ಇದರಿಂದಾಗಿ ನನಗೂ, ಮಂಜುನಾಥ್ ಲತಾಐಜೂರರ ರಂಪ ನೆಪ ಮಾತ್ರವಾಗಿ, ಇವೊತ್ತಿನ ಸಾಹಿತ್ಯಿಕ-ಸಾಂಸ್ಕೃತಿಕ ಸಂದರ್ಭದ ಈ ವಿಸ್ತಾರದಲ್ಲಿ ನನ್ನನ್ನು ನಾನೇ ಕಂಡುಕೊಳ್ಳಲು, ಸ್ಪಷ್ಟಪಡಿಸಿಕೊಳ್ಳಲು ಅವಕಾಶವಾಗಿದೆ. ಹೀಗಾಗಿ ನಾನು ಇಲ್ಲಿ ಇವರ ಇಲ್ಲಿನ ಅಭಿಪ್ರಾಯ-ನಿಲುವುಗಳನ್ನು ಮತ್ತು ವಾದ ವೈಖರಿಗಳನ್ನು ಸಂದರ್ಭೋಚಿತ ನಿಷ್ಠುರತೆಯಿಂದ ಮತ್ತು ಸವಿವರವಾಗಿ ಪರಿಶೀಲಿಸುವ ಹುಮ್ಮಸ್ಸು ಮೂಡಿದೆ. ಈ ನನ್ನ ಗೆಳೆಯರು ಇದನ್ನು ಸಹಿಸಬಲ್ಲರೆಂಬ ನಂಬಿಕೆ ನನಗಿದೆ.
ಮೊದಲಾಗಿ ಈ ಚರ್ಚೆಯ ಸಂದರ್ಭದಲ್ಲಿ ನನ್ನನ್ನು ಕಾಡಿದ ಮುಖ್ಯ ಪ್ರಶ್ನೆಯೆಂದರೆ, ದೇಶಕಾಲದ ಮುಖ್ಯ ಪಾತ್ರಧಾರಿಗಳೇ ಸುಮ್ಮನಿರುವಾಗ, ಫಣಿರಾಜ್-ರಾಜಶೇಖರರೇಕೆ ಅದರ ಪರವಾಗಿ ಉತ್ತರ ಕೊಡಲು ಹೊರಟರು? ಅದೂ, ಅದರ ಜೊತೆ ನೀನಾಸಂ, ಅಕ್ಷರ ಪ್ರಕಾಶನ, ಟಿ,ಪಿ.ಅಶೋಕ, ಅಕ್ಷರ, ಅನಂತಮೂರ್ತಿ ಇತ್ಯಾದಿಗಳನ್ನೆಲ್ಲ ಸೇರಿಸಿಕೊಂಡು! ಮೊದಲೇ ಈ ಪತ್ರಿಕೆ ಒಂದು ಖಾಸಗಿ ಲಿಮಿಟೆಡ್ ಕಂಪನಿ ಎಂಬ ಆರೋಪಕ್ಕೆ ಈಡಾಗಿರುವಾಗ, ಈ ಆರೋಪ ಸರಿಯಾಗಿಯೇ ಇದೆ ಎನ್ನುವಂತೆ ರಾಜಶೇಖರ್ ಪದೆ ಪದೇ, ಇದು ಶುದ್ಧ ಖಾಸಗಿ ಪ್ರಯತ್ನವಾಗಿರುವುದರಿಂದ ಸಾರ್ವಜನಿಕ ಉತ್ತರದಾಯಿತ್ವದ ಪ್ರಶ್ನೆಯೇ ಏಳುವುದಿಲ್ಲ ಎಂದು ಪತ್ರಿಕೆಯ ಉತ್ತರದಾಯಿತ್ವದವನ್ನು ತಾವೇ ಹೊತ್ತವರಂತೆ ಘೋಷಿಸುತ್ತಾರೇಕೆ? ಇನ್ನು ಅಂತಹ ಪ್ರಶ್ನೆ ಕೇಳಬಹುದಾದವರನ್ನು ಪೋಲಾಂಡ ನಾಯಕರು, ತಲೆ ತಿರುಕರು ಇತ್ಯಾದಿ ಅರ್ಥವಾಗದ ಮತ್ತು ಅರ್ಥವಾಗುವ ಹಲವು ಗುಣವಾಚಕ-ಬಿರುದುಗಳಿಂದ ಅಲಂಕರಿಸುವಷ್ಟು ಪತ್ರಿಕೆ ಕುರಿತ ತೀವ್ರ ಮಮಕಾರವೇಕೆ? ಎಲ್ಲಕ್ಕಿಂತ ಮಿಗಿಲಾಗಿ, ಇವರಿಬ್ಬರೂ-ಒಬ್ಬರು ವಾಗ್ವಾದ ಪರಂಪರೆಯನ್ನು ಎತ್ತಿಹಿಡಿಯುವ ನೆಪದಲ್ಲಿ, ಇನ್ನೊಬ್ಬರು ಪತ್ರಿಕೆಯಲ್ಲಿ ಬರೆದ ಜವಾಬ್ದಾರಿಯ ಹೆಸರಿನಲ್ಲ್ಲಿ-ದೇಶಕಾಲದ ವಿರೋಧಿಗಳಿಗೆ ಅಪ್ಪಟ ಸಾಹಿತ್ಯಿಕ-ಸಾಂಸ್ಕೃತಿಕ ರಾಜಕಾರಣದಂತೆ ಕಾಣುವ ಅದರ ಆಯ್ಕೆ ಮತ್ತು ಅಭಿರುಚಿಗಳನ್ನು ನಿರ್ಧರಿಸುವ ಸಂಪಾದಕೀಯ ನೀತಿಯನ್ನು ಈ ಕಂಪನಿಯ ಪಿ.ಆರ್.ಓ.ಗಳಂತೆ ಸಮರ್ಥಿಸುವ ಪ್ರಯತ್ನ ಮಾಡುವರೇಕೆ? ಇದನ್ನು ರಾಜಶೇಖರರು ಪದೇ ಪದೇ ಪತ್ರಿಕೆ ವಿಮರ್ಶಾತೀತವಲ್ಲವೆಂದು ಹೇಳಹೇಳುತ್ತಲೇ, ಆದರೆ ಯಾರು ಏನು ಹೇಳಿದರೂ ಕೇಳಿಸಿಕೊಳ್ಳದವರಂತೆ, ಪ್ರಶ್ನಾತೀತಗೊಳಿಸಿ;ಮತ್ತು ಫಣಿರಾಜರು ಮೂಲ ಲೇಖನದ ವಾಗ್ವಾದ ಭಂಜನಾ ಪ್ರವೃತ್ತಿಯನ್ನು ಎಳೆ ಎಳೆಯಾಗಿ ವಿವರಿಸುವ ಪ್ರಯತ್ನದಲ್ಲಿ ಇಲ್ಲಿ ಚರ್ಚೆಯೇ ಸಾಧ್ಯವಿಲ್ಲವೆಂದು ಹೇಳುತ್ತಾ ಅದನ್ನು ಚರ್ಚಾತೀತಗೊಳಿಸಿ, ಗಾಬರಿ ಹುಟ್ಟಿಸುತ್ತಾರೆ.
