ಚಿತ್ರ: ಕಾಕನ ಕೋಟೆ. ಗೀತೆರಚನೆ: ಮಾಸ್ತಿ ವೆಂಕಟೇಶ ಅಯ್ಯಂಗಾರ್.
ಸಂಗೀತ: ಸಿ. ಅಶ್ವತ್ಥ್. ಗಾಯನ: ಸುಲೋಚನಾ ವೆಂಕಟೇಶ್.
ನೇಸರ ನೋಡು
ನೇ….ಸ….ರ ನೋಡು
ನೇಸರ ನೋಡು, ನೇಸರಾ ನೋಡೂ… ||ಪ||
ಮೂಡಣ ಬೈಲಿಂದ ಮೇಲಕ್ಕೆ ಹಾರಿ
ದೂರದ ಮಲೆಯ ತಲೆಯನೆ ಏರಿ
ನೇಸರ ನೋಡು, ನೇಸರಾ… ನೋಡೂ ||೧||
ಹೊರಳಿತು ಇರುಳು ಬೆಳಕಿನ ಬೂಡು
ತೆರೆಯಿತು ನೋಡು ಬೆಳಗಿತು ನಾಡು
ನೇಸರ ನೋಡು….ನೇಸರ ನೋಡು
ನೇಸರಾ…ನೋಡು, ನೇಸರ ನೋಡು ||೨||
ಕಾಡುವ ಚಿತ್ರಗೀತೆಗಳ ಲೆಕ್ಕ ಹಾಕಲು ಕೂತರೆ ತಕ್ಷಣ ಹೊಳೆಯುವ ಹಾಡೇ ‘ನೇಸರ ನೋಡು, ನೇಸರ ನೋಡೂ…’. ಮುಂಜಾನೆಯ ಸೊಬಗನ್ನು, ಸೂರ್ಯೋದಯದ ವೈಭವವನ್ನು ತುಂಬ ಪರಿಣಾಮಕಾರಿಯಾಗಿ ಹೇಳಿದ ಈ ಹಾಡು ‘ಕಾಕನ ಕೋಟೆ’ ಚಿತ್ರದ್ದು. ಕನ್ನಡದ ಅತ್ಯುತ್ತಮ ಚಿತ್ರಗೀತೆಗಳಲ್ಲಿ ಒಂದು ಎಂದೇ ಖ್ಯಾತಿ ಪಡೆದಿರುವ ಈ ಹಾಡು ಬರೆದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್!
ಒಮ್ಮೆ ತುಂಬ ನಿಧಾನವಾಗಿ, ಒಮ್ಮೆ ವೇಗವಾಗಿ, ಇನ್ನೊಮ್ಮೆ ಎಳೆದೆಳೆದು ಬರುವ ರಾಗವಾಗಿ, ಮತ್ತೊಮ್ಮೆ ನೂರೆಂಟು ಅರ್ಥದ ಭಾವವಾಗಿ ಕೇಳಿಬರುವುದು ‘ನೇಸರ ನೋಡೂ…’ ಹಾಡಿನ ವೈಶಿಷ್ಟ್ಯ. ಒಂದು ಸ್ವಾರಸ್ಯವೆಂದರೆ-‘ನೇಸರ ನೋಡು’ ಎಂಬ ಒಂದೇ ಸಾಲು ಪಲ್ಲವಿಯಲ್ಲಿ ನಾಲ್ಕು ಬಾರಿ ಕೇಳಿಸುತ್ತದೆ. ಪ್ರತಿ ಬಾರಿಯೂ ಒಂದೊಂದು ವಿಧದ ದನಿಯಲ್ಲಿ ಕೇಳಿಬರುವುದು ಈ ಪಲ್ಲವಿಯ ಹೆಗ್ಗಳಿಕೆ. ನಿಜ ಹೇಳಬೇಕೆಂದರೆ-ಈಗ ‘ನೇಸರ ನೋಡೂ…’ ಗೀತೆಯಿಲ್ಲದ ಕಾಕನಕೋಟೆ ಸಿನಿಮಾವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಸತ್ಯ ಏನೆಂದರೆ, ಈ ಹಾಡಿನ ಬಗ್ಗೆ ಆ ಚಿತ್ರದ ನಿರ್ದೇಶಕರಾದ ಸಿ.