ಬಾಳುವಂಥ ಹೂವೇ ಬಾಡುವಾಸೆ ಏಕೆ
ಹಾಡುವಂಥ ಕೋಗಿಲೆ ಅಳುವ ಆಸೆ ಏಕೆ?
ಕವಲು ದಾರಿಯಲ್ಲಿ ಬಾಳು ಸಾಧ್ಯವೇ?
ಅವಳಿ ಧೋಣಿ ಮೆಲೆ ಯಾನ ಯೋಗ್ಯವೇ? ||ಪ||
ಯಾರಿಗಿಲ್ಲ ನೋವು ಯಾರಿಗಿಲ್ಲ ಸಾವು
ವ್ಯರ್ಥ ವ್ಯಸನದಿಂದ ಸಿಹಿಯು ಕೂಡ ಬೇವು
ಬಾಳು ಒಂದು ಸಂತೆ, ಸಂತೆ ತುಂಬಾ ಚಿಂತೆ
ಮದ್ಯ ವ್ಯಸನಗಳಿಂದ ಚಿಂತೆ ಬೆಳೆವುದಂತೆ
ಅಂಕವಿರದ ಮನಸನು ದಂಡಿಸುವುದು ನ್ಯಾಯ
ಮೂಕ ಮುಗ್ಧ ದೇಹವ ಹಿಂಸಿಸುವುದು ಹೇಯ
ಸಣ್ಣ ಬಿರುಕು ಸಾಲದೆ ತುಂಬು ದೋಣಿ ತಳ ಸೇರಲು
ಸಣ್ಣ ಅಣಕ ಸಾಲದೆ ತುಂಬು ಬದುಕು ಬರಡಾಗಲು ||೧||
ಬಾಳ ಪಯಣದಲ್ಲಿ ಭರವಸೆಗಳು ಬೇಕು
ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು
ಜೀವರಾಶಿಯಲ್ಲಿ ಮಾನವನಿಗೆ ಆದ್ಯತೆ
ನಾವೇ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ
ಇಲ್ಲಿ ಈಸಬೇಕು ಇದ್ದು ಜೈಸಬೇಕು
ನಾಗರೀಕರಾದ ಮೇಲೆ ಸುಗುಣರಾಗಬೇಕು
ನಿನ್ನ ಹಳದಿ ಕಣ್ಣಲಿ ನೀ ಜನರನೇಕೆ ನೋಡುವೆ
ಮನದ ಡೊಂಕುಗಾಣದಿ ಜಗವನೇಕೆ ನೀ ದೂರುವೆ? ||೨||
ಮುಂದಿನವಾರ ಯಾವ ಹಾಡು ಬರಬಹುದು ಹೇಳಿ ನೋಡೋಣ ಎಂದು ಕೇಳಿದ್ದಕ್ಕೆ ಥಟ್ಟನೆ ಉತ್ತರಿಸಿದವರು ೫೧ ಮಂದಿ. ಆದರೆ, ಯಾರೊಬ್ಬರೂ ಈ ಅಪರೂಪದ ಹಾಡನ್ನು ಹೆಸರಿಸಲಿಲ್ಲ! ‘ ಆಕಸ್ಮಿಕ’ ಚಿತ್ರದ ಈ ಹಾಡು ನೊಂದವರಿಗೆ ಸಮಾಧಾನ ಹೇಳುತ್ತದೆ. ಭಾವುಕರನ್ನು ಬಿಕ್ಕಳಿಸುವಂತೆ ಮಾಡುತ್ತದೆ. ಕಲ್ಲು ಹೃದಯದವರನ್ನೂ ಕರಗಿಸುತ್ತದೆ. ಸೋಲುಗಳಿಂದ ಕಂಗಾಲಾದವರಿಗೆ ಧೈರ್ಯ ತುಂಬುತ್ತದೆ. ನೆಮ್ಮದಿಯಿಂದ, ಸಂತೋಷದಿಂದ ಇರಬೇಕಾದರೆ ಹೇಗೆ ಬದುಕಬೇಕು ಎಂಬುದನ್ನು ಎಳೆಎಳೆಯಾಗಿ ಹೇಳುತ್ತದೆ. ಅಷ್ಟೇ ಅಲ್ಲ, ಜೀವನದಲ್ಲಿ ಜಿಗುಪ್ಸೆ ಹೊಂದಿ ಸಾಯಲು ಹೊರಟವನೊಬ್ಬ ಈ ಹಾಡು ಕೇಳಿ ನಿರ್ಧಾರ ಬದಲಿಸಿಕೊಂಡ ಹೃದ್ಯ ಪ್ರಸಂಗವೂ ನಡೆದು ಹೋಗಿದೆ.