ಫಣಿರಾಜರು ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಆಧುನಿಕ ಕನ್ನಡ ಸಾಹಿತ್ಯ ವಾಗ್ವಾದ ಪರಂಪರೆಯ ಚರಿತ್ರೆಯನ್ನೇ ಬಿಚ್ಚಿಡುತ್ತಾ, ಅದರಲ್ಲಿ ತಮ್ಮ ಸಕ್ರಿಯ ಭಾಗವಹಿಸುವಿಕೆಯ ಸ್ವರೂಪವನ್ನು ವಾಕ್ಯ ವಾಕ್ಯಗಳ ವಾಚ್ಯಾರ್ಥ ಮತ್ತು ಧ್ವನ್ಯಾರ್ಥಗಳನ್ನು ಬಗೆ ಬಗೆದು… ಇತ್ಯಾದಿಯಾಗಿ ಯಾವುದೋ ಭರ್ಜರಿ ಮಾಂಸಾಹಾರಿ ಭೋಜನದ ವರ್ಣನೆಯಂತೆ ರುಚಿಕಟ್ಟಾಗಿ ವಿವರಿಸುತ್ತಾ, ಆದರೆ ಅದಕ್ಕೆ ಇಲ್ಲಿ ಅವಕಾಶವೇ ನೀಡಿಲ್ಲ್ಲವೆಂದು ಗೋಳಾಡುತ್ತಾ, ಮಂಜುನಾಥ್ ಲತಾ-ಐಜೂರ ಲೇಖನದ ಪ್ರಸ್ತುತತೆಯನ್ನೇ ತಳ್ಳಿಹಾಕಿದ್ದಾರೆ. ಆದರೆ ಅವರ ವಾಗ್ವಾದ ಪ್ರಿಯತೆ ಅವರನ್ನು ಮತ್ತೆ ಮತ್ತೆ ಕಾಡುತ್ತಾ, ಒಂದಲ್ಲ ಒಂದು ನೆಪ ಹುಡುಕಿಕೊಂಡು ಅವರು ಚರ್ಚೆಯಲ್ಲಿ ರಾಜಶೇಖರರ ಜೊತೆ ತಾವೂ ಪ್ರಮುಖ ಪಾತ್ರ ವಹಿಸಲು ನಿರಂತರವಾಗಿ ಹೆಣಗಿದ್ದಾರೆ! ಹಾಗಾದರೆ ಫಣಿರಾಜ್ ದೂಷಿಸುವ ಹಾಗೆ, ಮಂಜುನಾಥ್ ಲತಾ-ಐಜೂರರು ವಾಗ್ವಾದ ಭಂಜಕರೋ ಅಥವಾ ಜನಕರೋ? ಫಣಿರಾಜರೇ ಹೇಳಬೇಕು!
ಅದೆಲ್ಲ ಒತ್ತಟ್ಟಿಗಿರಲಿ, ವಾಗ್ವಾದ ಪ್ರಿಯ ಫಣಿರಾಜರಿಗೆ ನನ್ನ ಒಂದೇ ಪ್ರಶ್ನೆ: ನೀವು ಅನೇಕ ವಾಗ್ವಾದಗಳನ್ನು ಸುಪ್ರಸಿದ್ಧವೆಂದೂ, ಅಮೂಲ್ಯವೆಂದೂ ಹೆಸರಿಸಿದ್ದೀರಿ. ಆದರೆ ಇವು ಸುಪ್ರಸಿದ್ಧ, ಅಮೂಲ್ಯ ಯಾಕೆ? ಇವು ನಿಮ್ಮಂತಹವರ ವಾಗ್ವಾದಗಳ ತಾಂತ್ರಿಕ ಪರಿಣಿತಿಯನ್ನು ಚುರುಕುಗೊಳಿಸಿವೆಯೆಂದೋ ಅಥವಾ ಇವು ನಿಮ್ಮ ಸಾಹಿತ್ಯ ಗ್ರಹಿಕೆಯ ಸೂಕ್ಷ್ಮಗಳ ಮೇಲೆ ಏನಾದರೂ ನಿರ್ಣಾಯಕ ಪರಿಣಾಮ ಬೀರಿವೆಯೆಂದೋ? ನೀವು ಒಟ್ಟಿಗೇ ಮಾಸ್ತಿ, ಕುವೆಂಪು, ಲಂಕೇಶ್, ತೇಜಸ್ವಿ, ಸುಬ್ಬಣ್ಣ, ಅಡಿಗ, ಅನಂತಮೂರ್ತಿಯವರನ್ನೊಳಗೊಂಡ ವಾಗ್ವಾದಗಳನ್ನು ನಿಮ್ಮ ವಾಗ್ವಾದ ಪರಂಪರೆಯ ಬುಟ್ಟಿಯಲ್ಲಿಟ್ಟು, ಈ ಬುಟ್ಟಿ ನೋಡಿ ಎಷ್ಟು ಭದ್ರವಿದೆ, ಚೆಂದವಿದೆ ಎಂದು ಮಾತ್ರ ಕೂಗಿ ಕೂಗಿ ಹೇಳುತ್ತಿರುವಂತಿದೆ. ಮಾಸ್ತಿಗೆ ಕುವೆಂಪು ನೀಡಿದ ಉತ್ತರ, ಸಾಕ್ಷಿಗೆ ಲಂಕೇಶ್ ಬರೆದ ಅಪ್ರಕಟಿತ ಪತ್ರ ಮತ್ತು ಅದನ್ನು ಕುರಿತ ಲಂಕೇಶರ ಟಿಪ್ಪಣಿ, ಅನಂತಮೂರ್ತಿಯವರನ್ನು ಮಾದರಿಯಾಗಿಟ್ಟುಕೊಂಡು ನವ್ಯದ ಬಗ್ಗೆ ತೇಜಸ್ವಿ ಬರೆದ ಟೀಕೆ ಮತ್ತು ಸುಬ್ಭಣ್ಣನವರ ಕುವೆಂಪುಗೊಂದು ಪುಟ್ಟ ಕನ್ನಡಿ ಪುಸ್ತಕದ ಬಗ್ಗೆ ಲಂಕೇಶ್ ಮಾಡಿದ ವಿಮರ್ಶೆ ಇವುಗಳು ಆಹಾ ಎಂತಹ ವಾಗ್ವಾದಗಳು! ವಾಗ್ವಾದಗಳೆಂದರೆ ಹೀಗಿರಬೇಕು!! ಎಂದು ಲೊಟ್ಟೆ ಹೊಡೆಯುತ್ತಾ ಚಪ್ಪರಿಸುವದಕ್ಕಷ್ಟೇ ಇವೆಯೋ ಅಥವಾ ಅವುಗಳಿಂದ ಏನನ್ನಾದರೂ ಕಲಿತು/ಪಡೆದು ಬೆಳೆದಿದ್ದೇವೆಯೋ? ವಾಗ್ವಾದವೆಂದರೆ, ನೀವು ಬಹು ಅಮೂಲ್ಯವೆಂಬಂತೆ ವರ್ಣಿಸಿರುವ ಬಹಳ ಪರಿಶ್ರಮದಿಂದ ವಿಮರ್ಶೆಯ ಪರಿಕಲ್ಪನೆಗಳನ್ನು ರೂಢಿಸುವ ಜೀವಮಾನದ ಕಸುಬಿಗೆ ಒದಗಿ ಬರುವ ಜಡ ಪಂಡಿತ ಪಠ್ಯವಲ್ಲ ಎಂದು ನಾನು ಭಾವಿಸಿದ್ದೇನೆ.