ಆರ್. ಸಿಂಹ, ಸಂಗೀತ ನಿರ್ದೇಶಕ ಅಶ್ವತ್ಥ್ಗೆ ಅಂಥ ಒಲವಿರಲಿಲ್ಲ! ಇವರು, ಮಾಸ್ತಿಯವರ ಒತ್ತಾಯದ ಮೇರೆಗೆ, ಮನಸ್ಸಿಲ್ಲದ ಮನಸ್ಸಿನಿಂದ ಆ ಹಾಡನ್ನು ಮೊದಲು ನಾಟಕದಲ್ಲಿ, ಆ ಮೇಲೆ ಸಿನಿಮಾದಲ್ಲಿ ಬಳಸಿಕೊಂಡರು. ಇಲ್ಲಿ ಹಾಡು ಹುಟ್ಟಿದ್ದರ ಬಗ್ಗೆ ಕಥೆಯಿಲ್ಲ. ಆದರೆ, ಹಾಡಿಗೆ ಟ್ಯೂನ್ ಸಿಕ್ಕಿತಲ್ಲ? ಅದರ ಹಿಂದಿನ ಕಥೆಯಿದೆ. ಅದನ್ನು ‘ಕಾಕನಕೋಟೆ’ಯ ನಿರ್ದೇಶಕ ಸಿ.ಆರ್. ಸಿಂಹ ಅವರಿಂದಲೇ ಕೇಳೋಣ ಬನ್ನಿ. ಓವರ್ ಟು ಸಿಂಹ.
***
ಇದು ೭೦ರ ದಶಕದ ಮಾತು. ಆಗ ಬಿ.ವಿ. ಕಾರಂತರು, ರವೀಂದ್ರ ಕಲಾಕ್ಷೇತ್ರದಲ್ಲಿ ಹೊಸ ಹೊಸ ನಾಟಕಗಳನ್ನು ಆಡಿಸುತ್ತಿದ್ದರು. ಸಂದರ್ಶನದ ಮೂಲಕ ಪಾತ್ರಧಾರಿಗಳನ್ನು ಆಯ್ಕೆ ಮಾಡುತ್ತಿದ್ದರು. ಇಂಥ ಸಂದರ್ಶನಕ್ಕೆ ನಾನು ಮತ್ತು ನಟ ಲೋಕೇಶ್ ಹೋಗಿದ್ದೆವು. ಆದರೆ ಅಲ್ಲಿ ನಮಗೆ ಅವಕಾಶ ಸಿಗಲಿಲ್ಲ. ಆಗ-ನಾವ್ಯಾಕೆ ಅಲ್ಲಿ ಇಲ್ಲಿ ಅವಕಾಶಕ್ಕೆ ಕೈ ಚಾಚಬೇಕು? ನಮ್ಮದೇ ಒಂದು ಗುಂಪು ಕಟ್ಟಿಕೊಳ್ಳೋಣ ಎಂದು ಯೋಚಿಸಿದ್ವಿ. ಆಗ ಲೋಕೇಶ್, ಸಿ. ಅಶ್ವತ್ಥ್, ಶ್ರೀನಿವಾಸ ಕಪ್ಪಣ್ಣ ಹಾಗೂ ವೆಂಕಟರಾವ್ ಜತೆಯಾದರು. ‘ನಟರಂಗ’ ಎಂಬ ತಂಡ ಅಸ್ತಿತ್ವಕ್ಕೆ ಬಂತು. ಸಂಗೀತದ ಹೊಣೆ ಅಶ್ವತ್ಥ್ಗೆ, ನಟನೆಯ ಜವಾಬ್ದಾರಿ ಲೋಕೇಶ್ಗೆ, ರಂಗಸಜ್ಜಿಕೆಯ ಹೊಣೆ ಕಪ್ಪಣ್ಣನಿಗೆ ಎಂದು ಕ್ಷೇತ್ರ ವಿಂಗಡಣೆಯಾಯ್ತು. ನಿರ್ದೇಶನದ ಜವಾಬ್ದಾರಿ ನನ್ನ ಪಾಲಿಗೆ ಬಂತು.
