ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಡೆಸ್ನಾನ-ಇದು ಮೌಡ್ಯತೆಯ ಪರಮಾವಧಿ..



– ಹನುಮಂತ ಹಾಲಿಗೇರಿ

ಸಾಮಾಜಿಕ ಜಾಲತಾಣ ಪೆಸ್‌ಬುಕ್‌ನಲ್ಲಿ ಮಡೆಸ್ನಾನದ ಬಗ್ಗೆ ಬಹಳಷ್ಟು ಬಿಸಿ ಬಿಸಿಚರ್ಚೆಯಾಗುತ್ತಿದೆ. ಈ ಚರ್ಚೆಯಲ್ಲಿ ಸಧ್ಯ ಮೂರು ವಾದಗಳು ಚಾಲ್ತಿಯಲ್ಲಿವೆ. ಮೊದಲನೆಯದಾಗಿ `ಎಂಜೆಲೆಲೆಯ ಮೇಲೆ ಉರುಳೋದು ಬಿಡೋದು ಉರುಳುವವರ ನಂಬಿಕೆಗೆ ಸಂಬಂಧಪಟ್ಟದ್ದು. ಅದನ್ನು ಬೇಡ ಎನ್ನಲು ನಾವು ಯಾರು’ ಎಂದು ಪ್ರತ್ಯಕ್ಷವಾಗಿಯೆ ಮಡೆಸ್ನಾನವನ್ನು ಬೆಂಬಲಿಸುವ ವಿತಂಡವಾದಿಗಳು. ಎರಡನೆಯದಾಗಿ ‘ಮಡೆಸ್ನಾನ ಅನಾದಿ ಕಾಲದಿಂದ ನಡೆದುಕೊಂಡ ಆಚರಣೆ. ಇದು ನಂಬಿಕೆಗೆ ಸಂಬಂಧಪಟ್ಟದ್ದು. ದಿಡೀರ್ ಎಂದು ನಿಷೇಧಿಸಲಿಕ್ಕೆ ಆಗುವುದಿಲ್ಲ. ಕಾಲ ಉರುಳುವಿಕೆಯಲ್ಲಿ ಅದೆ ನಿಲ್ಲುತ್ತದೆ’ ಎಂದು ಅಪರೋಕ್ಷವಾಗಿ  ಬೆಂಬಲಿಸುವವರು. ಇನ್ನು ಕೊನೆಯದಾಗಿ ಮಡೆಸ್ನಾನದಂತಹ ಅಸಹ್ಯ ಆಚರಣೆಯನ್ನು ತಕ್ಷಣವೇ ನಿಲ್ಲಿಸಲೇಬೇಕು ಎಂದು ಕಟುವಾಗಿ ವಿರೋಧಿಸುವವರು.

ಕೇವಲ ಇದು ಕೇವಲ ನಂಬಿಕೆಯ ವಿಷಯವಾಗಿದ್ದರೆ ಬೇರೆ ಮಾತು. ಆದರೆ  ಇದು ಮೂಡ ನಂಬಿಕೆ. ಮೌಡ್ಯತೆಯ ಪರಮಾವಧಿ. ಮೇಲುವರ್ಗದವರು ಉಂಡ ಎಂಜೆಲೆಲೆಯ ಮೇಲೆ ಕೆಳವರ್ಗದವರು ಉರುಳಾಡಿದರೆ ಅವರ ಚರ್ಮವ್ಯಾದಿಗಳೆಲ್ಲವೂ ಕಡಿಮೆಯಾಗುತ್ತವೆ ಎಂದರೆ ಮೂಢನಂಬಿಕೆಯಲ್ಲದೆ ಮತ್ತೇನೂ? ಒಬ್ಬರು ಕುಡಿದ ಲೋಟದಿಂದ ಮತ್ತೊಬ್ಬರು ಕುಡಿಯುವುದು ಅಸಹ್ಯ ಎನಿಸುವ, ಅಚಾನಕ್ಕಾಗಿ ಎಂಜಲು ತಾಕಿದರೆ ಸೋಪು ಹಚ್ಚಿ ತೊಳೆದುಕೊಳ್ಳುವವರು ಹೆಚ್ಚಾಗಿರುವ ಈ ಕಾಲದಲ್ಲಿ ಉಂಡ ಎಂಜಲದ ಮೇಲೆ ಉರುಳಾಡುವ ಮನಸ್ಥಿತಿಯನ್ನು ದಲಿತರಲ್ಲಿ ಬಿತ್ತಿದವರು ಯಾರು ಎಂಬುದು ಮುಖ್ಯ ಪ್ರಶ್ನೆ. ಎಂಜಲೆಲೆಯಲ್ಲಿ ಔಷಧೀಯ ಗುಣಗಳಿದ್ದರೆ ಇಷ್ಟೊಂದು ಆಸ್ಪತ್ರೆಗಳೇಕೆ ಹುಟ್ಟಿಕೊಳ್ಳುತ್ತಿದ್ದವು. ಒಂದು ವೇಳೆ ಇದು ನಿಜವೇ ಆಗಿದ್ದರೇ ಉಣ್ಣುವವರು ಬ್ರಾಹ್ಮಣರೇ ಏಕೆಯಾಗಬೇಕು? ಒಂದೊಂದು ವರ್ಷ ಆಚರಣೆ ತಿರುಗುಮುರುಗಾಗಲಿ. ದಲಿತರು ಉಂಡ ಎಲೆಯ ಮೇಲೆ ಬ್ರಾಹ್ಮಣರು ಒಂದೊಂದು ವರ್ಷ ಉರುಳಾಡಲಿ!