ಮಂಜುನಾಥ್ ಮತ್ತು ಐಜೂರರ ಲೇಖನದ ಹಿಂದೆ ಈ ಪ್ರಶ್ನೆ, ಈ ಅನುಮಾನ ಇದ್ದಂತಿದೆ. ಆದರೆ ಕೂಸನ್ನು ಬಿಟ್ಟು ಮಾಸನ್ನು ಮೂಸಿನೋಡಿದಂತೆ, ಫಣಿರಾಜ್ ಮತ್ತು ರಾಜಶೇಖರರು ಪ್ರಸ್ತುತ ಬರಹದಲ್ಲ್ಲಿನ ಅದರ ಅಸಾಧ್ಯ ವ್ಯಂಗ್ಯ-ಕಟಕಿಗಳಿಂದ ವಿಚಲಿತರಾದಂತೆ ಈ ಪ್ರಶ್ನೆ/ಅನುಮಾನಗಳನ್ನು ಗುರುತಿಸಲು ವಿಫಲರಾಗಿದ್ದಾರೆ. ಹಾಗಾಗಿ ಈ ಬರಹದಲ್ಲಿ ಅವರು ಬರೀ ದುರುದ್ದೇಶವನ್ನೇ ಕಂಡು ರೋಸಿ ಹೋದವರಂತೆ ವ್ಯಗ್ರರಾಗಿ, ತಾವೂ ಅದೇ ತೆರನ ವ್ಯಂಗ್ಯ ಕಟಕಿಗಳಿಗೆ ಶರಣಾಗಿದ್ದಾರೆ. ಆ ಮೂಲಕ ಚರ್ಚೆ ತಮ್ಮ ಹಿಡಿತವನ್ನು ಮೀರಿ ಬೆಳೆಯಲು ತಾವೇ ಆಹ್ವಾನ ನೀಡಿಕೊಂಡಿದ್ದಾರೆ. ಈ ಆಹ್ವಾನವನ್ನು ಅಗತ್ಯ ವೀರಾವೇಶದಿಂದಲೇ ರಾಜಶೇಖರರು ಎದುರಿಸಿದ್ದಾರೆ, ನಿಜ. ಆದರೆ, ವಸಂತ ಬನ್ನಾಡಿಯವರು ಈ ಚರ್ಚೆಯಲ್ಲಿ ಮಧ್ಯೆ ಪ್ರವೇಶಿಸಿ ಈ ಬರಹದ ಮೂಲ ಕಾಳಜಿಗಳನ್ನು ಹಲವು ಉದಾಹರಣೆಗಳ ಮೂಲಕ ಎತ್ತಿ ತೋರಿಸಿದಾಗಲೂ ಮತ್ತು ಇಂದಿನ ಸಂದರ್ಭದಲ್ಲಿ ಅವುಗಳನ್ನು ಚರ್ಚಿಸಬೇಕಾದ ಅನಿವಾರ್ಯತೆಯನ್ನು ಸೂಚಿಸಿದಾಗಲೂ(ಆದರೆ ಬನ್ನಾಡಿಯವರು, ಇಡೀ ದೇಶವೇ ಈಗ ಫೋರ್ಡ್ ಫೌಂಡೇಶನ್ನ ಅಪ್ಪನಂತಿರುವ ವಿಶ್ವ ಬ್ಯಾಂಕ್ನ ಹಣ ಮತ್ತು ನಿರ್ದೇಶನಗಳಲ್ಲಿ ನಡೆಯುತ್ತಿರುವಾಗ, ನೀನಾಸಂ ಯಾವುದೋ ಪುರಾತನ ಕಾಲದಲ್ಲಿ ಫೋರ್ಡ್ ಫೌಂಡೇಶನ್ ಹಣ ಪಡೆದದ್ದರ ಬಗ್ಗೆ ಈಗಲೂ ಅದನ್ನು ಅಟಕಾಯಿಸುವುದು ತರವಲ್ಲ ಎಂದೇ ನನ್ನ ಭಾವನೆ.) ಜಾಣತನದಿಂದ ಅವುಗಳಿಂದ ತಪ್ಪಿಸಿಕೊಂಡು ಮತ್ತೇನನ್ನೋ ಹೇಳತೊಡಗಿದಾಗ ಮಾತ್ರ್ರ ಅವರ ಇಡೀ ವಾದವೇ ಅನುಮಾನಾಸ್ಪದವೆನ್ನಿಸಬಿಡತೊಡಗುತ್ತದೆ.
ಉದಾಹರಣೆಗೆ, ಅಡಿಗರ ಕಾವ್ಯದ ಬಗ್ಗೆ ಅನಂತಮೂರ್ತಿಯವರು ಬರೆದ ಮುನ್ನುಡಿ ಕುರಿತು ಬನ್ನಾಡಿ ಮಾಡಿದ ಟೀಕೆಯ ಮೊದಲ ಭಾಗವನ್ನು(ಇವರ ಕಾವ್ಯ ಅರ್ಥವಾಗಲು ನಮ್ಮ ಆರ್ಯ ಸಂಪ್ರದಾಯದ ಪರಿಚಯವಿರಬೇಕು ಇತ್ಯಾದಿ) ನಿರ್ಲಕ್ಷಿಸುವ(ಇದು ಏಕೆನ್ನುವುದೇ ಇಲ್ಲಿ ಮುಖ್ಯ.) ಅವರು ಎರಡನೇ ಭಾಗವನ್ನಷ್ಟೇ(ಅಡಿಗ ಮತ್ತು ಬೇಂದ್ರೆಯವರ ಕಾವ್ಯದ ಶ್ರೇಷ್ಠತೆಯನ್ನು ಕುರಿತ ಮಾತು) ಹಿಡಿದುಕೊಂಡು ತಮ್ಮ ಜಾಣತನವನ್ನೆಲ್ಲ ಬಳಸುತ್ತಾ ಬನ್ನಾಡಿಯವರ ಮೇಲೇ ವ್ಯಂಗ್ಯದ ಬಾಣ ಬಿಡುತ್ತಾರೆ. ಇನ್ನು ಕುವೆಂಪು ಕವಿಯಾದರೆ ನಾನು ಕವಿಯಲ್ಲ ಎಂಬ ಅಡಿಗರು ಆಡಿದರೆನ್ನಲಾದ ಮಾತನ್ನು ಸಾಂಸ್ಕೃತಿಕ ರಾಜಕಾರಣದ ಉದಾಹರಣೆಯಾಗಿ ಬನ್ನಾಡಿ ಉಲ್ಲೇಖಿಸಿದರೆ, ರಾಜಶೇಖರ್ ಅದನ್ನು ನೇರವಾಗಿ ಜಾತಿ ನೆಲೆಗೇ ಒಯ್ದು, ಅಡಿಗರು ಅನೇಕ ಬ್ರಾಹ್ಮಣ ಕವಿಗಳನ್ನೂ ಹೀಗೆ ಹಂಗಿಸಿದ್ದಾರೆ ಎಂದು ಸಮಝಾಯಿಷಿ ಕೊಡುತ್ತಾರೆ. ಆ ಮೂಲಕ ಕಾವ್ಯ ಕುರಿತ ಅಡಿಗರ ನಿಲುವನ್ನು ಆಜ್ಞೆ ಎಂಬಂತೆ ಒಪ್ಪಿಕೊಂಡು, ಕುವೆಂಪು ಕಾವ್ಯವನ್ನೇ ಇಡಿಯಾಗಿ ಅಲ್ಲಗೆಳೆಯುವ ಪ್ರಯತ್ನ ಮಾಡುತ್ತಾರೆ.(ಬನ್ನಾಡಿಯವರು ದೂರುವಂತೆ, ಎಸ್. ಮಂಜುನಾಥರ ಕವನಗಳು ದೇಶಕಾಲದಲ್ಲಿ ಹೆಚ್ಚು ಪ್ರಕಟವಾಗಿರುವುದು, ಕುವೆಂಪು ಕುರಿತ ಅವರ ಇಂತಹುದೇ ನಂಬಿಕೆಯ ಕಾರಣದಿಂದಲೇ ಎಂದು ಬನ್ನಾಡಿಯವರೂ ಸೇರಿದಂತೆ ಯಾರಾದರೂ ಅನುಮಾನಪಟ್ಟರೆ ಅದನ್ನು ನಾನು ಒಪ್ಪುವುದಿಲ್ಲ.) ಮತ್ತೆ ಆ ಮೂಲಕ ರಾಜಶೇಖರರು ನಮ್ಮ ಸಾಹಿತ್ಯ ಪರಂಪರೆಯಲ್ಲಿ ಕವಿ ಎಂದರೆ ಏನು, ಅದರಲ್ಲಿ ಯಾವೆಲ್ಲ ಆಯಾಮಗಳು ಒಳಗೊಳ್ಳುತ್ತವೆ ಎಂಬುದರ ಪರಿವೆಯೇ ಇಲ್ಲದಂತೆ, ತಾವು ವೈಯುಕ್ತಿಕ ಎಂಬ ಶಬ್ದದ ಅರ್ಥವಲಯವನ್ನೇ ಸಂಕುಚಿತಗೊಳಿಸಿದ ಆಧುನಿಕ ಪಾಶ್ಚಾತ್ಯ ಕಾವ್ಯ ಮೀಮಾಂಸೆಯ ಸೆರೆಯಾಳಾಗಿರುವುದನ್ನು ಹೆಮ್ಮೆಯಿಂದ ಒಪ್ಪಿಕೊಂಡಂತೆ ಕಾಣುತ್ತದೆ.