ಸರಿ, ಮೊದಲಿಗೆ ಮಾಸ್ತಿಯವರ ‘ಕಾಕನ ಕೋಟೆ’ ನಾಟಕ ಪ್ರದರ್ಶಿಸಲು ನಿರ್ಧರಿಸಿದೆವು. ಅದಕ್ಕೆ ಮಾಸ್ತಿಯವರಿಂದ ಒಪ್ಪಿಗೆಯನ್ನೂ ಪಡೆದೆವು. ನಮಗಿಂತ ಮೊದಲೇ ‘ರವಿ ಕಲಾವಿದರು’ ಇದೇ ಕಾಕನ ಕೋಟೆ ನಾಟಕವನ್ನು ಆಡಿ ಸಾಕಷ್ಟು ಜನಪ್ರಿಯಗೊಳಿಸಿದ್ದರು. ನನಗೋ, ಇದೇ ನಾಟಕವನ್ನು ಬೇರೆಯ ಥರಾ ರಂಗದ ಮೇಲೆ ತಂದರೆ ಹೇಗೆ ಎಂಬ ಯೋಚನೆ ಬಂತು.
ಮುಖ್ಯವಾಗಿ, ಆ ನಾಟಕದಲ್ಲಿ ಒಂದು ಸನ್ನಿವೇಶ-ಕಾಕನ ಮಗಳು, ಅವಳ ಹೆಸರು ಮೊಲ್ಲೆ. ಅವಳು ಹೆಗ್ಗಡೆಯ ಮಗನ ಸಮ್ಮುಖದಲ್ಲಿ ‘ನೇಸರ ನೋಡು ನೇಸರ ನೋಡು’ ಎಂದು ಹೇಳುವ ಗೀತೆಯಿತ್ತು. ಅದರಲ್ಲಿ ನೇಸರ ನೋಡು ಎಂಬ ಪದವೇ ನಾಲ್ಕು ಬಾರಿ ರೀಪೀಟ್ ಆಗುತ್ತಿತ್ತು. ನಮಗಿಂತ ಮೊದಲು ಈ ನಾಟಕ ಆಡಿದ್ದವರು ಈ ಹಾಡಿಗೆ ಜಾನಪದ ಶೈಲಿಯ ರಾಗ ಹಾಕಿದ್ದರು. ಆದರೆ, ನೇಸರ ನೋಡು, ನೇಸರ ನೋಡು, ನೇಸರ ನೋಡು, ನೇಸರನೋಡು ಎಂದು ಪದೇ ಪದೆ ಹೇಳಿದರೆ ಏಕತಾನ ಅನ್ನಿಸುತ್ತದೆ. ಅದೇ ಕಾರಣಕ್ಕೆ ಇಡೀ ಹಾಡೇ ಬೋರ್ ಹೊಡೆಯುತ್ತೆ ಅನ್ನಿಸಿತು. ಈ ಮಾತಿಗೆ ಅಶ್ವತ್ಥ್ ಕೂಡ ‘ಹೌದೌದು’ ಎಂದ. ಕಡೆಗೊಮ್ಮೆ ನಾವು ಆಡುವ ನಾಟಕದಲ್ಲಿ ಈ ಹಾಡನ್ನು ಬಿಟ್ಟೇ ಬಿಡೋಣ ಎಂದು ತೀರ್ಮಾನಿಸಿದೆವು. ಆದರೆ, ಈ ಜಾಗಕ್ಕೆ ಒಂದು ಹಾಡಂತೂ ಅಗತ್ಯವಾಗಿ ಬೇಕಿತ್ತು. ಈ ಸಮಸ್ಯೆಯನ್ನು ಆಗ ವಾರ್ತಾ ಇಲಾಖೆಯಲ್ಲಿ ನನ್ನ ಹಿರಿಯ ಸಹೋದ್ಯೋಗಿಯಾಗಿದ್ದ ಗೊ.ರು. ಚನ್ನಬಸಪ್ಪ ಅವರಲ್ಲಿ ಹೇಳಿಕೊಂಡೆ. ಈ ಸಂದರ್ಭಕ್ಕೆ ಹೊಂದುವಂಥ ಒಂದು ಜಾನಪದ ಗೀತೆ ಸೂಚಿಸಿ ಎಂದೂ ಕೇಳಿಕೊಂಡೆ. ಒಂದೆರಡು ದಿನದಲ್ಲಿ -‘ಎಂದಾ ಬರತೀರಿ ನಲ್ಲ…’ ಎಂಬ ಹಾಡು ಸೂಚಿಸಿದರು. ಅಶ್ವತ್ಥ್ ಅದಕ್ಕೆ ಬೊಂಬಾಟ್ ಎಂಬಂಥ ರಾಗ ಸಂಯೋಜಿಸಿದ. ಜತೆಗೆ ಗೊ.ರು. ಚ. ಅವರಿಂದ ‘ಸೋ ಎನ್ನಿರೋ, ಸೊಬಾನ ಎನ್ನಿರೇ…’ ಎಂಬ ಹೊಸ ಹಾಡು ಬರೆಸಿ ‘ಕಾಕನ ಕೋಟೆ’ಯನ್ನು ರಂಗದ ಮೇಲೆ ಪ್ರದರ್ಶಿಸಿಯೂ ಬಿಟ್ಟೆವು.
