“ಡೋರ್ ನಂ 142”
ಬಹುರೂಪಿ
ಅವಳ ಕಣ್ಣಂಚಲ್ಲಿ ಆಗಲೇ ಹನಿ ಮೂಡಿತ್ತು. ಒಂದಿಷ್ಟು ಮಾತನಾಡಿಸಿದರೂ ಸಾಕು, ಅದು ಹೊರಗೆ ಚಿಮ್ಮಲು ಕಾತುರವಾಗಿತ್ತು. ಆ ಕಾರು ಜರ್ರನೆ ಸರಿದುಹೋದ ದಾರಿಯನ್ನೇ ನೋಡುತ್ತಿದ್ದಳು. ಕಾರು ಬಂತು ಹೋಯಿತು ಎಂಬುದಕ್ಕೆ ಮಾತ್ರ ರಸ್ತೆಯ ಮೇಲೆ ಗುರುತುಗಳಿದ್ದವು. ಆ ಕಾರು ಬಂದುಹೋದ ಗುರುತು ಆ ರಸ್ತೆಯಿಂದಲಾದರೂ ಮಾಯವಾಗಬಹುದೇನೊ. ಆದರೆ ಅವಳ ಮನಸ್ಸಿನಿಂದ ಮರೆಯಾಗಲು ಸಾಧ್ಯವೇ ಇರಲಿಲ್ಲ ಎಂಬಷ್ಟು ಆಳದ ಗುರುತು ಮೂಡಿಸಿದ್ದವು.
ಅವಳು ನಿಂತಿದ್ದು ಮದುವೆಯ ಮಂಟಪದಲ್ಲಿ. ಆಗ ಧರಿಸಿದ್ದ ತಾಳಿ, ಸಂಭ್ರಮ ತರಲೆಂದೇ ಉಟ್ಟುಕೊಂಡಂತಿದ್ದ ಸೀರೆ, ಅಪರೂಪಕ್ಕೊಮ್ಮೆ ಧರಿಸುವ ಕಾಲ್ಗೆಜ್ಜೆ ಎಲ್ಲ ಇತ್ತು. ವರ್ಷಗಳ ಕಾಲ ಕಾದು, ಒದ್ದಾಡಿ ಕೈಹಿಡಿದಿದ್ದ ಗಂಡ ಪಕ್ಕದಲ್ಲಿಯೇ ಇದ್ದ. ಗೆಳೆಯರ ದಂಡು ನಗೆಚಟಾಕಿಗಳನ್ನು ಇನ್ನೂ ತೂರುತ್ತಲೇ ಇತ್ತು. ಆದರೆ ಆಕೆ ಮಾತ್ರ ಕಣ್ಣೀರಾಗಿ ನಿಂತಿದ್ದಳು. ಕಾರಲ್ಲಿ ಬಂದ ಮನೆಯವರು, “ಈಗ ಬೇಡ, ಮನೆಗೇ ಬರ್ತೀನಿ, ಅಲ್ಲಿಯೇ ಕೊಡಿ” ಎಂದು ಪರಿಪರಿಯಾಗಿ ಬೇಡಿಕೊಂಡರೂ ಅವಳ ಮಡಿಲಿಗೆ ಅಕ್ಕಿ ಸುರಿದು ಹೊರಟೇಹೋಗಿದ್ದರು. ತವರಮನೆಯ ಕೊನೆಯ ಕೊಂಡಿಯೊಂದು ಎಲ್ಲೋ ಗೊತ್ತಿಲ್ಲದ ಮಂಟಪದಲ್ಲಿ ಹೀಗೆ ಕಳಚಿಹೋಗಿತ್ತು.
ಮಡಿಲಕ್ಕಿ ಎಂದರೆ ಏನು ಎಂದು ನನಗೆ ಗೊತ್ತೇ ಇರಲಿಲ್ಲ. ಎದೆಯಲ್ಲಿ ಉಕ್ಕುತ್ತಿದ್ದ ದುಃಖಕ್ಕೆ ಕಣ್ಣೀರ ಆಕಾರ ಕೊಟ್ಟ ಮೇಲೆಯೇ ಇದೇನೋ ಮಹತ್ವದ್ದು ಎಂದು ಗೊತ್ತಾಗಿದ್ದು. “ಹೋಗಿ ಬಾ” ಎಂದು ತವರು ಹಾರೈಸಿ ಕಳಿಸಿಕೊಡುವ ಕೊನೆಯ ಸಂಕೇತವೇ ಮಡಿಲಕ್ಕಿ.