ಒಂದೇ ಕಾಲದಲ್ಲಿ ಬಿಡುಗಡೆಯಾದ ಸಂಸ್ಕಾರ ಮತ್ತು ಮಲೆಗಳಲ್ಲಿ ಮದುಮಗಳು ಕಾದಂಬರಿಗಳ ಬಗ್ಗೆ ಸಾಕ್ಷಿಯಲ್ಲಿ ತಲಾ ಎಷ್ಟೆಷ್ಟು ಲೇಖನಗಳು ಪ್ರಕಟವಾಗಿವೆ ಸ್ವಲ್ಪ ನೋಡಿ ಎಂದು ಬನ್ನಾಡಿ ಹೇಳಿದರೆ, ರಾಜಶೇಖರ್ ಮುಗುಮ್ಮಾಗಿ ಮಲೆಗಳಲ್ಲಿ ಮದುಮಗಳುವಿನ ಸಾಹಿತ್ಯ ಶ್ರೇಷ್ಠತೆ ಪ್ರಶ್ನಾತೀತಾವಾಗಿತ್ತು ಎಂದು ತಾವೀಗ ಸರ್ಟಿಫಿಕೇಟ್ ಕೊಟ್ಟು, ಸಂಸ್ಕಾರದ ಬಗ್ಗೆ ಲೇಖನಗಳ ಮಹಾಪೂರವೇ ಹರಿದು ಬರಲು ಅದು ಉಂಟು ಮಾಡಿದ ಕೋಲಾಹಲವೇ ಕಾರಣವೆಂದು ಹೇಳುತ್ತಾರೆ. ಎಂತಹ ಕೋಲಾಹಲ, ಯಾರ ಮಧ್ಯೆ? ಅದು ಕಾದಂಬರಿಯ ಒಳಗಿಗೆ ಸಂಬಂಧಿಸಿದ್ದೋ ಅಥವಾ ಹೊರಗೆ ಮೂಡಿದ್ದೋ? ಇದನ್ನು ಮಾತ್ರ ಅವರು ಹೇಳುವುದಿಲ್ಲ! ಮಲೆಗಳಲ್ಲಿ ಮದುಮಗಳುಬಗ್ಗೆ ಹೆಚ್ಚು ಚರ್ಚೆಯಾಗದ್ದಕ್ಕೆ ಕಾರಣ, ಅದರ ವಸ್ತು ವಿವಾದಾತ್ಮಕವಾಗಿಲ್ಲದಿದ್ದುದಂತೆ! ಸಾಹಿತ್ಯ ವಿಮರ್ಶೆ ತನ್ನನ್ನು ತಾನು ಇಂತಹ ಕೋಲಾಹಲ-ವಿವಾದಗಳಿಗೆ ಗಂಭೀರವಾಗಿ ತೆತ್ತುಕೊಳ್ಳಬಹುದೆನ್ನುವುದು ಸಾಕ್ಷಿ ಹೇಳಿದ ಸಾಹಿತ್ಯ ಪಾಠವೇ ಆಗಿದ್ದರೆ, ರಾಜಶೇಖರ್ ಈ ಪತ್ರಿಕೆ ಮತ್ತು ಅಡಿಗರ ಬಗ್ಗೆ ಇನ್ನೊಂದೆಡೆ ಮಾಡುವ ಎಂತಹ ದೊಡ್ಡ ಕವಿ! ಎಂತಹ ದೊಡ್ಡ ಪತ್ರಿಕೆ! ಎಂಬ ಉದ್ಗಾರ ನಮ್ಮಲ್ಲಿ ಆಕಳಿಕೆಯನ್ನು ಮಾತ್ರ ಹುಟ್ಟಿಸಬಲ್ಲುದು.
ಮಲೆಗಳಲ್ಲಿ ಮದುಮಗಳುವಿನಂತಹ ಮೊದಲ ನೋಟಕ್ಕೇ ಕನ್ನಡಕ್ಕೆ ಸಂಪೂರ್ಣ ಹೊಸತು ಎನ್ನಿಸುವ ಕಾದಂಬರಿ ಬಂದಾಗ ಅದರ ಹೊಸತುಗಳನ್ನು ವಿವರವಾಗಿ ಗುರುತಿಸುವ ವಿಮರ್ಶಾತ್ಮಕ ಪ್ರಯತ್ನವಿರಲಿ, ಅದರ ಬಗ್ಗೆ ಅಗತ್ಯ(ಸಂಸ್ಕಾರಕ್ಕೆ ತೋರಿದ ಹತ್ತನೇ ಒಂದು ಭಾಗದಷ್ಟಾದರೂ) ಕುತೂಹಲವನ್ನೂ ತಾಳಲಾಗಲಿಲ್ಲವೆಂದರೆ ಸಾಕ್ಷಿ ಮತ್ತು ಅದರ ಬಳಗದ ನೋಟ ಕ್ರಮದಲ್ಲೇ ಮೂಲ ದೋಷವಿದ್ದಿರಬಹುದು ಎಂಬ ಸಂದೇಹ ಈಗಲಾದರೂ ರಾಜಶೇಖರರಿಗೆ ಉಂಟಾಗಲಿಲ್ಲವೆಂದರೆ ಏನು ಹೇಳುವುದು? ರಾಜಶೇಖರ್ ಕುವೆಂಪು ಬಗೆಗೆ ಆಗ ವಿಫುಲವಾಗಿ ಬರೆದ ವಿಮರ್ಶಕರನ್ನು ವಂದಿ ಮಾಗಧರು ಎಂದು ಕರೆಯುತ್ತಾರೆ. ಎಂ.ಜಿ.ಕೃಷ್ಣಮೂರ್ತಿ ಬ್ರಾಹ್ಮಣರೂ, ಇಂಗ್ಲಿಷ್ ಅಧ್ಯಾಪಕರೂ ಆಗಿದ್ದರೂ ಕೂಡ ಕುವೆಂಪು ಅವರನ್ನು ಓದಬೇಕಾದ, ಅರ್ಥೈಸಿಕೊಳ್ಳಬೇಕಾದ ಹೊಸ ಬಗೆಗಳನ್ನು ಅನಾವರಣ ಮಾಡಿದರಂತೆ!(ರಾಜಶೇಖರ್ರಿಂದ ಇಂತಹ ಮಾತುಗಳನ್ನು ಕೇಳಿ ನಾನು ಗಾಬರಿಗೊಂಡಿದ್ದೇನೆ ಎಂದಷ್ಟೇ ಇಲ್ಲಿ ಹೇಳಬಲ್ಲೆ!) ಆದರೆ ಕುವೆಂಪು ಅವರನ್ನು ಓದಬೇಕಾದ, ಅರ್ಥೈಸಿಕೊಳ್ಳಬೇಕಾದ ಬಗೆಯನ್ನು ಸಕಲ ಶಾಸ್ತ್ರೀಯ ಹಿನ್ನೆಲೆ ಮತ್ತು ಸಾಹಿತ್ಯಿಕ ಒಳನೋಟಗಳೊಂದಿಗೆ ಅದ್ಭುತವಾಗಿ ನಿರೂಪಿಸಿರುವವರು ಬಹುಶಃ ರಾಜಶೇಖರ್ ಈ ವಂದಿ ಮಾಗಧರಲ್ಲಿ ಒಬ್ಬರೆಂದು ಪರಿಗಣಿಸುವ ಸುಜನಾ ಅವರೆಂಬುದು ಅವರಿಗೆ ತಿಳಿದಿರಲಾರದು. ಇದಕ್ಕೆ ಅವರು ಶೂದ್ರರೂ, ಕನ್ನಡ ಅಧ್ಯಾಪಕರೂ ಆಗಿರುವುದು ಕಾರಣವಿರಲಾರದು ಎಂದು ನಾನು ಭಾವಿಸಿದ್ದೇನೆ.