ನಾವು ನೀಡಿದ್ದು ಮೂರು ಪ್ರದರ್ಶನ. ನೋಡಿದವರೆಲ್ಲ ನಮ್ಮನ್ನು ವಿಪರೀತ ಹೊಗಳಿದರು. ನಾವೆಲ್ಲಾ ಉಬ್ಬಿಹೋದೆವು. ಮತ್ತೊಂದು ಪ್ರದರ್ಶನಕ್ಕೆ ತಯಾರಾಗುವ ಮೊದಲೇ ಮಾಸ್ತಿಯವರಿಂದ ಕರೆ ಬಂತು. ನಾಟಕದ ಮೊದಲ ಪ್ರದರ್ಶನಕ್ಕೆ ಮಾಸ್ತಿಯವರೂ ಬಂದಿದ್ದರು. ಹಾಗಾಗಿ ಅಭಿನಂದನೆ ಸ್ವೀಕರಿಸುವ ಸಂಭ್ರಮದಿಂದಲೇ ಅವರ ಮನೆಗೆ ಹೋದೆ. ತುಂಬ ಆಪ್ತವಾಗಿ -‘ನರಸಿಂಹಾ’ ಎಂದು ಕರೆದರು ಮಾಸ್ತಿ. ‘ಸರ್’ ಎನ್ನುತ್ತಾ ಹತ್ತಿರ ಹೋಗಿ ನಿಂತೆ. ನನ್ನ ಮೈದಡವಿ ಹೇಳಿದರು: ‘ನಾಟಕ ಚನ್ನಾಗಿ ಮಾಡಿದ್ರಿ. ಸಂತೋಷ. ಅದ್ರೆ ನರಸಿಂಹಾ, ‘ನೇಸರ ನೋಡು’ ಹಾಡನ್ನು ಕೈಬಿಟ್ಟಿದ್ದೀರಿ. ಅದರ ಬದಲಿಗೆ ಬೇರೆ ಯಾವುದೋ ಹಾಡು ತಂದಿದ್ದೀರಿ. ಇದು ನನಗೆ ಒಪ್ಪಿಗೆಯಾಗಿಲ್ಲ. ನಾನು ಏನು ಬರೆದಿದ್ದೀನೋ, ಅದಷ್ಟೆ ನಾಟಕದಲ್ಲಿ ಬರಬೇಕು. ಇಲ್ಲ ಅಂದರೆ, ನೀವು ನಾಟಕ ಆಡೋದು ಬೇಡ!’