ತವರು ಬಿಡುವ, ಹೊಸ ಮನೆ ಹೊಗುವ ಮಗಳು ಅಲ್ಲಿಯೂ ಒಂದು ತವರು ಸ್ಥಾಪಿಸಿಕೊಳ್ಳಲಿ. ಅದನ್ನೇ ತವರಾಗಿ ಮಾಡಿಕೊಳ್ಳಲಿ ಅಥವಾ ತವರು ಸದಾ ನೆನಪಾಗುತ್ತಿರಲಿ ಎಂದೇ ಮಡಿಲ ತುಂಬಾ ಅಕ್ಕಿ ಸುರುವಿ ಕಳಿಸುತ್ತಾರ್ಎ. ಗಂಡನ ಮನೆ ಹೊಕ್ಕ ಹೆಣ್ಣು ಆ ಅಕ್ಕಿಯಿಂದಲೇ, ತವರಿನ ಪ್ರೀತಿ ತುಂಬಿದ ಅಕ್ಕಿಯಿಂದಲೇ ಮೊದಲ ಅಡುಗೆ ತಯಾರಿಸುತ್ತಾಳೆ. ತವರ ಪ್ರೀತಿಯನ್ನು ಪ್ರತಿಯೊಬ್ಬರಿಗೂ ಬಡಿಸುತ್ತಾಳೆ.
ನಮ್ಮದೋ ಹೇಳಿಕೇಳಿ ಗಲಾಟೆಯ ಮದುವೆ. ಮನಸ್ತಾಪದ ಮದುವೆ. ಹಾಗೂ ಹೀಗೂ ಎರಡೂ ಕಡೆಯವರನ್ನು ಅತ್ತು ಸುರಿದು, ಗಂಟಲು ದೊಡ್ಡದು ಮಾಡಿ, ಬಿಗುಮಾನ ತೋರಿ, ಹಠ ಮಾಡಿ ಒಪ್ಪಿಸಿದ್ದೆವು. ಮದುವೆಗೆ ಬರುವ ಪ್ರಮಾಣವನ್ನೂ ಪಡೆದಿದ್ದೆವು. ಮದುವೆಯೇನೋ ಆಯಿತು. ಆದರೆ ಮಡಿಲಕ್ಕಿ ಮಾತ್ರ ತವರ ಆ ಅಂಗಳದಲ್ಲಿ ಸಿಗುತ್ತದೆ ಎಂಬುದು ದೂರದ ಚುಕ್ಕಿಯಾಗಿಯೇ ಉಳಿದುಹೋಯಿತು.
ಹಾಲುಂಡು ಬೆಳೆದ ತವರು ಈ ಅಕ್ಕಿಯ ಮೂಲಕವೇ ಹಬ್ಬಬೇಕು ಎಂದು ಆಸೆಪಟ್ಟವರು ಅದೆಷ್ಟೊ. ನನಗಂತೂ ಮಡಿಲಕ್ಕಿಯ ಮಾತು ಬಂದಾಗಲೆಲ್ಲಾ ಆ ಕವಿತೆ ಮನದಲ್ಲಿಳಿದು ಕಾಡುತ್ತದೆ. ಸೀತೆಯನ್ನು ಅದಾಗ ತಾನೆ ಬಿಲ್ಲು ಮುರಿದು ಗೆದ್ದ ರಾಮ ಮದುವೆಯಾಗಿದ್ದಾನೆ. ಸೀತೆ ಇನ್ನೇನು ರಾಮನ ಹಿಂದೆ ಅವನ ಊರತ್ತ ಹೆಜ್ಜೆ ಹಾಕಬೇಕು. ಆಗ ಜನಕರಾಜ ಮಗಳಿಗೆ ಉಡುಗೊರೆ ತರುತ್ತಾನೆ. ಒಬ್ಬ ರಾಜ ಮಗಳಿಗೆ ಕೊಡುವ ಉಡುಗೊರೆ ಎಂದರೆ ಹೇಗಿರುತ್ತದೆ? ವಜ್ರ ವೈಢೂರ್ಯ, ಧನಕನಕ, ಕುದುರೆ, ಕಾಲಾಳು… ಉಹೂಂ, ಜನಕ ಕೊಟ್ಟದ್ದು ಅದಾವುದೂ ಅಲ್ಲ. ಅಂಗೈಯಲ್ಲಿ ಮುಚ್ಚಿಟ್ಟುಕೊಳ್ಳಬಹುದಾದ ಪುಟ್ಟ ಭರಣಿ. ಸೀತೆಗೂ ಆಶ್ಚರ್ಯ. ರಾಮನಂತೂ ಕಕ್ಕಾಬಿಕ್ಕಿ. ಊರ ಪ್ರಜೆಗಳಿಗೂ ಏನೂ ಅರ್ಥವಾಗುತ್ತಿಲ್ಲ. ಸೀತೆ ಭರಣಿ ಮುಚ್ಚಳ ತೆಗೆಯುತ್ತಾಳೆ. ಓಹ್! ಅಲ್ಲಿದೆ, ಅಲ್ಲಿದೆ ಯಾರೂ ನೀಡಲಾಗದ ಉಡುಗೊರೆ. ಜನಕರಾಜ ತನ್ನ ನೆಲದ ಮಣ್ಣನ್ನೇ ಉಡುಗೊರೆಯಾಗಿ ಕೊಟ್ಟಿದ್ದಾನೆ. ಸೀತೆಯ ಅಂಗೈಯಲ್ಲಿ ತವರ ಮಣ್ಣು.
ಲಂಬಾಣಿಗರ ಮದುವೆ ನೋಡಬೇಕು. ಅದು ಮದುವೆ ಎನ್ನುವುದಕ್ಕಿಂತ ಕಣ್ಣೀರ ಕೋಡಿ ಎನ್ನಬಹುದೇನೊ. ಊರೂರು ತಿರುಗುವ, ಕಾಡು ಕಣಿವೆ ಸುತ್ತುವ, ಎಲ್ಲೆಲ್ಲೋ ಸುಳಿದಾಡುವ ಕಸುಬೇ ಲಂಬಾಣಿಗರದ್ದು. ಅವರಿಗೆ ಮನೆ ಎಲ್ಲಿದೆ? ಇದ್ದ ಊರು ಇರುವವರೆಗೆ ಮಾತ್ರ. ನಂತರ ಸಿಕ್ಕಿದ ಊರೇ ಊರು. ಹೀಗಾಗಿ ಹೆಣ್ಣುಮಕ್ಕಳು ತಮ್ಮ ಮನೆ, ಊರು ಎಂದು ಗುರುತಿಟ್ಟುಕೊಳ್ಳುವುದಾದರೂ ಯಾರನ್ನು? ಅಮ್ಮ ನೆನಪಾದಳೆಂದರೆ, ಅಕ್ಕನಿಗೆ ಮಗುವಾಯಿತೆಂದರೆ, ಗಂಡ ಸ್ವಲ್ಪ ದಿನ ಬೇಜಾರಾದರೆ, ಹೋಗುವುದಾದರೂ ಎಲ್ಲಿಗೆ? ಇಲ್ಲಿ ಮದುವೆ ಎನ್ನುವುದು ಸಂಬಂಧವನ್ನು ಕೂಡಿಸುವ ಹಬ್ಬ ಹೇಗೋ ಹಾಗೇ ಸಂಬಂಧವನ್ನು ಬಿಡಿಸಿಡುವ ದುರಂತವೂ ಹೌದು. ಹಾಗಾಗಿಯೇ ತವರು ಬಿಡುವಾಗ ಅತ್ತು ಕರೆದು ರಂಪ ಮಾಡಿ ಕೈಕಾಲು ಬಡಿದು ಕಣ್ಣೀರಾಗಿ ಹೋಗುತ್ತಾಳೆ. ನಂತರ “ನೀನು ಯಾರೊ ಮತ್ತೆ ನಾನು ಯಾರೊ…?”