ದೇಶಕಾಲ ಅದರ ಬೈಂಡ್ ಒಳಗಷ್ಟೇ ಇಲ್ಲ, ಅದರ ಹೊರಕ್ಕೂ ಒಂದು ಭಾವುಕ ಕೂಟವಾಗಿ ಚಾಚಿಕೊಂಡಿದೆ ಎಂದು ಬನ್ನಾಡಿ ಹೇಳಿದರೆ, ಅದನ್ನು ಕುಚೇಷ್ಟೆಯಿಂದ ಅರ್ಥೈಸಿ ವ್ಯಂಗ್ಯವಾಡುವ ರಾಜಶೇಖರ್; ತೇಜಸ್ವಿ ನಿಧನರಾದ ಸಂದರ್ಭದಲ್ಲಾದರೂ ಅವರ ಬಗ್ಗೆ ಈ ಪತ್ರಿಕೆಯಲ್ಲಿ ಒಂದು ಲೇಖನವೂ ಬರಲಿಲ್ಲವೇಕೆ(ನನ್ನ ಪ್ರಕಾರ ಈ ಪ್ರಶ್ನೆಯೇ ಅಸಂಗತ.) ಎಂದು ಕೇಳಿದಾಗ ಮಾತ್ರ ಎಚ್ಚರದಪ್ಪಿಯೋ ಏನೋ(ಪಾಪ, ಅವರನ್ನು ಇಷ್ಟು ಕಾಡಿದರೆ ಇನ್ನೇನಾದೀತು!) ಟಿ.ಪಿ.ಅಶೋಕ೭ ತೇಜಸ್ವಿ ಬಗ್ಗೆ ಪ್ರತ್ಯೇಕ ಪುಸ್ತಕವನ್ನೇ ಬರೆದಿಲ್ಲವೇ, ಅವರ ಸಾಹಿತ್ಯದ ಬಗ್ಗೆ ನೀನಾಸಂ ಅನೇಕ ಅಧ್ಯಯನ ಶಿಬಿರಗಳನ್ನು ನಡೆಸಿಲ್ಲವೇ ಎಂದು ಕೇಳುತ್ತಾರೆ! ಇನ್ನು ಬನ್ನಾಡಿಯವರು ಇದೇ ಟಿ.ಪಿ.ಅಶೋಕರ ತಥಾಕಥಿತ ವಿಮರ್ಶಾ ರಾಜಕಾರಣದ ಪ್ರಸ್ತಾಪ ಮಾಡಿದರೆ, ಫಣಿರಾಜರು ಅನಾಮತ್ತಾಗಿ ಅವರ ರಕ್ಷಣೆಗೆ ಧಾವಿಸಿ, ಅವರು ಇದೀಗ ತಾನೇ ಎಚ್.ಎಸ್.ಶಿವಪ್ರಕಾಶ್ ಅವರ ಸಮಗಾರ ಭೀಮವ್ವ ಪದ್ಯವನ್ನು ಸಂಯುಕ್ತ ಕರ್ನಾಟಕದಲ್ಲಿ ಕನ್ನಡದ ಶ್ರೇಷ್ಠ ಪದ್ಯವೆಂದು ಗುರುತಿಸಿದ್ದಾರಲ್ಲಾ ಎಂದು ಉತ್ತರಿಸುತ್ತಾರೆ! (ಈ ಇಡೀ ಸಂದರ್ಭ, ನಾವು ಶಾಲಾ ಕಾರ್ಯಕ್ರಮಗಳಲ್ಲಿ ನೋಡಿ ನಲಿಯುತ್ತಿದ್ದ, ಏನೋ ಕೇಳಿದರೆ ಏನೋ ಉತ್ತರಿಸುವ ಕಿವುಡು ಬ್ರಾಹ್ಮಣರ ಪ್ರಹಸನ ನೆನಪಿಗೆ ಬರುತ್ತದೆ!) ಆದರೆ ಈ ವಿಶೇಷಾಂಕದಲ್ಲಿ ಎಚ್.ಎಸ್.ಶಿವಪ್ರಕಾಶರ ಪದ್ಯವೇಕಿಲ್ಲ(ಎಂಬ ಮತ್ತೊಂದು ಅಸಂಗತ) ಪ್ರಶ್ನೆಗೆ ಉತ್ತರ ಕೊಡುವಾಗ, ಶಿವಪ್ರಕಾಶ್ ತಮ್ಮದೇ ಕಾರಣಗಳಿಗಾಗಿ ದೇಶಕಾಲಕ್ಕೆ ಬರೆಯಬೇಕೆಂಬ ಕೋರಿಕೆಯನ್ನು ನಿರಾಕರಿಸಬಹುದು ಎಂಬ ಅನುಮಾನ ಯಾರಿಗೂ ಬಾರದಂತೆ ಇವರು ವಹಿಸಿರುವ ಎಚ್ಚರಿಕೆ ಮಾತ್ರ ಗಮನಾರ್ಹವಾಗಿದೆ!
ಇದೇ ರೀತಿಯಲ್ಲಿ ವಾದ ಮುಂದುವರೆಸುತ್ತಾ, ಜಯಂತ ಕಾಯ್ಕಿಣಿಯವರು ಲೇಖಕರನ್ನು ಪರಿಚಯಿಸುವ ರೀತಿಯ ಬಗ್ಗೆ ಟೀಕೆ ಮಾಡಿದವರನ್ನು, ಅವರಿಗೆ ಅದರಲ್ಲೇ ಇರುವ ಜಯಂತರ ಕೋಮಲ ಗಾಂಧಾರವೆಂಬ ಒಳ್ಳೆಯ ಕಥೆ ಕಾಣುವುದಿಲ್ಲವೇಕೆ ಎಂದು ರಾಜಶೇಖರ್ ಪ್ರಶ್ನಿಸುತ್ತಾರೆ. ನಿಜ ರಾಜಶೇಖರ್, ಜಯಂತರ ಈ ಕಥೆ ಚೆನ್ನಾಗಿದೆ;ತುಂಬಾನೇ ಚೆನ್ನಾಗಿದೆ. ಆದರೆ ಅದು ಅವರು ಲೇಖಕರನ್ನು ಪರಿಚಯಿಸುವ ಹುಸಿ ರೀತಿ ನೀತಿಗಳನ್ನು ರದ್ದು ಮಾಡಿಬಿಡುವುದೇ? ಒಂದು ಗಂಭೀರ ಸಾಹಿತ್ಯ ಸಂಚಿಕೆಯಲ್ಲಿ ಲೇಖಕರ ಪರಿಚಯವನ್ನೂ ವಿಮರ್ಶೆಯ ಜವಾಬ್ದಾರಿಯಿಂದಲೇ ಮಾಡಬೇಕಾಗುತ್ತದೆ;ಸಿನೆಮಾ ಹಾಡಿನ ಹುಸಿ ಶೈಲಿ ಅವರ ಸಾಹಿತ್ಯಿಕ ಪ್ರಾಮಾಣಿಕತೆಯನ್ನೇ ಅನುಮಾನಾಸ್ಪದಗೊಳಿಸಬಲ್ಲುದಾಗಿದೆ. ಹೀಗೆ ರಾಜಶೇಖರ್(ಜೊತೆಗೆ ಫಣಿರಾಜ್) ತಾವು ಇಲ್ಲವೆಂದು ಹೇಳುವ ಭಾವುಕ ಕೂಟ ಭಾವುಕ ನೆಂಟಸ್ತಿಕೆ ಇತ್ಯಾದಿಗಳು ಇದ್ದರೂ ಇರಬಹುದೇನೋ ಎಂಬ ಅನುಮಾನವನ್ನು ಓದುಗರಲ್ಲಿ ಹುಟ್ಟಿಸುವ ರೀತಿಯಲ್ಲಿ ವಾದ ಮಾಡುವುದನ್ನು ಕಂಡು ಪರಮಾಶ್ಚರ್ಯವಾಗುತ್ತದೆ.