‘ಬಾಳುವಂಥ ಹೂವೆ ಬಾಡುವಾಸೆ ಎಕೆ?/ ಹಾಡುವಂಥ ಕೋಗಿಲೆ ಅಳುವ ಆಸೆ ಏಕೆ?’ ಎಂಬಂಥ ಆಪ್ತ ಸಾಲುಗಳ ಈ ಹಾಡು ಹುಟ್ಟಿದ ಕಥೆಯನ್ನು ಹಂಸಲೇಖಾ ವಿವರಿಸಿದ್ದು ಹೀಗೆ:
ಇದು ೧೯೯೩ರ ಮಾತು. ರಾಜಕುಮಾರ್ ಅಭಿನಯದ ಹೊಸ ಚಿತ್ರದ ಸಿದ್ಧತೆ ನಡೆದಿತ್ತು. ಅದೊಂದು ದಿನ ರಾಜ್ಕುಮಾರ್ ಹಾಗೂ ನಿರ್ದೇಶಕ ನಾಗಾಭರಣದಿಂದ ಕರೆಬಂತು. ಹೋದೆ. ಅವತ್ತು ರಾಜ್ಕುಮಾರ್ ಅವರ ಮನೆಯಲ್ಲಿ, ತ.ರಾ.ಸು. ಅವರ ಕಾದಂಬರಿ ಆದರಿಸಿದ ಒಂದು ಕಥೆಯನ್ನು ಹೇಳಲಾಯಿತು. ಅದೇ ‘ಆಕಸ್ಮಿಕ’. ಕಾದಂಬರಿಯನ್ನು ನಾನು ಮೊದಲೇ ಓದಿಕೊಂಡಿದ್ದೆ. ಹಾಗಾಗಿ ಕಥೆ ಏನೆಂದು ಗೊತ್ತಿತ್ತು. ಚಿತ್ರದ ತಾರಾಗಣದಲ್ಲಿ ರಾಜ್ಕುಮಾರ್ ಜತೆಗೆ ವಜ್ರಮುನಿ, ಗೀತಾ, ಮಾಧವಿ ಮುಂತಾದವರೆಲ್ಲ ಇರುವ ವಿಷಯ ಮಾತುಕತೆಯ ಸಂದರ್ಭದಲ್ಲಿ ತಿಳಿಯಿತು. ಇಂಥ ಖ್ಯಾತ ನಾಮರೆಲ್ಲ ಒಂದು ಚಿತ್ರದಲ್ಲಿ ನಟಿಸುತ್ತಾರೆ ಎಂದ ಮೇಲೆ ಜನರ ನಿರೀಕ್ಷೆ ಕೂಡ ದೊಡ್ಡದಿರುತ್ತೆ. ಹಾಗಾಗಿ ಅಪರೂಪದ ಹಾಡು ಬರೆಯಬೇಕು, ಆಪ್ತ ಅನಿಸುವಂಥ ಸಂಗೀತ ಒದಗಿಸಬೇಕು ಅಂದುಕೊಂಡೆ. ರಾಜ್ಕುಮಾರ್ ಅವರಿಂದ ಮಾಸ್ಗೆ ಹೊಂದುವಂಥ ಒಂದು ಹಾಡು ಹಾಡಿಸಬೇಕೆಂದೂ ಆಗಲೇ ನಿರ್ಧರಿಸಿದೆ.