ಇರಲಿ, ಇದೆಲ್ಲ ವಿತಂಡವಾದವನ್ನು ಪಕ್ಕಕ್ಕೆ ಇಟ್ಟು ಮೇಲಿನ ಎರಡು ವಾದಗಳ ಬಗ್ಗೆ ಚರ್ಚೆ ಮಾಡೋಣ. `ಮಡೆಸ್ನಾನ ನಂಬಿಕೆಗೆ ಸಂಬಂಧಪಟ್ಟದ್ದು ಉರುಳುವವರಿಗೆ ತಮ್ಮ ಖಾಯಿಲೆಗಳು ಕಡಿಮೆಯಾಗುತ್ತವೆ ಎಂಬ ಸಮಾಧಾನವಾಗುವಂತಿದ್ದರೆ ಉರುಳಲಿ ಬಿಡಿ’ ಎಂದು ವಾದಿಸುವವರು ಬಹಳಷ್ಟು ಜನರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರೆ ಆಗಿದ್ದಾರೆ. ಇದನ್ನು ನಾನು ಪರ್ವಾಗ್ರಹ ಪೀಡಿತನಾಗಿ ಹೇಳುತ್ತಿಲ್ಲ. ಪೇಸ್‌ಬುಕ್ ತೆಗೆದುನೋಡಿದರೆ ನಿಮಗೆ ಗೊತ್ತಾಗುತ್ತದೆ. ಮಡೆಸ್ನಾನದ ಕುಕ್ಕೆ ಸುಬ್ರಹ್ಮಣ್ಯದಲ್ಲಿನ ಮಠಾಧಿಪತಿಗಳು ಪೇಜಾವರ ಶ್ರೀಗಳು ಕೂಡ ಇದೆ ಮಾತನ್ನು ಹೇಳಿದ್ದಾರೆ. ಚೋರ್ ಗುರು ಚಂಡಾಲ ಶಿಷ್ಯಂದಿರು!

ಮೊದಲು ಸರಕಾರ ಇದನ್ನು ನಿಷೇಧಿಸಿ ಆದೇಶ ಹೊರಡಿಸಿತು. ಸರಕಾರ ಒಮ್ಮೆಲೆ ನಿಷೇದಿಸಿದ್ದಕ್ಕೆ ನಮ್ಮಂಥವರ ಮನಸ್ಸುಗಳು ನಿರಾಳಗೊಂಡಿದ್ದವು. ನಂತರ ಯಾವದೋ ಹುನ್ನಾರದಿಂದ, ಯಾರದೋ ಒತ್ತಡಕ್ಕೆ ಮಣಿದಂತೆ ನಾಟಕವಾಡಿದ ಸರಕಾರ ನಿಷೇಧವನ್ನು ಮತ್ತೆ ಹಿಂದಕ್ಕೆ ತೆಗೆದುಕೊಂಡಿದ್ದು ನಾಚಿಕೆಗೇಡು. “ಮಲೆಕುಡಿಯರು ನಿಷೇಧ ವಿರೋಧಿಸಿ ಪ್ರತಿಭಟನೆ ಮಾಡಿದ್ದರಿಂದ ಏಕಾಏಕಿ ಮಡೆಸ್ನಾನ ಆಚರಣೆ ನಿಲ್ಲಿಸುವುದು ಬೇಡ. ಈ ಬಗ್ಗೆ ಮುಂದೆ ಮಠದಲ್ಲಿ ಪ್ರಶ್ನೆ’ ಕಾರ್ಯಕ್ರಮದಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು,” ಎಂದು ಸಚಿವ ವಿ.ಎಸ್.ಆಚಾರ್ಯ ಹೇಳಿಕೆ ನೀಡಿ ಜಾರಿಕೊಂಡರು. ಮಲೆಕುಡಿಯರ ಪ್ರತಿಭಟನೆಯಲ್ಲಿ ಮೇಲುವರ್ಗದವರ ಕೈವಾಡವಿರಲೇಬೇಕಲ್ಲವೇ.  ಏಕೆಂದರೆ ಈ ಆಚರಣೆ ಆರಂಭದಲ್ಲಿ ಪ್ರಾರಂಭವಾಗಲಿಕ್ಕೆ ಪುರೋಹಿತಶಾಹಿಗಳ ಹುನ್ನಾರವೇ ಕಾರಣವಲ್ಲವೇ?