ಅವರ ಖಡಾಖಂಡಿತ ಮಾತು ಕೇಳಿ ನಾನು ಬೆಚ್ಚಿ ಬಿದ್ದೆ. ನಂತರ ಅವರಿಗೆ ಹತ್ತಾರು ಥರದಲ್ಲಿ ಸಮಜಾಯಿಷಿ ಹೇಳಿದೆ. ಮಾಸ್ತಿಯವರದು ಒಂದೇ ವಾದ. ನಾನು ಬರೆಯದೇ ಇರೋದು ನಾಟಕದಲ್ಲಿ ಬರೋದು ಬೇಡ. ನಾನು ಬರೆದಿರೋ ಹಾಡುಗಳು ಮಾತ್ರ ಇರಬೇಕು…
ಅವರ ಮಾತಿಗೆ ಒಪ್ಪದೇ ಬೇರೆ ದಾರಿಯೇ ಇರಲಿಲ್ಲ. ಸಾವರಿಸಿಕೊಂಡು ‘ಸರಿ ಸರ್’ ಎಂದೆ. ಅಲ್ಲಿಂದ ಬಂದು ನಟರಂಗ’ದ ಗೆಳೆಯರಿಗೆ ವಿಷಯ ತಿಳಿಸಿದೆ. ಮತ್ತೆ ನಾಟಕ ಪ್ರದರ್ಶಿಸಬೇಕೆಂದರೆ ನಮ್ಮ ಆಯ್ಕೆಯ ಹಾಡುಗಳನ್ನು ಬಿಟ್ಟು ‘ನೇಸರ ನೋಡು’ ಹಾಡನ್ನು ಹಾಕಲೇ ಬೇಕಿತ್ತು.
ಆದದ್ದಾಗಲಿ, ನೋಡಿಯೇ ಬಿಡೋಣ ಎಂದು ಅಂದೊಂದು ರಾತ್ರಿ ನಾನು, ಅಶ್ವತ್ಥ್ ಹಾಗೂ ಚಿಂತಾಮಣಿ ಎಂಬ ಇನ್ನೊಬ್ಬ ಗೆಳೆಯ -ಬಸವನ ಗುಡಿಯ ಕೃಷ್ಣರಾವ್ ಪಾರ್ಕ್ ಬಳಿ ಇದ್ದ ಕಟ್ಟೆಯ ಮೇಲೆ ಕೂತಿದ್ದೆವು. ಒಂದರ ಹಿಂದೊಂದು ಸಿಗರೇಟು ಸೇದುತ್ತ, ಆ ಹಾಡಿಗೆ ಹೇಗೆ ಟ್ಯೂನ್ ಮಾಡುವುದು ಎಂದು ಚರ್ಚಿಸುತ್ತಿದ್ದೆವು. ನೇಸರ ನೋಡು ನೇಸರ ನೋಡು, ನೇಸರ ನೋಡು, ನೇಸರ ನೋಡು ಎಂದು ನಾಲ್ಕು ಬಾರಿ ಹೇಳಿದರೆ ಅದ್ಯಾವ ಸ್ವಾರಸ್ಯ ಇರ್ತದಪ್ಪ ಎಂದು ಅಶ್ವತ್ಥ್ ಪೇಚಾಡಿಕೊಂಡ. ಹೌದಲ್ವಾ ಎನ್ನುತ್ತಾ ನಾನೂ ಒಂದು ಧಂ ಎಳೆದೆ. ಆಗಲೇ ಮಿಂಚೊಂದು ಹೊಳೆಯಿತು- ‘ನೇಸರ ನೋಡು ಎಂಬುದು ನಾಲ್ಕು ಬಾರಿ ಬರುತ್ತದಲ್ಲ? ಅದನ್ನೇ ಬೇರೆ ಬೇರೆ ಸ್ವರ ಸಂಗತಿಯಲ್ಲಿ ತಂದರೆ ಹೇಗೆ?’