ಮಡಿಲಲ್ಲಿ ಅಕ್ಕಿ ಹೊತ್ತು ನಿಂತವಳನ್ನು ನೋಡಿದೆ. ಹೌದಲ್ಲ, ಅಕ್ಕಿ ಎನ್ನುವುದು ಹೇಗೆ ಸಂಬಂಧಗಳನ್ನು ಬೆಸೆಯುತ್ತದೆ? ಹಾಗೇ ಇನ್ನು ನೀನು ಯಾರೊ ಮತ್ತೆ ನಾನು ಯಾರೊ ಎಂಬುದನ್ನೂ ಹೇಳುತ್ತಿದೆಯಲ್ಲ ಅನ್ನಿಸಿತು.
ಹಳ್ಳಿ ಬಿಟ್ಟು ನಗರಕ್ಕೆ ಬರುವ ಹಲವರನ್ನು ನೋಡಿದ್ದೇನೆ. ತವರು ಬಿಟ್ಟುಬಂದ ಹೆಣ್ಣುಗಳಂತೆಯೇ ಒಂದು ಜೊತೆ ಗಾಬರಿ ಕಣ್ಣು ಅವರಿಗಿರುತ್ತದೆ. ದೊಡ್ಡ ಊರಿಗೆ ಹೋಗುತ್ತಿದ್ದೇನೆ ಎಂಬ ಸಂಭ್ರಮದಿಂದ ಅಮ್ಮ ತಟ್ಟಿಕೊಟ್ಟ ರೊಟ್ಟಿಯೇ ಇವರ ಮಡಿಲಕ್ಕಿಯಾಗಿಬಿಟ್ಟಿರುತ್ತದೆ. ದೊಡ್ಡ ಊರಲ್ಲಿ ಅಮ್ಮನ ನೆನೆಸುತ್ತಾ ಊರ ಬೀದಿ ನೆನೆಸುತ್ತಾ ಕಣ್ಣೀರಾಗುತ್ತಾ ನಂತರ ನಗರಿಗರಾಗುತ್ತಾ ಹೋಗುತ್ತಾರೆ. ನಗರಿಗರಾದರೂ ಥೇಟ್ ಆ ಮಡಿಲಕ್ಕಿಯ ಹೆಣ್ಣಿನಂತೆ ತವರ ಬಿಟ್ಟರೂ ತವರ ಕಂಪಿನ ನೆನಪು ಬಿಡದಂತೆ ಇರುತ್ತಾರೆ.
ಅಮ್ಮ ಎಂದರೆ ಕರಗಿ ನೀರಾಗುವ, ಅಕ್ಕ ತಂಗಿಯರು ಎಂದರೆ ನೆನಪುಗಳ ಸರಮಾಲೆಯನ್ನೇ ಬಿಚ್ಚಿಕೊಂಡು ಕೂರುವಾಗ ನನಗೆ ಈ ಮಡಿಲಕ್ಕಿ ನೆನಪು ಧುತ್ತನೆ ಎದ್ದುಬರುತ್ತದೆ. ಆ ಮದುವೆ ಮಂಟಪ, ಆ ತವರು, ಆ ಅಕ್ಕಿ, ಆ ಕಾರು ಉಳಿಸಿಹೋದ ರಸ್ತೆಯ ಮೇಲಿನ ಗುರುತು… ಎಲ್ಲವೂ ಎಲ್ಲವೂ ನೆನಪಾಗುತ್ತದೆ.
ಎಷ್ಟು ಮದುವೆ ಮಂಟಪಗಳು ತಲೆ ಎತ್ತಿ ನಿಂತಿದ್ದಾವೆ. ಆ ಎಷ್ಟೆಲ್ಲಾ ಮಂಟಪಗಳ ಅಂಗಳದಲ್ಲಿ ಅದೆಷ್ಟು ಮಂದಿ ನಿಂತಿದ್ದಾರೊ, ಕಣ್ಣಲ್ಲಿ ನೀರು ಚಿಮ್ಮುತ್ತಾ ಮಡಿಲಲ್ಲಿ ಸೆರಗಕ್ಕಿ ಕಟ್ಟಿಕೊಂಡು?
ಏನಾದರೂ ಆಗಲಿ, ಎಲ್ಲಾದರೂ ಆಗಲಿ… ಆ ಮಡಿಲಕ್ಕಿ ಕೊಟ್ಟ ಮನೆ, ಆ ಮನೆ ಮಂದಿ “ಹಬ್ಬಾಲಿ ಅವರ ರಸಬಳ್ಳಿ…”





kalakuvantide baraha.
bahala ishtavaytu.
kashtavU….