ಈ ವೇಳೆಗೆ ಶ್ರೀಮತಿ ಪಾರ್ವತಮ್ಮನವರು, ರಾಜ್ಕುಮಾರ್, ವರದಪ್ಪ ಹಾಗೂ ನಾಗಾಭರಣ ಸೇರಿ ಚಿತ್ರಕಥೆ ಹಾಗೂ ಅದಕ್ಕೆ ಪೂರಕವಾಗಿ ಎಲ್ಲೆಲ್ಲಿ ಹಾಡು ಬರಬೇಕು ಎಂಬುದನ್ನೂ ನಿರ್ಧರಿಸಿದ್ದರು. ನಾಟಕದ ಹಿನ್ನೆಲೆಯಿರುವ ಹಾಡಿನ ತುಣುಕುಗಳು ಚಿತ್ರದಲ್ಲಿ ಇರಬೇಕೆಂದೂ, ಹೀಗೆ ಮಾಡಿದರೆ ಅದು ಸಿನಿಮಾದ ಓಟಕ್ಕೆ ಪೂರಕವಾಗಿರುತ್ತದೆಂದೂ ನಿರ್ಧರಿಸಿದ್ದರು. ಅವರ ನಿರ್ಧಾರ ಸರಿಯಾದುದೇ ಆಗಿತ್ತು.
ಹೀಗಿದ್ದಾಗ, ಒಂದು ಸಂದರ್ಭದ ಬಗ್ಗೆ ವಿವರಿಸುತ್ತಾ ರಾಜ್ಕುಮಾರ್ ಹೇಳಿದರು: ಹಂಸಲೇಖಾ ಅವರೆ, ಜೀವನದಲ್ಲಿ ಆಕಸ್ಮಿಕವಾಗಿ ಜತೆಯಾದ ನೋವುಗಳಿಂದ ಕಥಾ ನಾಯಕಿ ಕುಡಿಯೋದನ್ನು ಕಲಿತುಬಿಟ್ಟಿರ್ತಾಳೆ. ಈಗಿನ್ನೂ ನಿನ್ನದು ತಾರುಣ್ಯ. ಬಾಳಿ ಬದುಕಬೇಕಾದ ವಯಸ್ಸು ಇದು. ಇಂಥ ವಯಸ್ಸಿನಲ್ಲಿ ನೀನು ಯಾಕಾದ್ರೂ ಕುಡಿತ ಕಲಿತೆ? ಅದನ್ನು ಬಿಟ್ಟುಬಿಡು. ಬದುಕು ದೊಡ್ಡದಿದೆ. ಸಂತೋಷದಿಂದ ಬದುಕುವುದನ್ನು ಕಲಿ ಎಂದು ನನ್ನ ಪಾತ್ರ ಅವಳಿಗೆ ಹೇಳಬೇಕು. ಇದನ್ನು ಮಾತಿಗೆ ಬದಲು ಹಾಡಿನ ರೂಪದಲ್ಲಿ ಹೇಳಿದರೆ ಚೆನ್ನ. ಈ ಸಂದರ್ಭಕ್ಕೆ ಹೊಂದುವಂಥ ಒಂದು ಹಾಡು ಬರೀರಿ’ ಅದು ಯುವ ಜನರಿಗೆ ಒಂದು ಸಂದೇಶವೂ ಆಗಿರೋ ಥರಾ ಇದ್ರೆ ಚೆಂದ ಅಂದರು.