ಅದುದರಿಂದ ಹೀಗೆ ಅಮಾನುಷವಾದ, ಕೆಲವರಲ್ಲಿ ಅಸಹ್ಯ ಮೂಡಿಸುವ ಈ ಆಚರಣೆಯನ್ನು ಬೆಂಬಲಿಸುವ ಮೊದಲವಾದಿಗಳು ದಯವಿಟ್ಟು ತಮ್ಮ ವಾದವನ್ನು ಮತ್ತೊಮ್ಮೆ ಪರಾಮರ್ಶಿಸಬೇಕು. ನಮ್ಮ ಎಂಜಲದ ಮೇಲೆ ಮತ್ತೊಬ್ಬ ಮನುಷ್ಯ ಉರುಳಾಡುವುದು ಬೇಡ ಎಂಬ ಕನಿಷ್ಠ ಮಾನವೀಯತೆ ನಿಮಗಿದ್ದರೆ ದಯವಿಟ್ಟು ಸುಮ್ಮನಿದ್ದು ಬಿಡಿ. ಮೇಲುವರ್ಗದ ಪ್ರಜ್ಞಾವಂತರೆ ಮುಂದೆ ನಿಂತು ಈ ಆಚರಣೆಯನ್ನು ನಿಷೇಧಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕಾಗಿದೆ. ಇದು ನಂಬಿಕೆಗೆ ಸಂಬಂಧಪಟ್ಟದ್ದು ಎಂದು ಜಾರಿಕೊಂಡರೆ ಈ ಹಿಂದೆ ಆಚರಣೆಯಲ್ಲಿದ್ದ ಸತಿಸಹಗಮನ, ಬೆತ್ತಲೆ ಸೇವೆ, ದೇವದಾಸಿ ಪದ್ದತಿ ಮುಂತಾದವುಗಳೆಲ್ಲವೂ ಸಹ ನಂಬಿಕೆಗೆ ಸಂಬಂಧಪಟ್ಟದ್ದು ಎಂದು ಮತ್ತೆ ಆಚರಣೆಗೆ ತರಲು ಸಾಧ್ಯವೆ?

ಇನ್ನೂ ಎರಡನೆ ವಾದದವರು `ಕಾಲ ಪಕ್ವವಾಗಿಲ್ಲ’ ಎಂಬ ನೆಪದಿಂದ ಆಚರಣೆಯ ಪರವಾಗಿಯೆ ನಿಲ್ಲುತ್ತಾರೆ. ಇಂದಿನ ಆಧುನಿಕ ಯುಗದಲ್ಲಿಯೂ ಇಂಥ ಆಚರಣೆ ನಿಲ್ಲಿಸಲು ಕಾಲ ಪಕ್ವವಾಗಿಲ್ಲ ಎಂದು ಜಾರಿಕೊಳ್ಳುವುದು ಹೇಡಿತನ. ಎಂಜಲೆಲೆಯ ಮೇಲೆ ಉರುಳಾಡುವ ಮಲೆಕುಡಿಯರಿಗೆ ನಿಜವಾಗಲೂ ಇದು ಅಸಹ್ಯ ಎನಿಸದಿರಬಹುದು. ಆದರೆ ಇದು ಇಡಿ ಮನುಕುಲಕ್ಕೆ ಅನಾಗರಿಕತೆ, ಅಸಹ್ಯ ಮತ್ತು ಅವಮಾನ. ಮಲೆಕುಡಿಯರಂಥ ದಲಿತರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾದರೆ, ಅವರಲ್ಲಿ ಸ್ವಾಭಿಮಾನ ಮೂಡಿಸಿದರೆ ಖಂಡಿತ ಈ ಆಚರಣೆ ಮುಂದಿನ ವರ್ಷದಿಂದಲಾದರೂ ನಿಲ್ಲುತ್ತದೆ.