ನನ್ನ ಯೋಚನೆಗೆ ನಾನೇ ಖುಷಿಯಾದೆ. ತಕ್ಷಣ ಇದನ್ನೇ ಅಶ್ವತ್ಥ್ಗೆ ಹೇಳಿದೆ. ಅಶ್ವತ್ಥ್ನೂ ಒಂದು ಧಂ ಎಳೆದು ಏನೋ ಯೋಚಿಸಿದ. ಕಾರ್ಮುಗಿಲ ಮಧ್ಯೆ ಮಿಂಚು ಹೊಳೆಯುತ್ತದಲ್ಲ? ಅಂಥದೇ ರಾಗದ ಮಿಂಚು ಅವನ ಜತೆಯಾಯಿತು. ಅಶ್ವತ್ಥ್ ತಕ್ಷಣ ಮುಖ ಅರಳಿಸಿ, ಕಣ್ಣು ಹೊರಳಿಸಿ, ಖುಷಿಯಿಂದ ನಕ್ಕು ಒಂದು ಟ್ಯೂನ್ ಹೇಳಿದ. ಆಗ ಹಿಂದೆಯೇ ಚಿಮ್ಮಿತು ನಾದದ ಚಿಲುಮೆ. ರಾಗಕ್ಕೂ ಪದಕ್ಕೂ ಅಂಟಿತು ನಂಟು. ನಂತರ ಅಶ್ವತ್ಥ್ ಮತ್ತೆ ಮತ್ತೆ ಅದನ್ನೇ ಹಾಡುತ್ತಾ ಹೋದ. ನಾನು, ಚಿಂತಾಮಣಿ ಕೋರಸ್ ಥರಾ ದನಿಗೂಡಿಸಿದೆವು. ನಂತರ, ಹಾಡಿಗೆ ಒಳ್ಳೆಯ ಟ್ಯೂನ್ ಸಿಕ್ಕ ಖುಷಿಯಲ್ಲಿ ಕಫೆ ಡಿ ಪ್ಯಾರ ಡೈಸ್ಗೆ ಹೋಗಿ ಗುಂಡು ಹಾಕಿ ಸಂಭ್ರಮಿಸಿದೆವು!
ನಂತರ, ಮತ್ತೆ ರಿಹರ್ಸಲ್ ಶುರುವಾಯಿತು. ‘ನೇಸರ ನೋಡೂ’ ಗೀತೆಯನ್ನು ಕಲಾವಿದ ಕಮಲೇಶ್ ಅವರ ಸೋದರಿ ಸುಲೋಚನಾ ವೆಂಕಟೇಶ್, ಮಧುರವಾಗಿ ಹಾಡಿದರು. ಐದು ವರ್ಷಗಳ ನಂತರ ಮದ್ರಾಸಿನಲ್ಲಿ ಈ ನಾಟಕ ನೋಡಿದ ವಾದಿರಾಜ್-ಜವಾಹರ್ ಸೋದರರು ಇದನ್ನೇ ಸಿನಿಮಾ ಮಾಡಲು ಮುಂದೆ ಬಂದರು. ನಿರ್ದೇಶನದ ಜವಾಬ್ದಾರಿಯನ್ನು ನನಗೇ ಬಿಟ್ಟರು. ಆಗ -ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಲು ನನಗೆ ಗೊತ್ತಿಲ್ಲ. ಹಾಗಾಗಿ ಸಂಗೀತ ನಿರ್ದೇಶನ ನನ್ನಿಂದಾಗೊಲ್ಲ ಎಂದು ಬಿಟ್ಟ ಅಶ್ವತ್ಥ್. ವಾದ್ಯ ನಿರ್ವಹಣೆಗೆ ಮದ್ರಾಸ್ನಲ್ಲಿ ಬೇರೆಯವರನ್ನು ನೇಮಿಸಿಕೊಳ್ಳುವ. ನೀನು ಸುಮ್ನೆ ಒಪ್ಕೊ ಎಂದೆವು. ಮುಂದೆ ಆ ಸಿನಿಮಾ ಇತಿಹಾಸ ನಿರ್ಮಿಸಿತು.