ಅಣ್ಣಾವ್ರ ಈ ಮಾತು ಕೇಳಿದಾಕ್ಷಣ ನಾನು ಕೂತಲ್ಲೇ ಯೋಚಿಸತೊಡಗಿದೆ. ಹೆಣ್ಣನ್ನು ನಾವು ಹೂವಿಗೆ ಹೋಲಿಸುವುದುಂಟು. ಹೂವಿನಂತೆ ಅರಳುವ, ಹೂವೂ ನಾಚುವಂತೆ ನಗುವಳು ಹೆಣ್ಣು. ಆಕೆ ಬಾಳಬೇಕು. ಹತ್ತು ಮಂದಿ ಮೆಚ್ಚುವಂತೆ ಬದುಕಬೇಕು. ಅದು ಬಿಟ್ಟು ಅವಳು ಬಾಡಿಹೊಗಲು ಪ್ರಯತ್ನಿಸಬಾರದು ಅನ್ನಿಸ್ತು. ಅದೇ ಸಂದರ್ಭಕ್ಕೆ ಹರೆಯದ ಹೊಸ್ತಿಲಲ್ಲಿ ನಿಂತ ಬೆಡಗಿಯ ದನಿ ಯಾವತ್ತೂ ಇಂಪಿಂದ, ಕೀಟಲೆಯಿಂದ ಕೂಡಿರಬೇಕೇ ಹೊರತು ಅವಳ ದನಿಯಲ್ಲಿ ವಿಷಾದ ಇಣುಕಬಾರದು ಅನ್ನಿಸ್ತು. ಆ ಕ್ಷಣಕ್ಕೆ ನನಗೆ ಹೊಳೆದದ್ದು ಇಷ್ಟೆ. ಆಗಲೇ ಒಂದು ಆಪ್ತವಾದ ಸಾಲು ಹೊಳೆಯಿತು. ಅದನ್ನು ನೀವು ಸಾಕ್ಷಾತ್ಕಾರ ಅನ್ನಿ. ಸಿದ್ಧಿ ಅನ್ನಿ. ದೈವಕೃಪೆ ಅಂತಾದ್ರೂ ಕರೀರಿ. ಹಾಗೆ, ದಿಢೀರನೆ ಹೊಳೆದ ಸಾಲುಗಳನ್ನು ಒಂದೆರಡು ಬಾರಿ ನನ್ನೊಳಗೇ ಹೇಳಿಕೊಂಡು ನಂತರ ಗಟ್ಟಿಯಾಗಿ ಹೇಳಿದೆ: ‘ಬಾಳುವಂಥ ಹೂವೆ, ಬಾಡುವಾಸೆ ಏಕೆ/ ಹಾಡುವಂಥ ಕೋಗಿಲೆ, ಅಳುವ ಆಸೆ ಎಕೆ?’
ಈ ಸಾಲುಗಳು ರಾಜ್, ವರದಪ್ಪ, ಪಾರ್ವತಮ್ಮ ಹಾಗೂ ನಾಗಾಭರಣರಿಗೆ ತುಂಬಾ ಇಷ್ಟವಾದವು. ರಾಜ್ ಅವರಂತೂ-‘ತುಂಬಾ ಚನ್ನಾಗಿ ಬರ್ತಾ ಇದೆ. ಮುಂದುವರಿಸಿ’ ಅಂದರು. ಈ ಮಾತುಕತೆ ಮುಗಿದು ಐದಾರು ದಿನಗಳ ನಂತರ ನಾನು ತುರ್ತಾಗಿ ಬಾಂಬೆಗೆ ಹೋಗಬೇಕಾಗಿ ಬಂತು. ಆ ಕಡೆಯಿಂದ ವಾಪಸ್ ಬೆಂಗಳೂರಿನ ಏರ್ಪೋರ್ಟ್ ತಲುಪಿದಾಗ ಬೆಳಗಿನ ಜಾವ ನಾಲ್ಕು ಗಂಟೆ. ಮನೆಗೆ ಬರುವ ಹಾದಿಯಲ್ಲಿ ದಿಢೀರನೆ ಕೈಲಾಸಂ ಅವರ ‘ಇZoಛಿ ಎಂಬ ನಾಟಕ ನೆನಪಾಯಿತು. ಅದು ಒಬ್ಬ ವ್ಯಕ್ತಿಯ ಹುಟ್ಟು, ಬದುಕು, ಬೆಳವಣಿಗೆಯನ್ನು ವಿವರಿಸುವ ನಾಟಕ. ನಾವು ಕೀಳರಿಮೆಯನ್ನು ಮೆಟ್ಟಿ ನಿಲ್ಲಬೇಕು. ಆಗ ಮಾತ್ರ ನಾವು ಮಹತ್ವದ್ದನ್ನು ಸಾಧಿಸಬಹುದು ಎಂಬುದು ಆ ನಾಟಕದ ಸಾರಾಂಶ. ಅದು ನೆನಪಿಗೆ ಬಂದ ಕ್ಷಣದಲ್ಲೇ ‘ ಆಕಸ್ಮಿಕ’ ಚಿತ್ರದ ನಾಯಕಿಯ ಬದುಕೂ ನೆನಪಾಯಿತು. ಹಿಂದೆಯೇ ಬರೆಯದೇ ನಿಲ್ಲಿಸಿದ್ದ ಹಾಡಿನ ಸಾಲೂ…
ಡ್ರೈವರ್ ಕಾರು ಓಡಿಸುತ್ತಿದ್ದ. ಆ ಕ್ಷಣದಲ್ಲೇ, ಆ ನೀರವ ರಾತ್ರಿಯ ಏಕಾಂತದಲ್ಲಿ ಹಾಡಿನ ಒಂದೊಂದೇ ಸಾಲು ನನ್ನ ಕೈ ಹಿಡಿಯತೊಡಗಿದವು. ಬಡತನ, ನಿರುದ್ಯೋಗ, ಅವಕಾಶ ಸಿಗದ ಸಂದರ್ಭದಲ್ಲಿ- ಈ ಲೋಕದಲ್ಲಿ, ಈಸಬೇಕು ಇದ್ದು ಜೈಸಬೇಕು ಎಂದು ನನಗೆ ನಾನೇ ಧೈರ್ಯ ಹೇಳಿಕೊಂಡಿದ್ದ ಸಂದರ್ಭವೂ ನೆನಪಿಗೆ ಬಂತು. ಇದನ್ನೆಲ್ಲ ಹಾಡಲ್ಲಿ ತಂದೆ. ಏರ್ಪೋರ್ಟ್ನಿಂದ ಮನೆಗೆ ಹೋಗುವಷ್ಟರಲ್ಲಿ ಇಡೀ ಹಾಡು ಸಿದ್ಧವಾಗಿತ್ತು.
ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಇತ್ತು. ಮೊದಲು ಹಾಡನ್ನು ಓದಿದ ರಾಜ್ಕುಮಾರ್- ಅಯ್ಯಯ್ಯೋ, ಇಷ್ಟೆಲ್ಲಾ ಬುದ್ಧಿವಾದ ಹೇಳುವಷ್ಟು ನಾನು ದೊಡ್ಡವನಾ? ಚಿತ್ರದ ನಾಯಕಿ ಇಷ್ಟೊಂದು ಬುದ್ಧಿವಾದ ಹೇಳಿಸಿಕೊಳ್ಳುವಷ್ಟು ದೊಡ್ಡ ತಪ್ಪು ಮಾಡಿರ್ತಾಳಾ? ಎಂದು ಮುಗ್ಧವಾಗಿ ಕೇಳಿದರು. ‘ನಾಯಕಿ ಮದ್ಯವ್ಯಸನಿ ಆಗಿರೊದ್ರಿಂದ ಒಂಥರಾ ನಿಶೆಯಲ್ಲಿದ್ದ ಹಾಗೆ ಬದುಕ್ತಾ ಇರ್ತಾಳೆ. ಅಂಥವಳ ಮನಸ್ಸಿಗೆ ನಾಟಬೇಕಾದರೆ ಇಷ್ಟೊಂದು ಬುದ್ಧಿವಾದ ಹೇಳಲೇಬೇಕು ಸಾರ್’ ಎಂದು ಅವರನ್ನು ಒಪ್ಪಿಸಿದೆ.