ಇದು ಬಿಟ್ಟು ಈ ಆಚರಣೆ ಧಾರ್ಮಿಕ ನಂಬಿಕೆ ಸಂಬಂಧಪಟ್ಟದ್ದು ಈ ಅನಾಗರೀಕ ಆಚರಣೆಗೆ ಅವಕಾಶ ಕಲ್ಪಿಸಿರುವ ಸರಕಾರ ತನ್ನ ಮನೋಇಂಗಿತವನ್ನು ಅನಾವರಣಗೊಳಿಸಿದೆ. ತಪ್ಪು ಎಂದು ಗೊತ್ತಾದ ಮೇಲೂ  ನಿಷೇಧಿಸಬೇಕೋ ಬೇಡವೋ ಎಂದು ಅಷ್ಟಮಂಗಲ ಪ್ರಶ್ನೆ ಕೇಳುತ್ತೇವೆ ಎನ್ನುವುದು ಯಾವ ಸೀಮೆ ನ್ಯಾಯ? ಸಾಕ್ಷರರ ಜಿಲ್ಲೆ ಎನಿಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೆ ಮಡೆಸ್ನಾನದಂತಹ ಅನಾಗರಿಕ ಆಚರಣೆಗೆ ಮಣೆ ಹಾಕುತ್ತಿರುವುದು ಪ್ರಜ್ಞಾವಂತ ಸಾಕ್ಷರರಿಗೆ ಒಪ್ಪುವ ಮಾತಲ್ಲ.

photo courtesy -The Hindu

‍ಲೇಖಕರು avadhi

30 November, 2011

5 Comments

  1. ಸಂದೀಪ್ ಕಾಮತ್

    ಸಧ್ಯ ಫೇಸ್ ಬುಕ್ ನ ಸಂಸ್ಥಾಪಕ ಬ್ರಾಹ್ಮಣ ಅಲ್ಲ! ಎಲ್ಲೆಲ್ಲೂ ಮಡೆಸ್ನಾನದ ಚರ್ಚೆ. ಯಾಕಂದ್ರೆ ಎಲ್ಲಾ ಚ್ಯಾನಲ್ ಗಳೂ ಅದೇ ತೋರಿಸ್ತಾವೆ! ಆದ್ರೆ ಅದೇ ದಕ್ಷಿಣ ಕನ್ನಡದ ಬಡ ಬ್ರಾಹ್ಮಣನ ಮಗನೊಬ್ಬ ಓದು ಮುಂದುವರೆಸಲಾರದೆ ಬೆಂಗಳೂರಿನ ಹೋಟೆಲ್ ನಲ್ಲಿ ಬೇರೆಯವರ ಎಂಜಲು ತಟ್ಟೆ ತೊಳೆಯೋದು ಯಾರಿಗೂ ಕಾಣಿಸಿಲ್ಲ. ಯಾಕಂದ್ರೆ ಟಿ.ವಿ ಚ್ಯಾನೆಲ್ ಗಳು ಇನ್ನೂ ಅಲ್ಲಿಗೆ ಹೋಗಿಲ್ಲ!

    ಮಡೆ ಸ್ನಾನ ನಿಶೇಧ ಖಂಡಿತ ಬೇಕು. ಅದರೆ ಪದೇ ಪದೇ ಬ್ರಾಹ್ಮಣರ ಎಂಜಲೆಲೆ ಅನ್ನೋದನ್ನು ಹೈ ಲೈಟ್ ಮಾಡೋದು ನೋಡಿರೆ ಯಾಕೋ ಇದು ದಿಕ್ಕು ತಪ್ಪೋ ಹಾಗೆ ಕಾಣಿಸ್ತಿದೆ. ಅಂದರೆ ಬೇರೆ ಯಾರದೇ ಎಂಜಲೆಲೆ ಆಗಿದ್ರೆ ಪರ್ವಾಗಿಲ್ಲ ಅನ್ನೋ ಧಾಟಿಯೇ?

    ಅದಲ್ಲದೆ ಯಾಕೆ ಲೇಖಕರು ಮೇಲುವರ್ಗದವರು ಅಂತ ಪದೇ ಪದೇ ಬರೀತಾರೆ? ಬ್ರಾಹ್ಮಣರು ಮೇಲು ವರ್ಗದವರು ಅಂತ ಲೇಖಕರೇ ಒಪ್ಪಿಕೊಂಡಿದ್ದಾರೆಯೆ? ಈ ಮೇಲ್ವರ್ಗ ಅನ್ನೋದನ್ನು ಕರೆಯೋದು ಮೊದಲು ಬಿಡಬೇಕು.