ಈ ಮೊದಲೇ ಹೇಳಿದಂತೆ, ಚರ್ಚೆ ಎಂದರೆ ಕೋರ್ಟು ಕಛೇರಿಗಳ ನಡಾವಳಿ ಎಂಬಂತೆ, ಅದರಲ್ಲಿ ಅನ್ನಿಸಿಕೆ-ಅಭಿಪ್ರಾಯಗಳಿಗೆ ಅವಕಾಶವೇ ಇಲ್ಲವೆಂದು ಸಾರುತ್ತಾ, ರಾಜಶೇಖರ್ ಎಲ್ಲದಕ್ಕೂ ಪಠ್ಯದ ಸಾಕ್ಷ್ಯ ಕೇಳುತ್ತಾರೆ. ಆದರೆ ತಾವು ಮಾತ್ರ ದೇಶಕಾಲದ ವಿಶೇಷಾಂಕವನ್ನು, ಅದರ ಚಿಲ್ಲರೆ ಮಾರಾಟಗಾರರಂತೆ ಅದರ ಪರಿವಿಡಿಯನ್ನು ಪಟಪಟನೆ ಹೇಳಿ, ಇಷ್ಟು ತಿಳಿದರೆ ಸಾಕು, ಯಾರಿಗಾದರೂ ಇದು ಯಾವುದೇ ದೀಪಾವಳಿ ವಿಶೇಷಾಂಕಕ್ಕೆ ಹೋಲಿಸಿದರೂ ವಿಶಿಷ್ಟವಾಗಿ ನಿಲ್ಲುತ್ತದೆ ಎಂದು ಗೊತ್ತಾಗಲು! ಎಂಬಂತೆ ಒಂದೇ ವಾಕ್ಯದಲ್ಲಿ ತೀರ್ಪು ಘೋಷಿಸಿಬಿಡುತ್ತಾರೆ!(ತಾವೇ ಹೇರುವ ಚರ್ಚೆಯ ನಿರ್ಬಂಧಗಳು ಇಲ್ಲಿ ಅವರ ಅರಿವಿಗೆ ಬಂದಿದೆ ಎಂದು ಭಾವಿಸೋಣ!) ಇನ್ನು ಬನ್ನಾಡಿಯವರು ನೀನಾಸಂ ಆವರಣದಲ್ಲಿ ತಮಗೆ ಉಸಿರುಗಟ್ಟಿದಂತಾಗುತ್ತದೆ ಎಂದರೆ, ರಾಜಶೇಖರರು ಅದಕ್ಕೂ ಪಠ್ಯದ ಸಾಕ್ಷ್ಯ ಕೇಳಲು ಹವಣಿಸುತ್ತಾರೆಂದರೆ ಏನು ಹೇಳುವುದು? ರಾಜಶೇಖರರಿಗೆ ಚರ್ಚೆಯಲ್ಲಿ ರೂಪಕ ಭಾಷೆಯೂ ನಿಷಿದ್ಧವೇ? ಇರಲಿ, ಇನ್ನು ಮುಂದೆ ಬನ್ನಾಡಿಯವರಿಗೆ ಎಂದಾದರೂ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದೆನಿಸಿ, ಅದಕ್ಕಾಗಿ ಉಸಿರುಗಟ್ಟಿ ಸಾಯುವ ಮಾರ್ಗವನ್ನೇ ಆಯ್ದುಕೊಂಡು ನೀನಾಸಂಗೆ ಹೋದರೆ, ರಾಜಶೇಖರರಿಗೆ ಸಾಕ್ಷ್ಯ ಒದಗಿಸುವ ದೃಷ್ಟಿಯಿಂದಲಾದರೂ ಜೊತೆಯಲ್ಲಿ ವೈದ್ಯರೊಬ್ಬರನ್ನು ಕರೆದುಕೊಂಡು ಹೋಗುವುದು ಒಳ್ಳೆಯದು!
ಇನ್ನೂ ಇದೆ..








ಒಳ್ಳೆಯ ಲೇಖನ ಬರೆದಿರುವ ಡಿಎಸ್ ಎನ್ ರಿಗೂ ಬ್ರಾಹ್ಮಣರ ಜಾಣ ಕಿವುಡು ಅಥವಾ ಕುರುಡ! ಮತ್ತೆ ದೇಶ ಕಾಲ ವಿಶೇಷ ತೆರೆದು 21 ಲೇಖಕರ ಕುರಿತು ಓದಿದರೆ ಇದು ಕಣ್ಣಿಗೆ ಬಿತ್ತು.
`ಈಗ ಬರೆಯುತ್ತಿರುವ ಹೊಸ ಲೇಖಕರತ್ತ ಗಮನ ಸೆಳೆಯುವ ಉದ್ದೇಶದಿಂದ ‘ಇಪ್ಪತ್ತೊಂದನೆಯ ಶತಮಾನದ ೨೧ ಲೇಖಕರು’ ಎಂಬ ಸರಣಿ ಲೇಖನಗಳನ್ನು ರೂಪಿಸಲಾಗಿದೆ. ಇಲ್ಲಿ ಪರಿಚಯಿಸಲಾಗಿರುವ ಇಪ್ಪತ್ತೊಂದು ಲೇಖಕರು ಇಪ್ಪತ್ತೊಂದನೆಯ ಶತಮಾನದಲ್ಲಿ, ಅಂದರೆ ೨೦೦೦ ಇಸವಿಯಿಂದ ಈಚೆಗೆ ತಮ್ಮ ಮೊದಲ ಕೃತಿಯನ್ನು ಪ್ರಕಟಿಸಿದವರು. ನೂರಾರು ಹೊಸ ಲೇಖಕರಿಂದ ಇಲ್ಲಿಯ ಇಪ್ಪತ್ತೊಂದು ಜನರನ್ನು ಆರಿಸುವ ಕೆಲಸದಲ್ಲಿ ಅನೇಕ ವಿಮರ್ಶಕರು, ಬರಹಗಾರ ಸ್ನೇಹಿತರು ನೆರವಾಗಿದ್ದಾರೆ. ಈ ಪಟ್ಟಿಯ ಜವಾಬ್ದಾರಿ ಮಾತ್ರ ಕೊನೆಗೂ ‘ದೇಶ ಕಾಲ’ದ್ದೇ. ಪ್ರಸ್ತುತ ಸಂಚಿಕೆಯುದ್ದಕ್ಕೂ ಅಲ್ಲಲ್ಲಿ ನೀವು ಈ ಬರಹಗಾರರ ಕುರಿತ ಲೇಖನ ಹಾಗೂ ಅವರ ಪುಸ್ತಕಗಳ ಪರಿಚಯವನ್ನು ಕಾಣುತ್ತೀರಿ. ಎಲ್ಲ ಪಟ್ಟಿಗಳಂತೆ ಈ ಇಪ್ಪತ್ತೊಂದು ಲೇಖಕರ ಪಟ್ಟಿಗೂ ಮಿತಿಗಳಿವೆ. ಮೊದಲನೇಯದಾಗಿ ಮೊದಲ ಪುಸ್ತಕದ ಪ್ರಕಟಣೆಗೆ ಹಾಕಿಕೊಂಡ ೨೦೦೦ ಇಸವಿಯ ಗೆರೆ. ಇದಕ್ಕೂ ಒಂದೆರಡು ವರ್ಷಗಳ ಹಿಂದೆ ಮೊದಲ ಪುಸ್ತಕ ಪ್ರಕಟಿಸಿದ ಭರವಸೆಯ ಬರಹಗಾರರು ಇದರಿಂದ ಹೊರಗುಳಿಯುತ್ತಾರೆ. ಇದು ಯಾವುದೇ ಗೆರೆ ಎಳೆದರೂ ಇರುವ ಮಿತಿ. ಎರಡನೇಯದಾಗಿ ಇನ್ನೊಂದು ತಂಡವು ಈ ಪಟ್ಟಿಯನ್ನು ತಯಾರಿಸಿದರೆ ಇದರಲ್ಲಿ ಕೆಲವಾದರೂ ಹೆಸರುಗಳು ಬದಲಾಗಬಹುದು. ಈ ಮಿತಿಯನ್ನು ಗಮನದಲ್ಲಿಟ್ಟುಕೊಂಡೇ ಇದೂ ಒಂದು ಪಟ್ಟಿ ಎಂದು ಮಾತ್ರ ನೋಡಬೇಕು. ಇಲ್ಲಿರುವವರನ್ನು ಗಾಢವಾಗಿ ಓದಲು, ಚರ್ಚಿಸಲು ಇದೊಂದು ಕಾರಣವಾಗಲಿ ಎಂಬುದು ಮಾತ್ರ ನಮ್ಮ ಆಸೆ.’