ರೆಕಾರ್ಡಿಂಗ್ ಸಂದರ್ಭದಲ್ಲಿ ಒಂದು ಸ್ವಾರಸ್ಯ ನಡೀತು. ಹಾಡಲು ಶುರುಮಾಡಿದ ರಾಜ್ಕುಮಾರ್ ಯಾಕೋ ಮೌನವಾದರು. ನಂತರ, ನಾಳೆ ಬಂದು ಹಾಡ್ತೀನಿ ಎಂದು ಹೋಗಿಬಿಟ್ಟರು. ಆಮೇಲೆ ನೋಡಿದರೆ, ಎರಡು ಮನೆ ಶ್ರುತಿ ಜಾಸ್ತಿ ಇರೋದು ನನ್ನ ಗಮನಕ್ಕೆ ಬಂತು. ಇದನ್ನು ನೇರವಾಗಿ ಹೇಳಿದರೆ ನನಗೆ ಬೇಜಾರಾಗಬಹುದು ಎಂದು ಭಾವಿಸಿ ಅವರು ಏನೂ ಹೇಳದೆ ಹೋಗಿದ್ದರು. ಅವತ್ತು ರಾತ್ರಿಯೇ ಅರ್ಧ ಶ್ರುತಿಯನ್ನು ಕಡಿಮೆ ಮಾಡಿದೆ. ಮರುದಿನ ಸಂಜೆ ರಾಜ್ಕುಮಾರ್, ಹಳೆಯದೇನೂ ನೆನಪಿಲ್ಲದವರಂತೆ ತನ್ಮಯತೆಯಿಂದ ಹಾಡಿ ಮುಗಿಸಿದರು. ಅವರು ಹಾಡ್ತಾ ಇದ್ದರೆ, ವರದಪ್ಪನವರು ನಿಂತಲ್ಲೇ ಕಣ್ಣೀರು ಸುರಿಸ್ತಾ ನಿಂತುಬಿಟ್ರು. ತಮ್ಮನ ಕಣ್ಣಲ್ಲಿ ನೀರು ಕಂಡ ರಾಜ್ಕುಮಾರ್ ಭಾವುಕರಾಗಿ ತಾವೂ ಕಣ್ಣೀರಾದರು!
ಮುಂದೆ ‘ಆಕಸ್ಮಿಕ’ ಸಿನಿಮಾ ಬಿಡುಗಡೆಯಾದ ನಂತರ ಈ ಹಾಡು ನೊಂದವರಿಗೆ ಸಮಾಧಾನ ಹೇಳುವ ಸುಪ್ರಭಾತವಾಯಿತು. ಇಂಥ ಸಂದರ್ಭದಲ್ಲೇ ಅದೊಂದು ದಿನ ‘ಹಾಯ್ ಬೆಂಗಳೂರ್’ನ ಸಪಾದಕ ರವಿಬೆಳಗೆರೆ ಅವರು ಫೋನ್ ಮಾಡಿ-‘ಸಾರ್, ನಿಮ್ಮ ಒಂದು ಹಾಡಿನ ಬಗ್ಗೆ ಹೇಳೋದಿದೆ. ಒಮ್ಮೆ ಸಿಕ್ಕಿ’ ಅಂದರು.