    ಲೇಖಕರು ಬರೀ ಮಲೆಕುಡಿಯ ಜನಾಂಗದವರು ಮಡೆ ಸ್ನಾನ ಮಾಡಿತ್ತಾರೆ ಅನ್ನೋ ತಪ್ಪು ಕಲ್ಪನೆಯಲ್ಲಿದ್ದಾರೆ. ಇಂಥ ತಪ್ಪು ಕಲ್ಪನೆಗಳಿಂದಲೇ ಎಡವಟ್ಟಾಗಿರೋದು. ಮಲೆಕುಡಿಯರು ಹೊರಳಿದರೂ ತಪ್ಪೇ ಬ್ರಾಹ್ಮಣರು ಉರುಳಿದರೂ ಅದು ತಪ್ಪೇ.

    ಹಿಂದೊಮ್ಮೆ ಮಂಗಳೂರಿನ ಕೋಮು ಗಲಭೆಯ ಬಗ್ಗೆ ಬರೆದಾಗ ಹೇಳಿದ್ದೆ. “ಸುರೇಶ ರಮೇಶನಿಗೆ ಹೊಡೆದರೆ ಗಲಬೆ ಅದೇ ಆಸಿಫ್ ಗೆ ಹೊಡೆದರೆ ಕೋಮು ಗಲಭೆ”.

    ಯಾವುದೇ ಜಾತಿಯ ಪೂರ್ವಗ್ರಹ ಇಲ್ಲದೆ ಈ ಘಟನೆಯನ್ನು ನೋಡಲು ಸಾಧ್ಯವಿಲ್ಲವೇ ?

  2. -ಎಚ್. ಸುಂದರ ರಾವ್

    ನನಗೆ ಗೊತ್ತಿರುವಂತೆ ಮಡೆಸ್ನಾನದ ಹರಕೆಯನ್ನು ಎಲ್ಲ ಜಾತಿಯವರೂ ಹೊರುತ್ತಾರೆ. ಹರಕೆಯ ಕಾರಣಗಳು ನಿಗೂಢ. ಈ ಹರಕೆಯನ್ನು ಹೊರುವ, ಹೊರದಿರುವ ಸ್ವಾತಂತ್ರ್ಯ ಸ್ವಲ್ಪ ಮಟ್ಟಿಗಾದರೂ ವ್ಯಕ್ತಿಗಳಿಗೆ ಇದೆ.
    ನಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳಿಸುವುದು, ನಮ್ಮ ದೇಶದಲ್ಲಿ ವಿದೇಶೀ ಮಾಲ್ ಗಳನ್ನು ತೆರೆಯುವುದು, ಗ್ಯಾಟ್ ಒಪ್ಪಂದಕ್ಕೆ ನಾವು ಸಹಿ ಹಾಕಿರುವುದು ಇವೆಲ್ಲ ಮಡೆಸ್ನಾನದ ವಿಸ್ತೃತ ರೂಪಗಳೇ.
    ಪ್ರಾರ್ಥನೆಯೇ ಮುಖ್ಯವಾದವರಿಗೆ ಅದನ್ನು ಮಾಡಲು ಅವರವರ ಮನೆ ಸಾಕು. ಪ್ರಾರ್ಥನೆ, ಪೂಜೆಗಳ ವ್ಯವಸ್ಥೆಗೆ ಪ್ರತ್ಯೇಕ ಕೇಂದ್ರಗಳಿದ್ದರೆ, ಅವುಗಳಿಗೆ ಪ್ರಾರ್ಥನೆ, ಪೂಜೆಗಳಿಗಿಂತ ಬೇರೆಯೇ ಆದ, ನಿಗೂಢವೂ, ಅನುಮಾನಾಸ್ಪದವೂ ಆದ ಉದ್ದೇಶಗಳಿರಲೇ ಬೇಕು.
    -ಎಚ್. ಸುಂದರ ರಾವ್