21 ನೆಯ ಶತಮಾನದಲ್ಲಿ ಮೊದಲ ಪುಸ್ತಕ ಪ್ರಕಟಿಸಿದ ಹೊಸಬರಿವರೆಂದು ಹೇಳಿದ್ದರೂ ನಾಗಭೂಷಣರಿಗೆ ಇದು 21 ಶತಮಾನದ ನೂರು ವರ್ಷಗಳ ಶ್ರೇಷ್ಠ ಸಾಹಿತಿಗಳಂತೆ ಕಂಡರೆ ಅದರ ಹಿಂದೆ ಯಾವ ಹುನ್ನಾರವಿದೆ?
ಈ ಪತ್ರಿಕೆಗೆ ಅನಗತ್ಯವಾದ ಪ್ರಚಾರ ಕೊಡುತ್ತಿದ್ದೀರಿ.
– ಎಸ್. ಪಿ. ಶಿವಾನಂದ
ಕುರುಡು ಎಂದರೆ ಒಂದು ವಸ್ತು ಅಥವಾ ವಿದ್ಯಾಮನ ಒಬ್ಬರಿಗಹೆ ಕಂಡ ಹಾಗೆ ಇನ್ದ್ದುನೊಬ್ಬರಿಗೆ ಕಾಣದಿರುವುದು ಎಂದಾದರೆ ಮಾತ್ರ ನನ್ನದು ಕುರುಡು. ಈ ಕುರುಡು ಎಲ್ಲರನ್ನೂ ಬಾಧಿಸುತ್ತದೆ ಎಂದು ನಾನು ಭಾವಿಸಿದ್ದೇನೆ.ಆದರೆ ಇಂತಹ ಕುರುಡನ್ನು ಬ್ರಾಹ್ಮಣರ ಜಾಣ ಅಥವಾ ದಡ್ಡ ಕುರುಡು ಎಂದು ನನ್ನ ಮೇಲೆ ಪ್ರಯೋಗಿಸಲು ನನ್ನ ಮೂಲ ಲೇಖನದಲ್ಲಿ ಯಾವುದೇ ಕಾರಣ ಕಂಡುಬರುವುದಿಲ್ಲ ಎಂದೂ ನಂಬಿದ್ದೇನೆ.ನೀವು, ನಾನು ಉಲ್ಲೇಖಿಸಿರುವ ಕಿವುಡು ಬ್ರಾಹ್ಮಣರ ಪ್ರಹಸನದ ಮಾತಿನಿಂದ ಇದನ್ನು ಎತ್ತಿಕೊಂಡಿರುವಿರಾದರೆ, ಈ ಪ್ರಹಸನ ನಾನು ರಚಿಸಿದ್ದಲ್ಲ ಎಂದು ನಾನು ತಿಳಿಸಬಯಸುವೆ. ಬಹುಶಃ ಕೈಲಾಸಂ ಅವರಿಂದ ಸ್ಫೂರ್ತಿ ಪಡೆದ ಯಾರೋ ಬ್ರಾಹ್ಮಣ ಲೇಖಕರೇ ರಚಿಸಿರಬೇಕು!ಐಆಕೆಂದರೆ ಅಷ್ಟು ಹಳೇಯದಿದು!
ಮಿಕ್ಕಂತೆ ನಿಮ್ಮ ಆಕ್ಷೇಪಣೆ ಬಗ್ಗೆ ಮುಂದೆ ಬರೆದಿರುವೆ, ದಯವಿಟ್ಟು ನೋಡಿ.
-ಡಿಎಸ್ಸೆನ್
ನನ್ನ ಲೇಖನ ಇನ್ನೂ ಪೂರ್ತಿಯಾಗಿಲ್ಲ. ಅವಧಿ ಬಹುಶಃ ನಾಳೆ ಕೊನೆಯ ಕಂತನ್ನು ಪ್ರಕಟಿಸುವುದೆಂದು ನಿರೀಕ್ಷಿಸುವೆ. ನಂತರ ಪ್ರತಿಕ್ರಿಯೆಗಳಿದ್ದರೆ ಉತ್ತರಿಸಲು ಯತ್ನಿಸುವೆ.
-ಡಿಎಸ್ಸೆನ್
ಮುಗಿದು ಹೋಗಿರುವ ಸಂಗತಿಯ ಮರಣೋತ್ತರ ಶವ ಪರೀಕ್ಷೆ ಈಗ ಅಗತ್ಯವಿತ್ತೆ?
ಪ್ರಿಯರೇ,
ನಾನು ಲೇಖನದ ಆರಂಭದಲ್ಲೇ ತಿಳಿಸಿರುವಂತೆ ಈ ಬಗ್ಗೆ ಬರೆಯಲು ನನಗೆ ಕಿಂಚಿತ್ತೂ ಆಸಕ್ತಿಯಿರಲಿಲ್ಲ.ಈ ಚರ್ಚೆಯನ್ನು ಪುಸ್ತಕ ರೂಪದಲ್ಲಿ ತರಲು ಹೊರಟ ಗೆಳೆಯರ ಒತ್ತೈಕ್ಕೆ ಮಣಿದು ಇದನ್ನು ಬರೆಯಬೇಕಾಯಿತಷ್ಟೆ. ಆದರೆ ನನ್ನ ಬರಹ ಮುಗಿದು ಹೋದ ಸಂಗತಿಯೊಂದರ ಶವ ಪರೀಕ್ಷೆಯಾಗಿ ಮಾತ್ರವಾಗಿ ಪ್ರಸ್ತುತಗೊಂಡಿಲ್ಲ ಎಂಬುದನ್ನೂ ನೀವು ಗ್ರಹಿಸಿರುವಿರಿ ಎಂದು ಬಾವಿಸುತ್ತೇನೆ.