ಏನಿರಬಹುದು ವಿಷಯ ಅಂದುಕೊಂಡೇ ಹೋದೆ. ಆಗ ರವಿ ಬೆಳಗೆರೆ ಹೇಳಿದ್ದಿಷ್ಟು: ‘ಕಿರುತೆರೆ ಸಂಭಾಷಣೆಕಾರ ಕಾಫಿ ರಾಘವೇಂದ್ರ ಅವರ ಅಣ್ಣ, ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಬೆಂಗಳೂರಿನ ಮನೆ ಬಿಟ್ಟು ಮಂಗಳೂರು ಸಮೀಪದ ಕೋಟ ತಲುಪಿಕೊಂಡಿದ್ದರಂತೆ. ಅಲ್ಲಿನ ಅಪ್ಪಣ್ಣ ಐಸ್ ಪಾರ್ಲರ್ ಬಳಿ ಇದ್ದಾಗ, ಅದೊಂದು ಮಧ್ಯಾಹ್ನ ರೇಡಿಯೋದಲ್ಲಿ ‘ಬಾಳುವಂಥ ಹೂವೇ’ ಹಾಡು ಪ್ರಸಾರವಾಗಿದೆ. ಹಾಡಿನ ಎರಡನೇ ಚರಣದ ‘ಬಾಳ ಪಯಣದಲ್ಲಿ ಭರವಸೆಗಳು ಬೇಕು/ ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು’ ಎಂಬುದನ್ನು ಕೇಳಿ-ಈ ಸಾಲುಗಳನ್ನು ಅಣ್ಣಾವ್ರು ನನಗೆಂದೇ ಹೇಳಿರಬೇಕು ಎಂಬ ಭಾವ ಅವರಿಗೆ ಬಂತಂತೆ. ತಕ್ಷಣವೇ ಅವರು ಆತ್ಮಹತ್ಯೆಯ ಯೋಚನೆ ಕೈ ಬಿಟ್ಟು ಬೆಂಗಳೂರಿಗೆ ಬಂದು ಮನೇಲಿ ಎಲ್ಲರಿಗೂ ವಿಷಯ ತಿಳಿಸಿದ್ದಾರೆ. ನಮ್ಮ ಕಾಫಿ ರಾಘು ಎಲ್ಲವನ್ನೂ ಹೇಳಿದ. ನಿಮ್ಗೆ ಹೇಳ್ಬೇಕು ಅನ್ನಿಸ್ತು..’
ಹೀಗೆಂದ ರವಿ ಬೆಳಗೆರೆ ಕಡೆಗೆ ಹೇಳಿದರಂತೆ: ‘ಸಾರ್, ಒಂದು ಹಾಡಿಂದ ಒಂದು ಜೀವ ಉಳಿಸಿದ್ರಿ ನೀವು. ಅದಕ್ಕಿಂತ ಹೆಚ್ಚಿನ ಸಾರ್ಥಕತೆ ಏನು ಬೇಕು? ಈ ಮಾತನ್ನೇ ನೆನೆಯುತ್ತಾ ಅವತ್ತು, ಕೈಲಿ ಪೆನ್ನು ಹಿಡಿದಿದ್ದಕ್ಕೆ ಸಾರ್ಥಕವಾಯ್ತು ಅನಿಸ್ತು ಅನ್ನುತ್ತಾ, ಮುಂದಿನವಾರ ಸಿಕ್ತೀನಿ ಎಂದು ಕೈ ಬೀಸಿದರು ಹಂಸಲೇಖಾ…]]>
ಮಣಿಕಾಂತ್ ಬರೆಯುತ್ತಾರೆ: ಬಾಡುವ ಆಸೆ ಏಕೆ..?
ನಿಮಗೆ ಇವೂ ಇಷ್ಟವಾಗಬಹುದು…



Yes this song protected and stil protecting many lives like Raghu’s brother. Best song! How did he got this name “Hamsalekha”? Please inform/explain about the background of His name? Thanks to Avadhi.
ಅದ್ಭುತವಾದ ಹಾಡಿನ ಪರಿಚಯ ಮಾಡಿದ್ದಿರಿ ಸರ್. ಬಹುಶ್ಯ ಹಂಸಲೇಖರ ಮುಂದಿನ ಹಾಡು,’ ಯಾರೇ, ನೀನು ಚಲುವೆ ನಿನ್ನಷ್ಟಕ್ಕೆ ನೀನೆ ಹೇಕೆ ನಗುವೇ…’ ಇರಬಹುದು ಸರ್.
ಕಂಡಕ್ಟರ್ ಕಟ್ಟಿಮನಿ
ಸ್ಫೂರ್ತಿಯ ಸಾಲುಗಳು