  3. ಸಿ ಪಿ ನಾಗರಾಜ

    ಶ್ರೀ ಹನುಮಂತ ಹಾಲಿಗೇರಿ ಅವರಿಗೆ ,
    ‘ಉರುಳಲಿ ಬಿಡಿ’ ಎಂದು ವಾದಿಸುವವರು ಬಹಳಷ್ಟು ಜನರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರೆ ಆಗಿದ್ದಾರೆ.— ಎಂದು ನೀವು ಬರೆದಿರುವ ಮಾತುಗಳು ಸರಿಯಲ್ಲ . ನಾವು ಇಂತಹ ಆಚರಣೆಗಳಲ್ಲಿ ಗುರುತಿಸಬೇಕಾಗಿರುವುದು ” ಯಾವ ಜಾತಿಯವರು ಕಾರಣರು ಎಂಬುದಕ್ಕಿಂತ , ಯಾವ ಬಗೆಯ ವಿಚಾರಗಳು ಕಾರಣವೆಂಬುದನ್ನು ಗುರುತಿಸಬೇಕು ” . ಜಾತಿ-ಧರ್ಮ-ದೇವರುಗಳ ನೆಲೆಯಲ್ಲಿ ನೂರಾರು ಬಗೆಯ ಮೌಢ್ಯದ ಆಚರಣೆಗಳನ್ನು ಹಿಂದೂ ಧರ್ಮದ ಜನಸಮುದಾಯದ ತಲೆಯಲ್ಲಿ ತುಂಬಿರುವ ಪುರೋಹಿತಶಾಹಿ ವಿಚಾರಗಳೇ ಕಾರಣವಾಗಿವೆ . ಪುರೋಹಿತಶಾಹಿ ಆಚರಣೆ ಮತ್ತು ನಂಬಿಕೆಗಳು ಕೇವಲ ಯಾವುದೋ ಒಂದು ಜಾತಿಗೆ ಸೀಮಿತವಾಗಿಲ್ಲ . ಆರ್ಥಿಕವಾಗಿ ಮಧ್ಯಮ ಮತ್ತು ಮಧ್ಯಮ ಮೇಲುವರ್ಗಕ್ಕೆ ಏರುತ್ತಿರುವ ಎಲ್ಲಾ ಜಾತಿಯ ಜನರಲ್ಲಿ ಬಹುತೇಕ ಮಂದಿ ಈಗ ತಮ್ಮ ತಮ್ಮ ಜಾತಿ -ಧರ್ಮ – ದೇವರುಗಳ ನೆಲೆಗೆ ಹಿಂತಿರುಗಿ , ಅಲ್ಲೇ ತಮ್ಮ ಕ್ಷೇಮ ಹಾಗೂ ನೆಮ್ಮದಿಯನ್ನು ಕಾಣಬಯಸುತ್ತಿದ್ದಾರೆ . ಆದ್ದರಿಂದ ಈಗ ನಾವು ಮೊದಲು ಪುರೋಹಿತಶಾಹಿ ವಿಚಾರಗಳು ಯಾವುವು ? ಅವು ಎಷ್ಟರಮಟ್ಟಿಗೆ ಜನ ಸಾಮಾನ್ಯರ ಬದುಕಿಗೆ ವಿರೋಧಿಯಾಗಿವೆ ? ಅವುಗಳ ತೆಕ್ಕೆಗೆ ಸಿಲುಕದೆ ಬಾಳಲು ನಾವು ಏನನ್ನು ಮಾಡಬೇಕು ಎಂಬುದರ ಬಗ್ಗೆ ಚಿಂತಿಸಬೇಕೆ ಹೊರತು , ಕೇವಲ ಒಂದು ಜಾತಿಯನ್ನು ಬೆರಳು ಮಾಡಿ ತೋರಿಸುವುದರಿಂದ ಯಾವ ಪ್ರಯೋಜನವಿಲ್ಲ . ಬ್ರಾಹ್ಮಣರು ಮತ್ತು ಪುರೋಹಿತಶಾಹಿ ವಿಚಾರಗಳನ್ನು ಒಂದರೊಡನೆ ಮತ್ತೊಂದನ್ನು ಸಮೀಕರಣ ಮಾಡಬೇಕಾಗಿಲ್ಲ . ಏಕೆಂದರೆ ನಮ್ಮ ಹಳ್ಳಿಗಳಲ್ಲಿ ದಲಿತರು ಮತ್ತ ಶೂದ್ರರು ಪೂಜಿಸುವ ಶನಿದೇವರ ಪೂಜಾರಿಯು ಬ್ರಾಹ್ಮಣನಲ್ಲ , ಆದರೆ ಅವನಲ್ಲಿಯೂ ಇತರ ಎಲ್ಲಾ ಜಾತಿಗಳ ಪೂಜಾರಿಗಳಲ್ಲಿರುವ ಆಚರಣೆ ಮತ್ತು ನಂಬಿಕೆಗಳು ಕಂಡುಬರುತ್ತವೆ .