ಪ್ರಿಯ ಶಿವಾನಂದ ಅವರೇ,
ಲೇಖನವನ್ನು ಮೆಚ್ಚಿದ್ದಕ್ಕಾಗಿ ವಂದನೆಗಳು. ಇನ್ನು ೨೧ನೇ ಶತಮಾನದ ೨೧ ಲೇಖಕರು ಕುರಿತ ನನ್ನ ಮಾತುಗಳ ಬಗ್ಗೆ ನೀವು ಬರೆದಿರುವ ಟಿಪ್ಪಣಿ ಬಗ್ಗೆ-
ನಾನೂ ನೀವು ಉಲ್ಲೇಖಿಸಿರುವ ಸಂಪಾದಕರ ಮಾತುಗಳನ್ನು ಗಮನಿಸಿದ್ದೇನೆ. ಅದನ್ನು ನನ್ನ ಬರಹದಲ್ಲೂ ಸೂಚಿಸಿದ್ದೇನೆ.ಅಷ್ಟೇ ಅಲ್ಲ, ಅವರ ಆಯ್ಕೆಯ ನ್ಯಾಯಾನ್ಯಾಯದ ಪ್ರಶ್ನೆಯನ್ನೂ ನಾನು ಎತ್ತುತ್ತಿಲ್ಲ ಎಂದೂ ತಿಳಿಸಿರುವೆ ಆದರೆ ೨೧ನೇ ಶತಮಾನದ ಮೊದಲ ಹತ್ತು ವರ್ಷಗಳ ಲೇಖಕಕರನ್ನಷ್ಟೇ ಗಮನಿಸಿ ೨೧ನೇ ಶತಮಾನದ ೨೧ ಲೇಖಕರು ಶೀರ್ಷಿಕೆಯಲ್ಲಿ ಪಟ್ಟಿಯೊಂದನ್ನು ಸಿದ್ಧಪಡಿಸಿ ನೀಡುವುದರ ಉದ್ದೇಶವಾದರೂ ಏನು, ಸಾಹಿತ್ಯಿಕ ಸಾರ್ಥಕತೆಯಾದರೂ ಏನು ಎಂಬುದು ನನ್ನ ಪ್ರಶ್ನೆ. ಶತಮಾನದ ಆರಂಭ ಅಥವಾ ಕೊನೆ ಯಾವುದೇ ಸಾಹಿತ್ಯಿಕ ಯುಗ ಅಥವಾ ಚಳುವಳಿಯ ನಿರ್ಣಾಯಕ ಘಟ್ಟವನ್ನೇನೂ ಸೂಚಿಸುವುದಿಲ್ಲ ಅಲ್ಲವೇ? ಈಗ ೨೦ನೇ ಸತಮಾನದ ಕೊನೆಯ ಐದೋ, ಹತ್ತೋ ವರ್ಷಗಳ ೨೦ ಲೇಖಕರನ್ನು ಆಯ್ದು ಅವರನ್ನು ೨೦ನೇ ಶತಮಾನದ ೨೦ ಲೇಖಕರು ಎಂದು ಪಟ್ಟ ಮಾಡಿದರೆ ನಿಮಗೆ ಏನನನ್ನಸೀತು? ಜೊತೆಗೆ ಇವರ ಬಗ್ಗೆ ಇವರನ್ನು ಹೀಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸದೆ ಇನ್ನೊಬ್ಬರಿಂದ ಬರೆಸುವುದು ಯಾವ ರೀತಿಯ ಸಾಹಿತ್ಯ ಪತ್ರಿಕೋದ್ಯಮ? ನೀವೇ ಯೋಚಿಸಿ.
-ಡಿಎಸ್ಸೆನ್
ಪ್ರಿಯ ನಾಗಭೂಷಣ್ ರವರಿಗೆ ಹೇಗಿದ್ದಿರಿ ಸರ್? ನಿಮ್ಮ ಪ್ರತಿಯೊಂದು ಬರಹವನ್ನು ಶ್ರಧ್ಧಯಿಂದ ಒದುವ ನಾನು ನಿಮ್ಮ ಕಾಳಜಿಯನ್ನ, ತಾತ್ವಿಕ ಸಿಟ್ಟನ್ನು ಗ್ರಹಿಸಬಲ್ಲೆ. ನಿಮ್ಮ ಪ್ರತಿಭೆ ಶ್ರಮ ಇಂತಹ ಸಂಗತಿಗಳಿಗೆ ವ್ಯಯವಾಗುವುದು ಬೇಡ.
ಪ್ರಿಯ ರೂಪಾ ಮತ್ತು ಜಗದೀಶ್ ಕೊಪ್ಪ ಅವರೇ,
ನಿಮ್ಮ ಅಭಿಮಾನಕ್ಕೆ ವಂದನೆಗಳು. ಆದರೆ ಒಂದು ಮಾತು: ನನ್ನ ಇತ್ತೀಚಿನ ಪುಸ್ತಕದ ಶೀರ್ಷಿಕೆಯೇ ಹೇಳುವಂತೆ, ಜಗತ್ತಿನ ಎಲ್ಲ ವಿದ್ಯಮಾಗಳನ್ನು ಕುರಿತ ನನ್ನ ನಿಲುವು: ’ಇಲ್ಲಿ ಯಾವುದೂ ಅಮುಖ್ಯವಲ್ಲ’!
ಇನ್ನು ಜಗದೀಶ್ ಅವರೇ,ಗೇಗಿದ್ನಿದೀರಿ ಎಂದು ಕೇಳಿರುವಿರಿ!ನಾನಿರುವುದು ನನ್ನ ಬರಹಗಳಂತೆಯೇ!!
jagadish koppa avara abhiprayave nannadu sir. nimminda bere mukhya samasyegala kuritu hecchina barahagalannu nirikshisutteve.
rupa hasana
ರೂಪಾ ಅವರೇ,
ದಯವಿಟ್ಟು ಮೇಲಿನ ಉತ್ತರ ನೋಡಿ.
-ಡಿಎಸ್ಸೆನ್
ಜಗದೀಶ್ ಕೊಪ್ಪ ಮತ್ತು ರೂಪ ಹಾಸನ ಅವರು ನಾಗಭೂಷಣ್ ಅವರಿಗೆ ನೀಡಿರುವ ಸಲಹೆಯನ್ನು ಓದಿ ಅಚ್ಚರಿಯಾಯಿತು . ಯಾವುದೇ ಒಬ್ಬ ವ್ಯಕ್ತಿ ತನ್ನನ್ನು ಯಾವ ವಿಷಯ ತೀವ್ರವಾಗಿ ಕಾಡುತ್ತದೆಯೋ ಅವನ್ನು ಕುರಿತು ತನ್ನ ಅನಿಸಿಕೆಗಳನ್ನು ಅಥವಾ ಚಿಂತನೆಗಳನ್ನು ಹೊರಹಾಕುತ್ತಾನೆ . ಅವುಗಳಲ್ಲಿ ಏನಾದರೂ ತಪ್ಪುಗಳಿದ್ದರೆ ಅಥವಾ ಸುಳ್ಳುಗಳಿದ್ದರೆ ಅವನ್ನು ಗುರುತಿಸಿ ತೋರಿಸಬೇಕೇ ಹೊರತು ” ನಿಮ್ಮ ಪ್ರತಿಭೆ ಶ್ರಮ ಇಂತಹ ಸಂಗತಿಗಳಿಗೆ ವ್ಯಯವಾಗುವುದು ಬೇಡ.” ಎಂದು ಹೇಳುವುದು ಸರಿಯಲ್ಲ . ಇಂತಹ ಮಾತುಗಳು ಬರಹಕ್ಕಿರುವ ಕ್ರಿಯಾಶೀಲತೆಯನ್ನೇ ಅಲ್ಲಗಳೆಯುವಂತಿವೆ .
ಪ್ರಿಯ ನಾಗರಾಜ್ ಅವರೇ,
ನಿಮ್ಮ ಮಾತು ಸರಿ. ಜಗದೀಶ್ ಮತ್ತು ರೂಪ ಅವರಿಗೆ ಈ ಚರ್ಚೆ ಕುತೂಹಲ ಹುಟ್ಟಿಸದಿರಬುದು. ಅದಕ್ಕೆ ಹಾಗೆ ಬರೆದಿದ್ದಾರೆನಿಸುತ್ತದೆ.ಇರಲಿ, ಬಿಡಿ!
-ಡಿಎಸ್ಸೆನ್