“ಭಾಮಿನಿ ಷಟ್ಪದಿ”
ಚೇತನಾ ಚೈತನ್ಯ
ಹೆಣ್ಣು ಭ್ರೂಣದ ಪಾಡಿಗೆ ಬಂದ ಪ್ರತಿಕ್ರಿಯೆಗಳು ಸೆಳೆದವು. ಕರುಳು ಚುರುಕ್ ಎಂದಿತು. ಮೂರು ವರ್ಷದ ಕೆಳಗೆ ಬರೆದಿದ್ದ ಲೇಖನ ನೆನಪಾಯ್ತು. ಗೆಳತಿಯೊಬ್ಬಳ ಅನುಭವದ ನೋವಿದು. ನೆನಪಿರುವಷ್ಟು ಮಟ್ಟಿಗೆ ಇಲ್ಲಿ ಮೂಡಿಸಿದ್ದೇನೆ. ನಿಮ್ಮೊಂದಿಗೆ ಹಂಚಿಕೊಳ್ಳಲು…
*
ಅದೆಂಥದೋ ಮಂಪರು ತರುವ ಸ್ಮೆಲ್ಲು. ಅನಸ್ತೇಷಿಯಾ?
ಒಳ ಕೋಣೆಯಲ್ಲಿ ಅತ್ತೆ ಮಾತಾಡಿದ್ದು ಏನು?
ಲೇಬರ್ ಕಾಟಿನ ಮೇಲೆ ಕಾಲು ಕೆಳ ಸರಿಸಿ, ಈ ಇವಳೇನು ಮಾಡ್ತಿದಾಳೆ?
ಥೂ! ಗಾಜಿನ ಕೊಳವೆ!!
ಶ್ಶೀ…ನೋವಿಗೆ ಮುಲುಗಿದ್ದಕ್ಕೆ ಅವಳೆಂಥ ಅಂದಿದ್ದು?
“ಆಗ ಆಗದ ನೋವು ಈಗ ಆಗ್ತದಾ?”
ಅವಳಿಗೇನು ಗೊತ್ತು? ಬೀಜ ಬಿತ್ತುವ ನೋವು, ಬೇರು ಬಗೆಯುವ ನೋವು- ಎರಡೂ ಬೇರೆ ಬೇರೆ ಅಂತ!?
“ಬೆಳೆದುಬಿಟ್ಟಿದೆ…ರಿಸ್ಕು ಬೇಕಾ?”
“ಆಮೆಲಿನ ರಿಸ್ಕಿಗಿಂತ ಇದು ವಾಸಿ!”
ಮೊಳಕೆಯಲ್ಲೇ ಚಿವುಟದಿರಿ….ಕೆಂಪು ಬಸ್ಸಿನ ಮೇಲೆ ಹಳದಿ ಬೋರ್ಡು. ಅಂವ ಕೆನ್ನೆ ಚಿವುಟಿ ನಕ್ಕಿದ್ದ. ಈಗ ಆ ಮಖೇಡಿ ಎಲ್ಲಿ? ಅಮ್ಮನ ಸೆರಗಲ್ಲಿ ಅವಿತಿರುವನೇನೋ?
ನನ್ನ ದನಿ ಎಲ್ಲಿ? ವೀರಾವೇಶದ ಮಾತುಗಳೆಲ್ಲಿ? ಓ…ಅವೆಲ್ಲ ಎಲ್ಲಿ ಸತ್ತವು?
ಕರ ಕರ ಕರ್ಕಶ ಸದ್ದು! ಕೊಯ್ಯುತ್ತಿರಬೇಕು ಕರುಳ ಕುಡಿಯನ್ನ.
ಎಳೆದೆಳೆದು, ತುಂಡರಿಸಿ… ಮುಗಿದುಹೋದೆ ನಾನು?
ದೊಡ್ಡತ್ತೆಗೆ ಮೊಮ್ಮಗ ಹುಟ್ಟಿದ. ಅತ್ತಿಗೆ ಹೊಟ್ಟೆ ಅಳಿಸಿಕೊಂಡಳು.
ಇನ್ಫೆಕ್ಷನ್ ಆಗದಿರಲು ಎರಡೆರಡು ಮಾತ್ರೆ, ಪ್ರತಿ ರಾತ್ರಿ…
ಅಗೋ! ಆ ಮೂಲೆಯ ರಕ್ತಸಿಕ್ತ ಟಬ್ಬಲ್ಲಿ ಏನು?
ಇಂಚಿಂಚು ಹೆರೆದು ಬಿಸಾಡಿದ, ಮತ್ತೆಂದೂ ಹುಟ್ಟದ ನನ್ನ ಮಗಳು!?
ಚಿತ್ರ: ಪ ಸ ಕುಮಾರ್


0 Comments