    ಸಿ ಪಿ ನಾಗರಾಜ

  4. Rankusa

    @ಸಂದೀಪ್ ಕಾಮತ್ and @ಎಚ್. ಸುಂದರ ರಾವ್: “ಮಲೆಕುಡಿಯರು ಹೊರಳಿದರೂ ತಪ್ಪೇ ಬ್ರಾಹ್ಮಣರು ಉರುಳಿದರೂ ಅದು ತಪ್ಪೇ.” …… “ಸುರೇಶ ರಮೇಶನಿಗೆ ಹೊಡೆದರೆ ಗಲಭೆ ಅದೇ ಆಸಿಫ್ ಗೆ ಹೊಡೆದರೆ ಕೋಮು ಗಲಭೆ.” …… “ಪ್ರಾರ್ಥನೆಯೇ ಮುಖ್ಯವಾದವರಿಗೆ ಅದನ್ನು ಮಾಡಲು ಅವರವರ ಮನೆ ಸಾಕು.” —> what a rare vision! what beautiful thoughts! absolutely true! astounding! 🙂 (ಅಂದಹಾಗೆ, ಪ್ರಾರ್ಥನೆಯೇ ಮುಖ್ಯವಾದವರಿಗೆ ಅದನ್ನು ಮಾಡಲು ಮನೆ ಕೂಡ ಬೇಕಾಗಿಲ್ಲ, ಮನಸ್ಸಿದ್ರೆ ಸಾಕು, isn’t it? ;-))

    sincere thanks to both of you for posting some very rare, read-worthy sentences; unlike most of the puke-worthy comments that always translate to “ಅಹಹಹಹಾ ಎಂಥಾ ತಿಳುವಳಿಕೆ, ಅದೆಂಥಾ ಜ್ಞಾನ, ಅತ್ಯದ್ಭುತ, ಅತಿಸುಂದರ, ಮಧುರಾತಿಮಧುರ–ಧನ್ಯೋಸ್ಮಿ ಧನ್ಯೋಸ್ಮಿ!” and such shit.

    @ಹನುಮಂತ ಹಾಲಿಗೇರಿ: i truly appreciate the essence of the writing i.e. the necessity of abolishing the deep-rooted blind beliefs that have infested every nook and cranny of our culture, and society at large. good effort! 🙂

    and @everyone:

    but i believe what we are getting to see here is totally a lopsided version. as ಸಂದೀಪ್ ಕಾಮತ್ rightly says, any caste shouldn’t be categorized into “ಮೇಲ್ಜಾತಿ or ಕೀಳ್ಜಾತಿ,” coz all these ಜಾತಿs are like fucking ever-growing cancer tumors inside the heart of humanity. it is not the higher or the lower castes but it is THE CASTE SYSTEM which is the root of all division and thus- evil. instead of attacking the so called “ಮೇಲ್ಜಾತಿ/ಕೀಳ್ಜಾತಿ,” why not try uprooting the “ಜಾತಿ” system altogether?? unfortunately, no one is talking about that here, or anywhere where it matters. don’t we have the sense or guts to think out of our own caste/creed/race and things as such? let’s try to come up with an honest answer— here, something wherein the castes are involved is making a lot of hue and cry; but how many of us will refute if there were no castes involved, or a similar incident took place within a particular community?? i don’t think many of us will. in such cases, we just get into our laid-back attitude of thinking “ಅಯ್ಯೋ ಅವರ ಮನೆ ವಿಷ್ಯ ನಮಗ್ಯಾಕೆ ಬಿಡಿ,” don’t we? if anyone says ‘i will,’ then i’d like to know how many times has he/she opposed bribery, corruption, bonded labor, nepotism, politics, or red-tapism in his/her own way; coz these things are also evils that should be treated with the same weightage, aren’t they??