ಒಂದು ವಿಶೇಷ ಕೇಳಿ: ‘ಕಾಕನ ಕೋಟೆ’ ಸಿನಿಮಾಕ್ಕೆ ಚಿತ್ರಕಥೆ ಬರೆದಿದ್ದವರು ಗಿರೀಶ್ ಕಾರ್ನಾಡ್! ನೇಸರ ನೋಡು ಹಾಡಿನಲ್ಲಿ ಮಧ್ಯೆ ಮಧ್ಯೆ ಗಿಟಾರ್ನ ಸದ್ದು ಬರುತ್ತೆ. ಈ ಹಾಡಿಗೆ ಗಿಟಾರ್ ನುಡಿಸಿದವರು ಈಗಿನ ಜನಪ್ರಿಯ ಸಂಗೀತ ನಿರ್ದೇಶಕ ಇಳಯರಾಜ! ಮಾಸ್ತಿಯವರೇ ಬರೆದ-‘ಕರಿ ಹೈದ ನೆಂಬೋನು ಮಹದೇಶ್ವರ’ ಎಂಬ ಇನ್ನೊಂದು ಗೀತೆಯನ್ನು ಹಾಡಿದವರು ಬಿ.ವಿ. ಕಾರಂತ. ಕೋರಸ್ ದನಿಯಾಗಿ ಅವರಿಗೆ ಸಾಥ್ ಕೊಟ್ಟವರು ಸಂಗೀತ ನಿರ್ದೇಶಕರಾದ ಜಿ.ಕೆ. ವೆಂಕಟೇಶ್ ಮತ್ತು ಸಿ. ಅಶ್ವತ್ಥ್! ಮುಂದೆ ‘ಕಾಕನ ಕೋಟೆ’ಗೆ ತೃತೀಯ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ಬಂತು. ಜತೆಗೆ ಅತ್ಯುತ್ತಮ ಕಥೆ ಎಂಬ ಮಾಸ್ತಿಯವರಿಗೆ, ನಿರ್ದೇಶನ ವಿಭಾಗದಲ್ಲಿ ನನಗೆ ಹಾಗೂ ಸಂಕಲನಕ್ಕಾಗಿ ಬಾಲ್ ಜಿ. ಯಾದವ್ಗೆ ಪ್ರಶಸ್ತಿ ಸಿಕ್ಕಿತು. ಈ ಸಂದರ್ಭದಲ್ಲಿ ನನ್ನನ್ನು ಕರೆದು ಮಾಸ್ತಿ ಕೇಳಿದ್ದರು: ‘ಅಲ್ಲ ಕಣೋ ನರಸಿಂಹಾ, ನಾನು ಬರೆದದ್ದು ನಾಟಕ. ಅದಕ್ಕೆ ಹೇಗೋ ಉತ್ತಮ ಕಥೆ ಎಂದು ಪ್ರಶಸ್ತಿ ಕೊಡ್ತಾರೆ? ನಾಟಕ ಯಾವತ್ತಾದ್ರೂ ಕಥೆ ಆಗುತ್ತೇನೋ?’
ಆಗ- ‘ಸಾರ್, ನಾಟಕ ಇರಬಹುದು, ಕಾದಂಬರಿನೇ ಆಗಿರಬಹುದು. ಅವೆಲ್ಲಕ್ಕಿಮತ ಮೊದಲು ಅದು ಕಥೆ ಆಗಿರುತ್ತೆ. ಹಾಗಂತ ಭಾವಿಸಿಯೇ ನಿಮಗೆ ಪ್ರಶಸ್ತಿ ನೀಡಿದ್ದಾರೆ’ ಎಂದೆ. ಹಾಗಂತೀಯಾ ಎಂದು ನಕ್ಕು ಸುಮ್ಮನಾದರು ಮಾಸ್ತಿ…
***
ಇಷ್ಟು ಹೇಳಿ ಕಣ್ಣರಳಿಸಿ ನಕ್ಕರು ಸಿಂಹ. ಅಲ್ಲಿ ಹಳೆಯ ಕತೆಯೊಂದನ್ನು ಹೇಳಿದ ಸಂತೋಷವಿತ್ತು. ಹಾಡಿನ ನೆಪದಲ್ಲಿ ಮಾಸ್ತಿಯವರೊಂದಿಗೆ ನಡೆದಾಡಿ ಬಂಧಂಥ ಸಂಭ್ರಮವಿತ್ತು.




ತುಂಬಾ ತುಂಬಾ ಥ್ಯಾಂಕ್ಸ್!
ನನ್ನ ಫೆವರಿಟ್ ಹಾಡುಗಳಲ್ಲಿ ಒಂದು….
ವಿಚಿತ್ರ ಸೆಳೆತದ ಹಾಡಿದು..
ನೇಸರ ನೋಡೂ …ಎನ್ನುವ ಬಗೆಯಲ್ಲೇ ವಿಚಿತ್ರ ಸೆಳೆತವಿದೆ.
THUMBA CHANNAGIDE SAHITHYA. MANSIGE THUMBA MUDA NIDIDHE….