    “ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾದರೆ, ಅವರಲ್ಲಿ ಸ್ವಾಭಿಮಾನ ಮೂಡಿಸಿದರೆ…” —> HAHAHA! these hypothetical assumptions that end in ‘ರೆs’ are wonderful to hear when one is living in a Utopian world. but unfortunately, they aren’t applicable in the world that we all are living in right now. they are as good as dreaming “ನಾನು ಬಿಲ್ ಗೇಟ್ಸ್ ಆದರೆ, ನಮ್ಮ ದೇಶ ರಾಮರಾಜ್ಯವಾದರೆ, corruption ನಿರ್ಮೂಲನೆಯಾದರೆ…” etc etc. but the burning question here is: “WHO WILL DO IT?”– you? me? someone who is voicing his/her opinion here? or someone who is fighting on behalf of any of the parties involved? Do you know what IS the answer to that?– “NO ONE CAN.” because THE PEOPLE who follow such things have to use their brains and start thinking on their own that what they are doing is right or wrong. until then, nobody can help them. DVG has wonderfully put it across: “ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿನ್ನುದ್ಧಾರವೆಷ್ಟಾಯ್ತೊ ಮಂಕುತಿಮ್ಮ” true, isn’t it? 🙂

    but for the ones who do not believe in absurdities such as caste, community, religion, race, or to say- god; you know how it all looks like? such people curse themselves for being born amongst such jokers who follow these kinda practices, and the wily jokers whose aim is to reap benefits out of those idiotic practitioners…

    regs,
    -R

  5. ಅಶೋಕವರ್ಧನ

    ಆಚರಣೆಯ ಹಂತದಲ್ಲಿ ತಡೆಹಾಕುವುದು, ಪ್ರತಿಭಟನೆ ಮಾದುವುದಿದ್ದರೆ ಗೆದ್ದಲು ಕಟ್ಟಿದ ಹುತ್ತಕ್ಕೆ ಏನನ್ನಾದರೂ ಎರೆದು ‘ನಾಗ’ನನ್ನು ತಣಿಸುವುದು, ನೀವಲ್ಲದಿದ್ದರೆ ನಿಮ್ಮ ಮೂರು ಮೂರು ತಲೆಮಾರಿನ ಹಿಂದಿನವರು ಮಾಡಿದ ‘ನಾಗದೋಷ’ಕ್ಕೆ ಪೂಜೆ ಹವನ ನಡೆಸುವುದು, ಒಂದೇ ‘ಸಮಸ್ಯೆಯ ಋಣಪರಿಹಾರ’ಕ್ಕೆ ಸೇವಾಕರ್ತನ ತಾಕತ್ತಿನ ಮೇರೆಗೆ ವ್ಯಯಪಟ್ಟಿ ಬೆಳೆಯುವುದು ಇತ್ಯಾದಿ ಪಟ್ಟಿ ಮಾಡಿದಷ್ಟು ಮುಗಿಯದ ವಿಷಯಗಳಿವೆ, ವಿಚಾರದ ಹೆಸರಿನಲ್ಲಿ ಮೊಂಡುವಾದ ಹೂಡುವ ಪ್ರಭೃತ್ತಿಗಳೂ ಇದ್ದಾರೆ. ‘ಮೂಢ ನಂಬಿಕೆ’ಗಳನ್ನು ಸಾರ್ವಜನಿಕ ಮಾಧ್ಯಮಗಳ ಖಯಾಲಿಗನುಗುಣವಾಗಿ ಪ್ರಸ್ತುತ ಲೇಖಕರು ಮಾಡಿದಂತೆ ಸ್ತರ ಬೇಧಮಾಡುವುದೇ (“ಇದು ಮೂಡ ನಂಬಿಕೆ. ಮೌಡ್ಯತೆಯ ಪರಮಾವಧಿ”)ಸರಿಯಲ್ಲ. ಕ್ರಮವಾಗಿ ವಿದ್ಯೆ ಕೊಡಿ, ವಿಚಾರ ಬೆಳೆಸಿಕೊಳ್ಳಲು ಪರಿಸರ ಕೊಡಿ, ಮಡೆ ಸ್ನಾನ ಮಾತ್ರವಲ್ಲ, ಇಂದಿನ ಮೌಢ್ಯತೆಯ ಪರಮಾವಧಿಯಾದ ಪ್ರಜಾಸತ್ತೆಯೂ (ಐದುನೂರು ದೇವಾಲಯಗಳಲ್ಲಿ ತಲಾ ನೂರು ತೆಂಗಿನಕಾಯಿ ಈಡು ಮಾಡಿ, ಪೂಜಾದಿಗಳನ್ನು ಮಾಡಿ, ಉರುಳು ಸೇವೆ, ದೀಡ್ ನಮಸ್ಕಾರ ಮಾಡಿದ್ದೆಲ್ಲಾ ಮತದಾರ-ಪ್ರಭುವಿನ ಮೇಲಿನ ನಂಬಿಕೆ ಅಂತೀರಾ?) ಖಂಡಿತ ರಿಪೇರಿಯಾಗುತ್ತದೆ.
    ಅಶೋಕವರ್ಧನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading